‘ಅಮೆರಿಕದ ಡಾಲರ್ ಬಲಗೊಳ್ಳುತ್ತಿದೆ. ಇದರ ಎದುರು ಮಾತ್ರ ರೂಪಾಯಿ ಮೌಲ್ಯ ಕುಸಿಯುತ್ತಿದೆ. ಆದರೆ, ಇತರ ಎಲ್ಲ ಕರೆನ್ಸಿಗಳ ಎದುರು ರೂಪಾಯಿ ಮೌಲ್ಯ ಸ್ಥಿರವಾಗಿದೆ. ಇತರೆ ದೇಶಗಳ ಕರೆನ್ಸಿ ಎದುರು ರೂಪಾಯಿ ಮೌಲ್ಯ ಇಳಿಯುತ್ತಿದೆ ಎನ್ನುವುದನ್ನು ಒಪ್ಪುವುದಿಲ್ಲ ತೆರಿಗೆ ಸಂಗ್ರಹ, ಸಾರ್ವಜನಿಕ ಸರಕುಗಳು ಹಾಗೂ ಕಲ್ಯಾಣ ಪರ ಚಟುವಟಿಕೆಗಳ ಮೇಲಿನ ವೆಚ್ಚ, ಹಣದುಬ್ಬರದ ನಿಯಂತ್ರಣ, ಆರ್ಥಿಕ ಪ್ರಗತಿಗೆ ಉತ್ತೇಜನ ಸೇರಿದಂತೆ ಆರ್ಥಿಕತೆಯ ಅಂಶಗಳು ಸದೃಢವಾಗಿವೆ’ ಎಂದು ಇತ್ತೀಚಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತದ ಆರ್ಥಿಕತೆಗೆ ಏರುತ್ತಿರುವ ಡಾಲರ್ ಮೌಲ್ಯ ಯಾವುದೇ ರೀತಿಯಲ್ಲಿ ಪರಿಣಾಮ ಉಂಟು ಮಾಡುತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಹಣಕಾಸು ಸಚಿವರ ಈ ಹೇಳಿಕೆ ದೇಶದ ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಿ ನೀಡಿದ ಮಾತಾಗಿರಲಿಲ್ಲ, ಕೇಂದ್ರ ಸರ್ಕಾರವನ್ನು ಮೆಚ್ಚಿಸುವ, ಸತ್ಯವನ್ನು ಮುಚ್ಚಿಡುವ ರಾಜಕೀಯ ನುಡಿಯಾಗಿತ್ತು. ಜಗತ್ತಿನ ಶೇ. 90ರಷ್ಟು ವಹಿವಾಟು ಡಾಲರ್ ಮೂಲಕವೇ ನಡೆಯುತ್ತಿದೆ. ಅಂತಾರಾಷ್ಟ್ರೀಯ ವಹಿವಾಟು, ವಿದೇಶಿ ವಿನಿಮಯಕ್ಕಾಗಿ ಭಾರತವು ಸೇರಿದಂತೆ ಜಗತ್ತಿನ ಬಹುತೇಕ ದೇಶಗಳು ಡಾಲರ್‌ಅನ್ನು ಅವಲಂಬಿಸಿವೆ ಎಂಬುದು ಅರ್ಥ ಸಚಿವರಿಗೆ ತಿಳಿಯದ ವಿಷಯವೇನಲ್ಲ. ನಮ್ಮ ಆಮದು ಮತ್ತು ರಫ್ತಿಗೆ ಡಾಲರ್ ಅತ್ಯಗತ್ಯ. ಈ ವ್ಯವಹಾರ ಮಾಡುವ ಸಲುವಾಗಿ ನಾವು ಡಾಲರ್ ಅನ್ನು ಖರೀದಿಸಬೇಕು.
ಡಾಲರ್ ಬೆಲೆ ಹೆಚ್ಚಾಗುವುದರಿಂದ ಭಾರತ ಆಮದು ಮಾಡಿಕೊಳ್ಳುವ ತೈಲ, ಬಂಗಾರ, ಸ್ಮಾರ್ಟ್‌ಫೋನ್, ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳ ಬಿಡಿಭಾಗಗಳು, ಯಂತ್ರೋಪಕರಣಗಳು, ಆಟೊಮೊಬೈಲ್ ಬಿಡಿಭಾಗಗಳು, ರಾಸಾಯನಿಕ ವಸ್ತುಗಳು ದುಬಾರಿಯಾಗುತ್ತವೆ. ಇದೆಲ್ಲವು ಹಣದುಬ್ಬರ, ಜಿಡಿಪಿ ಮೇಲೆ ಪರೋಕ್ಷ ಪರಿಣಾಮ ಬೀರಿದರೆ ಎಲ್ಲ ವಸ್ತುಗಳು ಗಗನಕ್ಕೇರಿ ಜನಸಾಮಾನ್ಯರ ನಿತ್ಯ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಪ್ರತಿದಿನವೂ ಡಾಲರ್ ಮೂಲಕವೇ ವಹಿವಾಟು ನಡೆಯುತ್ತದೆ. ಅಲ್ಲಿ ಡಾಲರ್‌ಅನ್ನು ಖರೀದಿಸಲು ನಾವು ಎಷ್ಟು ರೂಪಾಯಿಯನ್ನು ವ್ಯಯ ಮಾಡುತ್ತೇವೆ ಎಂಬುದರ ಮೇಲೆ ನಮ್ಮ ರೂಪಾಯಿಯ ಮೌಲ್ಯ ನಿರ್ಧಾರವಾಗುತ್ತದೆ. ಯುಪಿಎ ಅವಧಿಯ ಕಾಲದ 2012ರಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಸುಮಾರು 50 ರೂ.ಗಳ ಆಸುಪಾಸಿನಲ್ಲಿತ್ತು. ಆದರೆ 2025ರ ವೇಳೆಗೆ 90ರ ಆಸುಪಾಸಿಗೆ ಬಂದಿದೆ. 2012ರಲ್ಲಿ ನಾವು ಒಂದು ಡಾಲರ್ ಖರೀದಿಗೆ ಸುಮಾರು 50 ರೂ. ವ್ಯಯ ಮಾಡುತ್ತಿದ್ದೆವು. ಈಗ 87 ರೂ. ವ್ಯಯಿಸಬೇಕಾಗಿದೆ. ಇನ್ನು 2015 ಹಾಗೂ 2025 ನಡುವೆ ರೂಪಾಯಿ ವಾರ್ಷಿಕವಾಗಿ ಸರಾಸರಿ ಶೇ 3.5 ರಷ್ಟು ಕುಸಿದಿದೆ.
ಭಾರತ ಬೃಹತ್ ಪ್ರಮಾಣದ ವ್ಯಾಪಾರದ ಕೊರತೆಯನ್ನು ಹೊಂದಿದೆ. ಅಂದರೆ, ಭಾರತ ತಾನು ರಫ್ತು ಮಾಡುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸರಕು ಮತ್ತು ಸೇವೆಗಳನ್ನು ಆಮದು ಮಾಡಿಕೊಳ್ಳುತ್ತದೆ. ಇದರಿಂದಾಗಿ, ಭಾರತೀಯರು ವಿದೇಶಿ ಉತ್ಪನ್ನಗಳ ಖರೀದಿಗೆ ಹೆಚ್ಚಿನ ವೆಚ್ಚ ಮಾಡಬೇಕಾಗಿ ಬರುವುದರಿಂದ ಹಣದುಬ್ಬರ ಹೆಚ್ಚಿ, ಭಾರತೀಯ ರೂಪಾಯಿಯ ಮೇಲೆ ಇನ್ನಷ್ಟು ಕೆಳಮುಖಿ ಒತ್ತಡ ಹೇರುತ್ತದೆ. ಇದರ ಪರಿಣಾಮವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಸಂಸ್ಥೆಗಳಿಗೆ ವಿದೇಶಿ ಸಂಸ್ಥೆಗಳೊಡನೆ ಸ್ಪರ್ಧಿಸುವುದು ಕಷ್ಟಕರವಾಗಿದೆ.
ರೂಪಾಯಿ ಅಪಮೌಲ್ಯ ಹಾಗೂ ಗಂಭೀರ ಪರಿಣಾಮಗಳು
ಇತ್ತೀಚಿನ ವರ್ಷಗಳಲ್ಲಿ ಭಾರತದಿಂದ ವಿದೇಶಿ ಹೂಡಿಕೆಗಳು ಹೊರಹೋಗುತ್ತಿವೆ. ಇದಕ್ಕೆ ಹಲವು ಕಾರಣಗಳೂ ಇದ್ದು, ಭಾರತದ ಆರ್ಥಿಕ ಅಭಿವೃದ್ಧಿಯ ಚಿತ್ರಣ, ಹಾಗೂ ರಾಜಕೀಯ ಪರಿಸ್ಥಿತಿಗಳೂ ಕಾರಣಗಳಾಗಿವೆ. ಕೆಲವು ಹತ್ತು ವರ್ಷಗಳಿಂದ ಭಾರತೀಯ ಆರ್ಥಿಕತೆ ನಿಧಾನಗತಿಯ ಅಭಿವೃದ್ಧಿ ಸಾಧಿಸುತ್ತಿದೆ. ಇದು ಭಾರತೀಯ ಆರ್ಥಿಕತೆಯ ದೀರ್ಘಕಾಲಿಕ ಸ್ಥಿರತೆಯ ಕುರಿತಾದ ಪ್ರಶ್ನೆಗಳನ್ನು ಮೂಡುವಂತೆ ಮಾಡಿದೆ. ಇದು ಸಹ ರೂಪಾಯಿಯ ಮೇಲೆ ಹೆಚ್ಚಿನ ಒತ್ತಡ ಹೇರಿದೆ.
ವಿದೇಶಿ ವಿನಿಮಯ ನಿಧಿಯನ್ನು ಹೆಚ್ಚಿಸುವುದು, ಬಂಡವಾಳ ಹೊರ ಹೋಗುವುದರ ಮೇಲೆ ನಿಬಂಧನೆಗಳನ್ನು ಹೇರುವುದು ಸೇರಿದಂತೆ ರೂಪಾಯಿಯನ್ನು ಸ್ಥಿರಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅರ್ಥ ಸಚಿವರು ಹೇಳುತ್ತಾರೆ. ಆದರೆ ಈ ಕ್ರಮಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ವರ್ಷಗಳಲ್ಲಿ ರೂಪಾಯಿಯ ಅಪಮೌಲ್ಯ ಭಾರತೀಯ ಆರ್ಥಿಕತೆಗೆ ಬಹುದೊಡ್ಡ ಸವಾಲುಗಳನ್ನು ತಂದೊಡ್ಡುವ ಸಾಧ್ಯತೆಗಳಿವೆ.
ಆರ್ಥಿಕ ಪ್ರಗತಿ ಕುಂಠಿತಗೊಂಡಾಗ ಅದು ಭಾರತೀಯ ಸರಕು ಮತ್ತು ಸೇವೆಗಳಿಗಾಗಿ ಬೇಡಿಕೆ ಕುಸಿಯುವಂತೆ ಮಾಡುತ್ತದೆ. ಇದು ಸಹ ರೂಪಾಯಿ ಕುಸಿಯಲು ಕಾರಣವಾಗುತ್ತದೆ. ರಾಜಕೀಯ ಅಸ್ಥಿರತೆಯ ಪರಿಣಾಮವಾಗಿ, ಹೂಡಿಕೆಗಳು ಹೊರ ಹೋಗುವಂತಾಗುತ್ತದೆ. ಇದು ಹೂಡಿಕೆದಾರರ ಆತ್ಮವಿಶ್ವಾಸ ಕಡಿಮೆಯಾಗುವಂತೆ ಮಾಡುತ್ತದೆ. ಇದೂ ರುಪಾಯಿಯ ಮೇಲೆ ಋಣಾತ್ಮಕ ಒತ್ತಡ ಹೇರುತ್ತದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿದ್ರಿಸುವ ಸಚಿವರು, ಪ್ರಶ್ನಿಸದ ಸಂಸದರು- ಕರ್ನಾಟಕದ ಹಿತ ಕಾಪಾಡುವವರು ಯಾರು?
ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಅಮೆರಿಕದ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಟ್ರಂಪ್ ಭಾರತವು ಸೇರಿದಂತೆ ವಿದೇಶಗಳು ತಮ್ಮ ದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಸುಂಕವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದಾರೆ. ಇದು ಕೂಡ ಡಾಲರ್ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಲಿದೆ. ಭಾರತದಲ್ಲಿ ಹೂಡಿಕೆಗಳು ಮತ್ತಷ್ಟು ಕಡಿಮೆಯಾಗುವ ಅಪಾಯವಿದೆ. ವರದಿಗಳ ಪ್ರಕಾರ ದೇಶದಲ್ಲಿ ವಿದೇಶಿ ನಿಧಿ ವ್ಯವಸ್ಥಾಪಕರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ 1,13,858 ರೂ. ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಆದರೆ ಈ ವರ್ಷದ ಜನವರಿ ವೇಳೆಗೆ ಮಾರಾಟವಾಗಿರುವುದು ಹೆಚ್ಚುವರಿ 41,872 ಕೋಟಿ ರೂ.ಗಳು ಮಾತ್ರ. ಅದಲ್ಲದೆ ವಿದೇಶಿ ಹೂಡಿಕೆದಾರರು ಈ ವರ್ಷದ ಜನವರಿಯಲ್ಲಿ 64,156 ಕೋಟಿ ರೂ.ಅನ್ನು ಭಾರತೀಯ ಷೇರುಗಳಿಂದ ಹಿಂತೆಗೆದುಕೊಂಡಿರುವುದು ಕಳವಳಕಾರಿ ಸಂಗತಿಯಾಗಿದೆ.
ದುರ್ಬಲ ರೂಪಾಯಿ ಸರಕು ರಫ್ತನ್ನು ಹೆಚ್ಚಿಸದೇ ಇರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಸಂಸ್ಕರಿಸಿದ ಪೆಟ್ರೋಲಿಯಂನಲ್ಲಿ ಭಾರತ ಎರಡನೇ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿದೆ. ಅಮೆರಿಕದಲ್ಲಿ ಟ್ರಂಪ್ ಅಧಿಕಾರವಧಿ ವಿಸ್ತರಣೆಯಾಗಿರುವುದರಿಂದ ಆ ದೇಶದ ಸುಂಕಗಳು ಭಾರತದ ರಫ್ತಿಗೂ ಸವಾಲನ್ನು ಒಡ್ಡಬಹುದು.
ರೂಪಾಯಿ ಮೌಲ್ಯ ಇಳಿಕೆಯಾಗುವುದರಿಂದ ಜನಸಾಮಾನ್ಯರ ಮೇಲಾಗುವ ಮೊದಲ ಪರಿಣಾಮ ಬೆಲೆ ಏರಿಕೆ. ಸಾಮಾನ್ಯರು ಬಳಕೆ ಮಾಡುವ ಬಹುತೇಕ ವಸ್ತುಗಳು ವಿದೇಶದಿಂದ ಆಮದಾಗುತ್ತವೆ. ನಮಗೆ ಮಾರಾಟ ಮಾಡುವವರು, ಹೆಚ್ಚು ಬೆಲೆ ನೀಡಿ, ವಿದೇಶದಿಂದ ಖರೀದಿ ಮಾಡುತ್ತಾರೆ. ಈ ಹೊರೆಯನ್ನು ಅವರು ಜನರ ಮೇಲೆ ಹಾಕುತ್ತಾರೆ. ತೈಲ, ಅಡುಗೆ ಅನಿಲದ ದರವೂ ಹೆಚ್ಚಾಗುತ್ತದೆ. ಏಕೆಂದರೆ ಭಾರತ ಬಳಕೆ ಮಾಡುವ ಒಟ್ಟಾರೆ ತೈಲೋತ್ಪನ್ನ ವಸ್ತುಗಳಲ್ಲಿ ಶೇ. 85ರಷ್ಟನ್ನು ವಿದೇಶದಿಂದಲೇ ತರಿಸಿಕೊಳ್ಳುಲಾಗುತ್ತಿದೆ. ಕಾರು ಸೇರಿದಂತೆ ವಾಹನಗಳ ಬೆಲೆಯೂ ಹೆಚ್ಚಾಗುತ್ತದೆ. ಕಾರು ನಿರ್ಮಾಣಕ್ಕೆ ಬಳಕೆ ಮಾಡುವ ಹೆಚ್ಚಿನ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತೇವೆ. ಮೊಬೈಲ್ ಫೋನ್‌ಗಳು ಸೇರಿದಂತೆ ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳ ದರವೂ ಹೆಚ್ಚಾಗುತ್ತದೆ. ವಿಮಾನಕ್ಕೆ ಬಳಸುವ ತೈಲದ ದರವೂ ಹೆಚ್ಚುವುದರಿಂದ ವಿದೇಶಿ ಪ್ರಯಾಣವೂ ತುಟ್ಟಿಯಾಗುತ್ತದೆ.
ಆರಂಭದಲ್ಲಿ ಪೌಂಡ್ ಮೂಲಕ ಭಾರತದ ವ್ಯವಹಾರ
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವು ದಶಕಗಳ ಹಿಂದೆಯೇ ಶುರುವಾಗಿದೆ. ಆಂಗ್ಲರ ಕಾಲದಲ್ಲಿ ಭಾರತದ ವ್ಯವಹಾರವು ಪೌಂಡ್ ಮೂಲಕ ನಡೆಯುತ್ತಿತ್ತು. ಆಗ ಒಂದು ಪೌಂಡ್‌ಗೆ 13 ರೂ. ಮೌಲ್ಯವಿತ್ತು. ಸ್ವಾತಂತ್ರ್ಯ ಬಂದ ನಂತರ ಭಾರತವು ರೂಪಾಯಿ ಮೂಲಕವೇ ವ್ಯವಹಾರ ನಡೆಸತೊಡಗಿತು. 1947ರಲ್ಲಿ ಡಾಲರ್ ಮತ್ತು ರೂಪಾಯಿ ಮೌಲ್ಯಗಳಲ್ಲಿ ಅಂತಹ ಹೆಚ್ಚಿನ ವ್ಯತ್ಯಾಸ ಇರಲಿಲ್ಲ. ಕ್ರಮೇಣ ರೂಪಾಯಿ ಮೌಲ್ಯವನ್ನು ಡಾಲರ್‌ಗೆ ಹೋಲಿಸಿ ನೋಡುವ ಪರಿಪಾಟ ಆರಂಭವಾಯಿತು. 1950ರಿಂದ 1960ರ ನಡುವೆ ಡಾಲರ್ ಎದುರು ಮೊದಲ ಬಾರಿಗೆ ರೂಪಾಯಿಯ ಮೌಲ್ಯ ಕುಸಿತ ಗಮನಾರ್ಹ ಪ್ರಮಾಣದಲ್ಲಿ ನಡೆಯಿತು.
ಸ್ವಾತಂತ್ರ್ಯನಂತರ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗಿತ್ತು. ಅದಕ್ಕೆ ಅಗತ್ಯವಾದಷ್ಟು ಹಣ ಸರ್ಕಾರದ ಬೊಕ್ಕಸದಲ್ಲಿ ಇರಲಿಲ್ಲ. ಆಗ ಡಾಲರ್ ಎದುರು ರೂಪಾಯಿ ಮೌಲ್ಯ 4.75 ರೂ ಇತ್ತು. ನಂತರದಲ್ಲಿ ರೂಪಾಯಿ ಮೌಲ್ಯ ಕುಸಿತಕ್ಕೆ ಒಳಗಾಗಿದ್ದು 1962 ರಿಂದ 1965ರ ನಡುವೆ. ಆ ಅವಧಿಯಲ್ಲಿ ಭಾರತ ಚೀನಾ ಮತ್ತು ಪಾಕಿಸ್ತಾನದ ಜತೆಗೆ ಯುದ್ಧ ನಡೆಸಬೇಕಾಗಿ ಬಂತು. ಆಗಲೂ ಸರ್ಕಾರದ ಹಣಕಾಸಿನ ಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. ಈ ವರ್ಷಗಳಲ್ಲಿ, ದೇಶದ ಹಲವು ಭಾಗಗಳಲ್ಲಿ ಬರ ಕಾಣಿಸಿಕೊಂಡು, ಕೃಷಿ ಉತ್ಪಾದನೆ ಕುಂಠಿತಗೊಂಡಿತ್ತು. ಇವೆಲ್ಲದರ ಕಾರಣದಿಂದ ಡಾಲರ್ ಎದುರು ರೂಪಾಯಿ ಮೌಲ್ಯವು ಕುಸಿಯುತ್ತಾ ಹೋಯಿತು.
1973ರಲ್ಲಿ ಅರಬ್ ರಾಷ್ಟ್ರಗಳು ಪೆಟ್ರೋಲಿಯಂ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರ ಮಾಡಿದವು. ಅದೇ ಸಂದರ್ಭದಲ್ಲಿ ದೇಶದಲ್ಲಿ ಇನ್ನೊಂದೆಡೆ, ಅಮೆರಿಕದ ಫೆಡರಲ್ ರಿಸರ್ವ್, ಹಣದುಬ್ಬರ ಕಡಿಮೆ ಮಾಡಲು ಬಡ್ಡಿ ದರಗಳನ್ನು ಹೆಚ್ಚಿಸಿತು. ಇದರಿಂದ ಜಾಗತಿಕ ಹೂಡಿಕೆದಾರರಿಗೆ ಡಾಲರ್ ಹೆಚ್ಚು ಆಕರ್ಷಕವಾಗಿ ಕಾಣುತ್ತಿದೆ. ಜತೆಗೆ ತೆರಿಗೆ ಕಡಿತದಂಥ ನೀತಿಗಳಿಂದ ಅಮೆರಿಕವು ಹೂಡಿಕೆಯನ್ನು ಉತ್ತೇಜಿಸುತ್ತಿದೆ. ಇದು ರೂಪಾಯಿ ಸೇರಿದಂತೆ ಇತರ ದೇಶಗಳ ಕರೆನ್ಸಿಗಳ ಮೇಲೆ ತೀವ್ರ ಒತ್ತಡ ಹೇರುತ್ತಿದೆ. ಡಾಲರ್ ವಿನಿಮಯಕ್ಕಾಗಿ ಭಾರತವು ಅಪಾರ ಮೊತ್ತದ ಹಣವನ್ನು ವೆಚ್ಚ ಮಾಡುತ್ತಿದೆ. ಅಮೆರಿಕದ ಆರ್ಥಿಕ ಬೆಳವಣಿಗೆಯ ಮುಂದೆ ಇತರ ದೇಶಗಳ ಕರೆನ್ಸಿಗಳ ಮೌಲ್ಯವೂ ಕುಸಿದಿದೆ.
2022 ರಿಂದ ಇಲ್ಲಿವರೆಗೆ ಮೆಕ್ಸಿಕೋ, ನೈಜೀರಿಯಾ, ವಿಯೆಟ್ನಾಂ, ಕೆನಡಾ, ಸಿಂಗಾಪುರ ದೇಶಗಳ ಕರೆನ್ಸಿ ಮೌಲ್ಯ ಶೇ. 5ರಷ್ಟು ಕಡಿಮೆಯಾಗಿದೆ. ಹಾಗೆಯೇ ಇಂಡೋನೇಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ, ಸ್ವಿಜರ್ಲೆಂಡ್, ಕೊಲಂಬಿಯಾ, ಥಾಯ್ಲೆಂಡ್, ಪಿಲಿಪ್ಪಿನ್ಸ್, ನ್ಯೂಜಿಲೆಂಡ್ ದೇಶಗಳ ಕರೆನ್ಸಿ ಮೌಲ್ಯ ಡಾಲರ್ ಎದುರು ಶೇ. 10ರಷ್ಟು ಕುಸಿತವಾಗಿದೆ. ಜೆಕ್ ರಿಪಬ್ಲಿಕ್, ಇಸ್ರೇಲ್, ದಕ್ಷಿಣ ಕೊರಿಯಾ, ಡೆನ್ಮಾರ್ಕ್, ಬ್ರಿಟನ್, ನಾರ್ವೆ, ಚಿಲಿ, ಸ್ವೀಡನ್ ದೇಶಗಳ ಕರೆನ್ಸಿ ಮೌಲ್ಯ ಶೇ. 15ರಷ್ಟು ಇಳಿಕೆಯಾಗಿದೆ. ಪೋಲೆಂಡ್, ಈಜಿಪ್ಟ್, ಜಪಾನ್, ಹಂಗೇರಿ, ಅರ್ಜೆಂಟೀನಾ ದೇಶಗಳ ಕರೆನ್ಸಿ ಶೇ. 20ರಷ್ಟು ಕಡಿಮೆಯಾಗಿದೆ.
ಡಾಲರ್‌ಗೆ ಎದುರಾಗಿ ಭಾರತವು ಒಳಗೊಂಡಿರುವ ಬ್ರಿಕ್ಸ್ ದೇಶಗಳು ವಿದೇಶಿ ವಿನಿಮಯಕ್ಕಾಗಿ ಪ್ರತ್ಯೇಕ ನಾಣ್ಯವನ್ನು ತರುವುದಾಗಿ ಘೋಷಿಸಿದ್ದವು. ಆದರೆ ಮತ್ತಷ್ಟು ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಬೆದರಿಕೆಯೊಡ್ಡಿದ ಮೇಲೆ ಇವೆಲ್ಲ ದೇಶಗಳು ತಣ್ಣಗಾಗಿವೆ. ಭಾರತದಲ್ಲಿ ಎಲ್ಲರನ್ನು ತರಾಟೆಗೆ ತೆಗೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ರಂಪ್ ಎದುರು ನಿಶ್ಯಬ್ದವಾಗಿಬಿಡುತ್ತಾರೆ. ರೂಪಾಯಿ ಬಲಪಡಿಸಲು ಕೇಂದ್ರದಿಂದಲೂ ಕ್ರಮ ಕೈಗೊಳ್ಳಲು ಕಳೆದ 10 ವರ್ಷದಿಂದ ಯಾವುದೇ ಗಂಭೀರ ಪ್ರಯತ್ನ ಕೂಡ ಮಾಡಿಲ್ಲ.
