ಹೊಸ ಓದು | ಹುಟ್ಟುತ್ತಲೇ ಮಣ್ಣಿನ ಮಗಳಾದ ವಂಗಾರಿ ಮಾಥಾಯ್

Date:

Advertisements
ಕೆನ್ಯಾದ ಲೇಖಕಿ, ಸಾಮಾಜಿಕ ಅಭಿವೃದ್ಧಿಯ ಮುಂಚೂಣಿಯ ನಾಯಕಿ, ನೊಬೆಲ್ ಶಾಂತಿ ಪುರಸ್ಕೃತ, ಮುತ್ಸದ್ದಿ ವಂಗಾರಿ ಮಾಥಾಯ್ ಅವರ ವೈಯಕ್ತಿಕ ಬದುಕಿನ ಪಯಣದ ಕಥೆಯೇ ಈ ಕೃತಿಯ ಒಡಲಾಳ. ಇದರ ಹಿರಿಮೆ ಇರುವುದು ಒಬ್ಬ ಸಾಮಾನ್ಯ ಹುಡುಗಿ ಅಸಾಮಾನ್ಯ ಮಹಿಳೆಯಾಗಿ ಬೆಳೆಯುವಾಗ ಆಕೆಯ ದೇಶದ ಸಮಾಜ, ಜನಾಂಗ, ರಾಜಕಾರಣಗಳೆಲ್ಲ ಹೇಗೆ ಬದಲಾದವು, ಅದರಲ್ಲಿ ಆ ಮಹಿಳೆಯ ಪಾತ್ರವೇನು ಎಂದು ದಾಖಲಿಸುವುದರಲ್ಲಿ. ಅಂತಹ ವಂಗಾರಿಯ ಮಾಥಾಯ್‌ರನ್ನು ಕನ್ನಡಕ್ಕೆ ಕರೆತಂದಿದ್ದಾರೆ ಎಂ.ಆರ್. ಕಮಲ. ಆ ಕೃತಿಯ ಆಯ್ದ ಭಾಗ, ಓದುಗರಿಗಾಗಿ...

ನಾನು ಹುಟ್ಟಿದ್ದು ಆಗಿನ ಬ್ರಿಟಿಷ್ ಕೆನ್ಯಾದ ಸೆಂಟ್ರಲ್ ಹೈಲ್ಯಾಂಡ್ಸ್‌ನಲ್ಲಿರುವ ಇಹಿತೆ ಎಂಬ ಸಣ್ಣ ಹಳ್ಳಿಯಳ್ಳಿ, 1940ನೇ ಇಸವಿ ಏಪ್ರಿಲ್ ಒಂದರಂದು. ಆರು ಮಕ್ಕಳಲ್ಲಿ ಮೂರನೆಯವಳು. ಇಬ್ಬರು ಗಂಡು ಮಕ್ಕಳ ನಂತರ ಹುಟ್ಟಿದ ಮೊದಲ ಹೆಣ್ಣುಮಗಳು. ತಂದೆ, ತಾಯಿ, ಅಜ್ಜ ಅಜ್ಜಿಯರೆಲ್ಲ ಹುಟ್ಟಿ ಬೆಳೆದಿದ್ದು ಇದೇ ಪ್ರದೇಶದಲ್ಲಿಯೇ. ಪ್ರಾಂತೀಯ ರಾಜಧಾನಿಯಾಗಿದ್ದ ನ್ಯೇರಿಯ ಸಮೀಪದ ಅಬರ್ಡೇರ್ ಪರ್ವತ ಶ್ರೇಣಿಯ ಬುಡದಲ್ಲಿ. ಉತ್ತರಕ್ಕೆ ಆಕಾಶವನ್ನೇ ಚುಂಬಿಸುವಂತಿದ್ದ ‘ಮೌಂಟ್ ಕೆನ್ಯಾ’.

ದೀರ್ಘ ಮಳೆಗಾಲ ಶುರುವಾಗಿ ಎರಡು ವಾರಗಳಾಗಿತ್ತಂತೆ. ವಿದ್ಯುತ್ ಆಗಲಿ, ನೀರಿನ ಕೊಳಾಯಿಯಾಗಲಿ ಇಲ್ಲದ ಸಾಂಪ್ರದಾಯಿಕ ಮಣ್ಣಿನ ಗೋಡೆಗಳ ಮನೆಯಲ್ಲಿ ಅವ್ವ ನನ್ನನ್ನು ಹೆತ್ತಳು. ಸ್ಥಳೀಯ ಸೂಲಗಿತ್ತಿಯೊಬ್ಬಳ ಜೊತೆಗೆ ಮನೆಯ ಹೆಂಗಸರು, ಗೆಳತಿಯರು ಹೆರಿಗೆಗೆ ನೆರವಾಗಿದ್ದರು. ನನ್ನ ತಂದೆ-ತಾಯಿಗಳು ಕೃಷಿಕರು, ಕಿಕುಯು ಜನಾಂಗದ ಸದಸ್ಯರು. ಕೆನ್ಯಾದಲ್ಲಿದ್ದ ನಲವತ್ತೆರಡು ಜನಾಂಗೀಯ ಗುಂಪುಗಳಲ್ಲಿ ಕಿಕುಯು ಕೂಡ ಒಂದು. ಈ ಗುಂಪು ಆಗಲೂ ಮತ್ತು ಈಗಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಈ ಜನಾಂಗ ಮಣ್ಣಿನಿಂದಲೇ ಬದುಕನ್ನು ಕಂಡವರು. ಜೊತೆಗೆ ದನ- ಕರುಗಳು, ಆಡು, ಕುರಿಗಳ ಸಾಕಣೆ ಅವರಿಗೆ ಪ್ರಿಯವಾಗಿತ್ತು.

ನಾನು ಹುಟ್ಟಿದಾಗ ಇಹಿತೆಯ ಸುತ್ತಲಿನ ನೆಲ ಹಚ್ಚ ಹಸಿರಾಗಿತ್ತು, ಫಲವತ್ತಾಗಿತ್ತು. ಋತುಮಾನಗಳು ನಿಯಮಿತವಾಗಿ ಬಂದು ಹೋಗುತ್ತಿದ್ದವು. ಮಾರ್ಚ್ ತಿಂಗಳ ನಡುವೆ ಸುದೀರ್ಘ ಮಳೆಗಾಲ ಆರಂಭವಾಗುತ್ತದೆಂದು ಯಾರು ಬೇಕಾದರೂ ಸುಲಭವಾಗಿ ಊಹಿಸಿಬಿಡಬಹುದಿತ್ತು. ಜುಲೈ ತಿಂಗಳೆಂದರೆ ಹತ್ತು ಅಡಿಗಳಾಚೆ ಏನಿದೆಯೆಂದು ಕಾಣದಷ್ಟು ದಟ್ಟವಾದ ಮಂಜು ಕವಿದಿರುತ್ತಿತ್ತು. ಕೊರೆವ ಚಳಿಯ ಬೆಳಗಿನಲ್ಲಿ ಹಿಮ ಬಿದ್ದು ಹುಲ್ಲು ಬೆಳ್ಳಗಾಗಿರುತ್ತಿತ್ತು. ಕಿಕುಯುವಿನಲ್ಲಿ ಜುಲೈ ತಿಂಗಳನ್ನು ‘ಮ್ವೊರಿಯ ನಯೋನಿ’ ಎಂದು ಕರೆಯುತ್ತಿದ್ದರು. ಆ ಸಮಯದಲ್ಲಿ ಹಕ್ಕಿಗಳು ಹಿಮಗಟ್ಟಿ, ಮರದಿಂದ ಬಿದ್ದು, ಸತ್ತು ಕೊಳೆಯುತ್ತಿದ್ದವು.

Advertisements

ಬಳ್ಳಿ, ಪೊದೆ, ಜರಿ ಗಿಡ, ಮರಗಳು ಯಥೇಚ್ಛವಾಗಿದ್ದ ನೆಲದಲ್ಲಿ ನಾವು ವಾಸ ಮಾಡುತ್ತಿದ್ದೆವು. ಮಿತುಂದು, ಮಿಕೆಯು, ಮಿಗುಮೊ ಮರಗಳಲ್ಲಿ ಕೆಲವಂತೂ ಲೆಕ್ಕವಿರದಷ್ಟು ಬೆರ್ರಿ ಹಣ್ಣುಗಳನ್ನು ಬಿಡುತ್ತಿದ್ದವು. ಬೀಜಗಳು ದೊರೆಯುತ್ತಿದ್ದವು. ಮಳೆ ನಿಯಮಿತವಾಗಿ ಬೀಳುತ್ತಿತ್ತು. ಎಲ್ಲ ಕಡೆಯೂ ಕುಡಿಯಲು ಶುದ್ಧ ನೀರು ಸಿಗುತ್ತಿತ್ತು. ನೀರು ಹಾಯಿಸಬಹುದಾದ ವಿಶಾಲ ಹೊಲಗಳಲ್ಲಿ, ಮೆಕ್ಕೆ, ಬೀನ್ಸ್, ಗೋಧಿ, ತರಕಾರಿಗಳನ್ನು ಬೆಳೆಯುತ್ತಿದ್ದರು. ಹಸಿವೆಂದರೇನೆಂದು ಯಾರಿಗೂ ತಿಳಿದೇ ಇರಲಿಲ್ಲ. ಕಡು ಕಂದು, ಕೆಂಪು ಬಣ್ಣದಲ್ಲಿದ್ದ ಮಣ್ಣು ಫಲವತ್ತಾಗಿದ್ದು ಸದಾ ಹಸಿಯಾಗಿರುತ್ತಿತ್ತು.

ಮಗುವೊಂದು ಜನಾಂಗವನ್ನು ಸೇರುವಾಗ ಸುಂದರ, ಪ್ರಾಯೋಗಿಕ ಆಚರಣೆಯೊಂದನ್ನು ನಡೆಸುತ್ತಿದ್ದರು. ಇದು ಮಗುವಿಗೆ ತನ್ನ ಪೂರ್ವಜರ ನೆಲವನ್ನು, ಸಂರಕ್ಷಿಸಿಕೊಂಡು ಬಂದ ಉತ್ತಮ ವಿಚಾರಗಳನ್ನು ಪರಿಚಯಿಸುತ್ತಿತ್ತು. ಮಗು ಹುಟ್ಟಿದ ಕೆಲ ಸಮಯದಲ್ಲೇ ಹೆಂಗಸರು ತೋಟಕ್ಕೆ ಹೋಗಿ ಹಸಿರಾಗಿದ್ದರೂ, ಕೊಂಚ ಮಾಗಿರುವ ಬಾಳೆಹಣ್ಣಿನ ಗೊನೆಯನ್ನು ಕಿತ್ತು ತರುತ್ತಿದ್ದರು. ಹಣ್ಣಾದ ಬಾಳೆಗೊನೆಯನ್ನು ಹಕ್ಕಿಗಳು ತಿಂದಿದ್ದರೆ ಮತ್ತೊಂದನ್ನು ಹುಡುಕಬೇಕಿತ್ತು. ಈ ರೀತಿ ಪೂರ್ತಿ ಗೊನೆಯನ್ನು ಕೀಳುವುದೆಂದರೆ ಜನಾಂಗವು ಪರಿಪೂರ್ಣತೆ, ಇಡಿತನ, ಆರೋಗ್ಯ, ಗುಣಮಟ್ಟ ಇತ್ಯಾದಿಗಳಿಗೆ ಬೆಲೆ ಕೊಡುತ್ತಿತ್ತು ಎಂದರ್ಥ. ಹೊಸ ತಾಯಿಗೆ ಬಾಳೆಯ ಜೊತೆಗೆ, ಹೆಂಗಸರು ತಮ್ಮ ಮತ್ತು ಬಾಣಂತಿಯ ತೋಟದಿಂದ ಗೆಣಸನ್ನು ಮತ್ತು ಕೆನ್ನೀಲಿ ಬಣ್ಣದ ಕಬ್ಬುಗಳನ್ನು ಆರಿಸಿ ತರುತ್ತಿದ್ದರು. ಸಾಧಾರಣವಾದ ಕಬ್ಬನ್ನೆಂದೂ ತರುತ್ತಿರಲಿಲ್ಲ.

ಇದನ್ನು ಓದಿದ್ದೀರಾ?: ಜುಲೇಕಾ ಬೇಗಂಗೆ ರಾಜ್ಯೋತ್ಸವ ಪ್ರಶಸ್ತಿ | ಮಲ್ಲಮ್ಮ ಸರಸ್ವತಿಯಾಗಿ ಜುಲೇಕಾ ಆಗಿದ್ದೇ ರೋಚಕ!

ಮಗುವಿನ ನಿರೀಕ್ಷೆಯಲ್ಲಿರುತ್ತಿದ್ದ ತಾಯಿ ಕುರಿಯೊಂದನ್ನು ಮನೆಯೊಳಗೆ ಮಲಗಿಸಿಕೊಂಡು ಚೆನ್ನಾಗಿ ಕೊಬ್ಬಿಸಿರುತ್ತಿದ್ದಳು. ಮಗು ಹುಟ್ಟಿದ ಮೇಲೆ ಹೆಂಗಸರೆಲ್ಲ ಸಾಂಪ್ರದಾಯಿಕ ಆಚರಣೆಗಾಗಿ ಆಹಾರವನ್ನು ಸಂಗ್ರಹಿಸುವಾಗ, ಮಗುವಿನ ತಂದೆ ಆ ಕುರಿಯನ್ನು ಬಲಿ ಕೊಟ್ಟು, ಮಾಂಸವನ್ನು ಹುರಿಯುತ್ತಿದ್ದ. ಬಾಳೆ, ಹುರಿದ ಗೆಣಸು, ಮಾಂಸ, ಕಬ್ಬು ಎಲ್ಲವನ್ನು ಬಾಣಂತಿಗೆ ನೀಡಿದರೆ ಅವಳು ಕೊಂಚ ಕೊಂಚವೇ ತಿನ್ನುತ್ತಿದ್ದಳು. ಎಲ್ಲದರ ರಸವನ್ನು ಮಗುವಿನ ಪುಟ್ಟ ಬಾಯಿಗೆ ಹಾಕಲಾಗುತ್ತಿತ್ತು. ಎದೆ ಹಾಲನ್ನು ಕುಡಿಯುವ ಮುನ್ನ ಬಹುಶಃ ಇದೇ ನನ್ನ ಮೊದಲ ಆಹಾರವಾಗಿತ್ತೇನೋ! ನಾನು ಈ ಹಸಿರು ಬಾಳೆಯ, ಕೆನ್ನೀಲಿ ಬಣ್ಣದ ಕಬ್ಬಿನ, ಗೆಣಸಿನ, ಕೊಬ್ಬಿದ ಕುರಿಯ, ಸ್ಥಳೀಯ ಹಣ್ಣುಗಳ ರಸವನ್ನು ನುಂಗಿರಬಹುದು! ನಾನು ನನ್ನ ತಂದೆ ಮೂತ ಎನ್‌ಯೂಗಿ ಮತ್ತು ತಾಯಿ ವಂಜೀರು ಕಿಬಿಶೊ ಅವರ ಮಗಳು ಮಾತ್ರವಲ್ಲ, ಮಣ್ಣಿನ ಮಗಳು ಕೂಡ ಆಗಿದ್ದೆ. ನನ್ನ ತಾಯಿ ಲಿಡಿಯಾ ಎಂಬ ಕ್ರಿಶ್ಚಿಯನ್ ಹೆಸರಿನಿಂದಲೇ ಎಲ್ಲರಿಗೂ ಹೆಚ್ಚು ಪರಿಚಿತವಾಗಿದ್ದಳು. ನಾನು ಹುಟ್ಟಿದಾಗ ಕಿಕುಯು ಸಂಪ್ರದಾಯಕ್ಕೆ ಅನುಸಾರವಾಗಿ ತಂದೆಯ ತಾಯಿ ‘ವಂಗಾರಿ’ಯ ಹೆಸರನ್ನೇ ನನಗೂ ಇಟ್ಟರು. ವಂಗಾರಿ ಎನ್ನುವುದು ಹಳೆಯ ಕಿಕುಯು ಹೆಸರು.

ಕಿಕುಯು ಪುರಾಣದ ಪ್ರಕಾರ, ದೇವರು ಆದಿ ಸ್ವರೂಪರಾದ ಗಿಕುಯು ಮತ್ತು ಮುಂಬಿ ಎಂಬ ತಂದೆ-ತಾಯಿಯರನ್ನು ಸೃಷ್ಟಿಸಿ, ಕೆನ್ಯಾ ಪರ್ವತದ ಮೇಲೆ ನಿಂತು ಪಶ್ಚಿಮದ ಮೌಂಟ್ ಕೆನ್ಯಾದಿಂದ ಅಬರ್ಡೇರ್‌ವರೆಗೆ, ಎನ್‌ಗೊಂಗ್ ಬೆಟ್ಟದ ಮೇಲಿನಿಂದ ಕಿಲಿಮಾಂಬೊಗೊ ಮತ್ತು ಉತ್ತರದ ಗರ್ಬತುಲದವರೆಗೆ ಇರುವ ನೆಲವನ್ನು ವಾಸ ಮಾಡಲು ಅವರಿಗೆ ತೋರಿಸಿದನು. ಗಿಕುಯು ಮತ್ತು ಮುಂಬಿ ದಂಪತಿಗಳಿಗೆ ಗಂಡು ಮಕ್ಕಳಿರಲಿಲ್ಲ, ವಂಜೀರು, ವಂಬೂಯಿ, ವಂಗಾರಿ, ವಂಜೀಕು, ವಂಗೂಯಿ, ವಂಗೇಶಿ, ವಂಜೇರಿ, ನ್ಯಮ್-ಬುರ, ವೈರಿಮು ಮತ್ತು ವಮಾಯು ಎಂಬ ಹತ್ತು ಹೆಣ್ಣುಮಕ್ಕಳಿದ್ದರು. ಪುರಾಣದ ಪ್ರಕಾರ, ಈ ಹೆಣ್ಣು ಮಕ್ಕಳು ಮದುವೆಯ ವಯಸ್ಸಿಗೆ ಬಂದಾಗ ಗಿಕುಯು ಒಂದು ಪವಿತ್ರವಾದ ಅಂಜೂರದ ಮರದ ಕೆಳಗೆ ಕುಳಿತು, ಅಳಿಯಂದಿರನ್ನು ಕಳಿಸುವಂತೆ ದೇವರನ್ನು ಪ್ರಾರ್ಥಿಸಿದನು. ಒಂಬತ್ತು ಹೆಣ್ಣು ಮಕ್ಕಳನ್ನು ಕರೆದು, ಕಾಡಿಗೆ ಹೋಗಿ (ಹತ್ತನೆಯವಳು ಇನ್ನೂ ಚಿಕ್ಕ ಹುಡುಗಿಯಾಗಿದ್ದಳು.) ತನ್ನಷ್ಟೇ ಎತ್ತರದ ಕಡ್ಡಿಯೊಂದನ್ನು ಕತ್ತರಿಸಿಕೊಂಡು ಬರಲು ಸೂಚನೆ ನೀಡಬೇಕೆಂದು ದೇವರು ಅವನಿಗೆ ಹೇಳಿದನು. ಹೆಣ್ಣುಮಕ್ಕಳು ಹಿಂದಿರುಗಿದಾಗ ಗಿಕುಯು ಕಡ್ಡಿಗಳನ್ನು ತೆಗೆದುಕೊಂಡು ಮುಗುಮೊ ಮರದ ಕೆಳಗೆ ಬಲಿಪೀಠವನ್ನು ನಿರ್ಮಿಸಿ ಕುರಿಯನ್ನು ಬಲಿ ಕೊಟ್ಟನು. ಕುರಿಯ ದೇಹವನ್ನು ಬೆಂಕಿಯು ಆವರಿಸಿದಾಗ, ಒಂಬತ್ತು ಜನರು ಆ ಜ್ವಾಲೆಯಿಂದ ಹೊರ ಬಂದರು.

ಗಿಕುಯು ಅವರನ್ನು ಮನೆಗೆ ಕರೆದುಕೊಂಡು ಬಂದು, ಪ್ರತಿಯೊಬ್ಬ ಹೆಣ್ಣು ಮಗಳಿಗೂ ಅವಳಷ್ಟೇ ಎತ್ತರ ಇರುವವನೊಂದಿಗೆ ಮದುವೆ ಮಾಡಿದ. ಅವರೆಲ್ಲರೂ ಒಟ್ಟಾಗಿ ಹತ್ತು ಕುಲಗಳನ್ನು ಬೆಳೆಸಿದರು. ಇವರೇ ಕಿಕುಯು ಜನಾಂಗಕ್ಕೆ ಸೇರಿದವರು.(ಚಿಕ್ಕವಳಾದ ವಮಾಯುವಿಗೆ ಮದುವೆಯಾಗದಿದ್ದರೂ ಮಕ್ಕಳಾದವು.) ಪ್ರತಿಯೊಂದು ಕುಲವು ಕಲೆಗಾರಿಕೆ, ವೈದ್ಯ, ಭವಿಷ್ಯ ಹೇಳುವುದು ಮುಂತಾದ ನಿರ್ದಿಷ್ಟ ವ್ಯವಹಾರದ ವಿಶೇಷ ಗುಣಗಳನ್ನು ಹೊಂದಿದ್ದರು. ನನ್ನ ಕುಲ ಅಂಜೀರು, ಅದು ಮುಂದಾಳುತನಕ್ಕೆ ಹೆಸರುವಾಸಿಯಾಗಿತ್ತು. ಈ ಹೆಣ್ಣುಮಕ್ಕಳು ಕುಲವನ್ನು ಮಾತೃ ಪ್ರಧಾನವಾಗಿಸಿದ್ದರು. ಆದರೆ ನೆಲದ ವಾರಸುದಾರಿಕೆ, ಉತ್ತರಾಧಿಕಾರ, ಜಾನುವಾರು, ದೀರ್ಘಕಾಲಿಕ ಬೆಳೆಗಳು ಇತ್ಯಾದಿ ಸವಲತ್ತುಗಳೆಲ್ಲ ನಿಧಾನವಾಗಿ ಗಂಡಸರಿಗೆ ವರ್ಗಾವಣೆಯಾಯಿತು. ಈ ಹೆಂಗಸರು ತಮ್ಮ ಹಕ್ಕುಗಳನ್ನು ಮತ್ತು ಸವಲತ್ತುಗಳನ್ನು ಹೇಗೆ ಕಳೆದುಕೊಂಡರು ಎನ್ನುವುದನ್ನು ಯಾರೂ ವಿವರಿಸಿಲ್ಲ.

ಕಿಕುಯುಗಳಿಗೆ ಕಿರಿನ್ಯಾಗ(ಹೊಳೆವ ಜಾಗ) ಎಂದು ಹೆಸರು ಪಡೆದಿದ್ದ, ಆಫ್ರಿಕಾದ ಎರಡನೆಯ ಎತ್ತರದ ಪರ್ವತ ‘ಮೌಂಟ್ ಕೆನ್ಯಾ’ ಬಹಳ ಪವಿತ್ರವಾದ ಜಾಗವಾಗಿತ್ತು. ಹೇರಳವಾದ ಮಳೆ, ನದಿ, ತೊರೆಗಳು, ಶುದ್ಧ ಕುಡಿಯುವ ನೀರು ಮುಂತಾದ ಒಳಿತೆಲ್ಲವೂ ಬಂದಿದ್ದು ಅಲ್ಲಿಂದಲೇ. ಕಿಕುಯುಗಳು ಪ್ರಾರ್ಥಿಸುವಾಗ, ಸತ್ತವರನ್ನು ಹೂಳುವಾಗ, ಬಲಿ ಕೊಡುವಾಗ ಈ ಪರ್ವತಕ್ಕೆ ಮುಖ ಮಾಡುತ್ತಿದ್ದರು. ಮನೆ ಕಟ್ಟುವಾಗ ಬಾಗಿಲನ್ನು ಪರ್ವತ ಕಾಣುವಂತೆಯೇ ಇಡುತ್ತಿದ್ದರು. ಎಲ್ಲಿಯ ತನಕ ಅದು ನಿಂತಿರುವುದೋ ಅಲ್ಲಿಯ ತನಕ ದೇವರು ತಮ್ಮೊಂದಿಗೆ ಇರುತ್ತಾನೆಂದು, ಪರ್ವತದ ಹೊರತು ಮತ್ತೇನು ತಮಗೆ ಬೇಡವೆಂದು ನಂಬಿದ್ದರು. ಸಾಮಾನ್ಯವಾಗಿ ಮೌಂಟ್ ಕೆನ್ಯಾವನ್ನು ಮುಟ್ಟುತ್ತಿದ್ದ ಮೋಡಗಳು ಮಳೆ ತರುತ್ತಿದ್ದವು, ಎಷ್ಟು ದೀರ್ಘ ಕಾಲ ಮಳೆ ಬೀಳುತ್ತದೋ ಅಷ್ಟು ಆಹಾರ ಜನರಿಗೆ, ಜಾನುವಾರುಗಳಿಗೆ ದೊರೆತು ನೆಮ್ಮದಿ ನೆಲೆಸುತ್ತಿತ್ತು.

ವಂಗಾರಿ ಮಾಥಾಯ್

ವ್ಯಥೆಯ ವಿಷಯವೆಂದರೆ ಇಂತಹ ನಂಬಿಕೆಗಳು, ಸಂಪ್ರದಾಯಗಳು ಸತ್ತೇ ಹೋಗಿವೆ. ನಾನು ಹುಟ್ಟುವ ಹೊತ್ತಿಗೆ ಅವು ಅಳಿವಿನಂಚಿನಲ್ಲಿದ್ದವು. ಯೂರೋಪಿನ ಧರ್ಮ ಪ್ರಚಾರಕರು ಹತ್ತೊಂಬತ್ತನೇ ಶತಮಾನದಲ್ಲಿ ಈ ಸೆಂಟ್ರಲ್ ಹೈಲ್ಯಾಂಡ್ಸ್‌ಗೆ ಬಂದಾಗ, ‘ಮೌಂಟ್ ಕೆನ್ಯಾದಲ್ಲಿ ದೇವರು ನೆಲೆಸಿಲ್ಲ, ಅವನು ಮೋಡಗಳ ಮೇಲಿರುವ ಸ್ವರ್ಗದಲ್ಲಿದ್ದಾನೆ. ಭಾನುವಾರಗಳಂದು ಚರ್ಚಿನಲ್ಲಿ ಅವನನ್ನು ಪೂಜಿಸಬೇಕು’ ಎಂದು ಬೋಧಿಸಿದರು. ಈ ಪರಿಕಲ್ಪನೆ ಕಿಕುಯುಗಳಿಗೆ ತೀರಾ ಅಪರಿಚಿತವಾಗಿತ್ತು. ಆದರೂ ಬಹಳಷ್ಟು ಜನರು ಈ ಧರ್ಮ ಪ್ರಚಾರಕರ ವಿಚಾರಗಳನ್ನು ಒಪ್ಪಿಕೊಂಡು ಕೇವಲ ಎರಡು ತಲೆಮಾರುಗಳಲ್ಲಿ ತಮ್ಮ ನಂಬಿಕೆಗಳ ಮೇಲಿದ್ದ ಗೌರವವನ್ನು ಕಳೆದುಕೊಂಡರು. ವ್ಯಾಪಾರಿಗಳು, ಆಡಳಿತಗಾರರು ಈ ಧರ್ಮ ಪ್ರಚಾರಕರನ್ನು ಹಿಂಬಾಲಿಸಿ ಬಂದು ಕೆನ್ಯಾದ ನೈಸರ್ಗಿಕ ಸಂಪನ್ಮೂಲಗಳನ್ನು ಹಾಳು ಮಾಡುವುದು ಹೇಗೆಂದು ಜನರಿಗೆ ಪರಿಚಯಿಸಿದರು. ಮರಗಳನ್ನು ಕತ್ತರಿಸುವುದು, ಸ್ಥಳೀಯ ಕಾಡುಗಳನ್ನು ಬೋಳಾಗಿಸುವುದು, ಆಮದು ಮಾಡಿಕೊಂಡ ಮರಗಳನ್ನು ನೆಡುವುದು, ಕಾಡು ಮೃಗಗಳ ಬೇಟೆಯಾಡುವುದು, ವಾಣಿಜ್ಯ ಕೃಷಿಯನ್ನು ವಿಸ್ತರಿಸುವುದು ಇತ್ಯಾದಿ ಇತ್ಯಾದಿ. ರಮಣೀಯವಾಗಿದ್ದ ನೆಲ ತನ್ನ ಪಾವಿತ್ರ್ಯವನ್ನು ಕಳೆದುಕೊಂಡಿತು. ಸ್ಥಳೀಯ ಜನರು ಈ ನಾಶವನ್ನು ಒಪ್ಪಿಕೊಳ್ಳುವಷ್ಟು ಅಸೂಕ್ಷ್ಮವಾದರು.

(ವಂಗಾರಿ ಮಾಥಾಯ್ ‘ಮತ್ತೆ ಮೇಲೇಳುತ್ತೇನೆ’ ಕೃತಿಗಾಗಿ ಸಂಪರ್ಕ: 94486 76770)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X