ಭಾರತದಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿ ಜಾರಿಯಲ್ಲಿದ್ದಾಗ, ರೈತರು ತಮ್ಮ ಹೊಲಗಳ ಬದುವಿನಲ್ಲಿ ಹೊಂಗೆ, ಬೇವು, ಹಲಸು, ಹುಣಸೆ, ಸೀತಾಫಲ, ಸೀಬೆ ಮರ ಇತ್ಯಾದಿಗಳನ್ನು ಕಡ್ಡಾಯವಾಗಿ ಬೆಳೆಸುತ್ತಿದ್ದರು. ಹೀಗೆ ಮಾಡುವುದರಿಂದ ರೈತರಿಗೆ ಹಲವು ವಿಧದ ಲಾಭವಿತ್ತು. ಆದರೆ ಈಗ ರೈತರ ಕಣ್ಣಲ್ಲಿ ಕಾಂಚಾಣ ಕುಣಿಯುತ್ತಿದೆ. ವಾಣಿಜ್ಯ ಬೆಳೆಗಳು ಬೆರಗುಟ್ಟಿಸುತ್ತಿವೆ. ಭೂಮಿಯನ್ನು, ರೈತನನ್ನು ಬರಿದು ಮಾಡುತ್ತಿವೆ. ಈ ಬಗ್ಗೆ ಯೋಚಿಸುವ ಕಾಲ ಕೂಡಿ ಬಂದಿದೆ…
ಇತ್ತೀಚೆಗೆ ಜಾತ್ರೆಗೆಂದು ನನ್ನ ಪತ್ನಿಯ ಊರಾದ ಜಾವಗಲ್ ಗೆ ತೆರಳಿದ್ದೆ. ಮನೆಗೆ ದಿನಸಿ, ತರಕಾರಿಯನ್ನು ನಾನೇ ತರುವ ಅಭ್ಯಾಸವಿರುವುದರಿಂದ ಮರುದಿನ ಬೆಳಗ್ಗೆ ಮನೆಯ ಸಮೀಪವೇ ಇರುವ ತರಕಾರಿ ಮಾರುಕಟ್ಟೆಗೆ ತೆರಳಿದೆ. ಅಲ್ಲಿ ಟೊಮೆಟೊ, ಹಸಿ ಮೆಣಸಿನ ಕಾಯಿ ಹಾಗೂ ಮೂಲಂಗಿ ಖರೀದಿಸಿ, ಒಟ್ಟು ಎಷ್ಟಾಯಿತು ಎಂದು ತರಕಾರಿ ಮಾರಾಟಗಾರ ಮಹಿಳೆಯನ್ನು ಪ್ರಶ್ನಿಸಿದೆ. ‘ಒಟ್ಟು ತೊಂಬತ್ತು ರೂಪಾಯಿ’ ಎಂದು ಆಕೆ ಮಾರುತ್ತರ ನೀಡಿದರು. ನನಗೆ ಅನುಮಾನ ಬಂದು, ‘ಯಾವ್ಯಾವುದರ ಬೆಲೆ ಎಷ್ಟೆಷ್ಟು?’ ಎಂದು ಮರು ಪ್ರಶ್ನಿಸಿದೆ. ಅದಕ್ಕೆ ಆಕೆ, ‘ಟೊಮೆಟೊ 40 ರೂಪಾಯಿ, ಹಸಿ ಮೆಣಸಿನಕಾಯಿ 30 ರೂಪಾಯಿ, ಮೂಲಂಗಿ 20 ರೂಪಾಯಿ’ ಎಂದು ಉತ್ತರಿಸಿದರು. ಆಗ ಹೌಹಾರುವ ಸರದಿ ನನ್ನದಾಗಿತ್ತು. ನಾನು ಬೆಂಗಳೂರಿನಲ್ಲಿದ್ದಾಗ, ಕೆಜಿ ಟೊಮೆಟೊವನ್ನು 20 ರೂಪಾಯಿಗೆ, ಕಾಲು ಕೆಜಿ ಮೆಣಸಿನಕಾಯಿಯನ್ನು 20 ರೂಪಾಯಿಗೆ ಹಾಗೂ ಕಾಲು ಕೆಜಿ ಮೂಲಂಗಿಯನ್ನು 10 ರೂಪಾಯಿಗೆ ಖರೀದಿಸಿದ್ದೆ. ಹೀಗಾಗಿ, ‘ಏನಮ್ಮ ಬೆಂಗಳೂರಿಗಿಂತ ಇಲ್ಲಿ ದುಬಾರಿಯಾದರೆ, ಹಳ್ಳಿಯ ಜನ ಬದುಕುವುದು ಹೇಗೆ?’ ಎಂದು ಆಕೆಯನ್ನು ದಬಾಯಿಸಿದೆ. ಅದಕ್ಕಾಕೆ ನೀಡಿದ ಉತ್ತರ ಆಘಾತಕಾರಿಯಾಗಿತ್ತು: ‘ಹಳ್ಳಿ ರೈತ್ರೆಲ್ಲ ಶುಂಠಿ ಬೆಳೆ ಹಿಂದೆ ಬಿದ್ದು ಮಲಕ್ಕಂಡವ್ರೆ. ಹಳ್ಳಿಗಳಿಂದ ತರಕಾರಿನೇ ಬರ್ತಿಲ್ಲ. ಬೆಂಗ್ಳೂರಿಂದ ತಂದು ಮಾರ್ತಿದೀವಿ’ ಎಂದು ಹೇಳಿದರು.
ಅದೇ ಗುಂಗಿನಲ್ಲಿದ್ದ ನಾನು ಮಧ್ಯಾಹ್ನ ನನ್ನ ಹೊಲವನ್ನು ನೋಡಿಕೊಂಡು ಬರಲೆಂದು ಹೊಲದ ಕಡೆಗೆ ಗಾಡಿಯಲ್ಲಿ ಹೊರಟೆ. ದಾರಿಯುದ್ದಕ್ಕೂ ರೈತರು ಸ್ಪ್ರಿಂಕ್ಲರ್ ಅಳವಡಿಸಿ, ಶುಂಠಿ ಬೆಳೆಯ ಮೇಲೆ ಹುಲ್ಲು ಹೊದಿಸಿದ್ದ ದೃಶ್ಯಗಳೇ ಕಂಡು ಬಂದವು. ಮಾರನೆಯ ದಿನ ಬೆಳಗ್ಗೆ ಎಂದಿನಂತೆ ಕೋಡಿಹಳ್ಳಿ ರಸ್ತೆಯಲ್ಲಿ ವಾಕಿಂಗ್ ಗೆ ಹೊರಟಾಗಲೂ ಇದೇ ದೃಶ್ಯಗಳು ಕಣ್ಣಿಗೆ ರಾಚಿದವು. ರೈತರು ಯಾಕೆ ಹೀಗೆ ಉನ್ಮತ್ತರಂತೆ ಶುಂಠಿ ಬೆಳೆಯ ಹಿಂದೆ ಬಿದ್ದಿದ್ದಾರೆ ಎಂದು ಯೋಚಿಸುತ್ತಾ ಮನೆಗೆ ಮರಳಿದೆ. ಸದ್ಯ ಶುಂಠಿಯ ಬೆಲೆ ಕೆಜಿಗೆ ರೂ. 300ರವರೆಗೂ ಇದೆ. ಮೊದಲಿಗೆ ಕೇರಳ ಗಡಿಯಿಂದ ಮಂಗಳೂರು ಪ್ರವೇಶಿಸುತ್ತಿದ್ದ ಮಲಯಾಳಿಗಳು ತುಂಡು ಭೂಮಿಗಳನ್ನು ಗುತ್ತಿಗೆ ಹಿಡಿದು ಶುಂಠಿ ಕೃಷಿ ಮಾಡುತ್ತಿದ್ದರು. ಹೀಗೆ ಮಲಯಾಳಿಗಳು ಶುಂಠಿ ಕೃಷಿ ಮಾಡಿದ ತುಂಡು ಭೂಮಿಗಳೆಲ್ಲ ಬಂಜರೆದ್ದು ಹೋದವು. ಅದಕ್ಕೆ ಕಾರಣ: ಅವರು ಬಳಸುತ್ತಿದ್ದ ಅತ್ಯಧಿಕ ಪ್ರಮಾಣದ ರಸಗೊಬ್ಬರ ಹಾಗೂ ಕೀಟ ನಾಶಕಗಳು.
ಇದನ್ನು ಓದಿದ್ದೀರಾ?: ಈಶಾನ್ಯದವರು ಚೀನಿಗಳ ತರ, ದಕ್ಷಿಣದವರು ಆಫ್ರಿಕಾದವರಂತೆ ಕಾಣುತ್ತಾರೆ: ಸ್ಯಾಮ್ ಪಿತ್ರೋಡಾ
ಕರಾವಳಿ ಭಾಗದ ತುಂಡು ಭೂಮಿಗಳು ಬಂಜರೆದ್ದ ನಂತರ ಅವರು ಮಧ್ಯ ಕರ್ನಾಟಕ, ದಕ್ಷಿಣ ಕರ್ನಾಟಕಕ್ಕೆ ದಾಂಗುಡಿ ಇಟ್ಟರು. ಒಂದು ಎಕರೆ ಕೃಷಿ ಭೂಮಿಗೆ ರೂ. ಒಂದು ಲಕ್ಷದವರೆಗೆ ಗುತ್ತಿಗೆ ಮೊತ್ತ ನೀಡಿ, ಅವುಗಳ ಗುತ್ತಿಗೆ ಹಿಡಿಯತೊಡಗಿದರು. ರಂಝಾನ್ ಹೊತ್ತಿಗೆ ಶುಂಠಿ ಬೆಳೆ ಬರುವಂತೆ ನೋಡಿಕೊಳ್ಳುತ್ತಿದ್ದ ಅವರೆಲ್ಲ, ಶುಂಠಿ ಬೆಳೆ ಕೈಗೆ ಬಂದ ಕೂಡಲೇ ಅವುಗಳನ್ನು ಕೈಬಿಟ್ಟು ಹೋಗುತ್ತಿದ್ದರು. ಒಮ್ಮೆ ಶುಂಠಿ ಬೆಳೆಗೆ ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಗುತ್ತಿಗೆ ನೀಡಿದ ರೈತರು, ಮತ್ತೆ ಅಲ್ಲಿ ಫಸಲು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ರಸಗೊಬ್ಬರ ಹಾಗೂ ಕೀಟ ನಾಶಕಗಳನ್ನು ಬಳಸಿ, ಅವುಗಳನ್ನು ಬಂಜರಾಗಿಸಿ ಹೋಗುತ್ತಿದ್ದರು ಮಲಯಾಳಿಗಳು.
ಹೀಗಿದ್ದೂ, ಈ ಪ್ರವೃತ್ತಿ ಇತ್ತೀಚೆಗೆ ಸ್ಥಳೀಯ ಸ್ಥಿತಿವಂತ ರೈತರಿಗೆ ದಾಟಿಕೊಂಡಿದೆ. ಶುಂಠಿಯಿಂದ ಕೈ ತುಂಬಾ ಲಾಭ ಬರುತ್ತದೆಂಬ ದುರಾಸೆಯಲ್ಲಿ ಎರಡೆರಡು ಬೋರ್ ವೆಲ್ ಕೊರೆಸಿ, ಸ್ಪ್ರಿಂಕ್ಲರ್ ಗಳನ್ನು ಅಳವಡಿಸಿ, ಶುಂಠಿ ಬೆಳೆಗೆ ಅಡಿಯಿಟ್ಟಿದ್ದಾರೆ. ಒಂದು ಬಾರಿ ಶುಂಠಿ ಬೆಳೆ ತೆಗೆಯಲು ಒಂದು ಎಕರೆಗೆ ಕನಿಷ್ಠಪಕ್ಷ ಒಂದು ಲಕ್ಷ ತಗುಲುತ್ತದೆ. ಆದರೆ, ಶುಂಠಿ ಬೆಳೆ ಕೈ ಹತ್ತಿ, ಮಾರುಕಟ್ಟೆಯಲ್ಲಿ ಉತ್ತಮ ದರವಿದ್ದರೆ ಅಂತಹ ರೈತರು ಕನಿಷ್ಠಪಕ್ಷ ಎರಡು ಲಕ್ಷ ರೂಪಾಯಿವರೆಗೆ ದುಡ್ಡು ನೋಡುತ್ತಾರೆ. ಈ ದುರಾಸೆಯೇ ಬಯಲು ಸೀಮೆಯ ಫಲವತ್ತಾದ ಕೃಷಿ ಭೂಮಿಗಳನ್ನು ಬಂಜರಾಗಿಸತೊಡಗಿದೆ.
ಇದರೊಂದಿಗೆ ಬಯಲು ಸೀಮೆಯ ರೈತರಲ್ಲಿ ಹೊಕ್ಕಿರುವ ಮತ್ತೊಂದು ಭೂತ: ಅಡಿಕೆ ಬೆಳೆ. ಮಲೆನಾಡಿನ ಸಾಂಪ್ರದಾಯಿಕ ಕೃಷಿಯಾದ ಅಡಿಕೆ ಬೇಸಾಯವನ್ನು ಬಯಲು ಸೀಮೆಯ ರೈತರೂ ಮಾಡತೊಡಗಿದಾಗ, ಮಲೆನಾಡಿನ ರೈತರ ಕಣ್ಣು ಕಿಸಿರಾಗಿತ್ತು. ಅದಕ್ಕೆ ಕಾರಣವೂ ಇತ್ತು. ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಅಡಿಕೆಯ ದರ ಕ್ವಿಂಟಾಲ್ ಗೆ ರೂ. 50,000ವರೆಗೂ ದರವಿದೆ. ಒಂದೈದು ವರ್ಷ ಕಷ್ಟಪಟ್ಟು ಅಡಿಕೆ ಬೆಳೆಯನ್ನು ಉಳಿಸಿಕೊಂಡರೆ, ಕನಿಷ್ಠಪಕ್ಷ ಹತ್ತದಿನೈದು ವರ್ಷ ಕುಂತಲ್ಲಿಯೇ ಕಾಂಚಾಣದ ಝಣಝಣ ಸದ್ದನ್ನು ಕೇಳಬಹುದು. ಇಂತಹ ಸುಲಭ ಕೃಷಿಗೆ ಬಯಲು ಸೀಮೆಯ ರೈತರೂ ಅಡಿಯಿಟ್ಟರೆ, ತಮಗೆ ಸ್ಪರ್ಧೆಯುಂಟಾಗಿ, ಅಡಿಕೆ ಬೆಲೆ ಕುಸಿಯಬಹುದು; ಅದರಿಂದ ತಮ್ಮ ಅನಾಯಾಸ ಆದಾಯಕ್ಕೆ ಕುತ್ತು ಬರಬಹುದು ಎಂಬ ಚಿಂತೆ ಈ ಕಣ್ಣು ಕಿಸಿರಿಗೆ ಕಾರಣವಾಗಿತ್ತು.
ಆದರೆ, ಕಳೆದ ವರ್ಷದಿಂದ ಕಾಡುತ್ತಿರುವ ಬರಗಾಲ ಬಯಲು ಸೀಮೆಯ ಅಡಿಕೆ ಬೆಳೆಯ ರೈತರನ್ನು ಹೈರಾಣಾಗಿಸಿದೆ. ಅಡಿಕೆ ಬೆಳೆಗೆ ನೀರು ಒದಗಿಸುವುದೇ ಅವರ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಕೆಲವು ಸ್ಥಿತಿವಂತ ರೈತರು ಇರುವ ಬೋರ್ ವೆಲ್ ಗಳನ್ನು ಇನ್ನಷ್ಟು ಆಳಕ್ಕೆ ಕೊರೆಸಿದರೂ ನೀರು ಸಿಗದೆ ಹತಾಶರಾಗಿದ್ದಾರೆ. ಇನ್ನೂ ಕೆಲವರು ಎರಡೆರಡು ಬೋರ್ ವೆಲ್ ಗಳನ್ನು ಕೊರೆಸಿ, ಕೈಯಲ್ಲಿ ಇದ್ದಬದ್ದ ದುಡ್ಡನ್ನು ಕಳೆದುಕೊಂಡಿದ್ದಾರೆ. ಒಂದು ವೇಳೆ ಅಡಿಕೆ ಬೆಳೆಗೆ ಸಮರ್ಪಕವಾಗಿ ನೀರು ಪೂರೈಸದಿದ್ದರೆ, ಹತ್ತಾರು ಲಕ್ಷ ರೂಪಾಯಿ ಬಂಡವಾಳ ನಾಶವಾಗಿ ಹೋಗುತ್ತದೆ. ಮತ್ತೊಂದೆಡೆ, ಅಡಿಕೆ ಬೆಳೆಯನ್ನು ಉಳಿಸಿಕೊಳ್ಳಬೇಕಿದ್ದರೆ, ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನೂರಾರು ಅಡಿ ಬೋರ್ ವೆಲ್ ಕೊರೆಸಬೇಕಾಗಿದೆ. ಒಟ್ಟಿನಲ್ಲಿ ಬಯಲು ಸೀಮೆಯ ಅಡಿಕೆ ಬೆಳೆಗಾರರ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಇಂತಹ ಪರಿಸ್ಥಿತಿಗೆ ಕಾರಣರಾರು?

ಕೃಷಿ ಇಲಾಖೆಯ ಜೋಭದ್ರಗೇಡಿ ಅಧಿಕಾರಿಗಳು!
ಭಾರತದಲ್ಲಿ ಅಧಿಕಾರಶಾಹಿ ಎಂದಿಗೂ ಸೇವಾ ವಲಯವಾಗಿ ಬೆಳೆದು ಬಂದಿಲ್ಲ. ಸರಕಾರಿ ಸೇವೆಯೆಂದರೆ, ಅಧಿಕಾರದ ದರ್ಪ ಮೆರೆಯುವ, ಆಮದನಿ ಕೂಡಿಡುವ ಆಯಕಟ್ಟಿನ ಜಾಗ ಎಂಬ ಮನಸ್ಥಿತಿಯೇ ಇಂದಿಗೂ ಅಧಿಕಾರಶಾಹಿಯಲ್ಲಿ ಮನೆ ಮಾಡಿದೆ. ಇದಕ್ಕೆ ಕೃಷಿ ಅಧಿಕಾರಿಗಳೂ ಭಿನ್ನವಲ್ಲ. ರೈತರ ಬೆನ್ನೆಲುಬಾಗಿ ಕೆಲಸ ಮಾಡಬೇಕಿದ್ದ ಕೃಷಿ ಅಧಿಕಾರಿಗಳು, ವಿಜ್ಞಾನಿಗಳು ಬಹುರಾಷ್ಟ್ರೀಯ ಬೀಜ, ಗೊಬ್ಬರ, ಕೀಟನಾಶಕ ಕಂಪನಿಗಳ ಏಜೆಂಟ್ ಗಳಂತೆ ಕೆಲಸ ಮಾಡಿದ್ದೇ ಹೆಚ್ಚು. ತಳ ಹಂತದ ಕೃಷಿ ಅಧಿಕಾರಿಗಳಂತೂ ಕ್ಷೇತ್ರ ಕಾರ್ಯ ನಡೆಸಿದ ಇತಿಹಾಸವೇ ಇಲ್ಲ. ಹೀಗಾಗಿಯೇ ಸೂಕ್ತ ಮಾರ್ಗದರ್ಶನವಿಲ್ಲದೆ, ಮಾರುಕಟ್ಟೆಯಿಲ್ಲದೆ ಗ್ರಾಮೀಣ ರೈತರು ತಾವು ಕೇಳಿದ ಗಾಳಿ ಮಾತುಗಳನ್ನೆಲ್ಲ ನಂಬಿ ವಾಣಿಜ್ಯ ಬೆಳೆಗಳ ಬೆನ್ನು ಹತ್ತಿ ಕೈ ಸುಟ್ಟುಕೊಂಡಿದ್ದಾರೆ. ಈ ಹಿಂದೆ ತಾಳೆ, ಝತ್ರೋಪಾ ಬೆಳೆಯ ಹಿಂದೆ ಬಿದ್ದು ಹಾಳಾದ ರೈತರಂತೆಯೆ, ಇದೀಗ ಬಯಲು ಸೀಮೆಯ ರೈತರು ಶುಂಠಿ, ಅಡಿಕೆ ಬೆಳೆಯ ಹಿಂದೆ ಬಿದ್ದು ನಾಶವಾಗುತ್ತಿದ್ದಾರೆ.
ಭಾರತವು ಸಾಂಪ್ರದಾಯಿಕ ಕೃಷಿಯನ್ನು ತೊರೆದು, ಹಸಿರು ಕ್ರಾಂತಿಗೆ ಒಡ್ಡಿಕೊಂಡು ಅರ್ಧ ಶತಮಾನವೇ ಕಳೆದು ಹೋಗಿದೆ. ಈ ಪ್ರಕ್ರಿಯೆಯಲ್ಲಿ ದೇಶವು ಆಹಾರ ಸ್ವಾವಲಂಬನೆ ಸಾಧಿಸಿದ್ದರೆ, ರೈತರು ಪರಾವಲಂಬಿಗಳಾಗಿದ್ದಾರೆ. ಕೃಷಿ ವೆಚ್ಚ ಅವರ ಕೈ ಮೀರಿ ಹೋಗುತ್ತಿದೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯದೆ ಕೃಷಿಯಿಂದಲೇ ವಿಮುಖವಾಗುವಂತಹ ಪರಿಸ್ಥಿತಿ ತಲೆದೋರಿದೆ.
ಇದನ್ನು ಓದಿದ್ದೀರಾ?: ಪ್ರಜ್ವಲ್ ಲೈಂಗಿಕ ಹಗರಣ | 9 ಸಂತ್ರಸ್ತೆಯರ ಹೇಳಿಕೆ ದಾಖಲಿಸಿಕೊಂಡಿರುವ ಎಸ್‌ಐಟಿ
ಬೆಳೆಗಳ ಉತ್ತಮ ಇಳುವರಿಗೆ ಅಗತ್ಯವಾದ ಬೋರಾನ್ ನಂತಹ ಪೋಷಕಾಂಶಗಳು ಸಾಂಪ್ರದಾಯಿಕ ಕೊಟ್ಟಿಗೆ ಗೊಬ್ಬರದಲ್ಲಿ ಇರುವುದಿಲ್ಲ ಎಂಬುದು ಎಷ್ಟು ಸತ್ಯವೊ, ಅತಿಯಾದ ರಾಸಾಯನಿಕ ಗೊಬ್ಬರಗಳ ಅವಲಂಬನೆಯಿಂದ ಕೃಷಿ ಭೂಮಿಗಳು ತಮ್ಮ ಫಲವತ್ತತೆಯನ್ನು ಕಳೆದುಕೊಂಡು, ಭೂಮಿಯ ತಾಪಮಾನದ ಏರಿಕೆಗೂ ಕೊಡುಗೆ ನೀಡುತ್ತವೆ ಎಂಬುದೂ ಅಷ್ಟೇ ಸತ್ಯ. ರಾಸಾಯನಿಕ ಗೊಬ್ಬರಗಳು ಪೆಟ್ರೊ ಕೆಮಿಕಲ್ ಗಳ ಉತ್ಪನ್ನವಾಗಿರುವುದರಿಂದ, ಅವು ಸೂರ್ಯನ ಶಾಖಕ್ಕೆ ಬೇಗ ಆವಿಯಾಗುತ್ತವೆ. ಈ ರಾಸಾಯನಿಕ ಗೊಬ್ಬರಗಳಿಗೆ ದಹನಕಾರಕ ಗುಣವಿರುವುದರಿಂದ ಇದೇ ವೇಳೆ ಭೂಮಿಯೂ ಬಿಸಿ ಏರತೊಡಗುತ್ತದೆ. ಹೀಗಾಗಿಯೇ ಈ ಬಾರಿ ಮಲೆನಾಡಿನಿಂದ ಹಿಡಿದು, ಬೆಂಗಳೂರಿನವರೆಗೂ ಅಸಹನೀಯ ಬಿರು ಬೇಸಿಗೆ ಕಾಣಿಸಿಕೊಂಡಿರುವುದು.
ಸಾಂಪ್ರದಾಯಿಕ ಕೃಷಿಯೇ ಮದ್ದು
ಯಾವುದೇ ಮದ್ಯ ವ್ಯಸನಿ ಅಥವಾ ಮಾದಕ ವ್ಯಸನಿಯನ್ನು ಏಕಾಏಕಿ ಅವುಗಳ ವ್ಯಸನದಿಂದ ಬಿಡಿಸಲಾಗುವುದಿಲ್ಲ. ಹಾಗೆ ಬಿಡಿಸಲು ಯತ್ನಿಸಿದರೆ, ಅಂಥವರ ಜೀವಕ್ಕೇ ಅಪಾಯವಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ರಾಸಾಯನಿಕ ಕೃಷಿಗೆ ಒಗ್ಗಿ ಹೋಗಿರುವ ಕೃಷಿ ಭೂಮಿಗಳಿಗೆ ಏಕಾಏಕಿ ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರ, ಎಲೆ ಗೊಬ್ಬರಗಳನ್ನು ಉಣಿಸಲು ಸಾಧ್ಯವಿಲ್ಲ. ಅದರಿಂದ ಇಡೀ ಕೃಷಿ ಭೂಮಿಯೇ ಬಂಜರಾಗುವ ಅಪಾಯವಿದೆ. ಹೀಗಾಗಿ ಸಮ್ಮಿಶ್ರ ಗೊಬ್ಬರಗಳ ಕೃಷಿಗೆ ರೈತರು ಹೆಚ್ಚು ಆದ್ಯತೆ ನೀಡಬೇಕಿದೆ. ಮೊದಲಿಗೆ ರೈತರು ಮುಂಗಾರು ಪೂರ್ವ ಮಳೆಯ ಸಂದರ್ಭದಲ್ಲಿ ತಮ್ಮ ಕೃಷಿ ಭೂಮಿಗಳಿಗೆ ಕೆರೆಯ ಗೋಡು ಮಣ್ಣು, ಕೊಟ್ಟಿಗೆ ಗೊಬ್ಬರ, ಸಗಣಿ ಗೊಬ್ಬರನ್ನು ಎರಚಿ, ತಮ್ಮ ಭೂಮಿಗಳನ್ನು ಹಸನಾಗಿಸಿಕೊಳ್ಳಬೇಕಿದೆ. ಮುಂಗಾರು ಮಳೆ ಪ್ರಾರಂಭವಾಗಿ, ಬಿತ್ತನೆ ಕಾರ್ಯ ಶುರುವಾದ ನಂತರ ರಸಗೊಬ್ಬರಗಳನ್ನು ಮಿತ ಪ್ರಮಾಣದಲ್ಲಿ ಬಳಸಬೇಕಿದೆ. ಆರಂಭದಲ್ಲಿ ಇಂತಹ ಪ್ರಯೋಗದಿಂದ ಇಳುವರಿಯಲ್ಲಿ ಇಳಿಕೆಯಾದರೂ, ಹಂತಹಂತವಾಗಿ ಕೃಷಿ ಭೂಮಿಯ ಫಲವತ್ತತೆ ಹೆಚ್ಚಾಗಿ, ರಸಗೊಬ್ಬರದ ಅವಲಂಬನೆ ಇಳಿಮುಖವಾಗುತ್ತಾ ಹೋಗುತ್ತದೆ. ಇದರಿಂದ ರೈತರ ಕೃಷಿ ವೆಚ್ಚವೂ ಗಮನಾರ್ಹವಾಗಿ ತಗ್ಗುತ್ತದೆ. ಇದೆಲ್ಲರೊಂದಿಗೆ ಭೂಮಿಯ ತಾಪಮಾನವೂ ನಿಯಂತ್ರಣಕ್ಕೆ ಬರತೊಡಗುತ್ತದೆ.
ಭಾರತದಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿ ಜಾರಿಯಲ್ಲಿದ್ದಾಗ, ರೈತರು ತಮ್ಮ ಹೊಲಗಳ ಬದುವಿನಲ್ಲಿ ಹೊಂಗೆ, ಬೇವು, ಹಲಸು, ಹುಣಸೆ, ಸೀತಾಫಲ, ಸೀಬೆ ಮರ ಇತ್ಯಾದಿಗಳನ್ನು ಕಡ್ಡಾಯವಾಗಿ ಬೆಳೆಸುತ್ತಿದ್ದರು. ಹೀಗೆ ಮಾಡುವುದರಿಂದ ರೈತರಿಗೆ ಹಲವು ವಿಧದ ಲಾಭವಿತ್ತು. ಹೊಲದ ಬದುಗಳಲ್ಲಿ ಮರಗಳಿರುತ್ತಿದ್ದುದರಿಂದ ಭಾರಿ ಮಳೆಯಾದಾಗ ಮಣ್ಣಿನ ಸವಕಳಿ ತಪ್ಪುತ್ತಿತ್ತು. ಹೊಂಗೆ, ಬೇವಿನ ಬೀಜದಿಂದ ಆರ್ಥಿಕ ಲಾಭವಾಗುತ್ತಿತ್ತು. ಹುಣಸೆ ಹಣ್ಣು ಅವರ ದೈನಂದಿನ ಬಳಕೆಗಾಗಿ ಸಿಗುತ್ತಿತ್ತು. ಸೀಬೆ, ಹಲಸು, ಸೀತಾಫಲದಂಥ ಹಣ್ಣುಗಳನ್ನು ಕೊಂಡು ತಿನ್ನುವುದು ತಪ್ಪುತ್ತಿತ್ತು. ಹೀಗಾಗಿ ಅವರ ಕೃಷಿ ವೆಚ್ಚ ಗಣನೀಯವಾಗಿ ಕಡಿಮೆ ಇತ್ತು. ಆದರೆ, ಆಧುನಿಕ ಕೃಷಿ ಪದ್ಧತಿಗೆ ರೈತರು ಬದಲಾದ ನಂತರ, ಇಂತಹ ಸಾಂಪ್ರದಾಯಿಕ ಕೃಷಿ ಜ್ಞಾನವೇ ಮರೆಯಾಗಿದೆ. ಇದರೊಂದಿಗೆ ಕೃಷಿಕ ರೈತರಲ್ಲಿದ್ದ ಆರ್ಥಿಕ ಜ್ಞಾನವೂ ಕಾಣೆಯಾಗಿದೆ. ರೈತರು ಹವಾಮಾನ ಬದಲಾವಣೆ, ಭೂಮಿಯ ತಾಪಮಾನ ಏರಿಕೆ, ಮಳೆ ಮಾರುತಗಳ ಏರುಪೇರು, ಬಿರು ಬೇಸಿಗೆಯಿಂದ ತಪ್ಪಿಸಿಕೊಳ್ಳಬೇಕಿದ್ದರೆ, ತಮ್ಮ ಪೂರ್ವಜರ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮರಳಲೇಬೇಕಿದೆ. ಇಲ್ಲವಾದರೆ, ರೈತ ಕುಲ ಇತಿಹಾಸವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಏಕೀಕೃತ ಕೃಷಿ ಉತ್ಪನ್ನಗಳ ಪೋರ್ಟಲ್
ರೈತರ ಪಾಲಿಗೆ ಕೃಷಿಯನ್ನು ಲಾಭದಾಯಕವಾಗಿಸಲು ಇರುವ ಏಕೈಕ ಮಾರ್ಗ ಏಕೀಕೃತ ಕೃಷಿ ಉತ್ಪನ್ನಗಳ ಪೋರ್ಟಲ್ ಅನ್ನು ಸ್ಥಾಪಿಸುವುದು. ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಪುಷ್ಪೋದ್ಯಮ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆಗಳ ಇಲಾಖೆ ಹಾಗೂ ಕಂದಾಯ ಇಲಾಖೆಗಳ ಸಮನ್ವಯದೊಂದಿಗೆ ಈ ಪೋರ್ಟಲ್ ಸ್ಥಾಪನೆಯಾಗಬೇಕಿದೆ. ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿನ ಆವಕ, ಮಾರಾಟದ ದತ್ತಾಂಶವನ್ನು ಈ ಪೋರ್ಟಲ್ ನಲ್ಲಿ ಪ್ರಕಟಿಸಬೇಕಿದೆ. ಇದರಿಂದ ರೈತರಿಗೆ ಕೃಷಿ ಉತ್ಪನ್ನಗಳ ಬೇಡಿಕೆ ಮತ್ತು ಪೂರೈಕೆ ನಡುವಿನ ವ್ಯತ್ಯಾಸದ ಬಗ್ಗೆ ವೈಜ್ಞಾನಿಕ ಮಾಹಿತಿ ಲಭಿಸುವಂತಾಗುತ್ತದೆ.
ಪ್ರತಿ ವರ್ಷ ಮುಂಗಾರು ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿಯೇ ಈ ಪೋರ್ಟಲ್ ನ ದತ್ತಾಂಶಗಳನ್ನು ಆಧರಿಸಿ, ವಾರ್ಷಿಕ ಬೇಡಿಕೆ ಮತ್ತು ಪೂರೈಕೆಗೆ ತಕ್ಕಂತೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ವಿತರಣೆ ಮಾಡಬೇಕಿದೆ. ನೈಸರ್ಗಿಕ ವಿಕೋಪಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಬೇಡಿಕೆಯ ಶೇ. 10ರಷ್ಟು ಹೆಚ್ಚು ಪ್ರಮಾಣದ ಬೀಜವನ್ನು ಮಾತ್ರ ರೈತರಿಗೆ ಪೂರೈಸುವುದು ವಿವೇಕಯುತ ಕ್ರಮವಾಗಲಿದೆ. ಇದರಿಂದ ಬೇಡಿಕೆ ಮತ್ತು ಪೂರೈಕೆಯ ನಡುವೆ ಸಮತೋಲನ ಸಾಧ್ಯವಾಗಿ, ರೈತರ ಬೆಲೆಗೆ ವೈಜ್ಞಾನಿಕ ಬೆಲೆ ದೊರೆಯಲು ಸಾಧ್ಯವಾಗಲಿದೆ. ಆ ಮೂಲಕ ಕೃಷಿ ಕೂಡಾ ಲಾಭದಾಯಕ ಉದ್ಯಮವಾಗಿ ರೂಪಾಂತರಗೊಳ್ಳಲಿದೆ. ಈ ಮನ್ವಂತರಕ್ಕೆ ಅಗತ್ಯವಿರುವುದು ನಮ್ಮನ್ನಾಳುವ ರಾಜಕಾರಣಿಗಳಲ್ಲಿನ ರಾಜಕೀಯ ಇಚ್ಛಾಶಕ್ತಿ.
ತನ್ನ ಮೇಲಿನ ಅತ್ಯಾಚಾರವನ್ನು ಅವ್ಯಾಹತವಾಗಿ ಮುಂದುವರಿಸಿದರೆ ತಾನೆಂಥ ರುದ್ರರೂಪ ತಳೆಯುತ್ತೇನೆ ಎಂಬ ಎಚ್ಚರಿಕೆಯನ್ನು ಈ ಬಾರಿಯ ಬಿರು ಬೇಸಿಗೆಯ ಮೂಲಕ ನಿಸರ್ಗ ರವಾನಿಸಿದೆ. ಈಗಲೂ ನಮ್ಮನ್ನಾಳುವವರು ಕಾಂಚಾಣವೆಂಬ ಮೋಹಿನಿಯ ಹಿಂದೆಯೇ ಬಿದ್ದರೆ, ಅವರೂ ಉಳಿಯುವುದಿಲ್ಲ, ಈ ಜಗತ್ತೂ ಉಳಿಯುವುದಿಲ್ಲ.

ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ
article is appropriate, the consumer base, the spread, supply chain management has to be grower friendly
we are in the age and a system where corporates garner huge stocks ,and look at the tragedy of Chana dal
a pride crop of our country the government ups and downs the import duty to administer the prices, the state of horticulture will slip into much distress
the malady lies in waiting for govt support.
and society not meeting the demand for simple technology in this sector for example few good NGOS CAN
PROVIDE INFORMATION ON LINE TO INDICATE DEMAND AREAS ORECAST DEMAND
AND EDUCATE THEM TO BE SELF RELIENT ON MARKET DEMAND AND SUPPLY INFORMATION
BAHALA OLLEYA SUCHYANKA BARAVANIGE HAAGU MAAHITHI NANNA BALI KANNADA TYPING ANUKULA ELLA
DAYAVITTU e BEREKEYA BASHEYANNU SWIKARISI
SADANANDH AVARAY. U AND WE CAN BE CATALIST TO BRING CO OPERATIVE INFORMATION TO THIS LONGING BUT LANGUISHING SECTOR THANKS