ಅಧ್ಯಕ್ಷ ಗಾದಿಯಿಲ್ಲದ ಸಿಪಿಐಎಂ: ಕಾರ್ಯದರ್ಶಿಯೇ ಸುಪ್ರೀಂ; ಪಾಲಿಟ್ ಬ್ಯುರೋ ನಿರ್ಧಾರವೇ ವೇದವಾಕ್ಯ

Date:

Advertisements

ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಟಿಎಂಸಿ, ಟಿಡಿಪಿ – ಹೀಗೆ ದೇಶದಲ್ಲಿ ಹಲವು ರಾಜಕೀಯ ಪಕ್ಷಗಳಿವೆ. ಆ ಪಕ್ಷಗಳಿಗೆ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಎಂಬ ಹುದ್ದೆಗಳನ್ನು ಒಳಗೊಂಡ ಸಮಿತಿಗಳಿವೆ. ಆದರೆ ಎಡ ಪಕ್ಷಗಳ ನಾಯಕತ್ವದ ಸಮಿತಿ ರಚನೆ ಇತರೆ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವಾದುದ್ದು. ಒಂದು ಪಕ್ಷವೆಂದರೆ ‘ಓರ್ವ ಅಧ್ಯಕ್ಷ’ ಎಂಬ ರಾಜಕೀಯ ವ್ಯವಸ್ಥೆಯಲ್ಲಿ ಎಡರಂಗಗಳ ಸಂಘಟನಾತ್ಮಕ ರಚನೆಯು ಪ್ರತ್ಯೇಕವಾಗಿ ನಿಲ್ಲುತ್ತದೆ.

ಕಮ್ಯೂನಿಸ್ಟ್ ಪಕ್ಷಗಳಾದ ಸಿಪಿಐ, ಸಿಪಿಐಎಂ, ಸಿಪಿಐಎಂಎಲ್‌ ಮೊದಲಾದ ಪಕ್ಷಗಳಲ್ಲಿ ಅಧ್ಯಕ್ಷಗಾದಿಯಿಲ್ಲ. ರಾಜ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಯೇ ಸುಪ್ರೀಂ, ಇದುವೇ ಉನ್ನತ ಹುದ್ದೆ. ಪ್ರಜಾಸತಾತ್ಮಕ ಪಕ್ಷ ಎನಿಸಿಕೊಂಡ ಉಳಿದ ಪಕ್ಷಗಳಿಗಿಂತ ಎಡರಂಗಗಳಲ್ಲಿ ಕಾರ್ಯದರ್ಶಿ ಆಯ್ಕೆ ಪ್ರಕ್ರಿಯೆ ಭಿನ್ನ. ಇಲ್ಲಿ ಓರ್ವ ವ್ಯಕ್ತಿಯನ್ನು ಆಯ್ಕೆ ಮಾಡಿ ಖುರ್ಚಿಯಲ್ಲಿ ಕೂರಿಸುವಂತಿಲ್ಲ, ಆಯ್ಕೆ ಪ್ರಕ್ರಿಯೆ ಆ ರೀತಿ ನಡೆಯುವುದೂ ಇಲ್ಲ. ಆದರೆ ಇಲ್ಲಿಯೂ ಕಾರ್ಯದರ್ಶಿ ಎಂಬ ಉನ್ನತ ಸ್ಥಾನಕ್ಕೆ ಪೈಪೋಟಿ ತಪ್ಪಿದಲ್ಲ. ಪ್ರಜಾಪ್ರಭುತ್ವವೇ ಹಾಗೆ- ಚುನಾವಣೆ, ಮತ, ಬಹುಮತ, ಸ್ಥಾನ ಇಷ್ಟೆ.

ಇದನ್ನು ಓದಿದ್ದೀರಾ? ಮಹೇಶ್ ಜೋಶಿಗೆ ನೀಡಲಾಗಿರುವ ಸಂಪುಟ ದರ್ಜೆಯ ಸ್ಥಾನಮಾನ ರದ್ದತಿಗೆ ಸಿಪಿಐಎಂ ಆಗ್ರಹ

Advertisements

ಇತ್ತೀಚೆಗೆ ನಡೆದ ಸಿಪಿಐಎಂನ 24ನೇ ಕರ್ನಾಟಕ ರಾಜ್ಯ ಸಮ್ಮೇಳನದಲ್ಲಿ 35 ಜನರ ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. 12 ಜನರ ರಾಜ್ಯ ಕಾರ್ಯದರ್ಶಿ ಮಂಡಳಿಯನ್ನು ಆಯ್ಕೆ ಮಾಡಲಾಗಿದೆ. ನೂತನ ರಾಜ್ಯ ಕಾರ್ಯದರ್ಶಿಯಾಗಿ ಡಾ. ಕೆ ಪ್ರಕಾಶ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಹಿರಿಯ ಮುಖಂಡರಾದ ಯು ಬಸವರಾಜ, ಜಿ.ಸಿ ಬಯ್ಯಾರೆಡ್ಡಿ, ಮೀನಾಕ್ಷಿ ಸುಂದರಂ, ವರಲಕ್ಷ್ಮಿ ಎಸ್, ಗೋಪಾಲಕೃಷ್ಣ ಹರಳಹಳ್ಳಿ, ಸೈಯದ್ ಮುಜೀಬ್, ಯಾದವಶೆಟ್ಟಿ, ಮುನಿವೆಂಕಟಪ್ಪ, ಕೆ.ನೀಲಾ, ಕೆ.ಮಹಂತೇಶ್, ಚಂದ್ರಪ್ಪ ಹೊಸ್ಕೆರಾ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಸಿಪಿಐಎಂನ ಮುಂದಿನ ಎಲ್ಲಾ ಹೆಜ್ಜೆಗಳನ್ನು ನಿರ್ಧರಿಸುವವರು, ಮುನ್ನಡೆಸುವವರು ಈ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿರುತ್ತಾರೆ. ಸ್ಥಳೀಯ ಶಾಖೆಗಳಲ್ಲೂ ಪಕ್ಷದ ನಿರ್ಧಾರ ವಿರೋಧಿಸುವ ಅವಕಾಶವಿದೆ, ಅದು ಬೇರೆಯೇ.

ಸಿಪಿಐಎಂ ಸಮ್ಮೇಳನ, ಸಮಿತಿ ರಚನೆ ಇತ್ಯಾದಿ

ಸಿಪಿಐಎಂನಲ್ಲಿ ರಾಜ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಆಯ್ಕೆಯನ್ನು ಸುಖಾಸುಮ್ಮನೆ ಮಾಡಲಾಗದು. ಪಕ್ಷದ ಭವಿಷ್ಯ ಈ ಸ್ಥಾನದಲ್ಲಿರುವ ವ್ಯಕ್ತಿಯ ಕಾರ್ಯವೈಖರಿ ಮೇಲೆ ನಿಂತಿರುವ ಕಾರಣ ಸಮರ್ಥ ನಾಯಕರ ಆಯ್ಕೆ ಅನಿವಾರ್ಯ.

ಮಿಸ್ಡ್‌ಕಾಲ್ ನೀಡಿ ಪಕ್ಷದ ಸದಸ್ಯತ್ವ ಪಡೆಯುವ ಈ ಕಾಲದಲ್ಲಿಯೂ ಸಿಪಿಐಎಂ ಸದಸ್ಯರಾಗುವುದು ಸುಲಭವಲ್ಲ. ಸೈದ್ಧಾಂತಿಕ ಬದ್ದತೆ, ಒಲವನ್ನು ನೋಡಿ ಪಕ್ಷದ ಸದಸ್ಯತ್ವ ನೀಡಲಾಗುತ್ತದೆ. ವಿದ್ಯಾರ್ಥಿ, ಯುವಜನ, ಕಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕಾರ್ಯಕರ್ತರನ್ನು ಗುರುತಿಸಿ ಆರಂಭಿಕವಾಗಿ ಉಮೇದುವಾರು ಸದಸ್ಯತ್ವವನ್ನು ನೀಡಲಾಗುತ್ತದೆ. ಈ ಅವಧಿಯಲ್ಲಿ ಸದಸ್ಯರು ಎಷ್ಟು ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿರುತ್ತಾರೋ ಅದರ ಆಧಾರದಲ್ಲಿ ಮುಂದಿನ ವರ್ಷದಲ್ಲಿ ಪೂರ್ಣ ಸದಸ್ಯತ್ವ ಪಡೆದುಕೊಳ್ಳಬಹುದು. (ಮಾಧ್ಯಮ, ಇತರೆಡೆ ಕೆಲಸ ಮಾಡುವವರ ಸದಸ್ಯತ್ವ ಪ್ರತಿ ವರ್ಷ ನವೀಕರಿಸಲಾಗುತ್ತದೆ. ಅದು ಬೇರೆ ವಿಚಾರ) ಈ ಸದಸ್ಯರುಗಳನ್ನು ಸೇರಿಸಿ ರಚಿಸುವ ಗುಂಪೇ ಶಾಖೆಗಳು.

ಮೂರು ವರ್ಷಕ್ಕೊಮ್ಮೆ ಸಿಪಿಐಎಂ ಸಮ್ಮೇಳನಗಳು ನಡೆಯುತ್ತದೆ. ಆರಂಭದಲ್ಲಿ ದೇಶದಾದ್ಯಂತ ಸ್ಥಳೀಯ ಶಾಖೆಗಳ (ಮಹಿಳಾ ಶಾಖೆ, ಕಾರ್ಮಿಕ ಶಾಖೆ, ವಿದ್ಯಾರ್ಥಿ ಶಾಖೆ ಇತ್ಯಾದಿ) ಸಮ್ಮೇಳನ ನಡೆಯುತ್ತದೆ. ಆ ಸಮ್ಮೇಳನದಲ್ಲಿ ನಗರ ಅಥವಾ ವಲಯ ಮಟ್ಟದ ಸಮ್ಮೇಳನಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಸಮ್ಮೇಳನದಲ್ಲಿ ನಗರ ಕಾರ್ಯದರ್ಶಿಯ ಆಯ್ಕೆ ನಡೆಯುತ್ತದೆ. ನಗರ ಸಮ್ಮೇಳನದಲ್ಲಿ ಜಿಲ್ಲಾ ಸಮ್ಮೇಳನಕ್ಕೆ, ಜಿಲ್ಲಾ ಸಮ್ಮೇಳನದಲ್ಲಿ ರಾಜ್ಯ ಸಮ್ಮೇಳನಕ್ಕೆ, ರಾಜ್ಯ ಸಮ್ಮೇಳನದಲ್ಲಿ ಅಖಿಲ ಭಾರತ ಸಮ್ಮೇಳನಕ್ಕೆ ಪ್ರತಿನಿಧಿಗಳ ಆಯ್ಕೆ ನಡೆಯುತ್ತದೆ. ಈ ಸಮ್ಮೇಳನದಲ್ಲಿ ಸಮಿತಿ ಆಯ್ಕೆ ಮಾಡಲಾಗುತ್ತದೆ, ಆ ಸಮಿತಿ ಕಾರ್ಯದರ್ಶಿ ಮಂಡಳಿ, ಕಾರ್ಯದರ್ಶಿ ಆಯ್ಕೆ ಮಾಡುತ್ತದೆ. ಈ ಪ್ರಕ್ರಿಯೆಯು ಕೆಲವೊಮ್ಮೆ ಚುನಾವಣೆ ನಡೆಸುವ ಹಂತಕ್ಕೆ ತಲುಪುವುದೂ ಇದೆ. ಸ್ಥಾನಕ್ಕಾಗಿ ನಡೆಯುವ ಜಿದ್ದಾಟದಿಂದ ಕಮ್ಯೂನಿಸ್ಟ್ ಪಕ್ಷವೂ ಕೂಡಾ ಹೊರತಾಗಿಲ್ಲ.

ಇದನ್ನು ಓದಿದ್ದೀರಾ? ಬಾಗೇಪಲ್ಲಿ | ಸಿಪಿಐಎಂ 18ನೇ ಜಿಲ್ಲಾ ಸಮ್ಮೇಳನ; ಪೋಸ್ಟರ್ ಬಿಡುಗಡೆ

ಇವೆಲ್ಲ ಪ್ರಕ್ರಿಯೆಯು ನಡೆಯುವುದು ಪ್ರಜಾಪ್ರಭುತ್ವ ರೀತಿಯಲ್ಲಿ. ಪ್ರತಿನಿಧಿಗಳ ಸಮ್ಮತಿಯ ಮೇರೆಗೆ. ಯಾವುದೇ ವ್ಯಕ್ತಿಯ ಆಯ್ಕೆಗೆ ಸಮ್ಮೇಳನದಲ್ಲಿ ಭಾಗಿಯಾಗಿರುವ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಬಹುದು.

ಸಿಪಿಐಎಂನಲ್ಲಿ ಪ್ರಧಾನ ಕಾರ್ಯದರ್ಶಿ ಅಥವಾ ರಾಜ್ಯ ಕಾರ್ಯದರ್ಶಿ ಅಧಿಕಾರವಧಿ ಮೂರು ವರ್ಷಗಳ ಕಾಲ. ಆದರೆ ಹಲವು ಬಾರಿ ಅದೇ ವ್ಯಕ್ತಿ ಪುನರ್‌ ಆಯ್ಕೆಯಾಗಿರುವುದು ನಡೆದಿದೆ. ಒಬ್ಬ ವ್ಯಕ್ತಿ ಒಟ್ಟು ಮೂರು ಬಾರಿ ಪ್ರಧಾನ ಕಾರ್ಯದರ್ಶಿ ಅಥವಾ ರಾಜ್ಯ, ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾಗಲು ಸಿಪಿಐಎಂನಲ್ಲಿ ಅವಕಾಶವಿದೆ. ಇದಕ್ಕೆ ಪಕ್ಷದಲ್ಲಿ ಪ್ರಬಲ ನಾಯಕತ್ವದ, ಬದ್ಧತೆಯ ಕೊರತೆಯೂ ಆಗಿರಬಹುದು. ಏನೇ ಆದರೂ ಸಮ್ಮೇಳನ ನಡೆದ ಬಳಿಕವೇ ಕಾರ್ಯದರ್ಶಿ ಆಯ್ಕೆ ಮಾಡಲಾಗುವುದು. ಅನಿವಾರ್ಯವಾದಲ್ಲಿ ಹಂಗಾಮಿ ಕಾರ್ಯದರ್ಶಿ ಆಯ್ಕೆಯನ್ನು ಪಾಲಿಟ್ ಬ್ಯುರೋ (ಕಮ್ಯೂನಿಸ್ಟ್ ಪಕ್ಷದ ನೀತಿ ರೂಪಿಸುವ ಪ್ರಧಾನ ಸಮಿತಿ) ಮಾಡುತ್ತದೆ.

ಹೀಗೆ ಈ ಎಲ್ಲಾ ರಚನೆಯನ್ನು ಹೊಂದಿರುವ 34 ವರ್ಷಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಎಡ ಚಿಂತನೆಗಳನ್ನು ಹೊಂದಿರುವ ಸ್ಥಳೀಯ ರಾಜಕೀಯ ಪಕ್ಷಗಳ ಮೇಲೆ ಬೀರಿರುವ ಪ್ರಭಾವ ಕಡೆಗಣಿಸುವಂತಿಲ್ಲ. ರಾಷ್ಟ್ರೀಯ ಪಕ್ಷಗಳೆನಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್‌ನಲ್ಲಿ ಅಧ್ಯಕ್ಷಗಾದಿಯಿರುವ ಸಮಿತಿ ಇರುವಾಗ, ದ್ರಾವಿಡ ಪಕ್ಷಗಳು ಮಾರುಹೋಗಿದ್ದು ಎಡರಂಗದ ಸಾಂಸ್ಥಿಕ ರಚನೆಗೆ. ಇದರ ಪರಿಣಾಮವಾಗಿಯೇ ಇಂದು ಡಿಎಂಕೆಯಲ್ಲಿಯೂ ಪ್ರಧಾನ ಕಾರ್ಯದರ್ಶಿಯೇ ಉನ್ನತ ಸ್ಥಾನವಾಗಿರುವುದು.

ಪ್ರಧಾನ ಕಾರ್ಯದರ್ಶಿ ಸುಪ್ರೀಂ, ಆದರೂ….

ಕಮ್ಯೂನಿಸ್ಟ್ ಪಕ್ಷಗಳಲ್ಲಿ ಅಧ್ಯಕ್ಷರಿಲ್ಲ ಎಂದಾಗ ಪ್ರಧಾನ ಕಾರ್ಯದರ್ಶಿಯೇ ಸುಪ್ರೀಂ ಎನ್ನಬಹುದು. ಆದರೆ ಸುಪ್ರೀಂ ಹೇಳಿದ್ದು ವೇದವಾಕ್ಯವಾಗುತ್ತದೆಯೇ? ಖಂಡಿತವಾಗಿಯೂ ಇಲ್ಲ. ಪ್ರಧಾನ ಕಾರ್ಯದರ್ಶಿಯ ಸ್ವಯಂ ನಿರ್ಧಾರ ಎಂದಿಗೂ ಪಕ್ಷದ ನಿರ್ಧಾರವಾಗದು. ಕಾರ್ಯದರ್ಶಿ ಮಂಡಳಿ ಸದಸ್ಯರೆಲ್ಲರೂ ಸಭೆ ಸೇರಿ ಬಹುಮತದ ಆಧಾರದಲ್ಲಿ ಕೈಗೊಂಡ ತೀರ್ಮಾನವೇ ಪಕ್ಷದ ಕರೆ, ಇದನ್ನು ಪಾಲಿಸುವುದು ಓರ್ವ ನಿಷ್ಠಾವಂತ ಸಿಪಿಐಎಂ ಸದಸ್ಯನ ಕರ್ತವ್ಯ. ಪಕ್ಷದ ನಿಲುವಿಗೆ ಭಿನ್ನವಾಗಿ ನಡೆದರೆ ಶಿಸ್ತು ಕ್ರಮ ಕಟ್ಟಿಟ್ಟ ಬುತ್ತಿ.

ಇದನ್ನು ಓದಿದ್ದೀರಾ? ಶಿಗ್ಗಾವಿ ಉಪಚುನಾವಣೆ | ದೇಶದ ಬಹುತ್ವ ಸಂಸ್ಕೃತಿ, ಸಂವಿಧಾನ ವಿರೋಧಿ ಬಿಜೆಪಿ ಪಕ್ಷವನ್ನು ಸೋಲಿಸಬೇಕು: ಸಿಪಿಐಎಂ ಕರೆ

ಸಿಪಿಐಎಂ ಸದಸ್ಯ ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಕೂಡಾ ಆತ/ ಆಕೆಗೆ ಪಕ್ಷವೇ ಅಂತಿಮ. ಅದಕ್ಕೆ ಸ್ಪಷ್ಟ ಉದಾಹರಣೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯೂನಿಸ್ಟ್ ನೇತಾರ ಜ್ಯೋತಿ ಬಸು ಪ್ರಧಾನಮಂತ್ರಿಯಾಗುವ ಪ್ರಸ್ತಾಪವನ್ನು ನಿರಾಕರಿಸಿರುವುದು. ಅದು ಒಂದು ಬಾರಿಯಲ್ಲ, ನಾಲ್ಕು ಬಾರಿ. ಹುದ್ದೆಗಾಗಿ ಸೈದಾಂತಿಕ ವೈರುಧ್ಯವನ್ನು ಬದಿಗೊತ್ತಿ ಕುರ್ಚಿ ಏರುವ ಕಾಲದಲ್ಲಿ ಪಕ್ಷದ ನಿರ್ಧಾರಕ್ಕೆ ತಲೆಬಾಗಿ ಪ್ರಧಾನಿ ಸ್ಥಾನವನ್ನು ತಳ್ಳಿದ ವ್ಯಕ್ತಿತ್ವ ಜ್ಯೋತಿಬಸು ಅವರದ್ದು. ಅದಕ್ಕೆ ಕಾರಣ ಪಕ್ಷದ ನಿರ್ಧಾರ ಎಡವಿ ನಡೆಯದೆ ಇರುವ ಬದ್ಧತೆ. ಇವೆಲ್ಲವುದರ ಹೊರತಾಗಿಯೂ ಕಮ್ಯೂನಿಸ್ಟ್‌ ನಾಯಕರಲ್ಲಿ ಲಾಲಸೆ ಇಲ್ಲವೆಂದಲ್ಲ. ಸ್ಥಾನಕ್ಕಾಗಿ, ಹಣಕ್ಕಾಗಿ ಸಿಪಿಐಎಂನಿಂದ ಇತರೆ ಪಕ್ಷದೆಡೆ ಜಿಗಿದ ಹಲವು ನಾಯಕರುಗಳಿದ್ದಾರೆ.

ಇನ್ನು ಸಿಪಿಐಎಂನಲ್ಲಿ ಪ್ರಧಾನ ಕಾರ್ಯದರ್ಶಿ ಅಥವಾ ರಾಜ್ಯ ಕಾರ್ಯದರ್ಶಿಯೇ ಮುಖ್ಯವಾಗುತ್ತಾರೆ ಎಂಬುದಕ್ಕೆ ಉದಾಹರಣೆಯನ್ನೂ ನೀಡಬಹುದು. ಉದಾಹರಣೆಗೆ ದಿವಂಗತ ಕಾಮ್ರೇಡ್ ಸೀತಾರಾಮ್ ಯೆಚೂರಿ ಅವರು. ನಿಧನರಾಗುವುದಕ್ಕೂ ಮುನ್ನ ಪ್ರಧಾನ ಕಾರ್ಯದರ್ಶಿಯಾಗಿದ್ದವರು ಯೆಚೂರಿ. ಅವರು ನೀಡಿದ ಹೇಳಿಕೆಗಳೇ ಪಕ್ಷದ ಹೇಳಿಕೆಯಾಗುತ್ತದೆ.

ಪ್ರಜಾಸತ್ತಾತ್ಮಕ ಕೇಂದ್ರೀಕರಣ

ಪ್ರಜಾಸತ್ತಾತ್ಮಕ ಕೇಂದ್ರೀಕರಣ (Democratic centralism) ಕಮ್ಯೂನಿಸ್ಟ್ ಪಕ್ಷಗಳ ಒಂದು ಸಾಂಸ್ಥಿಕ ತತ್ವವಾಗಿದೆ. ಶ್ರಮಜೀವಿಗಳ ಸರ್ವಾಧಿಕಾರವನ್ನು ಈ ತತ್ವ ಪ್ರತಿಪಾದಿಸುತ್ತದೆ ಎಂದರೆ ತಪ್ಪಾಗಲಾರದು. ಪ್ರಾಯೋಗಿಕವಾಗಿ ಹೇಳುವುದಾದರೆ ಮತದಾನ ಪ್ರಕ್ರಿಯೆ ಮೂಲಕ ಕೈಗೊಂಡ ರಾಜಕೀಯ ನಿರ್ಧಾರಗಳಿಗೆ ಪಕ್ಷದ ಎಲ್ಲಾ ಸದಸ್ಯರು ಕಡ್ಡಾಯವಾಗಿ ಬದ್ಧರಾಗಿರುವುದು. ಇದು ಲೇನಿನ್‌ವಾದದೊಂದಿಗೆ ಹೆಚ್ಚಿನ ನಂಟನ್ನು ಹೊಂದಿದೆ. ನಾಯಕರನ್ನು ಆಯ್ಕೆ ಮಾಡಲು ಈ ಪ್ರಕ್ರಿಯೆಯನ್ನೇ ಪಾಲಿಸಲಾಗುತ್ತದೆ.

ಆದರೆ ಸೋವಿಯತ್ ಒಕ್ಕೂಟ ಮತ್ತು ಚೀನಾದಲ್ಲಿ ಪ್ರಜಾಸತ್ತಾತ್ಮಕ ಕೇಂದ್ರೀಕರಣವನ್ನು ಹೊಂದಿದೆಯೇ ಎಂಬ ಪ್ರಶ್ನೆ ಹಲವರದ್ದು. ಅದಕ್ಕೆ ಕಾರಣ ಸರ್ವಾಧಿಕಾರದತ್ತ ವಾಲುತ್ತಿರುವ ಈ ದೇಶಗಳ ರಾಜಕೀಯ ಸ್ಥಿತಿ. ಇನ್ನು ಈ ‘ಡೆಮಾಕ್ರಟಿಕ್ ಸೆಂಟ್ರಲಿಸಂ’ ಎಂಬುದೇ ಕಾಲ ಕ್ರಮೇಣ ಸರ್ವಾಧಿಕಾರದತ್ತ ನೂಕುತ್ತದೆ ಎಂಬ ವಾದವೂ ಇದೆ. ಯಾವುದೇ ಸಿದ್ದಾಂತವಿದ್ದರೂ ಅತಿಯಾದರೆ ಅಮೃತವೂ ವಿಷವೆಂಬಂತೆ ಅತಿಯಾದರೆ ಅಲ್ಲಿ ಸರ್ವಾಧಿಕಾರ ತಲೆ ಎತ್ತುತ್ತದೆ, ಸಿದ್ಧಾಂತವನ್ನೇ ಬುಡಮೇಳು ಮಾಡುತ್ತದೆ.

Mayuri
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X