ಇಂದು ಸಂವಿಧಾನದ ದಿನ. ಸಂವಿಧಾನದ ಆಶಯಗಳನ್ನು ಕಾಪಾಡಾಲು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ನೂರಾರು ಮಹಿಳೆಯರು ಬಂದು ನೆರೆದಿದ್ದರು. ಬಂದವರೆಲ್ಲರ ಕನಸು ಒಂದೇ ಅದು ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದು. ಸಾಮಾನ್ಯರು ಮತ್ತು ಬಡವರಿಗೆ ಶಿಕ್ಷಣ ಪಡೆಯಲು ಇರುವ ಏಕೈಕ ದಾರಿಯೆಂದರೆ ಅದು ಸರ್ಕಾರಿ ಶಿಕ್ಷಣ ವ್ಯವಸ್ಥೆ. ಅದನ್ನೇ ಇಂದು ಸರ್ಕಾರವು ತನ್ನ ಅಸಮರ್ಥತೆಯಿಂದಾಗಿ ದತ್ತು ಕೊಡುವ ನೆಪದಲ್ಲಿ ಖಾಸಗೀಕರಣ ಮಾಡಲು ಹೊರಟಿದೆ. ಇದನ್ನು ವಿರೋಧಿಸಿ, ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯಬೇಕು ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಎಲ್ಲ ಅಂಶಗಳನ್ನು ಸಮಗ್ರವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಗುರುವಾರ ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆ ನೇತೃತ್ವದಲ್ಲಿ ಸಾಮಾಜಿಕ ಕಾರ್ಯಕರ್ತರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಸತ್ಯಾಗ್ರಹದಲ್ಲಿ ರಾಜ್ಯದ ಅನೇಕ ಜಿಲ್ಲೆಗಳ ಕೂಲಿ ಕಾರ್ಮಿಕರು, ಮಹಿಳೆಯರು, ಕನ್ನಡಪರ ಸಂಘಟನೆಗಳು ಭಾಗವಹಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಶಿಕ್ಷಣ ತಜ್ಞ ನಿರಂಜನಾರಾಧ್ಯ, “ಬಡವರಿಗೆ ಶಿಕ್ಷಣವು ದಾನವಲ್ಲ, ಅದು ನಮ್ಮೆಲ್ಲರ ಮೂಲಭೂತ ಹಕ್ಕು. ರಾಜ್ಯದ ಶೇ 60ರಷ್ಟು ಸರ್ಕಾರಿ ಶಾಲೆಗಳಲ್ಲಿ ಹಿಂದುಳಿದ, ಅಲ್ಪಸಂಖ್ಯಾತ, ಬಡವರ ಮಕ್ಕಳು ಕಲಿಯುತ್ತಿದ್ದಾರೆ. ಸರ್ಕಾರಿ ಶಾಲೆಯನ್ನು ಖಾಸಗಿಯವರಿಗೆ ದತ್ತು ಕೊಡುವ ಮೂಲಕ ಅವರ ಶಿಕ್ಷಣದ ಹಕ್ಕನ್ನು ಕಸಿಯುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಶಿಕ್ಷಣ ಹಕ್ಕು ಕಾಯ್ದೆ ಬಂದು 14 ವರ್ಷ ಕಳೆದರೂ ಅದನ್ನು ಜಾರಿ ಮಾಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ. ಸರಕಾರಿ ಶಾಲೆ ಅಭಿವೃದ್ದಿ ವೇದಿಕೆ ವತಿಯಿಂದ ಕಳೆದ ಒಂದು ತಿಂಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ವಿವರಿಸಿದರು.
ಅವರು 18 ಜಿಲ್ಲೆಗಳ, 56 ತಾಲೂಕಿನ 222 ಶಾಲೆಗಳ ಸಮೀಕ್ಷೆಯಲ್ಲಿ ಕಂಡುಕೊಂಡಿರುವ ಅಂಶಗಳು ಹೀಗಿವೆ:
- ಸರ್ಕಾರಿ ಶಾಲೆಗಳಲ್ಲಿ ಶೇ 58 ರಷ್ಟು ಎಸ್‌ಸಿ-ಎಸ್‌ಟಿ, ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
- ಒಟ್ಟು ವಿದ್ಯಾರ್ಥಿಗಳಲ್ಲಿ 51ರಷ್ಟು ಹೆಣ್ಣುಮಕ್ಕಳಿದ್ದಾರೆ
- ಶೇ 35 ರಷ್ಟು ತಾತ್ಕಾಲಿಕ ಭೋದಕರಿದ್ದಾರೆ.
- ಶೇ 38ರಷ್ಟು ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರೇ ಇಲ್ಲ
- ಶೇ 23 ರಷ್ಟು ತರಗತಿಗಳು ಶಿಥಿಲಾವಸ್ಥೆಯಲ್ಲಿದೆ
- ಶೇ 19 ರಷ್ಟು ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ಅಡುಗೆ ಮನೆಯಿಲ್ಲ
- RTE ಪ್ರಕಾರ ಶೇ 50 ರಷ್ಟು ಶಾಲೆಗಳಲ್ಲಿ ಶೌಚಲಯವಿದ್ದು, ಅದರಲ್ಲಿ 16ರಷ್ಟು ಉಪಯೋಗವಿಲ್ಲದ ಸ್ಥಿತಿಯಲ್ಲಿದೆ.
- ಶೇ. 39ರಷ್ಟು ಶಾಲೆಗಳಲ್ಲಿ ಆಟದ ಮೈದಾನ ಮತ್ತು ಗ್ರಂಥಾಲಯವಿಲ್ಲ
- ಶೇ. 30ರಷ್ಟು ಶಾಲೆಗಳಲ್ಲಿ ಕಾಂಪೌಂಡ್ ಇಲ್ಲ
- 32 ರಷ್ಟು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ
“ಗುಣಮಟ್ಟದ ವಿಚಾರದಲ್ಲಿ ಪೋಷಕರಿಗೆ ಸಮಾಧಾನವಿಲ್ಲ, ಎಷ್ಟೋ ಶಾಲೆಗಳಲ್ಲಿ ಬೋದಕರು ಡೆಪ್ಯುಟೇಶನ್ ಅಥವಾ ಅನ್ಯ ಸರ್ಕಾರಿ ಕೆಲಸದ ಮೇಲೆ ಹೊರಗೆ ಇರುತ್ತಾರೆ, ಗಣಿತ, ವಿಜ್ಞಾನ, ಇಂಗ್ಲಿಷ್ ಬೋದಕರು ಕಡಿಮೆಯಿದ್ದಾರೆ, ನಿಧಾನಗತಿ ಕಲಿಯುವವರಿಗಾಗಿ ವಿಶೇಷ ತರಗತಿಗಳ ವ್ಯವಸ್ಥೆಯಿಲ್ಲ, ಅಸ್ಪೃಶ್ಯತೆ ಆಚರಣೆ ಇದೆ, ಕಳೆದ 10 ವರ್ಷಗಳಿಗೆ ಹೋಲಿಸಿದರೆ 19ರಷ್ಟು ವಿದ್ಯಾರ್ಥಿಗಳಿ ಸರ್ಕಾರಿ ಶಾಲೆಗಳಲ್ಲಿ ಕಡಿಮೆಯಾಗಿದ್ದಾರೆ. ಇದೆಲ್ಲದಕ್ಕೂ ಮೂಲ ಕಾರಣ ಸರ್ಕಾರದ ಅಸಮರ್ಥತೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸರ್ಕಾರ ಇನ್ನಾದರೂ ಎಚ್ಚರಗೊಂಡು ಸಂವಿಧಾನದ ಮೂಲಭೂತ ಹಕ್ಕಾದ ಶಿಕ್ಷಣದ ವ್ಯವಸ್ಥೆಯನ್ನು ಸರಪಡಿಸಬೇಕು. ಶಿಕ್ಷಣ ಹಕ್ಕು ಕಾಯ್ದೆಯ ಎಲ್ಲಾ ಹಕ್ಕುಗಳು ಜಾರಿಯಾಗಬೇಕು ಮತ್ತು ಸರ್ಕಾರಿ ಶಾಲೆಯನ್ನು ಖಾಸಗಿಯವರಿಗೆ ದತ್ತು ಕೊಡುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಇದನ್ನು ಲಿಖಿತ ರೂಪದಲ್ಲಿ ಕೊಡಬೇಕು. ಅಲ್ಲಿಯತನಕ ನಮ್ಮ ಹೋರಾಟದಿಂದ ನಾವು ಹಿಂದೆ ಸರಿಯುವುದಿಲ್ಲ” ಎಂದು ಘೋಷಿಸಿದರು.
ಸರ್ಕಾರವು ಮೂಲಭೂತ ಕರ್ತವ್ಯಗಳನ್ನು ಖಾಸಗಿಯವರಿಗೆ ಒಪ್ಪಿಸುವುದಾದರೆ ಸರ್ಕಾರದ ಅಗತ್ಯವಾದರೂ ಏನು? ಶಿಕ್ಷಣದ ಜಬ್ದಾರಿಯನ್ನು ಒಪ್ಪಿಸಿದಂತೆ ಮುಖ್ಯಮಂತ್ರಿ ಹುದ್ದೆಯನ್ನು ಖಾಸಗಿಯವರಿಗೆ ಒಪ್ಪಿಸಿ ಮನೆಗೆ ಹೋಗುವಂತೆ ಸಲಹೆ ನೀಡಿದರು.
ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್ ಮಾತನಾಡಿ, “ಮಕ್ಕಳು ನಮ್ಮ ದೇಶದ ಸಂಪತ್ತು ಅವರಿಗೆ ಮೂಲಭೂತ ಹಕ್ಕಾದ ಶಿಕ್ಷಣವನ್ನು ಕೊಡದೆ ಸರ್ಕಾರ ದ್ರೋಹ ಮಾಡುತ್ತಿದೆ. ಈಗಿನ ರಾಜಕಾರಣಿಗಳನ್ನು ನೋಡಿದರೆ ಶಿಕ್ಷಣವನ್ನು ವ್ಯಾಪಾರ ಮಾಡಿಕೊಂಡಿದ್ದಾರೆ. ಮುಂದಿನ ಚುನಾವಣೆಯೊಳಗೆ ನಾವೆಲ್ಲರೂ ಸೇರಿ ಸರ್ಕಾರದ ಮೇಲೆ ಒತ್ತಡ ಹೇರಿ ಶಿಕ್ಷಣದ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ. ಇಲ್ಲದಿದ್ದರೆ ಬಡವರು ಶಿಕ್ಷಣ ವಂಚಿತರಾಗುತ್ತಾರೆ” ಎಂದರು.
ವಿದ್ಯಾರ್ಥಿ ಹೋರಾಟಗಾರ ಸರೋವರ್ ಬೆಂಕಿಕೆರೆ ಮಾತನಾಡಿ, “ಶಾಲೆಗೆ ಮಕ್ಕಳು ಬರುತ್ತಿಲ್ಲ ಎನ್ನುವ ಸರ್ಕಾರ, ಅಲ್ಲಿರುವ ಸಮಸ್ಯೆಗಳನ್ನು ಸರಿಪಡಿಸದೆ ಖಾಸಗಿಯವರಿಗೆ ಕೊಟ್ಟರೆ ಮುಂದೊಂದು ದಿನ ಸರ್ಕಾರಿ ಶಾಲೆಗಳೇ ಕಾಣೆಯಾಗುವ ಸಾಧ್ಯತೆ ಇದೆ. ಇದೇ ನೆಪದಿಂದ ಸರ್ಕಾರಿ ಶಾಲೆಗಳ ಆಸ್ತಿಯನ್ನು ಖಾಸಗಿಯವರು ಕಬ್ಜ ಮಾಡುವ ಸಾಧ್ಯತೆ ಇರುತ್ತದೆ ಇದೊಂದು ಎಚ್ಚರಿಕೆಯ ಗಂಟೆಯಾಗಬೇಕು ಎನ್ನುತ್ತಾ. ಖಾಲಿಯಿರುವ ಶಿಕ್ಷಕ ಹುದ್ದೆಯನ್ನು ಭರ್ತಿ ಮಾಡಬೇಕು, ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಮಾಡಬೇಕು, ಖಾಸಗಿಯವರಿಗೆ ದತ್ತು ಕೊಡುವುದನ್ನು ನಿಲ್ಲಿಸಬೇಕು” ಎಂದು ಪ್ರತಿಪಾದಿಸಿದರು.



