ಅರಣ್ಯ ಇಲಾಖೆಯ ಮೂಲ ಉದ್ದೇಶವೇ ಕಾಡನ್ನು ಸಂರಕ್ಷಿಸಿ, ಉಳಿಸುವುದಾಗಿದೆ. ಅನಾದಿ ಕಾಲದಿಂದಲೂ ಕಾಡಿನಲ್ಲೇ ಹುಟ್ಟಿ, ಬೆಳೆದು ಅದರೊಡನೆ ಒಡನಾಟವಿಟ್ಟುಕೊಂಡಿರುವ ಬುಡುಕಟ್ಟು ಜನರು ಕಾಡನ್ನು ರಕ್ಷಿಸಿಕೊಂಡು ಬರುತ್ತಿದ್ದಾರೆ. ವನ್ಯ ಸಂಪತ್ತನ್ನು ಸಂರಕ್ಷಿಸುವ ಸಲುವಾಗಿ ಸರ್ಕಾರ ಅರಣ್ಯ ಸಂರಕ್ಷಣೆ ಕಾಯಿದೆಯನ್ನು ಜಾರಿ ಮಾಡಿತು. ಆದರೂ ಇಂದಿನ ದಿನಮಾನಗಳಲ್ಲಿ ಅರಣ್ಯ ಸಂಪತ್ತಿನ ಅಕ್ರಮ ಬಳಕೆ ಮನಸೋ ಇಚ್ಛೆ ಮುಂದುವರೆದಿದೆ. ಕಾಡಿನ ಸಂರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿಕೊಂಡು ಬಂದಿರುವ ಬುಡಕಟ್ಟು ಜನಾಂಗಗಳು ಮತ್ತು ಕಾಡಂಚಿನ ಸ್ಥಳೀಯರು ಕಾಡಿನೊಳಗೆ ಕಾಲಿಡುವ ಪರಿಸ್ಥಿತಿ ಇಲ್ಲ. ಆದರೆ ಪ್ರಭಾವಿಗಳು, ಉದ್ಯಮಿಗಳು, ರಾಜಕಾರಣಿಗಳು ಕಾಡನ್ನು ತಮ್ಮ ಸ್ವಂತ ಆಸ್ತಿಯೆಂಬಂತೆ ಶೋಷಿಸತೊಡಗಿದ್ದಾರೆ. ದನ ಮೇಯಿಸಲು ಹೋದ ಕಾಡಂಚಿನ ಜನರ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಾರೆ. ಆದರೆ ನೂರಾರು ಎಕರೆ ಕಾಡನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಉದ್ಯಮಿಗಳ ವಿರುದ್ಧ ಸೊಲ್ಲೆತ್ತುವುದಿಲ್ಲ.
1998ರ ದಿನಗಳು. ರಾಜಸ್ಥಾನದ ಜೋಧಪುರ್ ಅರಣ್ಯದಲ್ಲಿ ಕೃಷ್ಣ ಮೃಗಗಳನ್ನು ಬೇಟೆಯಾಡಲಾಗಿತ್ತು. ಹಿಂದಿ ಚಿತ್ರರಂಗದ ಕೆಲ ನಟರು ಈ ಪ್ರಕರಣದ ಆರೋಪಿಗಳಾಗಿದ್ದರು. ಈ ವನ್ಯಜೀವಿಗಳ ಬೇಟೆ ಪ್ರಕರಣ ನಡೆದು 28 ವರ್ಷಗಳು ಉರುಳಿವೆ. ಈ ಪ್ರಕರಣ ಯಾವ ಹಂತದಲ್ಲಿದೆ? ಆರೋಪ ಎದುರಿಸಿದ್ದ ನಟರೆಲ್ಲ ಈಗ ಏನು ಮಾಡುತ್ತಿದ್ದಾರೆ, ಅವರಿಗೆ ಶಿಕ್ಷೆ ಆಯ್ತಾ ಹೇಗೆ?
Wildlife Protection Act, 1972 ಅಡಿಯಲ್ಲಿ ರಕ್ಷಣೆ ಪಡೆದಿರುವ ವನ್ಯಜೀವಿಗಳ ಪೈಕಿ ಕೃಷ್ಣಮೃಗವೂ ಒಂದು. ಅದರ ಬೇಟೆ ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ. ಅಲ್ಲದೆ, ರಾಜಸ್ಥಾನ ಮತ್ತು ಹರಿಯಾಣದ ಬಿಷ್ಣೋಯಿ ಸಮುದಾಯಕ್ಕೆ ಕೃಷ್ಣಮೃಗದೊಂದಿಗೆ ದೀರ್ಘಕಾಲದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಬಂಧವಿದೆ.
1998ರ ಈ ಪ್ರಕರಣದ ವಿಚಾರಣೆ 20 ವರ್ಷಗಳ ದೀರ್ಘ ಕಾಲ ನಡೆಯಿತು. ನಂತರ ನ್ಯಾಯಾಲಯ ನಟನೊಬ್ಬನನ್ನು ದೋಷಿ ಎಂದು ತೀರ್ಪು ನೀಡಿ ಉಳಿದವರನ್ನು ಖುಲಾಸೆಗೊಳಿಸಿತು. ದೋಷಿ ನಟನಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ 10,000 ದಂಡ ವಿಧಿಸಿತು. ಆ ನಟ ಎರಡು ದಿನ ಜೈಲಿನಲ್ಲಿದ್ದು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ. ಎರಡೇ ದಿನಕ್ಕೆ ಆತನಿಗೆ ಜಾಮೀನು ಸಿಕ್ಕಿತು. ಮೇಲ್ಮನವಿಯ ವಿಚಾರಣೆ ಮತ್ತು ಅದರ ಪ್ರಕ್ರಿಯೆ ಈಗಲೂ ಬಾಕಿಯಿರುವ ಕಾರಣ ಜೈಲು ಶಿಕ್ಷೆ ಜಾರಿಯಾಗಿಲ್ಲ.
ಈ ಪ್ರಕರಣ ಒತ್ತಟ್ಟಿಗಿರಲಿ. ಇತ್ತೀಚೆಗೆ ನಡೆದ ಇನ್ನೊಂದು ಪ್ರಕರಣವನ್ನು ಗಮನಿಸೋಣ. ಚಾಮರಾಜನಗರ ಜಿಲ್ಲೆಯ ಹನೂರಿನ ಕಾಡಿನಲ್ಲಿ ಜಿಂಕೆ ಬೇಟೆಯ ಶಂಕೆಯ ಮೇರೆಗೆ ಮೂವರನ್ನು ಎನ್‌ಕೌಂಟರ್ ಮಾಡಲಾಯಿತು. ಆದರೆ, ಹತ್ಯೆಯ ಕುರಿತು ಹಲವಾರು ಅನುಮಾನಗಳು ವ್ಯಕ್ತವಾಗಿದೆ. ಕಾಡಿಗೆ ಬಂದವರು ನಿಜವಾಗಿಯೂ ಕಳ್ಳಬೇಟೆಗಾರರೇ ಅಗಿದ್ದರೆ ಅಥವಾ ಕಳೆದುಹೋಗಿರುವ ದನವನ್ನು ಹುಡುಕಿಬಂದವರೇ ಎಂಬ ಪ್ರಶ್ನೆಗೆ ಈ ಹಂತದಲ್ಲಿ ಉತ್ತರ ದೊರೆಯುವುದು ಶಕ್ಯವಿಲ್ಲ. ತನಿಖೆಯ ನಂತರವೇ ತಿಳಿಯುವ ಸಂಗತಿಯಿದು. ಕೆಲ ವರ್ಷಗಳ ಹಿಂದೆ ಕಾವೇರಿ ವನ್ಯಜೀವಿಧಾಮದ ಕಾವೇರಿ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ದೊರೆಯಿತು. ಅದು ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ವ್ಯಕ್ತಿಯದು ಎಂದು ಹೇಳಲಾಗಿತ್ತು. ಈ ವಿಷಯವಾಗಿ ಹಲವರ ವಿಭಿನ್ನ ಹೇಳಿಕೆಗಳಿವೆ.

ಈ ಎರಡೂ ಅಕ್ರಮ ಬೇಟೆ ಪ್ರಕರಣಗಳಾಗಿದ್ದು, ಅರಣ್ಯ ಕಾಯಿದೆ ಪ್ರಕಾರ ದಂಡನಾರ್ಹ ಅಪರಾಧಗಳು. ಅಕ್ರಮ ಬೇಟೆ ಅಪರಾಧಿಗಳು ಯಾರೇ ಆದರೂ ಅವರಿಗೆ ಶಿಕ್ಷೆಯಾಗಲೇಬೇಕು. ರಾಜಸ್ಥಾನದ ಪ್ರಕರಣದಲ್ಲಿ ಖ್ಯಾತ ನಟರು, ಹಣವಂತರು, ಪ್ರಭಾವಿಗಳ ಅಪರಾಧ ಸಾಬೀತಾಗಿ 28 ವರ್ಷಗಳೇ ಕಳೆದಿದ್ದರೂ ಮೇಲ್ಮನವಿ ವಿಚಾರಣೆಯ ನೆಪದಲ್ಲಿ ಶಿಕ್ಷೆ ಜಾರಿ ಆಗಿಲ್ಲ. ಕಾನೂನಿನ ಲೋಪಗಳನ್ನು ಬಳಸಿಕೊಂಡು ಇವರು ಆರಾಮವಾಗಿ ಓಡಾಡಿಕೊಂಡಿದ್ದಾರೆ.
ಹನೂರಿನ ಪ್ರಕರಣದಲ್ಲಿ ಕಾಡಿಗೆ ನುಗ್ಗಿದ್ದವರು ಸ್ಥಳೀಯ ಗ್ರಾಮಸ್ಥರು. ಬಡ ವರ್ಗಕ್ಕೆ ಸೇರಿದವರು. ಯಾವುದೇ ವಿಚಾರಣೆಯಿಲ್ಲದೆ ಇವರನ್ನು ನೇರ ‘ಎನ್‌ಕೌಂಟರ್ ಮಾಡಿ ಕೊಲ್ಲಲಾಗಿದೆ. ಇಲ್ಲಿ ಅರಣ್ಯ ಇಲಾಖೆ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ. ಕಾನೂನು ಎಲ್ಲರಿಗೂ ಒಂದೇ ಆದರೂ, ಅರಣ್ಯ ಇಲಾಖೆಯವರ ಧೋರಣೆ ಉಳ್ಳವರಿಗೊಂದು, ಬಡವರಿಗೊಂದು ಎಂಬುದು ನಿಚ್ಚಳ.
ಅರಣ್ಯ ಇಲಾಖೆಯ ಮೂಲ ಉದ್ದೇಶವೇ ಕಾಡನ್ನು ಸಂರಕ್ಷಿಸಿ, ಉಳಿಸುವುದಾಗಿದೆ. ಅನಾದಿ ಕಾಲದಿಂದಲೂ ಕಾಡಿನಲ್ಲೇ ಹುಟ್ಟಿ, ಬೆಳೆದು ಅದರೊಡನೆ ಒಡನಾಟವಿಟ್ಟುಕೊಂಡಿರುವ ಬುಡುಕಟ್ಟು ಜನರು ಕಾಡನ್ನು ರಕ್ಷಿಸಿಕೊಂಡು ಬರುತ್ತಿದ್ದಾರೆ. ವನ್ಯ ಸಂಪತ್ತನ್ನು ಸಂರಕ್ಷಿಸುವ ಸಲುವಾಗಿ ಸರ್ಕಾರ ಅರಣ್ಯ ಸಂರಕ್ಷಣೆ ಕಾಯಿದೆಯನ್ನು ಜಾರಿ ಮಾಡಿತು. ಆದರೂ ಇಂದಿನ ದಿನಮಾನಗಳಲ್ಲಿ ಅರಣ್ಯ ಸಂಪತ್ತಿನ ಅಕ್ರಮ ಬಳಕೆ ಮನಸೋ ಇಚ್ಛೆ ಮುಂದುವರೆದಿದೆ. ಕಾಡಿನ ಸಂರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿಕೊಂಡು ಬಂದಿರುವ ಬುಡಕಟ್ಟು ಜನಾಂಗಗಳು ಮತ್ತು ಕಾಡಂಚಿನ ಸ್ಥಳೀಯರು ಕಾಡಿನೊಳಗೆ ಕಾಲಿಡುವ ಪರಿಸ್ಥಿತಿ ಇಲ್ಲ. ಆದರೆ ಪ್ರಭಾವಿಗಳು, ಉದ್ಯಮಿಗಳು, ರಾಜಕಾರಣಿಗಳು ಕಾಡನ್ನು ತಮ್ಮ ಸ್ವಂತ ಆಸ್ತಿಯೆಂಬಂತೆ ಶೋಷಿಸತೊಡಗಿದ್ದಾರೆ. ದನ ಮೇಯಿಸಲು ಹೋದ ಕಾಡಂಚಿನ ಜನರ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಾರೆ. ಆದರೆ ನೂರಾರು ಎಕರೆ ಕಾಡನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಉದ್ಯಮಿಗಳ ವಿರುದ್ಧ ಸೊಲ್ಲೆತ್ತುವುದಿಲ್ಲ.
ಈ ವಿಚಾರವಾಗಿ ಪರಿಸರ ಹೋರಾಟಗಾರರನ್ನು ಮಾತನಾಡಿಸಿದಾಗ ತಮ್ಮ ಅನುಭವವನ್ನು ಹಂಚಿಕೊಂಡರು.
ಅಡವಿ ಉಳಿಸುವ ಹೋರಾಟದಲ್ಲಿ ದಶಕಗಳಿಂದಲೂ ತೊಡಗಿರುವ ಚಾಮರಾಜನಗರದ ಪುಣಜನೂರು ಗ್ರಾಮದ ಡಿ. ಎಸ್. ದೊರೆಸ್ವಾಮಿಯವರು ಅರಣ್ಯ ಇಲಾಖೆಯ ಅಕ್ರಮಗಳು, ದ್ವಂದ್ವ ನಿಲುವುಗಳ ಬಗ್ಗೆ ‘ಈ ದಿನ.ಕಾಂʼಗೆ ಹೀಗೆ ವಿವರಿಸಿದರು:

“ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಬರುವ ಬೇಡಗುಳಿ ಅರಣ್ಯ ಪ್ರದೇಶದ ಎರಡು ಸಾವಿರ ಎಕರೆ ಪ್ರದೇಶವನ್ನು 1885ರಲ್ಲಿ ಬ್ರಿಟಿಷರು ಎಕರೆಗೆ ಒಂದು ರುಪಾಯಿಯಂತೆ 99 ವರ್ಷಗಳ ಕಾಲಕ್ಕೆ ಭೋಗ್ಯಕ್ಕೆ ನೀಡಿದ್ದರು. ಈ ಪ್ರದೇಶದಲ್ಲಿ ಸಾಕಷ್ಟು ಕಾಫಿ ಎಸ್ಟೇಟ್‌ಗಳಿವೆ. ಅದರಲ್ಲಿನ ಪ್ರಮುಖ ಕಾಫಿ ಎಸ್ಟೇಟ್ ಬಿರ್ಲಾ ಒಡೆತನಕ್ಕೆ ಸೇರಿದ್ದು. ಅಂದಿನ ಕಾಲಕ್ಕೆ ಇದು ಹುಲಿ ಸಂರಕ್ಷಿತಾರಣ್ಯವೆಂದು ಘೋಷಣೆ ಆಗಿರಲಿಲ್ಲ. ಈಗ ಪ್ರದೇಶ ಅಪ್ಪಟ ಹುಲಿಸಂರಕ್ಷಿತಾರಣ್ಯ. 1985ರಲ್ಲಿ 99 ವರ್ಷಗಳ ಭೋಗ್ಯದ ಅವಧಿ ಮುಗಿಯಿತು. ಆನಂತರ 41 ವರ್ಷಗಳೇ ಕಳೆದರೂ, ಸರ್ಕಾರ ಪ್ರದೇಶವನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಕಳೆದ 30 ವರ್ಷಗಳಿಂದ ನಡೆಸಿರುವ ಹೋರಾಟಕ್ಕೆ ಸ್ಪಂದಿಸಿಯೇ ಇಲ್ಲ”.
“ಕಾನೂನಿನ ಪ್ರಕಾರ ಹುಲಿ ಸಂರಕ್ಷಿತಾರಣ್ಯದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸುವಂತಿಲ್ಲ. ಆದರೂ ಇಲ್ಲಿ ಸರ್ಕಾರಿ ಬಸ್ ಪ್ರತಿದಿನವೂ ಓಡಾಡುತ್ತದೆ. ಇದರಲ್ಲಿ ನೂರಾರು ಗಿರಿಜನರು ಕಾಫಿ ಎಸ್ಟೇಟ್‌ನ ಕೆಲಸಕ್ಕೆ ಹೋಗುತ್ತಾರೆ. ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಇಬ್ಬರನ್ನು ಹುಲಿ ಬಲಿ ತೆಗೆದುಕೊಂಡಿದೆ. ಇದರ ಮಧ್ಯೆ ಇಲ್ಲಿ ಅಲ್ಲಲ್ಲಿ ಗಾಂಜಾ ಬೆಳೆದು ಮಾರಾಟ ಕೂಡ ನಡೆಯುತ್ತಿದೆ. ಈ ಸಂಗತಿ ತಿಳಿದೂ ತಿಳಿಯದಂತಿದ್ದಾರೆ ಅರಣ್ಯ ಇಲಾಖೆಯ ಸಿಬ್ಬಂದಿ”.


ಪುಣಜನೂರಿನಲ್ಲಿ ಇರುವ ಗುಡ್ಡವೊಂದರ 298 ಎಕರೆ ಭೂಮಿಯನ್ನು ‘ಕರಾಬು ಮಾಡಲಾಗಿದ್ದುʼ, ಅಲ್ಲಿ 548 ಎಕರೆ ವಿಸ್ತೀರ್ಣದ ಪ್ರದೇಶವನ್ನು ಅತಿಕ್ರಮಿಸಿ ಅದರ RTCಯನ್ನು ಫೋರ್ಜರಿ ಮಾಡಲಾಗಿದೆ. ಈ ಪ್ರದೇಶದಲ್ಲಿ ಕಳ್ಳ ಬೇಟೆಗಾರರು ಬಂದು ನೆಲೆಯೂರಿದ್ದಾರೆ. ಬಂದ ಒಂದು ವರ್ಷದೊಳಗೆ ಅವರಿಗೆ ರಸ್ತೆ, ವಿದ್ಯುತ್ ಸೇರಿದಂತೆ ಎಲ್ಲಾ ಸೌಲಭ್ಯಗಳು ದೊರಕಿಬಿಟ್ಟವು. ಅಲ್ಲಿರುವ ರೇಂಜ್ ಫಾರೆಸ್ಟ್ ಕಚೇರಿಯ ಎದುರಿಗೇ ಕಳ್ಳ ಬೇಟೆಗಾರರು ಬಂದು ಸೇರಿಕೊಂಡಿದ್ದಾರೆ. ಎಲ್ಲಾ ತಿಳಿದಿದ್ದರೂ ಅರಣ್ಯ ಅಧಿಕಾರಿಗಳು ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದಾರೆ. ಯಾಕೆಂದರೆ ಬಂದು ಸೇರಿಕೊಂಡವರೆಲ್ಲ ಪ್ರಭಾವಿ ಕುಳಗಳು”.
“ಕೆಲವು ತಿಂಗಳುಗಳ ಹಿಂದೆ ಮೈಸೂರಿನ ಪ್ರಭಾವಿ ಒಬ್ಬರಿಗೆ ಸೇರಿದ ಕಾಫಿ ತೋಟದಲ್ಲಿ ಆನೆಯೊಂದು ಸತ್ತು ಬಿದ್ದಿತು. ವಾರಗಳ ನಂತರ ಅದರ ಶವ ಕೊಳೆತ ವಾಸನೆ ಬಂದ ಮೇಲೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ತರುವಾಯ, ಆ ಜಾಗದ ಮಾಲೀಕರೂ ಸೇರಿದಂತೆ ಯಾರನ್ನೂ ವಿಚಾರಣೆ ನಡೆಸಿದ ಸುದ್ದಿಯೇ ಇಲ್ಲ. ಕಾಫಿ ತೋಟಕ್ಕೆ ಹೊಡೆಯಬೇಕಿದ್ದ ಔಷಧಿಯ ನೀರನ್ನು ಆನೆ ಕುಡಿದಿರಬಹುದು ಎಂಬ ಗುಮಾನಿ ಬಂದಿದೆ. ಆದರೆ ಇದುವರೆಗೂ ಆ ಪ್ರಕರಣದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯಿಲ್ಲ”.

“ಅರಣ್ಯ ಪ್ರದೇಶದೊಳಗೆ ಅಕ್ರಮ ಗಣಿಗಾರಿಕೆ, ಬೇಟೆಗಾರಿಕೆ ಎಲ್ಲದಕ್ಕೂ ರಾಜಕಾರಣಿಗಳ ಕುಮ್ಮಕ್ಕು ಇದೆ. ವೀರಪ್ಪನ್‌ನನ್ನು ಬೆಳೆಸಿದ್ದೇ ರಾಜಕಾರಣಿಗಳು. ಅರಣ್ಯ ಇಲಾಖೆ ಮತ್ತು ಸ್ಥಳೀಯರ ನಡುವೆ ಸಮನ್ವಯ ಸಾಧಿಸಲು ಇವರುಗಳೇ ಅಡ್ಡಿಯಾಗಿದ್ದಾರೆ. ವೀರಪ್ಪನ್ ಸತ್ತ ನಂತರ ಮತ್ತೆ ಗಣಿಗಾರಿಕೆ ಆರಂಭಿಸಲು ಪ್ರಯತ್ನ ನಡೆಯಿತಾದರೂ ನಮ್ಮೆಲ್ಲರ ಹೋರಾಟದಿಂದ ಅದು ಸಾಧ್ಯವಾಗಲಿಲ್ಲ” ಎಂದು ದೊರೆಸ್ವಾಮಿ ಹೇಳಿದರು.
ಸ್ವಾಮಿ ಪೊನ್ನಾಚಿ ಅವರು ಮಹದೇಶ್ವರ ಬೆಟ್ಟದ ಬಳಿಯ ಪೊನ್ನಾಚಿಯವರು. ವೃತ್ತಿಯಲ್ಲಿ ಶಿಕ್ಷಕರು, ಸಾಹಿತಿ ಕೂಡ. ಸ್ವಾಮಿ ಅವರು ಕೂಡ ಕಾಡಿನ ಸುತ್ತಮುತ್ತಲಿನ ವಾಸ್ತವಗಳನ್ನು ಈ ದಿನ.ಕಾಂ ಮುಂದೆ ಬಿಚ್ಚಿಟ್ಟರು.

ಬಾಲ್ಯದಿಂದಲೂ ಕಾಡಿನ ಅಂಚಿನಲ್ಲೇ ಬೆಳೆದು ಬಂದಿರುವ ಇವರ ಪ್ರಕಾರ “ಇದುವರೆಗೂ ಗಿರಿಜನರಾಗಲಿ, ಸುತ್ತಮುತ್ತಲಿನ ಗ್ರಾಮಸ್ಥರಾಗಲಿ, ಅರಣ್ಯವನ್ನು ನಾಶ ಮಾಡಿಲ್ಲ. ಬದಲಾಗಿ ಅರಣ್ಯ ಸಂಪತ್ತು ಉಳಿಸಿಕೊಂಡು ಬಂದಿದ್ದಾರೆ. ಇವರದೇ ಅನುಭವದಲ್ಲಿ ಗ್ರಾಮಸ್ಥರು ಹಾಗೂ ಗಿರಿಜನರು ಅರಣ್ಯವನ್ನು ಹೇಗೆ ಬೆಳೆಸಿ ಉಳಿಸುತ್ತಿದ್ದರು ಎಂದರೆ ಬೇಸಿಗೆ ಸಮಯದಲ್ಲಿ ಸಣ್ಣದಾಗಿ ಬೆಂಕಿ ಹಾಕುತ್ತಿದ್ದರು. ಒಣಗಿರುತ್ತಿದ್ದ ಬೇಲಿಗಳು ತಕ್ಷಣವೇ ಉರಿದುಹೋಗುತ್ತಿದ್ದವು. ನಂತರ ಆ ಸ್ಥಳದಲ್ಲಿ ಹುಲುಸಾಗಿ ಹುಲ್ಲು ಬೆಳೆದು ಹಸಿರು ಕಂಗೊಳಿಸುತ್ತಾ ವಿಶಾಲವಾದ ಹುಲ್ಲುಗಾವಲು ನಿರ್ಮಾಣವಾಗುತ್ತಿದ್ದವು. ಅದರಿಂದ ಕಾಡಿನ ಪ್ರಾಣಿಗಳಿಗೂ, ದನಗಳಿಗೂ ಮೇವಾಗುತ್ತಿತ್ತು. ಕಾಡಿನಲ್ಲಿ ಪ್ರಾಣಿಗಳು ಸ್ವಚ್ಛಂದವಾಗಿ ಓಡಾಡಲು ಅನುಕೂಲವಾಗುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ ಲಂಟಾನ ಕಳೆಯು ಕಾಡನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಬೇರೆ ಸಸ್ಯ, ಮರಗಳು ಬೆಳೆಯುವುದಕ್ಕೆ ಅವಕಾಶವೇ ಇಲ್ಲ. ಇದರಿಂದಾಗಿ ಮನುಷ್ಯರು, ಪ್ರಾಣಿಗಳು ಒಂದೇ ರಸ್ತೆಯಲ್ಲಿ ಸಂಚರಿಸುವುದು ಅನಿವಾರ್ಯ. ಆಗ ಮನುಷ್ಯ-ಪ್ರಾಣಿ ಸಂಘರ್ಷದ ಸಾಧ್ಯತೆ ಹೆಚ್ಚುತ್ತದೆ. ಕಾಡಿನಲ್ಲಿ ಪ್ರಾಣಿಗಳು ಓಡಾಡಲು ವಿಶಾಲವಾದ ಸ್ಥಳವಿಲ್ಲದಿದ್ದಾಗ ಗ್ರಾಮಗಳತ್ತ ಠಳಾಯಿಸುವುದು ಸರ್ವೇ ಸಾಮಾನ್ಯ”.


“ಇತ್ತೀಚೆಗೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳಿಗೆ ವಿಷಪ್ರಾಶನ ಪ್ರಕರಣದಲ್ಲೂ ಅರಣ್ಯ ಇಲಾಖೆಯವರ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಈ ಪ್ರಕರಣಕ್ಕೆ ಮುನ್ನ ಒಂದೇ ತಿಂಗಳ ಅವಧಿಯಲ್ಲಿ ಸುಮಾರು 2 ಜೋಡಿ ಹೊಲ ಉಳುವ ಎತ್ತುಗಳು ಹಾಗೂ 8 ಹಸುಗಳನ್ನು ಚಿರತೆ ಬಲಿ ತೆಗೆದುಕೊಂಡಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ದೂರನ್ನು ನೀಡಿದರೂ ತಕ್ಷಣಕ್ಕೆ ಕ್ರಮ ತೆಗೆದುಕೊಳ್ಳುವುದಿರಲಿ, ಅಧಿಕಾರಿಗಳಿಂದ ಸ್ಪಂದನೆ ಕೂಡ ಸಿಗಲಿಲ್ಲ. ಪರಿಹಾರ ದೊರಕಿಸಿಕೊಡದೆ ವಿಳಂಬ ಮಾಡಿದರು. ಇದರಿಂದ ಹತಾಶೆಗೊಂಡು ಸಿಟ್ಟಿಗೆದ್ದ ಜನರು ಅರಣ್ಯ ಇಲಾಖೆಯವರನ್ನು ನಂಬಿ ಪ್ರಯೋಜನವಿಲ್ಲವೆಂದು ತಮ್ಮ ರಾಸುಗಳನ್ನು ತಾವೇ ಕಾಪಾಡಿಕೊಳ್ಳಬೇಕೆಂದು ತೀರ್ಮಾನಿಸಿ ಕೊನೆಗೆ ವಿಷಪ್ರಾಷನ ಮಾಡಿಬಿಟ್ಟರು. ಅರಣ್ಯ ಇಲಾಖೆಯವರು ತಕ್ಷಣಕ್ಕೆ ಸ್ಪಂದಿಸಿದ್ದರೆ ಹಸುಗಳು, ಹುಲಿಗಳು ಉಳಿದುಕೊಳ್ಳುತ್ತಿದ್ದವು, ರೈತರಿಗೂ ನಷ್ಟ ತಪ್ಪುತ್ತಿತ್ತು”.
“ಇದಲ್ಲದೆ ಇಲಾಖೆಯವರ ಭ್ರಷ್ಟಾಚಾರಗಳು ಕಡಿಮೆ ಏನೂ ಇಲ್ಲ. ಆನೆ ಟ್ರೆಂಚ್, ಸೋಲಾರ್ ಬೇಲಿ, ಲಂಟಾನ ಬೇಲಿ ತೆರವು ಇನ್ನಿತರ ಯೋಜನೆಗಳ ನೆಪದಲ್ಲಿ ಅಕ್ರಮ ಬಿಲ್ ಮಾಡಿ ಲಕ್ಷಾಂತರ ರೂಪಾಯಿಗಳ ದುರುಪಯೋಗ ಮಾಡಿಕೊಂಡಿದ್ದಾರೆ. ನಿಜ ಹೇಳಬೇಕೆಂದರೆ ಅರಣ್ಯ ಒತ್ತುವರಿ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅರಣ್ಯ ಇಲಾಖೆಯವರು ಇಲ್ಲದಿದ್ದಾಗಲೇ ಕಾಡು ಚೆನ್ನಾಗಿದ್ದವು” ಎನ್ನುತ್ತಾರೆ.
ಶಿವಮೊಗ್ಗದ ಪರಿಸರ ತಜ್ಞರು ಹಾಗೂ ಹೋರಾಟಗಾರರಾದ ಅಖಿಲೇಶ್ ಚಿಪ್ಲಿ ಅವರು ಅರಣ್ಯ ಇಲಾಖೆಯ ದ್ವಂದ್ವ ನೀತಿಗಳನ್ನು ಈ ʼದಿನ.ಕಾಂʼ ಮುಂದೆ ಬಿಡಿಸಿಟ್ಟರು.

“ಸಾಗರ ಅರಣ್ಯ ವಿಭಾಗದಲ್ಲಿ 45 ಸಾವಿರ ಎಕರೆ ಅರಣ್ಯ ಪ್ರದೇಶವು ಒತ್ತುವರಿ ಅಗಿದೆ. 3 ಎಕರೆಗೂ ಮೀರಿ ಒತ್ತುವರಿ ಆಗಿರುವ ಜಾಗಗಳನ್ನು ತೆರವುಗೊಳಿಸಬೇಕು ಎಂದು ಸರ್ಕಾರ ಪ್ರಕಟಣೆಯನ್ನೂ ಹೊರಡಿಸಿದೆ. ಆದರೆ ಮೂರು ಎಕರೆ ಒತ್ತಟ್ಟಿಗಿರಲಿ, 10 ಎಕರೆ ಒತ್ತುವರಿ ಮಾಡಿಕೊಂಡಿರುವ ಜಾಗಗಳನ್ನು ತೆರವುಗೊಳಿಸಲು ಸರ್ಕಾರ ಯಾಕೆ ಕ್ರಮ ತೆಗೆದುಕೊಂಡಿಲ್ಲ” ಎಂದು ಪ್ರಶ್ನೆ ಮಾಡಿದರು.
“ಇನ್ನು ಈ ಹಿಂದೆ ಅಕ್ರಮ ಬೇಟೆ ಪ್ರಕರಣದ ಆಪಾದನೆ ಹೊತ್ತಿರುವ ರಾಜ್ಯದ ಪ್ರಭಾವಿ ಮಂತ್ರಿಯ ಪುತ್ರರೊಬ್ಬರು ವೈಲ್ಡ್ ಲೈಫ್ ಬೋರ್ಡ್ ಮೆಂಬರ್ ಆಗಿದ್ದಾರೆ. ಇವರುಗಳಿಂದ ಅರಣ್ಯ ರಕ್ಷಣೆ ಹೇಗೆ ಸಾಧ್ಯ? ಇದನ್ನು ಹಲವಾರು ಪರಿಸರ ಹೋರಾಟಗಾರರು ಪ್ರಶ್ನಿಸಿದ್ದಾರೆ. ಚಿಕ್ಕಮಗಳೂರು ಭಾಗದ ಸೂಕ್ಷ್ಮ ಪ್ರದೇಶದಲ್ಲಿ ಅನಧಿಕೃತ ರೆಸಾರ್ಟನ್ನು ನಿರ್ಮಿಸಿ ಪರಿಸರವನ್ನು ಕಲುಷಿತಗೊಳಿಸಲಾಗುತ್ತಿದೆ. ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಹತ್ತಾರು ಜೀಪು, ಕಾರುಗಳು ಬಂದು ಹಾಫ್ ರೋಡ್ ಡ್ರೈವ್ ನಡೆಸಿದರು., ಇದಕ್ಕೆ ಅವಕಾಶ ಹೇಗೆ ಕೊಟ್ಟರು? ಇದರಿಂದಾಗಿ ಅಲ್ಲಿನ ರಸ್ತೆಗಳೆಲ್ಲಾ ಹಾಳಾಗಿದ್ದು, ಮಕ್ಕಳು ಶಾಲೆಗೆ ನಡೆದುಕೊಂಡೂ ಹೋಗಲು ಸಾಧ್ಯವಿಲ್ಲವಾಗಿದೆ. ಸೈಕಲ್ ತುಳಿದುಕೊಂಡು ಹೋದರೆ ಕೇಸ್ ದಾಖಲಿಸುವ ಅರಣ್ಯ ಇಲಾಖೆಯವರು ಇಂತಹ ಮೋಜು, ಮಸ್ತಿಗೆ ಅವಕಾಶ ಹೇಗೆ ಕೊಡುತ್ತಾರೆ ಎಂದು ತಿಳಿಯುವುದಿಲ್ಲ. ಪ್ರಾಣಿಗಳನ್ನು ಕೊಲ್ಲುವುದಷ್ಟೇ ‘ಪೋಚಿಂಗ್ʼ ಎನಿಸಿಕೊಳ್ಳುವುದಿಲ್ಲ ಬದಲಾಗಿ ಅದನ್ನು ಹಿಡಿದು ಫೋಟೊ, ವಿಡಿಯೋ ತೆಗೆದು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುವ ಮೂಲಕ ಕಮರ್ಷಿಯಲ್ ಆಗಿ ಬಳಸುವುದೂ ತಪ್ಪು. ಇದಕ್ಕೆ ಉದಾಹರಣೆಯೆಂದರೆ ಆಗುಂಬೆಯಲ್ಲಿ ಕಾಳಿಂಗ ಸರ್ಪದ ರಿಸರ್ಚ್ ಮಾಡುವ ನೆಪದಲ್ಲಿ ಇಂತಹ ಧಂಧೆ ನಡೆಯುತ್ತಿವೆ. ಇದರ ವಿರುದ್ಧ ದೂರು ಕೊಟ್ಟರೂ ಯಾವುದೇ ಕ್ರಮ ಜರುಗಿಲ್ಲ”.

“ಅಧಿಕಾರಿಗಳನ್ನು ಅಲ್ಲಿ ಕೂರಿಸಿರುವುದು ಕಾನೂನು ಪ್ರಕಾರ ಕೆಲಸ ಮಾಡಲು. ಆದರೆ ಅವರು ಉಳ್ಳವರ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಈ ಮೂಲಕ ಅರಣ್ಯ ಸಂಪತ್ತನ್ನು ಲೂಟಿ ಹೊಡೆಯುವುದಕ್ಕೆ ಅವಕಾಶ ಕೊಡುತ್ತಿದ್ದಾರೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ”.
“ಇದಕ್ಕೆ ಅರಣ್ಯ ಇಲಾಖೆಯೊಂದನ್ನೇ ಹೊಣೆ ಮಾಡಿದರೆ ಆಗುವುದಿಲ್ಲ. ಕೆಳಹಂತದ ಅಧಿಕಾರಿಗಳು ಮೇಲಾಧಿಕಾರಿಗಳ ಆಜ್ಞೆಯನ್ನು ಪಾಲಿಸಲೇಬೇಕಿರುತ್ತದೆ. ಮತ್ತೊಂದೆಡೆ ಅರಣ್ಯ ಇಲಾಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿ ಕೊರತೆ ಇದೆ. ಅರಣ್ಯವನ್ನು ಸಂರಕ್ಷಿಸಲು ಕಡಿಮೆ ಸಂಖ್ಯೆಯಲ್ಲಿ ಇರುವ ಸಿಬ್ಬಂದಿಗಳಿಗೆ ಸಾಧ್ಯವಿರುವುದಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಂಡಿರುವ ವಾಚರ್‌ಗಳಿಗೆ ಅವರು ಸ್ವಾಭಿಮಾನದಿಂದ ಬದುಕುವಷ್ಟು ಸಂಬಳ ಬರುತ್ತಿರುವುದಿಲ್ಲ. ಇಂತಹ ವ್ಯವಸ್ಥೆಯಲ್ಲಿ ಕಾಡಿನ ಸಂರಕ್ಷಣೆ ಮಾಡುವುದು ಹೇಗೆ. ಕರ್ನಾಟಕದಲ್ಲಿ ಮೀಸಲು ಅರಣ್ಯ ಪ್ರದೇಶವಿರುವುದು ಶೇಕಡಾ 14.96 ರಷ್ಟು ಹಾಗೂ ಸಂರಕ್ಷಿತ ಪ್ರದೇಶವಿರುವುದು ಶೇಕಡಾ 2.05ರಷ್ಟು ಮಾತ್ರ. ಇದನ್ನು ಉಳಿಸಿಕೊಳ್ಳುವ ದಿಕ್ಕಿನಲ್ಲಿ ಸರ್ಕಾರ ಗಮನಹರಿಸಬೇಕಿದೆ”.
“ವಿಶ್ವ ಪರಿಸರ ದಿನ ಗಿಡ ನೆಡುವುದೇ ಅರಣ್ಯ ಇಲಾಖೆ ಪ್ರಮುಖ ಕೆಲಸವಲ್ಲ. ಅದರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಜೊತೆಗೆ ಸರ್ಕಾರವು ಅರಣ್ಯ ಇಲಾಖೆಯನ್ನು ಉನ್ನತೀಕರಣಗೊಳಿಸಬೇಕು. ಇಲ್ಲದಿದ್ದರೆ ಅರಣ್ಯ ಉಳಿಯುವುದಿಲ್ಲ”.
ಪರಿಸರ ಹೋರಾಟಗಾರರಾದ ಜೋಸೆಫ್ ಹೂವರ್ ಅವರ ಅನಿಸಿಕೆಯಂತೆ “ಸಾಮಾನ್ಯವಾಗಿ ಕಾಡಿನಲ್ಲಿ ಇರುವ ಆದಿವಾಸಿಗಳಾಗಲಿ, ಅರಣ್ಯದಂಚಿನಲ್ಲಿರುವ ಗ್ರಾಮಸ್ಥರಾಗಲಿ ಎಂದಿಗೂ ಬೇಟೆಯಾಡುವುದಿಲ್ಲ. ಶತಮಾನಗಳಿಂದಲೂ ಕಾಡಿನ ಒಡನಾಟದಲ್ಲೇ ಇರುವ ಇವರು ಕಾಡನ್ನು ಪೂಜನೀಯ ಭಾವದಿಂದಲೇ ನೋಡುತ್ತಾರೆ. ಹೆಚ್ಚೆಂದರೆ ಕಾಡಿನಲ್ಲಿ ಸಿಗುವ ಉತ್ಪನ್ನಗಳಾದ ಜೇನು, ಗೆಡ್ಡೆಗಳು, ಔಷಧಿಯುಕ್ತ ಗಿಡಮೂಲಿಕೆಗಳನ್ನು ಸಂಗ್ರಹಿಸುತ್ತಾರೆ. ಕಾಡಿಗೆ ಬೇಟೆಯಾಡಲು ಬರುವುದು ಹೊರಗಿನವರು, ಪ್ರಭಾವಿಗಳು ಮೋಜಿಗಾಗಿ ಮಾಡಲು ಬರುತ್ತಾರೆ. ಕೆಲ ಅರಣ್ಯಾಧಿಕಾರಿಗಳು ಇವರುಗಳಿಗೆ ಬೆಂಬಲ ಕೊಡುವುದುಂಟು”.

“ಅರಣ್ಯ ಹಕ್ಕು ಕಾಯ್ದೆ 2006 ಪ್ರಕಾರ ಅರಣ್ಯವಾಸಿಗಳನ್ನು ಬಲವಂತವಾಗಿ ಸ್ಥಳಾಂತರಗೊಳಿಸುವಂತಿಲ್ಲ. 2005 ಡಿಸೆಂಬರ್ 13 ರ ತನಕ ಅರಣ್ಯದ ಭೂಮಿಯನ್ನು ವಶದಲ್ಲಿಟ್ಟುಕೊಂಡಿರುವವರಿಗೆ ಈ ಕಾಯ್ದೆ ಅನ್ವಯವಾಗುತ್ತದೆ. ಇದುವರೆಗೂ ಕಾಡಿನ ಸಂಪತ್ತಿನ ಕಳ್ಳಸಾಗಣೆಯಲ್ಲಿ, ಅಕ್ರಮ ಬೇಟೆ ಪ್ರಕರಣದಲ್ಲಿ ಆದಿವಾಸಿಗಳು ಪಾಲ್ಗೊಂಡಿರುವ ಬಗ್ಗೆ ಪ್ರಕರಣಗಳಾಗಲಿ, ಎನ್‌ಕೌಟಂರ್ ಆಗಿರುವುದು ಅಷ್ಟಾಗಿ ಕಂಡುಬರುವುದಿಲ್ಲ. ಕಾಡಿನಲ್ಲಿ ಅವರೆಲ್ಲಾ ಎದುರಿಸುವ ಸವಾಲೆಂದರೆ ಕಾಡುಪ್ರಾಣಿಗಳ ದಾಳಿಯೇ ಆಗಿರುತ್ತದೆ. ಇವರಿಂದಲೇ ನಮ್ಮ ಕಾಡಿನ ಸಂಪತ್ತು ಉಳಿದುಕೊಂಡಿರುವುದು. ಆದರೆ ನಮ್ಮ ಕೆಲವು ಅರಣ್ಯಾಧಿಕಾರಿಗಳು ಇವರಿಗೆ ಕಿರುಕುಳ ನೀಡುತ್ತಾರೆ. ಅದೇ ಪ್ರಭಾವಿಗಳಿಗೆ ಕಾಡಿನ ಹೆಬ್ಬಾಗಿಲು ತೆರೆದಿಡುತ್ತಾರೆ. ಅದಕ್ಕೆ ನಿದರ್ಶನಗಳೆಂದರೆ. ನುಗು ಅರಣ್ಯಪ್ರದೇಶದಲ್ಲಿ ಪ್ರಭಾವಿ ಮಂತ್ರಿಯ ಮಗನ ರೆಸಾರ್ಟ್ ಇದೆ. ಅದರ ಭೂಮಿಯ ದಾಖಲೆಗಳು ಸರಿಯಿಲ್ಲ. ಬಯಾಲಾಜಿಸ್ಟ್ ಒಬ್ಬರು ಆನೆ ಕಾರಿಡಾರ್‌ನಲ್ಲಿ ಮನೆ ಕಟ್ಟಿದ್ದು ಅದಕ್ಕೆ ಬೇಲಿಯನ್ನೂ ಹಾಕಿದ್ದಾರೆ. ಅದನ್ನು ನೋಡಿ ಇತ್ತೀಚೆಗೆ ಅಲ್ಲೆಲ್ಲಾ ಮನೆಗಳು ನಿರ್ಮಾಣವಾಗುತ್ತಿವೆ. ಇನ್ನು ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಕ್ಲಬ್ ವೊಂದಕ್ಕೆ ಅನುಮತಿ ಕೊಟ್ಟಿರುವುದು 22 ಕೊಠಡಿ ನಿರ್ಮಾಣಕ್ಕೆ ಮಾತ್ರ. ಆದರೆ ಇವರು 60 ಕೊಠಡಿಗಳನ್ನು ಕಟ್ಟಿದ್ದಾರೆ. ಇದನ್ನೆಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಯಾಕೆ ಕೇಳುತ್ತಿಲ್ಲ? ಕಾಡಂಚಿನ ರೆಸಾರ್ಟ್‌ಗಳಿಗೆ ಮೂರು, ನಾಲ್ಕು ಬಾರಿ ಭೇಟಿ ನೀಡಿದರೆ ಕಡವೆ, ಜಿಂಕೆ, ಮೊಲ, ನವಿಲಿನ ಮಾಂಸಗಳು ದೊರೆಯುತ್ತಿರುವುದು ರಹಸ್ಯವಾಗಿಯೇನು ಉಳಿದಿಲ್ಲ. ಅರಣ್ಯ ಅಧಿಕಾರಿಯ ಬಳಿ ಜಿಂಕೆ ಮಾಂಸ ದೊರೆತಿರುವ ಪ್ರಕರಣ ಕೂಡ ಇದೆ. ಇನ್ನು ಪ್ರಭಾವಿಗಳು ಕೇಳಿದರೆ ಯಾವುದೇ ಮರವನ್ನು ಕಡಿದುಕೊಂಡು ಹೋಗಲು ಅವಕಾಶವಿರುತ್ತದೆ. ಅದೇ ಸಾಮಾನ್ಯ ಜನರು ಒಂದು ಕೊಂಬೆ ಹಿಡಿದುಕೊಂಡು ಹೋದರೆ ಅವರನ್ನು ಹಿಡಿದು ಕೇಸು ಜಡಿಯುತ್ತಾರೆ. ಕಾನೂನು ಎಂದ ಮೇಲೆ ಎಲ್ಲರಿಗೂ ಒಂದೇ ಇರಬೇಕು”.



ಅರಣ್ಯ ಇಲಾಖೆಯಲ್ಲಿರುವ ಎಲ್ಲಾ ಅಧಿಕಾರಿಗಳೂ ಭ್ರಷ್ಟರಲ್ಲ. ಆದರೆ ಇಲಾಖೆಯಲ್ಲಿ ವೀರಪ್ಪನ್‌ನನ್ನೂ ಮೀರಿಸುವ ಕಳ್ಳರಿದ್ದಾರೆ ಇವರುಗಳು ಕಾಡನ್ನೇ ಹಣ ಎಂದುಕೊಂಡು ಬಿಟ್ಟಿದ್ದಾರೆ. ಯಾರನ್ನು ಕೇಳುವುದು. ನಮಗೂ ಹೋರಾಟ ಮಾಡಿ, ಮಾಡಿ ಸಾಕಾಗಿದೆ ಎಂದು ಹತಾಶೆ ವ್ಯಕ್ತಪಡಿಸಿದರು.
ಕೊನೆಯದಾಗಿ ಹೇಳಬೇಕೆಂದರೆ ಶತಮಾನಗಳಿಂದಲೂ ಕಾಡಿನ ಒಡನಾಟದಲ್ಲಿ ಬದುಕು ನಡೆಸಿಕೊಂಡು ಬಂದಿರುವ ಆದಿವಾಸಿಗಳು, ಕಾಡಿನ ಸುತ್ತಮುತ್ತಲಿನ ಗ್ರಾಮ ಜನರ ವಿಶ್ವಾಸ ಗಳಿಸದೇ ನಾವು ಕಾಡಿನ ಸಂರಕ್ಷಣೆ ಮಾಡುತ್ತೇವೆ ಎಂಬುದು ಭ್ರಮೆಯಾಗಿರುತ್ತದೆ. ಸರ್ಕಾರ ಮತ್ತು ಅರಣ್ಯ ಇಲಾಖೆಯು ಇದರ ಕಡೆ ಗಮನ ಕೊಡಬೇಕು.





