ಸಂಸತ್ ಕಲಾಪವು ಯಾವುದೇ ಅಡೆತಡೆಯಿಲ್ಲದೆ ನಡೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಚರ್ಚೆಯಿಂದ ತಪ್ಪಿಸಿಕೊಳ್ಳುವ ಬದಲು ಸ್ವಾಗತಿಸಬೇಕು. ಇದು ಸರ್ಕಾರದ ಕರ್ತವ್ಯವೂ ಕೂಡ. ಹಾಗೆಯೇ ಸರ್ಕಾರವನ್ನು ಉತ್ತರದಾಯಿ ಮಾಡುವ ಹಕ್ಕು ಮತ್ತು ಹೊಣೆಗಾರಿಕೆ ವಿರೋಧ ಪಕ್ಷಗಳಿಗೆ ಇದೆ. ವಿಪಕ್ಷಗಳು ಎತ್ತಿದ ವಿಚಾರಗಳ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ.
ಭಾರತ ಸಂವಿಧಾನದಲ್ಲಿ ಸಂಸತ್ತನ್ನು ದೇಶದ ಆತ್ಮ ಎಂದು ಪರಿಗಣಿಸಲಾಗಿದೆ. ಕೆಳಮನೆಯಾದ ಲೋಕಸಭೆ ಹಾಗೂ ರಾಜ್ಯಸಭೆಗಳು ಹೃದಯಕ್ಕಿಂತಲೂ ಹೆಚ್ಚು ಮೌಲ್ಯವಾದುದು. ಪ್ರಜೆಗಳಿಂದ ಹಾಗೂ ಪ್ರಜಾಪ್ರತಿನಿಧಿಗಳಿಂದ ಆಯ್ಕೆಯಾದವರು ಇವೆರಡು ಸದನಗಳಿಗೆ ಆಯ್ಕೆಯಾಗಿ ದೇಶದ ಜನರ ದುಃಖದುಮ್ಮಾನಗಳನ್ನು ಆಲಿಸುವುದರ ಜೊತೆ ರಾಷ್ಟ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸಂಸತ್ತಿನಲ್ಲಿ ಲೋಕಸಭೆಯು ಪ್ರತಿ 5 ವರ್ಷಕ್ಕೊಮ್ಮೆ ವಿಸರ್ಜನೆಗೊಂಡರೆ, 6 ವರ್ಷದ ಸದಸ್ಯತ್ವ ಅವಧಿ ಹೊಂದಿರುವ ರಾಜ್ಯಸಭೆ ಶಾಶ್ವತ ಸದನವಾಗಿದೆ. 2024ರ ಜೂನ್ 1ರಿಂದ ಆರಂಭವಾಗಿರುವ 18ನೇ ಲೋಕಸಭೆಯಲ್ಲಿ 543 ಸದಸ್ಯರಿದ್ದರೆ, ರಾಜ್ಯಸಭೆಯಲ್ಲಿ 245 ಸದಸ್ಯರಿದ್ದಾರೆ. ಜನರ ಬದುಕಿಗೆ ಹಾಗೂ ರಾಷ್ಟ್ರದ ಅಭ್ಯುದಯಕ್ಕೆ ದಿಕ್ಸೂಚಿಯಾಗಬೇಕಾದ ಸಂಸತ್ತಿನ ಅಧಿವೇಶನದ ಕಲಾಪಗಳು ಪ್ರತಿ ಅವಧಿಯಲ್ಲಿಯೂ ವ್ಯರ್ಥವಾಗುತ್ತಿವೆ.
ಆರಂಭದ ಅಧಿವೇಶನಗಳು ಬಹುತೇಕ ಸುಗಮವಾಗಿ ನಡೆಯುತ್ತಿದ್ದವು, ಸಾರ್ವಜನಿಕರ ಕಷ್ಟಸುಖಗಳ ಬಗ್ಗೆ, ದೇಶದ ಅಭಿವೃದ್ಧಿಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಅಧಿವೇಶನಗಳಲ್ಲಿ ಆಡಳಿತ – ವಿಪಕ್ಷ ಸದಸ್ಯರು ಒಗ್ಗೂಡಿ ಚರ್ಚೆಯಲ್ಲಿ ಪಾಲ್ಗೊಂಡು ಕಲಾಪವನ್ನು ನಡೆಸುತ್ತಿದ್ದರು. ಜನರ ತೆರಿಗೆ ಹಣವನ್ನು ಹೆಚ್ಚಾಗಿ ಪೋಲು ಮಾಡುತ್ತಿರಲಿಲ್ಲ.
ಆದರೆ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಕಲಾಪಗಳೆ ಹೆಚ್ಚಾಗಿ ನಡೆಯುತ್ತಿಲ್ಲ. ಪ್ರಸ್ತುತ ನಡೆಯುತ್ತಿರುವ 18ನೇ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಮೊದಲ ಒಂದು ವಾರ ಕಲಾಪವು ವಿಪಕ್ಷ ಸದಸ್ಯರ ಪ್ರತಿಭಟನೆಯಿಂದಾಗಿ ಚರ್ಚೆಯೆ ನಡೆಯದೆ ವ್ಯರ್ಥಗೊಂಡಿದೆ. ಬಿಜೆಪಿ ಸರ್ಕಾರದ 16 ಮತ್ತು 17ನೇ ಲೋಕಸಭೆ ಅವಧಿಯಲ್ಲಿ ವರ್ಷಕ್ಕೆ 55 ರಿಂದ 66 ದಿನಗಳ ಅವಧಿಯವರೆಗೆ ಮಾತ್ರ ಕಲಾಪಗಳು ನಡೆದಿವೆ. ನಿಯಮಾವಳಿಗಳ ಪ್ರಕಾರ ಲೋಕಸಭೆಯಲ್ಲಿ ಪ್ರತಿ ವರ್ಷ ಬಜೆಟ್, ಬೇಸಿಗೆ ಹಾಗೂ ಚಳಿಗಾಲದ ಅಧಿವೇಶನ ಸೇರಿ ಒಟ್ಟು 120 ದಿನಗಳ ಕಾಲ ಕಲಾಪ ನಡೆಯಬೇಕಿದೆ.
ಸರ್ಕಾರೇತರ ಸಂಸ್ಥೆಯೊಂದು ಅಧ್ಯಯನ ನಡೆಸಿದ ವರದಿಯಲ್ಲಿ 17ನೇ ಲೋಕಸಭೆಯ 5 ವರ್ಷದ ಅವಧಿಯಲ್ಲಿ ಕೇವಲ 274 ದಿನಗಳ ಕಲಾಪ ಮಾತ್ರ ನಡೆದಿವೆ. ಅದೇ ರೀತಿ ಕಳೆದ 4 ಲೋಕಸಭೆಗಳಲ್ಲೂ ಪ್ರತಿ 5 ವರ್ಷಗಳಲ್ಲಿಯೂ ಕಡಿಮೆ ಅವಧಿಯ ಕಲಾಪಗಳು ನಡೆದಿವೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಅವಧಿಯಲ್ಲಿ 1952 ರಿಂದ 1957ರವರೆಗೆ ಸಂಸತ್ತಿನಲ್ಲಿ ಒಟ್ಟು ವಾರ್ಷಿಕ ಸರಾಸರಿ 135 ದಿನಗಳವರೆಗೂ ಕಲಾಪ ನಡೆದಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಬ್ಬರು ಕರೆ ಕೊಡುವುದು, ಇನ್ನೊಬ್ಬರು ಗೇಲಿ ಮಾಡುವುದು, ಏನಿದು ಮಕ್ಕಳಾಟ?
ಹಾಗೆಯೇ ಸರ್ಕಾರ ಮಂಡಿಸಿದ ಮಸೂದೆಗಳಲ್ಲೂ ಕೂಡ ಹೆಚ್ಚು ಚರ್ಚೆಗಳನ್ನು ನಡೆಸಲಾಗಿಲ್ಲ. ವರದಿಯ ಪ್ರಕಾರ ಶೇ. 58ರಷ್ಟು ಮಸೂದೆಗಳು ಹೆಚ್ಚು ಚರ್ಚೆಗಳಾಗದೆ ಕೇವಲ 2 ವಾರದ ಅವಧಿಯಲ್ಲಿ ಅಂಗೀಕರಿಸಲಾಗಿದೆ. 2019ರ ಜಮ್ಮು ಕಾಶ್ಮೀರದ ಮರುಸಂಘಟನೆ ಮಸೂದೆ ಹಾಗೂ 2023ರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ 2 ದಿನಗಳಲ್ಲಿ ಅಂಗೀಕರಿಸಲಾಗಿತ್ತು. ಅದೇ ರೀತಿ ಲೋಕಸಭೆಯಲ್ಲಿ ಅಂಗೀಕಾರವಾದ ಶೇ.35 ರಷ್ಟು ಮಸೂದೆಗಳು ಒಂದೂ ಗಂಟೆಗೂ ಕಡಿಮೆ ಅವಧಿಯ ಚರ್ಚೆಯಲ್ಲಿ ಅಂಗೀಕೃತಗೊಂಡಿವೆ. ಕಳೆದ 5 ವರ್ಷದ ಅವಧಿಯಲ್ಲಿ ಶೇ.16 ರಷ್ಟು ಮಸೂದೆಗಳನ್ನು ಪರಿಶೀಲನೆಗಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. ಕುತೂಹಲಕರ ಸಂಗತಿಯಂದರೆ 17ನೇ ಲೋಕಸಭೆ ಅವಧಿಯಲ್ಲಿ 729 ಖಾಸಗಿ ಮಸೂದೆಗಳನ್ನು ಪರಿಚಯಿಸಲಾಗಿದೆ. ಅದೇ ಅವಧಿಯಲ್ಲಿ ರಾಜ್ಯಸಭೆಯಲ್ಲಿ 705 ಮಸೂದೆಗಳನ್ನು ಪರಿಚಯಿಸಲಾಗಿದೆ.
ಒಂದು ನಿಮಿಷದ ಕಲಾಪಕ್ಕೆ 2.5 ಲಕ್ಷ ರೂ. ವೆಚ್ಚ
ಸಂಸತ್ತಿನಲ್ಲಿ ಉಭಯ ಸದನಗಳ ಒಂದು ನಿಮಿಷದ ಕಲಾಪ ನಡೆಸಲು ಪ್ರತಿ ನಿಮಿಷಕ್ಕೆ 2.5 ಲಕ್ಷ ರೂ. ವೆಚ್ಚವಾಗುತ್ತದೆ. ಈ ವೆಚ್ಚವು ಕಟ್ಟಡ ನಿರ್ವಹಣೆ, ವಿದ್ಯುತ್, ನೀರು, ಪೆಟ್ರೋಲ್, ಆಹಾರ, ಭದ್ರತೆ, ಸಂಸದರ ವೇತನ ಹಾಗೂ ಭತ್ಯೆ ಹಾಗೂ ಎಲ್ಲ ಉದ್ಯೋಗಿಗಳ ಸಿಬ್ಬಂದಿ ವೆಚ್ಚವು ಇದರಲ್ಲಿ ಒಳಗೊಂಡಿರುತ್ತದೆ. ಒಂದು ಅಧಿವೇಶನಕ್ಕೆ ಸರಿಸುಮಾರು 150 ರಿಂದ 200 ಕೋಟಿ ರೂ. ವೆಚ್ಚವಾಗುತ್ತದೆ. ಜನರು ಬೆವರು ಸುರಿಸಿದ ತೆರಿಗೆ ಹಣವು ಸಂಪೂರ್ಣವಾಗಿ ಪೋಲಾಗುತ್ತಿದೆ. ಪ್ರಜೆಗಳ ಹಾಗೂ ದೇಶದ ಅಭಿವೃದ್ಧಿಗೆ ಉಪಯುಕ್ತವಾಗಬೇಕಾದ ಕಲಾಪವು ವಾಕ್ಸಮರದಲ್ಲಿ ಅಂತ್ಯವಾಗುತ್ತಿದೆ. ಈಗಾಗಲೇ ಸಂಸತ್ತಿನ ಚಳಿಗಾಲದ ಅಧಿವೇಶನ ಎರಡನೇ ವಾರಕ್ಕೆ ಪ್ರವೇಶಿಸಿದೆ. ಮೊದಲ ವಾರ ಕಲಾಪವೇ ನಡೆದಿಲ್ಲ. ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಸಭಾಪತಿಯವರು ನಿತ್ಯವು ಕಲಾಪವನ್ನು ಮುಂದೂಡಿದ್ದಾರೆ. ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ಆರೋಪಪಟ್ಟಿ ದಾಖಲು, ಮಣಿಪುರ ಹಿಂಸಾಚಾರ ಮತ್ತು ಉತ್ತರಪ್ರದೇಶದ ಸಂಭಲ್‌ನಲ್ಲಿ ಮಸೀದಿ ಸಮೀಕ್ಷೆಯ ಬಳಿಕ ಪೊಲೀಸರಿಂದ ಗೋಲಿಬಾರ್ ಮುಂತಾದ ವಿಚಾರಗಳ ಚರ್ಚೆಗೆ ಅವಕಾಶ ಕೊಡಬೇಕು ಎಂದು ವಿರೋಧ ಪಕ್ಷಗಳು ಪಟ್ಟುಹಿಡಿದು ಪ್ರತಿಭಟನೆ ನಡೆಸಿವೆ.
ಅದಾನಿ, ಮಣಿಪುರ, ಸಂಭಲ್ ವಿಷಯಗಳನ್ನು ಖಂಡಿತಾ ಸಂಸತ್ತಿನಲ್ಲಿ ಚರ್ಚೆ ನಡೆಸಬೇಕಿದೆ. ಆದರೆ, ಚರ್ಚೆ ನಡೆಸಲು ಸರ್ಕಾರ ಸಿದ್ಧವಿರದ ಕಾರಣ ಈ ವಿಚಾರಗಳ ಕುರಿತು ನಿಲುವಳಿ ಸೂಚನೆ ಮಂಡನೆಗೆ ಎರಡೂ ಸದನಗಳಲ್ಲಿ ಅವಕಾಶ ನೀಡಲಾಗಿಲ್ಲ. ಗದ್ದಲದ ನಡುವೆ ಕಲಾಪ ನಡೆಸಲು ಸಾಧ್ಯವಿಲ್ಲ ಎಂದು ಎರಡೂ ಸದನಗಳನ್ನು ಮುಂದೂಡಲಾಗುತ್ತಿದೆ. ದೇಶದ ಹಿತದೃಷ್ಟಿಯ ಕಾರಣ ಈ ವಿಚಾರಗಳ ಕುರಿತು ಚರ್ಚೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸರ್ಕಾರಕ್ಕೆ ಯಾವ ಸಬೂಬು ಇಲ್ಲ. ಸಂಸತ್ತು ಚರ್ಚೆ, ಸಂವಾದ, ಕಾಯ್ದೆ, ಮಸೂದೆ ರೂಪಿಸುವಿಕೆಗೆ ಇರುವ ವೇದಿಕೆ ಎಂಬುದನ್ನು ಸರ್ಕಾರ ಮತ್ತು ವಿರೋಧ ಪಕ್ಷಗಳು ಮರೆತು ಬದ್ಧವೈರಿಗಳಂತೆ ವರ್ತಿಸುತ್ತಿದ್ದಾರೆ. ತಮ್ಮ ಸಂಬಳ, ಭತ್ಯೆ ಮುಂತಾದ ಸ್ವಂತ ವಿಷಯಗಳಲ್ಲಿ ಆಡಳಿತ, ಪ್ರತಿಪಕ್ಷ ಸದಸ್ಯರು ಯಾವುದೇ ವಿರೋಧ ವ್ಯಕ್ತಪಡಿಸದೆ ಮಸೂದೆಯನ್ನು ಅಂಗೀಕರಿಸುತ್ತಾರೆ. ಜನರ ವಿಷಯ ಬಂದಾಗ ಎಲ್ಲ ನಿಯಮಗಳು ಒಟ್ಟಾಗುತ್ತವೆ.
ಅದೇ ರೀತಿ ಸಂಸತ್ ಕಲಾಪವು ಯಾವುದೇ ಅಡೆತಡೆಯಿಲ್ಲದೆ ನಡೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಚರ್ಚೆಯಿಂದ ತಪ್ಪಿಸಿಕೊಳ್ಳುವ ಬದಲು ಸ್ವಾಗತಿಸಬೇಕು. ಇದು ಸರ್ಕಾರದ ಕರ್ತವ್ಯವೂ ಕೂಡ. ಹಾಗೆಯೇ ಸರ್ಕಾರವನ್ನು ಉತ್ತರದಾಯಿ ಮಾಡುವ ಹಕ್ಕು ಮತ್ತು ಹೊಣೆಗಾರಿಕೆ ವಿರೋಧ ಪಕ್ಷಗಳಿಗೆ ಇದೆ. ವಿಪಕ್ಷಗಳು ಎತ್ತಿದ ವಿಚಾರಗಳ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ. ವಿರೋಧ ಪಕ್ಷಗಳು ಎತ್ತಿದ ವಿಷಯಗಳ ಬಗ್ಗೆ ಸರ್ಕಾರದ ನಿಲುವು ಏನು ಎಂಬುದು ಜನರಿಗೆ ತಿಳಿಯಬೇಕು. ಸಂಸತ್ತಿನ ಕಲಾಪ ಪ್ರತಿದಿನವೂ ವ್ಯರ್ಥವಾದರೆ ಇದರ ಒಟ್ಟಾರೆ ಪರಿಣಾಮ ದೇಶ ಹಾಗೂ ಜನತೆಯ ಮೇಲೆಯೇ ಉಂಟಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪದೇಪದೆ ಈ ರೀತಿಯ ಘಟನೆಗಳು ನಡೆಯುತ್ತಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ದೇಶಕ್ಕೆ ಮತ್ತಷ್ಟು ಕುಖ್ಯಾತಿ ಲಭಿಸುತ್ತದೆ. ಸಂಸತ್ತನ್ನು ಸ್ವಲಾಭಕ್ಕೆ ಇರುವ ವೇದಿಕೆ ಎಂದು ಆಡಳಿತ ಹಾಗೂ ವಿಪಕ್ಷಗಳು ಮಾಡಿಕೊಳ್ಳಬಾರದು.