‘ಮೊಹರಂ’ ಹಿಂದುತ್ವ, ಇಸ್ಲಾಮತ್ವಗಳಿಗೆ ಟಕ್ಕರ್‌ ಕೊಡಬಲ್ಲ ಬಹುತ್ವದ ಹಬ್ಬ

Date:

Advertisements

ವಾಜರಹಳ್ಳಿಯಲ್ಲಿನ ಎಲ್ಲಾ ಜಾತಿ ಸಮುದಾಯಗಳು ಒಟ್ಟು ಸೇರುವ ಈ ಹಬ್ಬದಲ್ಲಿ ಒಂದೊಂದು ಸಮುದಾಯದ ಪಾತ್ರಗಳು ಒಂದೊಂದು ರೀತಿಯಲ್ಲಿದೆ. ಊಳಿಗಮಾನ್ಯ ಒಕ್ಕಲಿಗರ ಯಜಮಾನ್ಯವನ್ನು ಹಬ್ಬದಾದ್ಯಂತ ಇಲ್ಲಿ ಕಾಣಬಹುದು. ಹಾಗೇ ದುಡಿವ ದಲಿತ ಸಮುದಾಯಗಳು ತಮಟೆ ಬಾರಿಸುವುದನ್ನು ಊರ ತೋಟಿಯೂ ಸಾರುವುದನ್ನು ನೋಡಬಹುದು. ಅಗಸ ಸಮುದಾಯಕ್ಕೆ ಸೇರಿದ ವ್ಯಕ್ತಿ ಪಂಜನ್ನು ಹಿಡಿದು ದೇವರ ಮೆರವಣಿಗೆಯಲ್ಲಿ ಮುಂದೆ ಸಾಗುತ್ತಾರೆ. ಬಾಬಯ್ಯನ ಗುಡಿ ಅಥವ ಮಸೂತಿಯಲ್ಲಿ ಹಸ್ತಗಳನ್ನು ಏಕೂನ ಜೋಡಿಸಲಾಗಿರುತ್ತದೆ.

ಮೊಹರಂ ಹಬ್ಬ ಇನ್ನೇನು ಸಮೀಪಿಸುತ್ತಿದೆ. ಹೆಸರು ಮುಸಲ್ಮಾನರ ಹಬ್ಬ ಸೂಚಿಸುತ್ತದೆ. ಆದರೆ ಮೊಹರಂ ಆ ಗಡಿಯನ್ನು ಮೀರಿ ಭಾರತದ ಕರ್ನಾಟಕದ ಅನೇಕತೆಯ ಮಣ್ಣಲ್ಲಿ ಜನಪದೀಕರಣಗೊಂಡಿದೆ. ಜಾತಿಗಳ ಗೂಡುಗಳಾದ ಹಿಂದೂ ಸಮುದಾಯ ಮತ್ತು ಶಿಯಾ ಮುಸ್ಲಿಮರ ನಡುವೆ ಇರುವ ಶತಶತಮಾನಗಳ ಸಾಂಸ್ಕೃತಿಕ ಸಂಬಂಧಕ್ಕೆ ಈ ಅಲಾವಿ ಹಬ್ಬ ಜೀವಂತ ನಿದರ್ಶನ. ಬಾಲ್ಯದಿಂದಲೂ ಬಾಬಯ್ಯ ಹಬ್ಬವು (ಮೊಹರಂ) ಊರಹಬ್ಬದಂತೆ ಸಂತಸ ತರಿಸುವ, ತಮಟೆಯ ಸದ್ದನ್ನು ಕೇಳಿದಾಕ್ಷಣ ಮೈ ಕುಣಿಯಲು ಕಾತರಿಸುವಂತೆ ಮಾಡುವ, ಪುಳಕಗೊಳಿಸುವ ಸಂಚಲನ ಶಕ್ತಿಯಾಗಿ ನನ್ನಲ್ಲಿ ಮೂಡುತ್ತ ಬಂದಿದೆ. ಬಾಬಯ್ಯನ ಹಬ್ಬ ಇನ್ನೇನೂ ಬರುತ್ತಿದೆಯಂದ್ರೆ ಎಳೆಯ ಕೂಸು ಕೂಡ ಖುಷಿಗೊಂಡು ಹೆಜ್ಜೆಹಾಕಲು ಶುರು ಮಾಡುತ್ತದೆ. ಊರಿಗೆ ಊರೇ ಸೇರಿ ಆಚರಿಸುವ ಸಂಕರಗೊಂಡ ಜನಪದಹಬ್ಬ. ಬೆಂಗಳೂರಿನ ದಕ್ಷಿಣದಲ್ಲಿರುವ ವಾಜರಹಳ್ಳಿ, ಬೆರಳೆಣಿಕೆಯ ಮುಸ್ಲಿಮ್‌ ಕುಟುಂಬಗಳಿರುವ ಊರಾದರೂ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಐತಿಹಾಸಿಕ ಜನಪದ ಪರಂಪರೆಯಿದೆ. ಅದೆಷ್ಟೋ ಪ್ರಭುತ್ವಗಳನ್ನು ಕಂಡಿರುವ ಈ ಹಬ್ಬವು ಇವತ್ತಿನ ಕೋಮುವಾದಿ ಶಕ್ತಿಗಳಿಗೆ ಪ್ರಬಲವಾಗಿ ಟಕ್ಕರ್‌ ಕೊಡಬಲ್ಲ ಅಂತಶಃಕ್ತಿಯನ್ನು ಸುಪ್ತವಾಗಿ ತನ್ನೊಡಲಲ್ಲಿ ಸಾಗಿಸಿಕೊಂಡು ಬಂದಿದೆ. ಇವತ್ತಿನ ಕೋಮು ಧ್ರುವೀಕರಣದ ನೀಚ ರಾಜಕಾರಣದಿಂದ ಹೊಡೆದುಹೋಗುತ್ತಿರುವ ಮನಸ್ಸುಗಳಿಗೆ ಚಿಕಿತ್ಸಕ ರೂಪವಾಗಿ ಮತ್ತು ಮಡಿವಂತರ ‘ಶುದ್ಧತೆ’ಯನ್ನು ಜಾಡಿಸಬಲ್ಲ ಬಹುತ್ವದ ಬಾಹುಬಲವನ್ನು ಹೊಂದಿದೆ.

ಇಸ್ಲಾಮಿನ ಪ್ರವಾದಿ ಮೊಹಮದ್‌ ಪೈಗಂಬರ್‌ ಅವರ ಮರಣದ ಆನಂತರದಲ್ಲಿ ಖಲೀಫ್ (ರಾಜಕೀಯ ಮತ್ತು ಆಧ್ಯಾತ್ಮ ಉತ್ತರಾಧಿಕಾರಿಯ ಸ್ಥಾನ) ಯಾರಾಗಬೇಕು ಎಂಬ ಪ್ರಶ್ನೆ ಉದ್ಬವವಾದಾಗ ಕೆಲವರು ಪೈಗಂಬರರ ಅಳಿಯ ಅಲಿ ಆಗಬೇಕೆಂದೂ, ಇನ್ನೂ ಕೆಲವರು ರಕ್ತ ಸಂಬಂಧಿಗಳು ಆಗಬಾರರದೆಂದೂ ಜನರ ಆಯ್ಕೆಯಿಂದ ಆಗಬೇಕೆಂದೂ ಎರಡು ಸೋದರ ಬುಡಕಟ್ಟು ಪಂಗಡಗಳ ನಡುವೆ ಜಟಾಪಟಿ ಶುರುವಾಗುತ್ತದೆ. ಅವುಗಳೇ ಹಾಶಿಮಿ ಮತ್ತು ಉಮಯ್ಯಾ ಎಂಬ ಪಂಗಡಗಳು. ಈ ಎರಡು ಪಂಗಡಗಳು ತಮಗೆ ಇಷ್ಟವಾಗದ ಖಲೀಫರನ್ನು ಪರಸ್ಪರ ಕೊಂದು ಹಾಕುತ್ತಾ ಹಗೆತನ ತೀರಿಸಿಕೊಳ್ಳುತ್ತ ಹೋಗುತ್ತಾರೆ. ಕೊನೆಗೆ ಇದಕ್ಕೆ ಪೈಗಂಬರರ ಮೊಮ್ಮಕ್ಕಳಾದ ಹಸನ್‌ ಮತ್ತು ಹುಸೇನ್‌ರು ಕರ್ಬಲಾ ಕಾಳಗದಲ್ಲಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಇದೊಂದು ರಕ್ತಸಿಕ್ತ ಚರಿತ್ರೆ. 7ನೇ ಶತಮಾನದಲ್ಲಿ ನಡೆದ ಈ ಕಾಳಗದಲ್ಲಿ ಹುತಾತ್ಮರಾದ ಪೈಗಂಬರ್‌ ಅವರ ಕುಟುಂಭಿಕರು ಮತ್ತು ಅವರೊಡನೆ ಮಡಿದವರನ್ನು ಶೋಕಿಸುವ ನಿಟ್ಟಿನಲ್ಲಿ ಮೊಹರಂ ಆಚರಣೆ ಪ್ರಚಲಿತಕ್ಕೆ ಬಂತು. ಇದನ್ನು ಶಿಯಾ ಮುಸ್ಲಿಮರು ಮಾತ್ರ ಆಚರಿಸುತ್ತಾರೆ. ಸುನ್ನಿಗಳು ಕೆಂಡಕಾರುತ್ತಾರೆ. “ಮೊಹರಂ ಆಚರಣೆಯು ತೈಮೂರ್‌ ಲಂಗ್‌ನಿಂದ 14ನೇ ಶತಮಾನದ ಕಾಲಕ್ಕೇ ಭಾರತವನ್ನು ಪ್ರವೇಶಿಸಿತು. ಪ್ರಥಮ ಘಟ್ಟದಲ್ಲಿ ಭಾರತಕ್ಕೆ ಇದು ಇರಾನಿನಿಂದ ಶಿಯಾ ಪಂಗಡದ ದೊರೆ ಅಧಿಕಾರಿ ವ್ಯಾಪಾರಿ ಸೈನಿಕ ಹಾಗೂ ವಿದ್ವಾಂಸರ ಜೊತೆ ಬಂದಿತು; ಎರಡನೇ ಘಟ್ಟದಲ್ಲಿ ಬಹಮನಿ ಮತ್ತು ಅದಿಲ್‌ಶಾಹಿ ದೊರೆಗಳ ಕಾಲದಲ್ಲಿ ಉತ್ತರದಿಂದ ಕರ್ನಾಟಕಕ್ಕೆ ಬಂದಿತು” (ಕರ್ನಾಟಕದ ಮೊಹರಂ, ರಹಮತ್‌ ತರೀಕೆರೆ).

Advertisements

ಶಿಯಾ ಮುಸ್ಲಿಮ್‌ ದೊರೆಗಳ ಆಶ್ರಯದಲ್ಲಿ ಭಾರತದಾದ್ಯಂತ ಪಸರಿಸಿಕೊಂಡ ಮೊಹರಂ, ಬಹುತ್ವದ ಮಣ್ಣಾದ ಭಾರತದ ಜನಪದೀಯ ಸಂಸ್ಕೃತಿಯಲ್ಲಿ ಬೆರೆತುಬಿಟ್ಟಿತು. ಇಸ್ಲಾಮ್‌ ಏಕದೇವತಾರಾಧನೆಯ ಮತ್ತು ಮೂರ್ತಿಪೂಜೆಯನ್ನು ವಿರೋಧಿಸಿದರೆ, ಇಲ್ಲಿನ ಮೊಹರಂ ಹಬ್ಬದಲ್ಲಿ ಕರ್ಬಲಾ ಯುದ್ಧದಲ್ಲಿ ಪ್ರಾಣ ತೆತ್ತವರ ಸಂಕೇತವಾಗಿರುವ ಹಸ್ತ ಅಥವ ದೇವರು ಮಾರಮ್ಮ ಗುಡಿಗೂ ಹೋಗಬಲ್ಲದು, ಆಂಜನೇಯಸ್ವಾಮಿಯ ಗುಡಿಗೂ ಹೋಗಬಲ್ಲದು. ಶಿಯಾ ಮುಸ್ಲಿಮರು ಮಾಡುವ ದೇಹದಂಡನೆಯ ಆಚರಣೆಗಳಿಗಿಂತ ಹಿಂದೂ ಸಮುದಾಯದೊಡನೆ ಮಿಳಿತವಾಗಿರುವ ಬಾಬಯ್ಯ/ಅಲಾವಿ ಹಬ್ಬವು ಭಿನ್ನವಾಗಿದೆ. ಲಕ್ನೋ, ಹೈದರಾಬಾದ್‌ ಮತ್ತು ಕರ್ನಾಟಕದ ಸುಮಾರು 15 ಸಾವಿರ ಹಳ್ಳಿಗಳಲ್ಲಿ ಭಿನ್ನವಿಭಿನ್ನವಾಗಿ ಆಚರಿಸುವ ಮೊಹರಂ ಹಬ್ಬಕ್ಕೆ ಪ್ರಾದೇಶಿಕ ವೈಶಿಷ್ಟ್ಯತೆ, ರಾಜಕೀಯ ಮತ್ತು ಆರ್ಥಿಕ ಕಾರಣಗಳ ಹಿನ್ನಲೆಗಳಿವೆ. ಶೋಕಾಚಾರಣೆಯ ಜೊತೆಗೆ ದುಡಿವ ವರ್ಗಗಳ ಕಲಾ ಅಭಿವ್ಯಕ್ತಿಯಾಗಿ, ಬದುಕಿನ ಅನಿಶ್ಚಿತತೆಯ ಎದುರಿಸಲು ಮನೋಶಕ್ತಿಯನ್ನು ಗಳಿಸಿಕೊಳ್ಳುವ ತೆರನಾಗಿ ಹಬ್ಬವು ಬಹು ಆಯಾಮವನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿದೆ.

WhatsApp Image 2025 07 02 at 2.46.02 PM
ಬಾಬಯ್ಯ ಹಬ್ಬದ ಕೊನೆಯ ರಾತ್ರಿ ಹಸ್ತಗಳನ್ನು ಹಿಡಿದು ಕುಣಿಯುತ್ತಿರುವ ದೇವರ ಆವಾಹಿಸಿಕೊಂಡವರು

ದೇವರನ್ನು ಪುರುಷರೂಪಿಯಾಗಿ ಕಲ್ಪಿಸಿಕೊಂಡಿರುವ ಸೆಮಿಟಿಕ್‌ ಧರ್ಮಗಳಲ್ಲಿ ಒಂದಾದ ಇಸ್ಲಾಮಿನಲ್ಲಿ, ಸೂಫಿಪಂಥರು ಮತ್ತು ಮೊಹರಂ ಪರಂಪರೆಗಳಲ್ಲಿ ಮಾತ್ರ ಸ್ತ್ರೀದೈವೀಕರಣ ನಡೆದಿದೆ. ದೇವರಾಗಿರುವ ಈ ಎಲ್ಲರೂ ಚಾರಿತ್ರಿಕ ವ್ಯಕ್ತಿಗಳಾಗಿದ್ದು, ಕರ್ಬಲಾ ಹಾಡುಗಳಲ್ಲಿ ಇದರ ಪ್ರಸ್ತಾಪ ಬರುತ್ತದೆ (ಕರ್ನಾಟಕದ ಮೊಹರಂ, ರಹಮತ್‌ ತರೀಕೆರೆ) ಈ ಕುರಿತಾಗಿ ಅನೇಕ ಮೊಹರಂ ರಿವಾಯತ್‌ (ಹಾಡುಗಳು) ಜನಪದರಿಂದ ರಚಿಸಲ್ಪಟ್ಟಿವೆ. ಕನ್ನಡದ ಜನಪದರು ಕರ್ಬಲಾ ಯುದ್ಧದಲ್ಲಿ ಮಡಿದವರನ್ನು ತಮ್ಮವರೇ ಯಾರೋ ಸತ್ತಿದ್ದಾರೆನ್ನುವಷ್ಟರ ಮಟ್ಟಿಗೆ ಶೋಕ ವಿಹ್ವಲರಾಗಿ ಹಾಡಿನ ಪದಗಳನ್ನು ಕಟ್ಟಿದ್ದಾರೆ. ನನ್ನೂರಿನಲ್ಲಿ ಮೊಹರಂ ಆಚರಣೆಗಳು ಮಾತ್ರ ಉಳಿದಿದೆ, ಪದಗಳನ್ನು ಹಾಡುವುದಾಗಲಿ, ಹುಲಿವೇಷ ಅಥವ ಯಾವುದೇ ಬಗೆಯ ಕುಣಿತಗಳು ಪ್ರಚಲಿತದಲ್ಲಿಲ್ಲ.

ವಾಜರಹಳ್ಳಿಯಲ್ಲಿನ ಎಲ್ಲಾ ಜಾತಿ ಸಮುದಾಯಗಳು ಒಟ್ಟು ಸೇರುವ ಈ ಹಬ್ಬದಲ್ಲಿ ಒಂದೊಂದು ಸಮುದಾಯದ ಪಾತ್ರಗಳು ಒಂದೊಂದು ರೀತಿಯಲ್ಲಿದೆ. ಊಳಿಗಮಾನ್ಯ ಒಕ್ಕಲಿಗರ ಯಜಮಾನ್ಯವನ್ನು ಹಬ್ಬದಾದ್ಯಂತ ಇಲ್ಲಿ ಕಾಣಬಹುದು. ಹಾಗೇ ದುಡಿವ ದಲಿತ ಸಮುದಾಯಗಳು ತಮಟೆ ಬಾರಿಸುವುದನ್ನು ಊರ ‘ತೋಟಿ’ಯೂ ಸಾರುವುದನ್ನು ನೋಡಬಹುದು. ಅಗಸ ಸಮುದಾಯಕ್ಕೆ ಸೇರಿದ ವ್ಯಕ್ತಿ ಪಂಜನ್ನು ಹಿಡಿದು ದೇವರ ಮೆರವಣಿಗೆಯಲ್ಲಿ ಮುಂದೆ ಸಾಗುತ್ತಾರೆ. ಬಾಬಯ್ಯನ ಗುಡಿ ಅಥವ ಮಸೂತಿಯಲ್ಲಿ ಹಸ್ತಗಳನ್ನು ಏಕೂನ ಜೋಡಿಸಲಾಗಿರುತ್ತದೆ. ಅದರ ಮುಂದುಗಡೆ ಗುದ್ದಲಿ ಅಥವ ಕೊಂಡ ಹಾಕಲಾಗಿರುತ್ತದೆ. ತಲತಲಾಂತರದಿಂದ ಕೆಲವು ಒಕ್ಕಲಿಗ ಮನೆತನಗಳು ಮೈ ಮೇಲೆ ದೇವರನ್ನು ಆವಾಹಿಸಿಕೊಂಡು ಬಂದಿವೆ. ಮೈಮೇಲೆ ದೇವರನ್ನು ಆವಾಹಿಸಿಕೊಳ್ಳುವವರು ಊರ ಸುತ್ತೆಲ್ಲಾ ನರ್ತಿಸಿ, ಮನೆ, ಗುಡಿ-ದರ್ಗಾಗಳಿಗೆ ಭೇಟಿಕೊಟ್ಟು ಬರುವುದು ಪ್ರತೀತಿ. ಇವು ದಲಿತರ ಬೀದಿಯ ದೇವಸ್ಥಾನಗಳಿಗೂ ಭೇಟಿಕೊಡುತ್ತವೆ. ಒಟ್ಟು ಮೂರು ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ.

WhatsApp Image 2025 07 02 at 2.45.03 PM
ಬಾಬಯ್ಯ ಗುಡಿಯ ಎದುರಿನ ಕೊಂಡ ಮತ್ತು ಸಾಲಲ್ಲಿ ಹಸ್ತಗಳನ್ನು ಹಿಡಿದಿರುವುದು

ಮೊದಲನೆಯ ದಿನ ಗಂಧದ ಬಾಬಯ್ಯ, ಎರಡನೆಯ ದಿನ ಹುಚ್ಚು ಬಾಬಯ್ಯ ಮತ್ತು ಮೂರನೆಯ ದಿನ ದೊಡ್ಡ ಬಾಬಯ್ಯ; ಮೊಹರಂ ಕಡೆ ದಿನದಂದು ರಾತ್ರಿ ಊರಿನವರೆಲ್ಲ ಅದರಲ್ಲೂ ಮಹಿಳೆಯರೂ ಶರಬತ್ತನ್ನು ಪೂಜೆ ಸಾಮಾಗ್ರಿಯನ್ನು ಹೊತ್ತುಕೊಂಡು ಕೊಂಡದ ಬಳಿ ನೆರೆಯುತ್ತಾರೆ. ಅಲ್ಲಿ ದೇವರ ನರ್ತನ ಮತ್ತು ‘ಗಾಳಿ’ ಆದವರಿಗೆ ಬಿಂದಿಗೆ ನೀರು ಸುರಿದು, ಕೊಂಡ ತುಳಿಸುವ ಮತ್ತು ಅದರ ಸುತ್ತ ಉಪ್ಪು ಸುರಿಸುವ ಮುಂತಾದ ಅನೇಕ ಘಟ್ಟಗಳನ್ನು ವೀಕ್ಷಿಸಲು ಸೀಟು ಮನೆ-ಮಾಡಿ ಮನೆ ಎಂಬುದನ್ನು ನೋಡದೆ ಎಲ್ಲದರ ಮೇಲೆ ಹತ್ತಿಕೊಂಡು ಕೂತುಬಿಟ್ಟಿರುತ್ತಾರೆ. ಅಮ್ಮ ಬಾಬಯ್ಯ/ನಿಶಾನೆಯನ್ನು ಮತ್ತು ಹಸ್ತಗಳನ್ನು ಹಿಡಿದ ‘ದೇವರು ಬಂದವರ’ ಮುಂದೆ ತಮಟೆಯವರೂ ಮತ್ತು ಹಿಂದುಗಡೆ ಜನಜಂಗುಳಿಯೂ ಬೆಳಿಗ್ಗೆ, ರಾತ್ರಿಯನ್ನದೆ ಹೋಗುತ್ತಲೇ ಇರುತ್ತದೆ. ಇವರೊಂದಿಗೆ ಒಬ್ಬರು ಮುಸ್ಲಿಮ್‌ ಸಮುದಾಯ ವ್ಯಕ್ತಿಯೂ ಫಾಯ್ತಾ ಮಾಡಲು ನವಿಲುಗರಿ ಮತ್ತು ಸಾಂಬ್ರಾಣಿ ತಟ್ಟೆ ಹಿಡಿದುಕೊಂಡೇ ಇರುತ್ತಾರೆ. ಊರಿನ ಜೊತೆಗೆ ನಂಟಿರುವ ದೂರದ ಬಜಗೂರು ಮತ್ತು ಹೊಸಕೇರಳ್ಳಿಯ ಕೆಂಪಮ್ಮ ದೇವಿಯ ಫೋಟೋವನ್ನು ಹಸ್ತಗಳ ಸಾಲಿನಲ್ಲಿ ಇರಿಸಲಾಗಿರುತ್ತದೆ. “ಜನರ ಸಾಮಾಜಿಕ ಸಂಬಂಧಗಳಲ್ಲಿ ಸಂಭವಿಸುವ ಸಾಮರಸ್ಯವು ಅವರ ದೈವಗಳಲ್ಲಿ ವಿಸ್ತರಣೆ ಪಡೆಯುತ್ತದೆ. ಆಚರಣೆಗಳಲ್ಲಿರುವ ಈ ಸಾಮಾಜಿಕ, ಧಾರ್ಮಿಕ ಮಿಲನಗಳು, ರಿವಾಯತ್‌ನ ಪುರಾಣಸಂಕರ ಹಾಗೂ ಭಾಷಾಸಂಕರಗಳಲ್ಲಿ ಪ್ರತಿಫಲನಗೊಳ್ಳುತ್ತದೆ” (ಕರ್ನಾಟಕದ ಮೊಹರಂ, ರಹಮತ್‌ ತರೀಕೆರೆ)

ಎಲ್ಲಾ ಜಾತಿಸಮುದಾಯದ ಜನರು, ದೇವರು ಮನೆಯ ಎದುರಿಗೆ ಬಂದಾಗ ಕಡಲೆಪುರಿ, ಕಡಲೆಪಪ್ಪು ಸಕ್ಕರೆ ಮಿಶ್ರಿತವನ್ನು ಮತ್ತು ಗಂಧದ ದುಡಿಯನ್ನು ಅರ್ಪಿಸುತ್ತಾರೆ. ಮೆರವಣಿಗೆಯ ಮಧ್ಯದಲ್ಲಿ ಯಾವುದೋ ಮಹಿಳೆಯ ಮೇಲೆ ಕೆಂಪಮ್ಮ ಬಂದು, ಮುಸ್ಲಿಮ್‌ ದೇವರು ಬಂದವರನ್ನು ಅಣ್ಣನೆಂದೂ ಕರೆದು ತಬ್ಬಿಕೊಳ್ಳುವ ಸಂಗತಿಯೂ ಘಟಿಸುತ್ತದೆ. ಅಕ್ಕಪಕ್ಕದ ದೊಡ್ಡಕಲ್ಲಸಂದ್ರದಲ್ಲೂ ಇದೇ ಹಬ್ಬ ಆಚರಿಸಲಾಗುತ್ತದೆ. ಅಲ್ಲಿನವರು ಇಲ್ಲಿಗೆ ಎರಡನೇ ದಿನ ಬರುತ್ತಾರೆ, ಇಲ್ಲಿನವರು ಮೊಹರಂ ಬೆಳಗಿನ ಜಾವದಲ್ಲಿ ಅಲ್ಲಿಗೆ ಹೋಗಿ ಪರಸ್ಪರ ಕುಣಿದಾಡಿ ಹಿಂದಿರುಗುತ್ತಾರೆ. ಕೊನೆಯ ದಿನ ಕುರಿ ಮೇಕೆ ಕಡಿದು, ಎಲ್ಲರ ಮನೆಗಳಲ್ಲೂ ಮಾಂಸಾಹಾರದ ಭೋಜನ ಸಿದ್ಧವಾಗಿರುತ್ತದೆ.

ಹೀಗೆ ಜನರನ್ನು ಕಟ್ಟುನಿಟ್ಟಿನ ಧಾರ್ಮಿಕತೆಯಿಂದ ಹೊರತಂದು, ಭೇದ ಎಣಿಸದೆ ಬಂಧ ಬೆಸೆಯುವ ಮೊಹರಂ ಸಂಸ್ಕೃತಿಯಲ್ಲೂ ಹಳೆ ಕಾಲದ ಪಾಳೆಗಾರಿಕೆಯ ಯಜಮಾನ್ಯದ ಕುರುಹುಗಳನ್ನು ಕಾಣಬಹುದು. “ಇವೆಲ್ಲವೂ ಸಮುದಾಯಗಳ ಸಂಭ್ರಮದ ಗಳಿಗೆಯಲ್ಲಿ ಊರಿನ ಯಜಮಾನರು ಭಾಗವಹಿಸುವ ಉಪಕ್ರಮವಾಗಿರುವಂತೆ, ಊಳಿಗಮಾನ್ಯ ಧಣಿಗಳು ಮತ್ತು ರಾಜಕಾರಣಿಗಳು ತಮ್ಮ ಯಜಮಾನಿಕೆ ಸ್ಥಾಪಿಸುವ ಮತ್ತು ಜನಪ್ರಿಯರಾಗುವ ಅವಕಾಶಗಳೂ ಆಗಿವೆ. ಜನರ ʼಧಾರ್ಮಿಕʼ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮತ್ತು ಆರ್ಥಿಕ ನೆರವು ಕೊಡುವುದು ಶಕ್ತಿರಾಜಕಾರಣದಲ್ಲಿ ಬಂಡವಾಳ ಹೂಡಿಕೆಯ ಉಪಾಯವಾಗುತ್ತಿದ್ದು, ಮೊಹರಂ ಈ ಪ್ರಕ್ರಿಯೆಗೂ ಅವಕಾಶ ನೀಡಿದೆ” (ಕರ್ನಾಟಕದ ಮೊಹರಂ, ರಹಮತ್‌ ತರೀಕೆರೆ).

WhatsApp Image 2025 07 02 at 2.45.26 PM
ಮೊಹರಂ ಹಬ್ಬದ ಬೆಳಗಿನ ಜಾವ ವಾಜರಹಳ್ಳಿಯ ದೇವರು ಆವಾಹಿಸಿಕೊಂಡವರು ದೊಡ್ಡಕಲ್ಲಸಂದ್ರಕ್ಕೆ ಹೋಗಿ ಅಲ್ಲಿನವರನ್ನು ಆಲಿಂಗಿಸುತ್ತಿರುವುದು

ಧರ್ಮಗಳ ನಡುವೆ ಸಂಪೂರ್ಣ ಬೆರೆಯುವಂತಹ ಸಂಸ್ಕೃತಿಯ ಆಚಾರಕರು ಜಾತಿಯ ಸಂಕುಚಿತತೆಯನ್ನು ಹಾಗೆ ಉಳಿಸಿಕೊಂಡು ಹೋಗುತ್ತಿರುವುದು ವೈರುಧ್ಯವನ್ನು ಎತ್ತಿ ತೋರಿಸುತ್ತದೆ. ಸಕಲ ಕುಲದವರನ್ನು ದಬ್ಬದೆ ತಬ್ಬಿಕೊಂಡು ಹೋಗುವ ಬಸವ ಧರ್ಮವು ಜಾತಿಯ ಅಮಾನವೀಯ ವ್ಯವಸ್ಥೆಯಿಂದ ಹೊರಬರಲು ಸಹಾಯಕವಾಗುತ್ತದೆ. ಅದೇ ನಿಟ್ಟಿನಲ್ಲಿ ದೇಶದಾದ್ಯಂತ ಕೋಮುಗಳ ನಡುವೆ ಅನಾವಶ್ಯಕ ಗಲಭೆಯನ್ನು ಸೃಷ್ಟಿಸುವ ಹಿಂದುತ್ವ ಮತ್ತು ಇಸ್ಲಾಮತ್ವದ ರಾಜಕಾರಣವನ್ನು ಮೊಹರಂನಂತಹ ಸಂಸ್ಕೃತಿ ಕುಟುಕಿ ದ್ವೇಷದ ಬದಲಿಗೆ ಒಳಗೊಳ್ಳುವಿಕೆಯನ್ನು ಉದಾರತೆಯನ್ನು ಪರಸ್ಪರ ಪ್ರೀತಿಭಾವವನ್ನು ಸಹಬಾಳ್ವೆಯನ್ನು ಪ್ರೇರೇಪಿಸುತ್ತದೆ. ಇದರಿಂದ ಜನಸಮುದಾಯವು ಸಾಮರಸ್ಯದಿಂದ ಸಾರ್ವಜನಿಕ ಜೀವನ ನಡೆಸಲು ಸಾಧ್ಯವಾಗುತ್ತದೆ. ಎರಡೂ ಕಡೆಯ ಮಡಿವಂತರಿಗೆ ಸಂಕರಗೊಂಡ ಮೊಹರಂ ಹಿಡಿಸಲಿಕ್ಕಿಲ್ಲ. ಶ್ರೇಷ್ಠತೆಯ ವ್ಯಸನದಲ್ಲಿರುವ ಇವರು ಆಗಾಗ “ಇದು ನಮ್ಮದಲ್ಲ, ಇದು ನಮ್ಮಲಿಲ್ಲ” ಅಂತೆಲ್ಲ ಮತೀಯ ಸಂಕುಚಿತತೆ ಕಕ್ಕುವವರು. ಇವರು ಸಂಸ್ಕೃತಿಯ ಉದ್ದೇಶ ಏನೆಂಬುದನ್ನು ಮರೆಯುತ್ತಾರೆ; ಜನಮನಗಳನ್ನು ಹೊಡೆಯದೆ ಬೆಸೆಯುವುದೇ ಅಲ್ಲವೇ ಸಂಸ್ಕೃತಿ.

ಒಂದು ಕಾಲದ ಕೋಮು ಸಾಮರಸ್ಯಕ್ಕೆ ಹೆಸರಾಗಿದ್ದ ಮಂಗಳೂರಲ್ಲಿ ಇಂದು ರಕ್ತಪಾತಗಳು ಜರುಗುತ್ತಿವೆ. ಇದಕ್ಕೆ ಕಾರಣ ಮತಾಂಧರ, ಬಿಜೆಪಿ-ಕಾಂಗ್ರೆಸ್ಸಿನ ಕೋಮುಧ್ರುವೀಕರಣದ ಅವಕಾಶವಾದಿ ರಾಜಕಾರಣವಲ್ಲವೇ? ಕೊಲೆ ಹಿಂಸೆಯ ಬುದ್ದಿಹೀನ ಉಗ್ರ ಧಾರ್ಮಿಕತೆಗಿಂತ ಸಂಕರಗೊಂಡ ಹಿಂದೂ – ಮುಸ್ಲಿಮ್‌ ಸಂಪ್ರದಾಯವು ನೂರುಪಟ್ಟು ಮೇಲು ಮತ್ತು ಜೀವಪರವಾದದ್ದು. ಮೌಢ್ಯಗಳನ್ನು ಅಮಾನವೀಯ ಆಚರಣೆಗಳನ್ನು ಬಿಡಿಸಿಕೊಳ್ಳುತ್ತ ಬಹುಬಗೆಯ ಕಲೆಯ ಅಭಿವ್ಯಕ್ತಿಯಾದರೆ, ಮೊಹರಂ ಒಟ್ಟು ಜಗತ್ತಿಗೆ ಸಲ್ಲುವ ಸಂಸ್ಕೃತಿಯಾಗಬಹುದು. ಇವತ್ತಿನ ಯುವಶಕ್ತಿಯೂ ನಮ್ಮ ಜನಪದ ಸಂಸ್ಕೃತಿಯಲ್ಲಿರುವ ಒಳಿತು ಕೆಡಕುಗಳನ್ನು ಕಾಣುವ, ವಿಶ್ಲೇಷಿಸುವ ಮನೋಭಾವ ಬೆಳೆಸಿಕೊಂಡರೆ, ಇವತ್ತಿನ ಮುಖ್ಯವಾಹಿನಿಯ ವಿಭಜಕ ಸಂಕಥನಗಳನ್ನು ಕೆಡವಲು ಪ್ರೇರಣಾಶಕ್ತಿ ದೊರತಂತಾಗುತ್ತದೆ. ಹಾಗೆ ನಮ್ಮಲ್ಲಿ ಎಂತಹ ಬಹುತ್ವದ ಪರಂಪರೆ ಇದೆ ಎಂಬುದರ ಬಗ್ಗೆಯೂ ಜಾಗೃತಿ ಮೂಡುತ್ತದೆ, ಏನಂತೀರಾ?

ಚರಣ್‌ ಗೌಡ
ಚರಣ್‌ ಗೌಡ ಬಿ ಕೆ
+ posts

ಪತ್ರಿಕೋದ್ಯಮ ಪದವಿ ವಿದ್ಯಾರ್ಥಿ, ಬೆಂಗಳೂರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಚರಣ್‌ ಗೌಡ ಬಿ ಕೆ
ಚರಣ್‌ ಗೌಡ ಬಿ ಕೆ
ಪತ್ರಿಕೋದ್ಯಮ ಪದವಿ ವಿದ್ಯಾರ್ಥಿ, ಬೆಂಗಳೂರು

2 COMMENTS

  1. Nice information Charan, as a local boy from Vajarahalli area , I am also watching the festival from my childhood days we know few things about the festival moharam ( babayya habba) but after reading I got to know whole history of festival and purpose of celebration. Keep going , Great research work you done.

  2. ಮೊಹರಂ ಹಬ್ಬವು ಸಾಂಪ್ರದಾಯಿಕ ಅಥವಾ ಜನಪದ ಹಬ್ಬವಾಗಿರದೆ ಹಿಂದೂ ಮುಸ್ಲಿಮರ ನಡುವೆ ಐಕ್ಯತೆ ಮೂಡಿಸುವ ಹಬ್ಬವಾಗಿದೆ.ಮೊಹರಂ ಹಬ್ಬವನ್ನು ಕೇವಲ ಮುಸ್ಲಿಂ ಬಾಂಧವರಷ್ಟೆ ಅಲ್ಲದೆ ,ಮುಸ್ಲಿಂರಿಲ್ಲದ ಗ್ರಾಮಗಳಲ್ಲಿಯೂ ಆಚರಿಸುವುದರಿಂದ ಭಾವೈಕ್ಯತೆಯನ್ನು ಉಂಟು ಮಾಡುತ್ತದೆ..

    ನೀವು ಬರೆದಿರುವ ಲೇಖನದಿಂದ ಮೊಹರಂ ಕುರಿತಾದ ಇತಿಹಾಸದ ಮಾಹಿತಿಯನ್ನು ನನಗೆ ಅವಿಸ್ಮರಣೀಯ ಅನಿಸಿತು…👌💐🔥🙌❤️

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X