‘ಪ್ಯಾಲೆಸ್ತೀನ್ ಬ್ರ್ಯಾಂಡ್’ ತಂಪು ಪೇಯಗಳು ದೈತ್ಯ ಕೋಲಾ ಕಂಪನಿಗಳಿಗೆ ಸೆಡ್ಡು ಹೊಡೆದಿವೆ!

Date:

Advertisements

ಪ್ಯಾಲೆಸ್ತೀನ್ ವಿಮೋಚನೆಯ ಬೆಂಬಲಿಗರು ನಿತ್ಯದ ಖರೀದಿಗಳ ಸಣ್ಣ ಕ್ರಿಯೆಯ ಮೂಲಕ ದೈತ್ಯ ಕಂಪನಿಗಳ ಕೋಲಾ ಪೇಯಗಳನ್ನು ಪ್ರಜ್ಞಾಪೂರ್ವಕವಾಗಿ ದೂರ ಇಡುತ್ತಿದ್ದಾರೆ. ಇಸ್ರೇಲಿನ ದುರಾಕ್ರಮಣವನ್ನು ಖಂಡಿಸುವ ನಾಗರಿಕ ಅಸಹಕಾರ ಚಳವಳಿಯಿದು. ಪ್ಯಾಲೇಸ್ತೀನ್ ವಿಮೋಚನೆಗೆ ನೀಡುತ್ತಿರುವ ಸಾಂಕೇತಿಕ ಬೆಂಬಲ. ಗಾಝಾ ಮೇಲೆ ಇಸ್ರೇಲ್ ನಡೆಸಿರುವ ದುರಾಕ್ರಮಣಕ್ಕೆ ಹಣಕಾಸು ನೆರವು ನೀಡುತ್ತಿರುವ ದೈತ್ಯ ಪೇಯ ಕಂಪನಿಗಳ ವಿರುದ್ಧದ  ಪ್ರತಿಭಟನೆಯಿದು.

ಬ್ರಿಟಿಷ್ ಏರ್ವೇಸ್‌ನ ವಿಮಾನ ಪರಿಚಾರಕನೊಬ್ಬ ದೈತ್ಯ ಕಂಪನಿಯು ತಯಾರಿಸುತ್ತಿರುವ ಕೋಲಾದ ಕ್ಯಾನ್ ಗಳನ್ನು ತನ್ನ ಎರಡೂ ಕೈಗಳಲ್ಲಿ ಹಿಡಿದು ಪ್ರಯಾಣಿಕರಿಗೆ ನೀಡುತ್ತಿರುವ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ‘ವೈರಲ್’ ಆಯಿತು. ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಈ ಕೋಲಾ ಪೇಯವನ್ನು ತಿರಸ್ಕರಿಸುತ್ತಾನೆ. ನಾವು ಪ್ಯಾಲೆಸ್ತೀನೀಯರು, ನೀವು ನೀಡುತ್ತಿರುವ ಈ ಕೋಲಾವನ್ನು ಬಹಿಷ್ಕರಿಸಿದ್ದೇವೆ. ಮುಂದಿನ ಬಾರಿ ವಿಮಾನ ಪ್ರಯಾಣದಲ್ಲಿ ಗಾಝಾ ಕೋಲಾವನ್ನು ನೀಡುವಂತೆ ಬ್ರಿಟಿಷ್ ಏರ್ವೇಸ್ ಗೆ ನಮ್ಮ ಸಂದೇಶ ಮುಟ್ಟಿಸಿ ಎಂದು ತಾಕೀತು ಮಾಡುತ್ತಾನೆ.

ಗಾಝಾ ಕೋಲಾ, ಪ್ಯಾಲೆಸ್ತೀನ್ ಕೋಲಾ, ಛಾಟ್ ಕೋಲಾ ಮೂರು ಪ್ಯಾಲೆಸ್ತೀನಿಯನ್ ಒಡೆತನಗಳ ತಂಪು ಪಾನೀಯಗಳು.  ಅಮೆರಿಕೆಯ ದೈತ್ಯ ಕೋಲಾ ವೊಂದಕ್ಕೆ ಪರ್ಯಾಯಗಳೆಂದು ತಮ್ಮನ್ನು ಬಣ್ಣಿಸಿಕೊಳ್ಳುತ್ತವೆ. ಪ್ಯಾಲೆಸ್ತೀನ್ ಸೀಮೆಗಳನ್ನು ಆಕ್ರಮಿಸಿಕೊಂಡಿರುವ ಇಸ್ರೇಲ್ ಮೇಲೆ ಜಾಗತಿಕವಾಗಿ ಹಲವು ವಿಧವಾದ ಅಹಿಂಸಾತ್ಮಕ ಬಹಿಷ್ಕಾರಗಳ ಆಂದೋಲನಗಳನ್ನು ನಡೆಸಲಾಗುತ್ತಿದೆ. ಈ ಪೈಕಿ ಅಮೆರಿಕಾದ ದೈತ್ಯ ಕಂಪನಿಗಳ ಕೋಲಾಗಳ ಬಹಿಷ್ಕಾರ ಮತ್ತು ಪ್ಯಾಲೆಸ್ತೀನ್ ಕೋಲಾಗಳ ಖರೀದಿಯೂ ಒಂದು.

Advertisements

 ಈ ದೈತ್ಯ ಕಂಪನಿಯು ವರ್ಷಕ್ಕೆ 30 ಲಕ್ಷ ಟನ್ನುಗಳಿಗೂ ಹೆಚ್ಚು ಪ್ಲ್ಯಾಸ್ಟಿಕ್ ನ್ನು ಕೋಲಾ ತುಂಬಿದ ಬಾಟಲಿಗಳ ರೂಪದಲ್ಲಿ ಮಾರುಕಟ್ಟೆಗೆ ಬಿಡುತ್ತಿದೆ. ಈ ಅಗಾಧ ಪ್ರಮಾಣದ ಪ್ಲ್ಯಾಸ್ಟಿಕ್ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಕೋಲಾ ಕುಡಿದ ನಂತರ ಎಸೆಯಲಾಗುವ ಈ ಬಾಟಲಿಗಳು ಕಸದ ಬೆಟ್ಟಗಳ ಭಾಗವಾಗುತ್ತವೆ ಮತ್ತು ಸಾಗರಗಳ ಒಡಲನ್ನು ಸೇರುತ್ತಿವೆ. ಭಾರೀ ಪ್ರಮಾಣದ ಇಂಗಾಲಾಮ್ಲವನ್ನು ವಾತಾವರಣಕ್ಕೆ ತೂರುತ್ತಿರುವ ಈ ದೈತ್ಯ ಕಂಪನಿ, ಈಗಾಗಲೆ ನೀರಿನ ಅಭಾವ ಎದುರಿಸಿರುವ ಪ್ರದೇಶಗಳಲ್ಲಿ ಕೋಲಾ ತಯಾರಿಕೆ ಘಟಕಗಳಿಗೆ ಅಪಾರ ನೀರು ಬಳಕೆಯ ಮೂಲಕ ಜಲಕ್ಷಾಮವನ್ನು ಇನ್ನಷ್ಟು ತೀವ್ರಗೊಳಿಸುತ್ತಿದೆ. ಪ್ಯಾಲೆಸ್ತೀನೀಯರ ನೆಲವನ್ನು ನೀರನ್ನು ಪ್ಯಾಲೆಸ್ತೀನೀಯರಿಗೇ ನಿರಾಕರಿಸಿದೆ ಇಸ್ರೇಲ್. ಈ ನೀರು ಮತ್ತು ನೆಲವನ್ನು ಕೂಡ ಈ ದೈತ್ಯ ಕಂಪನಿಯು ಬಳಸಿಕೊಂಡು ಕೋಲಾ ತಯಾರಿಸಿ ಲಾಭ ಗಳಿಸುತ್ತಿದೆ. ಅಂತಾರಾಷ್ಟ್ರೀಯ ಕಾನೂನುಗಳನ್ನು ಗಾಳಿಗೆ ತೂರಿದೆ. ಪ್ಯಾಲೆಸ್ತೀನ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಯುದ್ಧಾಪರಾಧಗಳಲ್ಲಿ ಶಾಮೀಲಾಗಿದೆ.

ಅನ್ನ ಮತ್ತು ನೀರನ್ನು ಯುದ್ಧದ ಸಾಧನಗಳನ್ನಾಗಿ ಗಾಝಾ ನಿವಾಸಿಗಳ ಮೇಲೆ ಪ್ರಯೋಗಿಸತೊಡಗಿದೆ ಇಸ್ರೇಲ್. ಮಾನವ ಹಕ್ಕುಗಳನ್ನು ಉಲ್ಲಂಘಿಸಿ 21 ಲಕ್ಷ ಜನರನ್ನು ಇಂತಹ ಅಮಾನುಷ ಕೃತ್ಯಕ್ಕೆ ಬಲಿಯಾಗಿಸಿದೆ. ಇದೇ ಹೊತ್ತಿನಲ್ಲಿ ಇಸ್ರೇಲಿ ಸೈನಿಕರು ಅಮೆರಿಕೆಯ ದೈತ್ಯ ಕಂಪನಿಯ ಕೋಲಾವನ್ನು ಕುಡಿಯುತ್ತಿರುವ ಭಾವಚಿತ್ರಗಳು ಅಂತರ್ಜಾಲ ತಾಣಗಳಲ್ಲಿ ಹರಿದಾಡಿವೆ. ಹೀಗಾಗಿ ಈ ಕಂಪನಿಯ ವಿರೋದ್ಧದ ಸಿಟ್ಟು ಮತ್ತಷ್ಟು ವ್ಯಾಪಕ ಆಗತೊಡಗಿದೆ.

gaza cola

ಆಹಾರ ಸಾಮಗ್ರಿಗಾಗಿ ಸರದಿಯ ಸಾಲಿನಲ್ಲಿ ನಿಂತ ಒಂದು ಸಾವಿರಕ್ಕೂ ಹೆಚ್ಚು ಗಾಝಾ ನಿವಾಸಿಗಳನ್ನು ಇಸ್ರೇಲ್ ಇತ್ತೀಚಿನ ದಿನಗಳಲ್ಲಿ ಕೊಂದಿದೆ. ಇದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಒದಗಿಸಿರುವ ಅಂಕಿಅಂಶ. ಈ ಕೊಲೆಗಳ ಸಂಖ್ಯೆ ಇನ್ನೂ ಹೆಚ್ಚು ಎನ್ನಲಾಗಿದೆ.

ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಶೇ.53ರಷ್ಟು ಗ್ರಾಹಕರು ದೈತ್ಯ ಕೋಲಾ ಕಂಪನಿಯ ಉತ್ಪನ್ನಗಳನ್ನು ಬಹಿಷ್ಕರಿಸಿದ್ದಾರೆಂದು ಅಲ್ ಝಜೀರಾ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಅರಬ್ ಮತ್ತು ಮುಸ್ಲಿಮ್ ಜಗತ್ತಿನಿಂದ ಕಂಡು ಬಂದಿರುವ ಮೊದಲ ಪ್ರತಿಭಟನೆಯಿದು.

ಇಸ್ರೇಲಿ ದುರಾಕ್ರಮಣದ ವಿರುದ್ಧ 13 ದೇಶಗಳ ಸದಸ್ಯತ್ವದ ಅರಬ್ ಲೀಗ್ ಈ ದೈತ್ಯ ಕಂಪನಿಯ ಕೋಲಾವನ್ನು 1966-1991ರ ಅವಧಿಯಲ್ಲಿ ಸಂಪೂರ್ಣ ಬಹಿಷ್ಕರಿಸಿತ್ತು.

ದೈತ್ಯ ಕಂಪನಿಯ ಕೋಲಾ ಮಾರಾಟ ಬಾಂಗ್ಲಾದೇಶದಲ್ಲಿ ಶೇ.23ರಷ್ಟು ಕುಸಿತ ಕಂಡ ನಂತರ ದಕ್ಷಿಣ ಏಷ್ಯಾದ ಜನಪ್ರಿಯ ಟೀವಿ ನಟನೊಬ್ಬನನ್ನು ಬಳಸಿಕೊಂಡು ಜಾಹೀರಾತು ಚಿತ್ರ ತಯಾರಿಸಲಾಯಿತು. ಪ್ಯಾಲೆಸ್ತೀನ್ ಕೂಡ ಕೋಕ್ ಕಾರ್ಖಾನೆ ಹೊಂದಿದೆ ಎಂದು ಈ ಚಿತ್ರದ ಒಬ್ಬ ಪಾತ್ರಧಾರಿಯೊಬ್ಬ ಕುಟುಕುತ್ತಾನೆ. ಆದರೆ ಈ ಕಂಪನಿಯ ಒಡೆತನ ಇಸ್ರೇಲಿನದು ಮತ್ತು ಈ ಇಸ್ರೇಲಿ ಕಂಪನಿಯನ್ನು ಸ್ಥಾಪಿಸಲಾಗಿರುವ ಪ್ಯಾಲೆಸ್ತೀನೀ ನೆಲವು ಅಕ್ರಮವಾಗಿ ಆಕ್ರಮಿಸಿಕೊಂಡಿರುವಂತಹುದು ಎಂಬ ಅಂಶವನ್ನು ಈ ಜಾಹೀರಾತಿನಲ್ಲಿ ಮರೆ ಮಾಚಲಾಯಿತು.

ಈ ದೈತ್ಯ ಕಂಪನಿಯ ಕೋಲಾದ ವಿರುದ್ಧ ಸಿಡಿದ ಮೊದಲ ಪ್ಯಾಲೆಸ್ತೀನ್ ತಂಪು ಪಾನೀಯದ ಹೆಸರು ಪ್ಯಾಲೆಸ್ತೀನ್ ಡ್ರಿಂಕ್ಸ್. ಈ ಪೇಯಗಳ ಪೈಕಿ ಕೋಲಾ ಕೂಡ ಉಂಟು. ಕಂಪನಿಯನ್ನು ಸ್ಥಾಪಿಸಿದವರು ಸ್ವೀಡನ್ ನಲ್ಲಿ ನೆಲೆಸಿರುವ ಹಾಸೊನ್ ಬ್ರದರ್ಸ್. ಮೂಲತಃ ಪ್ಯಾಲೆಸ್ತೀನ್ ಮೂಲದ ಕುಟುಂಬವಿದು.

ಇಸ್ರೇಲ್ ದುರಾಕ್ರಮಣಕ್ಕೆ ತುತ್ತಾಗಿರುವ ಪ್ಯಾಲೆಸ್ತೀನನ್ನೇ ಒಂದು ಬ್ರ್ಯಾಂಡ್ ಆಗಿಸಿ ತಂಪು ಪೇಯಗಳ ಕ್ಯಾನ್ ಗಳ ಮೇಲಿನ ಕಂಪನಿ ಚಿಹ್ನೆಯನ್ನಾಗಿ ಬಳಸಬಾರದೇಕೆ? ಈ ಕ್ಯಾನ್ ಗಳು, ಅಂಗಡಿಗಳು, ಸೂಪರ್ ಮಾರ್ಕೆಟ್ ಗಳ ಕಪಾಟುಗಳಲ್ಲಿ, ರೆಸ್ಟುರಾಗಳ ಊಟೋಪಚಾರದ ಮೇಜುಗಳ ಮೇಲೆ ಪ್ಯಾಲೆಸ್ತೀನಿನ ಹೆಸರು ಕಾಣುವಂತಾಗಬೇಕು ಎಂಬ ಆಲೋಚನೆ ತಮಗೆ ಬಂದದ್ದಾಗಿ ಈ ಸೋದರರು ತಿಳಿಸಿದ್ದಾರೆ.

ಈ ಕಂಪನಿಯು ತಿಂಗಳಿಗೆ 30- 40 ಲಕ್ಷಗಳಷ್ಟು ಪ್ಯಾಲೆಸ್ತೀನ್ ಕೋಲಾ ಕ್ಯಾನ್ ಗಳ ಮಾರಾಟದಲ್ಲಿ ತೊಡಗಿದೆ. ವರ್ಷದಿಂದ ವರ್ಷಕ್ಕೆ ಮಾರಾಟದಲ್ಲಿ ಶೇ.20-25ರಷ್ಟು ಹೆಚ್ಚಳ ಕಾಣುತ್ತಿದೆ. ಮಾರಾಟದಿಂದ ಬರುವ ಎಲ್ಲ ಲಾಭವೂ ನೇರವಾಗಿ ಪ್ಯಾಲೆಸ್ತೀನೀಯರ ನೆರವಿನ ನಿಧಿಗೆ ಜಮೆಯಾಗುತ್ತಿದೆ.

2020ರಲ್ಲಿ ಅಸ್ತಿತ್ವಕ್ಕೆ ಬಂದ ಛಾಟ್ ಕೋಲಾದ ಕತೆಯೂ ಇದೇ ಆಗಿದೆ.

ಗಾಝಾ ಕೋಲ ತಂಪು ಪಾನೀಯ ಉದ್ಯಮ ಕಂಪನಿಯನ್ನು ವರ್ಷದ ಹಿಂದೆ (2024ರ ಆಗಸ್ಟ್) ಬ್ರಿಟನ್ ನಲ್ಲಿ ಆರಂಭಿಸಿದಾತ ಪ್ಯಾಲೆಸ್ತೀನ್ ವೆಸ್ಟ್ ಬ್ಯಾಂಕ್ ಮೂಲದ ಒಸಾಮಾ ಖಾಶೂ. ವರ್ಣಭೇದವನ್ನು ಪ್ರತಿಭಟಿಸುವ ಮತ್ತು ಉತ್ತರ ಗಾಝಾದಲ್ಲಿ ಅಲ್-ಕರಾಮ ಆಸ್ಪತ್ರೆಯ ಮರು ನಿರ್ಮಾಣಕ್ಕೆ ಹಣ ಸಂಗ್ರಹಿಸುವ ಉದಾತ್ತ ಉದ್ದೇಶ ಈ ಕಂಪನಿಯ ಸ್ಥಾಪನೆಯ ಹಿನ್ನೆಲೆ.

ಬ್ರಿಟನ್ನಿನ ಒಂದು ಲಕ್ಷಕ್ಕೂ ಹೆಚ್ಚು ಅಂಗಡಿಗಳು ಗಾಝಾ ಕೋಲಾದ ದಾಸ್ತಾನು ಹೊಂದಿವೆ. ಇಟಲಿಯ ಅತಿ ದೊಡ್ಡ ಸೂಪರ್ ಮಾರ್ಕೆಟ್ ಕೂಪ್ ಅಲಾಂಝಾ. ಆ ದೇಶದ ತುಂಬೆಲ್ಲ ಮಳಿಗೆಗಳನ್ನು ಹೊಂದಿದೆ.  ಗಾಝಾ ಪಟ್ಟಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಣ್ಣು ಮುಚ್ಚಿಕೊಂಡಿರುವುದು ಸಾಧ್ಯವಿಲ್ಲ ಎಂದು ಸಾರಿತು. ಎಲ್ಲ ಇಸ್ರೇಲಿ ಉತ್ಪನ್ನಗಳನ್ನು ತನ್ನ ಮಳಿಗೆಗಳಿಂದ ತೆಗೆದು ಹಾಕುವುದಾಗಿ ಪ್ರಕಟಣೆ ನೀಡಿತು. ಗಾಝಾ ಕೋಲಾ ಸೇರಿದಂತೆ ಗಾಝಾ ಪಟ್ಟಿಯ ನಿವಾಸಿಗಳಿಗೆ ನೆರವು ನೀಡುವುದಾಗಿ ಹೇಳಿದೆ. ಕೂಪ್ ಅಲಾಂಝಾ ಗಾಝಾ ಕೋಲಾವನ್ನು ಆನ್ಲೈನ್ ನಲ್ಲೂ ಮಾರಾಟ ಮಾಡತೊಡಗಿದೆ.

ಪ್ಯಾಲೆಸ್ತೀನಿಯರ ಮಾಲೀಕತ್ವದ ಪ್ಯಾಲೆಸ್ತೀನ್ ಡ್ರಿಂಕ್ಸ್, ಛಾಟ್ ಕೋಲಾ, ಹಾಗೂ ಗಾಝಾ ಸೋಡದಂತಹ ತಂಪು ಪೇಯಗಳನ್ನು ಮಾರುಕಟ್ಟೆಗೆ ಇಳಿಸಿರುವ ಉದ್ದೇಶವೂ ಮಾನವೀಯ ಹಕ್ಕುಗಳನ್ನು ಎತ್ತಿ ಹಿಡಿಯುವುದೇ ಆಗಿದೆ. ಅಮೆರಿಕೆಯ ಎರಡು ದೈತ್ಯ ಕೋಲಾ ಪೇಯಗಳನ್ನು ಕುಡಿಯಲು ಒಲ್ಲದ ದೊಡ್ಡ ಸಂಖ್ಯೆಯ ಜನ ಇದ್ದಾರೆ. ಅಂತಹ ಜನರಿಗೆ ಪರ್ಯಾಯ ಪೇಯಗಳನ್ನು ಪ್ಯಾಲೆಸ್ತೀನ್ ಮೂಲದ ಕಂಪನಿಗಳು ಒದಗಿಸಿ ಕೊಟ್ಟಿವೆ.

ದೈತ್ಯ ಬಹುರಾಷ್ಟ್ರೀಯ ಪೇಯ ಕಂಪನಿಗಳು ಜಾಗತಿಕ ಜಾಲ ಹೊಂದಿವೆ, ವಾತಾವರಣಕ್ಕೆ ಇಂಗಾಲಾಮ್ಲ ತೂರುವ ಸಾಗಾಟ ಮತ್ತು ಹಂಚಿಕೆ ಜಾಲಗಳಿವು. ಆದರೆ ಪ್ಯಾಲೆಸ್ತೀನ್ ಬ್ರ್ಯಾಂಡ್ ಗಳು ಸಣ್ಣ ಪುಟ್ಟವು, ಸ್ಥಳೀಯ ನೆಲೆ ಹೊಂದಿರುವಂತಹವು. ವಾತಾವರಣಸ್ನೇಹಿಗಳು. ಪ್ರಾದೇಶಿಕ ಅರ್ಥವ್ಯವಸ್ಥೆಯನ್ನು ಬೆಂಬಲಿಸುವಂತಹವು. ವಾತಾವರಣ ನ್ಯಾಯದ ಪರಿಕಲ್ಪನೆ ಹೊಂದಿರುವ ಸಂಸ್ಥೆಗಳ ಜೊತೆಗೆ ಕೈಜೋಡಿಸಿ ಕೆಲಸ ಮಾಡುತ್ತಿರುವಂತಹವು. ಪರಿಸರ ಪೋಷಕ ಪದ್ಧತಿಗಳನ್ನು ಹೊಂದಿರುವಂತಹವು.

ಪ್ಯಾಲೆಸ್ತೀನ್ ವಿಮೋಚನೆಯ ಬೆಂಬಲಿಗರು ನಿತ್ಯದ ಖರೀದಿಗಳ ಸಣ್ಣ ಕ್ರಿಯೆಯ ಮೂಲಕ ದೈತ್ಯ ಕಂಪನಿಗಳ ಕೋಲಾ ಪೇಯಗಳನ್ನು ಪ್ರಜ್ಞಾಪೂರ್ವಕವಾಗಿ ದೂರ ಇಡುತ್ತಿದ್ದಾರೆ. ಇಸ್ರೇಲಿನ ದುರಾಕ್ರಮಣವನ್ನು ಖಂಡಿಸುವ ನಾಗರಿಕ ಅಸಹಕಾರ ಚಳವಳಿಯಿದು. ಪ್ಯಾಲೇಸ್ತೀನ್ ವಿಮೋಚನೆಗೆ ನೀಡುತ್ತಿರುವ ಸಾಂಕೇತಿಕ ಬೆಂಬಲ. ಗಾಝಾ ಮೇಲೆ ಇಸ್ರೇಲ್ ನಡೆಸಿರುವ ದುರಾಕ್ರಮಣಕ್ಕೆ ಹಣಕಾಸು ನೆರವು ನೀಡುತ್ತಿರುವ ದೈತ್ಯ ಪೇಯ ಕಂಪನಿಗಳ ವಿರುದ್ಧದ  ಪ್ರತಿಭಟನೆಯಿದು.

ಪ್ಯಾಲೆಸ್ತೀನ್ ಎದುರಿಸಿರುವ ಘೋರ ಅನ್ಯಾಯವನ್ನು ಕುರಿತು ನಾವು ಮಾತಾಡಬೇಕು, ಬರೆಯಬೇಕು, ಪ್ಯಾಲೆಸ್ತೀನ್ ಮೂಲದ ನಾಗರಿಕರು ಮಾರಾಟ ಮಾಡುತ್ತಿರುವ ನೊರೆಭರಿತ ತಂಪು ಪಾನೀಯಗಳ ಖರೀದಿಸಬೇಕು ಎಂದು ಲೇಖಕ ಮತ್ತು ಬಾಣಸಿಗ ಸಮಿ ತಮೀಮಿ ಹೇಳಿದ್ದಾರೆ.

(ಸೌಜನ್ಯ-‘ಅಟ್ಮೋಸ್’ ಜಾಲತಾಣ)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X