ಗನ್ ಬಳಸಿ ದರೋಡೆ ಮಾಡುವಂತಹ ಖದೀಮರು ಸಾಮಾನ್ಯವಾಗಿ ಕರ್ನಾಟಕ ಮೂಲದವರಾಗಿರುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಅಪರಾಧ ತಜ್ಞರು
ರಾಜ್ಯದ ಬೀದರ್ ನಗರವು ಗುರುವಾರ ಭೀಕರ ಪಾತಕಕ್ಕೆ ಸಾಕ್ಷಿಯಾಯಿತು. ಇಬ್ಬರು ಮುಸುಕುಧಾರಿಗಳು ಬಂದೂಕು ಹೊರ ತೆಗೆದು, ಓರ್ವನನ್ನು ಕೊಂದು ಎಟಿಎಂಗೆ ತುಂಬಲು ತಂದಿದ್ದ ಹಣವನ್ನು ದರೋಡೆ ಮಾಡಿ ಬೈಕ್ ಮೂಲಕ ಪರಾರಿಯಾದರು. ಓರ್ವ ಸಿಎಂಎಸ್ ಏಜನ್ಸಿ ಸಿಬ್ಬಂದಿ ಭೀಕರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಖದೀಮರ ಬೆನ್ನು ಹತ್ತಿದ ಕರ್ನಾಟಕ, ತೆಲಂಗಾಣ ಪೊಲೀಸರಿಗೂ ಯಾಮಾರಿಸಿ, ಹೈದ್ರಾಬಾದ್‌ನಲ್ಲಿಯೂ ಗುಂಡು ಹಾರಿಸಿ ತಪ್ಪಿಸಿಕೊಂಡಿದ್ದಾರೆ!
ಹಾಡಹಗಲೇ ಸಿನಿಮೀಯ ಕೃತ್ಯವು ನಮ್ಮೆದರು ನಡೆದಿದೆ. ಕರ್ನಾಟಕ ರಾಜ್ಯದಲ್ಲಿ ಇಂತಹ ಘಟನೆ ನಡೆದು, ಗುಂಡು ಹಾರಿಸಿ ಕೊಂದಿದ್ದು ತೀರಾ ಅಪರೂಪವೇ ಸರಿ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ದುಡ್ಡಿಗಾಗಿ ಯಾರನ್ನಾದರೂ ಕೊಂದು ಓಡುತ್ತೇವೆ ಎಂದು ಈ ಪಾತಕಿಗಳು ನಿಶ್ಚಯಿಸಿರುವುದು ಬೀದರ್ ಘಟನೆಯಿಂದ ಸ್ಪಷ್ಟವಾಗುತ್ತಿದೆ. ಇವರ ಗುರುತು ಪತ್ತೆ ಹಚ್ಚಲಾಗಿದ್ದು, ಎರಡು ಮೂರು ದಿನಗಳಲ್ಲಿ ಹಿಡಿಯುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಇದರಾಚೆಗೆ ಇಂತಹ ಘಟನೆಗಳು ಹೇಳುತ್ತಿರುವ ಇನ್ನೊಂದು ಮುಖದ ಕುರಿತೂ ಚರ್ಚೆ ಶುರುವಾಗಿದೆ.
”ಕೃತ್ಯ ನಡೆದಿರುವ ರೀತಿ ಮತ್ತು ದರೋಡೆಕೋರರು ಹೋಗಿರುವ ಮಾರ್ಗವನ್ನು ಗಮನಿಸಿದರೆ, ಎಟಿಎಂನ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಗೊತ್ತಿರುವವರೇ ಈ ಸಾಹಸಕ್ಕೆ ಕೈ ಹಾಕಿದ್ದಾರೆ” ಎಂಬುದು ನಿವೃತ್ತ ಐಪಿಎಸ್ ಅಧಿಕಾರಿ, ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರ ಅಭಿಪ್ರಾಯ.

ಈದಿನ.ಕಾಂ ಜೊತೆಯಲ್ಲಿ ಮಾತನಾಡಿದ ಅವರು, ”ಇವರಿಗೆ ತಾವು ಹೋಗುವ ಮಾರ್ಗದ ಬಗ್ಗೆ ಪೂರ್ಣ ಮಾಹಿತಿ ಇದ್ದಂತೆ ತೋರುತ್ತದೆ. ಸೆಕ್ಯೂರಿಟಿ ಗಾರ್ಡ್ ಇಲ್ಲದೆ ಇರುವುದು ಈ ಕೃತ್ಯ ನಡೆಸಲು ಸುಲಭವಾಗಿದೆ. ಕ್ಯಾಶ್ ತೆಗೆಯುವ ಮತ್ತು ಲೋಡ್ ಮಾಡುವ ಪ್ರೊಸಿಜರ್ ಬಗ್ಗೆ ಈ ದರೋಡೆಕೋರರಿಗೆ ಮೊದಲೇ ಗೊತ್ತಿದ್ದಂತೆ ಕಾಣುತ್ತಿದೆ” ಎಂದರು.
ಇದನ್ನೂ ಓದಿರಿ: ಉಳ್ಳಾಲ | ಬಂದೂಕು ತೋರಿಸಿ ಹಾಡಹಗಲಲ್ಲೇ ಬ್ಯಾಂಕ್ ದರೋಡೆ
ಮುಂದುವರಿದು, ”ಈ ಕೆಲಸದ ಬಗ್ಗೆ ಮಾಹಿತಿ ಇರುವ ಮಾಜಿ ಉದ್ಯೋಗಿಗಳು ಕೃತ್ಯದಲ್ಲಿ ಭಾಗಿ ಆಗಿರಬಹುದು, ಕೆಲಸದಿಂದ ಡಿಸ್‌ಮಿಸ್ ಆದವರು ದರೋಡೆಗೆ ಇಳಿದಿರಬಹುದು, ಬೇರೊಂದು ಕಂಪನಿಯಲ್ಲಿ ಕೆಲಸ ಮಾಡಿ ಈಗಾಗಲೇ ಇದರ ಅನುಭವ ಹೊಂದಿರುವವರು ಪಾತಕದಲ್ಲಿ ತೊಡಗಿಸಿಕೊಂಡಿರಬಹುದು. ತೀರಾ ಹೊಸಬರು ಇಂತಹದೊಂದು ಸಾಹಸ ಮಾಡಲು ಸಾಧ್ಯವಿಲ್ಲ. ಎಸ್‌ಒಪಿ ಪರಿಚಯ ಇದ್ದವರಷ್ಟೇ ದರೋಡೆಗೆ ಕೈ ಹಾಕಿರಬಹುದು. ನಿರುದ್ಯೋಗದ ಸಮಸ್ಯೆ, ತುರ್ತಾಗಿ ಶ್ರೀಮಂತರಾಗುವ ಗುರಿ- ಇವೆಲ್ಲವೂ ಇಂತಹ ಅಪರಾಧಗಳಿಗೆ ಪ್ರಚೋದನೆಯನ್ನು ನೀಡುತ್ತವೆ” ಎಂದು ಎಚ್ಚರಿಸಿದರು.
‘ಈದಿನ.ಕಾಂ’ಗೆ ಪ್ರತಿಕ್ರಿಯಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್, “ಇದೊಂದು ಬಹುದೊಡ್ಡ ಸೆಕ್ಯುರಿಟಿ ವೈಫಲ್ಯ. ಎಟಿಎಂಗಳಿಗೆ ಹಣ ತುಂಬುವ ಸಿಎಂಎಸ್ ಸಂಸ್ಥೆಯವರು ದೊಡ್ಡ ದೊಡ್ಡ ಬಂದೂಕುಗಳನ್ನು ಭದ್ರತಾ ಸಿಬ್ಬಂದಿಗೆ ಕೊಡುವ ಬದಲು, ತಕ್ಷಣ ಫೈರಿಂಗ್ ಮಾಡಬಹುದಾದ ಸಣ್ಣ ಬಂದೂಕುಗಳನ್ನು ಒದಗಿಸಬೇಕು. ಸ್ಥಳೀಯ ಪೊಲೀಸರು ಆಗಾಗ್ಗೆ ಸಿಎಂಎಸ್ ಗಾಡಿಗಳನ್ನು ಹಿಂಬಾಲಿಸಿ, ಭದ್ರತಾ ಕ್ರಮ ತೆಗೆದುಕೊಂಡಿದ್ದಾರಾ ಎಂಬುದನ್ನು ಪರೀಕ್ಷಿಸಬೇಕು. ನಿರ್ಲಕ್ಷ್ಯ ತೋರಿದ್ದರೆ, ತಕ್ಷಣ ಸಂಸ್ಥೆಗೆ ಎಚ್ಚರಿಕೆ ನೀಡಬೇಕು” ಎಂದು ಸಲಹೆ ನೀಡಿದರು.

ಎಟಿಎಂಗೆ ತುಂಬುವ ಹಣದ ವಿಚಾರದಲ್ಲಿ ಇರುವ ನಿರ್ಲಕ್ಷ್ಯವನ್ನೂ ಈ ಘಟನೆ ಮುನ್ನಲೆಗೆ ತಂದಿದೆ. ಈ ಹಣಕ್ಕೆ ವಿಮೆ ಇರುತ್ತದೆ. ಹಣ ಹೀಗೆ ಕಳೆದು ಹೋದರೆ ವಿಮೆ ಕಂಪನಿಯಿಂದ ರಿಕವರಿ ಮಾಡಿಕೊಳ್ಳಬಹುದೆಂಬುದು ಬ್ಯಾಂಕಿಂಗ್ ಸಿಸ್ಟಮ್‌ನಲ್ಲಿ ಅಜಾಗೃತೆಯನ್ನು ತಂದಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ತಜ್ಞರು.
ಅಪರಾಧ ಜಗತ್ತಿನ ಕುರಿತು ಸುದೀರ್ಘ ಕಾಲ ವರದಿ ಮಾಡಿರುವ ಪ್ರತಿಷ್ಠಿತ ಪತ್ರಿಕೆಯೊಂದರ ಹಿರಿಯ ವರದಿಗಾರರೊಬ್ಬರು ಈದಿನ.ಕಾಂ ಜೊತೆ ಮಾತನಾಡುತ್ತಾ, “ಇದು ಉತ್ತರ ಭಾರತದ ನುರಿತ ದರೋಡೆಕೋರರಿಂದ ಆಗುವ ಕೃತ್ಯದಂತೆ ತೋರುತ್ತಿದೆ” ಎಂದು ವಿವರಿಸಿದರು.
”ಈ ದರೋಡೆಕೋರರು ಸಾಮಾನ್ಯವಾಗಿ ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ಥಾನ ರಾಜ್ಯದಿಂದ ಬಂದವರಾಗಿರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಕರ್ನಾಟಕ, ತೆಲಂಗಾಣದಂತಹ ರಾಜ್ಯದಲ್ಲಿ ಈ ಮಾದರಿಯ ಖದೀಮರು ಸಿಗುವುದು ಕಡಿಮೆ. ಚಾಕು, ಮಚ್ಚು, ಚೂರಿಗೆ ಸೀಮಿತವಾದ ಖದೀಮರು ದಕ್ಷಿಣದ ರಾಜ್ಯಗಳಲ್ಲಿ ಸಿಗುತ್ತಾರೆ. ಗನ್ ಬಳಸಿ ಕೊಲ್ಲುವಂತಹ ದರೋಡೆಕೋರರು ಮೇಲೆ ಹೆಸರಿಸಿದ ಉತ್ತರದ ರಾಜ್ಯಗಳಲ್ಲಿ ಹೆಚ್ಚು. ಬೀದರ್‌ನಲ್ಲಿ ಘಟನೆ ನಡೆದ ಬಳಿಕ, ವಿಜಯಪುರದಲ್ಲಿ ಗ್ಯಾಂಗ್ ಒಂದರ ಮೇಲೆ ಪೊಲೀಸರು ಗನ್ ಫೈರ್ ಮಾಡಿದ್ದಾರೆ. ಒಬ್ಬನಿಗೆ ಗುಂಡೇಟು ಬಿದ್ದು ಅರೆಸ್ಟ್ ಆಗಿದ್ದಾನೆ. ಈತ ಮಧ್ಯಪ್ರದೇಶದ ಮೂಲದವನು ಎಂಬುದು ಗೊತ್ತಾಗಿದೆ. ಮೊದಲೆಲ್ಲ ಬೆಂಗಳೂರು ಭಾಗದಲ್ಲಿ ಇವರು ಸಕ್ರಿಯರಾಗಿದ್ದರು. ಆದರೆ ರಾಜಧಾನಿ ಸುತ್ತಮುತ್ತ ಪೊಲೀಸ್ ಸೆಕ್ಯುರಿಟಿ ಹೆಚ್ಚಾದಂತೆ ಬೀದರ್, ವಿಜಯಪುರ, ಕಲ್ಬುರ್ಗಿ- ಈ ಭಾಗಕ್ಕೆ ಗ್ಯಾಂಗ್‌ಗಳು ಶಿಫ್ಟ್ ಆದಂತೆ ಕಾಣುತ್ತಿದೆ. ಮತ್ತೊಂದೆಡೆ ಮಂಗಳೂರಿನಲ್ಲೂ ಬ್ಯಾಂಕ್ ಮೇಲೆ ನುಗ್ಗಿ, ಬಂದೂಕು ತೋರಿಸಿ ದರೋಡೆ ಮಾಡಿದ್ದಾರೆ. ಬ್ಯಾಂಕಿಂಗ್ ಸಿಸ್ಟಮ್ ಬಗ್ಗೆ ಚೆನ್ನಾಗಿ ವರ್ಕ್ ಮಾಡಿಯೇ ದರೋಡೆಗೆ ಇಳಿದಿರುವಂತೆ ತೋರುತ್ತಿದೆ” ಎಂದರು.
ಇದನ್ನೂ ಓದಿರಿ: ವಿಜಯಪುರ | ದರೋಡೆಕೋರರ ಮೇಲೆ ಗುಂಡಿನ ದಾಳಿ; ಓರ್ವ ಪೊಲೀಸರ ವಶ, ನಾಲ್ವರು ಪರಾರಿ
2013ನೇ ಇಸವಿಯಲ್ಲಿ ಬೆಂಗಳೂರಿನ ಎನ್‌ಆರ್ ಚೌಕದ ಎಟಿಎಂನಲ್ಲಿ ಮಹಿಳೆಯೊಬ್ಬರ ಮೇಲೆ ಆದ ಭೀಕರ ಘಟನೆ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದ ಮಧುಕರ್ ರೆಡ್ಡಿ ಎಂಬಾತ, ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದ್ದಲಪುರಂ ಗ್ರಾಮದವನು. ಈತ ಮೊದಲು ಭಿಕ್ಷೆ ಬೇಡಲು ಆರಂಭಿಸಿದ್ದ. ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿದ್ದಾಗ, ಆಕೆಯನ್ನು ಕೊಲೆ ಮಾಡಿ ಆಂಧ್ರದಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದ. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಲಗುತ್ತಿದ್ದ ಈತ, ಎರಡು ದಿನ ಭಿಕ್ಷೆ ಬೇಡಿ, ಏನು ಸಿಗದಿದ್ದಾಗ ಎಟಿಎಂನಲ್ಲಿ ಹಲ್ಲೆ ನಡೆಸಿದ್ದ ಎಂದು ಚಾರ್ಜ್ ಶೀಟ್ ಹೇಳಿತ್ತು. 2017ರಲ್ಲಿ ಈತನನ್ನು ಆಂಧ್ರ ಪೊಲೀಸರು ವಶಕ್ಕೆ ಪಡೆದಿದ್ದರು.
“ಈ ಘಟನೆಗಳ ಜೊತೆಗೆ ಕರ್ನಾಟಕದಲ್ಲಿ ಆಗಾಗ್ಗೆ ಎಟಿಎಂನಲ್ಲಿ ದರೋಡೆ ಮಾಡುವ ಕೃತ್ಯಗಳು ನಡೆದಿರುವುದುಂಟು. ಆದರೆ ಅದ್ಯಾವುದೂ ಗನ್ ಬಳಸಿ ಕೊಲ್ಲುವ ಮಟ್ಟಕ್ಕೆ ಹೋಗಿರಲಿಲ್ಲ” ಎಂಬುದು ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್ ಅವರ ಅಭಿಪ್ರಾಯ.
ಗನ್ ಸಂಸ್ಕೃತಿಯನ್ನು ಬೆಳೆಸಿಕೊಂಡ ಪಾತಕಿಗಳು ಇಲ್ಲಿ ಸಿಗುವುದು ಅಪರೂಪ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸಂಘಟನೆಗಳು ಧರ್ಮದ ಹೆಸರಲ್ಲಿ ಯುವಕರಿಗೆ ಗನ್ ಟ್ರೈನ್ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದು ಭಿಮಾರು ರಾಜ್ಯಗಳ ಮಾದರಿ ಎಂಬುದು ಹಲವರ ಆತಂಕ. ಹೀಗೆ ಗನ್ನಿನ ತರಬೇತಿ ಪಡೆದವರು ದರೋಡೆಯಂತಹ ಕೃತ್ಯಗಳಿಗೆ ಇಳಿದರೆ, ಧರ್ಮದ ಹೆಸರಲ್ಲಿ ಪಾತಕಗಳನ್ನು ಎಸಗಿದರೆ ಅದಕ್ಕೆ ಯಾರು ಹೊಣೆ? ಕರ್ನಾಟಕದಲ್ಲಿ ಈ ಗನ್ ಸಂಸ್ಕೃತಿ ಬೆಳೆಯದಂತೆ ಎಚ್ಚರಿಕೆ ವಹಿಸಬೇಕು, ಕಾನೂನು ಸುವ್ಯವಸ್ಥೆಯ ಕುರಿತು ಸರ್ಕಾರ ಗಂಭೀರವಾಗಿರಬೇಕು ಎಂಬುದು ಅಪರಾಧ ಜಗತ್ತು ಬಲ್ಲವರ ಎಚ್ಚರಿಕೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.