ಸಿದ್ದರಾಮಯ್ಯನವರು ಕೆಲವೊಮ್ಮೆ ಒಳ್ಳೆಯ ಉದ್ದೇಶಗಳಿಗೂ ಕೆಲವೊಮ್ಮೆ ತಪ್ಪಾದ ವಿಚಾರಗಳಿಗೂ ಮಾತುಕೊಟ್ಟು ಎಡವಟ್ಟು ಮಾಡಿಕೊಳ್ಳುವುದೂ ಉಂಟು. ಆದರೆ ಅವರು ಚನ್ನರಾಯಪಟ್ಟಣದ ಸಣ್ಣಸಣ್ಣ ಹಿಡುವಳಿದಾರರಿಗೆ ಬೆಂಬಲ ನೀಡಿ ಸಂದಿಗ್ಧತೆಗೆ ಒಳಗಾಗಿದ್ದು ಸುಳ್ಳಲ್ಲ.
2025ನೇ ಇಸವಿಯ ಜುಲೈ 15ನೇ ತಾರೀಖು ದಿಟ್ಟ ಹೋರಾಟಗಳ ಚರಿತ್ರೆಯಲ್ಲಿ ದಾಖಲಾಗುವುದು ನಿಶ್ಚಿತ. ಅನ್ನ ಕೊಡುವ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಕದಲದೆ ನಿಂತ ರೈತರು ಮತ್ತು ಕರ್ನಾಟಕದ ಜನಪರ ಸಂಘಟನೆಗಳು ದಾಖಲಿಸಿದ ವಿಶಿಷ್ಟ ಚಳವಳಿಯಾಗಿ, ಅವಿಸ್ಮರಣೀಯ ಪಠ್ಯವಾಗಿ ‘ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ಭೂಸ್ವಾಧೀನ ವಿರೋಧಿ ಹೋರಾಟ’ ಉಳಿದು ಹೋಗುತ್ತದೆ. ಗೆಲುವು ಅಸಾಧ್ಯ ಎನ್ನುವಂತಹ ಘಳಿಗೆಯಲ್ಲಿ ಗೆಲುವೊಂದು ದಾಖಲಾಗಿದೆ. ಇದು ಅಕ್ಷರಶಃ ಜನರ ಗೆಲುವು.
ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಗ್ರಾಮಗಳ ಭೂಮಿಯನ್ನು ಕೆಐಎಡಿಬಿ ವ್ಯಾಪ್ತಿಯ ಸ್ವಾಧೀನಕ್ಕೆ ಆರಂಭಿಕ ಅಧಿಸೂಚನೆ ಹೊರಡಿಸಿದ್ದು ಬಿಜೆಪಿ ಸರ್ಕಾರ. ಅಂತಿಮ ಅಧಿಸೂಚನೆ ಹೊರಡಿಸಿದ್ದು ಕಾಂಗ್ರೆಸ್ ಸರ್ಕಾರ. ಈಗಾಗಲೇ ಸಾವಿರಾರು ಎಕರೆ ಭೂಮಿಯನ್ನು ಕಳೆದುಕೊಂಡು ಬದುಕಿನ ಪಾಠ ಕಲಿತಿದ್ದ ರೈತರು, ಮತ್ತೆ ನಾವು ಈ ಮಣ್ಣನ್ನು ಮಾರಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದರು. ಬಿಜೆಪಿ ಅವಧಿಯಲ್ಲಿ ಶುರುವಾದ ಹೋರಾಟ ಕಾಂಗ್ರೆಸ್ ಕಾಲಕ್ಕೂ ಮುಂದುವರಿಯಿತು. ಚನ್ನರಾಯಪಟ್ಟಣದಲ್ಲಿ ಎದ್ದ ಹೋರಾಟದ ಟೆಂಟ್‌ಗೆ ಬರೋಬ್ಬರಿ 1198 ದಿನ ತುಂಬಿದ ಹೊತ್ತಿನಲ್ಲಿ ಸರ್ಕಾರ ತನ್ನ ಅಧಿಸೂಚನೆಯನ್ನು ವಾಪಸ್ ಪಡೆಯಿತು.
ಕಟ್ಟಕಡೆಯ ಭರವಸೆಯಾಗಿ ಉಳಿದಿದ್ದ ಸಿದ್ದರಾಮಯ್ಯನವರು ಕೊನೆಗೂ ರೈತರ ಕೈಬಿಡಲಿಲ್ಲ. ನಿರಂತರ ಹೋರಾಡುತ್ತಿದ್ದ 13 ಗ್ರಾಮಗಳ ಪರ ದಲಿತ, ರೈತ, ಕಾರ್ಮಿಕ, ಮಹಿಳಾ ಮತ್ತು ವಿದ್ಯಾರ್ಥಿ ಸಂಘಟನೆಗಳು ಗಟ್ಟಿಯಾಗಿ ನಿಂತಾಗ ಅದು ಸಿದ್ದರಾಮಯ್ಯನವರಿಗೂ ಶಕ್ತಿಯಾಗಿ ಕಂಡಿತು. ಅಂತಿಮವಾಗಿ ಮುಖ್ಯಮಂತ್ರಿಯವರು, “ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಿದೆ. ಕೆಲವು ರೈತರು ಜಮೀನು ನೀಡಲು ಸಿದ್ಧರಿರುವುದಾಗಿ ಮುಂದೆ ಬಂದಿದ್ದಾರೆ. ಜಮೀನು ನೀಡಲು ಇಚ್ಛಿಸುವವರ ಜಮೀನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿದ್ದು, ಅವರಿಗೆ ಹೆಚ್ಚಿನ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುವುದು” ಎಂದು ಘೋಷಿಸಿದರು.

ಸಿದ್ದರಾಮಯ್ಯನವರು ಏಕಾಏಕಿ ಈ ನಿರ್ಧಾರವನ್ನು ಪ್ರಕಟಿಸಲು ಸಾಧ್ಯವಾಗಲಿಲ್ಲ. ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವಂತಹ ರಾಜಕೀಯ ದಿನಗಳಲ್ಲಿ ಅವರು ಇಲ್ಲದಿರುವುದು ಸ್ಪಷ್ಟ. ಆದರೆ ಅವರೊಳಗಿರುವ ಸಮಾಜವಾದವು ಅಷ್ಟು ಸುಲಭವಾಗಿ ಜನರನ್ನು ಕೈಬಿಡಲು ಒಪ್ಪಲಿಲ್ಲ. ಸದ್ಯದ ಪರಿಸ್ಥಿತಿಗಳು, ಅವರ ಸುತ್ತ ನಡೆಯುವ ರಾಜಕಾರಣಗಳನ್ನೆಲ್ಲ ನೋಡಿದರೆ ಸಿದ್ದರಾಮಯ್ಯನವರು ಚಳವಳಿಯ ಪರ ನಿಂತಿದ್ದು ಹೇಗೆಂಬುದು ಅರ್ಥವಾಗುತ್ತದೆ.
ಹೇಳಿಕೇಳಿ ಸಿದ್ದರಾಮಯ್ಯನವರು ರೈತ ಮತ್ತು ಸಮಾಜವಾದಿ ಚಳವಳಿಗಳ ಹಿನ್ನೆಲೆಯಿಂದ ಬಂದ ವ್ಯಕ್ತಿ. ಮಾತುಕೊಟ್ಟರೆ ತಪ್ಪಬಾರದೆಂಬ ನೈತಿಕತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಕೆಲವೇ ಕೆಲವು ರಾಜಕಾರಣಿಗಳ ಪೈಕಿ ಅವರೂ ಒಬ್ಬರು. ಕೆಲವೊಮ್ಮೆ ಒಳ್ಳೆಯ ಉದ್ದೇಶಗಳಿಗೂ ಕೆಲವೊಮ್ಮೆ ತಪ್ಪಾದ ವಿಚಾರಗಳಿಗೂ ಮಾತುಕೊಟ್ಟು ಎಡವಟ್ಟು ಮಾಡಿಕೊಳ್ಳುವುದೂ ಉಂಟು. ಆದರೆ ಅವರು ಚನ್ನರಾಯಪಟ್ಟಣದ ಸಣ್ಣಸಣ್ಣ ಹಿಡುವಳಿದಾರರಿಗೆ ಬೆಂಬಲ ನೀಡಿ ಸಂದಿಗ್ಧತೆಗೆ ಒಳಗಾಗಿದ್ದು ಸುಳ್ಳಲ್ಲ. ಒಳ್ಳೆಯ ವಿಚಾರದ ಪರ ನಿಂತು ಅವರು ಇಕ್ಕಟ್ಟಿಗೆ ಸಿಲುಕಿದ್ದರು.
ಇದನ್ನೂ ಓದಿರಿ: ಮಹಿಳಾ ಸಬಲೀಕರಣ| ಮಹಿಳೆಯರ ಜೀವನಮಟ್ಟ ಸುಧಾರಿಸಲು ನೆರವಾದ ‘ಶಕ್ತಿ ಯೋಜನೆ’
ಆಗಿನ್ನೂ ಬಿಜೆಪಿ ಅಧಿಕಾರದಲ್ಲಿತ್ತು. ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದರು. ಚನ್ನರಾಯಪಟ್ಟಣ ರೈತರು ಬಿಜೆಪಿಯ ದಬ್ಬಾಳಿಕೆಗಳಿಗೆ ಜಗ್ಗದೆ, ಬೆಂಗಳೂರಿನ ಫ್ರೀಡಂಪಾರ್ಕ್‌ಗೆ ಬಂದು ಕೂತರು. ಧರಣಿ ಸ್ಥಳಕ್ಕೆ ಬಿ.ಆರ್.ಪಾಟೀಲರೊಂದಿಗೆ ಬಂದ ಸಿದ್ದರಾಮಯ್ಯನವರು, “ಕೈಗಾರಿಕೆಗಳು ಅಭಿವೃದ್ಧಿಯಾಗಬೇಕು ನಿಜ. ಹಾಗೆಂದು ಫಲವತ್ತಾದ ಕೃಷಿ ಭೂಮಿಯನ್ನು ಕಸಿದುಕೊಳ್ಳಬಾರದು. ಚನ್ನರಾಯಪಟ್ಟಣ ಜನರ ಹೋರಾಟದ ಜೊತೆ ನಾನಿದ್ದೇನೆ” ಎಂದಿದ್ದರು. ಆದರೆ ಅವರು, “ಅಧಿಕಾರಕ್ಕೆ ಬಂದರೆ ಭೂಸ್ವಾಧೀನ ಆದೇಶವನ್ನು ಕೈಬಿಡಲಾಗುವುದು” ಎಂದೇನೂ ಹೇಳಿರಲಿಲ್ಲ. “ನೋಡಿ ಸಾರ್, ನೀವು ಹೋರಾಟಕ್ಕೆ ಬೆಂಬಲ ನೀಡಿದಿರೇ ಹೊರತು, ಭೂಸ್ವಾಧೀನ ಕೈಬಿಡುವುದಾಗಿ ಮಾತು ಕೊಟ್ಟಿಲ್ಲ” ಎಂದು ಅವರನ್ನು ದಿಕ್ಕುತಪ್ಪಿಸುವ ಕೆಲಸಗಳಾದವು. ಆಗ ಹೊರಬಿದ್ದಿದ್ದು ಅಂತಿಮ ಅಧಿಸೂಚನೆ. “ಹೋರಾಟವನ್ನು ಬೆಂಬಲಿಸುತ್ತೇನೆ” ಎನ್ನುವುದು ಕೂಡ ಡಿನೋಟಿಫೈ ಮಾಡುತ್ತೇವೆ ಎಂಬ ಅರ್ಥವನ್ನೇ ಹೊಮ್ಮಿಸುತ್ತದೆ ಎಂದು ಮನವರಿಕೆ ಮಾಡಲು ಚಳವಳಿಯನ್ನು ತೀವ್ರವಾಗಿಸಬೇಕಾದದ್ದು ವಿಪರ್ಯಾಸವೇ ಆಗಿತ್ತು. ನೀವು ಮಾತು ಕೊಟ್ಟಿದ್ದೀರಿ ಎಂಬುದನ್ನು ಅವರಿಗೆ ಅರ್ಥೈಸಿ ಹೇಳುವುದು ಅನಿವಾರ್ಯವೂ ಆಯಿತು. ತಾವೇ ಅಧಿಕಾರಕ್ಕೇರಿದ ಮೇಲೆ ಸಿದ್ದರಾಮಯ್ಯ ಹಲವು ರೀತಿಯಲ್ಲಿ ಅಡಕತ್ತರಿಗೆ ಸಿಲುಕಿಬಿಟ್ಟರು.
ಕೇಂದ್ರದಲ್ಲಿ ಸಚಿವರಾಗಿದ್ದಂತಹ ಹಿರಿಯ ರಾಜಕಾರಣಿ ಕೆ.ಎಚ್.ಮುನಿಯಪ್ಪನವರು ಮೊದಲ ಬಾರಿಗೆ ದೇವನಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದುಬಂದು ಆಹಾರ ಖಾತೆಯ ಸಚಿವರೂ ಆದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯನ್ನು ಅವರಿಗೆ ವಹಿಸಲಾಯಿತು. ಸಿದ್ದರಾಮಯ್ಯನವರಿಗೆ ಅತ್ಯಾಪ್ತರಾದ ಎಂ.ಬಿ.ಪಾಟೀಲರು ಬೃಹತ್ ಕೈಗಾರಿಕಾ ಸಚಿವರಾದರು. ಈ ಇಬ್ಬರು ರಾಜಕೀಯ ಧುರೀಣರಿಗೆ ಭೂಸ್ವಾಧೀನ ಮಾಡಿಕೊಳ್ಳುವ ಗುರಿಯಂತೂ ಸ್ಪಷ್ಟವಾಗಿ ಕಾಣುತ್ತಿದ್ದವು.
ನಾವು ಸರ್ಕಾರದ ಪ್ರಭಾವಿ ಖಾತೆಗಳ ಕಡೆಗೆ ಒಮ್ಮೆ ನೋಡುವುದು ಸೂಕ್ತ. ಬೆಂಗಳೂರು ನಗರಾಭಿವೃದ್ಧಿ, ಭಾರೀ ನೀರಾವರಿ, ಲೋಕೋಪಯೋಗಿ ಮತ್ತು ಇಂಧನ- ಈ ನಾಲ್ಕು ಇಲಾಖೆಗಳನ್ನು ಬಿಟ್ಟರೆ ಶಕ್ತಿಶಾಲಿ ಅನಿಸುವುದು ಬೃಹತ್ ಕೈಗಾರಿಕಾ ಇಲಾಖೆ. ಭೂ ಸ್ವಾಧೀನದಂತಹ ಕ್ರಮಗಳನ್ನು ತೆಗೆದುಕೊಂಡರಷ್ಟೇ ಕೈಗಾರಿಕಾ ಖಾತೆಯ ಮಹತ್ವ ಹೆಚ್ಚುತ್ತದೆ, ಅಲ್ಲಿ ಸಂಪತ್ತಿನ ಹರಿವು ಉಂಟಾಗುತ್ತದೆ. ಆದರೆ ರೈತರು ಅದನ್ನು ವಿರೋಧಿಸಿದರೆ ಏನು ಮಾಡುವುದು? ಮತ್ತೊಂದೆಡೆ ಕೈಗಾರಿಕೆಗಳ ಸ್ಥಾಪನೆಯ ಸ್ಪರ್ಧಾತ್ಮಕತೆಯಲ್ಲಿ ನೆರೆಯ ರಾಜ್ಯಗಳು ಪ್ರಭಾವವನ್ನು ಬೆಳೆಸಿಕೊಳ್ಳುತ್ತಲೇ ಇವೆ. ಆ ಸ್ಪರ್ಧೆ ಕೇರಳದಿಂದಲೋ ಮಹಾರಾಷ್ಟ್ರದಿಂದಲೋ ದೊಡ್ಡ ಮಟ್ಟದಲ್ಲಿ ಉಂಟಾಗುವುದಿಲ್ಲ. ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಹೆಚ್ಚಿನ ಸ್ಪರ್ಧೆ ಎದುರಾಗುತ್ತದೆ. ಅದರಲ್ಲೂ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿರುವ ಚಂದ್ರಬಾಬು ನಾಯ್ಡು ಅವರು ಒಂದು ಕಾಲದಲ್ಲಿ ತನ್ನನ್ನು ‘ನಾನು ಆಂಧ್ರಪ್ರದೇಶದ ಸಿಇಒ’ ಎಂದು ಕರೆದುಕೊಂಡವರು. ಹೂಡಿಕೆಗಳನ್ನು ತನ್ನತ್ತ ಎಳೆದುಕೊಳ್ಳುವಲ್ಲಿ ನಾಯ್ಡು ನಿಸ್ಸೀಮರು. ಗಡಿಯ ಭಾಗದಲ್ಲಿ ಬರುವ ಮಡಕಶಿರಾದಿಂದ ಹಿಡಿದು, ಪೆನಗೊಂಡವರೆಗೂ ಕೈಗಾರಿಕಾ ಪ್ರದೇಶ ವೃದ್ಧಿಗೆ ಆಂಧ್ರ ಸರ್ಕಾರ ಹೊರಟಿದೆ. ಇವೆಲ್ಲವೂ ಬೆಂಗಳೂರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮಾಡಿರುವ ಕೈಗಾರಿಕಾ ಯೋಜನೆಗಳು. ತೆಲಂಗಾಣ ರಚನೆಯಾದ ಮೇಲೆ ಹೈದ್ರಾಬಾದ್ ಆಂಧ್ರದಿಂದ ಕೈತಪ್ಪಿತು. ಹೊಸ ರಾಜಧಾನಿ ಅಮರಾವತಿ ಈಗಷ್ಟೇ ಬೆಳೆಯುತ್ತಿರುವ ಶಿಶು. ಹೀಗಾಗಿ ಬೆಂಗಳೂರು ಗಡಿಗೆ ಹೊಂದಿಕೊಂಡ ಆಂಧ್ರ ಭಾಗಗಳಲ್ಲಿ ಕೈಗಾರಿಕೆಗಳು ತಲೆ ಎತ್ತಿದರೆ ಆ ರಾಜ್ಯಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಇತ್ತ ಬೆಂಗಳೂರು ಗಡಿಗೆ ಹೊಂದಿಕೊಂಡಂತೆ ತಮಿಳಿನಾಡಿನ ಹೊಸೂರು ಕೈಗಾರಿಕಾ ಪ್ರದೇಶವಿದೆ. ಈ ಭಾಗವು ತೀವ್ರಗತಿಯಲ್ಲಿ ಪ್ರಗತಿ ಸಾಧಿಸುತ್ತಿದ್ದು ವಿಮಾನ ನಿಲ್ದಾಣ ಅಭಿವೃದ್ಧಿಗೂ ಸ್ಟಾಲಿನ್ ನೇತೃತ್ವದ ಸರ್ಕಾರ ಯೋಜನೆಗಳನ್ನು ರೂಪಿಸಿದೆ.

ಆಂಧ್ರ ಮತ್ತು ತಮಿಳುನಾಡು ಯೋಜಿಸಿರುವ ಕೈಗಾರಿಕಾ ಯೋಜನೆಗಳು ಬೆಂಗಳೂರಿನ ಅನುಕೂಲಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿವೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಸುತ್ತ ಜಮೀನು ಇಲ್ಲವಾಗಿ, ನಾವು ಈ ಕೈಗಾರಿಕೆಗಳನ್ನು ತರದಿದ್ದರೆ ಸ್ಪರ್ಧಾತ್ಮಕತೆಯನ್ನು ಎದುರಿಸಿ ಉಳಿಯುವುದು ಕಷ್ಟ ಎಂಬುದು ಎಂ.ಬಿ.ಪಾಟೀಲರಂತಹ ಸಚಿವರ ಯೋಚನೆ. ಆದರೆ ಭೂಮಿಯನ್ನು ಕೊಡದಿರಲು ನಿರ್ಧರಿಸಿದ ರೈತರ ಅಂತರಾಳವನ್ನು ಅರ್ಥಮಾಡಿಕೊಳ್ಳುವವರು ಯಾರು? ಕಟ್ಟಿಕೊಂಡ ಬದುಕು ಬೀದಿಪಾಲಾಗುತ್ತದೆ ಎಂದು ಅರಿತಿರುವ ಜನರಿಗೆ ಭರವಸೆ ಯಾರು?- ಇಂತಹ ಸಂದರ್ಭದಲ್ಲಿ ತಮ್ಮ ಆಗ್ರಹವನ್ನು ಕೇಳಿಸಿಕೊಳ್ಳಬಲ್ಲ ವ್ಯಕ್ತಿಯಾಗಿ ಸಿದ್ದರಾಮಯ್ಯನವರು ಕಂಡಿದ್ದು ಅತಿಶಯೋಕ್ತಿಯೇನಲ್ಲ.
ರೈತರ ನ್ಯಾಯೋಚಿತ ಆಗ್ರಹವು ಸಿದ್ದರಾಮಯ್ಯ ಸಂಪುಟದ ಹಲವು ಮಂದಿಗೆ ಅರ್ಥವಾಗುವುದಿಲ್ಲ. ಭೂಸ್ವಾಧೀನ ಮಾಡಿಕೊಳ್ಳದಿದ್ದರೆ ಸರ್ಕಾರ ನಡೆಸುವುದು ಹೇಗೆ ಎಂಬುದು ಅಂಥವರ ವಾದ. ತಮಿಳುನಾಡು ಸರ್ಕಾರ ತನ್ನ ರಾಜ್ಯದ ವಿವಿಧೆಡೆಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ವೃದ್ಧಿ ಮಾಡಿದೆ. ಅದೇ ಮಾದರಿಯಲ್ಲಿ ಕರ್ನಾಟಕವೂ ಹೆಜ್ಜೆ ಇಟ್ಟು, ರಾಜ್ಯದ ಬೇರೆ ಭಾಗಗಳಲ್ಲಿ ಕೈಗಾರಿಕೆಗಳನ್ನು ತೆರೆಯಬೇಕು ಎನ್ನುವ ಸಲಹೆಗಳನ್ನು ಅನೇಕ ಸಚಿವರು ಅಲ್ಲಗಳೆಯುವುದಿಲ್ಲ. ಆದರೆ ಎಲ್ಲರಿಗೂ ತಕ್ಷಣಕ್ಕೆ ಕಾಣುವ ಚಿನ್ನದ ಮೊಟ್ಟೆ ಇಡುವ ಕೋಳಿ ಎಂದರೆ ‘ಬೆಂಗಳೂರು’ ಮಾತ್ರ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡಿ, ಅವುಗಳು ಫಲಕೊಡಬೇಕಾದರೆ ಎರಡು ದಶಕಗಳೇ ಬೇಕಾಗುತ್ತದೆ ಎಂದು ನಂಬಿದವರೇ ಹೆಚ್ಚು. ಇದು ಕೇವಲ ಕರ್ನಾಟಕದ ಸಚಿವರ ಗೋಳಷ್ಟೇ ಅಲ್ಲ, ಜಾಗತಿಕ ವಾತಾವರಣದಲ್ಲಿ ಇಡೀ ಜಗತ್ತಿನ ಬಹುತೇಕ ರಾಷ್ಟ್ರಗಳು ಇಂತಹ ಸಮಸ್ಯಾತ್ಮಕ ಅಭಿವೃದ್ಧಿ ಮಾದರಿಯ ಹಿಂದೆ ಓಡುತ್ತಿವೆ ಎಂಬುದನ್ನು ಗಮನಿಸಬೇಕಾಗುತ್ತದೆ. ಈ ಮಾದರಿಯು ಜನರ ಹಿತವನ್ನು ಕಡೆಗಣಿಸುತ್ತದೆ ಎಂದು ಅಂತರಾಳದಿಂದ ನೋಡಬಲ್ಲ ಸದ್ಯದ ರಾಜಕಾರಣಿ ಸಿದ್ದರಾಮಯ್ಯ ಮಾತ್ರವಾಗಿ ಕಾಣಿಸುತ್ತಾರೆ.
ಇದನ್ನೂ ಓದಿರಿ: ‘ಕೆಂಪು, ನೀಲಿ, ಹಸಿರು ಗೆದ್ದವು’; ಕೊಟ್ಟ ಮಾತು ಉಳಿಸಿಕೊಂಡ ಸಿದ್ದರಾಮಯ್ಯಗೆ ಅಭಿನಂದನೆ
ಸಿದ್ದರಾಮಯ್ಯನವರು ಎಪ್ಪತ್ತರ ದಶಕದಲ್ಲಿದ್ದ ಮೌಲ್ಯಗಳ ಉತ್ಪನ್ನ. ಅಂದಿನ ಸಮಾಜವಾದ, ಸಾಮಾಜಿಕ ನ್ಯಾಯ, ರೈತ ಮತ್ತು ಬಡವರ ಪರವಾದ ಧೋರಣೆ, ಭೂಮಿ ಹಕ್ಕಿನ ಪ್ರಶ್ನೆ ಮೊದಲಾದ ಮೌಲ್ಯಗಳನ್ನು ತಕ್ಕಮಟ್ಟಿಗಾದರೂ ಇಂದಿಗೂ ಉಸಿರಾಡುತ್ತಿರುವ ವ್ಯಕ್ತಿ ಸಿದ್ದರಾಮಯ್ಯ. ಸಮಾಜವಾದಿ ಹಿನ್ನಲೆಯಿಂದ ಬಂದ ದೇಶದ ಯಾವುದೇ ರಾಜಕಾರಣಿಗಳಿಗೆ ಹೋಲಿಸಿದರೂ ಸಿದ್ದರಾಮಯ್ಯನವರು ತುಸು ಭಿನ್ನವಾಗಿಯೂ ತಮ್ಮ ಹಳೆಯ ಬೇರುಗಳನ್ನು ಉಳಿಸಿಕೊಂಡವರಾಗಿಯೂ ಕಾಣುತ್ತಾರೆ. ಒಂದು ಕಡೆ ತಮ್ಮನ್ನು ರೂಪಿಸಿದ ಆ ಮೌಲ್ಯಗಳೊಂದಿಗೆ ಇದ್ದು, ಇನ್ನೊಂದು ಕಡೆ ಇಂದಿನ ರಾಜಕೀಯ ಅನಿವಾರ್ಯತೆಗಳನ್ನೂ ಅರಿತು ನಡೆಯಬೇಕಾದ ಪರಿಸ್ಥಿತಿಗಳು ಸಿದ್ದರಾಮಯ್ಯನವರ ಸುತ್ತ ಸೃಷ್ಟಿಯಾಗುತ್ತಲೇ ಇರುತ್ತವೆ. ಸುತ್ತ ಇರುವ ಜನರು ಬೇರೆಯದ್ದೇ ಆದ ಆಲೋಚನೆಗಳನ್ನು ಹೊಂದಿರುವಾಗ, ಅಂಥವರ ನಡುವೆ ಒಂಟಿ ಕತ್ತಿ ಹಿಡಿದುಕೊಂಡು ಹೋರಾಡುತ್ತಿರುವ ವ್ಯಕ್ತಿಯಂತೆ ಸಿದ್ದರಾಮಯ್ಯ ಕಾಣತೊಡಗುತ್ತಾರೆ. ರಾಜಕೀಯ ಅಸ್ತಿತ್ವದ ಪ್ರಶ್ನೆಗಳು ಬಂದಾಗ, ತಮ್ಮ ಸುತ್ತಲೂ ಭ್ರಷ್ಟಾತಿಭ್ರಷ್ಟರು ಹುಟ್ಟಿಕೊಳ್ಳದಂತೆ ತಡೆಯುವಲ್ಲಿ ಸಿದ್ದರಾಮಯ್ಯನಂತಹ ರಾಜಕಾರಣಿಗಳೂ ಅಸಹಾಯಕರು. ಇಂತಹ ರಾಜಕೀಯ ವಾತಾವರಣ ಈ ದಿನಮಾನಗಳದ್ದು.
ಈಗ ನೋಡುತ್ತಿರುವ ಮಾದರಿಯೇ ನಿಜವಾದ ಅಭಿವೃದ್ಧಿ ಪಥ ಎಂದು ಪ್ರಾಮಾಣಿಕವಾಗಿ ನಂಬಿರುವ ಅನೇಕ ರಾಜಕಾರಣಿಗಳಲ್ಲಿ ಹಳೆಯ ಮೌಲ್ಯಗಳನ್ನು ಹುಡುಕುವುದು ಅಸಾಧ್ಯ. ಅಷ್ಟೇನೂ ಹಣದ ಆಸೆಗೆ ಬೀಳದ ರಾಜಕಾರಣಿಗಳು ಕೂಡ ಬೆಂಗಳೂರೇ ಅಂತಿಮ ಆಯ್ಕೆಯಾಗಿ ಪರಿಗಣಿಸುತ್ತಾರೆ. “ಇಲ್ಲಿ ಭೂ ಸ್ವಾಧೀನ ಆಗಬೇಕು, ಇಲ್ಲವಾದರೆ ನಾವು ಉಳಿಯಲ್ಲ” ಎನ್ನುವ ನಿಲುವಿಗೆ ಬಂದುಬಿಡುತ್ತಾರೆ. “ಗ್ಯಾರಂಟಿಗಳಿಗೆ ಹಣ ಬೇಕು, ಬೊಕ್ಕಸಗಳನ್ನು ತುಂಬಿಸಲೇಬೇಕು, ಇವೆಲ್ಲವೂ ತತಕ್ಷಣವೇ ಆಗುತ್ತಿರಬೇಕು, ಎಲ್ಲದ್ದಕ್ಕೂ ನೀವು (ಸಿಎಂ) ಒಪ್ಪಿಕೊಂಡು ಬಿಡುತ್ತೀರಿ, ಅತಿಥಿ ಉಪನ್ಯಾಸಕರ ಹಣ ಹೆಚ್ಚಿಸುವುದಾಗಿ ಹೇಳುತ್ತೀರಿ, ಪೌರಕಾರ್ಮಿಕರನ್ನು ಕಾಯಂ ಮಾಡುತ್ತೀರಿ, ಶೇ.3ಕ್ಕಿಂತ ಕಡಿಮೆ ವಿತ್ತೀಯ ಕೊರತೆ ಇರಬಾರದು ಎನ್ನುತ್ತೀರಿ, ಎಲ್ಲಿಂದ ದುಡ್ಡು ಬರುತ್ತದೆ? ಇತ್ತ ಭೂಮಿಯನ್ನು ಕೈಗಾರಿಕೆಗಳಿಗೆ ಸ್ವಾಧೀನ ಮಾಡಿಕೊಳ್ಳಬೇಡಿ ಎಂದರೆ ಏನು ಮಾಡುವುದು?” ಎಂದು ಮುಖ್ಯಮಂತ್ರಿಯವರ ಸುತ್ತ ಪ್ರಶ್ನೆಗಳನ್ನು ಸುರಿಸುತ್ತಾರೆ. ಇಂತಹ ಅಡಕತ್ತರಿಯಲ್ಲಿದ್ದ ಮುಖ್ಯಮಂತ್ರಿಯವರು ಅಂತಿಮವಾಗಿ ಜನಪರ ಸಂಘಟನೆಗಳ ಮುಖಂಡರ ಕೈ ಹಿಡಿದು, ಮಂದಹಾಸ ಬೀರಿ ಹೋರಾಟದ ಪರ ನಿಂತಿದ್ದು ಹೇಗೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.
ಎಪ್ಪತ್ತರ ದಶಕಗಳ ಮೌಲ್ಯಗಳನ್ನು ಎದೆಯಲ್ಲಿ ಉಳಿಸಿಕೊಂಡಿರುವ ಸಿದ್ದರಾಮಯ್ಯವರಲ್ಲದೆ ಬೇರೆ ಯಾರಾದರೂ ಸಿಎಂ ಸ್ಥಾನದಲ್ಲಿ ಇದ್ದರೆ ಖಂಡಿತವಾಗಿಯೂ ಗೇಮ್ ಪ್ಲ್ಯಾನ್ ಮಾಡುತ್ತಿದ್ದರು. ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ದಿನ ಸಮೀಪಿಸುತ್ತಿರುವ ಹೊತ್ತಿನಲ್ಲಿ ಒಂದು ಗುಂಪು, “ರೈತರು ಭೂಮಿ ಕೊಡಲು ಸಿದ್ಧವಿದ್ದಾರೆ” ಎಂದು ಬಂದಿತು. ಇಂತಹ ಆಟಗಳ ಹಿಂದೆ ಖಂಡಿತವಾಗಿಯೂ ಸಿದ್ದರಾಮಯ್ಯ ಇರಲಿಲ್ಲವೆಂದೇ ಹೋರಾಟಗಾರರು ಹೇಳುತ್ತಾರೆ. ದೇವನಹಳ್ಳಿಯ ಭೂಮಿ ಅಲ್ಲಿನ ಜನರ ಕೈಗೆ ಇರಬೇಕೆಂದು ಅವರು ನಿರ್ಧಾರ ಪ್ರಕಟಿಸಲು ಸಾಧ್ಯವಾಗಿದ್ದು ಹೋರಾಟದ ಅಂತಃಸತ್ವಕ್ಕೆ ಸಿದ್ದರಾಮಯ್ಯ ಕಿವಿಯಾಗಿದ್ದಕ್ಕಷ್ಟೇ.
1198 ದಿನಗಳ ಕಾಲ ನಡೆದ ಹೋರಾಟವು ಸರ್ಕಾರದ ಮೇಲೆ ಒತ್ತಡವನ್ನು ತರುತ್ತಲೇ ಇತ್ತು. ಭ್ರಷ್ಟ ಮತ್ತು ಕೋಮುವಾದಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಇಳಿಸಲು ಕರ್ನಾಟಕದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದ ಚಳವಳಿಗಾರರ ಕಾಣ್ಕೆಯನ್ನು ಸಿದ್ದರಾಮಯ್ಯ ಮರೆಯಲಿಲ್ಲ. ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪರದಾಡುವಂತಾಗಿತ್ತು. ಹೀಗಿರುವಾಗ ಅವರಿಗೆ ಬಲವನ್ನು ಕೊಟ್ಟಿದ್ದೇ ಜನಪರ ಸಂಘಟನೆಗಳ ಹೋರಾಟ.

ಸಂಯುಕ್ತ ಹೋರಾಟ ಕರ್ನಾಟಕ ಅಡಿಯಲ್ಲಿ ಸೇರಿದ ವಿವಿಧ ಸಂಘಟನೆಗಳು ದೇವನಹಳ್ಳಿ ರೈತರ ಪರ ಬಲವಾಗಿ ನಿಂತವು. ತಮ್ಮ ಪ್ರಜಾತಾಂತ್ರಿಕ, ಜಾತ್ಯತೀತ, ಸಾಮಾಜಿಕ ನ್ಯಾಯದ ರಾಜಕಾರಣವನ್ನು ಬೆಂಬಲಿಸುವವರ ಪರ ಸಂಪೂರ್ಣವಾಗಿ ನಿಂತು ಸಿದ್ದರಾಮಯ್ಯನವರು ಆಡಳಿತ ನಡೆಸುತ್ತಿದ್ದಾರೆಂದು ಹೇಳಲಾಗದು. ಅಂತಹ ರಾಜಕಾರಣ ಕಟ್ಟುವಲ್ಲಿ ಸಿದ್ದರಾಮಯ್ಯ ವಿಫಲರಾಗಿದ್ದರೆಂಬುದು ನಿಜವಾದರೂ ತಮ್ಮ ಜೊತೆ ನಿಲ್ಲುವ ಜನರನ್ನು ಕಡೆಗಣಿಸಿಲ್ಲ ಎಂಬುದೂ ಸತ್ಯ. ಅಂತಹ ಆದರ್ಶಯುತ ರಾಜಕಾರಣವನ್ನು ಸಿದ್ದರಾಮಯ್ಯನವರು ಮುಂದುವರಿಸಿದ್ದರೆ, ಅವರ ಆಡಳಿತ ಮತ್ತಷ್ಟು ಕ್ರಿಯಾಶೀಲವಾಗಿರುತ್ತಿತ್ತು ಎಂಬುದು ಬೇರೆಯ ಮಾತು. ಸಿಎಂ ಮುಂಜಾನೆ ಎದ್ದಾಗಿನಿಂದ ಮಲಗುವವರೆಗೂ ಅವರ ಸುತ್ತ ಏಜೆಂಟರು, ಡೀಲರ್‌ಗಳು ಸಾಮಾನ್ಯವಾಗಿ ಸುತ್ತುವರಿದಿರುತ್ತಾರೆ. ಸರ್ಕಾರಗಳನ್ನು ನಡೆಸುವವರು ಇಂಥವರನ್ನು ದೂರ ಇಡಲು ಸಾಧ್ಯವೂ ಇರುವುದಿಲ್ಲ. ಇದೆಲ್ಲದರ ನಡುವೆಯೂ 1777 ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈಬಿಡುವ ನಿರ್ಧಾರ ಕೈಗೊಳ್ಳಲು ಸಿದ್ದರಾಮಯ್ಯನವರಿಗೆ ಸಾಧ್ಯವಾಯಿತು ಎಂಬುದಷ್ಟೇ ಚರಿತ್ರೆಯಲ್ಲಿ ದಾಖಲಾಗಿ ಉಳಿಯುತ್ತದೆ. ಅವರ 70ರ ದಶಕದ ಮೌಲ್ಯಗಳ ಜೊತೆಗೆ ಜನಪರ ಹೋರಾಟದ ಬಲವೂ ಸೇರಿಕೊಂಡಿದ್ದರಿಂದ ಈ ನಿರ್ಧಾರ ಹೊರಬೀಳಲು ಸಾಧ್ಯವಾಯಿತಷ್ಟೇ.
ಇದನ್ನೂ ಓದಿರಿ: ಐತಿಹಾಸಿಕ ದಿನವಾದ ದೇವನಹಳ್ಳಿ ಹೋರಾಟದ ಗೆಲುವು; ಸಂಯುಕ್ತ ಹೋರಾಟ ಕರ್ನಾಟಕ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ
ಸಿದ್ದರಾಮಯ್ಯನವರು ನಿನ್ನೆಯ ಸಭೆಯಲ್ಲಿ ಕಾಣಿಸಿಕೊಂಡ ರೀತಿ, ಅವರ ಮಾತಿನ ವರಸೆ, ದೇಹದ ಭಾಷೆ ಎಲ್ಲವೂ ಲವಲವಿಕೆಯಿಂದ ಕೂಡಿತ್ತು. ಹೋರಾಟಗಾರರನ್ನು ಹೃದಯ ತುಂಬಿ ಮಾತನಾಡಿಸುತ್ತಿದ್ದರು. ಸಭೆಗೆ ಬಾರದಿರುವ ಚಳವಳಿಗಾರರನ್ನು ನೆನಪಿಸಿಕೊಳ್ಳುತ್ತಿದ್ದರು. ದಲಿತ ನಾಯಕರ ಹೆಸರುಗಳನ್ನು ಪದೇಪದೇ ಹೇಳುತ್ತಿದ್ದರು. ಇದೆಲ್ಲವಕ್ಕೂ ಅವರ ಮೂವತ್ತು ವರ್ಷಗಳ ರಾಜಕೀಯ ಪಯಣವೇ ಕಾರಣವಾಗಿ ನಿಲ್ಲುತ್ತದೆ. ಅವರ ಅಕ್ಕಪಕ್ಕ ಇದ್ದ ಸಚಿವರುಗಳು ಪೆಚ್ಚುಮೋರೆ ಹಾಕಿಕೊಂಡಂತೆ ಕಾಣುತ್ತಿದ್ದರು. ಕೊನೆಗೆ ಉಳಿಯುವುದು ಹೋರಾಟಗಾರರ ಮಾತಷ್ಟೇ: “ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಂಡುಬಿಟ್ಟರು. ನಮ್ಮನ್ನು ಕೈಬಿಡುವುದಿಲ್ಲ ಎಂಬ ಭರವಸೆ ನಿಜವಾಯಿತು.”

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.