ರಾಜ್ಯದಲ್ಲಿ ಮತ್ತೆ ಹನಿಟ್ರ್ಯಾಪ್ ಸದ್ದು ಕೇಳಿ ಬಂದಿದೆ. ಪ್ರಭಾವಿ ಸಚಿವರೊಬ್ಬರನ್ನು ಹನಿಟ್ರ್ಯಾಪ್‌ಗೆ ಖೆಡ್ಡಾಗೆ ಬೀಳಿಸಲು ಯತ್ನಿಸಲಾಗಿದ್ದು, ಆ ಪ್ರಯತ್ನ ವಿಫಲವಾಗಿದೆ. ಸಚಿವರು ತೋಡಿದ ಖೆಡ್ಡಾಕ್ಕೆ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದ ತಂಡವೇ ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಸಚಿವರ ಹನಿಟ್ರ್ಯಾಪ್ ಮಾಡುವ ಯತ್ನ ನಡೆದಿತ್ತು ಎಂದು ಸುದ್ದಿಯಾಗಿದೆ.
ರಾಜ್ಯದಲ್ಲಿ ಈ ಟ್ರ್ಯಾಪ್‌ಗಳು ಹೊಸತೇನಲ್ಲ. ನಿರಂತರವಾಗಿ ಒಂದಲ್ಲ ಒಂದು ಹನಿಟ್ರ್ಯಾಪ್ ಪ್ರಕರಣಗಳು ಮುನ್ನಲೆಗೆ ಬರುತ್ತಿವೆ. ಅದೆಷ್ಟೋ ರಾಜಕಾರಣಿಗಳು, ಉದ್ಯಮಿಗಳು ಈ ಬಲೆಗೆ ಬಿದ್ದು, ಸಾಕಷ್ಟು ಹಣ ಕಳೆದುಕೊಂಡಿದ್ದಿದೆ. ಇನ್ನೆಷ್ಟೋ ಉದ್ಯಮಿಗಳು ತಮ್ಮ ಮರ್ಯಾದೆಗೆ ಅಂಜಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಶರಣಾಗಿದ್ದಾರೆ.
ಇದನ್ನು ಓದಿದ್ದೀರಾ?: ಹನಿಟ್ರ್ಯಾಪ್ ಮಾಡಲೆಂದೇ ಮುನಿರತ್ನ ಸ್ಟುಡಿಯೋ ಇಟ್ಟಿದ್ದಾರೆ: ವೇಲು ನಾಯ್ಕರ್ ಆರೋಪ
ರಾಜಕಾರಣಿಗಳು, ಉದ್ಯಮಿಗಳು ಮಾತ್ರವಲ್ಲ ಇತ್ತೀಚೆಗೆ ವಿದ್ಯಾರ್ಥಿಗಳು, ಯುವಕರು ಕೂಡಾ ಈ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ. ಅಷ್ಟಕ್ಕೂ ಈ ಹನಿಟ್ರ್ಯಾಪ್ ಎನ್ನುವುದು ಹೊಸದಾಗಿ ಹುಟ್ಟಿಕೊಂಡಿರುವುದಲ್ಲ. ಹಲವು ಶಕತಗಳ ಹಿಂದೆಯಿಂದಲೂ ಹೆಣ್ಣನ್ನು ಬಳಸಿಕೊಂಡು ಗೌಪ್ಯ ಮಾಹಿತಿ, ಚಿನ್ನ, ಹಣ ಲಪಾಟಯಿಸಿರುವುದು ನಡೆದಿದೆ. ಆದರೆ, ಅಂದು ಹನಿಟ್ರ್ಯಾಪ್ ಎಂಬ ಹೆಸರಿರಲಿಲ್ಲ ಅಷ್ಟೇ. ಅದರಲ್ಲೂ ಮುಖ್ಯವಾಗಿ ಭಾರತೀಯ ಸೇನೆ ಮತ್ತು ವಾಯುಸೇನೆಯ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಿರುವುದೂ ಕೂಡಾ ಇದೆ.
ರಾಜ್ಯದಲ್ಲಿ ಕಳೆದ ಐದಾರು ವರ್ಷಗಳ ಅವಧಿಯಲ್ಲಿ ಹಲವು ಪ್ರಭಾವಿ ರಾಜಕಾರಣಿಗಳು, ವ್ಯಕ್ತಿಗಳು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿದ್ದಾರೆ. ಅದರಲ್ಲೂ ಬಿಜೆಪಿ ನಾಯಕ ಮುನಿರತ್ನ ರಚಿಸಿದ ಷಡ್ಯಂತ್ರವು ಅಸಹ್ಯಕರ, ಖಂಡನೀಯ, ಅಮಾನವೀಯ, ಭೀಕರ, ವಿಕೃತ ಎಂದರೆ ತಪ್ಪಾಗದು. ಯಾವ ಸೋಂಕಿನಿಂದ ರಾಜ್ಯ, ದೇಶವನ್ನು ಮುಕ್ತವಾಗಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆಯೋ, ಅದೇ ಸೋಂಕನ್ನು ರಾಜಕೀಯ ನಾಯಕರಿಗೆ ಚುಚ್ಚಲು ಯತ್ನಿಸಿದ್ದರು ಈ ಮುನಿರತ್ನ ಎಂಬ ಆರೋಪಗಳಿವೆ. ಪ್ರಕರಣಗಳೂ ದಾಖಲಾಗಿವೆ.
ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ
ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ಮತ್ತು ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣದ ಹಿಂದೆಯೂ ಹನಿಟ್ರ್ಯಾಪ್ ಸದ್ದು ಕೇಳಿಸಿದೆ. ಮುಮ್ತಾಜ್ ಅಲಿ ಅವರು ಮಂಗಳೂರಿನ ಕೂಳೂರು ಸಮೀಪದ ಸೇತುವೆ ಬಳಿ ಕಾರು ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹನಿಟ್ರ್ಯಾಪ್‌ಗೆ ಹೆದರಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ದೂರು ದಾಖಲಿಸಿದ್ದರು. ಕಾವೂರು ಪೊಲೀಸ್ ಠಾಣೆಯಲ್ಲಿ ರೆಹಮತ್ ಎಂಬ ಮಹಿಳೆ ಸೇರಿ ಆರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಗಳು 2024ನೇ ಜುಲೈ ತಿಂಗಳಿನಿಂದ ಅಕ್ಟೋಬರ್‌ವರೆಗೆ ನಿರಂತರವಾಗಿ ಬೆದರಿಸಿ ಲಕ್ಷಾಂತರ ರೂ. ಹಣ ಎಗರಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಯುತ್ತಿದೆ.
ಇದನ್ನು ಓದಿದ್ದೀರಾ?: ಮಂಗಳೂರು | ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ನಾಪತ್ತೆ: ಸೇತುವೆ ಮೇಲೆ ಕಾರು ಪತ್ತೆ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ
2021ರ ಮಾರ್ಚ್ 2ರಂದು ಸರ್ಕಾರಿ ಉದ್ಯೋಗ ನೀಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆ ಸಂತ್ರಸ್ತೆ ದೂರು ದಾಖಲಿಸಿದ್ದು ಇಂದಿಗೂ ತನಿಖೆ ನಡೆಯುತ್ತಲೇ ಇದೆ. ಸಿಡಿ ಪ್ರಕರಣವೆಂದೇ ಕರೆಲಾಗುವ ಈ ಪ್ರಕರಣವನ್ನು ಲೈಂಗಿಕ ಕಿರುಕುಳ ಮತ್ತು ಹನಿಟ್ರ್ಯಾಪ್ ಎರಡೂ ಆಯಾಮದಲ್ಲೀಗ ತನಿಖೆ ನಡೆಸಲಾಗುತ್ತಿದೆ. ಆರಂಭದಲ್ಲಿ ವೈರಲ್ ಆದ ವಿಡಿಯೋದಲ್ಲಿರುವುದು ನಾನಲ್ಲ, ಇದು ಫೇಕ್ ಹನಿಟ್ರ್ಯಾಪ್ ಎಂದು ಹೇಳಿಕೊಂಡಿದ್ದ ರಮೇಶ್ ಜಾರಕಿಹೊಳಿ, ಬಳಿಕ ಆ ವಿಡಿಯೋದಲ್ಲಿರುವುದು ತಾನೇ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಎಸ್‌ಐಟಿ ಮಾತ್ರ ಎರಡು ಆಯಾಮದಲ್ಲಿಯೂ ತನಿಖೆ ನಡೆಸುತ್ತಿದೆ. ಇದು ಹನಿಟ್ರ್ಯಾಪ್ ಪ್ರಕರಣವೆಂಬುದು ಸಾಬೀತಾಗಿಲ್ಲ. ಬರೀ ಆರೋಪವಿದೆ.
ಇದನ್ನು ಓದಿದ್ದೀರಾ? ಸಿ.ಡಿ ಪ್ರಕರಣ | ರಮೇಶ ಜಾರಕಿಹೊಳಿ ದಾಖಲೆ ಕೊಟ್ಟರೆ ತನಿಖೆ ನಡೆಸುತ್ತೇವೆ: ಗೃಹ ಸಚಿವ ಪರಮೇಶ್ವರ್
ಮುನಿರತ್ನ ಹನಿಟ್ರ್ಯಾಪ್ ಪ್ರಕರಣ
ಇತ್ತೀಚೆಗೆ ರಾಜ್ಯ ಮಾತ್ರವಲ್ಲ ದೇಶದಾದ್ಯಂತ ಬಿಜೆಪಿ ಶಾಸಕ ಮುನಿರತ್ನ ನಡೆಸಿದ ಹಲವಾರು ಹನಿಟ್ರ್ಯಾಪ್ ಪ್ರಕರಣಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವು ಮಂದಿ ಈ ವಿಕೃತ ಕೃತ್ಯವನ್ನು ಮಾಡಿದ ಮುನಿರತ್ನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮುನಿರತ್ನ ಬಲೆಗೆ ಬಿದ್ದ ಎಷ್ಟೋ ಮಂದಿಯ ಜೀವವೂ ಅಪಾಯದಲ್ಲಿದೆ. ಆದರೂ ಇಂದಿಗೂ ಮುನಿರತ್ನ ಶಾಸಕರಾಗಿಯೇ ಇರುವುದು, ಬಿಜೆಪಿ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಂಡಿರುವುದು ರಾಜ್ಯಕ್ಕೆ ಅಪಮಾನ.
ಮುನಿರತ್ನ ವಿರುದ್ಧವಿರುವ ಅತ್ಯಾಚಾರ, ಹನಿಟ್ರ್ಯಾಪ್, ಅಪಾಯಕಾರಿ ಸೋಂಕು ಎಚ್‌ಐವಿ ಹರಡುವಿಕೆ ಆರೋಪಗಳು ತನಿಖೆಯಲ್ಲಿ ರುಜುವತಾಗಿದೆ ಎಂದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಿಐಡಿ ವಿಶೇಷ ತನಿಖಾ ತಂಡ ಚಾರ್ಜ್‌ಶೀಟ್ ಸಲ್ಲಿಸಿದೆ. ತಮ್ಮ ವಿರೋಧಿಗಳನ್ನು ಎಚ್‌ಐವಿ- ಏಡ್ಸ್ ಪೀಡಿತರ ಮೂಲಕ ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಏಡ್ಸ್ ಹರಡುವಂತಹ ದುಷ್ಕೃತ್ಯವನ್ನು ಶಾಸಕ ಮುನಿರತ್ನ ಎಸಗಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಎಸ್‌ಐಟಿ ಹೇಳಿದೆ. ಇಷ್ಟೊಂದು ಅಪರಾಧ ನಡೆಸಿರುವುದು ಮಾತ್ರವಲ್ಲದೇ ಇತ್ತೀಚೆಗೆ ದಲಿತರ ತಾತ್ಕಾಲಿಕ ಶೆಡ್‌ಗಳನ್ನು ಕೆಡವಿದ್ದರು. ತನ್ನ ಅಧಿಕಾರದ ದರ್ಪವನ್ನು ಪ್ರದರ್ಶಿಸಿದ್ದರು. ಸುಮಾರು 70ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಬದುಕನ್ನು ಬೀದಿಪಾಲು ಮಾಡಿದ್ದಾರೆ. ದೇಶದಲ್ಲಿ ಅತೀ ನೀಚ ಆರೋಪಗಳನ್ನು ಹೊತ್ತಿರುವ ವ್ಯಕ್ತಿಗಳಲ್ಲಿ ಮುನಿರತ್ನ ಕೂಡಾ ಒಬ್ಬರು ಎಂದರೆ ತಪ್ಪಾಗಲಾರದು.
ಇದನ್ನು ಓದಿದ್ದೀರಾ? ‘ಈ ದಿನ’ ಗ್ರೌಂಡ್ ರಿಪೋರ್ಟ್ | ಶಾಸಕ ಮುನಿರತ್ನ ಕ್ರೌರ್ಯಕ್ಕೆ 70 ಕುಟುಂಬಗಳ ಬದುಕು ಬಲಿ

ಕಲಬುರಗಿ ಹನಿಟ್ರ್ಯಾಪ್ ಪ್ರಕರಣ
ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳನ್ನು ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸುತ್ತಿದ್ದ ದಂಧೆಯೊಂದು ಕಲಬುರಗಿಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಯುವತಿಯರನ್ನು ಬಳಸಿ ಹನಿಟ್ರ್ಯಾಪ್ ನಡೆಸಿರುವ ಆರೋಪದಲ್ಲಿ ದಲಿತ ಸೇನೆಯ ರಾಜ್ಯಾಧ್ಯಕ್ಷ ಸಹಿತ ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ದಲಿತ ಸೇನೆಯ ರಾಜ್ಯಾಧ್ಯಕ್ಷ ನ್ಯಾಯವಾದಿ ಹನುಮಂತ್ ಯಳಸಂಗಿ, ಸಂಘಟನೆ ಕಲಬುರಗಿ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಭಂಡಾರಿ, ಶ್ರೀಕಾಂತ್ ರೆಡ್ಡಿ, ಉದಯಕುಮಾರ್ ಖಣಗೆ, ಅರವಿಂದ ಕುಮಾರ್ ಕಮಲಾಪುರ ಹಾಗೂ ಸಂತೋಷ ಪಾಳ ಅವರೇ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸ್ವಯಂ ಪ್ರೇರಿತವಾಗಿ ಪೊಲೀಸರಿಗೆ ಶರಣಾಗಿದ್ದಾರೆ. ಸರ್ಕಾರಿ ಅಧಿಕಾರಿಗಳನ್ನು, ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದರು. ಯುವತಿಯರೊಂದಿಗೆ ಲಾಡ್ಜ್‌ಗೆ ಸರ್ಕಾರಿ ಅಧಿಕಾರಿಗಳನ್ನು, ಉದ್ಯಮಿಗಳನ್ನು ಕಳುಹಿಸಿ ಬಳಿಕ ತಾವೇ ದಾಳಿ ನಡೆಸಿ ವಿಡಿಯೋ ಚಿತ್ರೀಕರಿಸಿ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂಬ ಆರೋಪವಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಹನಿಟ್ರ್ಯಾಪ್ ಪ್ರಕರಣ: ದಲಿತ ಸೇನೆಯ ರಾಜ್ಯಾಧ್ಯಕ್ಷ ಯಳಸಂಗಿ ಸೇರಿ 6 ಮಂದಿ ಪೊಲೀಸರಿಗೆ ಶರಣು
ಎಚ್ ವೈ ಮೇಟಿ ಹನಿಟ್ರ್ಯಾಪ್ ಪ್ರಕರಣ
2016ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದ ಎಚ್ ವೈ ಮೇಟಿ ಕೂಡಾ ಹನಿಟ್ರ್ಯಾಪ್‌ಗೆ ಬಲಿಯಾದವರು. ಅವರ ಅಶ್ಲೀಲ ಸಿಡಿಯೊಂದು ರಾಜ್ಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತ್ತು. ಈ ಸುದ್ದಿಯಾಗುತ್ತಿದ್ದಂತೆ ಸಿದ್ದರಾಮಯ್ಯ ಅವರು ಮೇಟಿಯವರಿಗೆ ರಾಜೀನಾಮೆ ಪಡೆದಿದ್ದರು. ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸಿದೆ. ಮೇಟಿ ಲೈಂಗಿಕ ಹಗರಣ ನಡೆಸಿರುವ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ ಎಂದು ಹೇಳಿರುವ ಸಿಐಡಿ 2017ರಲ್ಲಿ ಮೇಟಿ ಅವರನ್ನು ದೋಷಮುಕ್ತ ಎಂದು ಹೇಳಿದೆ. ಹನಿಟ್ರ್ಯಾಪ್ ಜಾಲದಲ್ಲಿ ಮೇಟಿ ಅವರನ್ನು ಸಿಲುಕಿಸಿ ನಂತರ ವಿಡಿಯೋ ತೋರಿಸಿ ಹಣವನ್ನು ಸುಲಿಗೆ ಮಾಡಲು ಮೀಸಲು ಪಡೆ ಪೊಲೀಸ್ ಪೇದೆ ಸುಭಾಷ್ ಮುಗಳಖೋಡ ಹಾಗೂ ನರ್ಸ್ ವಿಜಯಲಕ್ಷ್ಮೇ ಸಂಚು ರೂಪಿಸಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.
ಇದು ಹೆಚ್ಚು ಮುನ್ನಲೆಗೆ ಬಂದಿರುವ ಹನಿಟ್ರ್ಯಾಪ್ ಪ್ರಕರಣಗಳಾಗಿವೆ. ಆದರೆ ಅದೆಷ್ಟೋ ಪ್ರಕರಣಗಳು ಬಹಿರಂಗವೇ ಆಗಿಲ್ಲ. ಮರ್ಯಾದೆಗೆ ಅಂಜಿ ಹಣ ನೀಡಿ ಮುಚ್ಚಿ ಹಾಕುವ ಪ್ರಯತ್ನವನ್ನು ಟ್ರ್ಯಾಪ್‌ಗೆ ಒಳಗಾಗಿರುವವರು ಮಾಡಿರುತ್ತಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ವಿಡಿಯೋ ಕಾಲ್ ಮಾಡಿ, ಬೆತ್ತಲೆಯಾಗಿ ನಿಂತು ಅದರ ಸ್ಕ್ರೀನ್‌ಶಾಟ್ ತೆಗೆದು ಅಥವಾ ವಿಡಿಯೋ ರೆಕಾರ್ಡಿಂಗ್ ಮಾಡಿ ಬ್ಲ್ಯಾಕ್ ಮೇಲ್ ಮಾಡುವಂತಹ ಪ್ರಕರಣಗಳು ಕೂಡಾ ನಡೆದಿದೆ, ನಡೆಯುತ್ತಲೂ ಇದೆ. ಇಂತಹ ಜಾಲಕ್ಕೆ ಹೆಚ್ಚಾಗಿ ವಿದ್ಯಾರ್ಥಿಗಳು, ಯುವಕರು ಬಲಿಯಾಗುತ್ತಿದ್ದಾರೆ.
ಬಲೆಯಲ್ಲಿ ಸಿಲುಕಿದರೆ ಅದರಿಂದ ಹೊರಬರಲು ಎಷ್ಟೆಲ್ಲಾ ಕಷ್ಟಪಡಬೇಕಾಗುತ್ತದೆಯೋ, ಹಾಗೆಯೇ ಈ ಹನಿಟ್ರ್ಯಾಪ್ ಬಲೆಯಲ್ಲಿ ಬಿದ್ದರೆ ಅಲ್ಲಿಯೇ ಸಿಲುಕಿ ಒದ್ದಾಡಬೇಕಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಸಾಕ್ಷ್ಯಾಧಾರವೂ ಲಭ್ಯವಾಗುವುದಿಲ್ಲ. ಹನಿಟ್ರ್ಯಾಪ್ ದಂಧೆ ತನ್ನ ಕಬಂಧ ಬಾಹುವನ್ನು ವಿಸ್ತೀರ್ಣವಾಗಿ ಚಾಚುತ್ತಿದೆ. ಆದರೆ ಈವರೆಗೂ ಈ ದುಷ್ಕೃತ್ಯದ ವಿರುದ್ಧ ಕ್ರಮಕ್ಕೆ ಪ್ರತ್ಯೇಕವಾದ ಕಾನೂನಿಲ್ಲ. ಈ ಕೃತ್ಯಕ್ಕೂ ಪ್ರತ್ಯೇಕ ಕಾನೂನು ಅತ್ಯಗತ್ಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.