ಮತದಾರರ ಮತಪತ್ರದ ಗೌಪ್ಯತೆಯನ್ನು ಖಚಿತವಡಿಸಿಕೊಳ್ಳಲು ಮತ್ತು ಮತದಾರರನ್ನು ದಬ್ಬಾಳಿಕೆ, ಬೆದರಿಕೆ ಮತ್ತು ಅನಗತ್ಯ ಪ್ರಭಾವದಿಂದ ರಕ್ಷಿಸುವ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯ ಪಾವಿತ್ರ್ಯವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ತನ್ನ ನಿಲುವನ್ನು ಪ್ರತಿಪಾದಿಸಿಕೊಂಡಿತ್ತು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಯಂತ್ರಗಳ(ಇವಿಎಂ) ಬದಲಿಗೆ ಮತ ಪತ್ರವನ್ನು ಬಳಸಲು ಅನುವು ಮಾಡುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಕಾಯ್ದೆ ಜಾರಿಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಸರ್ಕಾರದಿಂದ ಗೆಜೆಟ್ ನೋಟಿಫಿಕೇಶನ್ ಪ್ರಕಟ
ರಾಜ್ಯಪಾಲರು ವಿಧೇಯಕಕ್ಕೆ ಸಹಿ ಹಾಕುತ್ತಿದ್ದಂತೆಯೇ, ವಿಳಂಬ ಮಾಡದೇ ರಾಜ್ಯ ಸರ್ಕಾರ ತಕ್ಷಣವೇ ಈ ಸಂಬಂಧಿಸಿದಂತೆ ಅಧಿಕೃತ ಗೆಜೆಟ್ ನೋಟಿಫಿಕೇಶನ್ ಅನ್ನು ಹೊರಡಿಸಿದೆ. ಇದರೊಂದಿಗೆ ಈ ಹೊಸ ನಿಯಮ ತಕ್ಷಣದಿಂದಲೇ ರಾಜ್ಯಾದ್ಯಂತ ಜಾರಿಗೆ ಬಂದಂತಾಗಿದ್ದು, ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಇದೇ ನಿಯಮದನ್ವಯ ನಡೆಯಲಿವೆ.
ಇವಿಎಂ ವಿಶ್ವಾಸಾರ್ಹತೆಯ ಬಗ್ಗೆ ದೇಶಾದ್ಯಂತ ಹಲವು ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ, ಕರ್ನಾಟಕ ಸರ್ಕಾರ ಸ್ಥಳೀಯ ಚುನಾವಣೆಗಳಲ್ಲಿ ಮತಪತ್ರ/ಬ್ಯಾಲೆಟ್ ಪೇಪರ್ ಮೊರೆಹೋಗಿರುವುದು ರಾಜ್ಯದ ಚುನಾವಣಾ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಬರೆದಂತಾಗಿದೆ.
ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ವಿಶ್ವಾಸಾರ್ಹತೆ ಮತ್ತು ಮತದಾರರ ಗೌಪ್ಯತೆ ಬಗ್ಗೆ ಅನುಮಾನಗಳು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿಸಂವಿಧಾನದ 326ನೇ ಅನುಚ್ಛೇದದಡಿ ಜನರ ಪ್ರಜಾಸತ್ತಾತ್ಮಕ ಇಚ್ಛೆಯನ್ನು ಪ್ರತಿಬಿಂಬಿಸುವ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿ ಚುನಾವಣೆ ನಡೆಸುವ ಸಲುವಾಗಿ ಮತಪತ್ರ ಬಳಸಲು ಕಾನೂನು ತಿದ್ದುಪಡಿಗೆ ರಾಜ್ಯ ಸರ್ಕಾರ ಕೈಗೊಂಡಿತ್ತು.
ಮತದಾರರ ಮತಪತ್ರದ ಗೌಪ್ಯತೆಯನ್ನು ಖಚಿತವಡಿಸಿಕೊಳ್ಳಲು ಮತ್ತು ಮತದಾರರನ್ನು ದಬ್ಬಾಳಿಕೆ, ಬೆದರಿಕೆ ಮತ್ತು ಅನಗತ್ಯ ಪ್ರಭಾವದಿಂದ ರಕ್ಷಿಸುವ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯ ಪಾವಿತ್ರ್ಯವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ತನ್ನ ನಿಲುವನ್ನು ಪ್ರತಿಪಾದಿಸಿಕೊಂಡಿತ್ತು.
ಬಿಜೆಪಿಯ ವಾದವೇನು?
ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಳಕೆ ಮತ್ತು ಮತಪತ್ರಗಳ (Ballot Paper) ಬಳಕೆ ಬಗ್ಗೆ ದಶಕಗಳಿಂದೀಚೆಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಪ್ರತಿಪಕ್ಷಗಳು ಪದೇ ಪದೇ ಮತಪತ್ರಗಳ ಬಳಕೆಯನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸುತ್ತಿದ್ದರೆ, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ, ವಿರೋಧ ಪಕ್ಷಗಳ ವಾದವನ್ನು ಬಲವಾಗಿ ವಿರೋಧಿಸುತ್ತಲೇ ಬಂದಿದೆ.
ಮತಪತ್ರಗಳ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರತ ಕಂಡ ಅತಿ ದೊಡ್ಡ ಪಿಡುಗು ಎಂದರೆ ಬೂತ್ ಕ್ಯಾಪ್ಚರಿಂಗ್ (Booth Capturing) ಎನ್ನುವುದು ಬಿಜೆಪಿಯ ವಾದ. ಹಿಂದೆ ಪ್ರಭಾವಿ ರಾಜಕಾರಣಿಗಳು ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಮತಗಟ್ಟೆಗಳನ್ನು ವಶಪಡಿಸಿಕೊಂಡು ತಮ್ಮ ಕಡೆಗೆ ಫಲಿತಾಂಶ ಬರುವಂತೆ ಮಾಡಿಕೊಳ್ಳುತ್ತಿದ್ದರು. ಇವಿಎಂ ವ್ಯವಸ್ಥೆ ಜಾರಿಗೆ ಬಂದ ಬಳಿಕ ಈ ರೀತಿಯ ವಾತಾವರಣ ನಡೆಯುವುದಿಲ್ಲ. ಪ್ರತಿ ನಿಮಿಷಕ್ಕೆ ಕೇವಲ 4 ಮತಗಳನ್ನು ಮಾತ್ರ ಚಲಾಯಿಸಲು ಇವಿಎಂ ಅವಕಾಶ ನೀಡುವುದರಿಂದ, ಒಮ್ಮೆಲೇ ಸಾವಿರಾರು ʼಮತ ಕಳ್ಳತನʼ ಮಾಡಲು ಸಾಧ್ಯವಿಲ್ಲ.
ಮತಯಂತ್ರಗಳ ಮೇಲೆ ಅನುಮಾನವಿದ್ದರೆ ಅದನ್ನು ಪರಿಶೀಲಿಸಲು ಈಗಾಗಲೇ VVPAT (Voter Verifiable Paper Audit Trail) ವ್ಯವಸ್ಥೆ ಜಾರಿಯಲ್ಲಿದೆ ಎನ್ನುವುದು ಒಂದೆಡೆಯಾದರೆ, ಇನ್ನೊಂದೆಡೆ ಬಿಜೆಪಿ ವಿರೋಧಕ್ಕೆ ಕೇವಲ ತಾಂತ್ರಿಕ ಕಾರಣಗಳಷ್ಟೇ ಅಲ್ಲ, ಕೆಲವು ರಾಜಕೀಯ ಕಾರಣಗಳೂ ಇವೆ.
ಚುನಾವಣೆಯಲ್ಲಿ ಸೋತಾಗಲೆಲ್ಲಾ ವಿರೋಧ ಪಕ್ಷಗಳು ಇವಿಎಂ ಮೇಲೆ ಗೂಬೆ ಕೂರಿಸುತ್ತವೆ ಎಂಬುದು ಬಿಜೆಪಿಯ ಆರೋಪ. ಕಳೆದ ಹಲವು ಚುನಾವಣೆಗಳಲ್ಲಿ (ಬಿಜೆಪಿ ಸೋತ ಚುನಾವಣೆಗಳೂ ಸೇರಿ) ಇವಿಎಂ ಸಮರ್ಪಕವಾಗಿ ಕೆಲಸ ಮಾಡಿದೆ ಎಂದು ಬಿಜೆಪಿ ವಾದಿಸುತ್ತದೆ.
ಅಟಲ್ ಬಿಹಾರಿ ವಾಜಪೇಯಿ ಕಾಲದಿಂದಲೂ ಬಿಜೆಪಿ ಚುನಾವಣಾ ಸುಧಾರಣೆಗಳಿಗೆ ಒತ್ತು ನೀಡುತ್ತಾ ಬಂದಿದೆ. ‘ರಿಗ್ಗಿಂಗ್’ ಸಂಸ್ಕೃತಿಯನ್ನು ತೊಡೆದುಹಾಕಲು ಇವಿಎಂ ಅನಿವಾರ್ಯ ಎಂದು ಬಿಜೆಪಿ ಸಮರ್ಥಿಸಿಕೊಳ್ಳುತ್ತದೆ.
ಇವಿಎಂ ಮತ್ತು ವಿವಿಪ್ಯಾಟ್ ಗಳ ಬಗ್ಗೆ ಕಾಂಗ್ರೆಸ್ ಅನುಮಾನವೇನು?
ಇವಿಎಂ (EVM) ಮತ್ತು ವಿವಿಪ್ಯಾಟ್ (VVPAT) ಗಳ ಕುರಿತು ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು (INDIA ಒಕ್ಕೂಟ) ತಾಂತ್ರಿಕ ಮತ್ತು ಪ್ರಾಯೋಗಿಕವಾಗಿ ಹಲವು ಅನುಮಾನಗಳನ್ನು ವ್ಯಕ್ತಪಡಿಸುತ್ತಾ ಬಂದಿವೆ.
ಪ್ರಸ್ತುತ ಚುನಾವಣಾ ವ್ಯವಸ್ಥೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಐದು ಇವಿಎಂ ಯಂತ್ರಗಳ ವಿವಿಪ್ಯಾಟ್ ಚೀಟಿಗಳನ್ನು ಮಾತ್ರ ಎಣಿಕೆ ಮಾಡಲಾಗುತ್ತದೆ. ಆದರೆ, ಕಾಂಗ್ರೆಸ್ ಪಕ್ಷ “100% ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಬೇಕು” ಎಂದು ಒತ್ತಾಯಿಸಿದೆ/ಒತ್ತಾಯಿಸುತ್ತಲೇ ಇದೆ.
ಮತ ಚಲಾಯಿಸಿದ ಬಳಿಕ, ವಿವಿಪ್ಯಾಟ್ನಿಂದ ಬರುವ ಚೀಟಿಯನ್ನು ಮತದಾರರಿಗೆ ನೀಡಬೇಕು. ಮತದಾರ ಅದನ್ನು ನೋಡಿ ಖಚಿತಪಡಿಸಿಕೊಂಡ ನಂತರ, ಅದನ್ನು ಪ್ರತ್ಯೇಕವಾದ ಮತಪೆಟ್ಟಿಗೆಗೆ (Ballot Box) ಹಾಕುವಂತಾಗಬೇಕು. ಅಂತಿಮವಾಗಿ ಇವಿಎಂ ಯಂತ್ರದ ಎಣಿಕೆಯ ಬದಲು, ಈ ಮತಪೆಟ್ಟಿಗೆಯ ಚೀಟಿಗಳನ್ನೇ ಎಣಿಕೆ ಮಾಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಪ್ರಮುಖ ಬೇಡಿಕೆ.
ಇದನ್ನೂ ಓದಿ : ಬಿಹಾರದಲ್ಲಿ ಕೋಮುವಾದಕ್ಕೆ ರಹದಾರಿ ಮಾಡಿಕೊಟ್ಟು ʼರಾಷ್ಟ್ರಪತಿʼ ಆಕಾಂಕ್ಷೆಯ ಮೊದಲ ಹೆಜ್ಜೆ ಇಟ್ಟ ನಿತೀಶ್ ಕುಮಾರ್
ಇನ್ನು, ಇವಿಎಂಗಳಲ್ಲಿ ಬಳಸುವ ಚಿಪ್ ಅಥವಾ ಸಾಫ್ಟ್ವೇರ್ ಅನ್ನು ಹೊರಗಿನಿಂದ ಮ್ಯಾನಿಪುಲೇಟ್ ಮಾಡಬಹುದು ಅಥವಾ ‘ಮಲಿಶಿಯಸ್ ಕೋಡ್’ ಮೂಲಕ ಫಲಿತಾಂಶ ಬದಲಿಸಬಹುದು ಎಂಬ ಆತಂಕವನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದಾರೆ. ವಿವಿಪ್ಯಾಟ್ ಯಂತ್ರಗಳಿಗೆ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳನ್ನು ಲೋಡ್(ಸಿಂಬಲ್ ಲೋಡಿಂಗ್ ಯೂನಿಟ್ (SLU) ಮಾಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂಬುದು ಅವರ ಮತ್ತೊಂದು ದೂರು.
ಈ ಸಂಬಂಧಸಿದಂತೆ ಕಾಂಗ್ರೆಸ್ ಬೆಂಬಲಿತ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದವು. ಆದರೆ, 2024ರ ಏಪ್ರಿಲ್ನಲ್ಲಿ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿ, ಪ್ರಸ್ತುತ ಇರುವ ಇವಿಎಂ ವ್ಯವಸ್ಥೆ ವಿಶ್ವಾಸಾರ್ಹವಾಗಿದೆ ಎಂದು ತೀರ್ಪು ನೀಡಿತು.
ಮತಪತ್ರಗಳನ್ನು ಬಳಸುವ ಇತರೆ ದೇಶಗಳು ಯಾವುವು?
ವಿಶ್ವದ ಅನೇಕ ದೇಶಗಳು ಇಂದಿಗೂ ಚುನಾವಣೆಯಲ್ಲಿ ಮತಪತ್ರ (Ballot Paper) ಪದ್ಧತಿಯನ್ನೇ ಬಳಕೆ ಮಾಡುತ್ತಿವೆ. ಆಶ್ಚರ್ಯಕರ ಸಂಗತಿಯೆಂದರೆ, ತಂತ್ರಜ್ಞಾನದಲ್ಲಿ ಅತ್ಯಂತ ಮುಂದುವರಿದಿರುವ ಹಲವು ದೇಶಗಳು ಕೂಡ ಇವಿಎಂ (EVM) ಬಳಸುವ ಬದಲು ಮತಪತ್ರಗಳಿಗೇ ಆದ್ಯತೆ ನೀಡುತ್ತಿವೆ.
ಯುರೋಪ್ನ ಬಹುತೇಕ ರಾಷ್ಟ್ರಗಳು ಮತಪತ್ರಗಳ ಮೇಲೆ ಅವಲಂಬಿತವಾಗಿವೆ.
ಜರ್ಮನಿ 2005ರಲ್ಲಿ ಇವಿಎಂ ಬಳಸಲು ಪ್ರಯತ್ನಿಸಿತ್ತು. ಆದರೆ ಜರ್ಮನಿಯ ಸರ್ವೋಚ್ಚ ನ್ಯಾಯಾಲಯ “ಸಾಮಾನ್ಯ ನಾಗರಿಕನಿಗೂ ಚುನಾವಣಾ ಪ್ರಕ್ರಿಯೆ ಅರ್ಥವಾಗಬೇಕು, ಯಂತ್ರದ ಒಳಗಿನ ಪ್ರೋಗ್ರಾಂ ಸಾಮಾನ್ಯನಿಗೆ ತಿಳಿಯುವುದಿಲ್ಲ” ಎಂಬ ಕಾರಣ ನೀಡಿ ಇವಿಎಂ ನಿಷೇಧಿಸಿ, ಮತ್ತೆ ಮತಪತ್ರ ಬಳಕೆ ಮಾಡುವುದಕ್ಕೆ ಆರಂಭಿಸಿತ್ತು.
ಫ್ರಾನ್ಸ್ ನಲ್ಲಿಯೂ ಸಂಪೂರ್ಣವಾಗಿ ಮತಪತ್ರಗಳನ್ನೇ ಬಳಸಲಾಗುತ್ತದೆ. ಮತ ಎಣಿಕೆ ಕೂಡ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡೇ ಇಂದಿಗೂ ನಡೆಸಲಾಗುತ್ತಿದೆ.
ಯುನೈಟೆಡ್ ಕಿಂಗ್ಡಮ್ (ಬ್ರಿಟನ್)ನಲ್ಲಿ ಸಂಸದೀಯ ಚುನಾವಣೆಗಳಲ್ಲಿ ಇಂದಿಗೂ ಮತಪತ್ರ ಮತ್ತು ಮತಪೆಟ್ಟಿಗೆಯನ್ನೇ ಬಳಸಲಾಗುತ್ತದೆ. ಇಟಲಿ, ಆಸ್ಟ್ರಿಯಾ, ಸ್ವೀಡನ್, ನಾರ್ವೆ ಮತ್ತು ಡೆನ್ಮಾರ್ಕ್ನಂತಹ ದೇಶಗಳು ಮತಪತ್ರಗಳನ್ನು ಬಳಸುತ್ತಿವೆ.
ಕೆನಡಾದಲ್ಲಿನ ಫೆಡರಲ್ (ರಾಷ್ಟ್ರೀಯ) ಚುನಾವಣೆಗಳಲ್ಲಿ ಮತದಾರರು ಕಾಗದದ ಮತಪತ್ರಗಳ ಮೇಲೆ ಗುರುತು ಮಾಡುವ ಮೂಲಕ ಮತ ಚಲಾಯಿಸುತ್ತಾರೆ. ಕೆಲವು ಪ್ರಾಂತ್ಯಗಳಲ್ಲಿ ಎಣಿಕೆಗಾಗಿ ಆಪ್ಟಿಕಲ್ ಸ್ಕ್ಯಾನರ್ಗಳನ್ನು ಬಳಸಲಾಗುತ್ತದೆ.
ಅಮೆರಿಕದಲ್ಲಿ(US) ಮತಪತ್ರ ಮತ್ತು ಸ್ಕ್ಯಾನರ್ ಗಳನ್ನು ಬಳಸಲಾಗುತ್ತದೆ. ತಂತ್ರಜ್ಞಾನದ ತವರು ಎನಿಸಿಕೊಂಡಿರುವ ಜಪಾನ್ನಲ್ಲಿ ಇಂದಿಗೂ ಮತದಾರರು ಅಭ್ಯರ್ಥಿಯ ಹೆಸರನ್ನು ಮತಪತ್ರದ ಮೇಲೆ ಬರೆಯುವ ಮೂಲಕ ಮತ ಚಲಾಯಿಸುತ್ತಾರೆ. ಆಸ್ಟ್ರೇಲಿಯಾದಲ್ಲಿ ಸಂಪೂರ್ಣವಾಗಿ ಮತಪತ್ರ ಪದ್ಧತಿ ಜಾರಿಯಲ್ಲಿದೆ. ಮತದಾನ ಮಾಡುವುದು ಇಲ್ಲಿ ಕಡ್ಡಾಯವಾಗಿದೆ. ಇಂಡೋನೇಷ್ಯಾ ವಿಶ್ವದ ಅತಿ ದೊಡ್ಡ ಏಕದಿನ ಚುನಾವಣೆ ನಡೆಸುವ ಈ ದೇಶ, ಮತಪತ್ರಗಳನ್ನೇ ಬಳಸುತ್ತದೆ ಎನ್ನುವುದು ಉಲ್ಲೇಖನೀಯ.





