ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್ಡಿಪಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಮಿಲಿಟರಿ ಎಸ್ಕಲೇಷನ್ ಇನ್ ದಿ ಮಿಡಲ್ ಈಸ್ಟ್: ಹ್ಯೂಮನ್ ಡೆವಲಪ್ಮೆಂಟ್ ಇಂಪ್ಯಾಕ್ಟ್ ಅಕ್ರಾಸ್ ಏಷ್ಯಾ ಅಂಡ್ ದಿ ಪೆಸಿಫಿಕ್’ ವರದಿಯು ಮಧ್ಯಪ್ರಾಚ್ಯದ ಸಂಘರ್ಷಗಳು ಭಾರತದ ಆರ್ಥಿಕತೆ ಮತ್ತು ಮಾನವ ಅಭಿವೃದ್ಧಿಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ.
ಭಾರತದ ಮೇಲಿನ ಪ್ರಮುಖ ಪರಿಣಾಮಗಳೇನು?
ಭಾರತವು ತನ್ನ ಕಚ್ಚಾ ತೈಲದ ಅಗತ್ಯತೆಗಳಿಗಾಗಿ ಪಶ್ಚಿಮ ಏಷ್ಯಾವನ್ನು ಹೆಚ್ಚಾಗಿ ಅವಲಂಬಿಸಿದೆ. ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಕಾರಣದಿಂದಾಗಿ ಕಚ್ಚಾ ತೈಲದ ಪೂರೈಕೆಯಲ್ಲಿ ವ್ಯತ್ಯಯವಾದರೆ ತೈಲ ಬೆಲೆಗಳು ಏರಿಕೆಯಾಗುತ್ತದೆ. ಇದು ಸಾರಿಗೆ ಮತ್ತು ಉತ್ಪಾದನಾ ವೆಚ್ಚವನ್ನು ಹೆಚ್ಚಿಸುತ್ತದೆ. ತೈಲ ಬೆಲೆ ಏರಿಕೆಯು ನೇರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿ, ಸಾಮಾನ್ಯ ಜನರ ಖರೀದಿ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಹಣದುಬ್ಬರ ಮತ್ತು ಸೃಷ್ಟಿಯಾಗಲಿದೆ ಎನ್ನುವುದನ್ನು ವರದಿ ಹೇಳಿದೆ.
ಪಶ್ಚಿಮ ಏಷ್ಯಾದ ದೇಶಗಳಲ್ಲಿ ಸುಮಾರು 90 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಬಿಕ್ಕಟ್ಟಿನಿಂದಾಗಿ ಅಲ್ಲಿನ ಆರ್ಥಿಕತೆ ಕುಸಿದರೆ, ಭಾರತೀಯರಿಂದ ವರ್ಗಾವಣೆಯಾಗುವ ಹಣದ ಪ್ರಮಾಣ ಕಡಿಮೆಯಾಗುತ್ತದೆ. ಭಾರತ ವಿಶ್ವದಲ್ಲೇ ಅತಿ ಹೆಚ್ಚು ರೆಮಿಟೆನ್ಸ್ ಪಡೆಯುವ ದೇಶವಾಗಿದ್ದು, ಇದು ವಿದೇಶಿ ವಿನಿಮಯದ ಮೇಲೆ ಪರಿಣಾಮ ಬೀರುತ್ತದೆ. ಯುದ್ಧದ ಸನ್ನಿವೇಶದಲ್ಲಿ ಭಾರತೀಯರ ಸುರಕ್ಷತೆ ಮತ್ತು ಅವರನ್ನು ಸ್ಥಳಾಂತರಿಸುವ ಸವಾಲು ಎದುರಾಗುತ್ತದೆ.
ಇದನ್ನೂ ಓದಿ : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸುವ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ; ಪರ- ವಿರೋಧ ಚರ್ಚೆಗಳೇನು?
ಕೆಂಪು ಸಮುದ್ರ (Red Sea) ಮತ್ತು ಸುಯೆಜ್ ಕಾಲುವೆಯ ಮೂಲಕ ನಡೆಯುವ ಭಾರತದ ವ್ಯಾಪಾರಕ್ಕೆ ಧಕ್ಕೆಯಾಗುತ್ತದೆ. ಹಡಗುಗಳ ಮೇಲಿನ ದಾಳಿ ಅಥವಾ ವಿಮೆ ವೆಚ್ಚದ ಹೆಚ್ಚಳದಿಂದ ಭಾರತದ ರಫ್ತು ವಸ್ತುಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದುಬಾರಿಯಾಗುತ್ತವೆ. ಸರಕುಗಳ ಸಾಗಾಣಿಕೆ ವಿಳಂಬವಾಗುವುದರಿಂದ ದೇಶೀಯ ಉತ್ಪಾದನಾ ವಲಯದ ಮೇಲೆ ಒತ್ತಡ ಬೀಳುತ್ತದೆ.
ಸರ್ಕಾರವು ಇಂಧನ ಸಬ್ಸಿಡಿ ಮತ್ತು ತುರ್ತು ವೆಚ್ಚಗಳಿಗೆ ಹೆಚ್ಚು ಹಣ ವಿನಿಯೋಗಿಸಬೇಕಾಗಿ ಬರುವುದರಿಂದ, ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಕ್ಷೇತ್ರಗಳಿಗೆ ನೀಡುವ ಅನುದಾನದಲ್ಲಿ ಕಡಿತವಾಗಬಹುದು. ಇದು ದೀರ್ಘಕಾಲದವರೆಗೆ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕ (Human Development Index) ಪ್ರಗತಿಯನ್ನು ಕುಂಠಿತಗೊಳಿಸಲಿದೆ, ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದಾಗ ಭಾರತದ Current Account Deficit ಹೆಚ್ಚಾಗುತ್ತದೆ. ಇದರಿಂದಾಗಿ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯ ಕುಸಿಯುವ ಸಾಧ್ಯತೆ ದಟ್ಟವಾಗಿದೆ.
ಮಧ್ಯಪ್ರಾಚ್ಯದ ಬಿಕ್ಕಟ್ಟು ಭಾರತದ ಪಾಲಿಗೆ ಕೇವಲ ರಾಜತಾಂತ್ರಿಕ ಸವಾಲಲ್ಲ, ಬದಲಿಗೆ ಅದು ಸಾಮಾನ್ಯ ಜನರ ಜೀವನೋಪಾಯ ಮತ್ತು ದೇಶದ ಆರ್ಥಿಕ ಸ್ಥಿರತೆಯ ಮೇಲೆ ನೇರ ಪ್ರಭಾವ ಬೀರುವ ಆತಂಕಕಾರಿ ವಿದ್ಯಮಾನವಾಗಿದೆ ಎಂದು ಈ ವರದಿ ಎಚ್ಚರಿಸಿದೆ.
ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದ ಬಡತನ ಏರಿಕೆ
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ವರದಿಯ ಪ್ರಕಾರ, ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಕಾರಣದಿಂದ ಭಾರತ ಮತ್ತು ಇತರ ಏಷ್ಯಾ-ಪೆಸಿಫಿಕ್ ರಾಷ್ಟ್ರಗಳಲ್ಲಿ ಬಡತನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಆತಂಕಕಾರಿ ಅಂಶಗಳನ್ನೂ ಉಲ್ಲೇಖಿಸಿದೆ.
ತೈಲ ಬೆಲೆ ಏರಿಕೆಯಾದಾಗ ಕೃಷಿ ವೆಚ್ಚ (ರಸಗೊಬ್ಬರ ಮತ್ತು ಸಾರಿಗೆ) ಹೆಚ್ಚಾಗುತ್ತದೆ. ಇದು ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸುತ್ತದೆ. ಬಡ ಕುಟುಂಬಗಳು ತಮ್ಮ ಆದಾಯದ ಬಹುಭಾಗವನ್ನು ಆಹಾರಕ್ಕಾಗಿ ಖರ್ಚು ಮಾಡುವುದರಿಂದ, ಅವರು ಮತ್ತಷ್ಟು ಬಡತನದ ಕೂಪಕ್ಕೆ ತಳ್ಳಲ್ಪಡುತ್ತಾರೆ.
ವಿದೇಶಗಳಲ್ಲಿ (ವಿಶೇಷವಾಗಿ ಗಲ್ಫ್ ರಾಷ್ಟ್ರಗಳಲ್ಲಿ) ಕೆಲಸ ಮಾಡುತ್ತಿರುವ ಭಾರತೀಯರು ಯುದ್ಧದ ಭೀತಿಯಿಂದ ಉದ್ಯೋಗ ಕಳೆದುಕೊಂಡು ಮರಳಿ ಬಂದರೆ, ಅವರನ್ನು ಅವಲಂಬಿಸಿರುವ ಕುಟುಂಬಗಳ ಆದಾಯ ಸ್ಥಗಿತಗೊಳ್ಳುತ್ತದೆ. ಇದು ಗ್ರಾಮೀಣ ಭಾಗಗಳಲ್ಲಿ ತೀವ್ರ ಆರ್ಥಿಕ ಸಂಕಷ್ಟ ಉಂಟುಮಾಡುತ್ತದೆ.
ಆರ್ಥಿಕ ಅಸ್ಥಿರತೆಯ ಸಂದರ್ಭದಲ್ಲಿ ಶ್ರೀಮಂತರು ತಮ್ಮ ಆಸ್ತಿಯನ್ನು ರಕ್ಷಿಸಿಕೊಳ್ಳಬಲ್ಲರು, ಆದರೆ ದಿನಗೂಲಿ ನೌಕರರು ಮತ್ತು ಸಣ್ಣ ವ್ಯಾಪಾರಿಗಳು ಆದಾಯ ಕಳೆದುಕೊಂಡು ದಾರಿದ್ರ್ಯಕ್ಕೆ ಸಿಲುಕುತ್ತಾರೆ ಎಂದು ವರದಿ ಸೂಚಿಸಿದೆ.
ಯುದ್ಧದ ಬಿಕ್ಕಟ್ಟಿನ ಪರಿಣಾಮವಾಗಿ ಉಂಟಾಗುವ ಆರ್ಥಿಕ ಆಘಾತಗಳು, ಕಳೆದ ಒಂದು ದಶಕದಲ್ಲಿ ಭಾರತ ಸಾಧಿಸಿದ ಬಡತನ ನಿರ್ಮೂಲನೆಯ ಪ್ರಗತಿಯನ್ನು ಮತ್ತೆ ಹಿಂದಕ್ಕೆ ತಳ್ಳುವ ಅಪಾಯವಿದೆ.”
ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ಉಲ್ಬಣಗೊಂಡರೆ, ಅದರ ನೇರ ಪರಿಣಾಮವಾಗಿ ಭಾರತದಲ್ಲಿ ಬಡತನದ ಪ್ರಮಾಣವು ಆಘಾತಕಾರಿ ರೀತಿಯಲ್ಲಿ ಏರಿಕೆಯಾಗಬಹುದು ಎಂದು ವರದಿ ಅಂದಾಜಿಸಿದೆ.
ವರದಿಯ ವಿಶ್ಲೇಷಣೆಯ ಪ್ರಕಾರ, ತೈಲ ಬೆಲೆ ಏರಿಕೆ ಮತ್ತು ರಫ್ತು ಕುಸಿತದಿಂದಾಗಿ ಭಾರತದಲ್ಲಿ ಹೆಚ್ಚುವರಿಯಾಗಿ ಸುಮಾರು 21 ಲಕ್ಷ ಜನರು (4 ಲಕ್ಷದಿಂದ 25 ಲಕ್ಷದವರೆಗೆ) ಅತ್ಯಂತ ಕಡು ಬಡತನದ ರೇಖೆಗಿಂತ ಕೆಳಕ್ಕೆ ತಳ್ಳಲ್ಪಡುವ ಅಪಾಯವಿದೆ ಎಂದು ಹೇಳಿದೆ.
ರಫ್ತು ವಲಯದಲ್ಲಿ (ವಿಶೇಷವಾಗಿ ಜವಳಿ ಮತ್ತು ಆಭರಣ) ಬೇಡಿಕೆ ಕಡಿಮೆಯಾದಾಗ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ ಎಂದೂ ಹೇಳಿದೆ. ಯುಎನ್ಡಿಪಿ ವರದಿ ಕೇವಲ ಅಂಕಿಅಂಶಗಳನ್ನು ನೀಡದೆ, ಭಾರತದಂತಹ ದೇಶಗಳು ಇಂತಹ ಜಾಗತಿಕ ಆಘಾತಗಳನ್ನು ತಡೆದುಕೊಳ್ಳಲು ‘ಸಾಮಾಜಿಕ ಭದ್ರತಾ ಯೋಜನೆಗಳನ್ನು’ (Social Security Schemes) ಬಲಪಡಿಸಬೇಕು ಮತ್ತು ಇಂಧನ ಮೂಲಗಳನ್ನು ವೈವಿಧ್ಯಗೊಳಿಸಬೇಕು ಎಂದು ಸಲಹೆ ನೀಡಿದೆ.




