ಕೇಂದ್ರ ಸರ್ಕಾರದ ಉದ್ದೇಶಿತ ‘ಕ್ಷೇತ್ರ ಮರುವಿಂಗಡಣೆ ಮಸೂದೆ’ಯನ್ನು ತೀವ್ರವಾಗಿ ಖಂಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟ್ಯಾಲಿನ್, ಗುರುವಾರ ಮಸೂದೆಯ ಪ್ರತಿಯನ್ನು ಸುಟ್ಟುಹಾಕುವ ಮೂಲಕ ರಾಜ್ಯವ್ಯಾಪಿ ಪ್ರತಿಭಟನೆಗೆ ಆಕ್ರೋಶದ ಸ್ವರೂಪ ನೀಡಿದ್ದಾರೆ.
ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ನಾಮಕ್ಕಲ್ನಲ್ಲಿ ಬೀಡುಬಿಟ್ಟಿರುವ ಸ್ಟ್ಯಾಲಿನ್, ಕಪ್ಪು ವಸ್ತ್ರ ಧರಿಸಿ ಮಸೂದೆಯ ಪ್ರತಿಯನ್ನು ಬೆಂಕಿಗಾಹುತಿ ಮಾಡಿದರು. ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನ ಆರಂಭವಾಗುವ ಕೆಲವೇ ಗಂಟೆಗಳ ಮುನ್ನ ಕಪ್ಪು ಬಾವುಟವನ್ನು ಹಾರಿಸಿದ ಅವರು, ದಕ್ಷಿಣ ಭಾರತದ ಪ್ರಾತಿನಿಧ್ಯವನ್ನು ಮೊಟಕುಗೊಳಿಸುವ ಯತ್ನದ ವಿರುದ್ಧ ತೀವ್ರ ಎಚ್ಚರಿಕೆ ರವಾನಿಸಿದರು.
ಈ ಉದ್ದೇಶಿತ ಮಸೂದೆಯನ್ನು ‘ಕರಾಳ ಶಾಸನ’ ಎಂದು ಹೇಳಿರುವ ಸ್ಟ್ಯಾಲಿನ್, ಇದು ತಮಿಳರನ್ನು ತಮ್ಮದೇ ನಾಡಿನಲ್ಲಿ ‘ನಿರಾಶ್ರಿತರನ್ನಾಗಿ’ ಮಾಡುವ ಬಹುದೊಡ್ಡ ಹುನ್ನಾರವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. “1960ರ ದಶಕದಲ್ಲಿ ತಮಿಳುನಾಡಿನಿಂದ ಎದ್ದ ಹಿಂದಿ ಹೇರಿಕೆ ವಿರುದ್ಧದ ಪ್ರತಿರೋಧದ ಜ್ವಾಲೆ ದೆಹಲಿಯನ್ನು ತಟ್ಟುವ ಮೂಲಕ ಕೇಂದ್ರವನ್ನು ಮಣಿಸಿತ್ತು. ಇಂದು ಮಸೂದೆಯ ಪ್ರತಿಯನ್ನು ಸುಡುವ ಮೂಲಕ ನಾನು ಅದೇ ಕಿಡಿಯನ್ನು ಮತ್ತೆ ಹೊತ್ತಿಸಿದ್ದೇನೆ. ಈ ಪ್ರತಿರೋಧದ ಕಿಚ್ಚು ಇಡೀ ದ್ರಾವಿಡ ನಾಡಿನಾದ್ಯಂತ ಹರಡಲಿದ್ದು, ಫ್ಯಾಸಿಸ್ಟ್ ಬಿಜೆಪಿಯ ಅಹಂಕಾರವನ್ನು ಮಣಿಸಲಿದೆ” ಎಂದು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಗುಡುಗಿದ್ದಾರೆ.
ಇದನ್ನು ಓದಿದ್ದೀರಾ? ಕಪ್ಪು ಮೈಬಣ್ಣ ಭೇದಭಾವಕ್ಕೆ ಅತ್ಯುತ್ತಮ ಆಟವೇ ಪ್ರತ್ಯುತ್ತರ: ಅನುಭವ ತೋಡಿಕೊಂಡ ಟೆನಿಸ್ ದಿಗ್ಗಜ ವಿಜಯ್ ಅಮೃತ್ರಾಜ್
ಮುಖ್ಯಮಂತ್ರಿಗಳ ಕರೆಯ ಬೆನ್ನಲ್ಲೇ ತಮಿಳುನಾಡಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಡಿಎಂಕೆ ಮುಖಂಡರು, ಸಚಿವರು ಮತ್ತು ಕಾರ್ಯಕರ್ತರು ತಮ್ಮ ಮನೆಗಳು ಹಾಗೂ ಕಚೇರಿಗಳ ಮೇಲೆ ಕಪ್ಪು ಬಾವುಟಗಳನ್ನು ಹಾರಿಸಿದ್ದಾರೆ. ಡಿಎಂಕೆ ಕೇಂದ್ರ ಕಚೇರಿ ‘ಅಣ್ಣಾ ಅರಿವಾಲಯಂ’, ದಿವಂಗತ ಎಂ. ಕರುಣಾನಿಧಿ ಅವರ ಗೋಪಾಲಪುರಂ ನಿವಾಸ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕಪ್ಪು ಬಾವುಟಗಳು ರಾರಾಜಿಸಿವೆ. ಡಿಎಂಕೆ ಮೈತ್ರಿಪಕ್ಷಗಳಾದ ಕಮಲ್ ಹಾಸನ್ ನೇತೃತ್ವದ ‘ಮಕ್ಕಳ್ ನೀಧಿ ಮಯ್ಯಂ’ (ಎಂಎನ್ಎಂ) ಮತ್ತು ವೈಕೋ ನೇತೃತ್ವದ ಎಂಡಿಎಂಕೆ ಕಚೇರಿಗಳಲ್ಲೂ ಕಪ್ಪು ನಿಶಾನೆ ಹಾರಿಸುವ ಮೂಲಕ ಕೇಂದ್ರದ ನಡೆಯ ವಿರುದ್ಧ ಒಗ್ಗಟ್ಟಿನ ವಿರೋಧ ದಾಖಲಿಸಲಾಗಿದೆ.
ಈ ತೀವ್ರ ವಿರೋಧದ ಮೂಲವಿರುವುದು 2011ರ ಜನಗಣತಿಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡುವ ಕೇಂದ್ರದ ಪ್ರಸ್ತಾಪದಲ್ಲಿ. ಜನಸಂಖ್ಯೆ ನಿಯಂತ್ರಣವನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ತಮಿಳುನಾಡಿನಂತಹ ದಕ್ಷಿಣ ಭಾರತದ ರಾಜ್ಯಗಳು ಈ ಮರುವಿಂಗಡಣೆಯಿಂದಾಗಿ ಸಂಸತ್ತಿನಲ್ಲಿ ತಮ್ಮ ಪ್ರಾತಿನಿಧ್ಯವನ್ನು ಭಾರಿ ಪ್ರಮಾಣದಲ್ಲಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿವೆ. ಮತ್ತೊಂದೆಡೆ, ಜನಸಂಖ್ಯೆ ಹೆಚ್ಚಿರುವ ಉತ್ತರದ ರಾಜ್ಯಗಳು ಹೆಚ್ಚಿನ ಸ್ಥಾನಗಳನ್ನು ಪಡೆಯಲಿದ್ದು, ಇದು ಒಕ್ಕೂಟ ವ್ಯವಸ್ಥೆಯ ಸಮತೋಲನವನ್ನು ಬುಡಮೇಲು ಮಾಡಲಿದೆ ಎಂಬುದು ಡಿಎಂಕೆ ಸೇರಿದಂತೆ ದಕ್ಷಿಣದ ಹಲವು ನಾಯಕರ ಪ್ರಮುಖ ಆರೋಪವಾಗಿದೆ.





