ಗುಜರಾತ್ | ಅಕ್ರಮ ವಲಸೆ ಹಣೆಪಟ್ಟಿ: 8,500 ಕುಟುಂಬಗಳ ನಿರ್ನಾಮ!

Date:

Advertisements
ಅಹಮದಾಬಾದ್‌ನಲ್ಲಿ ಧ್ವಂಸ ಕಾರ್ಯಾಚರಣೆಯು ಒಂದು ಪ್ರತ್ಯೇಕ ಘಟನೆಯಲ್ಲ. ಭಾರತದಾದ್ಯಂತ ಅಕ್ರಮ ನಿರ್ಮಾಣ, ಅಭಿವೃದ್ಧಿ, ಕಾನೂನು ಮತ್ತು ಸುವ್ಯವಸ್ಥೆ ಅಥವಾ ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ನಡೆಯುತ್ತಿರುವ ಧ್ವಂಸ. ಇದು, ಇಡೀ ಆಳುವ ವರ್ಗವೇ ಸೃಷ್ಟಿಸಿರುವ ನರಕ.

”ನಮ್ಮ ಮನೆಯನ್ನು ಸರ್ಕಾರ ಕೆಡವಿದೆ. ನಮಗೆ ಮಲಗಲು ಸ್ಥಳವಿಲ್ಲ. ಶುದ್ಧ ಕುಡಿಯುವ ನೀರಂತೂ ಮರೀಚಿಕೆಯಾಗಿದೆ. ಮಕ್ಕಳು ಅತಿಸಾರ ಮತ್ತು ಜ್ವರದಿಂದ ಬಳಲುತ್ತಿದ್ದಾರೆ. ಶಾಲೆಗೆ ಹೋಗುವುದನ್ನೂ ನಿಲ್ಲಿಸಿದ್ದಾರೆ. ಸ್ನಾನ ಮಾಡಿ ಒಂದು ವಾರ ಕಳೆದಿದೆ. ಸ್ನಾನ ಮಾಡಲೂ ಜಾಗವಿಲ್ಲ. ಮುಂದಿನ ಬದುಕು ತೋಚುತ್ತಿಲ್ಲ” –ಗುಜರಾತ್‌ನ ಅಹಮದಾಬಾದ್‌ನ ಚಂದೋಲಾ ಕೆರೆ ಪ್ರದೇಶದಲ್ಲಿ ವಾಸಿಸುತ್ತಿದ್ದ ಎರಡು ಮಕ್ಕಳ ತಾಯಿ, ಶಾಲಾ ಶಿಕ್ಷಕಿ ಸಲ್ಮಾ ಅವರ ಅಳಲು.

ಮತ್ತೊಂದೆಡೆ, ”ನಾವು ಯಾವಾಗ ಮನೆಗೆ ಹೋಗುತ್ತೇವೆಂದು ಮಗಳು ಕೇಳುತ್ತಲೇ ಇರುತ್ತಾಳೆ. ಆದರೆ, ನಮ್ಮ ಮನೆಯೇ ಉಳಿದಿಲ್ಲ. ಆಕೆಯನ್ನು ಯಾವ ಮನೆಗೆ ಕರೆದೊಯ್ಯಲಿ” ಎಂದು ಮನೆಕೆಲಸಗಾರ್ತಿ ರುಖ್ಸರ್ ಹೇಳುತ್ತಾರೆ. ಕಣ್ಣೀರು ಹಾಕುತ್ತಾರೆ.

ಇದೇ ವರ್ಷದ ಏಪ್ರಿಲ್ 29 ಮತ್ತು ಮೇ 20ರಂದು ಭಾರತದ ಇತಿಹಾಸದಲ್ಲಿಯೇ ಅತಿದೊಡ್ಡ ಎರಡು ತೆರವು ಕಾರ್ಯಾಚರಣೆಗಳು ಅಹಮದಾಬಾದ್‌ನಲ್ಲಿ ನಡೆದಿವೆ. ಅಲ್ಲಿನ ಅಧಿಕಾರಿಗಳು ಬರೋಬ್ಬರಿ 8,500ಕ್ಕೂ ಹೆಚ್ಚು ಕುಟುಂಬಗಳನ್ನು ತೆರವುಗೊಳಿಸಿದ್ದಾರೆ. ಚಂದೋಲಾ ಕೆರೆ ಪ್ರದೇಶದ ತಾತ್ಕಾಲಿಕ ಮತ್ತು ಶಾಶ್ವತ ಮನೆಗಳನ್ನು ಕೆಡವಿ ಹಾಕಿದ್ದಾರೆ. ಬೃಹತ್‌ ಸಂಖ್ಯೆಯ ಕುಟುಂಬಗಳನ್ನು ನಿರ್ಗತಿಕರನ್ನಾಗಿ ಮಾಡಿದ್ದಾರೆ. ಬೀದಿ ಪಾಲಾದ 8,500 ಕುಟುಂಬಗಳಲ್ಲಿ ಸಲ್ಮಾ ಮತ್ತು ರುಖ್ಸರ್ ಅವರದ್ದೂ ಎರಡು ಕುಟುಂಬಗಳು.

Advertisements

ಪಹಲ್ಗಾಮ್ ದಾಳಿ ನಡೆದ ಮರುದಿನವೇ (ಏಪ್ರಿಲ್ 23) ಚಂದೋಲಾ ಪ್ರದೇಶದಲ್ಲಿ ವಾಸಿಸುತ್ತಿದ್ದವರಲ್ಲಿ ಸುಮಾರು 1,000 ನಿವಾಸಿಗಳಿಗೆ ‘ಅಕ್ರಮ ಬಾಂಗ್ಲಾದೇಶಿಗರು’ ಎಂದು ಅಧಿಕಾರಿಗಳು ಹಣೆಪಟ್ಟಿ ಕಟ್ಟಿದರು. ಅವರೆಲ್ಲರನ್ನೂ ಸುಡುವ ಬಿಸಿಲಿನಲ್ಲಿಯೇ ಚಂದೋಲಾ ಪ್ರದೇಶದಿಂದ 6 ಕಿ.ಮೀ ದೂರದ ಲಾಲ್‌ ದರ್ವಾರ್ಜಾ ಪೊಲೀಸ್‌ ಠಾಣೆಗೆ ನಡೆಸಿಕೊಂಡು ಕರೆದೊಯ್ದರು. ಹಲವರು ಚಪ್ಪಲಿಗಳನ್ನು ಹಾಕಿಕೊಳ್ಳಲೂ ಅವಕಾಶ ಕೊಡದಂತೆ ಎಳೆದೊಯ್ದರು. ಕೈಗಳನ್ನು ಮೇಲಕ್ಕೆತ್ತಿಸಿ ಅಪರಾಧಿಗಳಂತೆ ಮೆರವಣಿಗೆಯನ್ನೂ ಮಾಡಿದರು.

ಆ ಎಲ್ಲ 1,000 ನಿರ್ಗತಿಕರನ್ನು 7 ದಿನಗಳ ಕಾಲ ಬಂಧನದಲ್ಲಿ ಇರಿಸಲಾಯಿತು. ಆ ನಂತರದಲ್ಲಿ, ಮಾನ್ಯವಾದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ 800 ಮಂದಿ ಭಾರತೀಯರು ಎಂಬುದು ಸಾಬೀತಾಯಿತು. ಉಳಿದ 200 ಮಂದಿಯನ್ನು ಬಾಂಗ್ಲಾದೇಶಿಗರು ಎಂದು ಗುರುತಿಸಿ ಬಂಧಿಸಲಾಯಿತು.

image 56 5

ಆ 800 ಜನರು ತಮ್ಮ ಪ್ರದೇಶಕ್ಕೆ ಮರಳಿ ಬರುವುದರೊಳಗೆ ಅವರ ಮನೆಗಳು ನೆಲಸಮಗೊಂಡಿದ್ದವು. ಅವರ ಮನೆಯ ಸಾಮಗ್ರಿಗಳು ಅವಶೇಷಗಳಡಿ ನಾಶವಾಗಿದ್ದವು. ಅಕ್ಷರಶಃ ಅವರು ಧರಿಸಿದ್ದ ಬಟ್ಟೆಗಳಲ್ಲದೆ ಬೇರೇನೂ ಅವರ ಬಳಿ ಇಲ್ಲದಂತಾಗಿತ್ತು. ಪರ್ಯಾಯ ವಸತಿ ಹುಡುಕಿಕೊಳ್ಳಲು ಅವರ ಬಳಿ ಯಾವುದೇ ಹಣವೂ ಇರಲಿಲ್ಲ. ಅವರ ಸ್ಥಿತಿ ಹೇಳತೀರದಾಗಿತ್ತು.

ಚಂದೋಲಾದಲ್ಲಿ ನಡೆದ ಈ ವಿಧ್ವಂಸಕ ಕೃತ್ಯವು ಅಸಂಗತತೆ ಮತ್ತು ಪಾರದರ್ಶಕತೆಯ ಕೊರತೆಗೆ ಹಿಡಿದ ಕನ್ನಡಿಯಾಗಿದೆ. ಮನೆಗಳನ್ನು ನೆಲಸಮ ಮಾಡುವುದಕ್ಕೂ ಮೊದಲು ಕೆಲವರಿಗೆ ನೋಟಿಸ್‌ ನೀಡಲಾಗಿದೆ. ಹಲವರಿಗೆ ಯಾವುದೇ ನೋಟಿಸ್‌ ಕೊಟ್ಟಿಲ್ಲವೆಂದು ನಿರಾಶ್ರಿತರಾಗಿರುವವರು ಹೇಳುತ್ತಿದ್ದಾರೆ. ಹಠಾತ್ ಮನೆ, ಸಾಮಗ್ರಿಗಳನ್ನು ಕಳೆದುಕೊಂಡಿರುವವರು ಒಂದೊಂದು ಕ್ಷಣವೂ ಬದುಕನ್ನು ಮರಳಿ ಕಟ್ಟಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ.

ನಿರ್ಗತಿಕರಾಗಿರುವವರಲ್ಲಿ ಹೆಚ್ಚಿನವರು ಬದುಕು ಕಟ್ಟಿಕೊಳ್ಳಲು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ರಾಜಸ್ಥಾನ ಸೇರಿದಂತೆ ಭಾರತೀಯ ರಾಜ್ಯಗಳಿಂದಲೇ ವಲಸೆ ಬಂದಿರುವ ಮುಸ್ಲಿಂ ಕಾರ್ಮಿಕರಾಗಿದ್ದಾರೆ. ಅವರೆಲ್ಲರೂ ಮಾನ್ಯವಾದ ಭಾರತೀಯ ಪೌರತ್ವ ದಾಖಲೆಗಳನ್ನು ಹೊಂದಿದ್ದಾರೆ. ಆದರೂ, ಹಲವರನ್ನು ‘ಅಕ್ರಮ ಬಾಂಗ್ಲಾದೇಶಿ ವಲಸಿಗರು’ ಎಂದು ಅಧಿಕಾರಿಗಳು ಹಣೆಪಟ್ಟಿ ಕಟ್ಟಿ, ಸಾಮೂಹಿಕವಾಗಿ ಬಂಧಿಸಿ, ದೌರ್ಜನ್ಯ ಎಸಗಿದ್ದಾರೆ. ಮತ್ತೆ ನಿರ್ಗತಿಕರನ್ನಾಗಿ ಮಾಡಿದ್ದಾರೆ.

ಸಲೀಮ್ ಶೇಖ್ ಅವರು ತಮ್ಮ ಮನೆಯನ್ನು ಕೆಡವಲಾಗಿರುವ ಜಾಗವನ್ನು ಸ್ವಚ್ಛಗೊಳಿಸಿ, ಅಲ್ಲಿಯೇ ತಾತ್ಕಾಲಿಕ ಟೆಂಟ್‌ ಕಟ್ಟಿದ್ದಾರೆ. ತಮ್ಮ ಕುಟುಂಬಕ್ಕೆ ಟಾರ್ಪಲ್‌ ಹೊದಿಕೆಯ ಆಸರೆ ನಿರ್ಮಿಸಿದ್ದಾರೆ.

ಧ್ವಂಸ ಕಾರ್ಯಾಚರಣೆ – ಶೋಷಿತರ ಮೇಲೆ ಮತ್ತಷ್ಟು ದಮನ

ಏಪ್ರಿಲ್ 26 ರಂದು, ಪೊಲೀಸ್ ಸಿಬ್ಬಂದಿಗಳು ಚಂದೋಲಾ ಕೆರೆ ಪ್ರದೇಶದ ‘ಬಂಗಾಳಿ ವಾಸ್’ ಪ್ರದೇಶಕ್ಕೆ ನುಗ್ಗಿದರು. ಅಲ್ಲಿನ ನಿವಾಸಿಗಳಾದ 457 ಪುರುಷರು, 219 ಮಹಿಳೆಯರು ಹಾಗೂ 214 ಮಕ್ಕಳು ಸೇರಿದಂತೆ 890 ಜನರನ್ನು ಬಂಧಿಸಿ, ಅಮಾನನೀಯವಾಗಿ ಕರೆದೊಯ್ದರು ಎಂಬುದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ನಡೆಸಿದ ಸತ್ಯಶೋಧನೆಯಲ್ಲಿ ಕಂಡುಬಂದಿದೆ.

ಕಂಕರಿಯಾ ಫುಟ್ಬಾಲ್ ಮೈದಾನದಲ್ಲಿ ಅವರನ್ನು ಕೂಡಿಹಾಕಲಾಯಿತು. ಹಲವು ಗಂಟೆಗಳ ಕಾಲ ಬಿಸಿಲಿನಲ್ಲಿಯೇ ಕೂರಿಸಲಾಗಿತ್ತು. ಅವರೆಲ್ಲರ ಆಧಾರ್ ಮತ್ತು ಮತದಾರರ ಗುರುತಿನ ಚೀಟಿಗಳಂತಹ ಗುರುತಿನ ದಾಖಲೆಗಳನ್ನು ಪರಿಶೀಲಿಸಿ, ಹಲವರ ದಾಖಲೆಗಳು ನಕಲಿ ಎಂದು ವಜಾಗೊಳಿಸಿದರು. ಆದರೆ, ಬಹುಸಂಖ್ಯಾತರು ಬಿಹಾರ, ರಾಜಸ್ಥಾನ, ಗುಜರಾತ್ ಹಾಗೂ ಪಶ್ಚಿಮ ಬಂಗಾಳದ ಭಾರತೀಯ ನಾಗರಿಕರೇ ಆಗಿದ್ದರು ಎಂದು ಪಿಯುಸಿಎಲ್ ಹೇಳಿದೆ.

image 56 6

“ನಮ್ಮ ಬಳಿ ಎಲ್ಲ ದಾಖಲೆಗಳಿವೆ – ಪಡಿತರ ಚೀಟಿಗಳು, ಶಾಲಾ ಪ್ರಮಾಣಪತ್ರಗಳು, ಜನನ ಪ್ರಮಾಣಪತ್ರಗಳು ಇವೆ. ನನ್ನ ಮಕ್ಕಳು ಇಲ್ಲಿಯೇ ಜನಿಸಿದ್ದಾರೆ. ಆದರೂ, ನಮ್ಮನ್ನು ಅಕ್ರಮ ಬಾಂಗ್ಲಾ ವಲಸಿಗರು ಎಂಬುದಾಗಿ ಹಣೆಪಟ್ಟಿ ಕಟ್ಟಲಾಯಿತು. ನಮ್ಮನ್ನು ನಾವು ನೆಲೆಸಿದ್ದಲ್ಲಿಂದ ಹೊರಹಾಕಲಾಯಿತು. ನಾವು ಮನೆಯೊಳಗಿದ್ದಾಗಲೇ, ನಮ್ಮ ಮನೆಯನ್ನು ಧ್ವಂಸ ಮಾಡಲಾರಂಭಿಸಿದರು. ಜೀವ ಭಯದಲ್ಲಿ ಹೊರ ಓಡಿ ಬಂದೆವು” ಎಂದು ಶಾಲಾ ಶಿಕ್ಷಕಿಯಾಗಿರುವ ಸಲ್ಮಾ ಹೇಳುತ್ತಾರೆ.

ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC) ಪ್ರಕಾರ, ಏಪ್ರಿಲ್ ಮತ್ತು ಮೇ ನಡುವೆ ಚಂದೋಲಾ ಕರೆ ಪ್ರದೇಶದಲ್ಲಿ 8,500ಕ್ಕೂ ಹೆಚ್ಚು ‘ಅಕ್ರಮ ಕಟ್ಟಡ’ಗಳನ್ನು ತೆರವುಗೊಳಿಸಲಾಗಿದೆ. ಆದಾಗ್ಯೂ, ಸಂತ್ರಸ್ತರು ಒದಗಿಸಿದ ಸಾಕ್ಷ್ಯಗಳ ಪರಿಶೀಲನೆ, ಪೂರ್ವ ಸಮಾಲೋಚನೆ, ಕಾನೂನು ಸೂಚನೆ ಅಥವಾ ಕಾರ್ಯಸಾಧ್ಯವಾದ ಪುನರ್ವಸತಿಯ ನೆರವು – ಯಾವುದನ್ನೂ ಮಾಡದೆ ಅವರನ್ನು ಹೊರಹಾಕುವ ದಮನ ನಡೆದಿದೆ ಎಂಬುದನ್ನು ಪಿಯುಸಿಎಲ್ ಒತ್ತಿ ಹೇಳಿದೆ.

ಸಲ್ಮಾ ಅವರನ್ನು ಬಾಂಗ್ಲಾದೇಶಿ ಎಂದು ಆರೋಪಿಸಲಾಗಿತ್ತು. ಆದರೆ, ಅವರು ತಾನು ಭಾರತೀಯಳು ಎಂಬುದನ್ನು ಸಾಬೀತುಪಡಿಸಲು ಮಾನ್ಯವಾದ ಎಲ್ಲ ದಾಖಲೆಗಳನ್ನು ಒದಗಿಸಿದ್ದಾರೆ ಮತ್ತು ಪ್ರದರ್ಶಿಸಿದ್ದಾರೆ.

ಗುಜರಾತ್‌ನ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಂಘವಿ ಅವರು ತಮ್ಮ ಸರ್ಕಾರದ ಧೋರಣೆಯನ್ನು ಸಮರ್ಥಿಸಿಕೊಂಡಿಸಿದ್ದಾರೆ. ”ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಾರ್ವಜನಿಕ ಸುರಕ್ಷತಾ ಕಾಳಜಿಗಳನ್ನು ಉಲ್ಲೇಖಿಸಿ, ತೆರವು ಕಾರ್ಯಾಚರಣೆ ನಡೆಸಲಾಗಿದೆ. ಇದು ಭಯೋತ್ಪಾದನಾ ವಿರೋಧಿ ಕ್ರಮದ ಭಾಗವಾಗಿದೆ. ನಿಯಮಿತ ಅತಿಕ್ರಮಣ ತೆರವು ಕಾರ್ಯಾಚರಣೆ ಅಲ್ಲ” ಎಂದು ಹೇಳಿಕೊಂಡಿದ್ದಾರೆ.

ಆದರೆ, ಈ ಕಾರ್ಯಾಚರಣೆಗೆ ಬಲಿಯಾಗಿರುವವರು ಭಾರತೀಯ ನಾಗಕರಿಕರೇ ಆಗಿದ್ದಾರೆ. ಅವರು ಅಮಾಯಕರೂ ಆಗಿದ್ದಾರೆ. ಅವರಲ್ಲಿ ಯಾರೊಬ್ಬರೂ ಭಯೋತ್ಪಾದನಾ ಚಟುವಟಿಕೆಯೊಂದಿಗೆ ಸಂಬಂಧ ಹೊಂದಿರಲಿಲ್ಲ ಎಂಬುದು ಸ್ಪಷ್ಟವಾಗಿದೆ.

ಏಪ್ರಿಲ್ 29 ರಂದು, ತಮ್ಮ ಪ್ರದೇಶಕ್ಕೆ ಬುಲ್ಡೋಜರ್‌ಗಳು ನುಗ್ಗಿದಾಗ, ಕಾರ್ಯಾಚರಣೆಗೆ ತಡೆಯಾಜ್ಞೆ ನೀಡುವಂತೆ ಸಿಯಾಸತ್ ನಗರದ 23 ನಿವಾಸಿಗಳು ಗುಜರಾತ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ”ಅಧಿಕಾರಿಗಳು ಯಾವುದೇ ನೋಟಿಸ್‌ಗಳನ್ನು ನೀಡಿಲ್ಲ ಅಥವಾ ಯಾವುದೇ ಪುನರ್ವಸತಿ ಯೋಜನೆಗಳನ್ನು ಒದಗಿಸಿಲ್ಲ. ಏಕಾಏಕಿ ತೆರವು ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. ಇದು ಅತಿಕ್ರಮಣ ಪ್ರಕರಣಗಳಲ್ಲಿಯೂ ಪೂರ್ವ ನೋಟಿಸ್‌ ನೀಡಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಉಲ್ಲಂಘಿಸಿದೆ” ಎಂದು ಅರ್ಜಿದಾರರು ವಾದಿಸಿದ್ದರು.

ಅಲ್ಲದೆ, ರಾಜ್ಯ ಕೊಳೆಗೇರಿ ಪುನರ್ವಸತಿ ನೀತಿಗಳನ್ನು (2010 ಮತ್ತು 2013) ಉಲ್ಲೇಖಿಸಿದ್ದ ಅರ್ಜಿದಾರರು, ಈ ನೀತಿಗಳ ಅಡಿಯಲ್ಲಿ ದೀರ್ಘಕಾಲೀನ ನಿವಾಸಿಗಳು ವಸತಿ ಅಥವಾ ಪುನರ್ವಸತಿಗೆ ಅರ್ಹರು ಎಂಬ ವಿಚಾರವನ್ನು ಗಮನ ಸೆಳೆದರು.

ಆದಾಗ್ಯೂ, ನೆಲಸಮ ಕಾರ್ಯಗಳಿಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿತು. ತನ್ನ ಮೌಖಿಕ ಆದೇಶದಲ್ಲಿ, ನ್ಯಾಯಾಲಯವು ಮಧ್ಯಪ್ರವೇಶವು ‘ಅಕ್ರಮ ಅತಿಕ್ರಮಣವನ್ನು ಶಾಶ್ವತಗೊಳಿಸಿದಂತಾಗುತ್ತದೆ’ ಎಂದು ಹೇಳಿತು. ಭೂಮಿ ಸರ್ಕಾರಿ ಸ್ವಾಮ್ಯದಲ್ಲಿದೆ ಮತ್ತು ಜಲಮೂಲವೆಂದು ಗೊತ್ತುಪಡಿಸಲಾಗಿದೆ. ಹೀಗಾಗಿ, ಅರ್ಜಿದಾರರು ಅಲ್ಲಿ ಉಳಿಯಲು ಯಾವುದೇ ಸ್ಥಾಪಿತ ಹಕ್ಕುಗಳನ್ನು ಹೊಂದಿಲ್ಲ ಎಂದು ಕೋರ್ಟ್‌ ಹೇಳಿದ್ದಾಗಿ ವರದಿಯಾಗಿದೆ.

ಕೋರ್ಟ್‌ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಬುಲ್ಡೋಜರ್‌ಗಳ ಜೊತೆಗೆ ಪೊಲೀಸ್ ವ್ಯಾನ್‌ಗಳು ಕೂಡ ಬಂದವು. ಯಾರನ್ನೂ, ಯಾವುದೇ ದಾಖಲೆಗಳನ್ನು ಪರಿಶೀಲಿಸದೆ, ಎಲ್ಲರನ್ನು ಅಕ್ರಮ ಬಾಂಗ್ಲಾ ವಲಸಿಗರು ಎಂದು ಆರೋಪಿಸಿ, ಎಳೆದೊಯ್ದರು.

ಇಂದೊಂದು ಸಾಮೂಹಿಕ ಶಿಕ್ಷೆ ಮತ್ತು ದಮನವಾಗಿದೆ. ಆದರೆ, ಆ ಸಂದರ್ಭದಲ್ಲಿ ಅವರ ಹಕ್ಕುಗಳನ್ನು ರಕ್ಷಿಸುವವರು, ಅವರ ಜೀವನವನ್ನು ಉಳಿಸುವವರು ಯಾರೂ ಇಲ್ಲದಂತಾದರು. ಪರಿಣಾಮವಾಗಿ ಈಗ, ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ನಿರ್ಗತಿಕರಾಗಿದ್ದಾರೆ.

ಕಾನೂನುಬಾಹಿರ ಕೃತ್ಯ ಎಂದ ಕಾನೂನು ತಜ್ಞರು

“ಅನಧಿಕೃತ ನಿರ್ಮಾಣ ಪ್ರಕರಣಗಳಲ್ಲಿಯೂ ಸಹ ಸರ್ಕಾರ ಅಥವಾ ಅಧಿಕಾರಿಗಳು ಸಮಂಜಸವಾದ ಸೂಚನೆ ನೀಡದೆ ಮನೆಗಳನ್ನು ಕೆಡವಲು ಸಾಧ್ಯವಿಲ್ಲ” ಎಂದು ತಜ್ಞರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಅಂತಹ ಯಾವುದೇ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲು ಕನಿಷ್ಠ 15 ದಿನಗಳ ಮೊದಲೇ ಕಡ್ಡಾಯವಾಗಿ ನೋಟಿಸ್‌ ನೀಡಬೇಕೆಂದು ತೀರ್ಪು ನೀಡಿದೆ. ಆದರೆ, ಚಂದೋಲಾ ಪ್ರದೇಶದಲ್ಲಿ ಅಲ್ಲಿನ ನಿವಾಸಿಗಳಿಗೆ ಕೇವಲ 4 ಗಂಟೆಗಳ ಕಾಲಾವಕಾಶ ಮಾತ್ರವೇ ನೀಡಲಾಗಿತ್ತು.

image 56 7

“ಈ ಕ್ರಮಗಳು ಸಾಮಾನ್ಯವಾಗಿ ರಾಜಕೀಯ ಅಥವಾ ವಾಣಿಜ್ಯ ಉದ್ದೇಶಗಳಿಂದ ಪ್ರೇರಿತವಾಗಿರುತ್ತವೆ. ಇದು ಸ್ವಾರ್ಥ ಹಿತಾಸಕ್ತಿಗಳಿಗಾಗಿ ಭೂಮಿಯನ್ನು ಕಿತ್ತುಕೊಳ್ಳುವುದರ ಭಾಗವಾಗಿದೆ. ಬಡವರು ದೀರ್ಘ ಕಾನೂನು ಹೋರಾಟಗಳನ್ನು ನಡೆಸಲು ಸಾಧ್ಯವಾಗದ ಕಾರಣ, ಇಂತಹ ದಮನಗಳನ್ನು ನಡೆಸಿ ಸರ್ಕಾರವು ಪಾರಾಗುತ್ತದೆ” ಎಂದು ಸುಪ್ರೀಂ ಕೋರ್ಟ್ ವಕೀಲ ಮತ್ತು ಸಾಂವಿಧಾನಿಕ ಹಕ್ಕುಗಳ ಹೋರಾಟಗಾರ ಮೆಹಮೂದ್ ಪ್ರಾಚಾ ಆರೋಪಿಸಿದ್ದಾರೆ.

ವಿಪರ್ಯಾಸವೆಂದರೆ, ಇದೇ ಅಧಿಕಾರಿಗಳು ಆರಂಭದಲ್ಲಿ ದೇಶೀಯ ವಲಸಿಗರು ಚಂದೋಲಾ ಪ್ರದೇಶದಲ್ಲಿ ವಸತಿಗಳನ್ನು ಕಟ್ಟಿಕೊಳ್ಳಲು ಅನುಮತಿಸಿದ್ದರು. ಅದಕ್ಕಾಗಿ, ಆಗಾಗ್ಗೆ ಲಂಚವನ್ನೂ ಪಡೆದಿದ್ದರು. ಆದರೆ, ಅದೇ ಅಧಿಕಾರಿಗಳು ಈಗ ಬಡ ಜನರ ವಸತಿಗಳನ್ನು ನಾಶಮಾಡಿದ್ದಾರೆ ಎಂದು ದಿ ಕ್ವಿಂಟ್‌ ವರದಿ ಮಾಡಿದೆ.

”ಈ ಮನೆಗಳು ನಿಜವಾಗಿಯೂ ಅಕ್ರಮವಾಗಿದ್ದರೆ, ಸುಮಾರು 50-60 ವರ್ಷಗಳಿಗೂ ಹೆಚ್ಚು ಕಾಲ ಅವರಿಗೆ ಮೂಲಭೂತ ಸೌಕರ್ಯಗಳು, ಪಡಿತರ ಚೀಟಿಗಳು ಹಾಗೂ ತೆರಿಗೆ ರಶೀದಿಗಳನ್ನು ಹೇಗೆ ಕೊಡಲಾಗಿದೆ. ಅಗತ್ಯ ದಾಖಲೆಗಳನ್ನು ಅಲ್ಲಿನ ನಿವಾಸಿಗಳು ಅದೇ ವಿಳಾಸದೊಂದಿಗೆ ಪಡೆದಿದ್ದಾರೆ. ಅಕ್ರಮ ನಿವಾಸಗಳಿಗೆ ಸರ್ಕಾರ ಮೂಲ ಸೌಲಭ್ಯ ಒದಗಿಸುವುದಿಲ್ಲ. ಎಲ್ಲವನ್ನೂ ಕೊಟ್ಟು, ಈಗ ಅಕ್ರಮ ಎನ್ನುತ್ತಿರುವುದರ ಹಿಂದಿನ ಹುನ್ನಾರವೇನು?” ಎನ್ನುತ್ತಾರೆ ಪ್ರಾಚಾ.

ಈಗ ನಿರಾಶ್ರಿತರಾಗಿರುವವಲ್ಲಿ ಅನೇಕರು ಈ ಪ್ರದೇಶದ ಸುತ್ತಲೂ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದರು. ಚಿಂದಿ ಆಯುವವರು, ಸ್ಕ್ರ್ಯಾಪ್ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು, ಮನೆ ಕೆಲಸಗಾರರು ಹಾಗೂ ಇನ್ನೂ ಹೆಚ್ಚಿನವರು ನಾನಾ ರೀತಿಯ ಕೆಲಸ ಮಾಡುತ್ತಿದ್ದರು. ಕೆಲವು ಕುಟುಂಬಗಳು 30 ರಿಂದ 60 ವರ್ಷಗಳಿಂದಲೂ ಇದೇ ಪ್ರದೇಶದಲ್ಲಿ ವಾಸಿಸುತ್ತಿವೆ. ತಲೆಮಾರುಗಳಿಂದ ಬದುಕು ಕಟ್ಟಿಕೊಂಡಿವೆ.

ಪತ್ರಿಕೆಗಳೂ ಕೂಡ ಕ್ರೌರ್ಯ ಮೆರೆದಿವೆ

ಬಹುತೇಕ ಎಲ್ಲ ಪತ್ರಿಕೆ, ಸುದ್ದಿ ವಾಹಿನಿಗಳು ಗುಜರಾತ್ ಸರ್ಕಾರದ ಕ್ರೌರ್ಯವನ್ನು ಶ್ಲಾಘಿಸಿವೆ. ”ಗುಜರಾತ್ ಸರ್ಕಾರವು ‘ಒಳನುಸುಳುಕೋರ’ರನ್ನು ಹೊರಹಾಕಲು, ‘ಕಾನೂನು-ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು’ ಬೃಹತ್ ಕಾರ್ಯಾಚರಣೆ ನಡೆಸಿದೆ. ಇದು ಅಗತ್ಯವಾದ ಹೆಜ್ಜೆಯಾಗಿದೆ” ಎಂದು ಬಹುಪರಾಕ್ ಹೇಳಿವೆ. ಆದರೆ, ಸರ್ಕಾರವು ಪರಿಶೀಲನೆಗಳನ್ನು ನಡೆಸಿದ ಬಳಿಕ ವಿದೇಶಿ ಪ್ರಜೆಗಳ ಯಾವುದೇ ಸಾರ್ವಜನಿಕ ಪಟ್ಟಿಯನ್ನು ಈವರೆಗೆ ಬಿಡುಗಡೆ ಮಾಡಲಾಗಿಲ್ಲ. ಇದಲ್ಲದೆ, ದಮನ ನಡೆದ ಪ್ರದೇಶದಲ್ಲಿ ಅಕ್ರಮ ಒಳನುಸುಳುಕೋರರ ತಾಣ ಎಂಬುದಕ್ಕೆ ಯಾವುದೇ ಪುರಾವೆಗಳಿರಲಿಲ್ಲ. ಬದಲಾಗಿ, ಆ ಪ್ರದೇಶದಲ್ಲಿ ಪ್ರಧಾನವಾಗಿ ಭಾರತೀಯ ಕಾರ್ಮಿಕ ವರ್ಗದ ಮುಸ್ಲಿಮರು ವಾಸಿಸುತ್ತಿದ್ದವು.

image 56 8

ಒಂದು ಕಾಲದಲ್ಲಿ ಸಾವಿರಾರು ಕುಟುಂಬಗಳಿಗೆ ನೆಲೆಯಾಗಿದ್ದ ಚಂದೋಲಾ ಪ್ರದೇಶವು ಈಗ ಬುಲ್ಡೋಜರ್‌ಗಳ ಧ್ವಂಸ ಕಾರ್ಯಾಚರಣೆಯಿಂದಾಗಿ ಭಾರೀ ಯಂತ್ರೋಪಕರಣಗಳ ಅಡಿಯಲ್ಲಿ ಬಂಜರು ಭೂಮಿಯಂತೆ ಕಾಣುತ್ತಿದೆ. ನಾವು ಅಭಿವೃದ್ಧಿಗೆ ವಿರೋಧಿಗಳಲ್ಲ, ಕೆರೆ ಸರ್ಕಾರಕ್ಕೆ ಸೇರಿತ್ತು, ಅದು ಸರ್ಕಾರದ ಆಸ್ತಿಯಾಗಿತ್ತು. ಆದರೆ, ಯಾವುದೇ ಸೂಚನೆ ನೀಡದೆ, ಯಾವುದೇ ಪರ್ಯಾಯ ವಸತಿ ಒದಗಿಸದೆ, ಜನರ ಬೇಕು-ಬೇಡಗಳನ್ನು ಕೇಳದೆ ಯಾಕೆ ಏಕಾಏಕಿ ದಮನ ಮಾಡಲಾಯಿತು. ಮನೆಗಳನ್ನು ಧ್ವಂಸಗೊಳಿಸಲಾಯಿತು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ನಡೆಯಾಗುತ್ತದೆಯೇ? ಭಾರತೀಯ ಬಡವರಿಗೆ ಪ್ರಜಾಪ್ರಭುತ್ವದಲ್ಲಿ ಜಾಗವಿಲ್ಲವೇ? ಯಾವುದೇ ಮನುಷ್ಯ ಅಕ್ರಮ ವಾಸಿಯಲ್ಲ. ಇದು ನಮ್ಮ ದೇಶ, ಇಲ್ಲಿ ಬದುಕಲು ನಮಗೂ ಹಕ್ಕಿದೆ. ಅದನ್ನು ಸರ್ಕಾರ ಕಸಿದುಕೊಳ್ಳುತ್ತಿದೆ” ಎಂದು ಆ ಪ್ರದೇಶದ ನಿವಾಸಿ, ಸಮಾಜಶಾಸ್ತ್ರದಲ್ಲಿ ವ್ಯಾಸಂಗ ಮಾಡಿರುವ ತೌಫಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಸತಿ ಯೋಜನೆಗಳು ಮತ್ತು ಕಾನೂನು ಆಶ್ರಯ ಮರೀಚಿಕೆ

ಚಂದೋಲಾ ಕೆರೆ ಪ್ರದೇಶದಲ್ಲಿ ನಡೆದ ತೆರವು/ಹೊರಹಾಕುವ ಕಾರ್ಯಾಚರಣೆಯು ನಗರದಲ್ಲಿನ ವಸತಿ ಯೋಜನೆಗಳ ರಚನಾತ್ಮಕ ಸಮಸ್ಯೆಗಳನ್ನು ಎತ್ತಿ ತೋರಿಸಿದೆ. ಕುಟುಂಬಗಳು ಸೈದ್ಧಾಂತಿಕ, ಕಾನೂನಾತ್ಮಕವಾಗಿ ಸರ್ಕಾರಿ ಕಾರ್ಯಕ್ರಮಗಳ ಅಡಿಯಲ್ಲಿ ಪುನರ್ವಸತಿಗೆ ಅರ್ಹರಾಗಿದ್ದರೂ, ಅವರಿಗೆ ವಸತಿ ಸೌಲಭ್ಯ ದೊರೆತಿಲ್ಲ. ಸರ್ಕಾರಿ ವಸತಿ ಯೋಜನೆಗಳು ಸರಿಯಾಗಿ ಅನುಷ್ಠಾನಗೊಂಡಿಲ್ಲ.

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ವಸತಿ ಸೌಲಭ್ಯಕ್ಕಾಗಿ ಚಂದೋಲಾ ನಿವಾಸಿಗಳು ಅನೇಕ ಬಾರಿ ಅರ್ಜಿ ಸಲ್ಲಿಸಿದ್ದರು. ಆದರೆ, ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಅಥವಾ ವರ್ಷಗಳ ಕಾಲ ಕಾಯುವ ಪಟ್ಟಿಯಲ್ಲಿ ಇರಿಸಲಾಗಿದೆ.

ಎಎಂಸಿ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಾಂಗ್ ದಾನಿ ಅವರು ಹೇಳುವಂತೆ, ”ಸ್ಥಳಾಂತರಗೊಂಡ ಕುಟುಂಬಗಳನ್ನು ಜಂಟಿ ಪಿಎಂಎವೈ-ಗುಜರಾತ್ ವಸತಿ ಕಾರ್ಯಕ್ರಮದ ಅಡಿಯಲ್ಲಿ ಪರಿಗಣಿಸಲಾಗುತ್ತದೆ. ಆದರೆ, ಅವರು 2010ರ ಡಿಸೆಂಬರ್ 1ಕ್ಕೂ ಮೊದಲಿನಿಂದಲೂ ಚಂದೋಲಾ ಪ್ರದೇಶದಲ್ಲಿ ವಾಸಿಸುತ್ತಿರಬೇಕು. ಅದಕ್ಕೆ ಪೂರಕವಾದ ದಾಖಲೆಗಳನ್ನು ಹೊಂದಿರಬೇಕು.”

ಈ ಕಟ್ಆಫ್ ಗುಜರಾತ್‌ನ ಕೊಳೆಗೇರಿ ಪುನರ್ವಸತಿ ನೀತಿ (2010) ಜಾರಿಯಿಂದ ಆರಂಭವಾಗಿದೆ. ಇದು ದೀರ್ಘಾವಧಿಯ ವಾಸ್ತವ್ಯವನ್ನು ಪರಿಶೀಲಿಸಲು ಹಳೆಯ ಪಡಿತರ ಚೀಟಿಗಳು ಅಥವಾ ಮತದಾರರ ಪಟ್ಟಿಗಳಂತಹ ಎರಡು ರೀತಿಯ ದಾಖಲೆಗಳ ಇರಬೇಕೆಂದು ಕಡ್ಡಾಯಗೊಳಿಸಿದೆ.

ಆ ರೀತಿಯಲ್ಲಿ ದಾಖಲೆಗಳನ್ನು ಹೊಂದಿರುವವರಿಗೆ ಸುಮಾರು 3,600 ವಸತಿ ಫಾರ್ಮ್‌ಗಳನ್ನು ವಿತರಿಸಲಾಗಿದೆ ಎಂದು ಎಎಂಸಿ ವರದಿ ಮಾಡಿದೆ. ಆದಾಗ್ಯೂ, ಸಾವಿರಾರು ಜನರು ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಯಾಕೆಂದರೆ, ಅವರ ಬಳಿ ಅಗತ್ಯ ದಾಖಲೆಗಳ ಕೊರತೆ ಅಥವಾ ಅರ್ಹತಾ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗಿಲ್ಲ. ಅರ್ಹತೆ ಪಡೆದವರಿಗೂ ವಸತಿ ಒದಗಿಸುವ ಕೆಲಸವು ಇನ್ನೂ ಆರಂಭವಾಗಿಲ್ಲ.

”ವಸತಿ ಒದಗಿಸುವುದು ಒಂದು ಉಪಕಾರವಲ್ಲ. ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವಾಗ ಅವರಿಗೆ ಪರ್ಯಾಯ ವಸತಿ ನೀಡುವುದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಆದರೆ, ಪರಿಸ್ಥಿತಿಗಳು, ತಾಂತ್ರಿಕತೆಗಳು ಮತ್ತು ಹೊರಗಿಡುವಿಕೆಗಳ ಜಟಿಲತೆಗಳಿಂದ ಅದೂ ಕೂಡ ಜನರನ್ನು ತಲುಪುತಿಲ್ಲ” ಎಂದು ಕಾನೂನು ತಜ್ಞ ಪ್ರಾಚಾ ಹೇಳುತ್ತಾರೆ.

ಹೊರಹಾಕಲು ಸೃಷ್ಟಿಸಿದ ವ್ಯವಸ್ಥೆ

ಅಹಮದಾಬಾದ್‌ನಲ್ಲಿ ಧ್ವಂಸ ಕಾರ್ಯಾಚರಣೆಯು ಒಂದು ಪ್ರತ್ಯೇಕ ಘಟನೆಯಲ್ಲ. ಭಾರತದಾದ್ಯಂತ ಅಕ್ರಮ ನಿರ್ಮಾಣ, ಅಭಿವೃದ್ಧಿ, ಕಾನೂನು ಮತ್ತು ಸುವ್ಯವಸ್ಥೆ ಅಥವಾ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ನಿರಂತರವಾಗಿ ಧ್ವಂಸ ಮಾಡಲಾಗುತ್ತಿದೆ. ಅದೂ ಯಾವುದೇ ಕಾನೂನಾತ್ಮಕ ಪ್ರಕ್ರಿಯೆಗಳಿಲ್ಲದೆ, ಪುನರ್ವಸತಿ ಒದಗಿಸದೆ ಜನರ ಮನೆಗಳನ್ನು ಉರುಳಿಸಲಾಗುತ್ತಿದೆ. ಜನರನ್ನು ಬೀದಿ ಪಾಲು ಮಾಡಲಾಗುತ್ತಿದೆ. ಬದುಕಿದ್ದೂ ಸತ್ತಂತಹ ದುಸ್ಥಿತಿಗೆ ದೂಡಲಾಗುತ್ತಿದೆ. ಇದು, ಇಡೀ ಆಳುವ ವರ್ಗವೇ ಸೃಷ್ಟಿಸಿರುವ ಅತ್ಯಂತ ಹೀನಾಯ, ವಿಕೃತ ವ್ಯವಸ್ಥೆ…!

ಕೃಪೆ: ದಿ ಕ್ವಿಂಟ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X