ಸೋನಮ್ ವಾಂಗ್ಚುಕ್ ಅವರ ಇಡೀ ಜೀವನ ಶಿಕ್ಷಣ ಸುಧಾರಣೆಗಾಗಿಯೇ ಮುಡಿಪಾಗಿದೆ. 1988ರಲ್ಲಿ ಅವರು ಸ್ಥಾಪಿಸಿದ ‘ಸೆಕ್ಮೋಲ್’ (SECMOL), 1994ರಲ್ಲಿ ಆರಂಭಿಸಿದ ‘ಆಪರೇಷನ್ ನ್ಯೂ ಹೋಪ್’ ಹಾಗೂ 2018ರಲ್ಲಿ ಗೀತಾಂಜಲಿ ಅವರೊಂದಿಗೆ ಜಂಟಿಯಾಗಿ ಸ್ಥಾಪಿಸಿದ ‘ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಲರ್ನಿಂಗ್’ (HIAL) ಮುಂತಾದವು ಶಿಕ್ಷಣ ಕ್ಷೇತ್ರದಲ್ಲಿ ಅವರು ತಂದ ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿವೆ. ಶಿಕ್ಷಣದ ಮೇಲಿನ ಈ ಅಗಾಧ ಕಾಳಜಿಯೇ ಅವರನ್ನು ಇಂದಿನ ಯುವಕರ ಪರವಾಗಿ ನಿಲ್ಲುವಂತೆ ಮಾಡಿದೆ ಎನ್ನುತ್ತಾರೆ ಗೀತಾಂಜಲಿ
ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್’ ಅಕ್ರಮಗಳನ್ನು ಖಂಡಿಸಿ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ತುರ್ತು ಸುಧಾರಣೆಗಳಿಗೆ ಆಗ್ರಹಿಸಿ ಪ್ರಸಿದ್ಧ ಶಿಕ್ಷಣ ತಜ್ಞ ಹಾಗೂ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹೋರಾಟ ಕೇವಲ ಸಾಂಕೇತಿಕವಲ್ಲ, ಬದಲಾಗಿ ದೇಶದ ಯುವಜನತೆಯ ಭವಿಷ್ಯವನ್ನು ಕಾಪಾಡುವ ಮಹತ್ವದ ಹೆಜ್ಜೆಯಾಗಿದೆ ಎಂದು ಅವರ ಪತ್ನಿ ಹಾಗೂ ‘ಹಿಯಾಲ್’ (HIAL) ಸಂಸ್ಥೆಯ ಸಹ-ಸಂಸ್ಥಾಪಕಿ ಗೀತಾಂಜಲಿ ಜೆ. ಆಂಗ್ಮೋ ತಿಳಿಸಿದ್ದಾರೆ.
‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶದ ಶಿಕ್ಷಣ ವ್ಯವಸ್ಥೆಯ ಲೋಪಗಳನ್ನು ಬೆತ್ತಲು ಮಾಡಿದೆ. ಈ ಅಕ್ರಮಗಳಿಂದ ನೊಂದ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವುದು ಅತ್ಯಂತ ದುರದೃಷ್ಟಕರ ಎಂದು ಗೀತಾಂಜಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂಬುದು ಯುವಜನತೆಯ ಪ್ರಮುಖ ಬೇಡಿಕೆಯಾಗಿದೆ. ಈ ರಾಜೀನಾಮೆಯು ವ್ಯವಸ್ಥೆಯ ಹೊಣೆಗಾರಿಕೆಯನ್ನು ನಿಭಾಯಿಸುವ ಮೊದಲ ಹೆಜ್ಜೆಯಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಿಜೆಪಿ (CJP) ನೇತೃತ್ವದಲ್ಲಿ ಯುವಕರು ಆರಂಭಿಸಿದ ಈ ಪ್ರತಿಭಟನೆಯಲ್ಲಿ ವಾಂಗ್ಚುಕ್ ಪಾಲ್ಗೊಳ್ಳುವ ನಿರ್ಧಾರವು ಸಂಪೂರ್ಣವಾಗಿ ‘ಸಹಜ’ಪ್ರಕ್ರಿಯೆಯಾಗಿತ್ತು ಎಂದು ಗೀತಾಂಜಲಿ ವಿವರಿಸಿದ್ದಾರೆ. ಸಮಾಜಘಾತುಕ ಶಕ್ತಿಗಳು ಯುವಕರ ಈ ನೈಜ ಹೋರಾಟವನ್ನು ಹಾದಿ ತಪ್ಪಿಸಬಾರದು ಎಂಬ ಏಕೈಕ ಉದ್ದೇಶದಿಂದ ವಾಂಗ್ಚುಕ್ ಅವರು ಈ ಚಳುವಳಿಗೆ ಬೆಂಬಲ ಸೂಚಿಸಿದರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಪ್ರತಿಯೊಬ್ಬ ಸಾರ್ವಜನಿಕರೂ ಈ ಹೋರಾಟಕ್ಕೆ ಕೈಜೋಡಿಸುವಂತೆ ಪ್ರೇರೇಪಿಸುವುದು ಅವರ ಆಶಯವಾಗಿದೆ ಎಂದಿದ್ದಾರೆ.
ಸೋನಮ್ ವಾಂಗ್ಚುಕ್ ಅವರ ಇಡೀ ಜೀವನ ಶಿಕ್ಷಣ ಸುಧಾರಣೆಗಾಗಿಯೇ ಮುಡಿಪಾಗಿದೆ. 1988ರಲ್ಲಿ ಅವರು ಸ್ಥಾಪಿಸಿದ ‘ಸೆಕ್ಮೋಲ್’ (SECMOL), 1994ರಲ್ಲಿ ಆರಂಭಿಸಿದ ‘ಆಪರೇಷನ್ ನ್ಯೂ ಹೋಪ್’ ಹಾಗೂ 2018ರಲ್ಲಿ ಗೀತಾಂಜಲಿ ಅವರೊಂದಿಗೆ ಜಂಟಿಯಾಗಿ ಸ್ಥಾಪಿಸಿದ ‘ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಲರ್ನಿಂಗ್’ (HIAL) ಮುಂತಾದವು ಶಿಕ್ಷಣ ಕ್ಷೇತ್ರದಲ್ಲಿ ಅವರು ತಂದ ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿವೆ. ಶಿಕ್ಷಣದ ಮೇಲಿನ ಈ ಅಗಾಧ ಕಾಳಜಿಯೇ ಅವರನ್ನು ಇಂದಿನ ಯುವಕರ ಪರವಾಗಿ ನಿಲ್ಲುವಂತೆ ಮಾಡಿದೆ ಎನ್ನುತ್ತಾರೆ ಗೀತಾಂಜಲಿ.

ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಈ ಉಪವಾಸ ಸತ್ಯಾಗ್ರಹವು ವಾಂಗ್ಚುಕ್ ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಕೇವಲ ಉಪ್ಪು ಮತ್ತು ನೀರನ್ನು ಸೇವಿಸುತ್ತಿರುವ ಅವರ ತೂಕದಲ್ಲಿ ಈಗಾಗಲೇ ಸುಮಾರು 9 ಕೆ.ಜಿ.ಯಷ್ಟು ಕುಸಿತ ಕಂಡಿದೆ. ಲಡಾಖ್ನ ಹವಾಮಾನಕ್ಕೂ ನವದೆಹಲಿಯ ಬೇಸಿಗೆಯ ಸೆಕೆಗೂ ಅಜಗಜಾಂತರ ವ್ಯತ್ಯಾಸವಿದ್ದು, ಇಲ್ಲಿನ 19 ದಿನಗಳ ಉಪವಾಸವು ಲಡಾಖ್ನ 34 ದಿನಗಳ ಉಪವಾಸಕ್ಕೆ ಸಮವಾಗಿದೆ ಎಂದು ಗೀತಾಂಜಲಿ ಆತಂಕ ವ್ಯಕ್ತಪಡಿಸಿದ್ದಾರೆ. ವೈದ್ಯರ ವರದಿ ಪ್ರಕಾರ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಅತ್ಯಂತ ದುರ್ಬಲವಾಗಿದೆ.
ಸರ್ಕಾರದ ವಿರುದ್ಧ ಧ್ವನಿ ಎತ್ತುವವರ ಮೇಲೆ ತನಿಖಾ ಸಂಸ್ಥೆಗಳನ್ನು ಛೂ ಬಿಡುವ ಇಂದಿನ ದಿನಗಳಲ್ಲಿ, ಜನಸಾಮಾನ್ಯರ ಪರವಾದ ‘ಮೂರನೇ ಧ್ವನಿ’ಯಾಗಿ ನಿಲ್ಲಲು ವಾಂಗ್ಚುಕ್ ನಿರ್ಧರಿಸಿದ್ದಾರೆ ಎಂದು ಗೀತಾಂಜಲಿ ಹೇಳುತ್ತಾರೆ. ಯುವಕರ ಅಸಮಾಧಾನ ಮತ್ತು ಶಿಕ್ಷಣ ವ್ಯವಸ್ಥೆಯ ವೈಫಲ್ಯಗಳ ವಿರುದ್ಧ ಧ್ವನಿ ಎತ್ತುವ ಸಾಮರ್ಥ್ಯ ಪ್ರಸ್ತುತ ಯಾರಿಗೂ ಇಲ್ಲದಿರುವುದರಿಂದ, ತಾವೇ ಈ ಜವಾಬ್ದಾರಿಯನ್ನು ಹೊತ್ತುಕೊಂಡು ನೈಜ ಸಮಸ್ಯೆಗಳಿಗಾಗಿ ಹೋರಾಟಕ್ಕೆ ಇಳಿದಿದ್ದಾರೆ ಎಂಬುದು ವಾಂಗ್ಚುಕ್ ಅವರ ಪತ್ನಿಯ ವಿವರಣೆಯಾಗಿದೆ.
ವಾಂಗ್ಚುಕ್ ಅವರ ಈ ಉಪವಾಸ ಸತ್ಯಾಗ್ರಹವು ಕೇವಲ ಒಂದು ಪರೀಕ್ಷೆಯ ಅಕ್ರಮದ ವಿರುದ್ಧದ ಹೋರಾಟವಾಗಿ ಉಳಿದಿಲ್ಲ; ಬದಲಿಗೆ ದೇಶದ ಸಮಗ್ರ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ತುರ್ತು ಸುಧಾರಣೆಗಳ ಕಡೆಗೆ ಬೊಟ್ಟು ಮಾಡಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸರ್ಕಾರವು ಪ್ರತಿಷ್ಠೆಯನ್ನು ಬದಿಗೊತ್ತಿ, ಈ ವಾಸ್ತವಿಕ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯವಿದೆ. ಶಿಕ್ಷಣ ವ್ಯವಸ್ಥೆಯ ಪಾರದರ್ಶಕತೆಗಾಗಿ ನಡೆಯುತ್ತಿರುವ ಈ ಅಹಿಂಸಾತ್ಮಕ ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತದೆಯೇ ಕಾದುನೋಡಬೇಕಿದೆ




