ಭಾರತದಲ್ಲಿ ಮುಸ್ಲಿಮರಿರಬಾರದು ಎಂಬುದು ಬಾಲಿಶ : ಆರೆಸ್ಸೆಸ್‌ಗೆ ಗಾಂಧೀಜಿ ಕಿವಿಮಾತು

Date:

Advertisements
ಹಿಂದೂ ಧರ್ಮ ಅಸಹಿಷ್ಣು ಅಲ್ಲ. ಅದರಲ್ಲಿ ಎಲ್ಲ ಧರ್ಮಗಳ ಉತ್ತಮ ವಿಚಾರಗಳು ಸಮಾವೇಶಗೊಂಡಿವೆ. ಇದೇ ಅದರ ವೈಶಿಷ್ಟ್ಯ. ಭಾರತದಲ್ಲಿ ಮುಸ್ಲಿಮರಿರಬಾರದು, ಪಾಕಿಸ್ತಾನದಲ್ಲಿ ಹಿಂದೂಗಳಿರಬಾರದು ಎಂಬುದು ಬಾಲಿಶ. ಎರಡೂ ತಪ್ಪು.

ಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ ಗಲಭೆ. ಸಾವು-ನೋವುಗಳ ಸುದ್ದಿ. ಆ ಸ್ಥಳಗಳನ್ನು ಖುದ್ದು ಭೇಟಿ ಮಾಡಲು ಗಾಂಧಿ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಅಲ್ಲಿಗೆ ಎಲ್ಲ ಸಂಘಸಂಸ್ಥೆಗಳ ನಾಯಕರು ಬಂದುಹೋಗುತ್ತಿದ್ದಾರೆ. ಹಾಗೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರೊಬ್ಬರು ಕೂಡ ಬಂದರು. ಆದರೆ ಅದಕ್ಕೂ ಮುಂಚೆಯೇ ಗಾಂಧೀಜಿಯವರಿಗೆ ಗಲಭೆಗೆ ಕಾರಣರಾರೆಂಬ ಸುದ್ದಿ ಬಂದಿತ್ತು.

ಅದನ್ನು ಮರೆಮಾಚಲು ಆರ್‌ಎಸ್‌ಎಸ್ ನಾಯಕ, ‘ನಾವು ಸಾಚಾ ಜನ. ನಮ್ಮ ಸಂಘ ಯಾರನ್ನೂ ವೈರಿಗಳೆಂದು ಪರಿಗಣಿಸದು. ನಾವಿರುವುದು ಹಿಂದೂಗಳ ರಕ್ಷಣೆಗಾಗಿ. ಮುಸ್ಲಿಮರನ್ನು ಕೊಲ್ಲುವ ಉದ್ದೇಶ ನಮಗಿಲ್ಲ. ನಾವು ಶಾಂತಿಧೂತರು…’ ಎಂದರು.

ಗಾಂಧಿ ಸುಮ್ಮನೇ ಇದ್ದರು. ಅವರೇ ಮುಂದುವರೆದು, ‘ಸಂಘದ ಕಾರ್ಯಕರ್ತರು ನಿರಾಶ್ರಿತರ ಶಿಬಿರಗಳಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಪರಿಶ್ರಮ ಪರಿಚಯ ಮಾಡಿಕೊಟ್ಟಿದ್ದಾರೆ’ ಎಂದು ಕೊಂಚ ಅಹಂಕಾರದಿಂದ ಹೇಳಿದರು.

Advertisements

ಆಗ ಗಾಂಧಿ, ”ಹಿಟ್ಲರನ ನಾಝಿಗಳು ಮತ್ತು ಮುಸಲೋನಿಯ ಫ್ಯಾಸಿಸ್ಟರು ಇದೇ ರೀತಿ ಮಾಡಿದ್ದರು ಎನ್ನುವುದನ್ನು ಮರೆಯಬೇಡಿ. ಸರ್ವಾಧಿಕಾರ ದೃಷ್ಟಿಕೋನವಿಟ್ಟುಕೊಂಡಿರುವ ಕೋಮುವಾದಿ ಸಂಸ್ಥೆ ನಿಮ್ಮದು” ಎಂದು ಸ್ಪಷ್ಟವಾಗಿ, ನೇರವಾಗಿ, ಹಿಂದುಮುಂದು ನೋಡದೆ ಹೇಳಿದರು.

ಆರೆಸ್ಸೆಸ್ ನಾಯಕನಿಗೆ ಇರುಸುಮುರುಸಾದರೂ, ತಮ್ಮ ಸಂಘದ ಸಮ್ಮೇಳನಕ್ಕೆ ಗಾಂಧಿಯನ್ನು ಆಹ್ವಾನಿಸಿದರು. ಗಾಂಧೀಗೇನು ಭಯ, ‘ಬರುತ್ತೇನೆ’ ಎಂದರು. ಬೃಹತ್ ಸಭೆ, ಆ ನಾಯಕ ಗಾಂಧೀಜಿಯನ್ನು ಸ್ವಾಗತಿಸುತ್ತಾ, ‘ಹಿಂದೂ ಧರ್ಮ ಸೃಷ್ಟಿಸಿರುವ ಒಬ್ಬ ಮಹಾನ್ ಪುರುಷ ಇವರು’ ಎಂದು ಸಭೆಗೆ ಪರಿಚಯಿಸಿದರು.

ಅವರಿಗೆ ಅಷ್ಟೇ ಮಾರ್ಮಿಕವಾಗಿ ಮಾರುತ್ತರಿಸಿದರು ಬಾಪೂ. ”ನಾನು ನನ್ನನ್ನು ‘ಹಿಂದೂ’ ಎಂದು ಕರೆದುಕೊಳ್ಳಲು ಗೌರವ ಎನಿಸುತ್ತದೆ. ಆದರೆ ನನ್ನ ಹಿಂದೂ ಧರ್ಮ ಅಸಹಿಷ್ಣು ಅಲ್ಲ. ಅದರಲ್ಲಿ ಎಲ್ಲ ಧರ್ಮಗಳ ಉತ್ತಮ ವಿಚಾರಗಳು ಸಮಾವೇಶಗೊಂಡಿವೆ. ಇದೇ ಅದರ ವೈಶಿಷ್ಟ್ಯ. ಭಾರತದಲ್ಲಿ ಮುಸ್ಲಿಮರಿರಬಾರದು, ಪಾಕಿಸ್ತಾನದಲ್ಲಿ ಹಿಂದೂಗಳಿರಬಾರದು ಎಂಬುದು ಬಾಲಿಶ. ಎರಡೂ ತಪ್ಪು. ಇಸ್ಲಾಂ ಧರ್ಮದ ಬಗ್ಗೆ ಯಾವುದೇ ವೈರತ್ವವಿಲ್ಲ ಎನ್ನುವ ನಿಮ್ಮ ಆಶ್ವಾಸನೆಯಿಂದ ನನಗೆ ಸಂತೋಷವಾಗಿದೆ. ಆದರೆ ಮುಸ್ಲಿಮರ ಕೊಲೆಯಲ್ಲಿ ನಿಮ್ಮ ಸಂಘಟನೆಯ ಕೈವಾಡವಿದೆ ಎನ್ನುವ ಆರೋಪ ನಿಜವಾದಲ್ಲಿ ಅದರ ಪರಿಣಾಮ ಭಯಂಕರವಾದೀತು” ಎಂದು ಕಿವಿಮಾತು ಹೇಳಿದರು.

ಅವರ ಬಿಚ್ಚುಮಾತು ನಾಯಕರಿಗೆ ಪಥ್ಯವಾಗಲಿಲ್ಲ, ಕೆಣಕಿದಂತಾಯಿತು. ಕೂಡಲೆ, ‘ದುಷ್ಟರನ್ನು ಸಂಹರಿಸಲು ಹಿಂದೂ ಧರ್ಮ ಅನುಮತಿ ನೀಡದೇನು? ಇಲ್ಲ ಎನ್ನುವುದಾದರೆ ಗೀತೆಯ ಎರಡನೆಯ ಅಧ್ಯಾಯದಲ್ಲಿ ಕೌರವರನ್ನು ನಾಶಗೊಳಿಸುವಂತೆ ಶ್ರೀಕೃಷ್ಣ ಉಪದೇಶ ಮಾಡಿದ್ದನಲ್ಲಾ, ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದರು.

”ಹೌದು ಮತ್ತು ಅಲ್ಲ. ನಿಮ್ಮ ಮೊದಲ ಪ್ರಶ್ನೆಗೆ ಈ ಎರಡೂ ಉತ್ತರ. ಸಂಹರಿಸುವುದಕ್ಕೆ ಮೊದಲು ಯಾರು ದುಷ್ಟರು ಎನ್ನುವುದನ್ನು ನಿರ್ಣಯಿಸುವ ಶಕ್ತಿ ನಮ್ಮಲ್ಲಿ ಬರಬೇಕು. ಅಂತಹ ಶಕ್ತಿ ನಮ್ಮಲ್ಲಿ ಬರಬೇಕಾದರೆ ನಾವು ಪೂರ್ಣ ನಿರ್ದೋಷಿಗಳಾಗಿರಬೇಕು. ಒಬ್ಬ ಪಾಪಿ ಇನ್ನೊಬ್ಬ ಪಾಪಿಯ ನ್ಯಾಯವನ್ನು ನಿರ್ಣಯಿಸಬಲ್ಲನೆ? ಅಥವಾ ಆತನನ್ನು ಗಲ್ಲಿಗೇರಿಸುವಂತೆ ಅಧಿಕಾರಯುತವಾಗಿ ಹೇಳಬಲ್ಲನೆ? ಇನ್ನು ಎರಡನೆ ಪ್ರಶ್ನೆ… ಪಾಪಿಗೆ ದಂಡ ಕೊಡುವ ಅಧಿಕಾರ ಗೀತೆ ಒಪ್ಪಿಕೊಂಡಿದೆ ಎಂದೇ ಇಟ್ಟುಕೊಳ್ಳೋಣ. ಆದರೂ ಕಾನೂನಿನ ಮೂಲಕ ಅಸ್ತಿತ್ವಕ್ಕೆ ಬಂದಿರುವ ಸರ್ಕಾರದ ಉಪಯೋಗ ಮಾಡಿಕೊಳ್ಳಬೇಕು. ಹಾಗೆ ಮಾಡದೆ ನೀವು ಕಾನೂನನ್ನು ಕೈಗೆತ್ತಿಕೊಳ್ಳುವುದಾದರೆ ಸರ್ಕಾರವೇಕಿರಬೇಕು? ನೀವೇ ಆಯ್ಕೆ ಮಾಡಿಕೊಂಡಿರುವ ನಾಯಕರಿರುವಾಗ, ಅವರು ಸೇವೆಗೆ ಸಿದ್ಧರಿರುವಾಗ, ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳುವುದು ಅವರ ಪ್ರಯತ್ನಗಳನ್ನು ವಿಫಲಗೊಳಿಸಿದಂತೆ… ನಿಮ್ಮ ನಾಯಕರನ್ನು ನೀವೇ ಅವಮಾನಿಸಿದಂತೆ…” ಎಂದರು.

ಇದು ಅವರದೇ ಸಭೆಯಲ್ಲಿ ಗಾಂಧಿ ಅವರಿಗೇ ಹೇಳಿದ ಕಿವಿಮಾತು. ಇವತ್ತು ಹೀಗೆ ಹೇಳುವ ನೈತಿಕತೆಯನ್ನು ಎಷ್ಟು ಮಂದಿ ಉಳಿಸಿಕೊಂಡಿದ್ದಾರೆ?

(ಸಂಗ್ರಹಾನುವಾದ)

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X