ಗಾಂಧೀಜಿ ಸತ್ಯ, ಶಾಂತಿ, ಅಹಿಂಸೆ, ಸೌಹಾರ್ದತೆ ಎಂಬ ಶ್ರೇಷ್ಠ ತತ್ವಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ‘ಮಹಾತ್ಮ’ ಎಂದು ಎನಿಸಿಕೊಂಡವರು. ಆದರೆ ಇಂದು ನಮ್ಮ ದೇಶವನ್ನಾಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಅವರ ಕನ್ನಡಕವನ್ನು ‘ಸ್ವಚ್ಛ ಭಾರತ’ ಆಂದೋಲನಕ್ಕೆ ಬಳಸಿಕೊಂಡು ಅವರ ತತ್ವಗಳನ್ನು ಗಾಳಿಗೆ ತೂರಿ ಅಳಿಸಿ ಹಾಕಲು ಹೊರಟಿದ್ದಾರಾ ಎಂಬುದು ನಮ್ಮ ದೇಶದಲ್ಲಿ ನಡೆದ ಹಲವು ಘಟನೆಗಳಲ್ಲಿ ವ್ಯಕ್ತವಾಗುತ್ತಿದೆ.
2014 ಅಕ್ಟೋಬರ್‌ನಲ್ಲಿ ಆರಂಭಿಸಿದ ಸ್ವಚ್ಛ ಭಾರತ ಅಭಿಯಾನಕ್ಕೆ ಗಾಂಧೀಜಿ ಕನ್ನಡಕವನ್ನು ಲೋಗೊ ಆಗಿ ಬಳಸಿಕೊಂಡು ಅಭಿಯಾನ ಆರಂಭಿಸಿದ ಮೋದಿಯವರ ದೃಷ್ಟಿಯಲ್ಲಿ, 1982ರಲ್ಲಿ ಬಿಡುಗಡೆಯಾದ ರಿಚರ್ಡ್ ಅಟೆನ್ಬರೋ ನಿರ್ದೇಶನದ ಗಾಂಧೀಜಿ ಸಿನಿಮಾ ಬರುವ ಮೊದಲು ಗಾಂಧೀಜಿ ಜಗತ್ತಿನಲ್ಲಿ ಯಾರಿಗೂ ಗೊತ್ತಿರಲಿಲ್ಲ ಎಂಬ ಮಾತುಗಳು ಮೋದಿಯವರಿಗೆ ಗಾಂಧಿ ತತ್ವಗಳ ಬಗೆಗಿನ ವಿರುದ್ಧ ಧೋರಣೆ ಅರ್ಥವಾಗುತ್ತದೆ.
ಅಹಿಂಸೆಯು ಗಾಂಧೀಜಿಯವರ ಹೋರಾಟದ ಮೂಲ ಮಂತ್ರವಾಗಿತ್ತು. ಆದರೆ ಮೋದಿಯವರು ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನು ನಿಲ್ಲಿಸುವ ಪ್ರಯತ್ನವನ್ನು ಈವರೆಗೆ ಮಾಡಲಿಲ್ಲ.

ಗಾಂಧೀಜಿಯವರ ದೃಷ್ಟಿಯಲ್ಲಿ ಮಹಿಳೆ ಅಹಿಂಸೆಯ ಅವತಾರ, ಮಹಿಳೆಯನ್ನು ದುರ್ಬಲ ಲೈಂಗಿಕತೆ ಎಂದು ಕರೆಯುವುದು ಮಾನಹಾನಿ ಹಾಗೂ ಹೆಣ್ಣನ್ನು ಉದಾತ್ತ ಲಿಂಗ ಎಂದು ಕರೆದರು. ಆದರೆ ಮಣಿಪುರದ ನಡುರಸ್ತೆಯಲ್ಲಿ ಯುವತಿಯರ ಬಟ್ಟೆ ಬಿಚ್ಚಿ ಸಾಮೂಹಿಕ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ಬಗ್ಗೆ ಮೋದಿ ತುಟಿ ಬಿಚ್ಚಿ ಮಾತನಾಡಲಿಲ್ಲ. ಮಹಿಳಾ ಕುಸ್ತಿಪಟುಗಳ ಮೇಲೆ ಅವರದ್ದೇ ಪಕ್ಷದ ನಾಯಕ, ಬ್ರಿಜ್‌ಭೂಷನ್ ಶರಣ್ ಸಿಂಗ್‌ನಿಂದ ದೌರ್ಜನ್ಯವಾದಾಗ ಮೋದಿ ನಿರ್ಲಕ್ಷ್ಯ ಮಾಡಿದರು.
ಬಿಹಾರದ ಚಂಪಾರಣ್ಯ ಜಿಲ್ಲೆಯ ಹಳ್ಳಿಯೊಂದಕ್ಕೆ ಭೇಟಿ ನೀಡಿದಾಗ ಮಹಿಳೆಯೊಬ್ಬಳಿಗೆ ಕೊಳಕು ಬಟ್ಟೆ ಧರಿಸಿದ ಕಾರಣವನ್ನು ಅರಿತು ಪ್ರತಿಯೊಬ್ಬ ಬಡ ಮಹಿಳೆಗೆ ಬಟ್ಟೆಯನ್ನು ನೀಡುವಂತಾಗಬೇಕು ಎಂದು ನೂಲುವ ಕಾಯಕವನ್ನು ಗಾಂಧೀಜಿ ಕೈಗೊಂಡರು. ಆದರೆ ಮೋದಿ ಮಹಿಳೆಯರಿಗೆ ಅನ್ಯಾಯವಾದಾಗ ಅವರ 56 ಇಂಚಿನ ಎದೆಗಾರಿಕೆಯು ಅಂದು ಸದ್ದಿಲ್ಲದೆ ದುರ್ಬಲವಾಗಿತ್ತು. ‘ಬೇಟಿ ಬಚಾವೋ ಬೇಟಿ ಪಡಾವೋ’ ಘೋಷಣೆಯಾಗಿಯೇ ಉಳಿದಿದೆಯಷ್ಟೇ ಎಂಬುದು ವಾಸ್ತವ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.
ಆಂಧ್ರ ಪ್ರದೇಶದ ಬಿಜೆಪಿ ನಾಯಕ ರಮೇಶ್ ನಾಯ್ಡು, ಗಾಂಧೀಜಿಯವರ ಪುಣ್ಯ ತಿಥಿಯಂದು ಗಾಂಧೀಜಿಯವರನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ದೇಶ ಭಕ್ತ ಎಂದಾಗ ಮೋದಿಯವರು ಯಾವ ಕ್ರಮ ಕೈಗೊಂಡರು. ಗಾಂಧೀಜಿಯವರ ಮೂಲ ತತ್ವಗಳಲ್ಲಿ ಸೌಹಾರ್ದತೆಯೂ ಒಂದಾಗಿತ್ತು. ಅವರು ಇತರ ಧರ್ಮಗಳನ್ನು ನಿಂದಿಸುವುದಕ್ಕೆ ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದರು. ಆದರೆ ಮೋದಿಯವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಖಾಸಗಿ ಸಂಪತ್ತನ್ನು ಮುಸ್ಲಿಮರಿಗೆ ಹಸ್ತಾಂತರಿಸಲಿದೆ ಎಂದು ಹೇಳಿಕೆ ನೀಡಿ ಅಧಿಕಾರಕ್ಕಾಗಿ ಜನರನ್ನು ವಿಭಜಿಸುವ ರಾಜಕೀಯ ಮಾಡಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ‘ಬಾಗಿಲಿನಿಂದ ದೂರ ಇರು’ ಎಂದು ಹೇಳಿದ್ದಕ್ಕೆ ಬಿಎಂಟಿಸಿ ಕಂಡಕ್ಟರ್‌ಗೆ ಚಾಕು ಇರಿದ ಪ್ರಯಾಣಿಕ!
ಗಾಂಧೀಜಿಯವರ ಹೆಸರಿನಲ್ಲಿ ರಾಜಕಾರಣ ಮಾಡಿ, ಜಗತ್ತಿನ ಮುಂದೆ ಗಾಂಧಿವಾದಿಯಂತೆ ಮುಖವಾಡ ಧರಿಸಿ ಮಾನ ಉಳಿಸಿಕೊಳ್ಳುವ ಮೋದಿಯವರು ಗಾಂಧೀಜಿಯವರ ತತ್ವಗಳನ್ನು ಅಕ್ಷರಷಃ ಗಾಳಿಗೆ ತೂರಿದ್ದಾರೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು