ಸುಮಾರು ಎರಡು ದಶಕಗಳ ಕಾಲ ಬಿಹಾರವನ್ನು ಆಳಿದ ನಿತೀಶ್, ಈಗ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ತೆರಳಿದ್ದು ಅವರ “ರಾಷ್ಟ್ರಪತಿ” ಆಕಾಂಕ್ಷೆಯ ಮೊದಲ ಹೆಜ್ಜೆ ಎಂದೇ ಹೇಳಲಾಗುತ್ತಿದೆ. ಅವರು ಹಿಂದುಳಿದ ವರ್ಗಗಳ (OBC) ಪ್ರಬಲ ನಾಯಕರಾಗಿ ಗುರುತಿಸಿಕೊಂಡಿರುವುದರಿಂದ, ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡುವುದು ಎನ್ಡಿಎ ಮೈತ್ರಿಗೆ ಸಾಮಾಜಿಕ ಮತ್ತು ರಾಜಕೀಯ ಸಮೀಕರಣದ ದೃಷ್ಟಿಯಿಂದ ಲಾಭದಾಯಕವಾಗಲಿದೆ.
ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಕೀಯ ನಡೆಗಳು ಅನೇಕ ಕುತೂಹಲ ಮತ್ತು ಟೀಕೆ ಎರಡನ್ನೂ ಮೂಡಿಸಿವೆ. ನಿತೀಶ್ ಕುಮಾರ್ ಅವರು ರಾಮ್ ಮನೋಹರ್ ಲೋಹಿಯಾ ಅವರ ಸಮಾಜವಾದಿ ತತ್ವಗಳಿಂದ ಪ್ರಭಾವಿತರಾಗಿ ರಾಜಕೀಯಕ್ಕೆ ಬಂದವರು. ಆದರೆ, ಅಧಿಕಾರಕ್ಕಾಗಿ ಅವರು ಮಾಡಿಕೊಂಡ ಮೈತ್ರಿಗಳು ಅವರ ಸಿದ್ಧಾಂತದ ಮೇಲೆ ಪ್ರಶ್ನೆಗಳನ್ನು ಎಬ್ಬಿಸಿವೆ.
ದೀರ್ಘಕಾಲ ಬಿಜೆಪಿ(NDA) ಜೊತೆ ಮೈತ್ರಿ ಮಾಡಿಕೊಂಡಿದ್ದು, ಜಾತ್ಯತೀತ ಮತ್ತು ಸಮಾಜವಾದಿ ಹಿನ್ನೆಲೆಯುಳ್ಳ ನಾಯಕನೊಬ್ಬ “ಕೋಮುವಾದಿ ಶಕ್ತಿಗಳ” ಜೊತೆ ಕೈಜೋಡಿಸಿದ್ದಾರೆ ಎಂಬ ಟೀಕೆಗೆ ಗುರಿಯಾಗಿತ್ತು. ಆ ಟೀಕೆಗಳನ್ನು ಬದಿಗೊತ್ತಿ ಕೇವಲ ಅಧಿಕಾರಕ್ಕಾಗಿ ಮಾತ್ರ ಅವರು ರಾಜಕೀಯ ಮಾಡಿದ್ದರು ಎನ್ನುವುದು ತಿಳಿಯದೆ ಇರುವ ವಿಷಯವಲ್ಲ. ಆರ್ಜೆಡಿ (ಮಹಾಗಟಬಂಧನ್) ಮತ್ತು ಬಿಜೆಪಿ ನಡುವೆ ಅವರು ನಡೆಸಿದ್ದ ‘ಯು-ಟರ್ನ್’ ರಾಜಕಾರಣ ಅವರ ಸಿದ್ಧಾಂತಕ್ಕಿಂತ ಅಧಿಕಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು.
ಬಿಜೆಪಿಯಂತಹ ಪಕ್ಷಗಳಿಗೆ ಬಿಹಾರದಂತಹ ಸಮಾಜವಾದಿ ಭದ್ರಕೋಟೆಯಲ್ಲಿ ನೆಲೆಯೂರಲು ನಿತೀಶ್ ಕುಮಾರ್ ಅವರೇ ರಹದಾರಿ ಮಾಡಿಕೊಟ್ಟವರು. “ನಾನು ಬಿಜೆಪಿಯೊಂದಿಗೆ ಇದ್ದರೂ ನನ್ನ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಂಡಿಲ್ಲ” ಎಂದು ಅವರು ಹಲವು ಬಾರಿ ಸಮರ್ಥಿಸಿಕೊಂಡಿದ್ದಾರೆ. ಹಾಗೆ ಸಮರ್ಥಿಸಿಕೊಂಡೇ ಅಧಿಕಾರ ಅನುಭವಿಸಿದ್ದಾರೆ.
ಇನ್ನು, ಬಿಹಾರದಂತಹ ರಾಜ್ಯ ಕರ್ಪೂರಿ ಠಾಕೂರ್ ಅವರಂತಹ ನಾಯಕರನ್ನು ಕಂಡ ನೆಲ. ಕರ್ಪೂರಿ ಠಾಕೂರ್ ಅವರನ್ನು ಬಿಹಾರದಲ್ಲಿ ‘ಜನನಾಯಕ’ ಎಂದೇ ಕರೆಯಲಾಗುತ್ತಿತ್ತು. ಅವರ ಸರಳತೆ ಮತ್ತು ಸಿದ್ಧಾಂತಕ್ಕಿದ್ದ ಬದ್ಧತೆಯಿಂದಾಗಿ ಅವರನ್ನು ʼಜನನಾಯಕʼ ಎಂದು ಕರೆಯಲಾಗುತ್ತಿತ್ತು. ಬಿಹಾರದ ಸಮಾಜವಾದಿ ಪರಂಪರೆಯಲ್ಲಿ ಕರ್ಪೂರಿ ಠಾಕೂರ್ ಅವರ ಬಳಿಕ ನಿತೀಶ್ ಕುಮಾರ್ ಅವರನ್ನು ಠಾಕೂರ್ ಅವರ ಸಿದ್ಧಾಂತವನ್ನು ಮುಂದುವರಿಸಿಕೊಂಡು ಹೋಗುವ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿತ್ತು. ಆದರೆ, ಕರ್ಪೂರಿ ಠಾಕೂರ್ ಅವರು ಸಿದ್ಧಾಂತವನ್ನು ಪಾಲಿಸಿದರೆ, ನಿತೀಶ್ ಕುಮಾರ್ ಅವರ ‘ಅಧಿಕಾರದಾಹಿ’ಯಾಗಿ ರಾಜಕೀಯದಲ್ಲಿ ಗುರುತಿಸಿಕೊಂಡರು.
ಸಿದ್ಧಾಂತ ವರ್ಸಸ್ ಅಧಿಕಾರ
ಕರ್ಪೂರಿ ಠಾಕೂರ್ ಹಿಂದುಳಿದ ವರ್ಗಗಳ ಮೀಸಲಾತಿಗಾಗಿ (ಮುಂಗೇರಿ ಲಾಲ್ ಆಯೋಗ) ಹೋರಾಡಿದವರು. ಸಿದ್ಧಾಂತಕ್ಕಾಗಿ ಅಧಿಕಾರವನ್ನು ತ್ಯಾಗ ಮಾಡಲು ಅವರು ಎಂದಿಗೂ ಹಿಂಜರಿಯಲಿಲ್ಲ. ನಿತೀಶ್ ಅವರು ಕರ್ಪೂರಿ ಠಾಕೂರ್ ಅವರ ಹಾದಿಯಲ್ಲೇ ಬಂದವರಾದರೂ, ಕಳೆದ ಹದಿನೈದು ವರ್ಷಗಳಲ್ಲಿ ಅವರ ರಾಜಕಾರಣ ‘ಅಧಿಕಾರ ಉಳಿಸಿಕೊಳ್ಳುವುದು’ ಹೇಗೆ ಎಂಬುದರ ಸುತ್ತಲೇ ಸುತ್ತಿದೆ. ಸಿದ್ಧಾಂತಗಳು ಯಾವುದೇ ಇರಲಿ, ಮುಖ್ಯಮಂತ್ರಿ ಕುರ್ಚಿ ಮುಖ್ಯ ಎಂಬ ಅವರ ಧೋರಣೆ ಅವರಿಗೆ “ಪಲ್ಟು ರಾಮ್” ಎಂಬ ಹಣೆಪಟ್ಟಿಯನ್ನೂ ಹಚ್ಚಿತ್ತು.
ನಿತೀಶ್ ಕುಮಾರ್ ಅವರ ಪದೇ ಪದೇ ಬದಲಾಗುವ ನಿಲುವುಗಳು ಬಿಹಾರದ ಸಮಾಜವಾದಿ ನೆಲಕ್ಕೆ ದೊಡ್ಡ ಹೊಡೆತ ನೀಡಿವೆ ಎನ್ನುವುದರಲ್ಲಿ ಸಂಶಯವಿಲ್ಲ. ಸಿದ್ಧಾಂತದಲ್ಲಿ ಬದ್ಧ ವೈರಿಗಳಾಗಿರುವ ಬಿಜೆಪಿ ಮತ್ತು ಆರ್ಜೆಡಿ (RJD) ಎರಡರ ಜೊತೆಗೂ ಹಲವು ಬಾರಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದು, ಸಮಾಜವಾದಿ ಚಳವಳಿಯ ನೈತಿಕತೆಯನ್ನು ಕುಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಕರ್ಪೂರಿ ಠಾಕೂರ್ ಅವರ ಮೇಲೆ ಅವರ ವಿರೋಧಿಗಳೂ ಕೂಡ ಗೌರವ ಇಟ್ಟುಕೊಂಡಿದ್ದರು. ಆದರೆ ನಿತೀಶ್ ಕುಮಾರ್ ಅವರ ಮೇಲೆ ಮಿತ್ರಪಕ್ಷಗಳಿಗೂ ಸಂಪೂರ್ಣ ವಿಶ್ವಾಸವಿಲ್ಲ. ಬಿಜೆಪಿ ಅವರನ್ನು ಚೆನ್ನಾಗಿ ಬಳಸಿಕೊಂಡಿತ್ತು. ಬಿಜೆಪಿಯನ್ನು ನಿತೀಶ್ ಕುಮಾರ್ ಕೂಡ ಚೆನ್ನಾಗಿ ಬಳಸಿಕೊಂಡರು. ಈಗ ಬಿಜೆಪಿ ಹೇಳಿದ ಹಾಗೆ ಕೇಳುವ ಪರಿಸ್ಥಿತಿ ನಿತೀಶ್ ಕುಮಾರ್ ಅವರಿಗೆ ಬಂದೊದಗಿದೆ.
ಬಿಹಾರ ಲೋಹಿಯಾ, ಜೆಪಿ (ಜಯಪ್ರಕಾಶ್ ನಾರಾಯಣ್) ಮತ್ತು ಕರ್ಪೂರಿ ಠಾಕೂರ್ ಅವರಂತಹ ನಾಯಕರಿಂದಾಗಿ ಜಾತ್ಯತೀತ ಮತ್ತು ಸಮಾಜವಾದಿ ಚಿಂತನೆಗಳಿಗೆ ಭದ್ರ ಬುನಾದಿಯಾಗಿತ್ತು. ಆದರೆ, ನಿತೀಶ್ ಕುಮಾರ್ ಅವರು ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಕೈಜೋಡಿಸಿದ ಪರಿಣಾಮವಾಗಿ, ಬಿಹಾರದ ಗ್ರಾಮೀಣ ಮಟ್ಟದಲ್ಲೂ ಬಿಜೆಪಿಯ ʼಹಿಂದುತ್ವ ರಾಜಕಾರಣʼ ಬೇರೂರಲು ಕಾರಣವಾಗಿದೆ.
ನಿತೀಶ್ ತಮ್ಮನ್ನು ತಾವು “ಜಾತ್ಯತೀತ” ಎಂದು ಕರೆದುಕೊಳ್ಳುತ್ತಲೇ, ಕೋಮುವಾದಿ ಶಕ್ತಿಗಳಿಗೆ ಅಧಿಕಾರದಲ್ಲಿ ಪಾಲು ನೀಡಿದ್ದು ಅವರ ರಾಜಕೀಯ ಚಾಣಾಕ್ಷತನವೋ ಅಥವಾ ಅಧಿಕಾರದ ವಿಪರೀತ ದಾಹವೋ ಎಂಬ ಪ್ರಶ್ನೆ ಅಸ್ಪಷ್ಟವಾಗಿಯೇ ಉಳಿದಿದೆ. ಮಾತ್ರವಲ್ಲದೇ, ಇದೊಂದು ಸಮಾಜವಾದಿ ಭದ್ರಕೋಟೆಯ ದುರಂತವಾಗಿಯೇ ಇತಿಹಾಸದಲ್ಲಿ ಉಳಿಯಲಿದೆ.
ರಾಷ್ಟ್ರಪತಿ ಸ್ಥಾನದ ಮೇಲೆ ನಿತೀಶ್ ಕುಮಾರ್ ಕಣ್ಣು
ನಿತೀಶ್ ಕುಮಾರ್ ಅವರು ರಾಷ್ಟ್ರಪತಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಚರ್ಚೆಗಳು ಪ್ರಬಲವಾಗಿ ಕೇಳಿಬರುತ್ತಿವೆ. ಸುಮಾರು ಎರಡು ದಶಕಗಳ ಕಾಲ ಬಿಹಾರವನ್ನು ಆಳಿದ ನಿತೀಶ್, ಈಗ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ತೆರಳಿದ್ದು, ಅವರ “ರಾಷ್ಟ್ರಪತಿ” ಆಕಾಂಕ್ಷೆಯ ಮೊದಲ ಹೆಜ್ಜೆ ಎಂದೇ ಹೇಳಲಾಗುತ್ತಿದೆ.
ಬಿಹಾರದ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿದ್ದು, 2027 ರಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ವೇದಿಕೆ ಸಿದ್ಧಪಡಿಸಿಕೊಳ್ಳಲು ಎಂಬ ವದಂತಿಗಳು ದೆಹಲಿಯ ರಾಜಕೀಯ ಪಡಸಾಲೆಯಲ್ಲಿವೆ. ಅಂತಹದ್ದೊಂದು ಭರವಸೆ ನೀಡಿಯೇ ನಿತೀಶ್ ಕುಮಾರ್ ಅವರನ್ನು ಬಿಜೆಪಿ ದೆಹಲಿಗೆ ಕರೆಸಿಕೊಂಡು, ಬಿಹಾರದಲ್ಲಿ ತನ್ನ ಪಾರುಪತ್ಯವನ್ನು ಸಾಧಿಸಿದೆ. ಜೆಡಿಯು ಎನ್ನುವ ಮತ್ತೊಂದು ಪ್ರಾದೇಶಿಕ ಪಕ್ಷವನ್ನು ಅಂತ್ಯಗೊಳಿಸಲು ಅಧಿಕೃತವಾಗಿ ನಾಂದಿ ಹಾಡಿದೆ. ಕಳೆದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ, ಅಂದರೆ, 2024ರಲ್ಲಿ ಮರಣೋತ್ತರವಾಗಿ ಕರ್ಪೂರಿ ಠಾಕೂರ್ ಅವರಿಗೆ ʼಭಾರತ ರತ್ನʼ ನೀಡಿ ಬಿಜೆಪಿ ಚುನಾವಣಾ ಗಿಮಿಕ್ ಮಾಡಿತ್ತು, ಅದರ ಮುಂದುವರಿದ ಭಾಗವೆನ್ನುವಂತೆ ನಿತೀಶ್ ಕುಮಾರ್ ಅವರಿಗೆ ರಾಷ್ಟ್ರಪತಿಯಂತಹ ಸ್ಥಾನಮಾನ ನೀಡುವ ಯೋಜನೆ ರೂಪಿಸಿ, ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ಯತ್ನಕ್ಕೆ ಮುಂದಾಗಿದೆ. ನಿತೀಶ್ ಕುಮಾರ್ ಅವರು ಹಿಂದುಳಿದ ವರ್ಗಗಳ (OBC) ಪ್ರಬಲ ನಾಯಕರಾಗಿ ಗುರುತಿಸಿಕೊಂಡಿರುವುದರಿಂದ, ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡುವುದು ಎನ್ಡಿಎ ಮೈತ್ರಿಗೆ ಸಾಮಾಜಿಕ ಮತ್ತು ರಾಜಕೀಯ ಸಮೀಕರಣದ ದೃಷ್ಟಿಯಿಂದ ಲಾಭದಾಯಕವಾಗಲಿದೆ.
ಒಟ್ಟಿನಲ್ಲಿ, ಬಿಹಾರದ ʼಪಲ್ಟು ರಾಮ್ʼ, ‘ಸುಶಾಸನ ಬಾಬು’ ಎಂದು ಕರೆಸಿಕೊಳ್ಳುವ ನಿತೀಶ್ ಕುಮಾರ್ ಅವರ, ದೇಶದ ಮೊದಲ ಪ್ರಜೆಯಾಗುವ ಕನಸು ನನಸಾಗುತ್ತದೆಯೇ ಎನ್ನುವುದನ್ನು ನೋಡಲು 2027ರವರೆಗೆ ಕಾಯಬೇಕಿದೆ.





