ಸಮಾಜ ಸುಧಾರಕ, ದೀನ, ದಲಿತ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ಮಹಾತ್ಮ ಜ್ಯೋತಿಬಾ ಫುಲೆ ಅವರ ಜನ್ಮದಿನವಿಂದು. ಶಿಕ್ಷಣವನ್ನು ಉತ್ತೇಜಿಸುವ, ಸಾಮಾಜಿಕ ಹಕ್ಕುಗಳು, ನ್ಯಾಯ, ಮತ್ತು ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರವೇಶವನ್ನು ಹೆಚ್ಚಿಸುವ ಉದ್ದೇಶದಿಂದ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದವರು ಜ್ಯೋತಿಬಾ ಫುಲೆ.
1827ರ ಏಪ್ರಿಲ್ 11ರಂದು ಮಹಾರಾಷ್ಟ್ರದ ಕಟಗುಣ ಎಂಬ ಹಳ್ಳಿಯಲ್ಲಿ ಜ್ಯೋತಿರಾವ್ ಫುಲೆ ಅವರು ಜನಿಸಿದರು. ಅವರ ತಂದೆ ಗೋವಿಂದರಾವ್, ತಾಯಿ ಚಿಮಣಾಬಾಯಿ. ಹುಟ್ಟಿದ ಕೆಲವೇ ದಿನಗಳಲ್ಲಿ ಜ್ಯೋತಿಬಾ ಅವರ ತಾಯಿ ನಿಧನರಾಗಿದ್ದು, ಚಿಕ್ಕಮ್ಮ ಸುಗುಣಾಬಾಯಿ ಲಾಲನೆ ಪಾಲನೆಯಲ್ಲಿ ಬೆಳೆದರು.
ಇದನ್ನು ಓದಿದ್ದೀರಾ? ಕೊಪ್ಪಳ | ಜ್ಯೋತಿಬಾ ಫುಲೆ ಅರಿವು ಬಿತ್ತಲು ಸತ್ಯಶೋಧಕ ಸಮಾಜ ಕಟ್ಟಿದರು: ರಮೇಶ್ ಗಬ್ಬೂರ
ಸ್ಕಾಟಿನ್ ಮಿಶನ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಜ್ಯೋತಿಬಾ ಫುಲೆ ಮುಂದೆ ಅಲ್ಲೇ ಅಧ್ಯಾಪಕರಾದರು. ಇಂಗ್ಲೀಷ್ ಶಿಕ್ಷಣದ ವಿದ್ಯಾಭ್ಯಾಸ ಮಾಡಿದವರು. 13ನೇ ವಯಸ್ಸಿನಲ್ಲೇ ಸಾವಿತ್ರಿಬಾಯಿಯೊಂದಿಗೆ ಬಾಲ್ಯ ವಿವಾಹವಾಗಿದ್ದು, ಆರಂಭದಲ್ಲಿ ತನ್ನ ಪತ್ನಿಗೆ ಶಿಕ್ಷಣ ನೀಡುವ ಮೂಲಕ ಸ್ತ್ರೀ ಶಿಕ್ಷಣಕ್ಕೆ ಉತ್ತೇಜನ ನೀಡಲು ಆರಂಭಿಸಿದರು. ದಂಪತಿ ಒಬ್ಬ ಬ್ರಾಹ್ಮಣ ವಿಧವೆಗೆ ವಿವಾಹೇತರ ಸಂಬಂಧದಿಂದ ಹುಟ್ಟಿದ ಒಬ್ಬ ಅನಾಥ ಬಾಲಕನನ್ನು ದತ್ತು ಪಡೆದಿದ್ದರು.
“ಹಿಂದೂ ತಳಜಾತಿ ಜನರು ಮೇಲುಜಾತಿಯ ಜನರಿಗೆ ಗುಲಾಮರಾಗಿದ್ದಾರೆ ಎಂಬ ಅರಿವು ಉಂಟುಮಾಡಿ, ವಿದೇಶಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯುವುದಕ್ಕಿಂತ ಭಾರತಕ್ಕೆ ಸಾಮಾಜಿಕ ಪ್ರಜಾಪ್ರಭುತ್ವ ಬಹುಮುಖ್ಯ ಎಂದು ಬೋಧಿಸಿದ ಆಧುನಿಕ ಭಾರತದ ಮಹೋನ್ನತ ಶೂದ್ರ” ಎಂದು ಜ್ಯೋತಿಬಾ ಫುಲೆ ಅವರನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕರೆದಿದ್ದಾರೆ.
ಬ್ರಾಹ್ಮಣ ವಿರೋಧಿ ಜ್ಯೋತಿಬಾ ಫುಲೆ
ಸಮಾಜದಲ್ಲಿರುವ ಎಲ್ಲಾ ಸಮಸ್ಯೆಗಳಿಗೂ ಬ್ರಾಹ್ಮಣರ ಅಟ್ಟಹಾಸವೇ ಕಾರಣವೆಂಬುದು ಜ್ಯೋತಿಬಾ ಫುಲೆ ಪ್ರತಿಪಾದನೆ. ಗುಲಾಮಗಿರಿಯ ಬಗ್ಗೆ ಅವರು ಬರೆದ ಪುಸ್ತಕರದಲ್ಲಿ ಹಿಂದೂ ಸಮಾಜವನ್ನು ಬ್ರಾಹ್ಮಣರು ಬಂಧಿಸಿದ್ದಾರೆ ಎಂದಿದ್ದಾರೆ. ಎಲ್ಲಾ ಹೆಣ್ಣುಮಕ್ಕಳಿಗಾಗಿ, ದಲಿತ ಮಕ್ಕಳಿಗಾಗಿ ಶಾಲೆಗಳನ್ನು ಸ್ಥಾಪಿಸಿದರು. ಬ್ರಾಹ್ಮಣೇತರರನ್ನು ಸಂಘಟಿಸಿ ವೈಚಾರಿಕತೆ, ಧಾರ್ಮಿಕ ಆಚರಣೆಗಳಲ್ಲಿ ಬ್ರಾಹ್ಮಣ ಪುರೋಹಿತರನ್ನು ಕರೆಯದಿರುವುದು, ಹೆಣ್ಣು-ಗಂಡು ಮಕ್ಕಳಿಬ್ಬರಿಗೂ ಶಿಕ್ಷಣ ಕೊಡಿಸುವುದು ಮೊದಲಾದವುಗಳ ಬಗ್ಗೆ ಅರಿವು ಮೂಡಿಸಲು 1875ರಲ್ಲಿ ‘ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿದರು.
ಇದನ್ನು ಓದಿದ್ದೀರಾ? ವಿಜಯಪುರ | ಮಹಾತ್ಮಾ ಜ್ಯೋತಿಬಾ ಫುಲೆ ಜಯಂತಿ ಆಚರಣೆ
ಜ್ಯೋತಿಬಾ ಫುಲೆ ತಮ್ಮ ಬರಹಗಳಲ್ಲಿ ಹೆಚ್ಚಾಗಿ ಬ್ರಾಹ್ಮಣರನ್ನು ಖಂಡಿಸಿದವರು. ಶಿವಾಜಿಯನ್ನು ಕುರಿತ ಒಂದು ಲಾವಣಿ, ವೈಚಾರಿಕ ಜಿಜ್ಞಾಸೆಯ ಕೃತಿಗಳನ್ನೂ ಬರೆದಿದ್ದಾರೆ. ಪ್ರಮುಖವಾಗಿ ಜಾತಿ ವ್ಯವಸ್ಥೆ ಕುರಿತು ‘ಗುಲಾಮಗಿರಿ’, ರೈತರ ಮೇಲೆ ನಡೆಯುವ ಶೋಷಣೆಯ ಬಗ್ಗೆ ‘ಶೇತ್ಕರಿಯಾ ಆಸೂದ್’ ಹಾಗೂ ಹೊಸ, ಆಧ್ಯಾತ್ಮಕ, ಸಮಾನತಾವಾದಿಯಾದ ಧರ್ಮದ ರೂಪುರೇಷೆಗಳನ್ನು ಮುಂದಿಡುವ ‘ಸತ್ಯ ಧರ್ಮ’ ಬರೆದಿದ್ದಾರೆ.
ಕೆಳಜಾತಿಯ ಮಹಿಳೆಯರಿಗೆ ಶಿಕ್ಷಣ ನೀಡಲು ಸ್ಥಾಪಿಸಿದ ಶಾಲೆಯಲ್ಲಿ ಅವರ ಪತ್ನಿ ಸಾವಿತ್ರಿ ಬಾಯಿ ಅಧ್ಯಾಪಕಿಯಾದರು. ಆರಂಭದಲ್ಲಿ ಬುಧವಾರ ಪೇಟೆಯಲ್ಲಿ ಶಾಲೆ ತೆರೆದಿದ್ದು ಬಳಿಕ ರಾಸ್ತಾಪೇಟ್, ವಿಠಲಪೇಟೆಗಳಲ್ಲೂ ಇಂಥ ಮಹಿಳೆಯರ ಶಾಲೆ ತೆರೆದರು. ರೈತರಿಗೂ ಮಹಿಳೆಯರಿಗೂ ತಮ್ಮ ಮನೆಯಲ್ಲೇ ರಾತ್ರಿ ಶಾಲೆ ತೆರೆದರು.
ಇಂಗ್ಲಿಷ್ ಶಿಕ್ಷಣ, ತಾಂತ್ರಿಕ ಶಿಕ್ಷಣ ವಿಸ್ತಾರವಾಗಬೇಕೆಂಬುದು ಜ್ಯೋತಿಬಾ ಫುಲೆ ಪ್ರತಿಪಾದನೆ. ಜ್ಯೋತಿಬಾ ಫುಲೆ ಅವರು 1890 ರಲ್ಲಿ ನಿಧನ ಹೊಂದಿದ್ದು ಅವರ ಸೇವೆಗೆ ಮುಂಬೈ ಸರ್ಕಾರವೇ ‘ಮಹಾತ್ಮಾ’ ಎಂಬ ಬಿರುದನ್ನು 1880ರಲ್ಲಿ ನೀಡಿದೆ.
