ಭಾರತದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರುಕಟ್ಟೆಯಲ್ಲಿ ಸುಮಾರು 35ರಿಂದ 36%ರಷ್ಟು ಮಾರುಕಟ್ಟೆ ಪಾಲನ್ನು ಬಿಸ್ಲೆರಿ ಹೊಂದಿದೆ. ಬಿಸ್ಲೆರಿ ನೀರಿನ ಸಂಸ್ಥೆ ‘ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್’ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಾನೂನು ಕ್ರಮಕ್ಕೆ ಅನುಮತಿ ನೀಡಿದೆ. ಈ ಕ್ರಮವು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಬಿಸ್ಲೆರಿ ವಿರುದ್ಧ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006’ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ದಕ್ಷಿಣ ಗೋವಾದ ವೆರ್ನಾ ಘಟಕದಲ್ಲಿ ಉತ್ಪಾದನೆಯಾದ ನಿರ್ದಿಷ್ಟವಾಗಿ ‘ಬ್ಯಾಚ್ ಸಂಖ್ಯೆ GO 270’ ಉತ್ಪನ್ನದ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಅಲ್ಲದೆ, ಪರೀಕ್ಷೆಗೆ ಒಳಪಡಿಸಿದ ಮಾದರಿಗಳ ಪೈಕಿ ಕೇವಲ ಒಂದು ಬ್ಯಾಚ್ ಮಾತ್ರ ನಿಗದಿತ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂಬುದನ್ನು ಎಫ್‌ಎಸ್‌ಎಸ್‌ಎಐ ಸ್ಪಷ್ಟಪಡಿಸಿದೆ. ಇದು ಬಿಸ್ಲೆರಿಯ ಇತರ ಉತ್ಪನ್ನಗಳ ಮೇಲಿನ ಅಥವಾ ದೇಶವ್ಯಾಪಿ ಮಾರಾಟದ ಮೇಲಿನ ಸಂಪೂರ್ಣ ನಿಷೇಧವಲ್ಲ ಎಂದು ತಿಳಿಸಿದೆ.
ಅಂದಹಾಗೆ, ನಾಗರಿಕರಿಗೆ ಸುರಕ್ಷಿತ ಆಹಾರ ಮತ್ತು ಕುಡಿಯುವ ನೀರು ಲಭ್ಯವಾಗುವಂತೆ ನೋಡಿಕೊಳ್ಳುವುದು ನಿಯಂತ್ರಕ ಸಂಸ್ಥೆಯ ಪ್ರಾಥಮಿಕ ಕರ್ತವ್ಯ. ಆದರೂ, ಈ ಪ್ರಕರಣದ ಹಿಂದಿನ ಘಟನೆಗಳ ಕಾಲಾನುಕ್ರಮ ಮತ್ತು ಮಾರುಕಟ್ಟೆಯ ಬದಲಾಗುತ್ತಿರುವ ವಾಸ್ತವಗಳು ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಈ ಬೆಳವಣಿಗೆಯ ಹಿನ್ನೆಲೆಯನ್ನು ಗಮನಿಸುವುದಾದರೆ; 2025ರ ಸೆಪ್ಟೆಂಬರ್ 22ರಿಂದ 28ರ ಅವಧಿಯಲ್ಲಿ ಪ್ಯಾಕೇಜ್ಡ್ ಕುಡಿಯುವ ನೀರಿನ ಮೇಲಿನ ಜಿಎಸ್‌ಟಿ ದರವನ್ನು 18ರಿಂದ 5%ಗೆ ಇಳಿಸುವ ನಿರ್ಧಾರವನ್ನು ಮೋದಿ ಸರ್ಕಾರ ತೆಗೆದುಕೊಂಡಿತು. ಈ ತೆರಿಗೆ ಇಳಿಕೆಯ ಬೆನ್ನಲ್ಲೇ ರಿಲಯನ್ಸ್ ಸಂಸ್ಥೆಯು ತನ್ನ ‘ಕ್ಯಾಂಪಾ’ ಬ್ರ್ಯಾಂಡ್‌ನ ಕುಡಿಯುವ ನೀರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಬಿಸ್ಲೆರಿ ಒಂದು ಲೀಟರ್ ನೀರನ್ನು 20 ರೂಪಾಯಿಗೆ ಮಾರಾಟ ಮಾಡುತ್ತಿದ್ದರೆ, ಕ್ಯಾಂಪಾ ನೀರನ್ನು 15 ರೂಪಾಯಿಗೆ ಅಂದರೆ 5 ರೂಪಾಯಿ ಕಡಿಮೆ ಬೆಲೆಗೆ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತೀವ್ರ ಬೆಲೆ ಸ್ಪರ್ಧೆಗೆ ನಾಂದಿ ಹಾಡಿತು.
ಇದಾದ ಕೆಲವೇ ದಿನಗಳಲ್ಲಿ, 2025ರ ಸೆಪ್ಟೆಂಬರ್ 30ರಂದು ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ಗೋವಾದ ವೆರ್ನಾ ಘಟಕದಿಂದ ಆರು ಮಾದರಿಗಳನ್ನು ಸಂಗ್ರಹಿಸಿದರು. ಅವುಗಳಲ್ಲಿ ಐದು ಮಾದರಿಗಳು ಎಲ್ಲ ಪರೀಕ್ಷೆಗಳಲ್ಲಿ ಪಾಸ್ ಆದರೂ, ‘GO 270’ ಬ್ಯಾಚ್‌ನಲ್ಲಿ ಅಧಿಕ ‘ಬ್ರೋಮೇಟ್’ ಅಂಶ ಕಂಡುಬಂದಿದೆ ಎಂದು ವರದಿಯಾಯಿತು.
2025ರ ನವೆಂಬರ್ 22ರಂದು ಬಿಸ್ಲೆರಿ ಸಂಸ್ಥೆಯು ಈ ಆರಂಭಿಕ ಪರೀಕ್ಷಾ ವರದಿಯನ್ನು ಅಧಿಕೃತವಾಗಿ ಪ್ರಶ್ನಿಸಿದ ಹಿನ್ನೆಲೆಯಲ್ಲಿ, ಮಾದರಿಯನ್ನು ಮರುಪರೀಕ್ಷೆಗಾಗಿ ರೆಫರಲ್ ಫುಡ್ ಲ್ಯಾಬೊರೇಟರಿಗೆ ಕಳುಹಿಸಲಾಯಿತು. 2025ರ ಅಂತ್ಯದಿಂದ 2026ರ ಫೆಬ್ರವರಿ 2ರ ನಡುವೆ ಹೊರಬಿದ್ದ ಪ್ರಯೋಗಾಲಯ ವರದಿಗಳು ಪರಸ್ಪರ ವಿರುದ್ಧವಾದ ಅಂಶಗಳನ್ನು ಮುಂದಿಟ್ಟವು. ರೆಫರಲ್ ಲ್ಯಾಬ್ ವರದಿಯಲ್ಲಿ ಬ್ರೋಮೇಟ್ ಅಂಶ ಸುರಕ್ಷಿತ ಮಿತಿಯಲ್ಲಿದೆ ಎಂದು ಉಲ್ಲೇಖವಾದರೂ, ನೀರಿನ pH ಮಟ್ಟದಲ್ಲಿ ದೋಷವಿದೆ ಎಂದು ಹೇಳಿ ಆ ಬ್ಯಾಚ್‌ನ ನೀರನ್ನು ಅಸುರಕ್ಷಿತ ಎಂದು ಘೋಷಿಸಿತು. ಅದೇ ವೇಳೆ, ಬಿಸ್ಲೆರಿ ತನ್ನ ಉತ್ಪನ್ನವನ್ನು ಎಫ್‌ಎಸ್‌ಎಸ್‌ಎಐ ಅನುಮೋದಿತ ಸ್ವತಂತ್ರ ಲ್ಯಾಬೊರೇಟರಿಯಲ್ಲಿ ಪರೀಕ್ಷೆಗೊಳಪಡಿಸಿತು. ಆ ವರದಿಯಲ್ಲಿ, ಬ್ರೋಮೇಟ್ ಸೇರಿದಂತೆ ಇತರ ಅಂಶಗಳು ಸುರಕ್ಷಿತವಾಗಿವೆ ಎಂಬುದಾಗಿ ಬಂದಿತು. ಆ ವರದಿಯನ್ನು ಬಿಸ್ಲೆರಿ ಸಂಸ್ಥೆಯು 2026ರ ಫೆಬ್ರವರಿ 2ರಂದು ಎಫ್‌ಎಸ್‌ಎಸ್‌ಎಐ ಪಶ್ಚಿಮ ವಲಯ ಕಚೇರಿಗೆ ಸಲ್ಲಿಸಿತು. ಈ ವಿಭಿನ್ನ ವರದಿಗಳ ಬಳಿಕ ಸುಮಾರು ತಿಂಗಳುಗಳ ಕಾಲ ಈ ವಿಚಾರದಲ್ಲಿ ಯಾವುದೇ ಹೊಸ ಬೆಳವಣಿಗೆಗಳು ಕಂಡುಬರಲಿಲ್ಲ.
ಇದೆಲ್ಲದರ ನಡುವೆ, 2026ರ ನವೆಂಬರ್ 21ರಂದು ರಿಲಯನ್ಸ್ ಸಂಸ್ಥೆಯು ಆಂಧ್ರಪ್ರದೇಶದಲ್ಲಿ ಏಷ್ಯಾದ ಅತಿದೊಡ್ಡ ಪಾನೀಯ ಘಟಕವನ್ನು ಉದ್ಘಾಟಿಸಿತು; ಕಳೆದ ವರ್ಷ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ಈ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಒಂದೇ ವರ್ಷದೊಳಗೆ ಕ್ಯಾಂಪಾ ಕೋಲಾ, ಹಣ್ಣಿನ ರಸ ಹಾಗೂ ಪ್ಯಾಕೇಜ್ಡ್ ಕುಡಿಯುವ ನೀರಿನ ಉತ್ಪಾದನೆ ಆರಂಭಗೊಂಡಿತು.
ಈ ಘಟಕ ಉದ್ಘಾಟನೆಯಾದ ಮರುದಿನವೇ, (2026ರ ನ. 22) ತಿಂಗಳುಗಳ ಮೌನದ ಬಳಿಕ ಎಫ್‌ಎಸ್‌ಎಸ್‌ಎಐ ಬಿಸ್ಲೆರಿ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿರುವುದಾಗಿ ಮತ್ತು ಬ್ಯಾಚ್ GO 270 ಮಾರಾಟ ನಿಷೇಧಿಸಿರುವುದಾಗಿ ಘೋಷಿಸಿತು. ನವೆಂಬರ್ 23 ಮತ್ತು 24ರಂದು ಬಿಸ್ಲೆರಿ ಈ ಕ್ರಮವನ್ನು ಆಕ್ಷೇಪಿಸಿ, “ಕಾನೂನು ಕ್ರಮದ ಬಗ್ಗೆ ತಮಗೆ ಯಾವುದೇ ಪೂರ್ವ ನೋಟಿಸ್ ನೀಡಿಲ್ಲ. ತಮ್ಮ ನೀರು 90ಕ್ಕೂ ಹೆಚ್ಚು ಗುಣಮಟ್ಟದ ಪರೀಕ್ಷೆಗಳಿಗೆ ಒಳಪಡುತ್ತದೆ” ಎಂದು ಸಮರ್ಥಿಸಿಕೊಂಡಿತು. ಇದಕ್ಕೆ ಪ್ರತಿಕ್ರಿಯಿಸಿದ ಎಫ್‌ಎಸ್‌ಎಸ್‌ಎಐ, ರೆಫರಲ್ ಲ್ಯಾಬ್‌ನ pH ವರದಿಯೇ ಕಾನೂನುಬದ್ಧವಾಗಿ ಅಂತಿಮವಾಗಿದೆ ಎಂದು ವಾದಿಸಿ, ಕ್ರಮಕ್ಕೆ ಆದೇಶಿಸಿತು.
ಅಂಬಾನಿ ಸಂಸ್ಥೆಯ ಪ್ಯಾಕೇಜ್ಡ್ ನೀರು ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಬಿಸ್ಲೆರಿ ವಿರುದ್ಧ ಕ್ರಮಕ್ಕೆ ಆದೇಶಿಸಿರುವುದು ಉದ್ದೇಶಪೂರ್ವಕ ಎಂಬುದಕ್ಕೆ ನೇರ ಸಾಕ್ಷ್ಯಗಳು ಇಲ್ಲ. ಆದರೂ, ಘಟನಾವಳಿಗಳ ಸಮಯದ ಹೊಂದಾಣಿಕೆ ಮತ್ತು ವಿಭಿನ್ನ ಪ್ರಯೋಗಾಲಯ ವರದಿಗಳ ಹಿನ್ನೆಲೆಯಲ್ಲಿ ಎದ್ದಿರುವ ಅನುಮಾನಗಳು ಮಾರುಕಟ್ಟೆಯ ಆರೋಗ್ಯಕರ ಸ್ಪರ್ಧೆಯ ದೃಷ್ಟಿಯಿಂದ ಗಮನಾರ್ಹವಾಗಿವೆ.
ಈ ಲೇಖನ ಓದಿದ್ದೀರಾ?: ಯುಪಿ ಚುನಾವಣೆ | ಯುದ್ಧಕ್ಕೆ ಮೊದಲೇ ಉಡುಗಿ ಹೋಯಿತೇ ಎಸ್‌ಪಿ–ಕಾಂಗ್ರೆಸ್ ಮೈತ್ರಿ ಉತ್ಸಾಹ?
ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸ್ಪರ್ಧೆ ಎಂದರೆ ಗುಣಮಟ್ಟ, ಪ್ರಮಾಣ, ಬೆಲೆ, ಜಾಹೀರಾತು ಅಥವಾ ಮಾರ್ಕೆಟಿಂಗ್ ತಂತ್ರಗಳ ಮೂಲಕ ಪ್ರತಿಸ್ಪರ್ಧಿಗಳನ್ನು ಎದುರಿಸುವುದು. ಆದರೆ, ಆರ್ಥಿಕ ಬಲ ಅಥವಾ ನಿಯಂತ್ರಕ ಕ್ರಮಗಳಂತಹ ಅಂಶಗಳು ಮಾರುಕಟ್ಟೆ ಸಮೀಕರಣದ ಮೇಲೆ ಪರಿಣಾಮ ಬೀರಿದಾಗ, ಸ್ಪರ್ಧೆಯ ಸ್ವರೂಪವೇ ಬದಲಾಗುವ ಆತಂಕ ಮೂಡುತ್ತದೆ.
ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಬ್ರ್ಯಾಂಡ್‌ಗಳ ವಿರುದ್ಧ ಪದೇ ಪದೇ ಕಾನೂನು ಕ್ರಮ, ತಪಾಸಣೆ ಅಥವಾ ನೋಟಿಸ್‌ಗಳು ಬಂದಾಗ, ಗ್ರಾಹಕರಲ್ಲಿ ಸಹಜವಾಗಿಯೇ ಆತಂಕ ಮತ್ತು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಬಾಟಲಿ ಕೈಗೆತ್ತಿಕೊಂಡಾಗ ಅದರಲ್ಲಿ ಬ್ರೋಮೇಟ್ ಅಥವಾ pH ಸಮಸ್ಯೆ ಇದೆಯೇ ಎಂಬ ಪ್ರಶ್ನೆ ಗ್ರಾಹಕರಲ್ಲಿ ಮೂಡಿದರೆ, ಅದು ಬ್ರ್ಯಾಂಡ್‌ನ ವಿಶ್ವಾಸಾರ್ಹತೆಗೆ ದೊಡ್ಡ ಪೆಟ್ಟು ನೀಡುತ್ತದೆ. ಇಂತಹ ಬೆಳವಣಿಗೆಗಳು ದೀರ್ಘಕಾಲ ಮುಂದುವರಿದರೆ, ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಖಾಲಿಯಾಗಿ ಬಂಡವಾಳ ಬಲ ಹೊಂದಿರುವ ಕಂಪನಿಗಳಿಗೆ ಆ ಜಾಗವನ್ನು ಆಕ್ರಮಿಸಿಕೊಳ್ಳಲು ದಾರಿ ಸುಗಮವಾಗುತ್ತದೆ.
ಮಾರುಕಟ್ಟೆಯಲ್ಲಿ ಆರೋಗ್ಯಕರ ಪೈಪೋಟಿ ಕುಸಿದು ಏಕಸ್ವಾಮ್ಯ ತಲೆದೋರಿದರೆ, ಅದರ ನೇರ ಹೊರೆ ಸಾಮಾನ್ಯ ಗ್ರಾಹಕರ ಮೇಲೆ ಬೀಳುತ್ತದೆ. ಅಪಾರ ಆರ್ಥಿಕ ಬಲ ಹೊಂದಿರುವ ಸಂಸ್ಥೆಗಳು ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವ ತಂತ್ರ ಅನುಸರಿಸಿದಾಗ, ಸಣ್ಣ ಮತ್ತು ಮಧ್ಯಮ ಬ್ರ್ಯಾಂಡ್‌ಗಳು ಪೈಪೋಟಿ ನೀಡಲು ಸಾಧ್ಯವಾಗದೆ ಹಿನ್ನಡೆ ಅನುಭವಿಸುವ ಅಪಾಯವಿರುತ್ತದೆ.
ಒಂದು ಬಾರಿ ಮಾರುಕಟ್ಟೆಯಲ್ಲಿ ಪರ್ಯಾಯ ಬ್ರ್ಯಾಂಡ್‌ಗಳು ಇಲ್ಲದಾದರೆ, ಬೆಲೆ ನಿಗದಿ ಮತ್ತು ಪೂರೈಕೆಯ ನಿಯಂತ್ರಣ ಒಂದೇ ಸಂಸ್ಥೆಯ ಕೈಗೆ ಹೋಗಬಹುದು; ಆಗ ಗ್ರಾಹಕರು ನಿಗದಿತ ಬೆಲೆ ಮತ್ತು ನಿಗದಿತ ಆಯ್ಕೆಗಳಿಗೇ ಸೀಮಿತವಾಗಬೇಕಾದ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ, ನಿಯಂತ್ರಕ ಸಂಸ್ಥೆಗಳ ಕ್ರಮಗಳು ಸಂಪೂರ್ಣ ಪಾರದರ್ಶಕವಾಗಿದ್ದು, ಮಾರುಕಟ್ಟೆಯಲ್ಲಿ ಬಹುಬ್ರ್ಯಾಂಡ್‌ಗಳ ಅಸ್ತಿತ್ವ ಮತ್ತು ಗ್ರಾಹಕರ ಆಯ್ಕೆಯ ಸ್ವಾತಂತ್ರ್ಯ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಆರ್ಥಿಕ ವ್ಯವಸ್ಥೆ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.


