ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್(Stalin) ಅವರು ಪೂರ್ವ ನಿಯೋಜಿತ ಕಾರ್ಯಕ್ರಮಗಳಿದ್ದ ಕಾರಣದಿಂದಾಗಿ ಪಂಬನ್(Pamban) ಸೇತುವೆ ಉದ್ಘಾಟನೆಯಲ್ಲಿ ಭಾಗಿಯಾಗಿಲ್ಲ. ಆದರೆ ಸದಾ ರಾಜಕೀಯವನ್ನೇ ಹುಡುಕುವ ಬಿಜೆಪಿಗರು ಇದೀಗ ಪಂಬನ್ ಸೇತುವೆ ರಾಜಕೀಯಕ್ಕೆ ಇಳಿದಿದ್ದಾರೆ. ಪ್ರಧಾನಿ ಮೋದಿ(Modi) ಕೂಡಾ ಭಾಷಾ ವಿವಾದವನ್ನು ಎಳೆದು ಭಾಷಣ ಮಾಡಿದ್ದಾರೆ.
ತಮಿಳುನಾಡಿನ ರಾಮೇಶ್ವರಂನಲ್ಲಿ ನಿರ್ಮಿಸಿರುವ ಲಂಬವಾಗಿ ತೆರೆದುಕೊಳ್ಳುವ ಪಂಬನ್ ಲಿಫ್ಟ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲೇ ರಾಮೇಶ್ವರಂ-ತಂಬರಂ (ಚೆನ್ನೈ) ರೈಲು ಸೇವೆಗೂ ಪ್ರಧಾನಿ ಚಾಲನೆ ನೀಡಿದ್ದಾರೆ. ಈ ಸೇತುವೆಯ ಬಾಳಿಕೆ ಅವಧಿ ಸುಮಾರು ನೂರು ವರ್ಷಗಳೆಂದು ಅಂದಾಜಿಸಲಾಗಿದೆ.
ಸುಮಾರು 2.2 ಕಿ.ಮೀ. ಉದ್ದದ ಈ ಸೇತುವೆ ಮಂಡಪಂ ನಗರ ಮತ್ತು ಪಂಬನ್ ದ್ವೀಪವನ್ನು ಸಂಪರ್ಕಿಸುತ್ತದೆ. ರೈಲು ಸಂಚರಿಸುವ ಸಂದರ್ಭದಲ್ಲಿ ಸೇತುವೆಯಾಗುವ ಹಾಗೂ ಹಡಗು ಸಂಚರಿಸುವ ವೇಳೆ ಲಂಬವಾಗಿ ಮೇಲಕ್ಕೇರಿ ಹಡಗಿಗೆ ದಾರಿ ಮಾಡಿಕೊಡುವ, ಅಂದರೆ ಎರಡು ರೀತಿಯಲ್ಲಿ ಕಾರ್ಯನಿರ್ವಹಿಸುವ ಸೇತುವೆ ಇದಾಗಿದೆ. ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ.

ಪಂಬನ್ ಸೇತುವೆ ಇತಿಹಾಸ
ತಮಿಳುನಾಡಿನ ಎರಡು ರೈಲು ನಿಲ್ದಾಣಗಳಾದ ಮಂಡಪಂ ಮತ್ತು ಪಂಬನ್ ಸುಮಾರು ಐದು ಕಿಲೋಮೀಟರ್ ಅಂತರದಲ್ಲಿವೆ. 1914ರಲ್ಲಿ ಬ್ರಿಟಿಷರು ಪಂಬನ್ ಸೇತುವೆಯನ್ನು ನಿರ್ಮಿಸಿದಂದಿನಿಂದ ಇಲ್ಲಿಗೆ ರೈಲು ಸಂಪರ್ಕವಿದೆ. ಆರಂಭದಲ್ಲಿ ಪ್ರತಿದಿನ ಒಂದೆರಡು ರೈಲುಗಳು ಸಾಗುತ್ತಿತ್ತು. ಆದರೆ ಪಂಬನ್ ಸೇತುವೆ ಹಳೆಯದಾಗಿ ರೈಲುಗಳ ಹೊರೆಯನ್ನು ಹೊರುವ ಸಾಮರ್ಥ್ಯವನ್ನು ಕಳೆದುಕೊಂಡಿತು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’
ಮಂಡಪಂ ಭಾರತದ ಮುಖ್ಯ ಭೂಭಾಗದ ಕೊನೆಯ ರೈಲು ನಿಲ್ದಾಣವಾಗಿದ್ದರೆ, ಪಂಬನ್ ದ್ವೀಪದಲ್ಲಿರುವ ಒಂದು ಸಣ್ಣ ನಿಲ್ದಾಣ ಪಂಬನ್. ಇದು ರಾಮೇಶ್ವರಂ ರೈಲು ನಿಲ್ದಾಣಕ್ಕೆ ಮತ್ತಷ್ಟು ಸಂಪರ್ಕ ಕಲ್ಪಿಸುತ್ತದೆ. 100 ವರ್ಷಕ್ಕೂ ಅಧಿಕ ಕಾಲ ಸೇವೆಯಲ್ಲಿದ್ದ ಹಳೆಯ ಪಂಬಲ್ ಸೇತುವೆಯ ನಿರಂತರ ದುರಸ್ತಿ ಮತ್ತು ನಿರ್ವಹಣೆ ನಡೆಸಲಾಗುತ್ತಿತ್ತು. 2019ರಲ್ಲಿ, ಸಮಾನಾಂತರ ಸೇತುವೆಯನ್ನು ನಿರ್ಮಿಸಲು ನಿರ್ಧರಿಸಲಾಯಿತು. ಆದರೆ ಹೊಸ ಸೇತುವೆಯನ್ನು ನಿರ್ಮಿಸುವ ಮೊದಲು, ಹಳೆಯದನ್ನು ರೈಲು ಸಾಗಾಟಕ್ಕೆ ಯೋಗ್ಯವಲ್ಲ ಎಂದು ಘೋಷಿಸಲಾಯಿತು. 2022ರ ಡಿಸೆಂಬರ್‌ನಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಎಲ್ಲಾ ರೈಲುಗಳ ಕೊನೆ ನಿಲ್ದಾಣ ಮಂಡಪಂ ನಿಲ್ದಾಣವಾಯಿತು. ಇದೀಗ ಹೊಸ ಪಂಬನ್ ಸೇತುವೆ ನಿರ್ಮಿಸಲಾಗಿದೆ.

ಪಂಬನ್ ಲಿಫ್ಟ್ ಸೇತುವೆ ವಿಶೇಷತೆ, ಜನರಿಗೆ ಏನು ಪ್ರಯೋಜನ?
ಪಂಬನ್ ದೇಶದ ಮೊದಲ ‘ವರ್ಟಿಕಲ್ ಲಿಫ್ಟ್’ ಸೇತುವೆಯಾಗಿದೆ. ರೈಲು ಸಂಚರಿಸುವಾಗ ಸೇತುವೆಯಾಗಿ, ಹಡಗು ಸಂಚರಿಸುವಾಗ ಲಂಬವಾಗಿ ಮೇಲಕ್ಕೇರಿ ದಾರಿ ಮಾಡಿಕೊಡುವಂತಹ ಎರಡು ರೀತಿಯಲ್ಲಿ ಕಾರ್ಯನಿರ್ವಹಿಸುವ ಸೇತುವೆ ಇದಾಗಿದೆ. ಪಂಬನ್ ದ್ವೀಪ ಮತ್ತು ಮಂಡಪಂ ನಗರವನ್ನು ಸಂಪರ್ಕಿಸುವ ಸೇತುವೆ ಇದಾಗಿದೆ. ರೈಲ್ ವಿಕಾಸ್ ನಿಗಮ ಲಿಮಿಟೆಡ್ (ಆರ್‌ವಿಎನ್‌ಎಲ್) ಈ ಸೇತುವೆ ನಿರ್ಮಾಣ ಮಾಡಿದೆ.
ಈ ಸೇತುವೆಯ ಬಾಳಿಕೆ 100 ವರ್ಷ ಎಂದು ಅಂದಾಜಿಸಲಾಗಿದೆ. ಸುಮಾರು 72.5 ಮೀ. ಉದ್ದದ ವರ್ಟಿಕಲ್ ಲಿಫ್ಟ್ ಸ್ಪ್ಯಾನ್ ಒಳಗೊಂಡಿದ್ದು ಲಿಫ್ಟ್ ಸ್ಪ್ಯಾನ್ ಅನ್ನು 17 ಮೀಟರ್ ಎತ್ತರದವರೆಗೆ ತೆರೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಕೆಳಭಾಗದಲ್ಲಿ ಮೀನುಗಾರಿಕೆಯ ಬೃಹತ್ ದೋಣಿಗಳು, ಸರಕು ಸಾಗಣೆ ಹಡಗುಗಳು, ಕರಾವಳಿ ಕಾವಲು ಪಡೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಇದನ್ನು ಓದಿದ್ದೀರಾ? ಗುಜರಾತ್ | ಉದ್ಘಾಟನೆಗೂ ಮುನ್ನವೇ ಮುರಿದು ಬಿತ್ತು ಸೇತುವೆ

ಗಾಳಿಯ ವೇಗವನ್ನು ಅವಲಂಬಿಸಿ ಸೇತುವೆಯ ಮೇಲೆ ಹಾದುಹೋಗುವ ರೈಲುಗಳ ವೇಗವು ಹಗಲಿನಲ್ಲಿ ಬದಲಾಗಬಹುದು. ಆದರೆ ಸರಾಸರಿ, ರಾಮೇಶ್ವರಂ ಮತ್ತು ಮಂಡಪಂ ನಿಲ್ದಾಣಗಳ ನಡುವಿನ ಪ್ರಯಾಣವನ್ನು 15-20 ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು. ಲಂಡನ್‌ನ ಟವರ್ ಸೇತುವೆಯ ಸ್ಪೂರ್ತಿಯಿಂದ ಈ ಪಂಬನ್ ಸೇತುವೆಯನ್ನು 5,800 ಮೆಟ್ರಿಕ್ ಟನ್ ಸ್ಟೈನ್‌ಲೆಸ್ ಸ್ಟೀಲ್ ಮತ್ತು ಸಿಮೆಂಟ್ ಚೀಲ ಬಳಸಿ ನಿರ್ಮಿಸಲಾಗಿದೆ.

ಆರಂಭದಲ್ಲಿ, ಸೇತುವೆಯ ಅಂದಾಜು ವೆಚ್ಚ 280 ಕೋಟಿ ರೂ.ಗಳಾಗಿತ್ತು. ಬಳಿಕ 580 ಕೋಟಿ ರೂ.ಗಳಿಗೆ ಏರಿಸಲಾಗಿತ್ತು. ಅಂತಿಮವಾಗಿ 704 ಕೋಟಿ ರೂ.ಗಳಲ್ಲಿ ಸೇತುವೆ ನಿರ್ಮಾಣವಾಗಿದೆ. ಈಗಾಗಲೇ ಭಾರತೀಯ ರೈಲ್ವೆಯು ಪಂಬನ್ ಸೇತುವೆ ಮೂಲಕ ಸುಮಾರು 28 ರೈಲು ಸೇವೆಗಳನ್ನು ಘೋಷಿಸಿದೆ. ಅಯೋಧ್ಯೆ, ಚೆನ್ನೈ, ಬನಾರಸ್, ಮದುರೈ ಮೊದಲಾದ ಕಡೆ ಈ ರೈಲು ಸೇವೆ ಇರಲಿದೆ.

ಸ್ಟಾಲಿನ್ ಗೈರು ವಿವಾದ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಪೂರ್ವ ನಿಯೋಜಿತ ಕಾರ್ಯಕ್ರಮಗಳಿದ್ದ ಕಾರಣದಿಂದಾಗಿ ಪಂಬನ್ ಸೇತುವೆ ಉದ್ಘಾಟನೆಯಲ್ಲಿ ಭಾಗಿಯಾಗಿಲ್ಲ. ಈ ವಿಷಯವನ್ನು ಪ್ರಧಾನಮಂತ್ರಿ ಕಚೇರಿಗೂ ತಿಳಿಸಿರುವುದಾಗಿ ಹೇಳಿದ್ದಾರೆ. ಆದರೆ ಸದಾ ರಾಜಕೀಯವನ್ನೇ ಹುಡುಕುವ ಬಿಜೆಪಿಗರು ಇದೀಗ ಪಂಬನ್ ಸೇತುವೆ ರಾಜಕೀಯಕ್ಕೆ ಇಳಿದಿದ್ದಾರೆ. ಪ್ರಧಾನಿ ಕೂಡಾ ಭಾಷಾ ವಿವಾದವನ್ನು ಎಳೆದು ಭಾಷಣ ಮಾಡಿದ್ದಾರೆ. ಇವೆಲ್ಲವುದರ ನಡುವೆ ಮುಂದಿನ ಚುನಾವಣೆ ದೃಷ್ಟಿಯಿಂದ ಬಿಜೆಪಿ ಈಗ ಮತ ರಾಜಕೀಯ ನಡೆಸುತ್ತಿದೆ. ಅದಕ್ಕಾಗಿ ಈ ಸೇತುವೆ ಉದ್ಘಾಟನೆಗೆ ಪ್ರಧಾನಿ ಬಂದಿದ್ದಾರೆ ಎಂದು ತಮಿಳುನಾಡು ಸರ್ಕಾರದ ಆರೋಪವಾಗಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.