ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಗತ್ತಿಗೆ ಜಾತಿರಹಿತ ಸಮಾಜ ನಿರ್ಮಾಣ ಸಿದ್ಧಾಂತ ನೀಡಿದ್ದಾರೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅಭಿಪ್ರಾಯಪಟ್ಟರು.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಗೊಣಸಗಿ ಬಸವೇಶ್ವರ ಮೂರ್ತಿ ಅನಾವರಣ, ಸಮುದಾಯ ಭವನ ಉದ್ಘಾಟನೆ, ಸರಣಿ ಬಾಂದಾರಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು “ಜಿಲ್ಲೆಯಲ್ಲಿ ಜನಿಸಿದ ಬಸವಣ್ಣನವರು ಜಗತ್ತಿಗೆ ಸಮಾನತೆ, ಕಾಯಕ, ಮಾನವೀಯತೆ, ಅನುಭವ ಮಂಟಪದಂಥ ಶ್ರೇಷ್ಠ ಸಿದ್ಧಾಂತ ನೀಡಿದರು. ಎಲ್ಲ ಕಾಯಕದ ಜನರನ್ನು ಸೇರಿಸಿ ಅನುಭವಮಂಟಪ ರಚಿಸಿದ್ದರು. ಈ ಮೂಲಕ ಮಾನವೀಯತೆಯೇ ಶ್ರೇಷ್ಠ ಎಂದು ಸಾರಿದ್ದಾರೆ. ಸಮಾಜಕ್ಕೆ ಬಸವ ಸಂಸ್ಕೃತಿ ಮಾದರಿಯಾಗಿದೆ” ಎಂದು ಹೇಳಿದರು.
“ಮುಂಬರುವ ನೀರಾವರಿ ಹಂಗಾಮಿನಲ್ಲಿ ಹೊಲಗಾಲುವೆಗಳ ಕಾಮಗಾರಿ ಪೂರ್ಣವಾಗಲಿದ್ದು, ಗೊಣಸಗಿ, ಅಳಗಿನಾಳ ಹಾಗೂ ಕಳ್ಳಕವಟಗಿ ಗ್ರಾಮಗಳ ಕೊನೆಯ ಭಾಗಕ್ಕೂ ನೀರಾವರಿ ಸೌಲಭ್ಯ ಸಿಗಲಿದೆ. ಗೊಣಸಗಿ ಗ್ರಾಮದಲ್ಲಿ ಸಿಎಸ್‌ಆರ್ ಅನುದಾನದಲ್ಲಿ ಐದು ಶಾಲಾ ಕೊಠಡಿ ನಿರ್ಮಾಣ ಮಾಡಲಾಗುವುದು. ಲಕ್ಷ್ಮಿ ದೇವಸ್ಥಾನಕ್ಕೆ ಶಿಖರ ನಿರ್ಮಿಸಲಾಗುವುದು. ಮಠದ ಅಭಿವೃದ್ಧಿ ಮಾಡಲಾಗುವುದು. ಅಲ್ಲದೇ, ಈ ಭಾಗದ ಹಳ್ಳಗಳಿಗೆ ಸರಣಿ ಬಾಂದಾರ ನಿರ್ಮಿಸುವ ಮೂಲಕ ವರ್ಷವಿಡಿ ಅಂತರ್ಜಲ ವೃದ್ಧಿಸಲು ಕ್ರಮ ಕೈಗೊಳ್ಳಲಾಗಿದೆ” ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದರು.
ಇದನ್ನೂ ಓದಿ> ಸಮಾನತೆಗಾಗಿ ಬಸವ ಜಯಂತಿ: ಬೆಳಗಾವಿಯಲ್ಲಿ ಬೃಹತ್ ಬೈಕ್ ರ್ಯಾಲಿ
ರೇಣುಕಾ ಶಿವಾಚಾರ್ಯರು ಮಾತನಾಡಿ, “ಸಚಿವ ಎಂ ಬಿ ಪಾಟೀಲರು ರಾಜ್ಯದಲ್ಲಿ ನೀರಾವರಿಗಾಗಿ ಯಾವುದೇ ಮುಖ್ಯಮಂತ್ರಿಗಳೂ ಮಾಡದಷ್ಟು ಕೆಲಸ ಮಾಡಿದ್ದಾರೆ. ಅವರ ಕಾರ್ಯಗಳು ರಾಜ್ಯವಷ್ಟೇ ಅಲ್ಲ, ನೆರೆಯ ಮಹಾರಾಷ್ಟ್ರದ ಜನರೂ ಮೆಚ್ಚುವಂತೆ ಮಾಡಿವೆ. ಇನ್ನು ಮುಂದೆ ಈ ಭಾಗ ನಂದನವನ ಮಾಡುವ ಸಂಕಲ್ಪ ಹೊಂದಿರುವ ಸಚಿವರ ಕೀರ್ತಿ ಗಗನಮುಖಿಯಾಗಲಿದೆ. ಕಾಯಕ ಮಾಡುವ ಅವರನ್ನು ದೇವರು ಕೈ ಹಿಡಿಯುತ್ತಾರೆ. ಅವರು ಇನ್ನೂ ಅತ್ಯುನ್ನತ ಸ್ಥಾನಕ್ಕೇರಲಿದ್ದಾರೆ” ಎಂದು ಹೇಳಿದರು.
ಮುಖಂಡ ಯಾಕೂಬ್ ಜತ್ತಿ ಮಾತನಾಡಿ, “ಸಚಿವ ಎಂ ಬಿ ಪಾಟೀಲರು ದೇಶಕ್ಕೆ ಮಾದರಿಯಾಗುವಂಥ ನೀರಾವರಿ ಕೆಲಸ ಮಾಡಿದ್ದಾರೆ. ಗೊಣಸಗಿ ಗ್ರಾಮಸ್ಥರ ಸಕಲ ಬೇಡಿಕೆಗಳನ್ನು ಈಡೇರಿಸಿದ್ದಾರೆ” ಎಂದರು.
ಈ ಸಂದರ್ಭದಲ್ಲಿ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ರಾಮಣ್ಣ ಮೇಡೆಗಾರ, ಆರ್ ಎಂ ಮಸಳಿ, ಸೋಮನಾಥ ಬಾಗಲಕೋಟ, ಸಿದ್ದರಾಯ ಸಿದ್ದನಾಥ, ಅಮಸಿದ್ದಗೌಡ ಪೊಲೀಸ್ ಪಾಟೀಲ, ಆರ್ ಎಚ್ ಭಜಂತ್ರಿ, ಶ್ರೀಮಂತ ಭಂಡಗಾರ, ಎಸ್ ಕೆ ಸಿದ್ದನಾಥ, ಸಿದ್ದಗೊಂಡ ರುದ್ರಗೌಡರ, ಗುರು ಮಾಳಿ, ಬಸಲಿಂಗ ನಿಡೋಣಿ ಸೇರಿದಂತೆ ನಾನಾ ಅಧಿಕಾರಿಗಳು, ಗ್ರಾಮದ ಹಿರಿಯರು, ಮಹಿಳೆಯರು, ಯುವಜನರು ಇದ್ದರು.




