ಪಣಜಿ ಸಿನಿಮೋತ್ಸವ | ಆಳುವ ಪಕ್ಷದ ಅಜೆಂಡಾಗಳನ್ನು ಬಿಂಬಿಸುವ ಸಿನಿಮಾಗಳಿಗೆ ಅವಕಾಶ!

Date:

Advertisements

ಈ ಮೊದಲು ಸಿನಿಮೋತ್ಸವವನ್ನು ದೇಶದ ಪ್ರಮುಖ ಸಿನಿಮಾ ಗಣ್ಯರೊಬ್ಬರು ಉದ್ಘಾಟಿಸುವ ಪರಿಪಾಠ ಇತ್ತು. ಈಗ ಕೇಂದ್ರ ಸರ್ಕಾರ ಪ್ರಸಾರ ಖಾತೆ ಸಚಿವರೇ ಉದ್ಘಾಟನೆ ಮಾಡುತ್ತಾರೆ. ಹಿಂದೆ ಉದ್ಘಾಟನಾ ವೇದಿಕೆಯಲ್ಲಿ ಸಿನಿಮಾ ಹೊರತಾದ ಮಾತುಗಳಿಗೆ ಅವಕಾಶ ಇರಲಿಲ್ಲ. ಈಗ ಪ್ರಸಾರ ಖಾತೆ ಸಚಿವರು ಉದ್ಘಾಟನಾ ಭಾಷಣದಲ್ಲಿ ತಮ್ಮ ನಾಯಕರ ದೂರದೃಷ್ಟಿ, ಸಿನಿಮಾ ಬಗ್ಗೆ ಅವರಿಗೆ ಇರುವ ಕಾಳಜಿ ಇತ್ಯಾದಿಗಳ ಜಾಗಟೆ ಬಾರಿಸುತ್ತಾರೆ…

ನವೆಂಬರ್‌ ಅಂತರರಾಷ್ಟ್ರೀಯ ಸಿನಿಮಾ ಉತ್ಸವಗಳು ಆರಂಭವಾಗುವ ತಿಂಗಳು. ನವೆಂಬರ್‌ನಿಂದ ಏಪ್ರಿಲ್‌ವರೆಗೆ ದೇಶದ ಪ್ರಮುಖ ನಗರಗಳಲ್ಲಿ ಒಂದಲ್ಲಾ ಒಂದು ಅಂತರಾಷ್ಟ್ರೀಯ ಸಿನಿಮೋತ್ಸವ ನಡೆಯುತ್ತವೆ. ಸಿನಿಮೋತ್ಸವ ಎಂದರೆ ಜಗತ್ತಿನ ಹಲವು ದೇಶಗಳ ಸಮಕಾಲೀನ ಸಿನಿಮಾಗಳನ್ನು ನೋಡುವ ಅವಕಾಶ. ಸಿನಿಮಾಗಳ ಮೂಲಕವೇ ಜಗತ್ತಿನ ಹಲವು ಸಂಸ್ಕೃತಿ ಮತ್ತು ಜೀವನ ಕ್ರಮಗಳನ್ನು ಅರ್ಥ ಮಾಡಿಕೊಳ್ಳುವ ಸದವಕಾಶ. ಸಿನಿಮಾ ವಿದ್ಯಾರ್ಥಿಗಳು ಮತ್ತು ಯುವ ತಂತ್ರಜ್ಞರಿಗೆ ಅದು ಕಲಿಕಾ ವೇದಿಕೆ.

ಇದೇ ನ.20ರಿಂದ 28ರವರೆಗೆ ಗೋವಾ ರಾಜಧಾನಿ ಪಣಜಿಯಲ್ಲಿ ಭಾರತದ 55ನೇ ಅಂತರರಾಷ್ಟ್ರೀಯ ಸಿನಿಮೋತ್ಸವ ನಡೆಯಲಿದೆ. ಅದರ ಬೆನ್ನಲ್ಲೇ ಅಥವಾ ಅದಕ್ಕಿಂತ ಸ್ವಲ್ಪ ಮೊದಲು ಕೋಲ್ಕತ್ತದಲ್ಲಿ, ನಂತರ ತಿರುವನಂತಪುರ, ಚೆನ್ನೈ, ಮುಂಬಯಿ, ದೆಹಲಿ, ಹೈದರಾಬಾದ್‌, ನಾಗಪುರ, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಸಿನಿಮೋತ್ಸವಗಳ ಸರಣಿ ಮುಂದುವರಿಯುತ್ತದೆ.

Advertisements

ಪಣಜಿಯದು ದೇಶದ ಅಧಿಕೃತ ಅಂತರರಾಷ್ಟ್ರೀಯ ಸಿನಿಮೋತ್ಸವ. ಈ ಉತ್ಸವದಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ದೇಶಗಳ ಸಿನಿಮಾಗಳಲ್ಲದೆ, ಅವುಗಳ ನಿರ್ದೇಶಕರು, ತಂತ್ರಜ್ಞರು, ಸಿನಿಮಾಸಕ್ತರು (ಪ್ರತಿನಿಧಿಗಳಾಗಿ) ಭಾಗವಹಿಸುತ್ತಾರೆ. ಪಣಜಿ ಸಿನಿಮೋತ್ಸವಕ್ಕೆ ಅಂತರರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಸಿನಿಮಾಗಳ ಪ್ರದರ್ಶನವೇ ಉತ್ಸವದ ಮುಖ್ಯ ಅಜೆಂಡಾ. ಇದೇ ಸಂದರ್ಭದಲ್ಲಿ ಸಿನಿಮಾ ತಂತ್ರಜ್ಞಾನದ ಹೊಸ ಆವಿಷ್ಕಾರಗಳು, ಬಂಡವಾಳ ಹೂಡಿಕೆ, ಮಾರುಕಟ್ಟೆ ಅವಕಾಶ ಕುರಿತು ಮಾತುಕತೆ, ಚರ್ಚೆ, ಸಂವಾದ ಇತ್ಯಾದಿಗಳು ನಡೆಯುತ್ತವೆ.

ಭಾರತದಲ್ಲಿ ಅಂತರರಾಷ್ಟ್ರೀಯ ಸಿನಿಮೋತ್ಸವ ಆರಂಭವಾದದ್ದು 1952ರಲ್ಲಿ. ಅದು ಪ್ರಧಾನಿ ದಿವಂಗತ ನೆಹರೂ ಅವರ ದೂರದೃಷ್ಟಿ ಫಲ. ಭಾರತೀಯ ಸಿನಿಮಾಗಳನ್ನು ಹೊರ ಜಗತ್ತಿಗೆ ತೋರಿಸುವುದು ಮತ್ತು ಜಗತ್ತಿನ ಸಿನಿಮಾಗಳನ್ನು ಭಾರತೀಯರಿಗೆ ಪರಿಚಯಿಸುವ ಸಲುವಾಗಿ ನೆಹರೂ ಅವರು ಅಂತರರಾಷ್ಟ್ರೀಯ ಸಿನಿಮೋತ್ಸವ ಆರಂಭಿಸಿದರು. 2005ಕ್ಕೆ ಮೊದಲು ಸಿನಿಮೋತ್ಸವ ಪ್ರತಿ ವರ್ಷ ದೇಶದ ಒಂದೊಂದು ಪ್ರಮುಖ ನಗರಗಳಲ್ಲಿ ನಡೆಯುತ್ತಿತ್ತು. 2005ರಲ್ಲಿ ಪ್ರಧಾನಿ ದಿವಂಗತ ವಾಜಪೇಯಿ ಅವರು ಪಣಜಿಯನ್ನು ಸಿನಿಮೋತ್ಸವ ಕಾಯಂ ನೆಲೆಯಾಗಿಸಿದರು.

ಪಣಜಿ ಸಿನಿಮೋತ್ಸವದ ಮುಖ್ಯ ಆಕರ್ಷಣೆ ಅಂತರರಾಷ್ಟ್ರೀಯ ಸಿನಿಮಾ ಸ್ಪರ್ಧೆ. ಸ್ಪರ್ಧೆಯಲ್ಲಿ ಗೆದ್ದ ಅತ್ಯುತ್ತಮ ಸಿನಿಮಾಗಳಿಗೆ, ನಿರ್ದೇಶಕ, ನಟ,ನಟಿಯರಿಗೆ ದೊಡ್ಡ ಮೊತ್ತದ ನಗದು ಪುರಸ್ಕಾರ ಮತ್ತು ಸ್ವರ್ಣ, ರಜತ ಮಯೂರ ಸ್ಮರಣಿಕೆಗಳನ್ನು ನೀಡುವ ಪರಿಪಾಠ ಆರಂಭವಾದ ಮೇಲೆ ಪಣಜಿ ಸಿನಿಮೋತ್ಸವ ಜಗತ್ತಿನ ಗಮನ ಸೆಳೆಯಿತು. ಸ್ಪರ್ಧೆಯ ಕಣದಲ್ಲಿ ಆಯ್ದ ದೇಶಗಳ ಹತ್ತನ್ನೆರಡು ಸಮಕಾಲೀನ ಸಿನಿಮಾಗಳಿರುತ್ತವೆ. ಅಂತರರಾಷ್ಟ್ರೀಯ ಸಿನಿಮಾ ತಜ್ಞರು ಜ್ಯೂರಿ ಮಂಡಳಿಯಲ್ಲಿರುತ್ತಾರೆ.

ಪಣಜಿ ಸಿನಿಮೋತ್ಸವ ಸಿನಿಮಾ ಮಂದಿಗೆ ದೊಡ್ಡ ಹಬ್ಬ ಇದ್ದಂತೆ. ಸಿನಿಮೋತ್ಸವದ ಇನ್ನೊಂದು ಮುಖ್ಯ ಆಕರ್ಷಣೆ ಗೋವಾದ ಸುಂದರ ಪರಿಸರ. ಸಿನಿಮಾ ನೆಪದಲ್ಲಿ ಗೋವಾ ನೋಡಬಹುದು ಎಂಬ ಕಾರಣದಿಂದ ದೇಶದ ಉದ್ದಗಲದಿಂದ ಪ್ರತಿನಿಧಿಗಳು ಬರುತ್ತಾರೆ.

Goa film fest
55ನೇ ಸಿನಿಮೋತ್ಸವಕ್ಕೆ ಸಜ್ಜುಗೊಂಡ ಪಣಜಿ

ಭಾರತ ಜಗತ್ತಿನ ಅತಿ ದೊಡ್ಡ ಶಕ್ತಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿರುವ ಕೇಂದ್ರ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಪಣಜಿ ಸಿನಿಮೋತ್ಸವವನ್ನು ವೆನಿಸ್‌, ಕಾನ್ಸ್‌, ಬರ್ಲಿನ್‌ ಫೆಸ್ಟಿವಲ್‌ಗಳ ಮಟ್ಟದಲ್ಲಿ ಸಂಘಟಿಸುವ ಪ್ರಯತ್ನ ಮಾಡುತ್ತಿದೆ. ಅದ್ಧೂರಿತನಕ್ಕೆ ಹಲವಾರು ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ದೇಶದ ಹಲವು ಉದ್ಯಮ ಸಂಸ್ಥೆಗಳು ಉತ್ಸವಕ್ಕೆ ಪ್ರಾಯೋಜಕತ್ವ ಒದಗಿಸುತ್ತವೆ. ಹೀಗಾಗಿ ಸಿನಿಮೋತ್ಸವದಲ್ಲಿ ಅದ್ದೂರಿತನವೇ ಎದ್ದು ಕಾಣುತ್ತದೆ. ಇನ್ನು ಗೋವಾ ರಾಜ್ಯ ಸರ್ಕಾರ ಸಿನಿಮೋತ್ಸವ ಸಂಘಟಿಸುವುದು ಪ್ರತಿಷ್ಠೆ ಎಂದು ಭಾವಿಸಿದೆ.

ಸಿನಿಮೋತ್ಸವಗಳಿಂದ ದೇಶೀಯ ಸಿನಿಮಾ ಉದ್ಯಮಕ್ಕೆ ಏನು ಪ್ರಯೋಜನ ಎಂಬ ಪ್ರಶ್ನೆಗೆ ಉತ್ತರ ಬಯಸುವುದು ವ್ಯರ್ಥ. ಭಾರತೀಯ ಸಿನಿಮಾಗಳನ್ನು ಜಗತ್ತಿನ ಸಿನಿಮಾಗಳ ಜತೆ ಇಟ್ಟು ನೋಡುವುದೇ ಉತ್ಸವದ ಉದ್ದೇಶ.

ಪಣಜಿ ಸಿನಿಮೋತ್ಸವವನ್ನು ಎಷ್ಟೇ ವ್ಯವಸ್ಥಿತವಾಗಿ ನಡೆಸಿದರೂ ಅದು ಟೀಕೆಗಳಿಗೆ ಹೊರತಾಗಿಲ್ಲ. ಸಿನಿಮಾಗಳ ಆಯ್ಕೆ ಪ್ರಕ್ರಿಯೆಯಲ್ಲಿ ತಾರತಮ್ಯಗಳಿವೆ. ದೇಶದ ಬಡತನ, ಧರ್ಮ, ಜಾತಿ ತಾರತಮ್ಯಗಳು ಮತ್ತು ಶೋಷಣೆಯನ್ನು ಬಿಂಬಿಸುವ ಸಿನಿಮಾಗಳಿಗೆ ಅವಕಾಶ ಸಿಗುತ್ತಿಲ್ಲ ಎನ್ನುವ ಟೀಕೆಗಳಿವೆ. ಆಳುವ ಪಕ್ಷದ ಅಜೆಂಡಾಗಳನ್ನು ಪರೋಕ್ಷವಾಗಿ ಬಿಂಬಿಸುವ ಸಿನಿಮಾಗಳಿಗೆ ಅವಕಾಶ ಸಲೀಸಾಗಿ ಸಿಗುತ್ತಿದೆ. ಇತ್ತೀಚಿನ ವರ್ಷಗಳವರೆಗೆ ಬಾಲಿವುಡ್‌ ಸಿನಿಮಾಗಳಿಗೆ ಮತ್ತು ಸಿನಿಮಾ ಮಂದಿಗೆ ಅಗ್ರಪೂಜೆ ಸಲ್ಲುತ್ತಿತ್ತು. ಕೆಜಿಎಫ್, ಆರ್‌ಆರ್‌ಆರ್‌, ಬಾಹುಬಲಿ, ಪುಷ್ಪ, ಕಾಂತಾರ ಇತ್ಯಾದಿ ದಕ್ಷಿಣ ಭಾರತದ ಸಿನಿಮಾಗಳನ್ನು ದೇಶದ ಜನರು ಮೆಚ್ಚಿಕೊಂಡ ಮೇಲೆ ಪರಿಸ್ಥಿತಿ ಬದಲಾಗಿದೆ. ಉದ್ಘಾಟನೆ, ಸಮಾರೋಪ, ಸಿನಿಮಾ ಕುರಿತ ಸಂವಾದ, ಚರ್ಚೆ ಇತ್ಯಾದಿಗಳಲ್ಲಿ ದಕ್ಷಿಣ ರಾಜ್ಯಗಳ ಪ್ರತಿಭಾವಂತರಿಗೆ ಅವಕಾಶ ಸಿಗುತ್ತಿದೆ.

ಸಿನಿಮಾ ಉತ್ಸವಗಳಿಂದ ದೇಶದ ಪ್ರತಿಷ್ಠೆ ಹೆಚ್ಚುತ್ತದೆ ಎನ್ನುವುದಾಗಲೀ, ಸಿನಿಮಾಗಳ ಮೂಲಕ ದೇಶದ ಪ್ರತಿಷ್ಠೆ ಹೆಚ್ಚಬೇಕು ಎಂಬ ನಿರೀಕ್ಷೆ ಸರಿಯಲ್ಲ. ಆದರೂ ಜನರ ತೆರಿಗೆ ಹಣ ಇಷ್ಟೆಲ್ಲಾ ಕಸರತ್ತುಗಳು ನಡೆಯುತ್ತವೆ.

ಸಿನಿಮೋತ್ಸವ ಮತ್ತು ಪಕ್ಷ ರಾಜಕಾರಣ

ಇತ್ತೀಚಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಸಿನಿಮೋತ್ಸವವನ್ನೂ ಪಕ್ಷ ರಾಜಕಾರಣಕ್ಕೆ ಬಳಸಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ. ಈ ಮೊದಲು ಸಿನಿಮೋತ್ಸವವನ್ನು ದೇಶದ ಪ್ರಮುಖ ಸಿನಿಮಾ ಗಣ್ಯರೊಬ್ಬರು ಉದ್ಘಾಟಿಸುವ ಪರಿಪಾಠ ಇತ್ತು. ಈಗ ಕೇಂದ್ರ ಸರ್ಕಾರ ಪ್ರಸಾರ ಖಾತೆ ಸಚಿವರೇ ಉದ್ಘಾಟನೆ ಮಾಡುತ್ತಾರೆ. ಉದ್ಘಾಟನಾ ವೇದಿಕೆಯಲ್ಲಿ ಸಿನಿಮಾ ಹೊರತಾದ ಮಾತುಗಳಿಗೆ ಅವಕಾಶ ಇರಲಿಲ್ಲ. ಈಗ ಪ್ರಸಾರ ಖಾತೆ ಸಚಿವರು ಉದ್ಘಾಟನಾ ಭಾಷಣದಲ್ಲಿ ತಮ್ಮ ನಾಯಕರ ದೂರದೃಷ್ಟಿ, ಸಿನಿಮಾ ಬಗ್ಗೆ ಅವರಿಗೆ ಇರುವ ಕಾಳಜಿ ಇತ್ಯಾದಿಗಳ ಜಾಗಟೆ ಬಾರಿಸುತ್ತಾರೆ. ಮುಂದಿನ ವರ್ಷಗಳಲ್ಲಿ ಭಾರತೀಯ ಸಿನಿಮಾಗಳು ಜಗತ್ತಿನ ಸಿನಿಮಾಗಳ ಸಾಲಿನಲ್ಲಿ ಮೊದಲ ಸ್ಥಾನ ಪಡೆಯುತ್ತವೆ ಎಂಬ ಭವಿಷ್ಯವನ್ನೂ ನುಡಿಯುತ್ತಾರೆ!

ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಪಣಜಿ ಅತ್ಯಂತ ಸೂಕ್ತ ತಾಣ. ದಕ್ಷಿಣದ ರಾಜ್ಯಗಳಿಗೆ ಅದು ಸಮೀಪದಲ್ಲಿದೆ. ಬೇಸರದ ಸಂಗತಿ ಎಂದರೆ ಗೋವಾದಲ್ಲಿ ಸಿನಿಮಾ ಉದ್ಯಮ ಇಲ್ಲ. ಉದ್ಯಮ ಬೆಳೆಸುವ ಉದ್ದೇಶ ಸರ್ಕಾರಕ್ಕೆ ಇದ್ದರೂ ಕೊಂಕಣಿ ಸಿನಿಮಾಗಳಿಗೆ ಸೀಮಿತ ಮಾರುಕಟ್ಟೆ ಇರುವುದರಿಂದ ಅದು ಸಾಧ್ಯವಾಗಿಲ್ಲ.

ಗೋವಾ ಜನರಿಗೆ ಈಗ ಟಿವಿ, ಒಟಿಟಿಗಳ ಮೂಲಕ ಜಗತ್ತಿನ ಸಿನಿಮಾ ನೋಡುವ ಅವಕಾಶ ಇರುವುದರಿಂದ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುವ ಅಭ್ಯಾಸ ಕಡಿಮೆ. ಅಲ್ಲಿ ಚಿತ್ರಮಂದಿರಗಳ ಸಂಖ್ಯೆಯೂ ಕಡಿಮೆ. ಇನ್ನು ಗೋವಾದ ಪ್ರತಿಭಾವಂತರು ಬಾಲಿವುಡ್‌ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ತಮ್ಮ ಅದೃಷ್ಟ ಹುಡುಕುತ್ತಾರೆ. ಗೋವಾದಲ್ಲಿ ಜನ ಸಾಂದ್ರತೆ ಕಡಿಮೆ. ಟ್ರಾಫಿಕ್‌ ಸಮಸ್ಯೆ ಇಲ್ಲ. ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಸ್ಥಳೀಯರಲ್ಲಿ ಸಾಮರಸ್ಯದ ಮನೋಭಾವವಿದೆ. ಕೋಮು ಸಂಘರ್ಷಕ್ಕೆ ಅಲ್ಲಿನ ಸರ್ಕಾರ, ಜನ ಅವಕಾಶ ಕೊಡುವುದಿಲ್ಲ. ಒಟ್ಟಾರೆ ಮುಕ್ತ ವಾತಾವರಣ ಅಂತರರಾಷ್ಟ್ರೀಯ ಸಿನಿಮೋತ್ಸವ ನಡೆಯುತ್ತದೆ.

ಈ ವರ್ಷ ಪಣಜಿ ಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಇಪ್ಪತ್ತೈದು ಭಾರತೀಯ ಸಿನಿಮಾಗಳ ಪೈಕಿ ಸಾವರ್ಕರ್‌ ಅವರನ್ನು ಕುರಿತ ಚಿತ್ರವೂ ಇದೆ. ಇದು ಪನೋರಮಾ ವಿಭಾಗದ ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ. ಈ ಬೆಳವಣಿಗೆ ಅನಿರೀಕ್ಷಿತ ಅಲ್ಲ. ಕೇಂದ್ರ ಮತ್ತು ಗೋವಾದಲ್ಲಿ ಬಿಜೆಪಿ ಸರ್ಕಾರಗಳೇ ಇರುವುದರಿಂದ ಇದು ಸಾಧ್ಯವಾಗಿದೆ.

ಇದನ್ನೂ ಓದಿ ಗೋವಾ ಚಿತ್ರೋತ್ಸವ | ಉದ್ಘಾಟನಾ ಸಿನಿಮಾ ʼಸ್ವಾತಂತ್ರ್ಯ ವೀರ್ ಸಾವರ್ಕರ್ʼ; ಆಯ್ಕೆಗೆ ಮಾನದಂಡವೇನು?

ಉದ್ಘಾಟನಾ ಸಿನಿಮಾ ಎಂದರೆ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಳ್ಳುವ ಮೊದಲ ಸಿನಿಮಾ ಅಷ್ಟೇ. ಪ್ರದರ್ಶನದ ಆರಂಭಕ್ಕೆ ಮೊದಲು ಚಿತ್ರದ ಕಲಾವಿದರು ಮತ್ತು ತಂತ್ರಜ್ಞರನ್ನು ವೀಕ್ಷಕರಿಗೆ ಪರಿಚಯಿಸುವ ಹತ್ತದಿನೈದು ನಿಮಿಷಗಳ ಕಾರ್ಯಕ್ರಮ ಇರುತ್ತದೆ. ಅದರ ಹೊರತಾಗಿ ಬೇರೇನೂ ಇರುವುದಿಲ್ಲ. ಈ ಚಿತ್ರ ಎಂಟು ದಿನಗಳ ಉತ್ಸವದ ಸಮಯದಲ್ಲಿ ಇನ್ನೊಂದು ಸಲ ರಿಪೀಟ್‌ ಆಗಬಹುದಷ್ಟೆ. ಇದು ಉದ್ಘಾಟನಾ ಸಿನಿಮಾ ಆಗಿ ಪ್ರದರ್ಶನಗೊಳ್ಳುವುದರಿಂದ ಏನೋ ಆಗಿ ಬಿಡುತ್ತದೆ ಎನ್ನುವ ಆತಂಕವೇಕೆ? ಬಲಪಂಥೀಯ ವಿಚಾರಗಳನ್ನು ಸಮರ್ಥಿಸುವ ಕೆಲವು ಸಿನಿಮಾಗಳು ಈ ಮೊದಲೂ ಪನೋರಮಾ ವಿಭಾಗದಲ್ಲಿ ಪ್ರದರ್ಶನವಾಗಿದೆ.
****

ಪಣಜಿ ಸಿನಿಮೋತ್ಸವದಲ್ಲಿ ಬಾಲಿವುಡ್‌ ಸಿನಿಮಾಗಳಿಗೆ, ಉದ್ಯಮಿಗಳಿಗೆ, ನಟನಟಿಯರಿಗೆ ಮಣೆ ಹಾಕುವ ಧೋರಣೆ ವಿರುದ್ಧ ದಕ್ಷಿಣ ರಾಜ್ಯಗಳ ಸಿನಿಮಾ ಮಂದಿ ಮತ್ತು ಆಸಕ್ತರು ಪ್ರತಿಭಟಿಸಿದ ಘಟನೆಗಳು ನಡೆದಿವೆ. ರೆಡ್‌ ಕಾರ್ಪೆಟ್‌ ಸ್ವಾಗತ ನೀಡುವವರ ಪಟ್ಟಿಯಲ್ಲಿ ಬಾಲಿವುಡ್‌ ನಟ, ನಟಿಯರಿಗೆ ಈಗಲೂ ಮೊದಲ ಸ್ಥಾನ. ಅಪರೂಪಕ್ಕೆ ದಕ್ಷಿಣ ರಾಜ್ಯಗಳ ಸೂಪರ್‌ ಸ್ಟಾರ್‌ಗಳಿಗೆ ಈ ಅವಕಾಶ ಸಿಕ್ಕಿದೆ.

ಪಣಜಿ ಸಿನಿಮೋತ್ಸವಕ್ಕೆ ಬರುವ ಸಾಮಾನ್ಯ ಪ್ರತಿನಿಧಿಗಳು, ಸಿನಿಮಾ ತಂತ್ರಜ್ಞರು, ಪತ್ರಕರ್ತರು ಮತ್ತು ಸಿನಿಮಾ ವಿದ್ಯಾರ್ಥಿಗಳ ಪೈಕಿ ಮಲಯಾಳಂ ಭಾಷಿಕರಿಗೆ ಮೊದಲ ಸ್ಥಾನ. ನಂತರದ ಸ್ಥಾನ ತೆಲುಗು, ತಮಿಳರು, ಮರಾಠಿ, ಬೆಂಗಾಲಿಗಳದು. ಚೆನ್ನೈನ ಮೂರ್ನಾಲ್ಕು ಸಿನಿಮಾ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಕನ್ನಡಿಗರ ಭಾಗವಹಿಸುವಿಕೆ ಕಡಿಮೆ.

ಪ್ರೇಮ್ ಕುಮಾರ್
ಪ್ರೇಮಕುಮಾರ್‌ ಹರಿಯಬ್ಬೆ
+ posts

ಹಿರಿಯ ಪತ್ರಕರ್ತ, ಸಿನಿಮೋತ್ಸಾಹಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೇಮಕುಮಾರ್‌ ಹರಿಯಬ್ಬೆ
ಪ್ರೇಮಕುಮಾರ್‌ ಹರಿಯಬ್ಬೆ
ಹಿರಿಯ ಪತ್ರಕರ್ತ, ಸಿನಿಮೋತ್ಸಾಹಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X