ನಮ್ಮ ಜೀವ ನಮಗೆಷ್ಟು ಪ್ರಾಮುಖ್ಯವೋ ಹಾಗೆಯೇ ಈ ಪರಿಸರಕ್ಕೆ, ಅರಣ್ಯಕ್ಕೆ ವನ್ಯ ಜೀವಿಗಳು ಮುಖ್ಯ. ಪರಿಸರ, ವನ್ಯಜೀವಿಗಳ ಉಳಿಸೋಣ, ನಾವು ಜೀವಿಸೋಣ.
ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿದೆ. ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದು, ಕರ್ನಾಟಕ ಸರ್ಕಾರ ಈ ಬಗ್ಗೆ ಚಿಂತನೆ ನಡೆಸುತ್ತಿದೆ. ಇವೆಲ್ಲವೂ ಸುದ್ದಿಯಾಗುತ್ತಿದ್ದಂತೆ ಉಭಯ ರಾಜ್ಯಗಳ ಪರಿಸರವಾದಿಗಳು, ವನ್ಯಜೀವಿಗಳು ಓಡಾಡುವ ಈ ಪ್ರದೇಶದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡಬೇಡಿ ಎಂದು ಸರ್ಕಾರಕ್ಕೆ ಒತ್ತಡ ಹೇರಲು ಸಜ್ಜಾಗಿದ್ದಾರೆ.
ಕಾಂಗ್ರೆಸ್‌ನ ನಾಯಕಿಯೂ ಆಗಿರುವ ವಯನಾಡು ಸಂಸದೆ ಪ್ರಿಯಾಂಕಾ ಮಾಡುತ್ತಿರುವ ಮನವಿಗೆ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಮಣಿಯಬಹುದು ಎಂಬುದು ಈಗ ಪರಿಸರವಾದಿಗಳ, ರೈತ ಸಂಘಟನೆಗಳ ಆತಂಕ. ಅದಕ್ಕಾಗಿ ರಾತ್ರಿ ವಾಹನ ಸಂಚಾರ ನಿಷೇಧವನ್ನು ಮುಂದುವರಿಸಿ ಬಂಡೀಪುರದ ವನ್ಯ ಜೀವಿಗಳ ಉಳಿಸಬೇಕೆಂಬ ಅಭಿಯಾನ, ಹೋರಾಟಕ್ಕೆ ಮುಂದಾಗಿದ್ದಾರೆ.
ಇದನ್ನು ಓದಿದ್ದೀರಾ? ಚಾಮರಾಜನಗರ | ರಕ್ತಚಂದನ ಅಕ್ರಮ ಸಾಗಾಟ; ಐವರ ಬಂಧನ
ಪರಿಸರವಾದಿಗಳ ಕಳವಳವನ್ನು ಪರಿಸರ ಪ್ರೇಮಿಗಳಾದ ನಾವು ಉಪೇಕ್ಷಿಸಲಾಗದು. ಮನೆ, ತೋಟಕ್ಕೆ ಪ್ರಾಣಿ ನುಗ್ಗಿದರೆ ಮಾನವರಾದ ನಮಗೆಷ್ಟು ಸಮಸ್ಯೆಯಾಗುತ್ತದೆಯೋ, ಹಾಗೆಯೇ ವನ್ಯಜೀವಿಗಳ ಆವಾಸ ಸ್ಥಾನಕ್ಕೆ ಮನುಷ್ಯರು ತೆರಳುವುದರಿಂದ ತಮ್ಮ ಮೇಲೆ ದಾಳಿ ನಡೆದಂತೆ ಆ ಜೀವಿಗಳಿಗೆ ಭಾಸವಾಗುತ್ತದೆ. ಮನುಷ್ಯ-ಪ್ರಾಣಿ ಸಂಘರ್ಷದಲ್ಲಿ ಮಾನವನಿಗೂ, ಪ್ರಾಣಿ-ಪಕ್ಷಿ ಸಂಕುಲಕ್ಕೂ ಹಾನಿ.
ಬಂಡೀಪುರವೆಂಬ ಸುಂದರ ಲೋಕ
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ 200ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಮತ್ತು ಅಷ್ಟೇ ಸಂಖ್ಯೆಯ ಸಸ್ತನಿಗಳು ಮತ್ತು ಸರೀಸೃಪಗಳಿವೆ. ಇದು ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿದೆ. ಒಂದು ಕಾಲದಲ್ಲಿ ಮೈಸೂರು ಸಾಮ್ರಾಜ್ಯದ ಮಹಾರಾಜರು ಬೇಟೆಯಾಡುವ ಖಾಸಗಿ ಮೀಸಲು ಪ್ರದೇಶವಾಗಿತ್ತು. ಆದರೆ 1973ರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಎಂದು ಗುರುತಿಸಲಾಗಿದೆ.
ದೇಶದ ಅತ್ಯಂತ ಪ್ರಸಿದ್ಧ ಹುಲಿ ಮೀಸಲು ಅರಣ್ಯಗಳಲ್ಲಿ ಬಂಡೀಪುರವೂ ಒಂದಾಗಿದೆ. ‘ರಾಯಲ್ ಬೆಂಗಾಲ್ ಟೈಗರ್’ ಎಂಬ ಭಾರತೀಯ ಹುಲಿ ಇಲ್ಲಿ ಹೆಚ್ಚಾಗಿ ಕಾಣಬಹುದು. ಆನೆಗಳು, ಚಿರತೆಗಳು, ಕರಡಿಗಳಿವೆ. ಇನ್ನೂ ಕೆಲವು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಿವೆ. ಬಂಡೀಪುರದಲ್ಲಿ ಪ್ರಾಣಿ ಸಂಕುಲದಂತೆಯೇ ಸಸ್ಯವರ್ಗವೂ ಶ್ರೀಮಂತವಾಗಿದೆ. ಈ ದಟ್ಟ ಕಾಡಿನಲ್ಲಿ ತೇಗ, ಶ್ರೀಗಂಧ, ಭಾರತೀಯ ಕಿನೋ ಮರ ಮತ್ತು ದೈತ್ಯ ಬಿದಿರಿನಂತಹ ಹಲವು ಮರಗಳನ್ನು ಕಾಣಬಹುದು.
ಇದನ್ನು ಓದಿದ್ದೀರಾ? ಕಲಬುರಗಿ | ಪರಿಸರ ಸಂರಕ್ಷಣೆ ಎಲ್ಲರ ಹೊಣೆ; ಸಂಜಯ ಪಾಟೀಲ
ಆದರೆ ಮನುಷ್ಯರ ದಾಳಿಗೆ ಇವೆಲ್ಲವೂ ನಾಶವಾಗುತ್ತಿವೆ. ಇನ್ನೆರಡು ಮೂರು ವರ್ಷಗಳಲ್ಲೇ ಅಳಿವಿನಂಚಿನಲ್ಲಿರುವ ಅದೆಷ್ಟೋ ಪ್ರಾಣಿ, ಪಕ್ಷಿ, ಸಸ್ಯ ಸಂಕುಲ ಸಂಪೂರ್ಣವಾಗಿ ಮರೆಯಾಗುವ ಸಾಧ್ಯತೆಯಿದೆ. ರಾತ್ರಿ ವಾಹನ ಸಂಚಾರಕ್ಕೆ ಅವಕಾಶವಿದ್ದ ವೇಳೆ ಅದೆಷ್ಟೋ ಪ್ರಾಣಿಗಳು ಬಲಿಯಾಗಿವೆ. ಇದೀಗ ಮತ್ತೆ ಜನರ ಲಾಭಕ್ಕಾಗಿ ಅದೇ ತಪ್ಪೆಸಗಿದರೆ ಹಲವು ಅಪರೂಪದ ಜೀವಿಗಳು ಮರೆಯಾಗಬಹುದು.
ಬೆಂಬಲ, ವಿರೋಧದ ನಡುವೆ ರಾಜಕೀಯ ನೋಟ
ಬಂಡೀಪುರದಲ್ಲಿ ಮತ್ತೆ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬೇಕೆಂಬುದು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿಯವರ ಆಗ್ರಹ. ತನ್ನ ಲೋಕಸಭೆ ಉಪಚುನಾವಣೆಯ ಪ್ರಚಾರದ ವೇಳೆ ಪ್ರಿಯಾಂಕಾ ಮುಂದೆ ವಯನಾಡು ಕ್ಷೇತ್ರದ ಜನರಿಟ್ಟ ಪ್ರಮುಖ ಬೇಡಿಕೆಗಳಲ್ಲಿ ಇದೂ ಒಂದು. ಪ್ರಿಯಾಂಕಾ, ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಜನರಿಗೆ ನೀಡಿದ ಭರವಸೆಯೂ ಅದುವೇ. ವಯನಾಡು ಉಪ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಪರ ಪ್ರಚಾರಕ್ಕೆ ತೆರಳಿದ್ದ ಡಿಕೆಶಿ, ಈ ಭಾಗದ ಜನರ ಮಹತ್ವದ ಬೇಡಿಕೆ ಬಗ್ಗೆ ತಾನೇ ಪ್ರಸ್ತಾಪಿಸಿ, ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದರು.
ಎಲ್ಲೇ ಹೋದರೂ ಸ್ಥಳೀಯ ಜನರ ಭಾವನೆಯನ್ನು ತಿಳಿದು, ತಳಮಟ್ಟಕ್ಕಿಳಿದು ಕೆಲಸ ಮಾಡುವವರು ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕ. ಇದರಲ್ಲಿ ರಾಜಕೀಯ ಲಾಭವಿದ್ದರೂ ಕೂಡಾ ಜನರು ನೋಡುವುದು ತಮಗಾಗುವ ಸಹಾಯವನ್ನು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿರುವಾಗ ಗಾಂಧಿ ಕುಟುಂಬದ ಈ ಪ್ರಬಲ ಕಾಂಗ್ರೆಸ್ ನಾಯಕರು ಹೇಳಿದ್ದು ನಡೆಯಬಹುದೆಂಬುದು ಸ್ಥಳೀಯರ ನಂಬಿಕೆ. ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಪ್ರಿಯಾಂಕಾ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಡ ಹಾಕಿ ಮಣಿಸಬಹುದು ಎಂಬುದು ವಯನಾಡು ಜನರಲ್ಲಿರುವ ಭರವಸೆ. ಪರಿಸರವಾದಿಗಳ, ರೈತರ ಆತಂಕ.
ಇದನ್ನು ಓದಿದ್ದೀರಾ? ಚಾಮರಾಜನಗರ | ಬಂಡೀಪುರ ಕಾಡಿನಲ್ಲಿ ಗುಂಡಿನ ಚಕಮಕಿ; ಬೇಟೆಗಾರನ ಸಾವು
ಸುಲ್ತಾನ್ ಬತ್ತೇರಿ ಮತ್ತು ಮಾನಂತವಾಡಿ ಎಂಬ ಕೇರಳದ ಎರಡು ಗಡಿಗಳಿವೆ. ಅವೆರಡೂ ಕರ್ನಾಟಕದ ಬಂಡೀಪುರ ಮತ್ತು ಕಾಕನಕೋಟೆ ಅರಣ್ಯಕ್ಕೆ ಸಂಪರ್ಕ ಹೊಂದಿದೆ. ಈ ಎರಡು ಅರಣ್ಯ ಮಾರ್ಗದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಈ ಮಾರ್ಗದಲ್ಲಿ ರಾತ್ರಿ ಸಂಚಾರಕ್ಕೂ ಅವಕಾಶ ನೀಡಬೇಕು ಎಂದು ಹಲವು ಬಾರಿ ಸ್ಥಳೀಯರು ಧರಣಿ, ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅಂದಿನ ವಯನಾಡು ಸಂಸದ ರಾಹುಲ್ ಗಾಂಧಿ ಅಸಹಾಯಕರಾಗಿದ್ದರು. ಆದರೆ ಈಗ ಕಾಂಗ್ರೆಸ್ ಸರ್ಕಾರವಿರುವುದರಿಂದ ಗಾಂಧಿ ಸಹೋದರ- ಸಹೋದರಿಯ ಮೇಲೆ ಸ್ಥಳೀಯರ ಒತ್ತಡ ಹೆಚ್ಚಾಗಿದೆ.
ಪ್ರಾಣಿಸಂಕುಲ ನಾಶದ ಆತಂಕ
ಕರ್ನಾಟಕ ಸರ್ಕಾರವು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್) 67E (ಕರ್ನಾಟಕ-ತಮಿಳುನಾಡು) ಹಾಗೂ ಎನ್‌ಎಚ್ 212 (ಕರ್ನಾಟಕ-ಕೇರಳ) ರಲ್ಲಿ ರಾತ್ರಿ ವಾಹನ ಸಂಚಾರವನ್ನು ಸುಮಾರು ಹತ್ತು ವರ್ಷದ ಹಿಂದೆಯೇ ನಿಷೇಧಿಸಿದೆ. ಸರ್ಕಾರದ ಈ ನಿರ್ಧಾರವನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್ ಕೂಡಾ ಎತ್ತಿಹಿಡಿದಿದೆ. ಅದರಂತೆ ರಾತ್ರಿ 9ರಿಂದ ಬೆಳಿಗ್ಗೆ ಆರು ಗಂಟೆಯವರೆಗೆ ಇವೆರಡೂ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ.
ರಾತ್ರಿ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ. ಬಂಡೀಪುರದ ಬದಲಾಗಿ ಮೈಸೂರಿನಿಂದ ಹುಣಸೂರು, ಗೋಣಿಕೊಪ್ಪಲ್, ಕುಟ್ಟ, ತೋಲ್ಪೆಟ್ಟಿ, ಮಾನಂತವಾಡಿ ಮಾರ್ಗವಾಗಿ ವಯನಾಡು ತಲುಪಬಹುದು. ಆದರೆ, ಈ ಮಾರ್ಗದಲ್ಲಿ ಎನ್‌ಹೆಚ್ 766ಕ್ಕಿಂತ 35–40ಕಿ.ಮೀ ಅಧಿಕ ಸಂಚರಿಸಬೇಕಿದೆ.
ಈ ಎರಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲಲ್ಲಿ ಸುಮಾರು 7000 ವಾಹನಗಳು ಸಂಚರಿಸುತ್ತವೆ. ರಾತ್ರಿ ಸಂಚಾರ ನಿಷೇಧವನ್ನು ತೆಗೆದುಹಾಕಿದರೆ, ನಾವು ಊಹಿಸಲು ಸಾಧ್ಯವಾಗದಷ್ಟು ವನ್ಯ ಜೀವಿಗಳು ಪ್ರಾಣ ಕಳೆದುಕೊಳ್ಳಬಹುದು ಎನ್ನುತ್ತಾರೆ ಅರಣ್ಯಾಧಿಕಾರಿಗಳು. ಪರಿಸರವಾದಿಗಳು ವನ್ಯ ಜೀವಿಗಳಿಗೆ ಸಂಬಂಧಿಸಿದ ಸಮೀಕ್ಷೆಯನ್ನು ಉಲ್ಲೇಖಿಸಿ ಹೇಳುವಂತೆ ಬಂಡೀಪುರ ಮತ್ತು ನಾಗರಹೊಳೆಯಲ್ಲಿ 2023ರಲ್ಲಿ ಹುಲಿಗಳ ಸಂಖ್ಯೆ 408 ಆಗಿತ್ತು. ಆದರೆ 2024ರ ವೇಳೆಗೆ 393ಕ್ಕೆ ಕುಸಿದಿದೆ. ಹುಲಿಗಳ ಸಂರಕ್ಷಣೆ ಬಗ್ಗೆ ಎಚ್ಚರ ವಹಿಸುವುದು ಮುಖ್ಯ ಎನ್ನುತ್ತಾರೆ ತಜ್ಞರು.
ಇದನ್ನು ಓದಿದ್ದೀರಾ? ಬಂಡೀಪುರ ಅರಣ್ಯ ಇಲಾಖೆಯಲ್ಲಿ ಮುಂಚೂಣಿ ಸಿಬ್ಬಂದಿ ದಿನಾಚರಣೆ
“ಮನುಷ್ಯರು ಈ ಮಾರ್ಗದಲ್ಲಿ ಹಗಲು ಸಂಚರಿಸುತ್ತಾರೆ. ರಾತ್ರಿಯಾದರೂ ಪ್ರಾಣಿಗಳು ಸಂಚರಿಸಲು ಅವಕಾಶ ನೀಡಿ” ಎಂಬುದು ಪರಿಸರವಾದಿಗಳ ಮನವಿ. ವನ್ಯಜೀವಿಗಳನ್ನು ಉಳಿಸಬೇಕು ಮತ್ತು ಅವುಗಳಿಗೆ ತೊಂದರೆ ಕೊಡಬಾರದು ಎಂಬುದು ಕರ್ನಾಟಕ, ವಯನಾಡು ಪರಿಸರವಾದಿಗಳ ನಿಲುವು. ರಾತ್ರಿ ವಾಹನ ಸಂಚರಿಸಿದರೆ ಅದರ ಸದ್ದಿಗೆ ಪ್ರಾಣಿಗಳು ಭಯಗೊಂಡು ತೋಟ, ಗದ್ದೆಗಳಿಗೆ ನುಗ್ಗಬಹುದು. ಇದು ಮನುಷ್ಯ, ಪ್ರಾಣಿ ಸಂಘರ್ಷಕ್ಕೆ ಕಾರಣವಾಗಬಹುದು ಎಂಬುದು ರೈತರ ವಾದ. ಇವೆಲ್ಲವುದರ ನಡುವೆ ಸಮೀಪದ ಮಾರ್ಗವಿರುವಾಗ ನಾವು ದೂರದ ರಸ್ತೆಯಲ್ಲಿ ಸಾಗುವ ಹೊರೆ ಹಾಕಬೇಡಿ ಎಂಬುದು ಕೇರಳ-ಕರ್ನಾಟಕ ಮಾರ್ಗದಲ್ಲಿ ಸಾಗುವ ಪ್ರಯಾಣಿಕರ ಬೇಡಿಕೆ. ಎಲ್ಲವೂ ತಮ್ಮ ನೆಲೆಯಲ್ಲಿ ನಿಂತು ನೋಡಿದಾಗ ಸರಿ. ಆದರೆ ಇಲ್ಲಿ ನಮ್ಮ ಮುಂದಿನ ಪೀಳಿಗೆಯ ಭವಿಷ್ಯ, ಪ್ರಾಣಿ ಸಂಕುಲದ ಉಳಿವು ಪ್ರಾಧಾನ್ಯ ಪಡೆಯುತ್ತದೆ.
ಮಾನವ ಮತ್ತು ವನ್ಯಜೀವಿಗಳ ಸಂಘರ್ಷ
ಜೀವನದಲ್ಲಿ ಸುಖ ದುಃಖಗಳ ಸಮತೋಲನ ಎಷ್ಟು ಪ್ರಧಾನವೋ ಹಾಗೆಯೇ ಪರಿಸರ ಸಮತೋಲನಕ್ಕಾಗಿ ಮನುಷ್ಯರ ಕೊಡುಗೆಯೂ ಅಷ್ಟೇ ಮುಖ್ಯ. ಗಾಳಿಯಲ್ಲಿ ಆಮ್ಲಜನಕ, ಇಂಗಾಲದ ಡೈಆಕ್ಸೈಡ್ ಇತರೆ ಅಂಶಗಳು ಸರಿಸಮವಾಗಿದ್ದರಷ್ಟೇ ಮಾನವ ತೃಪ್ತಿಯಿಂದ ಉಸಿರಾಡಬಲ್ಲ. ಆದರೆ ಇದೀಗ ವಾಯುಮಾಲಿನ್ಯ ನಮ್ಮನ್ನು ಕಾಡುತ್ತಿದೆ. ದೆಹಲಿಯಂತಹ ಸ್ಥಿತಿಗೆ ನಮ್ಮ ಕರ್ನಾಟಕವೂ ವೇಗವಾಗಿ ಜಾರುತ್ತಿದೆ. ಇವೆಲ್ಲವುದರಿಂದ ನಮಗಾಗುವ ಆರೋಗ್ಯ ಸಮಸ್ಯೆಯನ್ನು ನಾವು ಕೆಲವೊಮ್ಮೆಯಾದರೂ ಗಂಭೀರವಾಗಿ ಪರಿಗಣಿಸಬಲ್ಲೆವು, ಪರಿಗಣಿಸುತ್ತಿದ್ದೇವೆ.
ಆದರೆ ನಮ್ಮ ಮತ್ತು ಪರಿಸರದ ನಡುವಿನ ಸಮತೋಲನದ ಪ್ರಾಮುಖ್ಯತೆ ನಮಗೆ ಅತಿ ಸರಳವಾಗಿ ಅರಿವಿಗೆ ಬಾರದು. ಪ್ರಾಣಿ ಸಂಕುಲದ ನಾಶ ಮಾನವನಿಗೆ ಜುಜುಬಿ ವಿಷಯ. ಅದುವೇ ಪ್ರಾಣಿ ದಾಳಿಗೆ ಮಾನವ ಬಲಿಯಾದರೆ, ಅದೂ ತನ್ನ ಪ್ರೀತಿಪಾತ್ರರು ಪ್ರಾಣ ಕಳೆದುಕೊಂಡರೆ ಅದು ಅಗ್ರಗಣ್ಯ ವಿಚಾರ. ನಮ್ಮ ಜೀವ ನಮಗೆಷ್ಟು ಪ್ರಾಮುಖ್ಯವೋ ಹಾಗೆಯೇ ಈ ಪರಿಸರಕ್ಕೆ, ಅರಣ್ಯಕ್ಕೆ ವನ್ಯ ಜೀವಿಗಳು ಮುಖ್ಯ. ಪರಿಸರ, ವನ್ಯಜೀವಿಗಳ ಉಳಿಸೋಣ, ನಾವು ಜೀವಿಸೋಣ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.