ಉತ್ತರ ಪ್ರದೇಶದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಾಗಾಲೋಟಕ್ಕೆ ಬ್ರೇಕ್ ಹಾಕಿ ದೇಶದ ರಾಜಕಾರಣದಲ್ಲೇ ಸಂಚಲನ ಮೂಡಿಸಿತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ಮೈತ್ರಿ. ಆದರೀಗ, 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನವೇ ಈ ಮೈತ್ರಿ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ. ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 120 ಕ್ಷೇತ್ರಗಳಿಗೆ ಬಿಗಿಪಟ್ಟು ಹಿಡಿದಿದೆ. ಆದರೆ, ಕೇವಲ 26 ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡುವುದಾಗಿ ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿ ಪ್ರಸ್ತಾಪ ಮುಂದಿಟ್ಟಿದೆ. ಅದರಲ್ಲೂ ಗಾಂಧಿ ಕುಟುಂಬದ ಸಾಂಪ್ರದಾಯಿಕ ಭದ್ರಕೋಟೆಗಳಾದ ಅಮೇಥಿ ಮತ್ತು ರಾಯ್‌ಬರೇಲಿ ಜಿಲ್ಲೆಗಳಲ್ಲಿಯೂ ಕಾಂಗ್ರೆಸ್‌ಗೆ ಮನ್ನಣೆ ನೀಡಲು ಎಸ್‌ಪಿ ಸಿದ್ಧವಿಲ್ಲ. ಇದೆಲ್ಲವೂ ಮೈತ್ರಿಯೊಳಗಿನ ಅಸಮಾಧಾನವನ್ನು ಸ್ಫೋಟಗೊಳಿಸಿದೆ. ಬಿಜೆಪಿ ವಿರುದ್ಧ ಒಂದಾಗಿ ಹೋರಾಡುವ ಘೋಷಣೆಯೊಂದಿಗೆ ಕೈಜೋಡಿಸಿದ್ದ ಎರಡೂ ಪಕ್ಷಗಳು ಚುನಾವಣಾ ಲೆಕ್ಕಾಚಾರ, ರಾಜಕೀಯ ಅಸ್ತಿತ್ವ ಹಾಗೂ ನಾಯಕತ್ವದ ಪ್ರತಿಷ್ಠೆಯ ಸಂಘರ್ಷಕ್ಕೆ ಇಳಿದಿವೆ.
ಅಂದಹಾಗೆ, ದೇಶದಲ್ಲೇ ಅತಿ ಹೆಚ್ಚು ಅಂದರೆ 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 2024ರ ಚುನಾವಣಾ ಫಲಿತಾಂಶ ಹೊಸ ರಾಜಕೀಯ ಸಮೀಕರಣಕ್ಕೆ ನಾಂದಿ ಹಾಡಿತ್ತು. 2019ರಲ್ಲಿ ಏಕಾಂಗಿಯಾಗಿ 62 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, 2024ರಲ್ಲಿ ಇಂಡಿಯಾ ಒಕ್ಕೂಟದ ಅಬ್ಬರಕ್ಕೆ ಸಿಲುಕಿ 33 ಸ್ಥಾನಗಳಿಗೆ ಕುಸಿದಿತ್ತು. ಸಮಾಜವಾದಿ ಪಕ್ಷ 37 ಮತ್ತು ಕಾಂಗ್ರೆಸ್ 6 ಸ್ಥಾನಗಳನ್ನು ಗೆಲ್ಲುವ ಮೂಲಕ ಒಟ್ಟಾಗಿ 43 ಸ್ಥಾನಗಳನ್ನು ಕಬಳಿಸಿ, ಬಿಜೆಪಿಯನ್ನು ಕಟ್ಟಿಹಾಕಲು ಒಗ್ಗಟ್ಟಿನ ಮೈತ್ರಿಯೊಂದೇ ಅಸ್ತ್ರ ಎಂಬ ಸಂದೇಶ ರವಾನಿಸಿದ್ದವು.
ಆದರೆ, ಆ ಉತ್ಸಾಹ ಎರಡು ವರ್ಷ ಕಳೆಯುವಷ್ಟರಲ್ಲೇ ಅಳಿದುಹೋಗುವ ಲಕ್ಷಣಗಳು ಕಾಣಿಸುತ್ತಿವೆ. 2027ರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ, ಉಭಯ ಪಕ್ಷಗಳ ನಡುವಿನ ಸೀಟು ಹಂಚಿಕೆಯ ಜಟಾಪಟಿ ಬೀದಿಗೆ ಬಂದಿದೆ. ನವೆಂಬರ್ 23ರಂದು ದೆಹಲಿಯಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆ ಕೇವಲ 20 ನಿಮಿಷಗಳಲ್ಲಿ ಮುರಿದುಬಿದ್ದರೆ, ಮರುದಿನ ನಡೆದ ಎರಡನೇ ಸುತ್ತಿನ ಸಭೆಯೂ ವಿಫಲವಾಗಿದೆ. ಕಾಂಗ್ರೆಸ್ ತಾನು ಸ್ಪರ್ಧಿಸಲು ಬಯಸುವ 120 ಕ್ಷೇತ್ರಗಳ ಪಟ್ಟಿ ನೀಡಿದರೆ, ಎಸ್‌ಪಿ ಕೇವಲ 26 ಕ್ಷೇತ್ರಗಳ ಪಟ್ಟಿಯನ್ನು ಕಾಂಗ್ರೆಸ್ ಮುಂದಿಟ್ಟಿದೆ. ಮಾತ್ರವಲ್ಲದೆ, ಕಾಂಗ್ರೆಸ್‌ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೂ ಎಸ್‌ಪಿ ಪ್ರಕಟಿಸಿದೆ.
ಚುನಾವಣಾ ಮಾತುಕತೆಗಳ ಆರಂಭದಲ್ಲಿ ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನಗಳಿಗೆ ಬೇಡಿಕೆ ಇಟ್ಟಿತ್ತು. ನಂತರ ಅದನ್ನು 120ಕ್ಕೆ ಇಳಿಸಿತು. ಅಂತಿಮವಾಗಿ, 100 ಕ್ಷೇತ್ರಗಳಿಗೆ ಒಪ್ಪಿಕೊಳ್ಳುವ ಸುಳಿವನ್ನೂ ಕೆಲ ಕಾಂಗ್ರೆಸ್ ನಾಯಕರು ನೀಡಿದ್ದಾರೆ. ಆದರೆ, ಎಸ್‌ಪಿ ಮಾತ್ರ ಕಾಂಗ್ರೆಸ್‌ಗೆ 26 ಸ್ಥಾನಗಳನ್ನಷ್ಟೇ ನೀಡುವುದಾಗಿ ಹೇಳುತ್ತಲೇ ಇದೆ. ಹೆಚ್ಚೆಂದರೆ 50 ಸ್ಥಾನಗಳನ್ನು ಬಿಟ್ಟುಕೊಡುವುದೂ ಕಷ್ಟವೆಂದು ಎಸ್‌ಪಿ ಮುಖಂಡರು ಹೇಳುತ್ತಿದ್ದಾರೆ.
ಈ ಲೇಖನ ಓದಿದ್ದೀರಾ?: ಯುಪಿ ಚುನಾವಣೆ | BJPಗೆ ಕ್ಷೇತ್ರ ಹಂಚಿಕೆ ಸವಾಲು; ಎಸ್‌ಪಿ–ಕಾಂಗ್ರೆಸ್ ಮೈತ್ರಿ ಮಾತುಕತೆ ತೀವ್ರ
ಸಮಾಜವಾದಿ ಪಕ್ಷವು ತನ್ನ ವಾದಕ್ಕೆ 2022ರ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಮಾನದಂಡವಾಗಿ ಮುಂದಿಡುತ್ತಿದೆ. ಆ ಚುನಾವಣೆಯಲ್ಲಿ 399 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಗೆದ್ದಿದ್ದು ಕೇವಲ 2 ಸ್ಥಾನಗಳನ್ನು ಮಾತ್ರ; ಮತಹಂಚಿಕೆಯಲ್ಲಿ ಕೇವಲ 2.33% ಮತಗಳನ್ನಷ್ಟೇ ಪಡೆದಿದ್ದ ಕಾಂಗ್ರೆಸ್‌ನ 387 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಇದಕ್ಕೆ ತದ್ವಿರುದ್ಧವಾಗಿ ಸಮಾಜವಾದಿ ಪಕ್ಷ 111 ಸ್ಥಾನಗಳನ್ನು ಗೆದ್ದು 32.06%ರಷ್ಟು ಮತಹಂಚಿಕೆ ಪಡೆದುಕೊಂಡಿತ್ತು. ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು.
ಈ ಅಂಕಿಅಂಶಗಳನ್ನು ಮುಂದಿಟ್ಟಿರುವ ಎಸ್‌ಪಿ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ 2 ಕ್ಷೇತ್ರಗಳು, ಎರಡನೇ ಸ್ಥಾನ ಪಡೆದ 4 ಕ್ಷೇತ್ರಗಳು ಹಾಗೂ ಎಸ್‌ಪಿ ಪ್ರಬಲವಾಗಿರುವ 20 ಕ್ಷೇತ್ರಗಳನ್ನು ಸೇರಿಸಿ 26 ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಪಟ್ಟಿ ಮಾಡಲಾಗಿದೆ ಎಂದು ತಮ್ಮ ಪಕ್ಷದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ 2024ರ ಲೋಕಸಭಾ ಚುನಾವಣೆಯ ಸಾಧನೆಯನ್ನು ತನ್ನ ವಾದಕ್ಕೆ ಅಸ್ತ್ರವಾಗಿಸಿಕೊಂಡಿದೆ. ಆ ಚುನಾವಣೆಯಲ್ಲಿ ಮೈತ್ರಿಯಡಿ 17 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ 6 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, ತನ್ನ ಮತಪ್ರಮಾಣವನ್ನು 2.33%ನಿಂದ 9.46%ಗೆ ಏರಿಸಿಕೊಂಡಿತ್ತು. ಇದು ರಾಜ್ಯದಲ್ಲಿ ತನ್ನ ಪುನರುಜ್ಜೀವನದ ಸಂಕೇತವೆಂದು ಕಾಂಗ್ರೆಸ್ ಪ್ರತಿಪಾದಿಸುತ್ತಿದೆ.
ಆದರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದ ಮತಗಳಲ್ಲಿ ತಮ್ಮ ಸಾಂಪ್ರದಾಯಿಕ ಮತದಾರರ ಪಾಲು ದೊಡ್ಡದಿದೆ ಎನ್ನುತ್ತಿದೆ ಎಸ್‌ಪಿ. ಅಲ್ಲದೆ, 2017ರ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ಮತ್ತು ರಾಹುಲ್ ಗಾಂಧಿ ಜಂಟಿಯಾಗಿ ಪ್ರಚಾರ ನಡೆಸಿ ಕಾಂಗ್ರೆಸ್‌ಗೆ 114 ಕ್ಷೇತ್ರಗಳನ್ನು ಬಿಟ್ಟುಕೊಟ್ಟಾಗ, ಕಾಂಗ್ರೆಸ್ ಗೆದ್ದಿದ್ದು ಕೇವಲ 7 ಸ್ಥಾನಗಳನ್ನು ಮಾತ್ರ; ಇದರಿಂದ ಮೈತ್ರಿಕೂಟ ಹೀನಾಯ ಸೋಲು ಕಂಡಿತ್ತು ಎಂಬುದನ್ನೂ ಎಸ್‌ಪಿ ಒತ್ತಿ ಹೇಳುತ್ತಿದೆ.
ಈ ಲೇಖನ ಓದಿದ್ದೀರಾ?: ಬಂಡವಾಳಶಾಹಿಯ ನಾಲ್ಕು ಕಟ್ಟುಕಥೆಗಳು ಮತ್ತು ನಮ್ಮ ಬದುಕಿನ ಬೆಲೆ
ಈ ಸೀಟು ಹಂಚಿಕೆ ಸಂಘರ್ಷದಲ್ಲಿ ಅತ್ಯಂತ ಪ್ರತಿಷ್ಠೆಯ ವಿಷಯವಾಗಿರುವುದು ಗಾಂಧಿ ಕುಟುಂಬದ ಕರ್ಮಭೂಮಿಗಳಾದ ಅಮೇಥಿ ಮತ್ತು ರಾಯ್‌ಬರೇಲಿ ಜಿಲ್ಲೆಗಳು. ಈ ಎರಡು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಒಟ್ಟು 10 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 8 ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ಇಂದಿರಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪ್ರತಿನಿಧಿಸಿರುವ ಈ ಕ್ಷೇತ್ರಗಳಲ್ಲಿ 2024ರ ಲೋಕಸಭಾ ಚುನಾವಣೆಯಲ್ಲೂ ರಾಹುಲ್ ಗಾಂಧಿ ಮತ್ತು ಕಿಶೋರಿ ಲಾಲ್ ಶರ್ಮಾ ಭರ್ಜರಿ ಜಯ ಸಾಧಿಸಿದ್ದಾರೆ. ಹೀಗಾಗಿ, ಇಲ್ಲಿ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳನ್ನು ಪಡೆಯುವುದು ಕಾಂಗ್ರೆಸ್‌ಗೆ ತನ್ನ ಐತಿಹಾಸಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವ ಪ್ರಶ್ನೆಯಾಗಿದೆ.
ಆದರೆ, ಸಮಾಜವಾದಿ ಪಕ್ಷ ತನ್ನ 26 ಕ್ಷೇತ್ರಗಳ ಪಟ್ಟಿಯಲ್ಲಿ ಈ ಎರಡೂ ಜಿಲ್ಲೆಗಳಿಂದ ಕಾಂಗ್ರೆಸ್‌ಗೆ ಕೇವಲ ಒಂದೇ ಒಂದು ಕ್ಷೇತ್ರವನ್ನು (ಜಗದೀಶ್‌ಪುರ) ನೀಡಲು ಮುಂದಾಗಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಈ 10 ಕ್ಷೇತ್ರಗಳ ಪೈಕಿ ಎಸ್‌ಪಿ 6 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 4 ಸ್ಥಾನಗಳನ್ನು ಗೆದ್ದಿತ್ತು; ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು. ಹಾಲಿ ಶಾಸಕರಿರುವ ಕ್ಷೇತ್ರಗಳನ್ನು ಕೇವಲ ಗಾಂಧಿ ಕುಟುಂಬದ ಐತಿಹಾಸಿಕ ನಂಟಿನ ಕಾರಣಕ್ಕೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಎಸ್‌ಪಿ ನಾಯಕ ಎಸ್.ಪಿ. ಸಿಂಗ್ ಪಟೇಲ್ ಕಡ್ಡಿಮುರಿದಂತೆ ಹೇಳಿದ್ದಾರೆ.
ಗಮನಾರ್ಹವೆಂದರೆ, ಕಾಂಗ್ರೆಸ್‌ಗೆ ಎಸ್‌ಪಿ ಬಿಟ್ಟುಕೊಡಲು ಸಿದ್ಧವಿರುವ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಳೆದ ಬಾರಿ ಗೆದ್ದ ರಾಮ್‌ಪುರ್ ಖಾಸ್ ಮತ್ತು ಫರೇಂದಾ ಹಾಗೂ ಎರಡನೇ ಸ್ಥಾನ ಪಡೆದ ಮಥುರಾ, ಖೇರಾಗಢ, ಜಗದೀಶ್‌ಪುರ ಮತ್ತು ಕಿದ್ವಾಯಿ ನಗರ ಕ್ಷೇತ್ರಗಳಿವೆ. ಇವುಗಳನ್ನು ಹೊರತುಪಡಿಸಿದರೆ, ಉಳಿದ 20 ಕ್ಷೇತ್ರಗಳಲ್ಲಿ ಹೆಚ್ಚಿನವು ಬಿಜೆಪಿಯ ಭದ್ರಕೋಟೆಗಳಾಗಿವೆ. ಈ ಇಪ್ಪತ್ತೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಶಾಸಕರಿದ್ದಾರೆ. ಈ ಸ್ಥಾನಗಳನ್ನು ಕಾಂಗ್ರೆಸ್ ಕೊಡಲು ಮುಂದಾಗಿರುವ ಎಸ್‌ಪಿ, ತನ್ನ ಹಾಲಿ ಶಾಸಕರ ಕ್ಷೇತ್ರಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವ ಮತ್ತು ಬಿಜೆಪಿ ಪ್ರಾಬಲ್ಯವಿರುವ ಕ್ಷೇತ್ರಗಳನ್ನು ಕಾಂಗ್ರೆಸ್ ಹೆಗಲಿಗೆ ಕಟ್ಟುವ ತಂತ್ರ ಹೆಣೆದಿದೆ.
ಸಮಾಜವಾದಿ ಪಕ್ಷದ ಈ ಧೋರಣೆಯನ್ನು ಖಂಡಿಸಿರುವ ಕಾಂಗ್ರೆಸ್, ಕೇವಲ 26 ಕ್ಷೇತ್ರಗಳಿಗೆ ಸೀಮಿತವಾದರೆ ರಾಜ್ಯದ 80 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತನ್ನ ಸಂಘಟನೆಯನ್ನು ಮರುಕಟ್ಟುವುದು ಅಸಾಧ್ಯವೆಂದು ಆಂತಕಗೊಂಡಿದೆ.
ಎಸ್‌ಪಿ-ಕಾಂಗ್ರೆಸ್ ನಡುವಿನ ಈ ಕಿತ್ತಾಟದಲ್ಲಿ ಬಿಜೆಪಿ ಬೇಳೆ ಬೇಯಿಸಿಕೊಳ್ಳಲು ಎದುರು ನೋಡುತ್ತಿದೆ. 2022ರ ಚುನಾವಣೆಯಲ್ಲಿ 255 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿದ್ದ ಬಿಜೆಪಿ, 2024ರ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿತ್ತು. ಅಲ್ಲದೆ, ರಾಮಮಂದಿರ ದೇಣಿಗೆ ದುರುಪಯೋಗ ಸೇರಿದಂತೆ, ಪಕ್ಷವು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಇದು, ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟದ ಗೆಲುವಿಗೆ ನೆರವಾಗಲಿದೆ. ಒಂದು ವೇಳೆ, ಎಸ್‌ಪಿ-ಕಾಂಗ್ರೆಸ್ ಮೈತ್ರಿ ಒಡೆದು, ಎರಡೂ ಪಕ್ಷಗಳು ಪ್ರತ್ಯೇಕವಾಗಿ ಕಣಕ್ಕಿಳಿದರೆ, ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗಿ ಬಿಜೆಪಿಗೆ ಲಾಭವಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.


