ಕನ್ನಡ ಭಾಷೆಯ ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದ ಧಾರವಾಡ ಆಕಾಶವಾಣಿ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗದ ಕಾರ್ಯಭಾರವನ್ನು ತಾತ್ಕಾಲಿಕವಾಗಿ ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಸ್ಥಳಾಂತರಿಸಲು ಆಕಾಶವಾಣಿ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಧಾರವಾಡ ಬಾನುಲಿ ಸುದ್ದಿ ವಿಭಾಗ ಇಲ್ಲಿಯೇ ಉಳಿಯಬೇಕೆಂದು ಆಗ್ರಹಿಸಿಸಲಾಗಿದೆ.
ಧಾರವಾಡ ಬಾನುಲಿ ಕೇಂದ್ರವು ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿದ್ದು, 1950ರ ಜನವರಿ 8ರಂದು ಬಾಂಬೆ ಸರ್ಕಾರ ಧಾರವಾಡ ಆಕಾಶವಾಣಿ ಕೇಂದ್ರವನ್ನು ತೆರೆದಿತ್ತು. ಅಂದಿನ ಕೇಂದ್ರ ಮಾಹಿತಿ ಮತ್ತು ಪ್ರಸಾರಂಗ ಇಲಾಖೆ ಸಚಿವ ರಂಗನಾಥ ದಿವಾಕರ ಉದ್ಘಾಟನೆ ಮಾಡಿದ್ದರು. ಈ ಧಾರವಾಡ ಬಾನುಲಿ ಕೇಂದ್ರ ಪ್ರಸಾರದ ಮೂಲಕ ಗಾಯಕರಾದ ಡಾ. ಗಂಗೂಬಾಯಿ ಹಾನಗಲ್ಲ, ಭೀಮಸೇನ್ ಜೋಶಿ, ಬಸವರಾಜ ರಾಜಗುರು, ಗುರುರಾವ್ ದೇಶಪಾಂಡೆ, ವಿ ಎ ಕಾಗಲಕರ್ ಅವರು ಹಾಡಿದ ವಂದೇ ಮಾತರಂ ಗೀತೆಯನ್ನು ಬಿತ್ತರಿಸುವ ಮುಖಾಂತರ ಆರಂಭಿಸಲಾಗಿತ್ತು. ಹಿಂದೂಸ್ಥಾನಿ ಸಂಗೀತ ಮತ್ತು ಕನ್ನಡ ಭಕ್ತಿ ಸಂಗೀತ ಹೆಚ್ಚು ಪ್ರಸಿದ್ಧಿ ಪಡೆದಿದ್ದವು. ಹಲವಾರು ಪ್ರಸಿದ್ಧ ಸಂಗೀತಗಾರರು ಮತ್ತು ಕಲಾವಿದರು ಇಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಕೊಪ್ಪಳ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ, ರಾಯಚೂರು, ಬೀದರ್, ಗದಗ, ಕಲಬುರಗಿ, ಬಳ್ಳಾರಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಬುಲೆಟಿನ್ ಮಾಡಲಾಗುತ್ತಿದೆ.
ಧಾರವಾಡ ಆಕಾಶವಾಣಿ ಕೇಂದ್ರ ಕಳೆದ ವರ್ಷ ಅಮೃತ ಮಹೋತ್ಸವ ಆಚರಿಸಿದೆ. ಸುದ್ದಿ ವಿಭಾಗಕ್ಕೆ ಸುಮಾರು 45 ವರ್ಷಗಳ ಸುದೀರ್ಘ ಇತಿಹಾಸವಿದೆ. ಬೆಳಿಗ್ಗೆ 7.05ಕ್ಕೆ ಹಾಗೂ ಮದ್ಯಾಹ್ನ 12ಕ್ಕೆ ಪ್ರದೇಶ ಸಮಾಚಾರ ಧಾರವಾಡ ಆಕಾಶವಾಣಿ ಬಾನುಲಿ ವಿಭಾಗದಿಂದ ಪ್ರಸಾರ ಮಾಡಲಾಗುತ್ತದೆ.
ಧಾರವಾಡ ಆಕಾಶವಾಣಿ ಬಾನುಲಿ ಕೇಂದ್ರವು ಸಾಂಸ್ಕೃತಿಕ ಅಸ್ಮಿತೆಯ ಭಾಗವಾಗಿ ಆರಂಭದಿಂದ ಈವರೆಗೂ ಗುರುತಿಸಿಕೊಂಡು ಬಂದಿರುವುದು ಧಾರವಾಡ ಜಿಲ್ಲೆಗೆ ಹೆಮ್ಮೆಯಾಗಿದೆ. ಇದೀಗ ದೆಹಲಿಯಲ್ಲಿನ ಪ್ರಸಾರ ಭಾರತಿ ನಿರ್ದೇಶನಾಲಯವು ಏಪ್ರಿಲ್ 17ರಂದು ಆದೇಶಿಸಿದ್ದು, ಮೇ 15ರಿಂದ ಧಾರವಾಡ ಆಕಾಶವಾಣಿ ಬಾನುಲಿ ಕೇಂದ್ರವನ್ನು ಸ್ಥಳಾಂತರಿಸಲಾಗುವುದು ಎಂದು ಸೂಚಿಸಿದೆ. ಇದರಿಂದ ‘ಪ್ರದೇಶ ಸಮಾಚಾರ’ ಸೇರಿ ಸುದ್ದಿ ಕಾರ್ಯಕ್ರಮಗಳು ಬೆಂಗಳೂರು ಆಕಾಶವಾಣಿ ಕೇಂದ್ರದ ಮೂಲಕ ಪ್ರಸಾರವಾಗುವ ಸಾಧ್ಯತೆಗಳಿವೆ. ಆದರೆ ʼಧಾರವಾಡ ಬಾನುಲಿ ಕೇಂದ್ರವು ಧಾರವಾಡದಲ್ಲಿಯೇ ಉಳಿಯಬೇಕುʼ ಎಂಬುದು ಇಲ್ಲಿಯ ಜನರ ಆಗ್ರಹವಾಗಿದೆ.
ಈ ಕುರಿತು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಮಾತನಾಡಿ, “ಧಾರವಾಡ ಪ್ರತಿಬಿಂಬವಾಗಿರುವ ಬಾನುಲಿ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುತ್ತಿರುವುದು ಖಂಡನೀಯವಾಗಿದ್ದು, ಆಕಾಶವಾಣಿ ಬಾನುಲಿ ಸುದ್ದಿ ವಿಭಾಗವನ್ನು ಧಾರವಾಡದಲ್ಲಿಯೇ ಉಳಿಯಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿದ್ದೀರಾ? ಬೆಳಗಾವಿ | ತಂಪೆರೆದ ಮಳೆಯಿಂದ ಅನೇಕ ಕಡೆಗಳಲ್ಲಿ ಹಾನಿ
ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ಮಾತನಾಡಿ, “ಧಾರವಾಡ ಬಾನುಲಿ ಕೇಂದ್ರವು ತನ್ನದೇ ಆದ ಇತಿಹಾಸ ಹೊಂದಿದೆ. ಕೇಂದ್ರ ಪ್ರಸಾರ ನಿರ್ದೇಶನಾಲಯ ಸ್ಥಳಾಂತರಿಸುವ ಆದೇಶ ಹೊರಡಿಸಿರುವುದು ಸರಿಯಾದ ನಡೆಯಲ್ಲ. ಬಾನುಲಿ ಪ್ರಸಾರ ಕೇಂದ್ರ ಧಾರವಾಡದಲ್ಲಿಯೇ ಉಳಿಯಬೇಕು. ಈ ಕುರಿತು ಸಂಸದರು ಪ್ರಲ್ಹಾದ್ ಜೋಶಿಯವರು ಕೇಂದ್ರದ ಜತೆಗೆ ಚರ್ಚಿಸಿ ಇಲ್ಲಿಯೇ ಇರುವಂತೆ ಮಾಡಬೇಕು. ಒಂದು ವೇಳೆ ಬಾನುಲಿ ಕೇಂದ್ರ ಬೆಂಗಳೂರಿಗೆ ಸ್ಥಳಾಂತರಗೊಂಡರೆ ಕಸಾಪದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಪ್ರತಿಕ್ರೀಯೆ ನೀಡಿದ್ದಾರೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.




