ಒಂದೆಡೆ ಪ್ರಧಾನಿ ಮೋದಿ, ಅಮಿತ್ ಶಾ ನಾರಿ ಶಕ್ತಿ ವಂದನೆ ಕಾಯ್ದೆಯ ಮೂಲಕ ಮಹಿಳೆಯರಿಗೆ ರಾಜಕೀಯ ಸಬಲೀಕರಣ ನೀಡುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಒಬ್ಬ ಮಹಿಳಾ ಮುಖ್ಯಮಂತ್ರಿಯನ್ನು ಸಾರ್ವಜನಿಕ ಸಭೆಗಳಲ್ಲಿ 'ಏ ದೀದಿ, ಓ ದೀದಿ' ಅತಿ ಕೆಟ್ಟದಾಗಿ ಲೇವಡಿ ಮಾಡುತ್ತಿರುವುದೂ ಇದೇ ಮೋಶಾ!
ರಾಜಕಾರಣದಲ್ಲಿ ವಾಗ್ವಾದ, ಟೀಕೆ-ಪ್ರತಿ ಟೀಕೆಗಳು ಸಹಜ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ವಾಗ್ವಾದಗಳು ಆಡಳಿತದಲ್ಲಿ ಸುಧಾರಣೆ ತರಲು ಸಹಕಾರಿ. ವಿರೋಧ ಪಕ್ಷದ ಟೀಕೆಗಳು ಆಡಳಿತ ಪಕ್ಷವನ್ನು ಎಚ್ಚರಿಸುವ ಕೆಲಸ ಮಾಡುತ್ತವೆ. ಆದರೆ ಈ ಟೀಕೆಗಳು ಕೇವಲ ಕೆಲಸ ಅಥವಾ ಸಿದ್ಧಾಂತಕ್ಕೆ ಸೀಮಿತವಾಗಿರಬೇಕು. ಇತ್ತೀಚೆಗೆ ನಡೆಯುತ್ತಿರುವುದೇ ಬೇರೆ. ಟೀಕೆಗಳು ವೈಯಕ್ತಿಕ ನಿಂದನೆಯ ಮಟ್ಟಕ್ಕೆ ತಲುಪುತ್ತಿದೆ. ಇದರಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೂ ಪಾಲುದಾರರು!
ಟೀಕೆಗಳಿಗೂ ಒಂದು ಮಿತಿಯಿದೆ. ಈ ಟೀಕೆಗಳು ಘನತೆಯ ಗೆರೆಯನ್ನು ದಾಟಿದಾಗ ಅದು ಕೇವಲ ಒಬ್ಬ ವ್ಯಕ್ತಿಯ ವಿರುದ್ದ ಅನಿಸುವುದಿಲ್ಲ. ಈಗ ನಡೆಯುತ್ತಿರುವುದು ಅದುವೇ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿರುವುದು ಇಡೀ ಸ್ತ್ರೀ ಕುಲಕ್ಕೆ ಮಾಡುವ ಅಪಮಾನ.
ಇದನ್ನು ಓದಿದ್ದೀರಾ? ಬೀದಿಗಿಳಿದ ‘ಬಂಗಾಳದ ಹುಲಿ’: ಮೋದಿ-ಶಾಗೆ ’ಪೆನ್ ಡ್ರೈವ್’ ಪಂಥಾಹ್ವಾನ ನೀಡಿದ ದೀದಿ
2021ರ ಪಶ್ಚಿಮ ಬಂಗಾಳ ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಮಮತಾ ಬ್ಯಾನರ್ಜಿ ಅವರನ್ನು ಉದ್ದೇಶಿಸಿ ವ್ಯಂಗ್ಯವಾಗಿ “ದೀದಿ ಓ ದೀದಿ” ಎಂದು ಹೇಳಿದ್ದರು. ಇದೀಗ ಅಮಿತ್ ಶಾ ಅವರು “ಏ ದೀದಿ” ಎಂದು ಹೇಳಿದ್ದಾರೆ. ಸದ್ಯ ದೇಶದ ರಾಜಕೀಯ ವಲಯದಲ್ಲಿ ಪ್ರಮುಖ ಸ್ಥಾನದಲ್ಲಿರುವ ಈ ಇಬ್ಬರು ನಾಯಕರು ಓರ್ವ ಮಹಿಳೆಯನ್ನು ಉದ್ದೇಶಿಸಿ ಮಾತನಾಡುವ ಧಾಟಿ ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಯ ವಿಷಯವಾಗಿದೆ.
ಒಂದೆಡೆ ಪ್ರಧಾನಿ ಮೋದಿ, ಶಾ ನಾರಿ ಶಕ್ತಿ ವಂದನೆ ಕಾಯ್ದೆಯ ಮೂಲಕ ಮಹಿಳೆಯರಿಗೆ ರಾಜಕೀಯ ಸಬಲೀಕರಣ ನೀಡುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ವಿಪಕ್ಷಗಳನ್ನು ಮಹಿಳಾ ವಿರೋಧಿಗಳು ಎಂಬಂತೆ ಬಿಂಬಿಸುತ್ತಿದ್ದಾರೆ. ಮತ್ತೊಂದೆಡೆ ಒಬ್ಬ ಮಹಿಳಾ ಮುಖ್ಯಮಂತ್ರಿಯನ್ನು ಸಾರ್ವಜನಿಕ ಸಭೆಗಳಲ್ಲಿ ಅತಿ ಕೆಟ್ಟದಾಗಿ ಲೇವಡಿ ಮಾಡುತ್ತಿರುವುದೂ ಇದೇ ಮೋಶಾ! ಅಂದರೆ ಹೇಳುವುದು ಒಂದು ಮಾಡುವುದು ಇನ್ನೊಂದು ಎಂದರ್ಥವಲ್ಲವೇ?
ಅಷ್ಟಕ್ಕೂ ಒಬ್ಬ ವ್ಯಕ್ತಿಯ ಹೆಸರನ್ನು ಅಥವಾ ಪದವಿಯನ್ನು ಗೌರವಯುತವಾಗಿ ಕರೆಯುವ ಬದಲು ಲೇವಡಿ ಮಾಡುವ ಧಾಟಿಯಲ್ಲಿ ಉಚ್ಚರಿಸುವುದು ಆ ವ್ಯಕ್ತಿಯ ಅಸ್ತಿತ್ವವನ್ನೇ ಅಣಕಿಸಿದಂತಾಗುತ್ತದೆ. ಈ ನಾಯಕರು ಬಳಸುವ ಈ ಧಾಟಿ, ಭಾಷೆಯೇ ಅವರ ಬೆಂಬಲಿಗರ ಮೇಲೆ ಪ್ರಭಾವ ಬೀರುವುದಲ್ಲವೇ? ನಾಯಕರು ಎನಿಸಿಕೊಂಡ ಪ್ರಧಾನಿ ಮೋದಿ, ಅಮಿತ್ ಶಾ ಅವರೇ ಇಷ್ಟು ಕೀಳು ಮಟ್ಟದಲ್ಲಿ ವರ್ತಿಸಿದರೆ, ಇನ್ನು ಕೆಳಮಟ್ಟದ ಕಾರ್ಯಕರ್ತರು ಮಹಿಳಾ ನಾಯಕಿಯರನ್ನು ಗೌರವಿಸುತ್ತಾರೆಯೇ?
ಕೇಂದ್ರ ಸರ್ಕಾರವು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ತಮ್ಮ ಐತಿಹಾಸಿಕ ಹೆಜ್ಜೆ ಎಂದು ಬಿಂಬಿಸುತ್ತಿದೆ. ಅದರೊಂದಿಗೆ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಜೋಡಿಸಿ ಪರೋಕ್ಷವಾಗಿ ಅನ್ಯಾಯವನ್ನು ಮಾಡುವ ಸಂಚಿಗೂ ಮುಂದಾಗಿತ್ತು ಎಂಬುದು ಬೇರೆ ವಿಚಾರ. ಅದೇ ಇರಲಿ ಮಹಿಳಾ ಮೀಸಲಾತಿ ಮಸೂದೆ ಎಂಬುದು 2023ರಲ್ಲೇ ಸರ್ವಾನುಮತದಿಂದ ಅಂಗೀಕಾರಗೊಂಡಿತ್ತು. ಅದನ್ನು ತಮ್ಮ ಸಾಧನೆ ಎಂದು ಮೋದಿ ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ ಈ ನಾರಿ ಶಕ್ತಿ ‘ವಂದನೆ’ ಅಂದರೆ ಗೌರವ ಎಂಬುದು ಬರೀ ಕಾಗದದ ಮೇಲಿದೆಯೇ ಎಂಬ ಪ್ರಶ್ನೆ ಈಗ ಏಳುತ್ತಿದೆ.
ಇದನ್ನು ಓದಿದ್ದೀರಾ? ಇಡಿ vs ದೀದಿ | ಮಮತಾ ವಿರುದ್ಧ ಸುಪ್ರೀಂ ಮೊರೆ ಹೋದ ಇಡಿ; 17 ಆರೋಪಗಳಡಿ CBI ತನಿಖೆಗೆ ಮನವಿ
ನಾರಿ ಶಕ್ತಿ ವಂದನೆ ಎಂಬುದು ಮೋದಿ ಸರ್ಕಾರದ ಘೋಷಿತ ನಿಲುವು. ಅಂದರೆ ಮಹಿಳೆಯರನ್ನು ದೇವತೆಯ ರೂಪದಲ್ಲಿ ‘ವಂದಿಸುವುದು’ ಎಂದರ್ಥ. ಆದರೆ ವಾಸ್ತವದಲ್ಲಿ ನಡೆಯುತ್ತಿರುವುದೇನು? ಮಹಿಳಾ ನಾಯಕಿಯರನ್ನು ಸಾರ್ವಜನಿಕ ವೇದಿಕೆಯಲ್ಲಿ ಲೇವಡಿ ಮಾಡುವುದು ‘ನಾರಿ ಶಕ್ತಿ ವಂದನೆ’ಯೇ? ಇನ್ನೊಂದೆಡೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಗೆ ಸ್ಥಾನ ಸಿಗಬೇಕು ಎಂಬ ನಿಟ್ಟಿನಲ್ಲಿ ಈ ಮಹಿಳಾ ಮೀಸಲಾತಿ ಅಗತ್ಯ ಎಂದು ಮೋದಿ ಸರ್ಕಾರ ಹೇಳುತ್ತದೆ. ಆದರೆ ಇನ್ನೊಂದೆಡೆ ಮಮತಾ ಬ್ಯಾನರ್ಜಿಯಂತಹ ಮಹಿಳಾ ನಾಯಕಿಯರ ಸಾಮರ್ಥ್ಯವನ್ನು ಕುಗ್ಗಿಸಿ ತೋರಿಸುತ್ತಿದೆ ಅಲ್ಲವೇ? ಮಹಿಳೆಯರಿಗೆ ರಾಜಕೀಯದಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸುತ್ತೇವೆ ಎಂದು ಹೇಳಿಕೊಳ್ಳುವ ಮೋದಿ ಸರ್ಕಾರ, ಮಹಿಳಾ ರಾಜಕಾರಣಿಗಳ ವ್ಯಕ್ತಿತ್ವ ಹರಣದ ಮೂಲಕ ಮಾನಸಿಕ ಅಸ್ಥಿರತೆ ತರುವುದಲ್ಲವೇ?
ಯಾವುದೇ ಪಕ್ಷವಿರಲಿ ನಾಯಕಿಯರನ್ನು ಗುರಿಯಾಗಿಸಿಕೊಂಡು ಲಿಂಗಾಧಾರಿತ ಲೇವಡಿ ಮಾಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವಂತಹ ಕೃತ್ಯ. ಮಮತಾ ಬ್ಯಾನರ್ಜಿ ಅವರ ರಾಜಕೀಯ ನಿಲುವುಗಳನ್ನು ಟೀಕಿಸುವುದು ರಾಜಕೀಯದ ಒಂದು ಭಾಗ. ಅದು ಚುನಾವಣಾ ಪ್ರಚಾರದ ತಂತ್ರ. ಆದರೆ ಟೀಕೆಗಳನ್ನು ‘ಲಿಂಗ’ ಅಥವಾ ‘ವ್ಯಕ್ತಿತ್ವ’ವನ್ನು ಅಣಕಿಸುವಂತೆ ಮಾಡುವುದು ಮೋದಿ ಮತ್ತು ಅಮಿತ್ ಶಾ ತಮ್ಮ ಸ್ಥಾನಕ್ಕೆ ತಾವು ನೀಡುವ ಗೌರವವೇ? ಒಂದೆಡೆ ‘ಬೇಟಿ ಬಚಾವೋ, ಬೇಟಿ ಪಢಾವೋ’ ಎಂದು ಹೇಳಿಕೊಂಡು ಇನ್ನೊಂದೆಡೆ ಶಕ್ತಿಶಾಲಿ ಮಹಿಳೆಯೊಬ್ಬರನ್ನು ಹೀಗಳೆಯುವಾಗ ನಾವು ಮೋದಿ ಸರ್ಕಾರದ ನೈತಿಕತೆಯನ್ನು ಪ್ರಶ್ನಿಸಬೇಕಾಗುತ್ತದೆ.
ಏನೇ ಆದರೂ ರಾಜಕೀಯ ಎಂಬುದು ಸಿದ್ಧಾಂತಗಳ ಹೋರಾಟವಾಗಬೇಕೇ ಹೊರತು ವ್ಯಕ್ತಿಗತ ನಿಂದನೆಯ ಅಖಾಡವಾಗಬಾರದು. ಅದರಲ್ಲೂ ಮಹಿಳೆಯರ ವಿಷಯಕ್ಕೆ ಬಂದಾಗ ರಾಜಕಾರಣಿಗಳಲ್ಲಿ ಸೂಕ್ಷ್ಮತೆ ಅತ್ಯಗತ್ಯ. ‘ನಾರಿ ಶಕ್ತಿ’ ಎನ್ನುವುದು ಕೇವಲ ಚುನಾವಣಾ ಘೋಷಣೆಯಾಗಬಾರದು. ಅದು ಆಚರಣೆಯಲ್ಲಿರಬೇಕಾದ್ದುದ್ದು. ಮಹಿಳೆಯೊಬ್ಬರನ್ನು ಅಧಿಕಾರದಿಂದ ಕೆಳಗಿಳಿಸಲು ಅವರ ಕೆಲಸಗಳನ್ನು ಟೀಕಿಸುವ ಬದಲಾಗಿ ಅವರ ಘನತೆಗೆ ಧಕ್ಕೆ ತರುವಂತಹ ಧಾಟಿಯಲ್ಲಿ ‘ಏ ದೀದಿ, ಓ ದೀದಿ’ ಎಂದೆಲ್ಲ ಲೇವಡಿ ಮಾಡುವುದು ನಮ್ಮ ರಾಜಕೀಯದ ಗುಣಮಟ್ಟ ಎಲ್ಲಿಗೆ ತಲುಪಿದೆ ಎಂಬ ಪ್ರಶ್ನೆ ಹುಟ್ಟಿಸಿದೆ. ಗೌರವ ಕೊಡುವುದು ಮತ್ತು ಪಡೆಯುವುದು ಎರಡೂ ಸಮಾನವಾಗಿ ನಡೆದಾಗ ಮಾತ್ರ ‘ನಾರಿ ಶಕ್ತಿ’ಗೆ ನಿಜವಾದ ಅರ್ಥ ಸಿಗುತ್ತದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




