ಪ್ರೊ. ಜಾನ್‌ ಮೀರ್‌ಶೈಮರ್‌: ಇರಾನ್‌ ಮೇಲೆ ಇಸ್ರೇಲ್‌ ಅಣು ದಾಳಿ ನಡೆಸಿದರೆ ಅಚ್ಚರಿ ಪಡಬೇಕಿಲ್ಲ!

Date:

ವಿಶಾಲ ಇಸ್ರೇಲ್‌ ಸ್ಥಾಪನೆ; ಪ್ಯಾಲಸ್ತೀನ್‌ ಜನಾಂಗದ ನಿರ್ನಾಮ ಮತ್ತು ಮಧ್ಯ ಏಷಿಯಾದ ದೇಶಗಳನ್ನು ದುರ್ಬಲಗೊಳಿಸುವುದೇ ಇಸ್ರೇಲ್‌ ದೇಶದ ಗುರಿ ಎಂದ ಅಮೆರಿಕಾದ ಶಿಕಾಗೋ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿರುವ ಜಾನ್‌ ಮೀರ್‌ಶೈಮರ್‌

(ಅಮೆರಿಕಾದ ಶಿಕಾಗೋ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿರುವ ಜಾನ್‌ ಮೀರ್‌ಶೈಮರ್‌ ಆಧುನಿಕ ರಾಷ್ಟ್ರಗಳ ಶಕ್ತಿ ರಾಜಕಾರಣದ ಕುರಿತಾಗಿ ಆಳವಾಗಿ ಅಧ್ಯಯನ ನಡೆಸಿದವರು. 2007ರಲ್ಲಿ ‘ದ ಇಸ್ರೇಲ್‌ ಲಾಬಿ ಅಂಡ್‌ ಯುಎಸ್‌ ಫಾರಿನ್‌ ಪಾಲಿಸಿ’ ಹೆಸರಿನ ಪುಸ್ತಕದಲ್ಲಿ ಇಸ್ರೇಲ್‌ ಅಮೆರಿಕಾದಲ್ಲಿ ಹೊಂದಿರುವ ಪ್ರಭಾವದ ಕುರಿತು ಪಾಂಡಿತ್ಯಪೂರ್ಣ ಮಾಹಿತಿ ನೀಡಿದವರು. 2001ರಲ್ಲಿ ‘ದ ಟ್ರಾಜಿಡಿ ಆಫ್ ಗ್ರೇಟ್‌ ಪವರ್‌ ಪಾಲಿಟಿಕ್ಸ್‌’ ಪುಸ್ತಕದಲ್ಲಿ ಚೀನಾ ದೇಶದ ಶಕ್ತಿ ರಾಜಕಾರಣದ ಕುರಿತು ಚರ್ಚಿಸಿದ್ದವರು. ಇವರು ಏಪ್ರಿಲ್‌10, 2026 ರಂದು ವಾಷಿಂಗ್ಟನ್‌ ಡಿಸಿಯಲ್ಲಿರುವ ಅರಬ್‌ ಸೆಂಟರ್‌ನ ಹನ್ನೊಂದನೆ ಸಮ್ಮೇಳನದಲ್ಲಿ ಮಾಡಿದ ಭಾಷಣದ ಕನ್ನಡ ಅನುವಾದ. ಕನ್ನಡಕ್ಕೆ: ಸದಾನಂದ ಆರ್‌.)

- Advertisement -
mearsheimer john modified
ಪ್ರೊ. ಜಾನ್‌ ಮೀರ್‌ಶೈಮರ್‌

ನಾನು ಕಳೆದ ನಲವತ್ತು ದಿನಗಳಿಂದ ಇರಾನ್‌ ವಿರುದ್ಧ ನಡೆಯುತ್ತಿರುವ ಯುದ್ಧದ ಕುರಿತು ಮಾತನಾಡುತ್ತೇನೆ. ವಿಷಯಕ್ಕೆ ನೇರವಾಗಿ ಬರುವ ಮೊದಲು, ಈ ಯುದ್ಧದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಒಂದಿಷ್ಟು ಪೂರಕವಾದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ನನ್ನ ಯೌವನದ ದಿನಗಳಲ್ಲಿ ಮಧ್ಯ ಏಷಿಯಾವನ್ನು ಹೇಗೆ ಪರಿಗಣಿಸುತ್ತಿದ್ದೆವು ಎಂದು ಮೊದಲಿಗೆ ಹೇಳಿಬಿಡುತ್ತೇನೆ. ಅಂದಿನ ದಿನಗಳಲ್ಲಿ ಅಮೆರಿಕಾ ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಜಾಗತಿಕವಾಗಿ ಮೂರು ಪ್ರದೇಶಗಳನ್ನು ಪ್ರಮುಖವೆಂದು ಪರಿಗಣಿಸಲಾಗಿತ್ತು. ಇವುಗಳಲ್ಲಿ ಒಂದು ಮಧ್ಯ ಏಷಿಯಾ ಪ್ರದೇಶವಾಗಿತ್ತು– ಏಕೆಂದರೆ ಇಲ್ಲಿ ಆಧುನಿಕ ಜಗತ್ತಿಗೆ ಅಗತ್ಯವಾಗಿ ಬೇಕಿರುವ ತೈಲ ನಿಕ್ಷೇಪಗಳಿದ್ದವು. ಯೂರೋಪು ಮತ್ತು ಪೂರ್ವ ಏಷಿಯಾ ಉಳಿದ ಎರಡು ಪ್ರಮುಖ ಪ್ರದೇಶಗಳಾಗಿದ್ದವು. ಈ ಎರಡು ಪ್ರದೇಶಗಳು ಎರಡು ಪ್ರಬಲ ದೇಶಗಳ ತಾಣವಾಗಿರುವ ಕಾರಣದಿಂದ ಪ್ರಮುಖವೆಂದು ಪರಿಗಣಿಸಲ್ಪಟ್ಟಿದ್ದವು.

ಮಧ್ಯ ಏಷಿಯಾವು ಅಗಾಧವಾದ ತೈಲ ನಿಕ್ಷೇಪಗಳನ್ನು ಹೊಂದಿದೆ ಎನ್ನುವ ಏಕೈಕ ಕಾರಣಕ್ಕೆ ಅಮೆರಿಕಾಕ್ಕೆ ಮುಖ್ಯವಾಗಿತ್ತು. ಹಾಗಾಗಿ, ಯಾವುದೇ ಒಂದು ದೇಶ ಅಲ್ಲಿನ ತೈಲದ ಮೇಲೆ ಹಿಡಿತ ಸಾಧಿಸದಿರುವಂತೆ ನೋಡಿಕೊಳ್ಳುವುದು ಅಮೆರಿಕಾದ ಮೂಲ ಗುರಿಯಾಗಿತ್ತು. ದಿನ ಕಳೆದಂತೆ, ನಿಧಾನವಾಗಿ ಮಧ್ಯ ಏಷಿಯಾವು ಅಮೆರಿಕಾದ ರಾಜಕೀಯದಿಂದ ಹಿನ್ನೆಲೆಗೆ ಸರಿಯಿತು. ಏಕೆಂದರೆ ಯಾವುದೋ ಒಂದು ದೇಶ ಅಲ್ಲಿರುವ ನಿಕ್ಷೇಪಗಳ ಮೇಲೆ ಹಿಡಿತ ಸಾಧಿಸುವ ಪರಿಸ್ಥಿತಿ ನಿರ್ಮಾಣವಾಗಲಿಲ್ಲ ಮತ್ತು ಮುಂದೆಯೂ ನಿರ್ಮಾಣವಾಗುವುದಿಲ್ಲ ಎನ್ನುವುದು ಖಚಿತವಾಗಿತ್ತು. ಆದಕಾರಣ, ಮಧ್ಯ ಏಷಿಯಾ ತೈಲದ ಕಾರಣದಿಂದ ಅಮೆರಿಕಾಕ್ಕೆ ಮುಖ್ಯವೇ ಅಲ್ಲ ಎನ್ನುವ ಸನ್ನಿವೇಶ ನಿರ್ಮಾಣವಾಯಿತು.

ಇಂದು ನಮಗೆ (ಅಮೆರಿಕಾಕ್ಕೆ) ಮಧ್ಯ ಏಷಿಯಾ ಮುಖ್ಯವಾಗಿರುವುದು ತೈಲದ ಕಾರಣಕ್ಕಾಗಿ ಅಲ್ಲ; ಬದಲಿಗೆ ನಮಗೆ ಇಸ್ರೇಲ್‌ ದೇಶದ ಕುರಿತಾಗಿ ಇರುವ ಕಾಳಜಿಯಿಂದಾಗಿದೆ. ಇಸ್ರೇಲ್‌ ಅಮೆರಿಕಾದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ಇಂತಹ ಸಂಬಂಧ ಅಮೆರಿಕಾಕ್ಕೆ ಯಾವುದೇ ದೇಶದೊಂದಿಗೆ ಐತಿಹಾಸಿಕವಾಗಿ ಇರಲಿಲ್ಲ ಎನ್ನುವುದನ್ನು ನೆನಪಿಡಬೇಕಿದೆ. ಮತ್ತು ಅಮೆರಿಕಾ ದೇಶವು ಇಸ್ರೇಲ್‌ ದೇಶಕ್ಕೆ ಷರತ್ತುರಹಿತ ಬೆಂಬಲವನ್ನು ನೀಡುತ್ತಾ ಬಂದಿದೆ. ಹಾಗೆ ನೋಡಿದರೆ, ಅನೇಕ ಸಂದರ್ಭಗಳಲ್ಲಿ ಅಮೆರಿಕಾ ಮತ್ತು ಇಸ್ರೇಲ್‌ಗಳ ರಾಷ್ಟ್ರೀಯ ಹಿತಾಸಕ್ತಿಗಳು ಭಿನ್ನವಾಗಿರುತ್ತವೆ. ಹೀಗಿದ್ದರೂ, ಇಸ್ರೇಲ್‌ನ ರಾಷ್ಟ್ರೀಯ ಹಿತಾಸಕ್ತಿಯ ವಿಷಯ ಮುನ್ನೆಲೆಗೆ ಬಂದಾಗ, ಅದಕ್ಕೆ ಪೂರ್ಣ ಬೆಂಬಲವನ್ನು ನೀಡುವ ವರ್ತನೆಯನ್ನು ಅಮೆರಿಕಾದ ಸರ್ಕಾರ ತೋರುತ್ತಲೇ ಬಂದಿದೆ. ಇಂತಹ ವೇಳೆಯಲ್ಲಿ ಅಮೆರಿಕಾಕ್ಕೆ ತನ್ನ ರಾಷ್ಟ್ರೀಯ ಹಿತಾಸಕ್ತಿಯು ಮುಖ್ಯವೇ ಆಗುವುದಿಲ್ಲ. ಇಂತಹ ಪರಿಸ್ಥಿತಿ ಹೇಗೆ ನಿರ್ಮಾಣವಾಯಿತು? ಇದಕ್ಕೆ ಕಾರಣ, ಇಸ್ರೇಲ್‌ ಹೊಂದಿರುವ ಶಕ್ತಿಶಾಲಿಯಾದ ಲಾಬಿಯಾಗಿದೆ. ಬಹುಶಃ ಇಂದು ಎಲ್ಲರಿಗೂ ಈ ವಿಚಾರ ಅರ್ಥವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಕುರಿತು ನಾನು ಸ್ಟೀವ್‌ ವಾಲ್ಟ್‌ ಜೊತೆಗೂಡಿ 2006ರಷ್ಟು ಹಿಂದೆಯೇ ಲಂಡನ್‌ ‘ರಿವ್ಯೂವ್‌ ಆಫ್‌ ಬುಕ್ಸ್‌’ ನಿಯತಕಾಲಿಕದಲ್ಲಿ ಲೇಖನವನ್ನು ಬರೆದಿದ್ದೆ. ಆಗ ಅನೇಕ ಓದುಗರು ನಾವು ಉತ್ಪ್ರೇಕ್ಷೆ ಮಾಡುತ್ತಿದ್ದೇವೆಂದು ಗ್ರಹಿಸಿದ್ದರು. ಈಗ ಮಧ್ಯ ಏಷಿಯಾ ಕುರಿತಾದ ಅಮೆರಿಕಾದ ವಿದೇಶಾಂಗ ನೀತಿಯು ಇಸ್ರೇಲ್‌ಗೆ ಅನುಕೂಲ ಮಾಡಿಕೊಡುವ ನೀತಿಯಿಂದ ಪ್ರೇರಿತವಾಗುತ್ತದೆ ಎಂದು ಎಲ್ಲರಿಗೂ ಅರ್ಥವಾಗಿದೆಯೆಂದು ನಾನು ಗ್ರಹಿಸುತ್ತೇನೆ. ಇದನ್ನು ಸಾಧಿಸಲು ಇಸ್ರೇಲ್‌ ತೀವ್ರವಾದ ಲಾಬಿಯನ್ನು ಅಮೆರಿಕಾದಲ್ಲಿ ನಿರಂತರ ಮಾಡುತ್ತಾ ಬಂದಿದೆ ಮತ್ತು ಈಗಲೂ ಮಾಡುತ್ತಿದೆ. ಇಸ್ರೇಲ್‌ನ ಗುರಿಯ ಈಡೇರಿಕೆಯೇ ಅಮೆರಿಕಾದ ಮಧ್ಯಏಷಿಯಾದ ಕಾರ್ಯನೀತಿಯಾಗುತ್ತದೆ. ಪರಿಸ್ಥಿತಿ ಹೀಗಿರುವ ಕಾರಣ, ನಾವೀಗ ಇಸ್ರೇಲ್‌ ದೇಶದ ಗುರಿಗಳೇನು ಎನ್ನುವುದನ್ನು ಸ್ವಲ್ಪ ಅರಿಯುವ ಅಗತ್ಯವಿದೆ. ಈ ಗುರಿಗಳ ಈಡೇರಿಕೆಗೆ ಅದು ಅನುಸರಿಸುವ ತಂತ್ರಗಳ ಕಡೆಗೆ ಒಂದಿಷ್ಟು ಗಮನ ನೀಡುವ ಅಗತ್ಯವಿದೆ.

ಒಟ್ಟಾರೆಯಾಗಿ ಇಸ್ರೇಲ್‌ ದೇಶಕ್ಕೆ ಮೂರು ಮುಖ್ಯವಾದ ಗುರಿಗಳಿವೆ. ಒಂದು, ಗ್ರೇಟರ್‌ ಇಸ್ರೇಲ್‌(ತನ್ನ ಗಡಿಯನ್ನು ವಿಸ್ತರಿಸಿಕೊಂಡು ತನ್ನ ಭೂಪ್ರದೇಶವನ್ನು ಹಿಗ್ಗಿಸಿಕೊಳ್ಳುವುದು) ಅನ್ನು ರಚಿಸುವುದು. ಇವರ ಯೋಜನೆಯ ಗ್ರೇಟರ್‌ ಇಸ್ರೇಲ್‌ನಲ್ಲಿ ಅದು ಈಗಾಗಲೇ ಆಕ್ರಮಿಸಿಕೊಂಡಿರುವ ಗಾಜಾ ಪಟ್ಟಿ ಮತ್ತು ವೆಸ್ಟ್‌ ಬ್ಯಾಂಕ್‌ ಪ್ರದೇಶಗಳಿವೆ. ಇಸ್ರೇಲ್‌ನ ಆಕಾಂಕ್ಷೆ ಇಷ್ಟಕ್ಕೆ ಸೀಮಿತವಾಗಿಲ್ಲ. ಅದು ಇನ್ನೂ ದೊಡ್ಡದಾದ ಕನಸನ್ನು ಹೊಂದಿದೆ. ಇಸ್ರೇಲ್‌, ದಕ್ಷಿಣ ಲೆಬಾನಿನಲ್ಲಿರುವ ಲಟಾನಿ ನದಿ ದಂಡೆವರೆಗಿನ ಪ್ರದೇಶವನ್ನು ವಶಪಡಿಸಿಕೊಳ್ಳುವ ಆಸೆಯನ್ನು ಹೊಂದಿದೆ. ಹಾಗೆ ಸಿರಿಯಾದ ದಕ್ಷಿಣ ಭಾಗವನ್ನು ತನ್ನದಾಗಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಅವಕಾಶವಾದರೆ ‘ಪೂರ್ವ ಪಂಕ್‌’ವರೆಗೆ ಇಲ್ಲವೇ ‘ಸಿನಾನಿ’ ಪ್ರದೇಶದವರೆಗೆ ತಮ್ಮ ಗಡಿಯನ್ನು ವಿಸ್ತರಿಸಿಕೊಳ್ಳುವ ಇರಾದೆಯನ್ನು ಇಸ್ರೇಲ್‌ ಹೊಂದಿದೆ. ತಮ್ಮ ಗಡಿಯನ್ನು ವಿಸ್ತರಿಸಿಕೊಳ್ಳುವ ಹಸಿವನ್ನು ಇಸ್ರೇಲ್‌ ಹೊಂದಿದೆ. ಹೀಗಾಗಿ, ಇಸ್ರೇಲ್‌ನ ಮೊದಲ ಗುರಿ ತನ್ನ ಗಡಿಯನ್ನು ಎಷ್ಟು ಸಾಧ್ಯವೋ ಅಷ್ಟು ವಿಸ್ತರಿಸಿಕೊಂಡು ‘ಗ್ರೇಟರ್‌ ಇಸ್ರೇಲ್‌’ ಅನ್ನು ಸ್ಥಾಪಿಸುವುದು.

2026 04 17 israel palestine east jerusalem settlement 2270933862

ಇಸ್ರೇಲ್‌ ದೇಶದ ಎರಡನೆ ಗುರಿ ತನ್ನ ದೇಶದಲ್ಲಿ ಜನಾಂಗೀಯ ಶುದ್ಧತೆಯನ್ನು ಸಾಧಿಸುವುದಾಗಿದೆ. ಜೊತೆಗೆ, ತನ್ನ ವಶಕ್ಕೆ ದೊರೆಯುವ ಪ್ರದೇಶಗಳಲ್ಲಿ ಜನಾಂಗೀಯ ಹತ್ಯೆಯನ್ನು ನಡೆಸಿ, ಅನ್ಯ ಜನಾಂಗದವನ್ನು ಇಲ್ಲವಾಗಿಸುವುದು ಅದರ ಗುರಿಯಾಗಿದೆ.  ಇವತ್ತಿನ ಸನ್ನಿವೇಶದಲ್ಲಿ ನಾವು ಗಾಜಾ ಪಟ್ಟಿ ಮತ್ತು ವೆಸ್ಟ್‌ಬ್ಯಾಂಕ್‌ ಪ್ರದೇಶಗಳಲ್ಲಿ ಮಾತ್ರವೇ ಈ ಕ್ರಿಯೆ ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಇವತ್ತಿನ ಇಸ್ರೇಲ್‌ನಲ್ಲಿ ಯಹೂದಿಗಳು ಮತ್ತು ಯಹೂದಿಗಳೇತರರು ಸಮ ಸಂಖ್ಯೆಯಲ್ಲಿದ್ದಾರೆ. ಇದು ಇಸ್ರೇಲಿಗರಿಗೆ ನುಂಗಲಾರದ ತುತ್ತಾಗಿದೆ. ಅವರು ಶೇಕಡ 20 ಪ್ಯಾಲೆಸ್ತೀನಿಯರನ್ನು ಇರಿಸಿಕೊಳ್ಳಲು ಮಾತ್ರ ಸಿದ್ಧರಿದ್ದಾರೆ. ಆದರೆ ವಾಸ್ತವದಲ್ಲಿ ಅವರು ಅರ್ಧದಷ್ಟಿದ್ದಾರೆ. ಆದರಿದು ಇಸ್ರೇಲಿಗರಿಗೆ ಸ್ವೀಕೃತವಲ್ಲ. ಹಾಗಾಗಿ, ಏನಾದರೂ ಮಾಡಿ ಪ್ಯಾಲೆಸ್ತೀನ್ ಜನಾಂಗವನ್ನು ಅಳಿಸಿಹಾಕಬೇಕೆನ್ನುವ ಕೆಲಸದಲ್ಲಿ ಇಸ್ರೇಲಿಗರು ಯಾವಾಗಲೂ ತೊಡಗಿರುತ್ತಾರೆ.

ಇಸ್ರೇಲಿಗರ ಮೂರನೇ ಗುರಿ ಅವರ ನೆರೆಹೊರೆ ದೇಶಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಎಷ್ಟು ಸಾಧ್ಯವೋ ಅಷ್ಟು ನೆರೆ ದೇಶಗಳನ್ನು ದುರ್ಬಲ ಸ್ಥಿತಿಯಲ್ಲಿರಿಸುವುದು ಇಸ್ರೇಲಿಗರ ಮೂರನೆ ಗುರಿಯ ಮೂಲ ಉದ್ದೇಶವಾಗಿದೆ. ಇದನ್ನು ಸಾಧಿಸಲು ಅವರು ಎರಡು ತಂತ್ರಗಳನ್ನು ಅನುಸರಿಸುತ್ತಾರೆ: ಒಂದು ನೆರೆ ದೇಶಗಳು ಅಮೆರಿಕಾದ ದೇಶದ ಅಧೀನ ದೇಶವಾಗಿರುವಂತೆ ನೋಡಿಕೊಳ್ಳುವುದು. ಈ ಗುಂಪಿನಲ್ಲಿ ಲೆಬನಾನ್‌, ಈಜಿಪ್ಟ್‌ ಮತ್ತು ಜೋರ್ಡಾನ್‌ ದೇಶಗಳಿವೆ. ಇಸ್ರೇಲಿನ ನೆರೆ ದೇಶಗಳು ಅಮೆರಿಕಾದ ಹುಕ್ಕಂ ಅನ್ನು ಪಾಲಿಸುತ್ತಾ, ಅದಕ್ಕೆ ಸದಾಕಾಲ ಅಂಜಿ ಬದುಕುವ ಸ್ಥಿತಿಯಲ್ಲಿರಬೇಕು. ಆದರೆ ಇಂತಹ ಸ್ಥಿತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲದ ದೊಡ್ಡ ದೇಶಗಳಾದ ಸಿರಿಯಾ, ಇರಾನ್‌ ಮತ್ತು ಟರ್ಕಿಯಂತಹ ದೇಶಗಳಲ್ಲಿ ಅರಾಜಕತೆಯನ್ನು ಮೂಡಿಸುವ ಕೆಲಸವನ್ನು ಮಾಡುವುದು ಎರಡನೆ ತಂತ್ರವಾಗಿರುತ್ತದೆ. ಸಿರಿಯಾ ದೇಶವನ್ನು ಹೇಗೆ ಅರಾಜಕತೆಗೆ ದೂಡಿ ಹಾಳುಗಡೆವಿದರೋ, ಅದೇ ಮಾದರಿಯಲ್ಲಿ ಇರಾನ್‌ ದೇಶವನ್ನು ಹಾಳುಗೆಡುವ ಗುರಿಯನ್ನು ಇಸ್ರೇಲಿಗರು ಹೊಂದಿದ್ದಾರೆ. ಹೀಗಾಗಿ ಇಸ್ರೇಲಿಗರಿಗೆ ಇರಾನ್‌ ದೇಶ ಅರಾಜಕತೆಗೆ ಒಳಗಾಗಿ ಸಣ್ಣ ಸಣ್ಣ ತುಂಡುಗಳಾಗಿ ವಿಭಜನೆಗೆ ಒಳಪಡಬೇಕೆಂಬ ಮಹದಾಸೆಯಿದೆ. ಒಂದು ವೇಳೆ ಇದನ್ನು ಸಾಧಿಸಲು ಸಾಧ್ಯವಾಗದಿದ್ದಲ್ಲಿ, ಆಳುವ ವರ್ಗವನ್ನೇ ಬದಲಿಸುವ ಉದ್ದೇಶವಿದೆ. ಹೀಗೆ ಬದಲಾಗುವ ಆಡಳಿತ ಅಮೆರಿಕಾ ದೇಶಕ್ಕೆ ಅಡಿಯಾಳಗಿರುವ ಸ್ಥಿತಿ ನಿರ್ಮಾಣವಾಗುವುದು ಅದರ ನಿರೀಕ್ಷೆಯಾಗಿದೆ.

ಇಸ್ರೇಲ್‌ ದೇಶ ಹೊಂದಿರುವ ಈ ಮೂರು ಮುಖ್ಯ ಗುರಿಗಳ ಹಿನ್ನೆಲೆಯಲ್ಲಿ ಗಾಜಾ ಪಟ್ಟಿಯಲ್ಲಿಂದು ನಡೆಯುತ್ತಿರುವ ಜನಾಂಗೀಯ ಹತ್ಯೆಯನ್ನು ಅರ್ಥಮಾಡಿಕೊಳ್ಳಬೇಕಿದೆ. ಗಾಜಾ ಪಟ್ಟಿಯಲ್ಲಿ ಸಂಭವಿಸುತ್ತಿರುವ ಜನಾಂಗೀಯ ಹತ್ಯೆ ಕೃತ್ಯ ಇಸ್ರೇಲ್‌ ತನ್ನ ಮೂರು ಗುರಿಗಳಲ್ಲಿ ಮೊದಲೆರಡು ಗುರಿಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ನಡೆಸುತ್ತಿರುವ ಕಾರ್ಯವಾಗಿದೆ. ತಾನು ರಚಿಸಲು ಉದ್ದೇಶಿಸಿರುವ ಗ್ರೇಟರ್‌ ಇಸ್ರೇಲ್‌ನಲ್ಲಿ ಅನ್ಯ ಜನಾಂಗದವರು ಇರಬಾರದೆಂಬ ನಿಲುವಿನ ಪರಿಣಾಮ ಜನಾಂಗೀಯ ಹತ್ಯೆ ಸಂಭವಿಸುತ್ತಿದೆ. ಗಾಜಾ ಮೇಲಿನ ಹಿಂಸಾಕೃತ್ಯ ಮೊದಲೆರಡು ಗುರಿಗಳ ಫಲವಾದರೆ, ಇರಾನ್‌ ಮೇಲಿನ ಯುದ್ಧ ಮೂರನೆ ಗುರಿಯ ಪ್ರತಿಫಲವಾಗಿದೆ- ಇರಾನ್‌ ಅನ್ನು ತುಂಡರಿಸಬೇಕು ಇಲ್ಲವಾದಲ್ಲಿ ಅದರ ಆಡಳಿತವನ್ನು ಬದಲಿಸಬೇಕೆನ್ನುವುದು. ಹಾಗೆ ಲೆಬನಾನ್‌ನ ವಿಷಯ– ಇಸ್ರೇಲ್‌ನ ಮೊದಲೆರಡು ಗುರಿಗಳ ಜಾರಿ ಉದಾಹರಣೆಯಾಗಿದೆ. ಮೊದಲಿಗೆ ಲೆಬನಾನ್‌ ದೇಶದ ದಕ್ಷಿಣದ ಪ್ರದೇಶವನ್ನು ಆಕ್ರಮಿಸಿಕೊಳ್ಳುಬೇಕು; ಆನಂತರ ಅಲ್ಲಿರುವ ಅನ್ಯ ಜನಾಂಗದವರ ಕಗ್ಗೊಲೆ ನಡೆಸುವುದು. ಈ ಗುರಿಯನ್ನು ಶತಾಯಗತಾಯ ಸಾಧಿಸಲು ಇಸ್ರೇಲ್‌ ಲೆಬನಾನ್‌ ಮೇಲೆ ಈಗ ನಡೆಸುತ್ತಿರುವ ದಾಳಿಯನ್ನು ಗಮನಿಸಬೇಕಿದೆ.

ಬಹುಶಃ, ಎಲ್ಲರಿಗೂ ಒಟ್ಟಾರೆ ಪರಿಸ್ಥಿತಿಯ ಸ್ಥೂಲ ಚಿತ್ರಣ ದೊರೆತಿದೆ ಎಂದು ಭಾವಿಸುತ್ತೇನೆ. ಹಾಗೆ ಇರಾನ್‌ ವಿಚಾರಕ್ಕೆ ಪ್ರವೇಶಿಸುವ ಮೊದಲು, ಇನ್ನೂ ಒಂದೆರಡು ವಿಚಾರಗಳನ್ನು ಗಾಜಾ ವಿಚಾರವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುವುದಿದೆ. 2023ರ ಅಕ್ಟೋಬರ್‌ 7ಕ್ಕೆ ಮೊದಲು ಎರಡು ಬಾರಿ (1948 ಮತ್ತು 1967) ಜನಾಂಗೀಯ ಶುದ್ಧತೆಯನ್ನು ಸಾಧಿಸುವ ಕೆಲಸಕ್ಕೆ ಇಸ್ರೇಲ್‌ ಕೈಹಾಕಿತ್ತು. ಈ ಎರಡೂ ಸಂದರ್ಭಗಳಲ್ಲಿ ಯುದ್ಧ ಜಾರಿಯಲ್ಲಿತ್ತು. ಅಕ್ಟೋಬರ್‌ 7ರ ನಂತರವೂ ಇದನ್ನೆ ನಾವು ಕಾಣುತ್ತೇವೆ. ಯುದ್ಧ ಆರಂಭವಾಗಿತ್ತು. ಯುದ್ಧದ ನೆಪದಲ್ಲಿ ತಮ್ಮ ಇಷ್ಟದ ಜನಾಂಗೀಯ ಶುದ್ಧತೆಯನ್ನು ಸಾಧಿಸುವ ಅಪೂರ್ವವಾದ ಅವಕಾಶ ಇಸ್ರೇಲಿಗರಿಗೆ ದೊರೆಯಿತು. ಯುದ್ಧದ ನೆಪದಲ್ಲಿ ತನ್ನ ಅಗಾಧವಾದ ಮಿಲಿಟರಿ ಶಕ್ತಿಯ (ಅದರಲ್ಲೂ ಮುಖ್ಯವಾಗಿ ತನ್ನ ವಾಯುದಳದ ಶಕ್ತಿ) ಬಳಕೆ ಮಾಡಿಕೊಂಡು ಪ್ಯಾಲೆಸ್ತೀನರಿಗೆ ಅಪಾರವಾದ ಪ್ರಮಾಣದಲ್ಲಿ ಶಿಕ್ಷಿಸುವುದು. ‘ಇನ್ನು ತಡೆಯಲು ಸಾಧ್ಯವಿಲ್ಲವಪ್ಪಾ’ ಎನ್ನುತ್ತಾ ಪ್ಯಾಲೆಸ್ತೀನರು ಗಾಜಾ ಪಟ್ಟಿಯನ್ನು ತೊರೆದು ಹೊರಡಬೇಕಷ್ಟೆ. ಪ್ಯಾಲೆಸ್ತೀನರ ಮೇಲೆ ನಡೆಯುತ್ತಿರುವ ದಾಳಿಯ ತೀವ್ರತೆಯನ್ನು ಕಂಡು ಈಜಿಪ್ಟ್‌ ಮತ್ತು ಜೋರ್ಡಾನ್‌ ದೇಶಗಳು ‘ಅಯ್ಯೋ ಪಾಪ’ ಎನ್ನುತ್ತಾ ಅವರನ್ನು ತಮ್ಮ ದೇಶದೊಳಗೆ ಬರಲು ಅವಕಾಶ ಕೊಡುವಂತಾಗಲಿ ಎನ್ನುವ ನಿರೀಕ್ಷೆ ಅವರದ್ದು. ಆದರೆ ಪ್ಯಾಲೆಸ್ತೀನರು ಜಗ್ಗಲಿಲ್ಲ. ಅವರು ಇಸ್ರೇಲ್‌ ನೀಡಿದ ಎಲ್ಲಾ ಶಿಕ್ಷೆಯನ್ನು ಹಲ್ಲು ಕಚ್ಚಿಕೊಂಡು ಸ್ವೀಕರಿಸಿದರು. ಇದರಿಂದ ಕೆರಳಿದ ಇಸ್ರೇಲ್‌ ಜಾಗ ತೊರೆಯಲು ನಿರಾಕರಿಸಿದ ಪ್ಯಾಲೆಸ್ತೀನರನ್ನು ಸಾಮೂಹಿಕವಾಗಿ ಕೊಲ್ಲಲು ಮುಂದಾಯಿತು. ಒಂದೆಡೆ ಬಾಂಬುಗಳ ಸುರಿಮಳೆಯ ಮೂಲಕ ಕೊಲ್ಲುವುದಾದರೆ; ಇನ್ನೊಂದೆಡೆ ಕೃತಕವಾದ ಹಸಿವನ್ನು ಸೃಷ್ಟಿಸುವ ಮೂಲಕ ಅವರನ್ನು ಕೊಲ್ಲುವುದು. ಇವೆರಡೂ ಈಗ ಗಾಜಾ ಪಟ್ಟಿಯಲ್ಲಿ ನಡೆಯುತ್ತಿವೆ ತಾನೇ? ಹಾಗಾಗಿ ಇಂದು ಗಾಜಾದಲ್ಲಿ ನಡೆಯುತ್ತಿರುವುದು ಜನಾಂಗೀಯ ಕಗ್ಗೊಲೆ(ಜನೋಸೈಡ್‌) ಎನ್ನುವುದು ನನ್ನ ಖಚಿತವಾದ ನಿಲುವಾಗಿದೆ.

2026 04 17T130739Z 694703284 RC2WQKAOV54X RTRMADP 3 IRAN CRISIS LEBANON ISRAEL 1024x683 1
‘ಇನ್ನು ತಡೆಯಲು ಸಾಧ್ಯವಿಲ್ಲವಪ್ಪಾ’ ಎನ್ನುತ್ತಾ ಪ್ಯಾಲೆಸ್ತೀನರು ಗಾಜಾ ಪಟ್ಟಿಯನ್ನು ತೊರೆದು ಹೊರಡಬೇಕು…

ಈ ಕುರಿತು ಮತ್ತೊಂದು ಅಂಶವನ್ನು ಚರ್ಚಿಸಲು ಇಚ್ಛಿಸುತ್ತೇನೆ. ಗಾಜಾದಲ್ಲಿ ನಡೆಯುತ್ತಿರುವ ಜನಾಂಗೀಯ ಕಗ್ಗೊಲೆಯ ಕುರಿತು ಉದಾರವಾದಿಗಳ ಪ್ರತಿಕ್ರಿಯೆ ನನ್ನ ನಿಜಕ್ಕೂ ದಂಗುಬಡಿಸುತ್ತೆನ್ನುವುದನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ನನ್ನ ಶೈಕ್ಷಣಿಕ ಜೀವನದ ಆರಂಭದಿಂದಲೂ ವಾಸ್ತವವಾದಿಯಾದ ನನಗೆ ಉದಾರವಾದಿಗಳು ಈ ವಿಚಾರದಲ್ಲಿ ತೆಗೆದುಕೊಂಡ ನಿಲುವನ್ನು ಕಂಡು ಬರೀ ಅಚ್ಚರಿ ಮಾತ್ರವಲ್ಲ, ಆಘಾತವೂ ಆಯಿತು. ಮಾನವ ಹಕ್ಕುಗಳಲ್ಲಿ ಆಳವಾದ ನಂಬಿಕೆಯನ್ನು ಮತ್ತು ಅವುಗಳ ರಕ್ಷಣೆ ಕುರಿತು ಓತಪ್ರೋತವಾಗಿ ಮಾತನಾಡುತ್ತಿದ್ದ ಉದಾರವಾದಿಗಳು ಪೂರ್ಣವಾಗಿ ಮೌನಕ್ಕೆ ಶರಣಾದರು. ಇಸ್ರೇಲ್‌ ಜನಾಂಗೀಯ ಹತ್ಯೆಗೆ ಮುಂದಾಗಿದ್ದು ನನ್ನಲ್ಲಿ ಆಘಾತವನ್ನುಂಟು ಮಾಡಲಿಲ್ಲ. ಬದಲಿಗೆ ಉದಾರವಾದಿಗಳ ಮೌನ ನನ್ನಲ್ಲಿ ಆಘಾತವನ್ನುಂಟು ಮಾಡಿತು. ಅದರಲ್ಲೂ ಮುಖ್ಯವಾಗಿ ಅಮೆರಿಕಾ ದೇಶದ ಈ ಜನಾಂಗೀಯ ಹತ್ಯೆಯನ್ನು ಖಂಡಿಸದೇ ಅದರ ಭಾಗವಾಗಿದ್ದು ನನ್ನಲ್ಲಿನ ಆತಂಕ ಮತ್ತು ಆಘಾತವನ್ನು ಇನ್ನಷ್ಟು ಹೆಚ್ಚಿಸಿತು. ಅಮೆರಿಕಾ ಈ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದೆ ಎನ್ನುವುದರಲ್ಲಿ ಯಾರಿಗೂ ಸಂಶಯವೇ ಬೇಡ. ಒಂದು ವೇಳೆ ನೂರಂಬರ್ಗ್‌ನ ರೀತಿಯ ವಿಚಾರಣೆಯನ್ನು (ಎರಡನೇ ಮಹಾ ಯುದ್ಧದಲ್ಲಿ ಹಿಟ್ಲರ್‌ನ ಆಜ್ಞಾನುಸಾರ ಯಹೂದಿಗಳ ಕಗ್ಗೊಲೆಯನ್ನು ನಡೆಸಿದ್ದ ಜರ್ಮನ್‌ ಸೈನ್ಯದ ಅಧಿಕಾರಿಗಳು ಮತ್ತಿತರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆಯ ನಂತರ ಅವರಿಗೆ ಮರಣದಂಡನೆ ಶಿಕ್ಷೆಯನ್ನು ನೀಡಲಾಗಿತ್ತು) ಆರಂಭಿಸಿದಲ್ಲಿ, ಜೋ ಬೈಡನ್‌ ಮತ್ತು ಅವರ ಆಜ್ಞಾನುವರ್ತಿಗಳಿಗೆ ಮರಣದಂಡನೆ ಶಿಕ್ಷೆ ನೀಡಬೇಕಾಗುತ್ತದೆ. ಈ ಕುರಿತಾಗಿ ನನ್ನಲ್ಲಿ ಯಾವುದೇ ಸಂಶಯಕ್ಕೆ ಅವಕಾಶವೇ ಇಲ್ಲ. 1941 ಮತ್ತು 1945ರ ನಡುವೆ ಯೂರೋಪಿನಲ್ಲಿ ನಡೆದದ್ದು ಜನಾಂಗೀಯ ಹತ್ಯೆಯೇ ಆಗಿತ್ತು. ಅದೇ ರೀತಿಯಲ್ಲಿ ಗಾಜಾ ಪಟ್ಟಿಯಲ್ಲಿ ಈಗ ನಡೆಯುತ್ತಿರುವುದು ಸಹಾ ಜನಾಂಗೀಯ ಹತ್ಯೆಯೇ ಆಗಿದೆ. ನೂರಂಬರ್ಗ್‌ ವಿಚಾರಣೆಯಲ್ಲಿ ನೀಡಲಾದ ಶಿಕ್ಷೆಯನ್ನೇ ಟ್ರಂಪ್‌ ಮತ್ತು ಬೈಡನ್‌ ಇಬ್ಬರಿಗೂ ನೀಡುವ ಅನಿವಾರ್ಯತೆಯಿರುತ್ತದೆ. ಇಷ್ಟೆಲ್ಲಾ ಇತಿಹಾಸವಿದ್ದರೂ ಮತ್ತು ಹಿನ್ನೆಲೆಯಿದ್ದರೂ, ಅಮೆರಿಕದ ಉದಾರವಾದಿಗಳು ಮಾತನ್ನೇ ಆಡದೇ ಮೌನದಿಂದಿರುವುದು ಆಘಾತಕಾರಿ ವಿಚಾರವಾಗಿದೆ. ಇಸ್ರೇಲ್‌ ನಡೆಸುತ್ತಿರುವ ಜನಾಂಗೀಯ ಹತ್ಯೆಗೆ ಅಮೆರಿಕಾ ದೇಶ ತನ್ನ ಬೆಂಬಲವನ್ನು ನೀಡುತ್ತಿದೆ. ಜನಾಂಗೀಯ ಹತ್ಯೆಗಿಂತ ಹೀನವಾದ ಅಪರಾಧ ಮತ್ತೊಂದಿಲ್ಲ. ಇಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ ಎಂದಾದಲ್ಲಿ, ಎಲ್ಲೋ ಒಂದು ಕಡೆ ದೊಡ್ಡ ತಪ್ಪಾಗುತ್ತಿದೆ ಎಂದರ್ಥ. ನನ್ನಂತಹ ವಾಸ್ತವವಾದಿ ಶೈಕ್ಷಣಿಕ ತಜ್ಞ ಈ ಮಾತುಗಳನ್ನು ಬಹಿರಂಗವಾಗಿ ಹೇಳುತ್ತಿದ್ದೇನೆ ಎಂದರೆ, ಈ ಜನಾಂಗೀಯ ಹತ್ಯೆಯನ್ನು ನಿಲ್ಲಿಸುವ ತುರ್ತು ಅಗತ್ಯವಿದೆ ಎಂದರ್ಥ.

ಇದನ್ನು ಓದಿದ್ದೀರಾ?: ಪಾಕ್ ಜೊತೆ ಮಾತುಕತೆಗೆ ಇರಾನ್ ನಕಾರ: ಕದನ ವಿರಾಮಕ್ಕೆ ಅನಿಶ್ಚಿತತೆ; ತೈಲ ಬೆಲೆ ಭಾರಿ ಏರಿಕೆ

ಇನ್ನು ಇರಾನ್‌ ವಿಚಾರಕ್ಕೆ ಬರೋಣ. ಇರಾನ್‌ ಮೇಲೆ ಅಮೆರಿಕಾ ಯುದ್ಧ ಮಾಡಲು ಹೊರಟ ಕಾರಣದೊಂದಿಗೆ ಚರ್ಚೆಯನ್ನು ಆರಂಭಿಸೋಣ. ಇಸ್ರೇಲಿಗರು ಟ್ರಂಪ್‌ಗೆ ಮೋಸ ಮಾಡಿದ ಪರಿಣಾಮವಾಗಿ ಈ ಯುದ್ಧ ಆರಂಭಿಸಲಾಯಿತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅಮೆರಿಕಾ ದೇಶದ ‘ಡೀಪ್‌ ಸ್ಟೇಟ್‌’ಗೆ (ಅಮೆರಿಕಾದ ಸಿಐಎ, ಎಫ್‌ಬಿಐ, ಮುಂತಾದ ಸಂಸ್ಥೆಗಳು ಮತ್ತು ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆಗಳ ಒಟ್ಟು ವ್ಯವಸ್ಥೆಯನ್ನು ಡೀಪ್‌ ಸ್ಟೇಟ್‌ ಎನ್ನುತ್ತಾರೆ) ಈ ಯುದ್ಧವನ್ನು ಆರಂಭಿಸುವುದು ಬೇಕಿರಲಿಲ್ಲ. ಈ ಡೀಪ್‌ಸ್ಟೇಟ್‌ನ ಒಂದಿಬ್ಬರು ಸದಸ್ಯರು ನನಗೆ ಪರಿಚಿತರಿರುವ ಕಾರಣ, ಈ ಕುರಿತು ನಾನು ಖಚಿತವಾಗಿ ಹೇಳಬಲ್ಲೆ. ಹಾಗೆ ಇಸ್ರೇಲ್‌ ಪ್ರಧಾನಿಯಾಗಿರುವ ನೇತನ್ಯಾಹು ಅವರನ್ನು ಕಳೆದ ನಲವತ್ತು ವರ್ಷಗಳಿಂದ ನೋಡಿದವರಾಗಿ ಇರಾನ್‌ ಮೇಲೆ ಅಮೆರಿಕಾದ ಬೆಂಬಲದೊಂದಿಗೆ ಯುದ್ಧ ಮಾಡುವುದು ಅವರ ದೀರ್ಘಕಾಲದ ಕನಸಾಗಿತ್ತು ಎನ್ನುವುದು ಸಹ ನಮಗೆ ಗೊತ್ತಿದೆ. ನೇತನ್ಯಾಹುಗೆ ಯುದ್ಧದ ಮೂಲಕ ಈಗಿರುವ ಇರಾನ್‌ ಸರ್ಕಾರವನ್ನು ತೊಲಗಿಸಿ, ಅದರ ಜಾಗದಲ್ಲಿ ಅಮೆರಿಕಾದ ತಾಳಕ್ಕೆ ತಕ್ಕಂತೆ ಕುಣಿಯುವ ಸರ್ಕಾರವನ್ನು ಸ್ಥಾಪಿಸಬೇಕೆಂಬ ಗುರಿ ಮೊದಲಿಂದಲೂ ಇದ್ದೇ ಇತ್ತು. ಆದಕಾರಣ ಟ್ರಂಪ್‌ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ, ನೇತನ್ಯಾಹು ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಮುಂದುವರಿಸಿದ್ದರು ಎನ್ನವುದಂತು ಸುಸ್ಪಷ್ಟವಾಗಿದೆ. ಹಾಗೆ, ಯುದ್ಧ ನಿರ್ಧಾರ ತೆಗೆದುಕೊಂಡ ರೀತಿ-ನೀತಿಯ ಕುರಿತು ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆ ಈಗಾಗಲೇ ಎರಡು ಅಗ್ರ ಲೇಖನಗಳನ್ನು ಪ್ರಕಟಿಸಿದೆ. ಈ ಪ್ರಕಟವಾದ ಲೇಖನಗಳು ಡೀಪ್‌ ಸ್ಟೇಟ್‌ಗೆ ಯುದ್ಧ ನಡೆಯುವುದು ಬೇಕಿರಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಅಮೆರಿಕಾ ಸರ್ಕಾರದ ಎಲ್ಲಾ ಉನ್ನತ ಅಧಿಕಾರಿಗಳು ‘ಈ ಯುದ್ಧ ಹೂಡುವುದು ಸರಿಯಾದ ಕ್ರಮವಲ್ಲ’ ಎನ್ನುವ ಸಲಹೆಯನ್ನು ಟ್ರಂಪ್‌ಗೆ ನೀಡಿದ್ದರು. ಅದರಲ್ಲೂ ಮುಖ್ಯವಾಗಿ ಜನರಲ್‌ ಕೈನ್‌ ಅವರು ‘ಉದ್ದೇಶಿತ ಗುರಿಯನ್ನು ಸಾಧಿಸಲು ಅಗತ್ಯವಿರುವ ಮಿಲಿಟರಿ ತಂತ್ರ ನಮ್ಮಲ್ಲಿ ಇಲ್ಲ’ ಎಂದು ನೇರವಾಗಿ ಹೇಳಿದ್ದರು. ಜೊತೆಗೆ, ನ್ಯಾಷನಲ್‌ ಇಂಟಲಿಜೆನ್ಸ್‌ ಕೌನ್ಸಿಲ್‌ ಈ ಯುದ್ಧ ಯಾವುದೇ ಪ್ರತಿಫಲವನ್ನು ನೀಡುವುದಿಲ್ಲ ಎನ್ನುವ ವರದಿಯನ್ನು ಕೂಡ ನೀಡಿತ್ತು.

ಹೀಗಿದ್ದರೂ, ಟ್ರಂಪ್‌ ಯುದ್ಧದ ನಿರ್ಧಾರವನ್ನು ಕೈಗೊಂಡರು. ಅದು ಹೇಗೆ ಸಾಧ್ಯವಾಯಿತು? ಹೇಗೆಂದರೆ, ಮೊಸಾದ್‌ (ಇಸ್ರೇಲ್‌ನ ಗೂಢಚಾರ ಸಂಸ್ಥೆ) ಟ್ರಂಪ್‌ನ್ನು ಒಪ್ಪಿಸುವ ಕೆಲಸವನ್ನು ಮಾಡಿತು. ಇದೊಂದು ಅಲ್ಪಕಾಲ ನಡೆಯುವ, ಆದರೆ ಖಚಿತವಾದ ಫಲಿತಾಂಶವನ್ನು ನೀಡುವ ಯುದ್ಧವೆಂದು ಮೊಸಾದ್‌ ಮನವರಿಕೆ ಮಾಡಿಕೊಟ್ಟಿತ್ತು. ಮುಂದಿನ ಕಥೆ ನಿಮಗೆ ತಿಳಿದೇ ಇದೆ. ತೀವ್ರವಾದ ದಾಳಿಯ ಮೂಲಕ ಗಾಬರಿ ಮೂಡಿಸುವ ತಂತ್ರವನ್ನು ಅಳವಡಿಸಿಕೊಂಡು (shock and awe) ಯುದ್ಧವನ್ನು ಆರಂಭಿಸಲಾಯಿತು. ಅದರಲ್ಲೂ ಮುಖ್ಯವಾಗಿ ಖಮೇನಿಯನ್ನು ಕೊಲ್ಲುವ ಮೂಲಕ ಸರ್ಕಾರವನ್ನು ಇಲ್ಲವಾಗಿಸುವ ಕಾರ್ಯಕ್ಕೆ ಮುಂದಾಗಲಾಯಿತು. ಒಮ್ಮೆ ಮುಖ್ಯಸ್ಥರನ್ನು ಕೊಂದರೆ (ಖಮೇನಿ) ಇಡೀ ಆಡಳಿತ ವ್ಯವಸ್ಥೆ ತರಗೆಲೆಯಂತೆ ಉದುರಿ ಹೋಗಿ ಇಲ್ಲವಾಗುತ್ತದೆಂಬ ನಿರೀಕ್ಷೆಯನ್ನು ಮಾಡಲಾಗಿತ್ತು. ಖಮೇನಿ ನೇತೃತ್ವದ ಆಡಳಿತದ ತಳಹದಿ ದುರ್ಬಲವಾಗಿದ್ದು, ಒಮ್ಮೆ ಆಡಳಿತದ ಪ್ರಮುಖರನ್ನು ಕೊಂದುಹಾಕಿದರೆ, ಜನರು ರೊಚ್ಚಿಗೆದ್ದು ಬೀದಿಗಿಳಿಯುತ್ತಾರೆ; ತನ್ಮೂಲಕ ಸರ್ಕಾರದ ಬದಲಾವಣೆಗೆ ದಾರಿಯಾಗುತ್ತದೆಂಬ ಲೆಕ್ಕಾಚಾರವನ್ನು ಮಾಡಲಾಗಿತ್ತು. ಬದಲಾದ ಸರ್ಕಾರವು ಅಮೆರಿಕಾದ ಹಿಂಬಾಲಕ ಸರ್ಕಾರವಾಗಲಿದೆ ಎನ್ನುವುದನ್ನು ಮೊಸಾದ್‌ನ ಮುಖ್ಯಸ್ಥರಾದ ಡೇವಿಡ್‌ ಬಾರರ್‌ ಮತ್ತು ಇಸ್ರೇಲ್‌ ಪ್ರಧಾನಿ ನೇತನ್ಯಾಹು ಇಬ್ಬರು ಸೇರಿ ಟ್ರಂಪ್‌ಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು. ‘ದಿಢೀರ್‌ ದಾಳಿ ತನ್ಮೂಲಕ ಗಾಬರಿ ಸೃಷ್ಟಿಸುವ ತಂತ್ರವು’ ನಿರೀಕ್ಷಿತ ಪರಿಣಾಮವನ್ನು ನೀಡುವುದಾಗಿ, ಖಮೇನಿ ಸರ್ಕಾರ ಬೀಳುತ್ತಿದ್ದಂತೆ, ಬದಲಿ ಸರ್ಕಾರ ರಚಿಸುವುದು ಕಷ್ಟಕರ ಕಾರ್ಯವಾಗುವುದಿಲ್ಲ ಎನ್ನುವ ಅಂದಾಜು ಮಾಡಲಾಗಿತ್ತು.

ಆದರೆ ಇದುವರೆಗಿನ ಅಧ್ಯಯನಗಳ ಪ್ರಕಾರ ಈ ‘ದಿಢೀರ್‌ ದಾಳಿ ಮೂಲಕ ಗಾಬರಿ ಸೃಷ್ಟಿಸುವ’ ತಂತ್ರ ಸೋತಲ್ಲಿ ದೀರ್ಘಕಾಲದ ಯುದ್ಧಕ್ಕೆ (ವಾರ್‌ ಆಫ್‌ ಅಟ್ರೀಷನ್‌) ದಾರಿಯಾಗುತ್ತದೆ ಎನ್ನುವ ಸ್ಪಷ್ಟವಾದ ಅರಿವು ನಮಗೆ ದೊರೆತಿದೆ. ಇರಾನ್‌ ಪ್ರಕರಣದಲ್ಲಿ ನಡೆದದ್ದು ಇದೇ. ನಾವೀಗ ದೀರ್ಘಕಾಲದ ಯುದ್ಧವಾದ ‘ಎದುರಾಳಿಯನ್ನು ದುರ್ಬಲಗೊಳಿಸುವ’ ಯುದ್ಧದಲ್ಲಿ ತೊಡಗಿದ್ದೇವೆ. ಈ ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ಯುದ್ಧದಲ್ಲಿ ಗೆಲುವು ಎನ್ನುವುದು ಸಾಧ್ಯವಿಲ್ಲ(ವಾರ್‌ ಆಫ್‌ ಅಟ್ರೀಷನ್‌- ದೀರ್ಘಕಾಲದವರೆಗೆ ಎದುರಾಳಿಗೆ ಹೆಚ್ಚಿನ ಸಾವು ನೋವು ನಷ್ಟಗಳನ್ನು ಉಂಟು ಮಾಡುವ ಗುರಿಯನ್ನು ಹೊಂದಿರುವ ಯುದ್ಧ ಇದಾಗಿರುತ್ತದೆ. ಇಲ್ಲಿ ಗೆಲ್ಲುವ – ಸೋಲುವ ಪ್ರಶ್ನೆಗಿಂತ ಎದುರಾಳಿಗೆ ಹೆಚ್ಚಿನ ನಷ್ಟವನ್ನು ಉಂಟು ಮಾಡುವ ಉದ್ದೇಶ ಮುಖ್ಯವಾಗುತ್ತದೆ).

2025 07 04t084507z 877350946 rc2iffaijr1b rtrmadp 3 israel palestinians gaza
ಗಾಜಾ ಸ್ಥಿತಿ…

ಈಗ ನಡೆಯುತ್ತಿರುವ ಇರಾನ್ ಯುದ್ಧವು ‘ವಾರ್‌ ಆಫ್‌ ಅಟ್ರೀಷನ್‌’ ಯುದ್ಧವೆಂದು ಸಾಬೀತುಪಡಿಸಲು ನಾನು ನಿಮಗೆ ಆರು ಅಂಶಗಳನ್ನು ನೀಡುತ್ತೇನೆ. ಟ್ರಂಪ್‌ ಅಮೆರಿಕಾದ ಪ್ರಬಲವಾದ ನೌಕಾದಳದ ಸಹಾಯದೊಂದಿಗೆ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಸುವ ಮಾತುಗಳನ್ನು ಆಡುತ್ತಿರುವುದನ್ನು ಗಮನಿಸಿರಿ. ಅಮೆರಿಕಾದ ನೌಕಾದಳವನ್ನು ಇರಾನ್‌ ಸಮೀಪಕ್ಕೆ ಒಯ್ಯುವುದು ಕೂಡ ಅಸಾಧ್ಯವಾದ ಮಾತು. ಯಾವುದೇ ಹಡಗು ಹಾರ್ಮುಜ್ ಜಲಸಂಧಿಯ ಸಮೀಪ ತಲುಪಿದ ಕ್ಷಣಾರ್ಧದಲ್ಲಿ ಇರಾನ್‌ನ ಡ್ರೋನ್‌ ಇಲ್ಲವೇ ಕ್ಷಿಪಣಿ ದಾಳಿಗೆ ಸಿಲುಕಿ ಅದು ಸಮುದ್ರದ ತಳವನ್ನು ಸೇರುತ್ತದೆ. ಈ ಕಾರಣದಿಂದ ಅಮೆರಿಕಾದ ನೌಕಾದಳ ಇರಾನ್‌ನಿಂದ ಸಹ್ರಸಾರು ಮೈಲಿ ದೂರದಲ್ಲಿ ನಿಂತಿದೆ! ಮಧ್ಯ ಏಷಿಯಾದಲ್ಲಿ ಅಮೆರಿಕಾ ಸೇನೆಯ ಹದಿಮೂರು ನೆಲೆಗಳಿದ್ದವು. ‘ನ್ಯೂಯಾರ್ಕ್‌ ಟೈಮ್ಸ್‌’ನ ವರದಿ ಪ್ರಕಾರ, ಆ ಎಲ್ಲಾ ಹದಿಮೂರು ಸೇನಾನೆಲೆಗಳು ತೀವ್ರವಾದ ದಾಳಿಗೆ ಒಳಗಾಗಿ ನಿಷ್ಪ್ರಯೋಜಕವಾಗಿವೆ. 

ಇನ್ನು ‘ಭೂ ದಾಳಿಯ’ ವಿಚಾರಕ್ಕೆ ಬರೋಣ. ಮೀಡಿಯಾಗಳ ಪ್ರಕಾರ ನಲವತ್ತರಿಂದ ಐವತ್ತು ಸಾವಿರ ಅಮೆರಿಕನ್‌ ಸೈನಿಕರು ಮಧ್ಯ ಏಷಿಯಾವನ್ನು ತಲುಪಿದ್ದು, ಇರಾನ್‌ ಮೇಲೆ ಭೂ ದಾಳಿಗೆ ಸಿದ್ಧರಾಗಿದ್ದಾರೆ. ಇದು ಸತ್ಯವಲ್ಲ. ಇರಾನ್‌ನಂತಹ ವಿಶಾಲವಾದ ದೇಶದ ಮೇಲೆ ಭೂ ದಾಳಿ ನಡೆಸಲು ಬೃಹತ್‌ ಪ್ರಮಾಣದಲ್ಲಿ ಸೈನಿಕರ ಅಗತ್ಯವಿರುತ್ತದೆ. ಟ್ರಂಪ್‌ ಇತ್ತೀಚೆಗೆ ಸುಮಾರು ಏಳು ಸಾವಿರ ಸೈನಿಕರನ್ನು ಈ ಪ್ರದೇಶಕ್ಕೆ ರವಾನಿಸಿದ್ದಾರೆ. ಏಳು ಸಾವಿರ ಸೈನಿಕರ ಮೂಲಕ ಏನು ಮಾಡಲು ಸಾಧ್ಯವಿದೆ? ಏನೇನೂ ಸಾಧ್ಯವಿಲ್ಲ. ವಿಯಟ್ನಾಂ ಯುದ್ಧದ ತರುವಾಯ ಮೊದಲ ಬಾರಿಗೆ ಅಮೆರಿಕ ಸೇನೆ ಗಣನೀಯ ಸಂಖ್ಯೆಯಲ್ಲಿ ಯುದ್ಧ ವಿಮಾನಗಳನ್ನು ಇರಾನ್‌ ಯುದ್ಧದಲ್ಲಿ ಕಳೆದುಕೊಂಡಿತು ಎನ್ನುವುದು ನಿಮಗೆ ಗೊತ್ತೆ? ಯುದ್ಧ ವಿಮಾನದ ಪೈಲಟ್‌ಗಳನ್ನು ರಕ್ಷಿಸಿ ತರಲು ನಡೆಸಲಾದ ಕಾರ್ಯಾಚರಣೆಯಲ್ಲಿ ಎಷ್ಟು ವಿಮಾನಗಳನ್ನು ಅಮೆರಿಕಾ ಕಳೆದುಕೊಂಡಿತು ಎಂಬುದು ನಿಮಗೆ ತಿಳಿದಿದೆಯೇ? ಜೊತೆಗೆ ನಮ್ಮ ಮಿಸೈಲ್‌ಗಳ ಪ್ರಮಾಣ ಕಡಿಮೆಯಾಗುತ್ತಿದೆ. ಚೀನಾ ದೇಶವನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿರುವ ಗುರಿಗೆ ಇದರಿಂದ ಎಷ್ಟು ಘಾಸಿಯಾಗುತ್ತಿದೆ ಎನ್ನವುದನ್ನು ನೀವು ಬಲ್ಲಿರಾ? ಏಷಿಯಾದಲ್ಲಿ ನಾವು ಪೂರ್ಣವಾಗಿ ತೊಡಗಿಕೊಳ್ಳಬೇಕೆಂಬ ತಂತ್ರವನ್ನು ಅಮೆರಿಕಾ ಮೊದಲಿನಿಂದಲೂ ಹೊಂದಿತ್ತು. ಈಗ ನೋಡಿದರೆ, ನಾವೀಗ ಏಷಿಯಾದಿಂದ ಹೊರಗೆ ಸಾಗಿ ಹೋಗಿದ್ದೇವೆ. ಪೂರ್ವ ಏಷಿಯಾಕ್ಕೆಂದು ಮೀಸಲಾಗಿದ್ದ ಮರೀನ್‌ ದಳವನ್ನು, ಥಾಡ್‌ ಮತ್ತು ಪೇಟ್ರಿಯಾಟ್‌ ಮಿಸೈಲ್‌ಗಳನ್ನು ಮಧ್ಯ ಏಷಿಯಾದ ಪ್ರದೇಶಕ್ಕೆ ತರುತ್ತಿದ್ದೇವೆ. ಮತ್ತೆ ಗಲ್ಫ್‌ ದೇಶಗಳನ್ನು ರಕ್ಷಿಸಲಾಗದ ದಯನೀಯ ಸ್ಥಿತಿಯಲ್ಲಿ ಅಮೆರಿಕ ದೇಶವಿದೆ. ಇರಾನ್‌ ತನ್ನ ಇಚ್ಛೆಗೆ ಅನುಗುಣವಾಗಿ ಗಲ್ಫ್‌ ದೇಶಗಳ ಮೇಲೆ ದಾಳಿ ನಡೆಸುತ್ತಿದೆ. ಇದುವರೆಗೆ ನಾನು ಹೇಳಿದ ವಿಚಾರಗಳು ಅಮೆರಿಕಾದ ಹಿನ್ನೆಲೆಯಿಂದ ಹೇಳಿದ ವಿಚಾರಗಳು.

ಇರಾನ್‌ ನೆಲೆಯಲ್ಲಿ ಆಲೋಚಿಸಿದರೆ, ಇನ್ನಷ್ಟು ಆಸಕ್ತಿಕರ ವಿಚಾರಗಳು ದೊರೆಯುತ್ತವೆ. ನಿಜಕ್ಕೂ ಪ್ರಬಲವಾದ ಸ್ಥಿತಿಯಲ್ಲಿ ಇರಾನಿಗರು ಇದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ ಸಂಚಾರವನ್ನು ತಡೆಯುವ ಮೂಲಕ, ಜಾಗತಿಕ ಅರ್ಥವ್ಯವಸ್ಥೆಯನ್ನು ಹಾಳುಗೆಡುವ ಶಕ್ತಿಯನ್ನು ಅವರು ಹೊಂದಿದ್ದಾರೆ. ಸ್ವಲ್ಪ ಆಲೋಚಿಸಿ ನೋಡಿರಿ: ಇರಾನಿಗರಿಗೆ ಲಭ್ಯವಾಗಿರುವ ಅವಕಾಶದ ದೂರಗಾಮಿ ಪರಿಣಾಮವನ್ನು ಅರಿಯುವ ಯತ್ನ ಮಾಡಿರಿ. ಹಾರ್ಮುಜ್ ಜಲಸಂಧಿಯನ್ನು ಬಂದ್‌ ಮಾಡುವುದರಿಂದ ಆಗುವ ಪರಿಣಾಮಗಳು ಜಾಗತಿಕವಾಗಿ ಅಲ್ಲೋಲಕಲ್ಲೋಲವನ್ನು ಸೃಷ್ಟಿಸುತ್ತವೆ. ಜನ ಕೇವಲ ತೈಲದ ಕುರಿತು ಚರ್ಚಿಸುತ್ತಿದ್ದಾರೆ. ಯಾರೂ ಗೊಬ್ಬರದ ಕುರಿತು ಮಾತನಾಡುತ್ತಿಲ್ಲ. ಜಗತ್ತಿನ ಮೂರನೇ ಒಂದು ಭಾಗದಷ್ಟು ಗೊಬ್ಬರವು ಹಾರ್ಮುಜ್ ಜಲಸಂಧಿಯ ಮೂಲಕವೇ ಸಂಚರಿಸಬೇಕಿದೆ. ಬಹಳಷ್ಟು ದೇಶಗಳಲ್ಲೀಗ ಬಿತ್ತನೆ ಸಮಯ ಚಾಲ್ತಿಯಲ್ಲಿದೆ. ಗೊಬ್ಬರವಿಲ್ಲದೆ ಬೆಳೆಯಿಲ್ಲ. ಬೆಳೆಯಿಲ್ಲದೆ ಆಹಾರವಿಲ್ಲ. ಈ ಹುಚ್ಚು ಯುದ್ಧದ ಪರಿಣಾಮದಿಂದ ಮುಂಬರುವ ದಿನಗಳಲ್ಲಿ ತುಂಬಾ ಜನರು ಹಸಿವಿನಿಂದ ನರಳಿ ಸಾಯಲಿದ್ದಾರೆ. ಜಾಗತಿಕ ಅರ್ಥ ವ್ಯವಸ್ಥೆಯನ್ನು ನಿಯಂತ್ರಿಸುವ ತಾಕತ್ತನ್ನು ಇರಾನ್‌ ಪಡೆದುಕೊಂಡಿದೆ.

ಹಾಗೆ ಆರು ಗಲ್ಫ್‌ ದೇಶಗಳ ಮೇಲೆ ದಾಳಿ ಮಾಡುವ ಶಕ್ತಿಯನ್ನು ಇರಾನ್‌ ಹೊಂದಿದೆ. ಗಲ್ಫ್‌ ದೇಶಗಳ ಸಾಮಾಜಿಕ ವ್ಯವಸ್ಥೆಯನ್ನೇ ನಾಶಗೊಳಿಸುವ ತಾಕತ್ತನ್ನು ಇರಾನ್‌ ಹೊಂದಿದೆ. ಹೇಗೆ ಎಂದಿರಾ? ದಿನನಿತ್ಯದ ನೀರಿನ ಪೂರೈಕೆಗೆ ಗಲ್ಫ್‌ ದೇಶಗಳು ಅವಲಂಬಿಸಿರುವ ‘ಉಪ್ಪು ನೀರು ಶೋಧಿಸುವ ಘಟಕಗಳನ್ನು’ ನೆಲಸಮಗೊಳಿಸುವ ಶಕ್ತಿಯನ್ನು ಇರಾನ್‌ ಹೊಂದಿದೆ. ಇಂತಹ ಶೋಧಕಗಳು ದೊಡ್ಡ ಪ್ರದೇಶವನ್ನು ಆವರಿಸುವ ಘಟಕಗಳಾಗಿವೆ. ನಿಖರವಾದ ದಾಳಿಯನ್ನು ನಡೆಸುವ ಮಿಸೈಲ್‌ಗಳು ಇರಾನ್‌ ಬಳಿಯಿವೆ. ಇನ್ನು ಇರಾನ್‌ ಹೊಂದಿರುವ ಡ್ರೋನ್‌ಗಳ ಸಂಖ್ಯೆ ಎಷ್ಟೆಂದು ಆ ದೇವರಿಗೆ ಗೊತ್ತು! ಹೀಗಾಗಿ ಗಲ್ಫ್‌ ದೇಶಗಳ ದಿನನಿತ್ಯದ ಬದುಕನ್ನು ಗೋಳಾಡಿಸುವ ತಾಕತ್ತು ಹೊಂದಿರುವ ಇರಾನ್‌ ಯುದ್ಧದಲ್ಲಿ ಮೇಲುಗೈ ಹೊಂದಿದೆ.

ಈ ಎಲ್ಲಾ ಕಾರಣಗಳಿಂದ ಟ್ರಂಪ್‌ನ ಮುಂದಿರುವ ಆಯ್ಕೆಗಳು ಸೀಮಿತವಾಗಿವೆ. ಯುದ್ಧದ ತೀವ್ರತೆಯನ್ನು ತನಗೆ ಬೇಕಾದಂತೆ ಹೆಚ್ಚಿಸುವ ಅವಕಾಶ ಟ್ರಂಪ್‌ಗೆ ಇಲ್ಲ. ಏಕೆಂದರೆ ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣ ಇರಾನ್‌ ಬಳಿಯಿದೆ. ಗಲ್ಫ್‌ ದೇಶಗಳಿಗೆ ಅಪಾರವಾದ ನಷ್ಟವನ್ನುಂಟು ಮಾಡುವ ತಾಕತ್ತು ಇರಾನ್‌ಗಿದೆ. ಹಾಗೆ ಸ್ವಲ್ಪ ದೂರದಲ್ಲಿರುವ ಇಸ್ರೇಲ್‌ ಮೇಲೆ ತನ್ನಿಷ್ಟದಂತೆ ದಾಳಿ ನಡೆಸುವ ಅವಕಾಶವನ್ನು ಇರಾನ್‌ ಹೊಂದಿದೆ. ಇಸ್ರೇಲ್‌ ಅಂತು ಇರಾನ್‌ನ ಮಿಸೈಲ್‌ ಮತ್ತು ಡ್ರೋನ್‌ಗಳ ದಾಳಿಯಿಂದ ತನ್ನ ಮೇಲಾಗುತ್ತಿರುವ ನಷ್ಟವನ್ನು ಗೌಪ್ಯವಾಗಿಡಲು ಸತತ ಪ್ರಯತ್ನ ಮಾಡುತ್ತಲೇ ಇದೆ. ಕನಿಷ್ಠ ಇದೊಂದು ಅಂಶವನ್ನಾದರೂ ನಾವು ಅರಿಯುವ ಅಗತ್ಯವಿದೆ, ಅಲ್ಪವೇ?

lebanon 3
ಇಸ್ರೇಲ್ ದಾಳಿಗೊಳಗಾದ ಲೆಬನಾನ್

‘ತಾನು ಸೋತಿರುವೆ’ ಎಂದು ಒಪ್ಪಿಕೊಳ್ಳುವ ಮಾರ್ಗವೊಂದೇ ಟ್ರಂಪ್‌ಗೆ ಈಗಿರುವ ದಾರಿಯಾಗಿದೆ. ಏಕೆಂದರೆ, ಯುದ್ಧವನ್ನು ತೀವ್ರಗೊಳಿಸಲು ಅವಕಾಶವಿಲ್ಲ; ನಿಲ್ಲಿಸಲು ಇರಾನಿಗರು ಅವಕಾಶ ನೀಡುವುದಿಲ್ಲ. ಹೌದು, ನಾನು ಪ್ರಜ್ಞಾಪೂರ್ವಕವಾಗಿಯೇ ಹೇಳುತ್ತಿರುವೆ: ‘ಸೋಲು ಒಪ್ಪುವುದೊಂದೆ ಟ್ರಂಪ್‌ಗಿರುವ ಮಾರ್ಗ.’ ಇರಾನಿಗರು ಯಾವ ಕಾರಣಕ್ಕೂ ಟ್ರಂಪ್‌ಗೆ ಸುಲಭದ ಅವಕಾಶ ನೀಡಲು ಸಿದ್ಧರಾಗುವುದಿಲ್ಲ. ಅವರಿಗೆ ಅಮೆರಿಕಾ ಮತ್ತು ಇಸ್ರೇಲ್‌ನ ಜೊತೆಗೆ ವರ್ತಿಸುವಾಗ ನಿಷ್ಠುರವಾಗಿರಬೇಕೆಂಬ ತಿಳಿವಳಿಕೆಯಿದೆ. ಇರಾನಿಗರಿಗೆ ಇವರಿಬ್ಬರೂ ಉಗ್ರ ಶತ್ರುಗಳೇ. ಅರ್ಥವಾಯಿತಲ್ಲ? ಇರಾನಿಗರ ದೃಷ್ಟಿಯಿಂದ ಇರಾನಿನ ಅಸ್ತಿತ್ವಕ್ಕೆ ಮಾರಕರಾಗಿರುವವರು ಇಸ್ರೇಲಿಗರು ಮತ್ತು ಅಮೆರಿಕನ್ನರು! ಹೀಗಾಗಿ ಸುಲಭದ ಮಾತುಕತೆಗೆ ಮುಂದಾಗದೆ, ಕಠಿಣ ಮಾತುಕತೆಯನ್ನು ನಡೆಸುವ ಉದ್ದೇಶವನ್ನು ಇರಾನಿಗರು ಹೊಂದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪರಿಸ್ಥಿತಿ ಇರಾನಿಗರಿಗೆ ಅನುಕೂಲಕರವಾಗಿದೆ.

ಪರಿಸ್ಥಿತಿ ಹೀಗಿರುವಾಗ, ಟ್ರಂಪ್‌ ತನ್ನ ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ‘ಇರಾನ್‌ ಸಂಸ್ಕೃತಿಯನ್ನು ಹೇಳಹೆಸರಿಲ್ಲದಂತೆ ನಾಶಗೊಳಿಸುವುದಾಗಿ ಘೋಷಿಸುತ್ತಾರೆ’. ಇದನ್ನು ಇರಾನಿಗರು ಗಂಭೀರವಾಗಿ ಸ್ವೀಕರಿಸುತ್ತಾರೆ ಎಂದುಕೊಂಡಿದ್ದೀರಾ? ರಾತ್ರಿ ಬೆಳಗಾಗುವುದರೊಳಗಾಗಿ ಇರಾನಿಗರು ಶರಣಾಗಬೇಕೆಂದು ಟ್ರಂಪ್‌ ಹೇಳಿದರೆ, ಇರಾನಿಗರು ಬೆದರುತ್ತಾರೆಂದು ನಿರೀಕ್ಷಿಸುತ್ತೀರಾ? ಇದೊಂದು ಅಸಂಬದ್ಧವಾದ ಹೇಳಿಕೆಯಾಗಿದೆ. ಇರಾನ್‌ ಸಂಸ್ಕೃತಿಯನ್ನು ವಿನಾಶಗೊಳಿಸುವ ಹೇಳಿಕೆ ಜನಾಂಗೀಯ ಹತ್ಯೆಯ ಲಕ್ಷಣವುಳ್ಳ ಹೇಳಿಕೆಯಾಗಿದೆ. ಅಮೆರಿಕಾದ ಅಧ್ಯಕ್ಷನೋರ್ವ ಇಂತಹ ಹೇಳಿಕೆಯನ್ನು ನೀಡುವ ಸಾಧ್ಯತೆಯಿರುತ್ತದೆ ಎಂದು ನೀವು ಎಂದಾದರೂ ಕಲ್ಪಿಸಿಕೊಂಡಿದ್ದೀರಾ? ನಾನಂತೂ ಇಂತಹ ಸ್ಥಿತಿ ಬರಬಹುದೆಂಬ ನಿರೀಕ್ಷೆ ಹೊಂದಿರಲಿಲ್ಲ. ಹಿಟ್ಲರ್‌ನಂತಹ ವ್ಯಕ್ತಿತ್ವದಿಂದ ಇಂತಹ ಮಾತುಗಳನ್ನು ನಿರೀಕ್ಷಿಸಲು ಅವಕಾಶವಿದೆ. ಇರಾನ್‌ನಂತಹ ದೇಶವನ್ನು ಭೂಮಿಯ ಮೇಲಿಂದ ಅಳಿಸಿಹಾಕುವೆ ಎನ್ನುವ ಹೇಳಿಕೆಯನ್ನು ನೀವು ಹೇಗೆ ನಿರೀಕ್ಷಿಸಲು ಸಾಧ್ಯವಿದೆ ಹೇಳಿರಿ? ಇಲ್ಲಿ ಏನು ನಡೆಯುತ್ತಿದೆ? ಇಂತಹ ಸ್ಥಿತಿ ಏಕೆ ನಿರ್ಮಾಣವಾಗುತ್ತಿದೆ? ಎನ್ನುವ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕಿದೆ. ಟ್ರಂಪ್‌ ಅಸಹಾಯಕ ಸ್ಥಿತಿಯನ್ನು ತಲುಪಿರುವುದೇ ಇಷ್ಟಕ್ಕೆಲ್ಲಾ ಕಾರಣವಾಗಿದೆ.

ನಾನು ಇದುವರೆಗೂ ವಿವರಿಸಿದ ಕಾರಣಗಳಿಂದಾಗಿ ಟ್ರಂಪ್‌ ಅಸಹಾಯಕತೆಯನ್ನು ಅನುಭವಿಸಲು ಅವಕಾಶವಾಗಿದೆ. ಆದರೆ ಇದುವರೆಗೂ ಅನುಸರಿಸಿದ ದಾರಿಯಲ್ಲಿಯೇ ಮುಂದಿನ ದಿನಗಳಲ್ಲಿಯೂ ಸಾಗಿದರೆ, ಜಾಗತಿಕ ಆರ್ಥಿಕ ವ್ಯವಸ್ಥೆ ಮುಗ್ಗರಿಸಿ ಬೀಳಲಿದೆ. ಟ್ರಂಪ್‌ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡಾಗ ಆಗಬಹುದಾದ ನಷ್ಟಕ್ಕಿಂತ ನೂರಾರು ಪಟ್ಟು ನಷ್ಟ ಇದರಿಂದ ಜಾಗತಿಕವಾಗಿ ಸಂಭವಿಸಲಿದೆ. ಬೃಹತ್ತಾದ ಪರಿಣಾಮವನ್ನು ಇದು ಬೀರಲಿದೆ. ಟ್ರಂಪ್‌ಗೆ ಈ ವಿಚಾರ ತಿಳಿದಿದೆ. ಮತ್ತು ಈ ಎಲ್ಲಾ ಸೂಕ್ಷ್ಮಗಳನ್ನು ತಿಳಿಸುವ ಪಂಡಿತರು ಆತನೊಂದಿಗಿದ್ದಾರೆ ಎನ್ನುವುದು ನನಗೆ ತಿಳಿದಿದೆ. ಟ್ರಂಪ್‌ ಈಗ ಅಸಹಾಯಕ ಸ್ಥಿತಿಯಲ್ಲಿದ್ದಾನೆ. ಹಾಗಾಗಿಯೇ, ಒಂದು ಸೋಮವಾರ ಮುಂಜಾನೆ ಇರಾನ್‌ ಸಂಸ್ಕೃತಿಯನ್ನೇ ಅಳಿಸಿ ಹಾಕಿ ಬಿಡುವೆ ಎನ್ನವ ಮಾತುಗಳನ್ನು ಆಡಲು ಮುಂದಾಗುವುದು. ಇದೊಂದು ಜನಾಂಗೀಯ ಹತ್ಯೆಗೆ ತೊಡಗುವ ಮನೋಭಾವದ ಮಾತುಗಳಾಗಿವೆ. ಅದೇ ಸೋಮವಾರ ಸಂಜೆ ಹೊತ್ತಿಗೆ ಏನಾಗುತ್ತದೆ? ‘ನಾನು ಅಂತಹ ಕೆಲಸ ಮಾಡುವುದಿಲ್ಲ’ ಎಂದು ಘೋಷಣೆ ಹೊರಡುತ್ತದೆ. ಇದರರ್ಥ ಏನು? ‘ನಾನು ಸೋಲನ್ನು ಒಪ್ಪಿಕೊಂಡಿದ್ದೇನೆ’ ಎಂದಷ್ಟೆ. ಇದನ್ನು ನಾವು ಅರಿಯುವುದು ಮುಖ್ಯವಾಗುತ್ತದೆ.

ಟ್ರಂಪ್‌ ಸೋಲನ್ನು ಸ್ವೀಕರಿಸಿಯಾಯಿತು ಎಂದು ನಾನು ಹೇಳುತ್ತಿರುವೆ. ಏಕೆ ಗೊತ್ತೆ? ನೋಡಿ ಈಗ ಎರಡು ಪ್ರಸ್ತಾವನೆಗಳು ನಮ್ಮ ಮುಂದಿವೆ. ಒಂದು ಹದಿನೈದು ಅಂಶಗಳ ಪ್ರಸ್ತಾವನೆ. ಇವು ಅಮೆರಿಕಾದ ಬೇಡಿಕೆಗಳು. ಎರಡನೆಯದಾಗಿ, ಇರಾನ್‌ನ ಮಂಡಿಸುತ್ತಿರುವ ಹತ್ತು ಬೇಡಿಕೆಗಳ ಪಟ್ಟಿ ಪರ್ಯಾಯವಾಗಿ ನಮ್ಮ ಮುಂದಿದೆ. ಈ ಎರಡರ ನಡುವೆ ಹಗಲು – ರಾತ್ರಿ ವ್ಯತ್ಯಾಸಗಳಿವೆ. ಹದಿನೈದು ಅಂಶಗಳ ಬೇಡಿಕೆ ಪಟ್ಟಿ ಅಮೆರಿಕಾ ಮತ್ತು ಇಸ್ರೇಲ್‌ ದೇಶಗಳ ಬೇಡಿಕೆಗಳಾಗಿವೆ. ಇರಾನ್‌ ಮಂಡಿಸುವ ಹತ್ತು ಬೇಡಿಕೆಗಳು ಗರಿಷ್ಠ ಬೇಡಿಕೆಗಳಾಗಿವೆ. ಟ್ರಂಪ್‌ನ ವರ್ತನೆ ಹೇಗಿದೆ ಎಂದರೆ ‘ಇರಾನ್‌ ಬೇಡಿಕೆಗಳನ್ನು ಸ್ವೀಕರಿಸಲಾಗಿದೆ’ ಎನ್ನುವ ಅರ್ಥವನ್ನು ನೀಡುತ್ತವೆ. ಈ ಬೇಡಿಕೆಗಳ ಪಟ್ಟಿಗಳ ವಿನಿಮಯ ಸಮಸ್ಯೆಯನ್ನು ನಿವಾರಿಸುವ ದಿಕ್ಕಿನಲ್ಲಿ ಉತ್ತಮ ಕ್ರಮಗಳು ಎನ್ನುವುದು ಟ್ರಂಪ್‌ನ ವಾದವಾಗಿದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ ಎನ್ನುವುದು ನನ್ನ ವಾದವಾಗಿದೆ. ಇದನ್ನು ಸ್ವಲ್ಪ ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ. ಯುದ್ಧವನ್ನು ಆರಂಭಿಸಿದವರು ಯಾರು? ಅಮೆರಿಕಾ ಮತ್ತು ಇಸ್ರೇಲ್‌, ತಾನೆ? ನಾನಿವರನ್ನು ಒಟ್ಟಿಗೆ ಕಟ್ಟಿಹಾಕಿಕೊಂಡಿರುವ ದೇಶಗಳು ಎಂದು ಕರೆಯಲು ಇಚ್ಛಿಸುತ್ತೇನೆ. ಇವರು ಯುದ್ಧವನ್ನು ನಾಲ್ಕು ಕಾರಣಗಳಿಗಾಗಿ ಆರಂಭಿಸಿದ್ದರು:

net tr
ನೆತನ್ಯಾಹು ಮತ್ತು ಟ್ರಂಪ್

ಒಂದು, ಇರಾನ್‌ ಅಣುಶಕ್ತಿಯನ್ನು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಾರದು. ಎರಡು, ಇರಾನ್‌ ಬಳಿಯಿರುವ ಎಲ್ಲಾ ದೂರಗಾಮಿ ಮಿಸೈಲ್‌ಗಳನ್ನು ನಾಶಪಡಿಸುವುದು. ಮೂರು, ಇರಾನಿಗರು ಹೌತಿಸ್‌ಗಳು, ಹಮಾಸ್‌ಗಳು ಹಾಗೂ ಹಿಜ್ಬುಲ್ಲಾ ಗುಂಪುಗಳಿಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸುವುದು. ನಾಲ್ಕು, ಸರ್ಕಾರದ ಬದಲಾವಣೆ. ಸರ್ಕಾರವನ್ನು ಬದಲಿಸುವ ಉದ್ದೇಶ ಪ್ರಮುಖವಾದ ಉದ್ದೇಶವಾಗಿತ್ತು ಎನ್ನುವುದು ಸತ್ಯವಾದರೂ ಟ್ರಂಪ್‌ ಅದನ್ನು ನಿರಾಕರಿಸಿದ್ದಾರೆ. ಹಾಗೆ ಅಮೆರಿಕಾ ಆಡಳಿತ ಯಂತ್ರದ ಹಿರಿಯ ಅಧಿಕಾರಿಗಳು ಮತ್ತು ಅನೇಕ ಇತರರು ಈ ಅಂಶವನ್ನು ನಿರಾಕರಿಸುತ್ತಾರೆ. ಆದರೆ ‘ನ್ಯೂಯಾರ್ಕ್‌ ಟೈಮ್ಸ್‌’ನ ಲೇಖನವನ್ನು ಒಮ್ಮೆ ಓದಿದರೆ ಸಾಕು, ನಿಮಗೆ ಅಂದಾಜು ಮೂಡಿಯೇ ಮೂಡುತ್ತದೆ. ಇರಾನ್‌ ಸರ್ಕಾರವನ್ನು ಬದಲಿಸುವ ಮೂಲ ಉದ್ದೇಶ ಬಲವಾಗಿತ್ತು ಎನ್ನುವುದು ಕಣ್ಣಿಗೆ ರಾಚುತ್ತದೆ. ಇದ್ದನ್ನೇ ಮೊಸಾದ್‌ನ ಡೇವಿಡ್‌ ಬಾರರ್‌ ಮತ್ತು ನೇತನ್ಯಾಹು ಪದೇ ಪದೇ ಹೇಳುತ್ತಿರುವುದು. ಆದರೆ ಟ್ರಂಪ್‌ಗೆ ಇದ್ಯಾವುದು ಮುಖ್ಯವೇ ಅಲ್ಲ. ಹಾಗೆ ಯಾವುದೇ ಷರತ್ತುಗಳಿಲ್ಲದೆ ಶರಣಾಗಬೇಕೆಂಬ ಟ್ರಂಪ್‌ರ ಮಾತುಗಳೂ ನಿಮಗೆ ನೆನಪಿದೆ ತಾನೆ! ಹಾಗಾಗಿ, ಅಮೆರಿಕಾ ಇರಿಸಿಕೊಂಡಿದ್ದ ನಾಲ್ಕು ಗುರಿಗಳ ಪೈಕಿ ಎಲ್ಲಾ ಗುರಿಗಳಲ್ಲೂ ಅದು ಸೋತಿದೆ ಎಂದಾಯಿತು. ಇರಾನ್‌ ಮಿಸೈಲ್‌ ನಾಶವಾಗುತ್ತಿಲ್ಲ; ಅದರ ಅಣುಶಕ್ತಿ ಸಾಮರ್ಥ್ಯವೂ ನಷ್ಟವಾಗುತ್ತಿಲ್ಲ; ಹೌತಿಸ್‌, ಹಮಾಸ್‌ ಮತ್ತಿತರರಿಗೆ ನೀಡುತ್ತಿರುವ ಬೆಂಬಲದಲ್ಲೂ ಯಾವುದೇ ಬದಲಾವಣೆಗಳಿಲ್ಲ. ಬದಲಿಗೆ ದಕ್ಷಿಣ ಲೆಬನಾನ್‌ ಮತ್ತು ಇಸ್ರೇಲ್‌ನ ಉತ್ತರ ಭಾಗದಲ್ಲಿ ಹಿಜ್ಬುಲ್ಲಾ ಹೊಂದಾಣಿಕೆಯಿಂದ ಕಾರ್ಯಾಚರಣೆ ನಡೆಸುತ್ತಿವೆ. ಇನ್ನೂ ಹೌತಿಸ್‌ಗಳ ವಿಷಯ– ಅವರಂಥೂ ಕೆಂಪುಸಮುದ್ರದ ಮಾರ್ಗದಲ್ಲಿ ಅಡಚಣೆ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಇತ್ತ ಪರ್ಷಿಯನ್‌ ಜಲಸಂಧಿಯಲ್ಲೂ ಸಂಚಾರ ಬಂದ್‌; ಅತ್ತ ಕೆಂಪುಸಮುದ್ರದ ಮಾರ್ಗದಲ್ಲೂ ಸಂಚಾರ ಬಂದ್‌. ಹೀಗಾದರೆ, ಅದೊಂದು ಭಯಂಕರ ಸಮಸ್ಯೆ ಅಲ್ಲವೇ?

ಹೀಗೆ ಅಮೆರಿಕಾ ಇರಿಸಿಕೊಂಡ ನಾಲ್ಕು ಗುರಿಗಳಲ್ಲಿ ಯಾವುದೂ ಈಡೇರಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಹೌತಿಸ್‌ಗಳು ಹಾರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸಿದ್ದಾರೆ. ಫೆಬ್ರವರಿ 27ಕ್ಕೆ ಮೊದಲು ಹೌತಿಸ್‌ಗೂ ಹಾರ್ಮುಜ್ ಜಲಸಂಧಿಗೂ ಯಾವುದೇ ಸಂಬಂಧವಿರಲಿಲ್ಲ. ಜಾಗತಿಕ ಅರ್ಥವ್ಯವಸ್ಥೆಯನ್ನು ಹಾಳುಮಾಡುತ್ತೇವೆಂದು ಅವರೇನು ಹೆದರಿಸುತ್ತಿರಲಿಲ್ಲ. ಅವರೀಗ ಹಾರ್ಮುಜ್ ಜಲಸಂಧಿಯನ್ನು ನಿಯಂತ್ರಿಸುತ್ತಿದ್ದಾರೆ. ಈ ನಿಯಂತ್ರಣವನ್ನು ಬಿಟ್ಟುಕೊಡಲು ಅವರಿಗೆ ಬುದ್ಧಿಯೇನು ಕೆಟ್ಟಿಲ್ಲ. ನೀವು ಹೇಗೆ ಲೆಕ್ಕಾಚಾರ ಮಾಡಿ ನೋಡಿದರೂ, ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ ಹಿಡಿತ ಇದ್ದೇ ಇರುತ್ತದೆ. ಇಂತಹ ಪರಿಸ್ಥಿತಿ ಅಮೆರಿಕಾ ದೇಶಕ್ಕೆ ಸಮಸ್ಯಾತ್ಮಕವೇ ಹೌದು. ಹೌತಿಸ್‌ಗಳಿಗೆ ಅವರ ಮೇಲಿರುವ ನಿಷೇಧ ತೆಗೆಯಬೇಕೆಂಬ ಬೇಡಿಕೆ ಮಂಡಿಸಲಾಗಿದೆ. ಮಧ್ಯ ಏಷಿಯಾ ಪ್ರದೇಶದಲ್ಲಿರುವ ಅಮೆರಿಕಾದ ಸೇನಾ ನೆಲೆಗಳನ್ನು ಮುಚ್ಚಬೇಕೆಂಬ ಬೇಡಿಕೆಯೂ ಅವರಿಂದ ಬಂದಿದೆ. ಅಂತಿಮವಾಗಿ  ಯಾವ ರೀತಿಯಲ್ಲಿ ಒಪ್ಪಂದಗಳು ಏರ್ಪಡುತ್ತವೆಯೋ ಗೊತ್ತಿಲ್ಲ. ಅವರ ಈ ಬೇಡಿಕೆಗಳಲ್ಲಿ ಒಂದು ಈಡೇರಿದರೂ, ಅದು ಅಮೆರಿಕಾದ ಸೋಲು ಎಂದೇ ಅಲ್ಲವೆ? ಇದನ್ನು ನಾನು ಒತ್ತಿ ಹೇಳುತ್ತಿರುವ ಕಾರಣ ಇಷ್ಟೆ: ಅಮೆರಿಕಾಕ್ಕೆ ಈ ಯುದ್ಧದಿಂದ ಹೊರಹೋಗಲು ಇರುವ ಒಂದೇ ದಾರಿ– ಸೋಲನ್ನು ಸ್ವೀಕರಿಸುವುದು. ಇದನ್ನು ಇದಕ್ಕಿಂತ ಉತ್ತಮವಾಗಿ ಬಿಡಿಸಿ ಹೇಳುವುದು ಸಾಧ್ಯವಿಲ್ಲ; ಹಾಗೆ ಇದನ್ನು ಸ್ವೀಕರಿಸುವುದು ಅಮೆರಿಕನ್ನರಿಗೆ ಸುಲಭವೂ ಅಲ್ಲ; ಆದರೆ ಬೇರೆ ದಾರಿಯಿಲ್ಲ.

ನಾನೀಗ ಇಸ್ರೇಲ್‌ ದೃಷ್ಟಿಯಿಂದ ಒಂದಿಷ್ಟು ವಿಚಾರ ಮಂಡಿಸಲು ಇಚ್ಛಿಸುತ್ತೇನೆ. ಇಸ್ರೇಲಿಗಳಿಗೆ ಇದು ಭೀಕರವಾದ ಪ್ರಹಾರವಾಗಿದೆ. ಇಸ್ರೇಲಿಗರ ಪ್ರಕಾರ, ಅವರ ಪ್ರಧಾನಿಗಳ ಪ್ರಕಾರ, ಇರಾನ್‌ ಅವರ ಬದ್ಧ ಶತ್ರುವಾಗಿದೆ; ಭೂಮಿಯ ಮೇಲಿಂದ ಇರಾನ್‌ ಅನ್ನು ಇಲ್ಲವಾಗಿಸುವುದು ಇಸ್ರೇಲಿಗರ ಧ್ಯೇಯವಾಗಿದೆ. ನನಗೇನು ಇದರಲ್ಲಿ ನಂಬಿಕೆಯಿಲ್ಲ. ನಾನು ನಂಬಲಿ ನಂಬದಿರಲಿ, ಇಸ್ರೇಲ್‌ನ ಪ್ರಕಾರ ಇರಾನ್‌ ಅವರಿಗೆ ಅಪಾಯ ತರುವುದಕ್ಕೇ ಇರುವಂತಹ ದೇಶವಾಗಿದೆ. ಆದರೆ ಏನು ಮಾಡುವುದು? ಇಸ್ರೇಲ್‌, ಇರಾನ್‌ ಮುಂದೆ ಸೋತಿದೆ. ಇರಾನ್‌ ಮೊದಲಿನಷ್ಟೇ ಪ್ರಬಲ ಶಕ್ತಿಯಾಗಿ ಉಳಿದಿದೆ. ಇರಾನ್‌ ಈಗಲೂ ಹೌತಿಸ್‌ಗಳಿಗೆ ಬೆಂಬಲ ನೀಡುವ ಸ್ಥಿತಿಯಲ್ಲಿಯೇ ಉಳಿದಿದೆ. ಹಾಗೆ ಇರಾನ್‌ ಇಸ್ರೇಲ್‌ ಮತ್ತು ಅಮೆರಿಕಾದ ಸಂಬಂಧಕ್ಕೆ ಬಲವಾದ ಧಕ್ಕೆಯನ್ನುಂಟು ಮಾಡಿದೆ. ‘ನ್ಯೂಯಾರ್ಕ್‌ ಟೈಮ್ಸ್‌’ನ ವರದಿ ಇಸ್ರೇಲ್‌, ಅಮೆರಿಕಾದ ಕಿವಿ ಹಿಡಿದುಕೊಂಡೇ ಯುದ್ಧಕ್ಕೆ ಎಳೆದುಕೊಂಡು ಹೋಗಿತ್ತೆನ್ನುವುದು ಸಾವಿರಾರು ಅಮೆರಿಕನ್ನರಿಗೆ ಮನದಟ್ಟು ಮಾಡಿದೆ. ಅಮೆರಿಕಾದ ಸೇನಾ ವ್ಯವಸ್ಥೆ ಮತ್ತಿತರ ವ್ಯವಸ್ಥೆಯ ಅನೇಕ ಅಧಿಕಾರಿಗಳು ಈ ಯುದ್ಧಕ್ಕೆ ಇಳಿಯುವುದು ಬೇಡವೆಂದು ಎಚ್ಚರಿಕೆಯನ್ನು ನೀಡುತ್ತಿದ್ದರೆನ್ನವುದು ಅಮೆರಿಕನ್ನರಿಗೆ ಅರ್ಥವಾಗಿದೆ. ಈಗ ಅಮೆರಿಕಾದ ಸಾರ್ವಜನಿಕರ ಅಭಿಪ್ರಾಯ ಎತ್ತ ಸಾಗಿದೆ ಎಂದು ಒಮ್ಮೆ ನೋಡಿರಿ. ಇಸ್ರೇಲಿಗರ ಲಾಬಿ ಕುರಿತಾಗಿ ಬರೆದ ನನ್ನಂತಹವರಿಗೆ ಈಗ ಏನಾಗಿದೆ ನೋಡಿ. ನಂಬಲು ಅಸಾಧ್ಯವಾದ ಸ್ಥಿತಿ ಇದು.

img iran tryst
ಛಲ ಬಿಡದ ಇರಾನಿಯನ್ನರು

ನಾನು ಜೀವಂತವಿರುವ ಕಾಲಘಟ್ಟದಲ್ಲಿ ಇಂತಹುದೊಂದು ಸ್ಥಿತಿ ಬರುತ್ತದೆಂದು ನಾನಂತೂ ನಿರೀಕ್ಷಿಸಿರಲಿಲ್ಲ. ಅಮೆರಿಕಾ – ಇಸ್ರೇಲ್‌ನ ಸಂಬಂಧ ಈ ರೀತಿಯ ತಿರುವನ್ನು ಪಡೆಯುವ ಅವಕಾಶವಿದೆ ಎಂದು ಸಹಾ ನಾನು ಊಹಿಸಿರಲಿಲ್ಲ. ನನ್ನ ಪ್ರಕಾರ ಇಸ್ರೇಲ್‌ ಈಗ ಗಂಭೀರವಾದ ಸಮಸ್ಯೆಯಲ್ಲಿದೆ. ಇಸ್ರೇಲ್‌ ದೃಷ್ಟಿಯಿಂದ, ಜಾಗತಿಕ ಪರಿಸ್ಥಿತಿಯ ದೃಷ್ಟಿಯಿಂದ, ಅಮೆರಿಕಾದ ದೃಷ್ಟಿಯಿಂದಲೂ ಸಹಾ ಫೆಬ್ರವರಿ 28ರ ಯುದ್ಧ ಮಹಾ ಪ್ರಮಾದವಾಗಿದೆ. ಈ ಯುದ್ಧ ಯಾವ ಪ್ರಮಾಣದಲ್ಲಿ ಪ್ರಮಾದಕರ ಎನ್ನುವುದನ್ನು ನೀವು ಲೆಕ್ಕಿಸಲು ಆಗದೇ ಹೋದಿತು. ಅಷ್ಟರಮಟ್ಟಿಗೆ ಇದು ದೋಷಪೂರಿತ ನಿರ್ಧಾರವಾಗಿದೆ.

ಅಂತಿಮವಾಗಿ, ನನ್ನ ಕೊನೆಯ ಅಂಶವನ್ನು ಈಗ ನಿಮ್ಮ ಮುಂದೆ ಇರಿಸುತ್ತೇನೆ. ಈ ಎಲ್ಲಾ ಬೆಳವಣಿಗೆಗಳ ಆಧಾರದ ಮೇಲೆ ಮುಂದೊಂದು ದಿನ ಇಸ್ರೇಲ್‌ ಇರಾನ್‌ ಮೇಲೆ ಅಣುಬಾಂಬ್‌ ಪ್ರಯೋಗಿಸುವ ಸಾಧ್ಯತೆ ನನಗೆ ನಿಚ್ಚಳವಾಗಿ ಗೋಚರಿಸುತ್ತಿದೆ. ನನಗೆ ಈ ವಿಚಾರದಲ್ಲಿ ಸಾಕಷ್ಟು ಆತಂಕವಿದೆ. ನಾಗೀಗಾಲೇ ಹೇಳಿದಂತೆ, ಇಸ್ರೇಲಿಗರು ಇರಾನ್‌ ಕುರಿತು ಮೊದಲಿನಿಂದಲೂ ಆತಂಕ ಹೊಂದಿದವರಾಗಿದ್ದಾರೆ. ಇಸ್ರೇಲಿನ ಪ್ರಕಾರ ಇರಾನ್‌ ಮುಂದೊಂದು ದಿನ ಅಣುಬಾಂಬನ್ನು ಹೊಂದಲಿದೆ ಮತ್ತು ಇದು ಇಸ್ರೇಲ್‌ ಅಸ್ತಿತ್ವಕ್ಕೆ ಅಪಾಯಕಾರಿಯಾಗಲಿದೆ. ನನ್ನ ಪ್ರಕಾರ, ಇಸ್ರೇಲಿಗೆ ಇರಾನ್‌ ಈಗಾಗಲೇ ಅಣುಬಾಂಬ್‌ ಪಡೆದುಕೊಳ್ಳಲು ಯತ್ನಿಸುತ್ತಿದೆ ಎನ್ನುವ ಬಲವಾದ ಗುಮಾನಿ ಇದೆ. ಹಾಗಾಗಿ, ಇರಾನ್‌ ಮೇಲೆ ತಾವೇ ಅಣುಬಾಂಬನ್ನು ಮೊದಲು ಪ್ರಯೋಗಿಸಬೇಕೆಂಬ ತೀರ್ಮಾನಕ್ಕೆ ಇಸ್ರೇಲ್‌ ಬಂದಿರುವಂತೆ ಕಾಣುತ್ತದೆ. ಏಕೆಂದರೆ, ಇರಾನ್‌ ಅಣುಬಾಂಬ್‌ನ್ನು ಹೊಂದದಂತೆ ತನಗೆ ತಡೆಯಲು ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಇಸ್ರೇಲ್‌ ಬಂದಾಗಿದೆ. ಹಾಗಾಗಿ, ಇಸ್ರೇಲ್‌ಗೆ ಇರಾನ್‌ ಮೇಲೆ ಅಣುಬಾಂಬು ಬಳಸುವುದೊಂದೆ ಈಗಿರುವ ದಾರಿ ಎನಿಸಿದೆ. ಹೀಗಾಗಿ, ಇಸ್ರೇಲ್‌ ಇರಾನ್‌ ಮೇಲೆ ಅಣುಬಾಂಬ್‌ ಪ್ರಯೋಗಿಸಿಯೇ ಪ್ರಯೋಗಿಸುತ್ತದೆ ಎನ್ನುವುದನ್ನು ನನ್ನ ಅಂದಾಜಾಗಿದೆ.

ನನ್ನ ಈ ಮಾತುಗಳನ್ನು ಕೇಳಿ, ಒಂದು ವೇಳೆ ಇಸ್ರೇಲ್‌ ಅಣುಬಾಂಬ್‌ ಪ್ರಯೋಗಿಸಲು ಮುಂದಾದಲ್ಲಿ, ಅಮೆರಿಕಾ ಅದನ್ನು ತಡೆಯುತ್ತದೆಂದು ನೀವು ಯೋಚಿಸುತ್ತಿರಬಹುದು. ಇಲ್ಲ, ಖಂಡಿತ ಇಲ್ಲ. ಅಮೆರಿಕಾ ಇಸ್ರೇಲ್‌ ಅನ್ನು ತಡೆಯಲು ಹೋಗುವುದಿಲ್ಲ. ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಜನಾಂಗೀಯ ಹತ್ಯೆಗೆ ಎರಡೂ ದೇಶಗಳ ಕೈಜೋಡಿಸಿರುವುದು ನಿಚ್ಚಳವಾಗಿ ಕಾಣುತ್ತಿದೆ ಅಲ್ಲವೇ? ಅತ್ಯಂತ ಅಸಹಾಯಕ ಸ್ಥಿತಿಯಲ್ಲಿ ಟ್ರಂಪ್‌ ಇದ್ದಾಗ, ಇರಾನ್‌ಗೆ ನೀಡಲಾದ ಎಚ್ಚರಿಕೆಯಲ್ಲಿ ಜನಾಂಗೀಯ ಹತ್ಯೆಯ ಛಾಯೆಯ ಇರುವಿಕೆಯನ್ನು ನಾವು ಗುರುತಿಸಬೇಕಿದೆ. ಇಸ್ರೇಲ್‌ ಪರವಾಗಿ ಅಮೆರಿಕಾದಲ್ಲಿ ಚಾಲ್ತಿಯಲ್ಲಿರುವ ಲಾಬಿಗಳ ಒತ್ತಾಯ / ಒತ್ತಡವನ್ನು ಗಮನಿಸಿದರೆ, ಇಸ್ರೇಲ್‌ ಅನ್ನು ಅಣುಬಾಂಬ್‌ ಪ್ರಯೋಗದಿಂದ ದೂರವಾಗುವಂತೆ ಮಾಡುವ ಶಕ್ತಿ ಅಮೆರಿಕಾಕ್ಕೆ ಇರುವುದಿಲ್ಲ.

ಕೊನೆಯದಾಗಿ ಎರಡು ಅಂಶಗಳನ್ನು ನಾನು ಪ್ರತಿಪಾದಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ. ಮೊದಲಿಗೆ ಅಮೆರಿಕಾದ ಕೊರಳಿಗೆ ನೇತುಬಿದ್ದಿರುವ ಕಲ್ಲಿನ ಹಾರವೇ ಇಸ್ರೇಲ್‌ ಆಗಿರುತ್ತದೆ. ಮಧ್ಯ ಏಷಿಯಾದ ಪ್ರದೇಶವು ಮುಂದಿನ ಎರಡು ವರ್ಷಗಳ ಮಟ್ಟಿಗೆ ಅಪಾಯಕಾರಿ ಪ್ರದೇಶವಾಗಿರುತ್ತದೆ. ಏಕೆ ಹೀಗೆ ಎಂದು ನಾನು ಈಗಾಗಲೇ ವಿಷದವಾಗಿ ಚರ್ಚಿಸಿದ್ದೇನೆ. ಧನ್ಯವಾದಗಳು.

(ಮೂಲ ಭಾಷಣದ ವಿಡಿಯೋ ಲಿಂಕ್‌: https://youtu.be/nXQLRDDmU6Q?si=fCq2eW7nvAA3bAVw)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ನೆಹರೂ–ಗಾಂಧಿ, ಯಾದವ್ ಕುಟುಂಬಗಳ ನಾಯಕತ್ವ ಬೇಡ’: ಒವೈಸಿ ಹೇಳಿಕೆಗೆ ವಿಪಕ್ಷಗಳ ತೀವ್ರ ಆಕ್ರೋಶ

ಮುಸ್ಲಿಂ ಯುವಕರು ನೆಹರೂ–ಗಾಂಧಿ ಮತ್ತು ಯಾದವ್ ಕುಟುಂಬಗಳ ರಾಜಕೀಯ ನಾಯಕತ್ವವನ್ನು ಅನುಸರಿಸುವುದನ್ನು...

ಬೀದರ್‌ | ಗಾಯಕ ದೇವದಾಸಗೆ ಒಲಿದ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ

ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು,...

ಬಡತನ ಮೆಟ್ಟಿ ಬಿಲ್ಲುಗಾರಿಕೆ ಒಲಿಸಿಕೊಂಡ ದೇವಮ್ಮ: ಒಲಂಪಿಕ್ಸ್‌ ಕನಸಿಗೆ ಸ್ಪೂರ್ತಿ ತುಂಬಿದ ಎಂ.ಬಿ ಪಾಟೀಲ್‌

ಬಡತನದ ನಡುವೆಯೂ ಬಿಲ್ಲುಗಾರಿಕೆಯಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಲ್ಯಾಣ ಕರ್ನಾಟಕದ ಪ್ರತಿಭೆ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ ಲಾರೆನ್ಸ್ ಬಿಷ್ಣೋಯ್‌ವರೆಗೆ!

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ...