ಜುಲೈ 20ರಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುತ್ತಿದೆ. ಈ ಅಧಿವೇಶನ ಕರ್ನಾಟಕದ ಪಾಲಿಗೆ ನಿರ್ಣಾಯಕವಾಗಿದೆ. ಹಲವು ವರ್ಷಗಳಿಂದ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಿರುವ ತೆರಿಗೆ ಪಾಲು, ಹಣಕಾಸು ಆಯೋಗದ ಶಿಫಾರಸುಗಳಡಿ ದೊರಕಬೇಕಿದ್ದ ವಿಶೇಷ ಅನುದಾನ, ವಿವಿಧ ಯೋಜನೆಗಳ ಬಾಕಿ ಅನುದಾನಗಳು, ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಯಾಗಬೇಕಿರುವ ನಿಧಿ ಹಾಗೂ ಬರ ಪರಿಹಾರ ಸೇರಿದಂತೆ ಸಾವಿರಾರು ಕೋಟಿ ರೂಪಾಯಿಗಳ ಹಣ ಇನ್ನೂ ಬಿಡುಗಡೆಯಾಗಿಲ್ಲ. ಈ ಎಲ್ಲ ವಿಚಾರಗಳನ್ನೂ ಅಧಿವೇಶನದಲ್ಲಿ ಗಮನ ಸೆಳೆಯಲು ರಾಜ್ಯ ಕಾಂಗ್ರೆಸ್ ಸಂಸದರು ಸಿದ್ದತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ, ಕರ್ನಾಟಕದ ಹಣಕಾಸಿನ ಹಕ್ಕುಗಳಿಗಾಗಿ ಬಿಜೆಪಿ ಸಂಸದರೂ ಧ್ವನಿ ಎತ್ತುವರೇ ಎಂಬ ಪ್ರಶ್ನೆ ರಾಜ್ಯದ ಜನರಲ್ಲಿದೆ.
ಸಂಸತ್ ಅಧಿವೇಶನಕ್ಕೂ ಮುನ್ನ ರಾಜ್ಯ ಸರ್ಕಾರ ತನ್ನ ನ್ಯಾಯಯುತ ಪಾಲನ್ನು ಕೇಳಲು ಮುಂದಾಗಿದೆ. ಈಗಾಗಲೇ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ರಾಜ್ಯದ ಎಲ್ಲ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರಿಗೆ ಪತ್ರ ಬರೆದು, ಪಕ್ಷಾತೀತವಾಗಿ ಕರ್ನಾಟಕದ ಪರವಾಗಿ ಧ್ವನಿ ಎತ್ತುವಂತೆ ಮನವಿ ಮಾಡಿದ್ದಾರೆ. ರಾಜ್ಯದ ಹಿತಾಸಕ್ತಿಯ ಪ್ರಶ್ನೆಯಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಸತ್ತಿನಲ್ಲಿ ಒಗ್ಗಟ್ಟಿನ ನಿಲುವು ತಾಳಬೇಕು. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಬಳಿ ಬಾಕಿಯಾಗಿರುವ ಅನುದಾನಗಳನ್ನು ತಕ್ಷಣ ಬಿಡುಗಡೆ ಮಾಡಿಸುವಂತೆ ಒತ್ತಾಯಿಸುವುದು ರಾಜ್ಯದ ಎಲ್ಲ ಸಂಸದರ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಗಮನಾರ್ಹವಾಗಿ, 15ನೇ ಹಣಕಾಸು ಆಯೋಗ ರಚನೆಯಾದ ಬಳಿಕ, ರಾಜ್ಯಕ್ಕೆ ಭಾರೀ ಅನ್ಯಾಯವಾಗಿದೆ ಎದು ಹೇಳಲಾಗಿದೆ. ಈ ಆಯೋಗವು 14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಲಾಗುತ್ತಿದ್ದ ತೆರಿಗೆ ಪಾಲನ್ನು 4.713%ನಿಂದ 3.647%ಗೆ ಇಳಿಯಿತು. ಅಂದರೆ, ರಾಜ್ಯದ ಪಾಲಿನ ಒಟ್ಟು ಮೊತ್ತದಲ್ಲಿ ಬರೋಬ್ಬರಿ 23%ರಷ್ಟು ಹಣ ಕಡಿತಗೊಂಡಿತು. ಈ ಬದಲಾವಣೆಯಿಂದ 2020-21ರಿಂದ 2025-26ರವರೆಗಿನ ಅವಧಿಯಲ್ಲಿ ಕರ್ನಾಟಕಕ್ಕೆ ಸುಮಾರು 65 ಸಾವಿರದಿಂದ 66 ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ.
ಜನಸಂಖ್ಯೆ ನಿಯಂತ್ರಣ, ಉತ್ತಮ ತೆರಿಗೆ ಸಂಗ್ರಹಣೆ, ಆರ್ಥಿಕ ಬೆಳವಣಿಗೆ ಹಾಗೂ ಹಣಕಾಸಿನ ಶಿಸ್ತು ಕಾಪಾಡಿಕೊಂಡಿದ್ದರೂ, ಅದಕ್ಕೆ ತಕ್ಕ ಪ್ರತಿಫಲ ತೆರಿಗೆ ಹಂಚಿಕೆಯಲ್ಲಿ ದೊರೆತಿಲ್ಲ. ಬದಲಾಗಿ ಹೆಚ್ಚಿನ ತೆರಿಗೆ ಸಂಗ್ರಹಿಸುವ ರಾಜ್ಯಗಳ ಪಾಲನ್ನೇ ಕಡಿಮೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.
ಆದಾಗ್ಯೂ, ಈ ನಷ್ಟವನ್ನು ಭಾಗಶಃ ಸರಿದೂಗಿಸುವ ಉದ್ದೇಶದಿಂದಲೇ 15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ನೀಡಬೇಕೆಂದು ಶಿಫಾರಸು ಮಾಡಿತ್ತು. ತೆರಿಗೆ ಪಾಲಿನ ಇಳಿಕೆಯಿಂದ ಉಂಟಾಗುವ ಹೊರೆ ಕಡಿಮೆ ಮಾಡಲು ಈ ವಿಶೇಷ ನೆರವು ಅಗತ್ಯವೆಂದು ಆಯೋಗ ಅಭಿಪ್ರಾಯಪಟ್ಟಿತ್ತು. ಆದರೆ, ಮೋದಿ ಸರ್ಕಾರ ಈ ಶಿಫಾರಸನ್ನು ಜಾರಿಗೆ ತರಲಿಲ್ಲ. ಹೊಸ ಮಾದರಿಗೆ ಇದು ನಾಂದಿ ಹಾಡುತ್ತದೆ ಎಂಬ ಕಾರಣವನ್ನು ನೀಡಿ ವಿಶೇಷ ಅನುದಾನವನ್ನು ನಿರಾಕರಿಸಿತು. ಇದರಿಂದ ತೆರಿಗೆ ಪಾಲಿನ ನಷ್ಟವೂ ಮುಂದುವರಿಯಿತು, ಅದನ್ನು ಸರಿದೂಗಿಸಲು ಶಿಫಾರಸು ಮಾಡಿದ್ದ ವಿಶೇಷ ನೆರವೂ ರಾಜ್ಯಕ್ಕೆ ದೊರೆಯಲಿಲ್ಲ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಮನವಿಗಳಲ್ಲೂ ಈ 5,495 ಕೋಟಿ ರೂ. ವಿಶೇಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದರು. ಆದರೂ, ಮೋದಿ ಸರ್ಕಾರ ಅನುದಾನ ಬಿಡುಗಡೆಗೆ ಮನಸು ಮಾಡಿಲ್ಲ.
ಇದಷ್ಟೇ ಅಲ್ಲದೆ, 15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಸುಮಾರು 6,000 ಕೋಟಿ ರೂ. ರಾಜ್ಯ-ನಿರ್ದಿಷ್ಟ (State Specific Grants) ಅನುದಾನಗಳನ್ನು ಕೂಡ ಶಿಫಾರಸು ಮಾಡಿತ್ತು. ರಾಜ್ಯದ ವಿಶೇಷ ಅಭಿವೃದ್ಧಿ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಶಿಫಾರಸು ಮಾಡಲಾಗಿತ್ತು. ಆದರೆ, ಈ ಅನುದಾನಗಳ ಬಿಡುಗಡೆಯಲ್ಲಿಯೂ ಕೇಂದ್ರ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಹಣಕಾಸು ಆಯೋಗದ ಶಿಫಾರಸುಗಳಿಗೆ ಮೋದಿ ಸರ್ಕಾರ ಕಿಮತ್ತು ಕೊಡುತ್ತಿಲ್ಲವೆಂದು ರಾಜ್ಯ ಸರ್ಕಾರ ಆರೋಪಿಸಿದೆ.
ಈ ನಡುವೆ ಮುನ್ನೆಲೆಯಲ್ಲಿರುವ ಮತ್ತೊಂದು ವಿಷಯವೆಂದರೆ, ಗ್ರಾಮ ಪಂಚಾಯತಿಗಳಿಗೂ ಅನುದಾನ ಬಿಡುಗಡೆ ಮಾಡದೇ ಇರುವುದು. 15ನೇ ಹಣಕಾಸು ಆಯೋಗದಡಿ ಕರ್ನಾಟಕದ ಗ್ರಾಮ ಪಂಚಾಯತಿಗಳಿಗೆ ಕೇಂದ್ರ ಸರ್ಕಾರ ನೀಡಬೇಕಿದ್ದ ಒಟ್ಟು ಅನುದಾನದಲ್ಲಿ ಸುಮಾರು 2,186.20 ಕೋಟಿ ರೂ. ಇನ್ನೂ ಬಿಡುಗಡೆಯಾಗಿಲ್ಲ. ಈ ಹಣ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು, ಒಳಚರಂಡಿ ವ್ಯವಸ್ಥೆ, ಸ್ವಚ್ಛತೆ, ಗ್ರಾಮೀಣ ರಸ್ತೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಪಂಚಾಯಿತಿಗಳ ದೈನಂದಿನ ಆಡಳಿತಕ್ಕೆ ಅತ್ಯಂತ ಅಗತ್ಯ.. ಈ ಹಣ ಬಿಡುಗಡೆಯಾಗದ ಪರಿಣಾಮ ನೂರಾರು ಗ್ರಾಮ ಪಂಚಾಯತಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅನೇಕ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ.
ತಮ್ಮ ಪತ್ರದಲ್ಲಿ ಈ ವಿಷಯವನ್ನು ಉಲ್ಲೇಖಿಸಿ ಸಚಿವ ಈಶ್ವರ ಖಂಡ್ರೆ, “ಕೇಂದ್ರ ಸರ್ಕಾರವು ಸಾಫ್ಟ್ವೇರ್ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ನೆಪವನ್ನಾಗಿ ಮಾಡಿಕೊಂಡು ಅನುದಾನ ಬಿಡುಗಡೆ ವಿಳಂಬ ಮಾಡುತ್ತಿದೆ. ರಾಜ್ಯದ ಎಲ್ಲ ಸಂಸದರು ಪಕ್ಷಾತೀತವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಈ ಹಣ ಬಿಡುಗಡೆ ಮಾಡಿಸಬೇಕು” ಎಂದು ಮನವಿ ಮಾಡಿದ್ದಾರೆ. ಈ ಅನುದಾನ ಬಿಡುಗಡೆಯಾಗದ ಪರಿಣಾಮ ಗ್ರಾಮೀಣಾಭಿವೃದ್ಧಿ ಯೋಜನೆಗಳು, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛ ಭಾರತ್ ಮಿಷನ್ಗೆ ಸಂಬಂಧಿಸಿದ ಕಾಮಗಾರಿಗಳು ಹಾಗೂ ಪಂಚಾಯತಿಗಳ ದೈನಂದಿನ ಕಾರ್ಯನಿರ್ವಹಣೆಯೇ ಅಸ್ತವ್ಯಸ್ತವಾಗುತ್ತಿದೆ ಎಂಬುದನ್ನು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: AI ಕನ್ನಡಕ | ಡಿಜಿಟಲ್ ಕಣ್ಗಾವಲಿನಲ್ಲಿ ವೈಯಕ್ತಿಕ ಗೌಪ್ಯತೆ!
ಕೇಂದ್ರ ಸರ್ಕಾರ ಎಸಗುತ್ತಿರುವ ಈ ಅನ್ಯಾಯದ ಕಾರಣದಿಂದಲೇ, ರಾಜ್ಯ ಸರ್ಕಾರವು ಕಳೆದ ಹಲವು ವರ್ಷಗಳಿಂದ ಕೇಂದ್ರ ತೆರಿಗೆ ಹಂಚಿಕೆಯ ಸೂತ್ರವನ್ನು ಪ್ರಶ್ನಿಸುತ್ತಿದೆ. ದೇಶದ ಜಿಎಸ್ಟಿ ಸಂಗ್ರಹಣೆ, ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರಗಳ ಮೂಲಕ ರಾಷ್ಟ್ರೀಯ ಆರ್ಥಿಕತೆಗೆ ಕರ್ನಾಟಕ ಮಹತ್ವದ ಕೊಡುಗೆ ನೀಡುತ್ತಿದೆ. ವಿಶೇಷವಾಗಿ ಬೆಂಗಳೂರು ದೇಶದ ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ಗಳಲ್ಲಿ ಒಂದಾಗಿದೆ. ಇಷ್ಟೆಲ್ಲ ಕೊಡುಗೆ ನೀಡುವ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ನ್ಯಾಯಯುತ ಪಾಲು ದೊರೆಯುತ್ತಿಲ್ಲ ಎಂದು ರಾಜ್ಯ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.
15ನೇ ಹಣಕಾಸು ಆಯೋಗದಲ್ಲಿ ಆದಾಯ ಅಂತರ ಮಾನದಂಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರಿಂದ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಅನ್ಯಾಯವಾಗಿದೆ ಎಂದು ಈ ಹಿಂದೆ ಸಿದ್ದರಾಮಯ್ಯ ಅವರು 16ನೇ ಹಣಕಾಸು ಆಯೋಗದ ಮುಂದೆಯೂ ಪ್ರತಿಪಾದಿಸಿದ್ದರು. ತೆರಿಗೆ ಸಂಗ್ರಹಣೆ, ಆರ್ಥಿಕ ಕೊಡುಗೆ, ಹಣಕಾಸಿನ ಶಿಸ್ತು ಹಾಗೂ ಉತ್ತಮ ಆಡಳಿತಕ್ಕೂ ಸಮಾನ ಪ್ರಾಮುಖ್ಯತೆ ನೀಡುವ ರೀತಿಯಲ್ಲಿ ತೆರಿಗೆ ಹಂಚಿಕೆಯ ಸೂತ್ರವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದರು.
ಇದೀಗ, ಜುಲೈ 20ರಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನದಲ್ಲಿ ರಾಜ್ಯದ 28 ಲೋಕಸಭಾ ಸದಸ್ಯರು ಮತ್ತು 12 ರಾಜ್ಯಸಭಾ ಸದಸ್ಯರು ರಾಜ್ಯದ ಹಿತಾಸಕ್ತಿಗಾಗಿ ಧ್ವನಿ ಎತ್ತಬೇಕೆಂಬ ನಿರೀಕ್ಷೆ ರಾಜ್ಯದ ಜನರಲ್ಲಿದೆ. ವಿಶೇಷವಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಸಂಸದರು ಪಕ್ಷದ ಧೋರಣೆಯನ್ನು ಬದಿಗಿಟ್ಟು, ರಾಜ್ಯದ ಹಿತಾಸಕ್ತಿಗೆ ಆದ್ಯತೆ ನೀಡಿ ಈ ಎಲ್ಲ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕೆಂದು ಕನ್ನಡಿಗರು ಒತ್ತಾಯಿಸುತ್ತಿದ್ದಾರೆ. ಬಾಕಿ ಅನುದಾನಗಳನ್ನು ಬಿಡುಗಡೆ ಮಾಡಿಸುವಂತೆ ಆಗ್ರಹಿಸುವುದು ಕರ್ನಾಟಕವನ್ನು ಪ್ರತಿನಿಧಿಸುವ ಎಲ್ಲ ಸಂಸದರ ಜವಾಬ್ದಾರಿಯೂ ಆಗಿದೆ.



