ಗಾಂಧಿ ಜಯಂತಿ ವಿಶೇಷ | ಜಾತಿ ಪದ್ಧತಿ ಬಗೆಗಿನ ಗಾಂಧೀಜಿಯವರ ನಿಲುವು ನಿಂತ ನೀರಾಗಿರಲಿಲ್ಲ

Date:

Advertisements
ಗಾಂಧೀಜಿ ಹಿಂದೂ ಮತದಲ್ಲಿದ್ದ ಅಸ್ಪೃಶ್ಯತೆ ವಿರುದ್ಧ ನಿರಂತರವಾಗಿ ನಾನಾ ತೆರನಾದ ಹೋರಾಟಗಳನ್ನು ಹಮ್ಮಿಕೊಂಡರು. ಡಾ ಅಂಬೇಡ್ಕರ್‌ ಅವರು ಜಾತಿ ವಿನಾಶವನ್ನು ಪ್ರತಿಪಾದಿಸಿದರು. ಆದರೆ ಗಾಂಧೀಜಿಯವರು ಹಿಂದೂ ಮತದೊಳಗೆ ಅಂತರ್ಗತವಾಗಿದ್ದ ಕೆಲವು ಅನಿಷ್ಟ ಪದ್ದತಿಗಳನ್ನು ತೊಲಗಿಸುವುದರತ್ತ ಶ್ರಮಿಸಿದರು. 

ತನ್ನನ್ನು ʼಸನಾತನಿ ಹಿಂದೂʼ ಎಂದು ಮಹಾತ್ಮ ಗಾಂಧೀಜಿ ಕರೆದುಕೊಳ್ಳುತ್ತಿದ್ದರು. ಆದರೆ ಈ ನೆಲೆಯಿಂದ ಅವರು ಎಂದೂ ಅನ್ಯಮತ ದ್ವೇಷವನ್ನು ಮಾಡಿದವರಲ್ಲ. ಅವರು ವರ್ಣಾಶ್ರಮ ಧರ್ಮದ ಬಗೆಗೆ ನಂಬಿಕೆಯನ್ನು ಇರಿಸಿಕೊಂಡಿದ್ದರು. ಕಳೆದ ಶತಮಾನದ ಎರಡನೇ ದಶಕದಲ್ಲಿ ಅಂದರೆ ಸುಮಾರು 1920ರ ದಶಕದಲ್ಲಿ ಅವರು ವರ್ಣಾಶ್ರಮ ಧರ್ಮ ನಿಗದಿಪಡಿಸಿದ ವಂಶಪಾರಂಪರಿಕ ಕಸುಬನ್ನು ಎಲ್ಲ ಹಿಂದೂಗಳೂ ಅನುಸರಿಸಬೇಕು ಮತ್ತು ಬೇರೆ ಬೇರೆ ವರ್ಣಗಳ ಮಂದಿಯ ನಡುವೆ ಅಂತರ್ವಿವಾಹಗಳನ್ನು ನಿಷೇಧಿಸಬೇಕು. ಏಕೆಂದರೆ, ಹೀಗಾದಾಗ ಮಾತ್ರ ಆತ್ಮದ ವಿಕಸನ ತ್ವರಿತವಾಗಿ ನೆರವೇರುತ್ತದೆ ಎಂಬುದು ಅವರ ನಿಲುವಾಗಿತ್ತು.

ಕಮ್ಲಾಬೆನ್‌ ಪಟೇಲ್‌ ಎಂಬ ಗಾಂಧೀವಾದಿ ಒಬ್ಬಂಟಿಯಾಗಿದ್ದರು ಹಾಗೂ ಬರಿ ಬಿಳಿ ಖಾದಿ ಸೀರೆಗಳನ್ನು ಮಾತ್ರ ಧರಿಸುತ್ತಿದ್ದರು. 1947-52ರ ಅವಧಿಯಲ್ಲಿ ಅಪಹರಣಗೊಂಡ ಹಿಂದೂ ಮತ್ತು ಮುಸಲ್ಮಾನ ಮಹಿಳೆಯರನ್ನು ರಕ್ಷಿಸಿ ಅವರವರ ಕುಟುಂಬಗಳಿಗೆ ವಾಪಸ್ಸು ಕಳುಹಿಸುವ ʼಪುನರ್ವಶ ಕಾರ್ಯಕ್ರಮʼವನ್ನು ಭಾರತ ಹಮ್ಮಿಕೊಂಡಿತು.  ಈ ಯೋಜನೆಯಲ್ಲಿ ಕಮ್ಲಾಬೆನ್‌ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆದರೆ ಗಾಂಧೀಜಿಯವರ ಚಿಂತನೆಗಳಲ್ಲಿದ್ದ ರೂಢೀಗತ ಮತ್ತು ಸಾಂಪ್ರದಾಯಿಕ ಹಿಂದೂಮತದ ಬಗೆಗಿನ ಅಂಶಗಳನ್ನು ಕುರಿತಂತೆ ಕಮ್ಲಾಬೆನ್‌ಗೆ ತೀವ್ರ ಭಿನ್ನಾಭಿಪ್ರಾಯಗಳಿದ್ದವು. ಹೀಗಾಗಿ, ಅವರು ಕಸ್ತೂಬಾರ ಬಗೆಗಿನ ಒಂದು ಸ್ಮರಾಣಾರ್ಥ ಕಾರ್ಯಕ್ರಮದಲ್ಲಿ ಮಾತನಾಡಲು ನಿರಾಕರಿಸಿದರು, ಏಕೆಂದರೆ ಅವರ ದೃಷ್ಟಿಯಲ್ಲಿ ಬಾ ಅವರು ಅಧೀನ ಹಿಂದೂ ಮಹಿಳೆಯ ಮೂರ್ತರೂಪವಾಗಿದ್ದರು! ಗಾಂಧೀಜಿಯವರ ಇಂತಹ ನಿಲುವುಗಳ ಹಿಂದೆ ಇದ್ದದ್ದು ವರ್ಣಾಶ್ರಮ ಧರ್ಮ/ಹಿಂದೂ ಧರ್ಮಶಾಸ್ತ್ರಗಳ ಬಗೆಗೆ ಇದ್ದ ಅವರ ದೃಷ್ಟಿಕೋಣ. ಕಮ್ಲಾಬೆನ್‌ರಲ್ಲದೆ, ಡಾ. ಅಂಬೇಡ್ಕರ್‌, ಪರಿಯಾರ್‌, ನಾರಾಯಣ ಗುರು, ಅರುಂಧತಿ ರಾಯ್‌, ಸುಜಾತ ಗಿಲ್ಡಾ(ಭಾರತ ಮೂಲದ ಅಮೆರಿಕೆಯ ಬರಹಗಾರ್ತಿ) ಮತ್ತು ಇನ್ನೂ ಅನೇಕರು ಗಾಂಧೀಜಿಯವರ ವರ್ಣಾಶ್ರಮ ಧರ್ಮದ ಪ್ರತಿಪಾದನೆಗಳನ್ನು ಖಂಡಿಸಿದ್ದಾರೆ.

1920-30ರ ಅವಧಿಯ ಗಾಂಧೀಜಿಯವರ ಬರಹಗಳು ಒಂದರ್ಥದಲ್ಲಿ ಜಾತಿವಾದಿಯಾಗಿದ್ದವು ಎಂದು ಸೂಚಿಸುವರಿದ್ದರು, ಇದ್ದಾರೆ. ಆದರೆ ನಂತರ ಅವರು ಹಿಂದೂ ಮತದಲ್ಲಿದ್ದ ಅಸ್ಪೃಶ್ಯತೆ ವಿರುದ್ಧ ನಿರಂತರವಾಗಿ ನಾನಾ ತೆರನಾದ ಹೋರಾಟಗಳನ್ನು ಹಮ್ಮಿಕೊಂಡರು. ಡಾ ಅಂಬೇಡ್ಕರ್‌ ಅವರು ಜಾತಿ ವಿನಾಶವನ್ನು ಪ್ರತಿಪಾದಿಸಿದರು. ಆದರೆ ಗಾಂಧೀಜಿಯವರು ಹಿಂದೂ ಮತದೊಳಗೆ ಅಂತರ್ಗತವಾಗಿದ್ದ ಕೆಲವು ಅನಿಷ್ಟ ಪದ್ದತಿಗಳನ್ನು ತೊಲಗಿಸುವುದರತ್ತ ಶ್ರಮಿಸಿದರು. ತರುವಾಯ ಅವರು ಅಂತರ್ಜಾತಿ ವಿವಾಹಗಳನ್ನು, ಅದರಲ್ಲೂ ಮುಖ್ಯವಾಗಿ ಬ್ರಾಹ್ಮಣರು ಮತ್ತು ಹರಿಜನ (ಈ ಪದವನ್ನು ಪ್ರಸ್ತುತ ಬಳಸಬಾರದು ಎಂಬ ಅರಿವಿನೊಡನೆ ಆ ಕಾಲದ ಒಂದು ಸಂಗತಿಯನ್ನು ಪ್ರಸ್ತಾಪಿಸುವುದಕ್ಕೆ ಮಾತ್ರ ಅದನ್ನು ಇಲ್ಲಿ ಬಳಸಲಾಗಿದೆ)ರ ನಡುವೆ ವಿವಾಹಗಳು ಜರುಗಬೇಕು ಎಂಬ ತಮ್ಮ ವಿಚಾರವನ್ನು ಗಟ್ಟಿಯಾಗಿ ಮಂಡಿಸಿದರು. ಹೀಗಾದರೆ, ಜಾತಿ ಪದ್ಧತಿ ಮತ್ತು ಕಸುಬುಗಳ ಏಕಸ್ವಾಮ್ಯ ಕೊನೆಗೊಳ್ಳುತ್ತವೆ ಎಂಬುದು ಅವರ ನಿಲುಮೆಯಾಗಿತ್ತು. ಅಂದರೆ ಸುಧಾರಣೆಗಳನ್ನು ತರಲು ಪ್ರಯತ್ನಿಸಿದರು. ಹಾಗಾಗಿ ಅವರು ಹಿಂದೂ ಸುಧಾರಣಾವಾದಿಯಾಗಿಯೇ ಮುಂದುವರೆದರು. ಇಂತಹ ನಡೆಗಳ ಹಿಂದೆ ಕೆಲಸ ಮಾಡಿದ್ದು ಡಾ ಅಂಬೇಡ್ಕರ್‌ ಅವರ ಜೊತೆ ನಡೆದ ವಿಚಾರ ವಿನಿಮಯಗಳು ಮತ್ತು ವಾಗ್ವಾದಗಳಿಂದ ಎಂಬುದು ಗಮನೀಯ ಸಂಗತಿ. 

Advertisements

ಇನ್ನೊಬ್ಬ ಮಹನೀಯರು 1940ರ ದಶಕದ ಮಧ್ಯಭಾಗದಲ್ಲಿ ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ್ದು ಗೋಪರಾಜು ರಾಮಚಂದ್ರ ರಾವ್‌ (ಗೋರಾ). 1902ರಲ್ಲಿ ಒಂದು ಸಾಂಪ್ರದಾಯಿಕ ತೆಲುಗು ಕುಟುಂಬದಲ್ಲಿ ಜನಿಸಿದ ಗೋರಾ ಒಬ್ಬ ನಿರೀಶ್ವರವಾದಿಯಾಗಿದ್ದರು; ಮೌಢ್ಯಾಚರಣೆಗಳ ವಿರುದ್ಧ ಹೋರಾಡಿದರು. ಅವರ ಪತ್ನಿ ಸಹ ಇಂತಹ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದರು. ಪ್ರತಿ ಹುಣ್ಣಿಮೆಯ ದಿನದಂದು ಅವರು ಎಲ್ಲ ಜಾತಿ ಮತ್ತು ಮತಗಳ ಜನರನ್ನು ಒಗ್ಗೂಡಿಸಿ ಔತಣಗಳನ್ನು ಏರ್ಪಡಿಸುತ್ತಿದ್ದರು. ಗ್ರಾಮಕ್ಕೆ ಭೇಟಿ ನೀಡಿದಾಗ, ದಲಿತ ಕಾಲೋನಿಯಲ್ಲಿ ತಂಗುವುದಾಗಿ ಅಗ್ರಹಿಸುತ್ತಿದ್ದರು. ಅವರು ಅನೇಕ ಅಂತರಜಾತಿ ಮತ್ತು ಮತೀಯ ಮದುವೆಗಳನ್ನು ನಡೆಸುತ್ತಿದ್ದರು. ತಮ್ಮ ನಾಸ್ತಿಕತೆಗಾಗಿ ಕಾಲೇಜಿನ ಕೆಲಸವನ್ನು ಕಳೆದುಕೊಂಡರು. ಅವರ ಗಂಡು ಮತ್ತು ಹೆಣ್ಣು ಮಕ್ಕಳು ಅಸ್ಪೃಶ್ಯ ಜಾತಿಗಳ ವ್ಯಕ್ತಿಗಳನ್ನು ವಿವಾಹವಾದರು. 

ಜಾತಿ ಮತ್ತು ಮತ, ಇವೆರಡರ ಜ್ಞಾನಶಾಸ್ತ್ರೀಯ (epistemological) ಮೂಲಗಳಿರುವುದು ಆಸ್ತಿಕತೆಯಲ್ಲಿ ಎಂಬುದು ಗೋರಾ ಅವರ ಸ್ಪಷ್ಟ ಅಭಿಮತವಾಗಿತ್ತು. ಆದುದರಿಂದ ನಾಸ್ತಿಕತೆಯ ಮೂಲಕ ಸಮಾಜವನ್ನು ಒಗ್ಗೂಡಿಸಬಹುದು.  ದೇವರಲ್ಲಿನ ನಂಬಿಕೆ ಎಂದರೆ ಅದು ಮಾನವನನ್ನು ದೈವಿಕ ಇಚ್ಛೆಗೆ ಅಧೀನಗೊಳಿಸುತ್ತದೆ. ಹಿಂದೂ ಮತೀಯ ಚಿಂತನೆಗಳಲ್ಲಿ ಮಾನವನ ಜೀವನ ಕರ್ಮ ಸಿದ್ಧಾಂತಕ್ಕೆ ಅಧೀನವಾಗಿದೆ. ಅಂದರೆ ಮಾನವನಲ್ಲಿರುವ ಗುಲಾಮತ್ವವನ್ನು ಆಸ್ತಿಕತೆ ಪ್ರತಿನಿಧಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ನಾಸ್ತಿಕತೆ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ. ಆದುದರಿಂದ ಆಸ್ತಿಕತೆ ಮತ್ತು ನಾಸ್ತಿಕತೆ ಎಂಬುದು ವಿರುದ್ಧ ನೆಲೆಗಳಲ್ಲಿವೆ ಎಂಬುದು ಗೋರಾ ಅವರ ವಾದಗಳಾಗಿದ್ದವು.

ಗೋರಾ ಅವರಿಗೆ ಗಾಂಧೀಜಿಯವರ ಬಗೆಗೆ ಅಪಾರ ಗೌರವವಿತ್ತು. ಆದರೂ ಗಾಂಧೀಜಿಯವರು ಮೊದಲು ಗೋರಾರನ್ನು ಭೇಟಿ ಮಾಡಲು ಇಚ್ಛಿಸಲಿಲ್ಲ. ನಂತರ ಹಲವು ಪ್ರಯತ್ನಗಳ ತರುವಾಯ ಗಾಂಧೀಜಿಯವರನ್ನು ಅವರು ಸೇವಾಗ್ರಾಮದಲ್ಲಿ ಭೇಟಿ ಮಾಡಿದರು. ಅವರೀರ್ವರ ನಡುವೆ ದೀರ್ಘ ಚರ್ಚೆಗಳು ಜರುಗಿದವು. ಅವರ ಚಿಂತನಾ ಲಹರಿಗಳಲ್ಲಿ ಸಾಮ್ಯತೆ ಇರಲಿಲ್ಲ. ಆದರೆ ಗಾಂಧೀಜಿಯವರ ಮೇಲೆ ಗೋರಾ ಅವರ ಜಾತಿಪದ್ಧತಿ ಬಗೆಗಿನ ಅಭಿಪ್ರಾಯಗಳು ಪರಿಣಾಮವನ್ನು ಬೀರಿದವು.

ಗಾಂಧೀಜಿಯವರಿಗೆ ವಿಶಾಲ ಮನೋಭಾವವಿತ್ತು. ತಮ್ಮ ಬರಹಗಳಲ್ಲಿ ತಪ್ಪುಗಳಾಗಿದ್ದರೆ, ಅವುಗಳನ್ನು ಮನಗಾಣುತ್ತಿದ್ದರು. ಒಂದು ಸಂದರ್ಭದಲ್ಲಿ ಅಂತಹ ಬರಹಗಳನ್ನು ತಾವು ಗತಿಸಿದ ಮೇಲೆ ತಮ್ಮ ದೇಹದ ಜೊತೆ ನಾಶಮಾಡಬೇಕೆಂದು ಹೇಳಿದ್ದರು! ಏಕೆಂದರೆ ಜನರು ತಮ್ಮ ಬರಹಗಳ ಮೂಲಕ ತಪ್ಪಾಗಿ ನಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ ಎಂಬುದು ಅವರ ಆತಂಕವಾಗಿತ್ತು!

ಗಾಂಧೀಜಿಯವರು ಸದಾ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದರು; ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದರು.  ಹೀಗಾಗಿ ಅವರು ಮಹಾನ್‌ ವ್ಯಕ್ತಿಯಾದರು!

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X