ಇಬ್ಬರೂ ಉಪಮುಖ್ಯಮಂತ್ರಿಗಳು ಯೋಗಿ ಜೊತೆಗಿಲ್ಲ. ಬಿಜೆಪಿ ಶಾಸಕರಲ್ಲೂ ಅಸಂತೋಷ ನೆಲೆಸಿದೆ. ಆದರೂ ಮೋದಿ ಶಾ ಪಾಲಿಗೆ ಯೋಗಿ ಉಗುಳಲೂ ಆಗದ, ನುಂಗಲೂ ಬಾರದ ಕಠಿಣ ತುತ್ತಾಗಿ ಪರಿಣಮಿಸಿದ್ದಾರೆ.
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಎದುರಿಸಿದ ನಂತರ ಬಿಜೆಪಿ ನಾಯಕತ್ವ ಮತ್ತು ಯೋಗಿ ನಡುವಣ ಹಳೆಯ ಸಂಘರ್ಷ ಪುನಃ ತಲೆಯೆತ್ತಿದಂತೆ ತೋರುತ್ತಿದೆ. ಆದರೆ ಉತ್ತರಪ್ರದೇಶದ ಹತ್ತು ವಿಧಾನಸಭಾ ಸೀಟುಗಳಿಗೆ ಸದ್ಯದಲ್ಲೇ ಚುನಾವಣೆ ನಡೆಯಬೇಕಿದೆ. ಈ ಹಂತದಲ್ಲಿ ಯೋಗಿ ಕುರ್ಚಿಯನ್ನು ಕಿತ್ತುಕೊಳ್ಳುವ ಸಾಹಸಕ್ಕೆ ಬಿಜೆಪಿ ನಾಯಕತ್ವ ಕೈ ಹಾಕುವುದಿಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಭವಿಷ್ಯವಾಣಿಯನ್ನು ನೆನಪಿಗೆ ತಂದಿದೆ. ‘ಬಿಜೆಪಿ ಈ ಚುನಾವಣೆಯಲ್ಲಿ (2024ರ ಲೋಕಸಭಾ ಚುನಾವಣೆ) ಗೆದ್ದಿತೆಂದರೆ, ಎರಡೇ ತಿಂಗಳಲ್ಲಿ ಆದಿತ್ಯನಾಥ ಯೋಗಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವುದು ನಿಶ್ಚಿತ, ಯೋಗಿಯ ರಾಜಕೀಯ ಬದುಕನ್ನು ಮುಗಿಸಿಬಿಡುತ್ತಾರೆ, ಬರೆದಿಟ್ಟುಕೊಳ್ಳಿ’ ಎಂದಿದ್ದರು ಕೇಜ್ರೀವಾಲ್.
ಮೋದಿಯವರ ನಂತರ ಯಾರು ಎಂಬ ಪ್ರಶ್ನೆ ಎದುರಾದಾಗ ಯೋಗಿ ಮತ್ತು ಶಾ ಅವರ ಹೆಸರುಗಳು ಒಟ್ಟೊಟ್ಟಿಗೆ ಕೇಳಿ ಬರುತ್ತವೆ. ಹೀಗಾಗಿ ಯೋಗಿಯವರು ಅಮಿತ್ ಶಾ ಮಹತ್ವಾಕಾಂಕ್ಷೆಗಳಿಗೆ ತೀವ್ರ ಪ್ರತಿಸ್ಪರ್ಧಿ ಆಗಬಲ್ಲರು. ಯೋಗಿಯವರಿಗೆ ಇರುವಷ್ಟು ದೇಶವ್ಯಾಪಿ ಧಾರ್ಮಿಕ ಮತ್ತು ಜಾತಿಪ್ರಭಾವ ಶಾ ಅವರಿಗೆ ಇಲ್ಲ. ಮೋದಿ ಬೆಂಬಲವೇ ಶಾ ಅವರ ಪಾಲಿನ ಸರ್ವಶಕ್ತಿ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸರಳ ಬಹುಮತ ದೊರೆಯದ ಕಾರಣ ಮೋದಿ ಮತ್ತು ಶಾ ಇಬ್ಬರ ಶಕ್ತಿಯೂ ಸದ್ಯಕ್ಕೆ ಕುಂದಿದೆ. ಮೋದಿ ಶಾ ಪಾಲಿಗೆ ಬಂಗಾಳ ಕುಸಿದಿದೆ, ಅಸ್ಸಾಮ್ ಕುಸಿಯತೊಡಗಿದೆ. ಉತ್ತರಪ್ರದೇಶ ಕಠಿಣವಾಗಿದೆ. ಮಹಾರಾಷ್ಟ್ರ ಉದ್ಧವ್ ಠಾಕ್ರೆ-ಶರದ್ ಪವಾರ್- ಕಾಂಗ್ರೆಸ್ ಕಡೆಗೆ ವಾಲತೊಡಗಿದೆ. ಹರಿಯಾಣ ಕಾಂಗ್ರೆಸ್ಸಿಗೆ ಒಲಿಯತೊಡಗಿದೆ.
ಉತ್ತರಪ್ರದೇಶದಲ್ಲಿ ಹೆಚ್ಚು ಸೀಟುಗಳು ಬಾರದೆ ಯೋಗಿ ಕೂಡ ರಾಜಕೀಯವಾಗಿ ಶಕ್ತಿಗುಂದಿದ್ದಾರೆ. ತಮ್ಮದೇ ಸಹೋದ್ಯೋಗಿಗಳ ದಾಳಿಗೀಡಾಗಿ ಒತ್ತಡದಲ್ಲಿದ್ದಾರೆ. ಬುಲ್ಡೋಜರ್ ಬಾಬಾ ಎಂದೇ ಹೆಸರಾಗಿದ್ದರೂ, ಮೊನ್ನೆ ಲಖನೌನ ಪಂತ್ ನಗರದಲ್ಲಿ ಬುಲ್ಡೋಜರ್ ಚಲಾಯಿಸುವ ಆದೇಶವನ್ನು ವಾಪಸು ಪಡೆದಿದ್ದಾರೆ. ಶಿಕ್ಷಕರು ಡಿಜಿಟಲ್ ಹಾಜರಿ ಹಾಕಬೇಕೆಂಬ ಆದೇಶವನ್ನು ಹಿಂದಕ್ಕೆ ಪಡೆದಿದ್ದಾರೆ. ಇಬ್ಬರೂ ಉಪಮುಖ್ಯಮಂತ್ರಿಗಳು ಯೋಗಿ ಜೊತೆಗಿಲ್ಲ. ಬಿಜೆಪಿ ಶಾಸಕರಲ್ಲೂ ಅಸಂತೋಷ ನೆಲೆಸಿದೆ. ಆದರೂ ಮೋದಿ ಶಾ ಪಾಲಿಗೆ ಯೋಗಿ ಉಗುಳಲೂ ಆಗದ ನುಂಗಲೂ ಬಾರದ ಕಠಿಣ ತುತ್ತಾಗಿ ಪರಿಣಮಿಸಿದ್ದಾರೆ.
ಉತ್ತರಪ್ರದೇಶದ ಹೊರಗೆ ಆದಿತ್ಯನಾಥರನ್ನು ಹಿಂದುತ್ವ ರಾಜಕಾರಣದ ಹೀರೋ ಎಂದೇ ಮೆಚ್ಚಿಕೊಂಡವರ ಸಂಖ್ಯೆ ದೊಡ್ಡದು. ಇತ್ತೀಚಿನ ವರ್ಷಗಳಲ್ಲಿ ಅವರನ್ನು ಮೆಚ್ಚುವ ದೊಡ್ಡ ಜನವರ್ಗವು ಮೋದಿಯವರ ನಂತರ ಆದಿತ್ಯನಾಥರನ್ನು ಪ್ರಧಾನಿ ಗದ್ದುಗೆಯಲ್ಲಿ ಕಾಣಬಯಸಿದ್ದಾರೆ. ಕೋಮುವಾದಿ ರಾಜಕಾರಣಕ್ಕೆ ಧರ್ಮವನ್ನು ಬಳಸಿಕೊಳ್ಳುವಲ್ಲಿ ಯುವಕ ಆದಿತ್ಯನಾಥ ಮುಂಬರುವ ದಿನಗಳಲ್ಲಿ ಮೋದಿಯವರನ್ನೂ ಮೀರಿಸುತ್ತಾರೆ ಎಂಬ ನಿರೀಕ್ಷೆಯನ್ನು ಕಟ್ಟರ್ ಹಿಂದೂವಾದಿಗಳು ಇರಿಸಿಕೊಂಡಿದ್ದಾರೆ.
ಯಾದವೇತರ ಹಿಂದುಳಿದ ವರ್ಗಗಳು ಮತ್ತು ಜಾಟವೇತರ ದಲಿತರು 2014ರಲ್ಲಿ ಬಿಜೆಪಿಯತ್ತ ಸರಿದಿದ್ದರು. ಹತ್ತು ವರ್ಷಗಳ ನಂತರ ಬಿಜೆಪಿಯ ತೆಕ್ಕೆಯಿಂದ ಹೊರಬೀಳುತ್ತಿದ್ದಾರೆ. ಮಾಯಾವತೀಯವರ ಬಿ.ಎಸ್.ಪಿ. ಕೂಡ ದಲಿತರನ್ನು ಹಿಡಿದಿಟ್ಟುಕೊಳ್ಳಲು ವಿಫಲವಾಗಿದೆ. ಈ ಬೆಳವಣಿಗೆಗಳ ಲಾಭ ಇಂಡಿಯಾ ಮೈತ್ರಿಕೂಟದ ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಗೆ ದೊರೆತಿದೆ. 2024ರ ಲೋಕಸಭಾ ಚುನಾವಣೆಗಳ ಫಲಿತಾಂಶಗಳು ಈ ಪರಿಣಾಮವನ್ನು ಬಿಂಬಿಸಿವೆ.
ಈ ಫಲಿತಾಂಶಗಳ ಹಿನ್ನಡೆಯನ್ನು ಯೋಗಿಯವರ ಕುತ್ತಿಗೆಗೆ ಕಟ್ಟುವ ಪ್ರಯತ್ನಗಳು ನಡೆದಿವೆ. ಅವರ ಕುರ್ಚಿ ಇನ್ನೇನು ಉರುಳಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಈ ಮೇಲಾಟ ಅಷ್ಟು ಸುಲಭವಾಗಿ ಬಗೆಹರಿಯುವಂತೆ ತೋರುತ್ತಿಲ್ಲ.
ಮಧ್ಯಪ್ರದೇಶ, ಛತ್ತೀಸಗಢ ಹಾಗೂ ರಾಜಸ್ತಾನದಲ್ಲಿ ಶಿವರಾಜ್ ಸಿಂಗ್ ಚೌಹಾಣ್, ರಮಣ್ ಸಿಂಗ್ ಹಾಗೂ ವಸುಂಧರಾ ರಾಜೇ ಅವರನ್ನು ಮೂಲೆಗುಂಪು ಮಾಡಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಹೊಚ್ಚ ಹೊಸಬರನ್ನು ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಕೂರಿಸಿತು ಮೋದಿ ಶಾ ಜೋಡಿ. ಯೋಗಿಯವರನ್ನು ಬದಲಿಸುವುದು ಚೌಹಾಣ್, ರಾಜೇ ಹಾಗೂ ರಮಣಸಿಂಗ್ ಅವರನ್ನು ಬದಲಿಸಿದಷ್ಟು ಸುಲಭವಲ್ಲ.
‘ಮೋದಿ ಹೈ ತೋ ಮುಮ್ ಕಿನ್ ಹೈ’ ಎಂಬ ಘೋಷಣೆಯ ಅಚ್ಚಿನಲ್ಲಿ ಎರಕ ಹೊಯ್ದ ಘೋಷಣೆಯೊಂದು ಆದಿತ್ಯನಾಥರ ಪರವಾಗಿ ರೂಪು ತಳೆದಿತ್ತು. ಅದು ‘ಯೋಗಿ ಹೈ ತೋ ಯಕೀನ್ ಹೈ’. ತಾವು ಮತ್ತೊಬ್ಬ ಮೋದಿಯಾಗಬೇಕೆಂದು ವರ್ಷಗಳಿಂದ ಶ್ರಮಿಸಿದ್ದಾರೆ ಆದಿತ್ಯನಾಥ. ಆ ದಿಸೆಯಲ್ಲಿ ಯಶಸ್ಸನ್ನೂ ಕಂಡಿದ್ದಾರೆ. ರಾಜಕೀಯ ವಿರೋಧಿಗಳ ವಿರುದ್ಧ ರಾಷ್ಟ್ರೀಯ ಸುರಕ್ಷತಾ ಕಾಯಿದೆ, ಅಕ್ರಮ ಚಟುವಟಿಕೆಗಳ ತಡೆ ಕಾಯಿದೆ ಹಾಗೂ ದೇಶದ್ರೋಹದ ಕಾಯಿದೆಗಳನ್ನು ಬೀಡು ಬೀಸಾಗಿ ಪ್ರಯೋಗಿಸುತ್ತಲೇ ಬಂದಿದ್ದಾರೆ. ‘ಆಲಿ ವರ್ಸಸ್ ಭಜರಂಗಬಲಿ’ ರಾಜಕಾರಣವನ್ನು ಮುಂಚೂಣಿಯಲ್ಲೇ ಇರಿಸಿದ್ದಾರೆ
ಯೋಗಿ ಅವಧಿಯಲ್ಲಿ ಸರ್ಕಾರ ಮತ್ತು ಪಕ್ಷದ ನಡುವಣ ಕಂದಕ ಹೆಚ್ಚಿದೆ. ಸರ್ಕಾರ ನಡೆಸಲು ಯೋಗಿ ನೌಕರಶಾಹಿಯನ್ನು ಹೆಚ್ಚು ಅವಲಂಬಿಸಿದ್ದಾರೆ. ತಮ್ಮ ತಂಡವನ್ನೂ ಯೋಗಿ ಕಟ್ಟಿಕೊಂಡಿಲ್ಲ. ಸರ್ಕಾರದಲ್ಲಿ ಮೋದಿ ಮತ್ತು ಶಾ ಅವರ ಹಸ್ತಕ್ಷೇಪ ಇದ್ದೇ ಇದೆ. ಈ ಹಸ್ತಕ್ಷೇಪವನ್ನು ಹಿಂದಕ್ಕೆ ತಳ್ಳುತ್ತಲೇ ಬಂದಿದ್ದಾರೆ ಯೋಗಿ. ಮೋದಿ ಮತ್ತು ಶಾ ಅವರಿಗೆ ಈ ಧೋರಣೆ ಹಿಡಿಸುತ್ತಿಲ್ಲ.
ಉತ್ತರಪ್ರದೇಶ ವಿಧಾನಸಭೆಗೆ ನಡೆದ 2017ರ ಚುನಾವಣೆಗಳಲ್ಲಿ ಗಳಿಸಿದ್ದ ಸೀಟುಗಳ ಸಂಖ್ಯೆ 312. ಐದು ವರ್ಷಗಳ ನಂತರ 2022ರ ಚುನಾವಣೆಗಳಲ್ಲಿ ಈ ಸಂಖ್ಯೆ 255ಕ್ಕೆ ತಗ್ಗಿರುವುದು ಹೌದು.
2024ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆದ್ದ ಸ್ಥಾನಗಳ ಸಂಖ್ಯೆ 2019ರ ಚುನಾವಣೆಗಳಿಗೆ ಹೋಲಿಸಿದರೆ 62ರಿಂದ 33ಕ್ಕೆ ಕುಸಿಯಿತು. ಆದರೂ ಕಟ್ಟರ್ ಹಿಂದುತ್ವದ ಪ್ರತಿಪಾದಕ ಯೋಗಿಗೆ ಒಂದು ವರ್ಗದ ಜನಬೆಂಬಲ ಇದೆ. ಬದಲಾಯಿಸಿದರೆ ಅದರ ಬೆಲೆ ತೆರಲೂ ಮೋದಿ ಮತ್ತು ಶಾ ಸಿದ್ಧವಿರಬೇಕಾಗುತ್ತದೆ.
ಉತ್ತರಾಖಂಡದ ಪರ್ವತ ಕಣಿವೆಯ ಸೀಮೆಯಿಂದ ಗೋರಖಪುರದ ಗೋರಕ್ಷಾ ಪೀಠಕ್ಕೆ ಮತ್ತು ಗೋರಕ್ಷಾ ಪೀಠದಿಂದ ಲೋಕಸಭೆಗೆ ಹಾಗೂ ಲೋಕಸಭೆಯಿಂದ ಉತ್ತರಪ್ರದೇಶದ ಮುಖ್ಯಮಂತ್ರಿ ಗಾದಿಗೆ ಯೋಗಿ ಆದಿತ್ಯನಾಥರದು ತಳಮಳಗಳಿಂದ ತುಂಬಿದ ಪಯಣ. ದೇಶದ ಅತಿದೊಡ್ಡ ರಾಜ್ಯದ ಆಡಳಿತ ಸೂತ್ರಗಳನ್ನು ಕೈಗೆತ್ತಿಕೊಂಡಾಗ ಅವರ ಪ್ರಾಯ ಕೇವಲ 44.
ಈಗಿನ ಉತ್ತರಾಖಂಡದ ಪೌಡಿ ಗಢವಾಲ ಜಿಲ್ಲೆಯ ಹಳ್ಳಿ ಪಂಚೂರಿನ ಠಾಕೂರ್ ಕುಟುಂಬದಲ್ಲಿ ಜನಿಸುವ ಅಜಯ್ ಸಿಂಗ್ ಬಿಷ್ಟ್ 1992ರಲ್ಲಿ ಬಿ.ಎಸ್ಸಿ ಪದವಿ ಪಡೆದಿರುತ್ತಾರೆ. ಗೋರಖಪುರದ ಗೋರಖನಾಥ ಮಂದಿರದ ಮುಖ್ಯಸ್ಥರ ಮಹಂತ ಅವೈದ್ಯನಾಥರು ತಮ್ಮ ಉತ್ತರಾಧಿಕಾರಿಯೆಂದು ಅಜಯ್ ಸಿಂಗ್‌ಗೆ ದೀಕ್ಷೆ ನೀಡಿ ಯೋಗಿ ಆದಿತ್ಯನಾಥ ಎಂದು ನಾಮಕರಣ ಮಾಡಿದ್ದು 1994ರಲ್ಲಿ. ನಾಲ್ಕು ವರ್ಷಗಳ ನಂತರ 1998ರಲ್ಲಿ ಗೋರಖಪುರ ಲೋಕಸಭಾ ಕ್ಷೇತ್ರದಿಂದ ಮಹಂತ ಅವೈದ್ಯನಾಥರ ಜಾಗದಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತಾರೆ. ಮುಂದೆ ಸೋಲಿನ ಮಾತೇ ಇಲ್ಲ.
ಯೋಗಿ ಆದಿತ್ಯನಾಥ ಕಾಲೇಜಿನಲ್ಲಿ ಓದುತ್ತಿದ್ದಾಗ ಅಜಯ್ ಸಿಂಗ್ ಬಿಷ್ಟ್ ಆಗಿದ್ದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಸಂಘಟನೆಗೆ ಶ್ರಮಿಸಿದ್ದರು. ವಿದ್ಯಾರ್ಥಿಸಂಘದ ಚುನಾವಣೆಗಳು ಬಂದಾಗ ಪರಿಷತ್ತು ಅವರನ್ನು ಅಭ್ಯರ್ಥಿಯನ್ನಾಗಿ ಹೂಡಲಿಲ್ಲ. ಅಜಯ್ ಸಿಂಗ್ ಪ್ರತಿಭಟಿಸಿದರು. ಬಂಡಾಯದ ಮೊದಲ ಕಿಡಿ ಸಿಡಿಸಿದ್ದರು. ಎಬಿವಿಪಿ ವಿರುದ್ಧ ಸ್ಪರ್ಧಿಸಿ ಸೋತರು. ಆದರೆ ಅದು ಅವರ ರಾಜಕೀಯ ಬದುಕಿನ ಕಟ್ಟಕಡೆಯ ಸೋಲು. ಆನಂತರ ಅವರು ಸೋತದ್ದೇ ಇಲ್ಲ.
ಕುಸಿಯತೊಡಗಿದ್ದ ಅವರ ಚುನಾವಣಾ ರಾಜಕಾರಣಕ್ಕೆ ಹೊಸ ಉಸಿರು ತುಂಬಿದ್ದು ಗುಜರಾತಿನಲ್ಲಿ ಜರುಗಿದ 2002ರ ಹಿಂದು ಮುಸ್ಲಿಮ್ ಕೋಮು ಗಲಭೆಗಳು. ಮುಸ್ಲಿಮರ ಮಾರಣಹೋಮದ ಕೆಲವೇ ವಾರಗಳಲ್ಲಿ ಆದಿತ್ಯನಾಥರು ಹಿಂದು ಯುವ ವಾಹಿನಿ ಎಂಬ ಹೊಸ ಸಂಘಟನೆಯ ಹುಟ್ಟಿ ಹಾಕಿದರು. ಹಿಂದು ಮುಸ್ಲಿಮರ ನಡುವೆ ತಲೆದೋರುವ ವಾದವಿವಾದಗಳು ಮತ್ತು ಘರ್ಷಣೆಗಳಿಗೆ ಗಲಭೆಯ ರೂಪ ನೀಡುವುದು ಈ ಹೊಸ ಸಂಘಟನೆಯ ಗುರಿಯಾಗಿರುತ್ತದೆ.
2002 ಮತ್ತು 2007ರ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿ ಆದಿತ್ಯನಾಥ ಮತ್ತು ಬಿಜೆಪಿ ನಡುವಣ ಸಂಬಂಧ ಹಳಸುತ್ತದೆ. 2006ರ ಡಿಸೆಂಬರಿನಲ್ಲಿ ಲಖ್ನೋದಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಮಂಡಲಿಯು ಸಮಾವೇಶಗೊಂಡಿದ್ದ ಅದೇ ದಿನಗಳಲ್ಲಿ ಆದಿತ್ಯನಾಥರು ಗೋರಖಪುರದಲ್ಲಿ ಮೂರು ದಿನಗಳ ವಿರಾಟ್ ಹಿಂದೂ ಸಮ್ಮೇಳನ ಆಯೋಜಿಸಿರುತ್ತಾರೆ. ಗೋರಖಪುರ ಜಿಲ್ಲೆಯಲ್ಲಿ ಅವರ ಆಯ್ಕೆಯ ಅಭ್ಯರ್ಥಿಗಳಿಗೆ ಟಿಕೆಟ್ ದೊರೆಯದಿರುವ ತಿಸ್ರವಿದು. ಆರೆಸ್ಸೆಸ್ ಮಧ್ಯಪ್ರವೇಶಿಸಿ ರಾಜಿ ಮಾಡಿಸುತ್ತದೆ.
ಉತ್ತರಭಾರತದ ಪ್ರಭಾವೀ ಹಿಂದೂ ಪಂಥಗಳಲ್ಲೊಂದು ಗೋರಖನಾಥ ಪಂಥ. ಹಿಂದೂ ರಾಷ್ಟ್ರೀಯವಾದಿ ರಾಜಕಾರಣದಲ್ಲಿ ಈ ಪಂಥದ ತಲೆಯಾಳುಗಳು ಪ್ರಭಾವೀ ಪಾತ್ರ ವಹಿಸಿದ್ದವರು. ಪಂಥದ ಪ್ರಭಾವ ರಾಜಕಾರಣದಲ್ಲಿ ಆದಿತ್ಯನಾಥರ ನೆರವಿಗೆ ಬಂದದ್ದು ಹೌದು. ಆದರೆ ಕೋಮು ಧೃವೀಕರಣವನ್ನು ಕಟ್ಟಿ ನಿಲ್ಲಿಸಿ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ಬಾಚಿ ಗಳಿಸಿಕೊಟ್ಟದ್ದು ಹಿಂದು ಯುವವಾಹಿನಿ. ವಾಹಿನಿಯ ಸದಸ್ಯರಿಗೆ ಆದಿತ್ಯನಾಥರ ಮೇಲೆ ಎಣೆಯಿಲ್ಲದ ಭಕ್ತಿ. ಅವರನ್ನು ಹೆಸರಿನಿಂದ ಕರೆಯಬಾರದೆನ್ನುವಷ್ಟು ಗೌರವ. ಗೋರಕ್ಷ ಪೀಠಾಧೀಶ್ರವರ ಪರಮಪೂಜ್ಯ ಯೋಗಿ ಆದಿತ್ಯನಾಥಜೀ ಮಹಾರಾಜ್ ಎಂದೇ ಬಾರಿ ಬಾರಿಗೆ ಅವರನ್ನು ಸಂಬೋಧಿಸುವರು.
ಯೋಗಿ ಬಿಜೆಪಿಯಲ್ಲಿದ್ದರೂ ಪಕ್ಷದ ನಾಯಕರೊಂದಿಗೆ ಅವರ ಘರ್ಷಣೆ ಇದ್ದೇ ಇದೆ. ಹಲವು ಸಲ ಬಿಜೆಪಿಯ ವಿರುದ್ಧವೇ ಬಂಡಾಯ ಅಭ್ಯರ್ಥಿಗಳನ್ನು ಹೂಡಿದ್ದಾರೆ. ತಾವು ಹೂಡಿದ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನೂ ಮಾಡಿದ್ದಾರೆ. ಕಾಲ ಉರುಳಿದಂತೆ, ದಿನ ಕಳೆದಂತೆ ಮೊದಲಿಗಿಂತ ಮೆತ್ತಗಾಗಿದ್ದಾರೆ ಕೂಡ.

ಯೋಗಿ ನಾಯಕತ್ವವನ್ನು ಪ್ರಶ್ನಿಸುವ ವಿರೋಧದ ಕಿಡಿ ಆರದಂತೆ ಕಾಯತೊಡಗಿದೆ ಕೇಂದ್ರ ಬಿಜೆಪಿ ನಾಯಕತ್ವ. ಬಿಜೆಪಿಯ ಮಿತ್ರಪಕ್ಷ ಅಪನಾದಳದಿಂದ (ಸೋನೆಲಾಲ್) ಕೇಂದ್ರದಲ್ಲಿ ಮಂತ್ರಿಯಾಗಿರುವ ಅನುಪ್ರಿಯಾ ಪಟೇಲ್ ಯೋಗಿ ಆಡಳಿತ ಕುರಿತು ಸವಾಲೆತ್ತಿ ಪತ್ರಗಳನ್ನು ಬರೆಯುತ್ತಿದ್ದಾರೆ. ಅವುಗಳನ್ನು ಬಹಿರಂಗಗೊಳಿಸುತ್ತಲೂ ಇದ್ದಾರೆ. ಮತ್ತೊಂದು ಮಿತ್ರಪಕ್ಷ ನಿಷಾದ ಪಾರ್ಟಿಯು ಯೋಗಿಯವರ ಬುಲ್ಡೋಜರ್ ರಾಜಕೀಯವನ್ನು ಇತ್ತೀಚೆಗೆ ತೀವ್ರವಾಗಿ ಟೀಕಿಸಿದ್ದಾರೆ. ಗರೀಬರು ನಿರಾಶ್ರಿತರ ವಿರುದ್ಧ ಬುಲ್ಡೋಜರ್ ಚಲಾಯಿಸಿದರೆ ಅವರೆಲ್ಲ ಒಗ್ಗಟ್ಟಾಗಿ ನಮ್ಮನ್ನು ಸೋಲಿಸಲಿದ್ದಾರೆಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯವರೇ ಆದ ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಅವರು ಯೋಗಿ ವಿರುದ್ಧ ನಿರಂತರ ಮುಸುಕಿನ ಸಮರದಲ್ಲಿ ತೊಡಗಿದ್ದಾರೆ. ಸರ್ಕಾರಕ್ಕಿಂತ ಪಕ್ಷ ದೊಡ್ಡದು ಎಂಬ ಮಾತನ್ನು ಮತ್ತೆ ಮತ್ತೆ ಆಡುತ್ತಲೇ ಇದ್ದಾರೆ. ಈ ಬಹಿರಂಗ ವಿರೋಧದ ಹಿಂದೆ ಮೋದಿ-ಶಾ ಅವರ ಇಶಾರೆಯಿದೆ ಎನ್ನಲಾಗಿದೆ.
ಶಾಸಕರನ್ನು ಕಡೆಗಣಿಸಲಾಗಿದೆ, ನೌಕರಶಾಹಿಯ ಮಾತುಗಳಿಗೇ ಹೆಚ್ಚು ಬೆಲೆಯಿದೆ. ಶಾಸಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಅಧಿಕಾರಿಗಳ ಹಿಂದೆ ಅಲೆಯಬೇಕಾಗಿ ಬಂದಿದೆ ಎಂಬ ಬಿಜೆಪಿ ಶಾಸಕರ ದೂರುಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕೇಳಿ ಬಂದಿವೆ. ಪಕ್ಷದ ಕಾರ್ಯಕರ್ತರನ್ನೂ ಕಡೆಗಣಿಸಲಾಗಿದೆ ಎಂಬ ಆರೋಪ ಯೋಗಿ ಸರ್ಕಾರದ ಮೇಲಿದೆ.
ಲೋಕಸಭಾ ಚುನಾವಣೆಗಳ ಟಿಕೆಟ್ ಹಂಚಿಕೆಯ ಹಂತದಲ್ಲೂ ಯೋಗಿ ಮತ್ತು ದೆಹಲಿ ನಾಯಕತ್ವದ ನಡುವೆ ಭಿನ್ನಮತ ತಲೆದೋರಿತ್ತು. ಆದಿತ್ಯನಾಥ ಅವರನ್ನು ಇತರೆ ನಾಯಕರಂತೆ ಮೂಲೆಗುಂಪು ಮಾಡುವುದು ಅಷ್ಟೇನೂ ಸಲೀಸಲ್ಲ. ರಾಜಕೀಯವಾಗಿ ಮಾತ್ರವಲ್ಲ ಧಾರ್ಮಿಕವಾಗಿಯೂ ಅವರು ಬಲಿಷ್ಠರು. ಅವರು ಈಗಲೂ ಪ್ರಮುಖ ಮಠಾಧೀಶರು. ದೇಶದಲ್ಲಿ ನಾಥ ಸಂಪ್ರದಾಯದ ಅತಿ ಪ್ರಮುಖ ಮಠ ಎನಿಸಿರುವ ಗೋರಖನಾಥ ಮಂದಿರಕ್ಕೆ 1994ರಷ್ಟು ಹಿಂದೆಯೇ ಉತ್ತರಾಧಿಕಾರಿ ಆದವರು ಆದಿತ್ಯನಾಥ. ಈ ಮಠಕ್ಕೆ ನಡೆದುಕೊಳ್ಳುವ ಶ್ರದ್ಧಾಳುಗಳು ದೇಶಾದ್ಯಂತ ಹರಡಿದ್ದಾರೆ. ಗೋರಖನಾಥ ಮಠದ ಮಹಂತರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದರೆ ಕಟ್ಟರ್ ಹಿಂದೂಗಳಿಗೆ ತಪ್ಪು ಸಂದೇಶ ರವಾನೆ ಆಗುವ ಸಾಧ್ಯತೆಯಿದೆ.
ಅಂದಾಜು ಹತ್ತು ಲಕ್ಷ ಜನಸಂಖ್ಯೆಯ ಗೋರಖಪುರದ ಹಿಂದೂ ಯುವಕರನ್ನು ವಾಹಿನಿಗೆ ಭರದಿಂದ ಭರ್ತಿ ಮಾಡಿಕೊಳ್ಳಲಾಗಿತ್ತು. ಮೂವತ್ತು ಲಕ್ಷದಷ್ಟು ಜನಸಂಖ್ಯೆಯ ಉತ್ತರಪ್ರದೇಶದ ಈ ಪೂರ್ವೀ ಸೀಮೆ ಹೇಳಿ ಕೇಳಿ ಬಡತನದ ಬೆಂಗಾಡು. ವಾಹಿನಿಗೆ ಸೇರುವ ಉತ್ಸಾಹ ಯುವಕರಲ್ಲಿ ಉಕ್ಕಿ ಹರಿದಿತ್ತು. ಭರ್ತಿ ಮತ್ತು ಕಾರ್ಯವ್ಯಾಪ್ತಿ ಎರಡೂ ಪೂರ್ವೀ ಉತ್ತರಪ್ರದೇಶದ ಉದ್ದಗಲಕ್ಕೆ ವಿಸ್ತರಿಸಿತು. ಕೆಳಜಾತಿಯ ಹಿಂದೂಗಳೊಂದಿಗೆ ಕಲೆತು ಊಟ ಮಾಡಿ ಹಿಂದೂ ಒಗ್ಗಟ್ಟನ್ನು ತೋರಗೊಡುವುದು, ಸದಸ್ಯತ್ವ ಹೆಚ್ಚಿಸುವುದು ಹಾಗೂ ಸಾರ್ವಜಿಕ ಸಭೆಗಳು ಮತ್ತು ಮೆರವಣಿಗೆ ನಡೆಸುವುದು ವಾಹಿನಿಯ ಕಾರ್ಯಸೂಚಿಯಾಗಿತ್ತು. ಪ್ರತಿಯೊಂದು ಹಳ್ಳಿಯಿಂದ 250 ಯುವಕರನ್ನು ಒಟ್ಟು ಮಾಡಿ ಅವರ ಹೆಸರುಗಳ ಫಲಕಗಳನ್ನು ಹಳ್ಳಿಯಲ್ಲಿ ಬರೆದು ನಿಲ್ಲಿಸಲಾಗುತ್ತಿತ್ತು. ಈ ಎಲ್ಲ ಯುವಕರು ತಮ್ಮ ಮನೆಗಳ ಮೇಲೆ ತ್ರಿಕೋಣ ಕಾವಿ ಧ್ವಜಗಳನ್ನು ಹಾರಿಸಬೇಕಿತ್ತು. ಅಲ್ಪಸಂಖ್ಯಾತರಲ್ಲಿ ಭೀತಿಯನ್ನ ಬಿತ್ತಲು ತಮ್ಮ ಮುಂದಾಳು ಯೋಗಿ ಆದಿತ್ಯನಾಥರ ಕುರಿತು ಘೋಷಣೆಗಳನ್ನು ರೂಪಿಸಿ ಕೂಗಲಾಗುತ್ತಿತ್ತು. ಗೋರಖಪುರದಲ್ಲಿ ಬದುಕಬೇಕಿದ್ದರೆ ಯೋಗಿ… ಯೋಗಿ… ಮಂತ್ರವನು ಜಪಿಸಬೇಕು. ಪೂರ್ವಾಂಚಲದಲ್ಲಿ (ಪೂರ್ವೀ ಉತ್ತರಪ್ರದೇಶ) ಜೀವಿಸಬೇಕಿದ್ದರೆ ಯೋಗಿ ಹೆಸರು ನಾಲಗೆ ತುದಿಯಲ್ಲಿ ನಲಿಯಬೇಕು ಎಂಬಂತಹ ಆಕ್ರಮಣಕಾರಿ ಘೋಷಣೆಗಳು.
ಮುಖ್ಯಮಂತ್ರಿ ಆದ ನಂತರ ತಮ್ಮ ಹಿಂದೂ ಯುವವಾಹಿನಿಯನ್ನು ತಟಸ್ಥಗೊಳಿಸಿದ್ದರು ಯೋಗಿ. ಈ ವಾಹಿನಿ ಈಗ ಪುನಃ ಸಕ್ರಿಯ ಆಗತೊಡಗಿದೆ. ಬಿಜೆಪಿಯ ‘ಪಂಚತಾರಾ’ ಹಂತದ ಉನ್ನತ ಪ್ರಚಾರಕರಲ್ಲಿ ಒಬ್ಬರು ಯೋಗಿ. ದೇಶದ ನಾನಾ ಭಾಗಗಳಲ್ಲಿ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆಯಲಾಗುತ್ತದೆ. ಉಗ್ರಹಿಂದುತ್ವದ ವರ್ಚಸ್ಸು ಸಂಪಾದಿಸಿಕೊಂಡವರು. ಈ ಬಾಬತ್ತಿನಲ್ಲಿ ಮೋದಿ ಮತ್ತು ಶಾ ಅವರ ನಂತರದ ಹೆಸರೇನಾದರೂ ಇದ್ದರೆ ಅದು ಯೋಗಿಯವರದೇ.
ಜಾತಿಯ ಕಾರಣದಿಂದಲೂ ಅವರು ಪ್ರಭಾವಿ. ಉತ್ತರ ಭಾರತದ ಠಾಕೂರ್ ಅಥವಾ ರಜಪೂತ ಜಾತಿಗೆ ಸೇರಿದವರು. ಅವರನ್ನು ತಡವುವುದು ಉತ್ತರಪ್ರದೇಶ ಮಾತ್ರವಲ್ಲದೆ, ರಾಜಸ್ತಾನ, ಮಧ್ಯಪ್ರದೇಶ, ಬಿಹಾರದ ಠಾಕೂರ್ ಜಾತಿಯನ್ನು ಕೆಣಕಿದಂತೆ ಆದೀತು ಎಂಬ ವಾಸ್ತವವೂ ಮೋದಿ ಶಾ ಅವರನ್ನು ಸದ್ಯಕ್ಕಾದರೂ ತಕ್ಕಮಟ್ಟಿಗೆ ತಡೆದಿಟ್ಟಿದೆ.
2002ರ ಗೋಧ್ರಾ ಕೋಮು ಗಲಭೆಗಳ ನಂತರ ಅಂದಿನ ಪ್ರಧಾನಮಂತ್ರಿ ವಾಜಪೇಯಿ ಅವರು ಮೋದಿಯವರನ್ನು ಗುಜರಾತಿನ ಮುಖ್ಯಮಂತ್ರಿ ಪದವಿಯಿಂದ ಇಳಿಸಲು ಬಯಸಿದ್ದರು. ಆದರೆ ಅಡ್ವಾಣಿ ಅಡ್ಡ ಬಂದು ಮೋದಿಯವರನ್ನು ಕಾಪಾಡಿದರು.

2013ರಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯ ರೇಸ್ ನಲ್ಲಿ ಮೋದಿಯವರು ತಮ್ಮ ಗುರು ಅಡ್ವಾಣಿಯವರನ್ನು ಹಿಂದೆ ತಳ್ಳಿ ಮುಂದೆ ನುಗ್ಗಿದ್ದರು. 2014ರಲ್ಲಿ ಪ್ರಧಾನಿಯಾದರು. ತಮ್ಮ ತಲೆ ಕಾದಿದ್ದ ಅಡ್ವಾಣಿಯವರನ್ನು ಮಾರ್ಗದರ್ಶಕ ಮಂಡಲ ಎಂಬ ‘ಮುದಿ ದನಗಳ ದೊಡ್ಡಿ’ಗೆ ತಳ್ಳಿದರು ಎಂಬುದು ಅಡ್ವಾಣಿ ನಿಷ್ಠ ಹಳೆಯ ಬಿಜೆಪಿಗರ ದೂರು.
2017ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಹುದ್ದೆಗೆ ಮನೋಜ್ ಸಿನ್ಹಾ ಮತ್ತು ಕೇಶವಪ್ರಸಾದ್ ಮೌರ್ಯ ಅವರ ಹೆಸರುಗಳು ಕೇಳಿ ಬಂದಿದ್ದವು. ಆದರೆ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇಷ್ಟವಿಲ್ಲದೆ ಹೋದರೂ ಪರಿಸ್ಥಿತಿಯ ಒತ್ತಡಗಳಿಗೆ ಮಣಿದು ಮೋದಿ ಶಾ ಖುದ್ದು ಮುಂದೆ ನಿಂತು ಈ ಕೆಲಸ ಮಾಡಬೇಕಾಗಿ ಬಂದಿತ್ತು.
ಮೋದಿಯವರ ನಂತರದ ಸ್ಥಾನಕ್ಕಾಗಿ ಯೋಗಿ ಮತ್ತು ಅಮಿತ್ ಶಾ ಅವರ ನಡುವೆ ತೆರೆಮರೆಯ ಕದನ ನಡೆದಿದೆ. ಮೋದಿಯವರು ಶಾ ಜೊತೆಗಿದ್ದಾರೆ. ಈ ತಿಕ್ಕಾಟದ ತಳಮಳಗಳು ಉತ್ತರಪ್ರದೇಶದ ಬಿಜೆಪಿಯಲ್ಲಿ ಕಾಣತೊಡಗಿವೆ.
ಇದೇ ಆಗಸ್ಟ್ ನಲ್ಲಿ ಉತ್ತರಪ್ರದೇಶ ವಿಧಾನಸಭೆಯ 10 ಸೀಟುಗಳಿಗೆ ಉಪಚುನಾವಣೆ ನಡೆಯಲಿದೆ. ಈ ಚುನಾವಣೆಯ ನಂತರ ಮುಂದಿನ ರಾಜಕೀಯ ದಾಳಗಳು ಉರುಳಲಿವೆ. ಈ ದಾಳಗಳು ಮುಖ್ಯಮಂತ್ರಿಯ ಬಲಿಯನ್ನೇ ಕೇಳಲಿವೆಯೇ ಅಥವಾ ಯೋಗಿ ಸರ್ಕಾರದಲ್ಲಿ ಕೆಲ ಬದಲಾವಣೆಗಳಿಗೆ ಸೀಮಿತ ಆಗಲಿವೆಯೇ ಎಂದು ಕಾದು ನೋಡಬೇಕಿದೆ.

ಡಿ ಉಮಾಪತಿ
ಹಿರಿಯ ಪತ್ರಕರ್ತರು
ನಮ್ಮ ಪಾಲಿಗಂತೂ ಮೋದಿ ಶಾ ಯೋಗಿ ಸಂಘ ಇತ್ಯಾದಿಗಳೆಲ್ಲ ಕಮ್ಯುನಲ್ ವಿಷ ಜಂತುಗಳು.ಎಷ್ಟೆ ಒಳ ಹೊಡದಾಟ ಇದ್ದರೂ ದೇಶ ಹಾಳು ಮಾಡುವ ಅಜೆಂಡಾ ಕುರಿತು ಅವರಲ್ಲಿ ಮತ್ತು ಬೇಧ ಇರಲ್ಲ.
ಈ ಹೊಲಸು ಗ್ಯಾಂಗು ಪಾರ್ಲಿಮೆಂಟಿನಲ್ಲಿ 150 ಕ್ಕೆ ಇಳಿದಾಗ ಮಾತ್ರ ದೇಶ ಸ್ವಲ್ಪ ನಿಟ್ಟುಸಿರು ಬಿಡಲು ಸಾಧ್ಯ