ಯುದ್ಧದಾಹಿ ಅಮೆರಿಕದಿಂದ ಭಾರತ ದೂರವಿರಲಿ; ದೃಢ ನಿರ್ಧಾರ ಕೈಗೊಳ್ಳಲಿ

Date:

Advertisements

ಯುದ್ಧದಾಹಿ ಅಮೆರಿಕಕ್ಕೆ ತನ್ನ ದೇಶ ಬಿಟ್ಟು ಉಳಿದ ದೇಶಗಳ ನೆಮ್ಮದಿ ಬೇಕಾಗಿಲ್ಲ. ಲಾಭ ಪಡೆದು ಕೈಕೊಡುವ ಸಣ್ಣತನ ಹಿಂದಿನಿಂದಲೂ ಕರಗತ ಮಾಡಿಕೊಂಡಿದೆ. ಇಂತಹ ಹಲವು ಕಾರಣಗಳಿಂದ ಭಾರತ ಸರ್ಕಾರ ಅಮೆರಿಕದ ಗಾಳಕ್ಕೆ ಬೀಳದೆ ಹತ್ತಾರು ಸಮಸ್ಯೆಗಳಿಗೆ ಕಾರಣವಾಗುವ ಯುದ್ಧದ ಆಲೋಚನೆಯನ್ನು ಬದಿಗಿಡಬೇಕಿದೆ

ಕಾಶ್ಮೀರದ ಪಹಲ್ಗಾಮ್‌ ಉಗ್ರರ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನದ ಸಂಬಂಧಗಳು ಮತ್ತಷ್ಟು ಹದಗೆಟ್ಟಿದ್ದು, ಗಡಿಗಳಲ್ಲಿ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ನಾಯಕರು ತಾನು ಪಾಕ್‌ಗೆ ಪಾಠ ಕಲಿಸದೆ ಬಿಡುವುದಿಲ್ಲ ಎನ್ನುವ ಮಾತುಗಳನ್ನು ಹೇಳುತ್ತಿದ್ದರೆ, ಪಾಕಿಸ್ತಾನಿ ನಾಯಕರು ಕೂಡ ಭಾರತ ಇನ್ನೇನು ನಮ್ಮ ಮೇಲೆ ದಾಳಿ ನಡೆಸುತ್ತದೆ ಎಂಬರ್ಥದಲ್ಲಿ ಮಾತನಾಡುತ್ತಿದ್ದಾರೆ. ನಮ್ಮ ಮೇಲೆ ಭಾರತೀಯ ಸೇನೆ ಯುದ್ಧಕ್ಕೆ ಅಣಿಗೊಂಡಿದ್ದು, ಅಮೆರಿಕ, ಚೀನಾ ಸೇರಿದಂತೆ ಇತರ ಪ್ರಬಲ ರಾಷ್ಟ್ರಗಳ ಮೊರೆ ಹೋಗಿ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡುತ್ತಿದ್ದಾರೆ. ಚೀನಾ ಹಾಗೂ ಅಮೆರಿಕ ಎರಡೂ ರಾಷ್ಟ್ರಗಳ ಜೊತೆ ಹಲವು ದಶಕಗಳಿಂದ ಉತ್ತಮ ಬಾಂಧವ್ಯ ಹೊಂದಿರುವ ಪಾಕ್‌ ಸದ್ಯಕ್ಕೆ ಹೆಚ್ಚು ಅಂಗಲಾಚುತ್ತಿರುವುದು ಅಮೆರಿಕವನ್ನು. ಯುದ್ಧವನ್ನು ನಿಲ್ಲಿಸಿ ಎಂದು ನೇರವಾಗಿ ಬೇಡಿಕೆಯಿಡುತ್ತಿದೆ. ಆದರೆ ಇತಿಹಾಸವನ್ನು ಗಮನಿಸಿದರೆ ಅಮೆರಿಕ ತನ್ನ ಲಾಭಕ್ಕಾಗಿ ವಿಶ್ವದ ಹಲವಾರು ರಾಷ್ಟ್ರಗಳನ್ನು ತಂತ್ರ, ಕುತಂತ್ರದ ಮೂಲಕ ನಿರ್ನಾಮ ಮಾಡಿರುವುದು ತಿಳಿಯುತ್ತದೆ.

ಈ ನಡುವೆ ಅಮೆರಿಕ ತಾನು ಭಯೋತ್ಪಾದಕರನ್ನು ಬಗ್ಗುಬಡಿಯಲು ಸಹಾಯ ಮಾಡುವುದಾಗಿ ಭಾರತಕ್ಕೆ ಭರವಸೆ ನೀಡಿದೆ. ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಸೇರಿದಂತೆ ಪ್ರಮುಖ ನಾಯಕರು ಭಾರತಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳುತ್ತಿದ್ದಾರೆ. ಒಂದಷ್ಟು ಆರ್ಥಿಕತೆ ಹಾಗೂ ಅಣ್ವಸ್ತ್ರ ಬಲದೊಂದಿಗೆ ಉತ್ತಮ ಸೇನೆಯನ್ನು ಹೊಂದಿರುವ ಭಾರತದ ಸಹಾಯ ಅಮೆರಿಕಕ್ಕೆ ಬೇಕಿದೆ ಎನ್ನುವುದು ಯಾರಿಗೂ ತಿಳಿಯದ ವಿಷಯವಲ್ಲ. ಯುದ್ಧದಾಹ ಹಾಗೂ ಸಂಪನ್ಮೂಲ ದಾಹದಿಂದ ವಿಯೆಟ್ನಾಂ, ಇರಾನ್‌, ಚಿಲಿ, ಲಿಬಿಯ, ಸಿರಿಯಾ, ಅಫ್ಘಾನಿಸ್ತಾನ, ಯಮನ್‌, ಲ್ಯಾಟಿನ್‌ ಅಲ್ಲದೆ ಲ್ಯಾಟಿನ್‌ ಅಮೆರಿಕ ದೇಶಗಳು ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳು ಹಲವು ಬಾರಿ ತೊಂದರೆಗೊಳಗಾಗುವುದರ ಜೊತೆ ಆರ್ಥಿಕವಾಗಿ ನಷ್ಟವನ್ನು ಅನುಭವಿಸಿವೆ. ಕೆಲವು ರಾಷ್ಟ್ರಗಳಲ್ಲಿ ಕಮ್ಯೂನಿಸಂ ಅನ್ನು ನಾಶ ಮಾಡಲು ಹವಣಿಸಿದರೆ, ಹಲವೊಮ್ಮೆ ಆಯಾ ದೇಶದ ಸಂಪನ್ಮೂಲವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಿದೆ. ಸೋವಿಯತ್‌ ರಷ್ಯಾ ಒಕ್ಕೂಟದ ಪತನದ ನಂತರ ವಿಶ್ವಕ್ಕೆ ನಾನೆ ದೊಡ್ಡಣ್ಣ ಎಂದು ಹೇಳಿಕೊಳ್ಳುತ್ತಿದೆ.

Advertisements

ಮಧ್ಯಪ್ರಾಚ್ಯದಲ್ಲಿ ಅಮೆರಿಕದ ವಿದೇಶಾಂಗ ನೀತಿಯು ಸಂಕೀರ್ಣ ಮತ್ತು ವಿವಾದಾತ್ಮಕವಾಗಿದೆ. ಇರಾಕ್ – ಇರಾನ್‌ ಮತ್ತು ಅಫ್ಘಾನಿಸ್ತಾನದ ಯುದ್ಧಗಳು ಆ ದೇಶಗಳಲ್ಲಿ ಭಾರಿ ಮಾನವೀಯ ಮತ್ತು ರಾಜಕೀಯ ಬಿಕ್ಕಟ್ಟುಗಳನ್ನು ಸೃಷ್ಟಿಸಿವೆ. ವಿಯೆಟ್ನಾಂ ಯುದ್ಧವು ಅಮೆರಿಕದ ವಿದೇಶಾಂಗ ನೀತಿಯ ಒಂದು ದುರಂತ ಉದಾಹರಣೆಯಾಗಿದೆ ಎಂದು ಅನೇಕರು ಪರಿಗಣಿಸುತ್ತಾರೆ. ಕಮ್ಯುನಿಸಂ ಅನ್ನು ತಡೆಯುವ ಹೆಸರಿನಲ್ಲಿ ನಡೆದ ಈ ಯುದ್ಧವು ಲಕ್ಷಾಂತರ ಜನರ ಸಾವಿಗೆ ಕಾರಣವಾಯಿತು ಮತ್ತು ವಿಯೆಟ್ನಾಂಅನ್ನು ಸಂಪೂರ್ಣವಾಗಿ ನಾಶಮಾಡಿತು. ಅಮೆರಿಕವು ಲ್ಯಾಟಿನ್ ಅಮೆರಿಕದ ಅನೇಕ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಹಸ್ತಕ್ಷೇಪ ಮಾಡಿದೆ. ಕೆಲವು ಸಂದರ್ಭಗಳಲ್ಲಿ, ಚುನಾಯಿತ ಸರ್ಕಾರಗಳನ್ನು ಉರುಳಿಸಲು ಬೆಂಬಲ ನೀಡಿದೆ ಹಾಗೂ ಮಿಲಿಟರಿ ಸರ್ವಾಧಿಕಾರಿಗಳನ್ನು ಬೆಂಬಲಿಸಿದೆ. 1973ರಲ್ಲಿ ಚಿಲಿ ದೇಶದಲ್ಲಿ ಅಮೆರಿಕವು ತನ್ನ ಸಿಐಎ ಸಹಾಯದಿಂದ ಚಿಲಿಯ ಜನರಿಂದ ಆಯ್ಕೆಯಾದ ಪ್ರಧಾನಿ ಸಾಲ್ವಡಾರ್ ಅಲ್ಲಾಂಡೆ ಅವರನ್ನು ಪತನಗೊಳಿಸುವುದು ಸೇರಿದಂತೆ ಹಲವು ಹಸ್ತಕ್ಷೇಪಗಳು ಆ ದೇಶಗಳಲ್ಲಿ ರಾಜಕೀಯ ಅಸ್ಥಿರತೆ, ಹಿಂಸಾಚಾರ ಮತ್ತು ಆರ್ಥಿಕ ಅಭಿವೃದ್ಧಿಗೆ ಅಡ್ಡಿಯುಂಟುಮಾಡಿದವು.

ಲಿಬಿಯಾ, ಯಮನ್‌, ಸಿರಿಯಾ, ಅಫ್ಘಾನಿಸ್ತಾನ ಮುಂತಾದ ಸರ್ಕಾರಗಳನ್ನು ಅಸ್ಥಿರಗೊಳಿಸಲು ಐಸಿಸ್‌ನಂತಹ ಉಗ್ರಗಾಮಿ ಸಂಘಟನೆಯನ್ನು ಹುಟ್ಟುಹಾಕಿತು. ಕೊನೆಗೆ ಇದೇ ಐಸಿಸ್‌ ಸಂಘಟನೆ ಅಮೆರಿಕಕ್ಕೆ ಮಗ್ಗುಲ ಮುಳ್ಳಾಗಿದ್ದು ಸುಳ್ಳಲ್ಲ. ಒಳಗೆ ಹಲವು ದುರಾಲೋಚನೆಗಳನ್ನು ಇಟ್ಟುಕೊಳ್ಳುವ ಅಮೆರಿಕ ಮೇಲ್ನೋಟಕ್ಕೆ ತಾನು ವಿಶ್ವದ ಎಲ್ಲ ದೇಶಗಳ ಸಮಸ್ಯೆಯನ್ನು ಸರಿಪಡಿಸುತ್ತೇನೆ ಎಂದು ಹೇಳಿ ಮೂರನೇ ವ್ಯಕ್ತಿಯಾಗಿ ಕಾಲಿಟ್ಟು ಉಭಯ ದೇಶಗಳ ಮೂಲ ಸಮಸ್ಯೆಗಳನ್ನು ಬಿಟ್ಟು ತನ್ನ ಪ್ರಭಾವ ಬೆಳೆಸುವುದು ಅಮೆರಿಕದ ಚಾಳಿಯಾಗಿದೆ. ಇದಕ್ಕೆ ಸದ್ಯದ ಉದಾಹರಣೆಯೆಂದರೆ ಇಸ್ರೇಲ್‌ – ಪ್ಯಾಲೆಸ್ತೀನ್ ಹಾಗೂ ರಷ್ಯಾ – ಉಕ್ರೇನ್‌ ಯುದ್ಧಗಳು. ಇಸ್ರೇಲ್‌ – ಪ್ಯಾಲೆಸ್ತೀನ್ ಯುದ್ಧಕ್ಕೆ ಹಲವು ದಶಕಗಳ ಇತಿಹಾಸವಿದೆ. ತನ್ನ ಸ್ವಂತ ಭೂಮಿಗಾಗಿ ಬಂಡುಕೋರರ ಹಣೆಪಟ್ಟಿಯನ್ನು ಕಟ್ಟಿಕೊಂಡು ಹೋರಾಡಬೇಕಾದ ಅನಿವಾರ್ಯತೆ ಪ್ಯಾಲೆಸ್ತೀನ್ ಪ್ರಜೆಗಳಿಗೆ ಒದಗಿಬಂದಿದೆ.

ಈ ಸುದ್ದಿ ಓದಿದ್ದೀರಾ? IPL 2025: ಬ್ಯಾಟರ್‌ಗಳು ಅಳತೆ ಮೀರಿದ ಬ್ಯಾಟ್ ಬಳಸುತ್ತಿದ್ದಾರೆಯೇ? ಅಂಪೈರ್‌ಗಳು ಪರಿಶೀಲಿಸುವುದೇಕೆ?

ಮೂಲ ದೇಶವನ್ನು ಕಳೆದುಕೊಂಡು ಗಾಜಾಪಟ್ಟಿಯಲ್ಲಿ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಹತ್ತಾರು ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಪ್ಯಾಲೆಸ್ತೀನ್‌ಗೆ ನ್ಯಾಯ ದೊರಕಿಸಿಕೊಡದ ಅಮೆರಿಕ ಮತ್ತೊಂದು ಯುದ್ಧದಾಹಿ ಇಸ್ರೇಲ್‌ಗೆ ಸದಾ ಬೆನ್ನೆಲುಬಾಗಿ ನಿಂತಿದೆ. ಒಂದೂವರೆ ವರ್ಷದಿಂದ ಶುರುವಾದ ಇವೆರೆಡು ದೇಶಗಳ ಯುದ್ಧ ಇನ್ನೂ ನಿಂತಿಲ್ಲ. ಹಾಗೆಯೇ ಕಳೆದ ನಾಲ್ಕೂವರೆ ವರ್ಷದಿಂದ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್‌ ಯುದ್ಧವನ್ನು ನಿಲ್ಲಿಸಲು ಅಮೆರಿಕಗೆ ಸಾಧ್ಯವಾಗಿಲ್ಲ. ಉಕ್ರೇನ್‌ ಪರವಾಗಿದ್ದ ಅಮೆರಿಕ ಈಗ ಡೊನಾಲ್ಡ್ ಟ್ರಂಪ್‌ ಅಧಿಕಾರಕ್ಕೆ ಬಂದ ನಂತರ ರಷ್ಯಾ ಜೊತೆ ಮೃದು ಧೋರಣೆ ತಾಳುತ್ತಿದೆ.

ಭಾರತ – ಪಾಕ್‌ ಮಧ್ಯಸ್ಥಿಕೆ ಅಪಾಯವೆ ಹೆಚ್ಚು

ಪಹಲ್ಗಾಮ್‌ ದಾಳಿಯ ನಂತರ ಅಮೆರಿಕವು ಭಾರತದ ಬಗ್ಗೆ ಹೆಚ್ಚು ಮೃದುಧೋರಣೆ ತಾಳುತ್ತಿರುವುದರಲ್ಲಿ ಪ್ರಮುಖ ಕಾರಣಗಳಿರುವುದು ಸುಳ್ಳಲ್ಲ. ತನ್ನ ವೈರಿ ಚೀನಾವನ್ನು ಮಟ್ಟಹಾಕಲು ಭಾರತದ ಸಹಾಯದ ಅಗತ್ಯವಿದೆ. ವಿಶ್ವದಲ್ಲಿ ಅಮೆರಿಕಕ್ಕೆ ಆರ್ಥಿಕವಾಗಿ ಹಾಗೂ ಮಿಲಿಟರಿ ಮಟ್ಟದಲ್ಲಿ ಹೆಚ್ಚು ಪೈಪೋಟಿ ನೀಡಬಲ್ಲ ರಾಷ್ಟ್ರವೆಂದರೆ ಚೀನಾ ಮಾತ್ರ. ಡೊನಾಲ್ಡ್‌ ಟ್ರಂಪ್‌ ಸುಂಕ ಯುದ್ಧವನ್ನು ಸಾರಿದ ನಂತರ ಅಮೆರಿಕಕ್ಕೆ ಮರಳಿ ಸುಂಕ ವಿಧಿಸಿದ ರಾಷ್ಟ್ರವೆಂದರೆ ಚೀನಾ. ವಿಶ್ವದ ಇತರ ರಾಷ್ಟ್ರಗಳು ಸುಂಕ ಏರಿಕೆಯನ್ನು ಖಂಡಿಸಿದರಾದರೂ ಚೀನಾ ರೀತಿಯಲ್ಲಿ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. ಈ ಹಿಂದಿನ ಭಾರತ – ಪಾಕ್‌ ಯುದ್ಧಗಳ ವಿಚಾರದಲ್ಲಿ ಅಮೆರಿಕದ ಪಾತ್ರಕ್ಕೆ ಬಂದರೆ ಬಹುತೇಕ ಸಂದರ್ಭದಲ್ಲಿ ಪಾಕಿಸ್ತಾನದ ಪರವಾಗಿಯೇ ಅಮೆರಿಕ ಬೆಂಬಲ ನೀಡಿದೆ. ಶೀತಲ ಸಮರದ ಕಾಲದಿಂದಲೂ ಅಮೆರಿಕಾವು ಪಾಕಿಸ್ತಾನಕ್ಕೆ ಸೈನಿಕ ಮತ್ತು ಆರ್ಥಿಕ ನೆರವು ನೀಡಿದೆ. ಭಾರತಕ್ಕೆ ನೀಡಿದ್ದರೂ ಅದರಲ್ಲಿ ಬಹುತೇಕ ಆರ್ಥಿಕ ಹಿತಾಸಕ್ತಿಯೇ ಹೆಚ್ಚಾಗಿತ್ತು.

ಭಾರತ ಹಾಗೂ ಪಾಕಿಸ್ತಾನ ನಡುವೆ ನಾಲ್ಕು ಬಾರಿ ಯುದ್ಧಗಳು ನಡೆದಿವೆ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ 1947, 1965, 1971 ಹಾಗೂ 1999ರಲ್ಲಿ ಯುದ್ಧಗಳು ಜರುಗಿವೆ. 1947ರಲ್ಲಿ ನಡೆದ ಮೊದಲ ಯುದ್ಧದಲ್ಲಿ ಎರಡೂ ರಾಷ್ಟ್ರಗಳ ನಡುವೆ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಿತ್ತು. 1965ರ ಯುದ್ಧದಲ್ಲಿ ಪಾಕ್‌ಗೆ ಶಸ್ತ್ರಾಸ್ತ್ರ ಬೆಂಬಲ ನೀಡದಿದ್ದರೂ ಪರೋಕ್ಷವಾಗಿ ಸಹಕರಿಸಿತ್ತು. ಆದರೆ 1971ರಲ್ಲಿ ಬಾಂಗ್ಲಾ ವಿಮೋಚನೆಯ ಸಂದರ್ಭದಲ್ಲಿ ನಡುವೆ ನಡೆದ ಕದನದಲ್ಲಿ ಅಮೆರಿಕವು ನೇರವಾಗಿಯೇ ಪಾಕಿಸ್ತಾನಕ್ಕೆ ಬೆಂಬಲ ನೀಡಿತ್ತು. ವಿಮಾನವಾಹಕ ನೌಕೆ ಸೇರಿದಂತೆ ಹಲವು ಶಸ್ತ್ರಾಸ್ತ್ರವನ್ನು ಪಾಕ್‌ಗೆ ನೀಡಲಾಗಿತ್ತು. ಆದರೂ ಇಂದಿರಾ ಗಾಂಧಿಯವರ ದಿಟ್ಟ ನಿರ್ಧಾರ ಹಾಗೂ ಭಾರತೀಯ ಸೇನೆಯ ಅತ್ಯುನ್ನತ ಹೋರಾಟದ ಫಲದಿಂದ ಭಾರತಕ್ಕೆ ಜಯವಾಯಿತು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿಯೂ ಅಮೆರಿಕ ನೆರವು ಪರೋಕ್ಷವಾಗಿತ್ತು. ಈಗ ಮತ್ತೆ ಪಹಲ್ಗಾಮ್‌ ದಾಳಿಯ ನಂತರ ಎರಡೂ ರಾಷ್ಟ್ರಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಯುದ್ಧ ಮಾಡಬೇಡಿ ಎಂದು ಭಾರತಕ್ಕೆ ಉಪದೇಶ ನೀಡುತ್ತಿರುವ ಅಮೆರಿಕದ ಮಾತಿನ ಹಿಂದೆ ಹಲವು ಲೆಕ್ಕಾಚಾರಗಳಿವೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದೊಂದಿಗೆ ಹತ್ತಿರವಾಗಿರುವ ಡೊನಾಲ್ಡ್ ಟ್ರಂಪ್‌ ಯುದ್ಧ ಸಾಮಗ್ರಿಯ ಪೂರೈಕೆಯಲ್ಲಿ ಭಾರತದ ಜೊತೆ ಸಾವಿರಾರು ಕೋಟಿ ರೂ. ವ್ಯವಹಾರಗಳನ್ನು ನಡೆಸಿದ್ದಾರೆ. ಇತ್ತೀಚಿಗೆ ಸೇನಾ ಹಾರ್ಡ್‌ ವೇರ್ ಹಾಗೂ ಸರಕು ಸಾಗಣೆಗೆ ನೆರವು ನೀಡುವ 131 ಮಿಲಿಯನ್ ಡಾಲರ್ (21,108 ಕೋಟಿ) ಮೊತ್ತದ ವಸ್ತುಗಳನ್ನು ಭಾರತಕ್ಕೆ ಪೂರೈಸುವ ಪ್ರಸ್ತಾವಕ್ಕೆ ಅಮೆರಿಕ ಒಪ್ಪಿಗೆ ನೀಡಿದೆ. ಭಾರತವು ಅಮೆರಿಕದಿಂದ ಸೇನಾ ಉಪಕರಣಗಳ ಖರೀದಿ ಹೆಚ್ಚಿಸುವ ನಿಟ್ಟಿನಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರವು ಒತ್ತಡ ಹೇರುತ್ತಿರುವ ಬೆನ್ನಲೇ ಈ ಅನುಮೋದನೆ ಸಿಕ್ಕಿದೆ. ಬರಿ ಇಷ್ಟೆ ಅಲ್ಲದೆ ಮತ್ತಷ್ಟು ಸಾವಿರಾರು ಕೋಟಿಗಳ ವ್ಯವಹಾರ ಎರಡೂ ರಾಷ್ಟ್ರಗಳ ನಡುವೆ ನಡೆದಿದೆ ಎನ್ನಲಾಗುತ್ತಿದೆ. ಇವೆಲ್ಲವನ್ನು ಗಮನಿಸಿದರೆ ಯುದ್ಧದಾಹಿ ಅಮೆರಿಕಕ್ಕೆ ತನ್ನ ದೇಶ ಬಿಟ್ಟು ಉಳಿದ ದೇಶಗಳ ನೆಮ್ಮದಿ ಬೇಕಾಗಿಲ್ಲ. ಲಾಭ ಪಡೆದು ಕೈಕೊಡುವ ಸಣ್ಣತನ ಹಿಂದಿನಿಂದಲೂ ಕರಗತ ಮಾಡಿಕೊಂಡಿದೆ. ಇಂತಹ ಹಲವು ಕಾರಣಗಳಿಂದ ಭಾರತ ಸರ್ಕಾರ ಅಮೆರಿಕದ ಗಾಳಕ್ಕೆ ಬೀಳದೆ ಹತ್ತಾರು ಸಮಸ್ಯೆಗಳಿಗೆ ಕಾರಣವಾಗುವ ಯುದ್ಧದ ಆಲೋಚನೆಯನ್ನು ಬದಿಗಿಟ್ಟು ರಾಜತಾಂತ್ರಿಕ ಹಾಗೂ ಸೇನಾ ನೆರವಿನಿಂದ ಉಗ್ರರನ್ನು ಮಟ್ಟಹಾಕುವ ದೃಢ ನಿರ್ಧಾರ ಕೈಗೊಳ್ಳಬೇಕಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X