ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದಾಗ 'ಹಲಾಲ್ ಬಜೆಟ್' ಎಂದೆಲ್ಲಾ ಟೀಕಿಸಿದ ಬಿಜೆಪಿಗರು ಇದೀಗ ಮೋದಿ ಮುಸ್ಲಿಮರಿಗೆ ನೀಡುವ ಕಿಟ್ ಅನ್ನು 'ಹಲಾಲ್ ಕಿಟ್' ಎನ್ನುತ್ತಾರೆಯೇ? ಈ ಹಠಾತ್ ಮುಸ್ಲಿಮ್ ಮೋಹದ ಅರ್ಥವೇನು ಮೋದೀಜಿ?
ಸದಾ ಮುಸ್ಲಿಮರ ವಿರುದ್ಧ ದ್ವೇಷ ಕಾರುವ ರಾಜಕಾರಣದ ಆಟದಲ್ಲಿ ತೊಡಗಿದ್ದ ಬಿಜೆಪಿ, ಇದೀಗ ಸೌಗಾತ್-ಎ-ಮೋದಿ ಮೂಲಕ ಮುಸ್ಲಿಮರ ಓಲೈಕೆಯನ್ನೂ ಶುರು ಮಾಡಿದೆ. ಕಾಂಗ್ರೆಸ್ ಮುಸ್ಲಿಮರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಹಂಗಿಸುತ್ತ ಹಿಂದುಗಳ ವೋಟು ಬಾಚುತ್ತಿದ್ದವರು, ಇದೀಗ ಮುಸಲ್ಮಾನರನ್ನು ಮೆಚ್ಚಿಸಲು ಮತ್ತೊಂದು ಕೀಳುಮಟ್ಟದ ಆಟಕ್ಕೆ ಇಳಿದಿದ್ದಾರೆ.
ವಿಪಕ್ಷಗಳು ಮುಸ್ಲಿಮರ ತುಷ್ಟೀಕರಣ ಮಾಡುತ್ತಿವೆ ಎಂದು ಆರೋಪಿಸುತ್ತಿದ್ದ ಬಿಜೆಪಿ ನಾಯಕರನ್ನು ಸೌಗಾತ್-ಎ-ಮೋದಿ ಈಗ ಇಕ್ಕಟ್ಟಿಗೆ ಸಿಲುಕಿಸಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದಾಗ ‘ಹಲಾಲ್ ಬಜೆಟ್’ ಎಂದೆಲ್ಲಾ ಲೇವಡಿ ಮಾಡಿದ ಬಿಜೆಪಿಗರು ಇದೀಗ ಮೋದಿ ಮುಸ್ಲಿಮರಿಗೆ ಮೋದಿ ನೀಡುವ ಕಿಟ್ ಅನ್ನು ‘ಹಲಾಲ್ ಕಿಟ್’ ಎನ್ನುತ್ತಾರೆಯೇ?
ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡ ಬಿಜೆಪಿ, ಮುಸ್ಲಿಮರು ಮಾತ್ರವಲ್ಲ ಅಲ್ಪಸಂಖ್ಯಾತ ಸಮುದಾಯದ ಪರ ನಾವಿದ್ದೇವೆ ಎಂಬ ‘ಪ್ಲೇ ಕಾರ್ಡ್’ನ್ನು ಎತ್ತಿಹಿಡಿದಿದೆ. ವಿಪಕ್ಷಗಳ ಎಲ್ಲ ನಡೆಯನ್ನೂ ಮುಸ್ಲಿಮರ ಓಲೈಕೆ ಎಂದು ಬಣ್ಣಿಸುತ್ತಿದ್ದ ಬಿಜೆಪಿ ಇದೀಗ ಅದೇ ತಂತ್ರಕ್ಕೆ ಜಾರಿದೆ. ರಾಜಕೀಯದಲ್ಲಿ ಯಾವ ಕುತಂತ್ರ ಬೇಕಾದರೂ ನಡೆಯುತ್ತದೆ ಎಂಬುದಕ್ಕೆ ಇದು ನಿಚ್ಚಳ ಸಾಕ್ಷಿಯಾಗಿದೆ.
ವಕ್ಫ್ ಮಸೂದೆ, ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ, ಶಾದಿ ಭಾಗ್ಯ ಮೊದಲಾದ ವಿಚಾರದಲ್ಲಿ ಕಾಂಗ್ರೆಸ್ಸನ್ನು ಉಗ್ರವಾಗಿ ಟೀಕಿಸುತ್ತಿದ್ದ ಬಿಜೆಪಿ, 32 ಲಕ್ಷ ಬಡ ಮುಸ್ಲಿಮರಿಗೆ ಸೌಗಾತ್-ಎ-ಮೋದಿ ಕಿಟ್ ವಿತರಣೆಯ ತಯಾರಿ ನಡೆಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ನೇತೃತ್ವದಲ್ಲಿ ದೆಹಲಿ, ಮುಂಬೈ ಸೇರಿದಂತೆ ಹಲವೆಡೆ ಮೋದಿ ಚಿತ್ರವಿರುವ ಕಿಟ್ ಹಂಚಿಕೆ ಶುರು ಮಾಡಿದೆ. ಇಷ್ಟು ದಿನ ವಿಪಕ್ಷಗಳ ಯೋಜನೆಗಳನ್ನು ಮುಸ್ಲಿಮ್ ಓಲೈಕೆ ಎಂದು ದಾಳಿ ನಡೆಸಿದ್ದ ಬಿಜೆಪಿ ಮುಖಂಡರು ಈಗ ಉತ್ತರಿಸಲಾಗದ ಸ್ಥಿತಿಗೆ ತಲುಪಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಸೌಗಾತ್-ಎ-ಮೋದಿ ಹೆಸರಿನಲ್ಲಿ ಬಿಜೆಪಿಯಿಂದ ಮುಸ್ಲಿಮರಿಗೆ ಈದ್ ಕಿಟ್
ಈ ಕಿಟ್‌ನಲ್ಲಿ ಏನೆಲ್ಲಾ ಇದೆ ಎಂಬುದು ಕೂಡಾ ಸದ್ಯ ಹೆಚ್ಚು ಚರ್ಚೆಯಾಗುತ್ತಿರುವ ವಿಚಾರ. ಕಿಟ್‌ನಲ್ಲಿ ಒಣ ದ್ರಾಕ್ಷಿ, ಗೋಡಂಬಿ, ಕಡಲೆ ಹಿಟ್ಟು, ರವೆ, ಶ್ಯಾವಿಗೆ, ಸಕ್ಕರೆ ಇರಲಿದೆ. ಇದನ್ನು ಹೊರತುಪಡಿಸಿ ಮಹಿಳೆಯರಿಗೆ, ಪುರುಷರಿಗೆ ಕುರ್ತಾ ಪೈಜಾಮಾ ಬಟ್ಟೆ ಕೂಡಾ ಇರಲಿದೆ. ಮುಸ್ಲಿಮರಿಗೆ ನೀಡುವ ಕಿಟ್‌ನಲ್ಲಿ ಮಾಂಸ ಏಕೆ ಇಟ್ಟಿಲ್ಲ ಎಂದು ಕೆಲವು ನೆಟ್ಟಿಗರು ಲೇವಡಿ ಮಾಡಿದ್ದೂ ಆಗಿದೆ.
ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾದ ಬಿಜೆಪಿಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ದ್ವೇಷ ಭಾಷಣ’ದ ಆಪಾದಿತರು ಹೈಕೋರ್ಟ್ ಜಡ್ಜ್ ಆಗಬಹುದೇ?
ಈ ಹಿಂದೆ ‘ವೋಟ್ ಜಿಹಾದ್’ ಎಂಬಂತಹ ಹೇಳಿಕೆಗಳನ್ನು ನೀಡಿದ್ದ ಬಿಜೆಪಿಗರಿಗೆ ಇದೀಗ ವಿಪಕ್ಷ ನಾಯಕರು “ಇದು ಯಾವ ಜಿಹಾದ್” ಎಂದು ಪ್ರಶ್ನಿಸಿದ್ದಾರೆ. “ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಭಾಷಣ ಮಾಡಿ, ಮುಸ್ಲಿಮರ ಮನೆಗಳ ಮೇಲೆ ಬುಲ್ಡೋಜರ್ ಹರಿಸಿ ನೆಲಸಮ ಮಾಡಿದ ಬಳಿಕ ಇದೀಗ ಬಿಜೆಪಿ ಸೌಗತ್-ಎ-ಮೋದಿ ಎಂಬ ನಾಟಕವನ್ನು ಶುರು ಮಾಡಿದೆ” ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್ ಎಕ್ಸ್‌ನಲ್ಲಿ ಟೀಕಿಸಿದ್ದಾರೆ.
“ಬಿಜೆಪಿ 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಮೋದಿ ಹೆಸರಲ್ಲಿ ಈದ್ ಕಿಟ್ ನೀಡಿದ್ದಾರೆ. ಪವಿತ್ರ ರಂಜಾನ್ ಸಂದರ್ಭದಲ್ಲಿ ಕಿಟ್ ಕೊಡಲಿ, ಅದರಲ್ಲಿ ಯಾವುದೇ ಆಕ್ಷೇಪವಿಲ್ಲ. ಆದರೆ ಇದೇ ಕಾರ್ಯವನ್ನು ಕಾಂಗ್ರೆಸ್‌ನವರು ಮಾಡಿದ್ದರೆ ಬಿಜೆಪಿ ಹೇಗೆಲ್ಲ ಎಗರಾಡುತ್ತಿತ್ತು ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ. ಬಿಜೆಪಿ ನಾಯಕರು ಬೀದಿಗಿಳಿಯುತ್ತಿದ್ದರು. ಕಾಂಗ್ರೆಸ್ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ, ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ರಾದ್ಧಾಂತ ಮಾಡುತ್ತಿದ್ದರು. ಆದರೆ ಈಗ ಬಿಜೆಪಿ ನಾಯಕರೇ ಮುಸ್ಲಿಮರಿಗೆ ಈದ್ ಕಿಟ್ ನೀಡುತ್ತಿದ್ದಾರೆ. ಇದು ತುಷ್ಟೀಕರಣವಲ್ಲವೇ, ಇದು ಓಲೈಕೆ ರಾಜಕಾರಣವಲ್ಲವೇ” ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಉಡುಪಿ ಯೂತ್ ಕಾಂಗ್ರೆಸ್ ಮುಖಂಡ ಕೃಷ್ಣ ಶೆಟ್ಟಿ, “ಮುಸ್ಲಿಮರಿಗೆ ಈದ್ ಕಿಟ್ ನೀಡುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಕಾಂಗ್ರೆಸ್ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದರೆ ಏನಾಗುತ್ತಿತ್ತು? ನಾವು ಹಿಂದೂ ಪರ ಎಂದು ಹೇಳಿಕೊಳ್ಳುವ ಕರಾವಳಿಯ ಶಾಸಕರು, ನಾಯಕರು ಏನು ಹೇಳುತ್ತಿದ್ದರು” ಎಂದು ಪ್ರಶ್ನಿಸಿ ತಿವಿದಿದ್ದಾರೆ.
ಇನ್ನೊಂದೆಡೆ ಶಿವಸೇನೆ ಇಬ್ಭಾಗವಾಗುವುದಕ್ಕೂ ಮುನ್ನ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದ ಶಿವಸೇನೆ (ಯುಬಿಟಿ) ನಾಯಕ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ “ಇದು ಬಿಜೆಪಿಯ ಅಧಿಕಾರದ ಜಿಹಾದ್” ಎಂದಿದ್ದಾರೆ. “ಬಿಜೆಪಿ ತನ್ನ ಹಿಂದುತ್ವದ ಮೂಲಮಂತ್ರ ತೊರೆದಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಬೇಕು. ಬುಲ್ಡೋಜರ್ ದಾಳಿಯಿಂದ ಮನೆ ಕಳೆದುಕೊಂಡವರಿಗೆ ಮತ್ತು ಕೋಮು ಗಲಭೆಯಿಂದ ತಮ್ಮ ಆತ್ಮೀಯರ ಜೀವ ಕಳೆದುಕೊಂಡವರಿಗೆ ಈಗ ಕಿಟ್ ಹಂಚಲಾಗುತ್ತಿದೆ. ಇದು ಬಿಹಾರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಲಾಗುತ್ತಿದೆ” ಎಂದು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವೋಟಿಗಾಗಿ ಮುಸ್ಲಿಂ ಜನಸಂಖ್ಯೆ ಹೆಚ್ಚಳದ ಗುಮ್ಮ ಬಿಟ್ಟರು ಹತಾಶ ಮೋದಿ
ಬಿಹಾರ ಚುನಾವಣೆ ಮತ್ತು ಮುಸ್ಲಿಮರ ಮತ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಕ್ಫ್ ಮಸೂದೆ ವಿಚಾರದಲ್ಲಿ ತನ್ನ ಮಿತ್ರ ಪಕ್ಷ ಬಿಜೆಪಿ ಪರವಾಗಿ ನಿಂತರು. ಈ ನಿಲುವು ಬಿಹಾರದಲ್ಲಿ ಜೆಡಿಯುಗೆ ಮುಸ್ಲಿಮರ ಬೆಂಬಲ ಕುಸಿಯಲು ಕಾರಣವಾಯಿತು. ಅದಕ್ಕೆ ಸ್ಪಷ್ಟ ಉದಾಹರಣೆ ಬಿಹಾರದಲ್ಲಿ ನಿತೀಶ್ ಕುಮಾರ್ ಆಯೋಜಿಸಿದ್ದ ಇಫ್ತಾರ್ ಕೂಟ. ವಕ್ಫ್ ಮಸೂದೆಗೆ ನಿತೀಶ್ ಬೆಂಬಲ ನೀಡುತ್ತಿದ್ದಂತೆ ಹಲವು ಮುಸ್ಲಿಂ ನಾಯಕರು ಜೆಡಿಯು ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾದ ಬೆನ್ನಲ್ಲೇ ಮುಸ್ಲಿಮರನ್ನು ಸಂತೈಸುವ ಸಲುವಾಗಿಯೇ ನಿತೀಶ್ ಇಫ್ತಾರ್ ಕೂಟವನ್ನು ಆಯೋಜಿಸಿ ವಿಫಲವಾದರು.
ಈ ಬೆಳವಣಿಗೆಗಳು ಮುಂದಿನ ಕೆಲವೇ ತಿಂಗಳುಗಳಲ್ಲಿ ಬಿಹಾರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಮೇಲೆ ನೇರ ಪ್ರಭಾವ ಬೀರಲಿದೆ ಎಂಬುದು ಬಿಜೆಪಿಗೆ ಸ್ಪಷ್ಟವಾಗಿದೆ. ಜೊತೆಗೆ ಮುಂದಿನ ವರ್ಷವೇ (2026) ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಲೋಕಸಭೆ ಚುನಾವಣೆ ವೇಳೆ ಮೋದಿ, ಆದಿತ್ಯನಾಥ್, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಮಾಡಿರುವ ಮುಸ್ಲಿಂ ದ್ವೇಷ ಭಾಷಣಗಳು ಒಂದೆರಡಲ್ಲ. ಕಾಂಗ್ರೆಸ್ ಪಕ್ಷ ಹಿಂದೂ ಮಹಿಳೆಯರ ತಾಳಿ ಕಿತ್ತು ನುಸುಳುಕೋರರಿಗೆ (ಮುಸ್ಲಿಮರಿಗೆ) ನೀಡುತ್ತೆ ಎಂಬುದರಿಂದ ಹಿಡಿದು ಇಲ್ಲಿಯವರೆಗೆ, 173 ಭಾಷಣಗಳ ಪೈಕಿ 110 ಭಾಷಣಗಳಲ್ಲಿ ಮುಸ್ಲಿಮರ ವಿರುದ್ಧ ವಿಷ ಕಕ್ಕಿದ್ದಾರೆ ಮೋದಿ. ಇಷ್ಟೆಲ್ಲ ಆದ ನಂತರವೂ ‘ಚಾರ್ ಸೌ ಪಾರ್’ (400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು) ಗುರಿಯನ್ನು ತಲುಪಲಾಗದೆ 240ಕ್ಕೆ ಕುಸಿದಿದ್ದಾರೆ. ಇದೀಗ ಬಿಹಾರ ಚುನಾವಣೆಯ ಹೊಸ್ತಿಲಲ್ಲಿ ‘ಮೋದಿ ಕೀ ಸೌಗತ್ ಕಿಟ್’ಗಳ ಬೂಟಾಟಿಕೆ ನಡೆಯುತ್ತಿದೆ. ಚುನಾವಣೆ ಗೆಲ್ಲಲು ಬಿಜೆಪಿ ಯಾವ ಮಟ್ಟಕ್ಕಾದರೂ ಇಳಿಯಬಲ್ಲದು, ಪರಮ ಅವಕಾಶವಾದಿ ಆಗಬಲ್ಲದು ಎಂಬುದಕ್ಕೆ ಇದು ಬಹುದೊಡ್ಡ ಉದಾಹರಣೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.