ಹೊಸ ಏರ್ಪೋರ್ಟ್ ಕನಕಪುರದಲ್ಲಿ ಆಗಬೇಕೇ ಅಥವಾ ತುಮಕೂರಿಗೆ ಸಿಗಬೇಕೇ?

Date:

ವಿಮಾನ ನಿಲ್ದಾಣದಂತಹ ಮೂಲಸೌಕರ್ಯ ಯೋಜನೆಗಳಿಗೆ ಭೂಮಿ ಗುರುತಿಸುವಿಕೆ, ಭೂಸ್ವಾಧೀನ, ಪರಿಸರ ಅನುಮತಿ, ರಸ್ತೆ ಮತ್ತು ರೈಲು ಸಂಪರ್ಕ, ಮಾಸ್ಟರ್ ಪ್ಲಾನ್ ಮತ್ತು ಕೈಗಾರಿಕಾ ಸಮನ್ವಯಕ್ಕೆ ವರ್ಷಗಳ ಸಮಯ ಬೇಕಾಗುತ್ತದೆ. ತುಮಕೂರು–ಸಿರಾ ಪ್ರದೇಶವನ್ನು ಈ ಹಿನ್ನೆಲೆಯಲ್ಲಿ ನೋಡಬೇಕು.

- Advertisement -

ಈ ಪ್ರದೇಶದ ಬಲ ಕೇವಲ ಸ್ಥಳದಲ್ಲಿಲ್ಲ; ಈಗಾಗಲೇ ರೂಪುಗೊಳ್ಳುತ್ತಿರುವ ಆರ್ಥಿಕ ಸಂಪರ್ಕಗಳಲ್ಲಿ ಇದೆ. ವಿಮಾನ ನಿಲ್ದಾಣ ನಿರ್ಮಿಸುವುದು ಸುಲಭ. ಆದರೆ ಅದನ್ನು ಜೀವಂತವಾಗಿ ಇಡುವುದೇ ಕಷ್ಟ; ಅದನ್ನು ದೀರ್ಘಕಾಲ ಯಶಸ್ವಿಯಾಗಿ ಬದುಕಿಸುವುದು ಇನ್ನೂ ದೂರದ ಮಾತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ರನ್‌ವೇ, ಟರ್ಮಿನಲ್, ಕಟ್ಟಡಗಳು ಮತ್ತು ಸಂಪರ್ಕ ರಸ್ತೆಗಳು ನಿರ್ಮಾಣವಾದ ಮಾತ್ರಕ್ಕೆ ವಿಮಾನಗಳು ಸಾಲುಗಟ್ಟಿ ಬರುವುದಿಲ್ಲ. ವಿಮಾನಯಾನ ಸಂಸ್ಥೆಗಳು ರಾಜಕೀಯ ಘೋಷಣೆಗಳ ಆಧಾರದ ಮೇಲೆ ಹಾರಾಟ ಆರಂಭಿಸುವುದಿಲ್ಲ. ಪ್ರಯಾಣಿಕರ ಸಂಖ್ಯೆ, ಸರಕು ಸಾಗಣೆ, ಆಸನ ಭರ್ತಿ ಪ್ರಮಾಣ, ಕಾರ್ಯಾಚರಣಾ ವೆಚ್ಚ ಮತ್ತು ಲಾಭದಾಯಕತೆಯೇ ಅವುಗಳ ನಿರ್ಧಾರದ ಮೂಲ ಮಾನದಂಡಗಳು.

ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ತುಮಕೂರು–ಸಿರಾ ನಡುವೆ ಹೊಸ ವಿಮಾನ ನಿಲ್ದಾಣದ ಚರ್ಚೆಯನ್ನು ಕೇವಲ “ಯಾವ ಜಿಲ್ಲೆಗೆ ವಿಮಾನ ನಿಲ್ದಾಣ ಸಿಗಬೇಕು?” ಎಂಬ ಭಾವನಾತ್ಮಕ ಪ್ರಶ್ನೆಯಾಗಿ ನೋಡಬಾರದು. ಮೂಲ ಪ್ರಶ್ನೆ ಇನ್ನೊಂದು:

ಈ ವಿಮಾನ ನಿಲ್ದಾಣ ಹೊಸ ಪ್ರಯಾಣಿಕರನ್ನು ಮತ್ತು ಹೊಸ ಸರಕು ಸಾಗಣೆಯನ್ನು ಸೃಷ್ಟಿಸಬಹುದೇ? ಅಥವಾ ಈಗಿರುವ ಬೆಂಗಳೂರಿನ ಪ್ರಯಾಣಿಕರನ್ನೇ ವಿಭಜಿಸಬಹುದೇ?

ಈ ಪ್ರಶ್ನೆಗೆ ಉತ್ತರ ಹುಡುಕುವಾಗ ಇಂದಿನ ಅಗತ್ಯದ ಜೊತೆಗೆ ಮುಂದಿನ ಹಲವು ದಶಕಗಳ ಬೆಳವಣಿಗೆಯನ್ನೂ ಗಮನಿಸಬೇಕಾಗುತ್ತದೆ.

ಕರ್ನಾಟಕದ ಆರ್ಥಿಕ ಭೂಪಟದಲ್ಲಿ ಬೆಂಗಳೂರು ಒಂದು ವಿಶಿಷ್ಟ ಸ್ಥಾನ ಹೊಂದಿದೆ. ನಗರ ಯೋಜನೆಯಲ್ಲಿ ಮಾರ್ಕ್ ಜೆಫರ್ಸನ್ ಪ್ರತಿಪಾದಿಸಿದ “ಪ್ರೈಮೇಟ್ ಸಿಟಿ” ಪರಿಕಲ್ಪನೆಯಂತೆ, ಬೆಂಗಳೂರು ಕೇವಲ ರಾಜಧಾನಿಯಲ್ಲ; ಅದು ರಾಜ್ಯದ ಆರ್ಥಿಕ ಎಂಜಿನ್.

ಮಾಹಿತಿ ತಂತ್ರಜ್ಞಾನ, ಏರೋಸ್ಪೇಸ್, ಸಂಶೋಧನೆ, ಉನ್ನತ ಶಿಕ್ಷಣ, ಆರೋಗ್ಯ, ಹಣಕಾಸು, ಸ್ಟಾರ್ಟ್‌ಅಪ್‌ಗಳು ಮತ್ತು ಅಂತರರಾಷ್ಟ್ರೀಯ ವ್ಯಾಪಾರ — ಇವೆಲ್ಲವೂ ಬೆಂಗಳೂರಿನಲ್ಲಿ ಹೆಚ್ಚು ಕೇಂದ್ರೀಕೃತವಾಗಿವೆ. ಆದ್ದರಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಹರಿವು ಸಹಜ.

ಈಗಾಗಲೇ ಹೆಚ್ಚಿನ ಸಂಪರ್ಕ ಇರುವ ಕಡೆಗೆ ಇನ್ನಷ್ಟು ಸಂಪರ್ಕಗಳು ಬರುತ್ತವೆ. ಹೆಚ್ಚಿನ ವಿಮಾನಗಳಿರುವ ಕಡೆಗೆ ಇನ್ನಷ್ಟು ಪ್ರಯಾಣಿಕರು ಸೇರುತ್ತಾರೆ. ಇದೇ ಜಾಗತಿಕ ವಿಮಾನಯಾನ ಕ್ಷೇತ್ರದ ನೆಟ್‌ವರ್ಕ್ ಎಫೆಕ್ಟ್. ಆದರೆ ಇದರರ್ಥ ಭವಿಷ್ಯದ ಅಗತ್ಯಗಳನ್ನು ನಿರ್ಲಕ್ಷಿಸಬೇಕು ಎಂದಲ್ಲ.

ಪ್ರಶ್ನೆ “ಎರಡನೇ ವಿಮಾನ ನಿಲ್ದಾಣ ಬೇಕೇ?” ಎಂಬುದಕ್ಕಿಂತ ಮೊದಲು ಕೇಳಬೇಕಾದ ಪ್ರಶ್ನೆ: “ಅದು ಯಾವ ಹೊಸ ಆರ್ಥಿಕ ಪ್ರದೇಶಕ್ಕೆ ಸೇವೆ ನೀಡುತ್ತದೆ?”

ದೊಡ್ಡ ನಗರಗಳ ಅನುಭವ ನಮಗೆ ಒಂದು ಪಾಠ ನೀಡುತ್ತದೆ. ಸಾಮರ್ಥ್ಯ ಸಂಪೂರ್ಣ ಖಾಲಿಯಾದ ಮೇಲೆ ಹೊಸ ಮೂಲಸೌಕರ್ಯ ಹುಡುಕುವುದು ಉತ್ತಮ ಯೋಜನೆಯಲ್ಲ. ಸಾಮರ್ಥ್ಯದ ಮಿತಿಯನ್ನು ಮುಂಚಿತವಾಗಿ ಅಂದಾಜಿಸಿ ಸಿದ್ಧತೆ ಮಾಡಿಕೊಳ್ಳುವುದು ದೂರದೃಷ್ಟಿಯ ಯೋಜನೆ.

ದೆಹಲಿ ಮತ್ತು ಮುಂಬೈ ಈ ಮಾತಿಗೆ ಸ್ಪಷ್ಟ ಉದಾಹರಣೆಗಳು. ದೆಹಲಿ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಅತ್ಯಂತ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇದರ ವಿನ್ಯಾಸ ಸಾಮರ್ಥ್ಯ ವರ್ಷಕ್ಕೆ ಸುಮಾರು 10 ಕೋಟಿ ಪ್ರಯಾಣಿಕರು. ಪ್ರಯಾಣಿಕರ ಸಂಖ್ಯೆ ಸಾಮರ್ಥ್ಯದ ಗಡಿಯತ್ತ ಸಾಗುವ ಮುನ್ನವೇ ಜೇವರ್‌ನಲ್ಲಿ ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಪರ್ಯಾಯ ಸಾಮರ್ಥ್ಯದ ಯೋಜನೆ ರೂಪಿಸಲಾಯಿತು.

bengaluru airport

ಇದು ಕೇವಲ ಹಳೆಯ ವಿಮಾನ ನಿಲ್ದಾಣದ ಒತ್ತಡ ಕಡಿಮೆ ಮಾಡುವ ಯೋಜನೆಯಲ್ಲ. ಯಮುನಾ ಎಕ್ಸ್‌ಪ್ರೆಸ್‌ವೇ ಕಾರಿಡಾರ್, ಕೈಗಾರಿಕಾ ಬೆಳವಣಿಗೆ, ಲಾಜಿಸ್ಟಿಕ್ಸ್ ಮತ್ತು ಹೊಸ ನಗರ ವಿಸ್ತರಣೆಯೊಂದಿಗೆ ಸಂಪರ್ಕ ಹೊಂದಿರುವ ಪ್ರಾದೇಶಿಕ ಅಭಿವೃದ್ಧಿ ಯೋಜನೆ.

ಮುಂಬೈಯಲ್ಲಿಯೂ ಇದೇ ಪಾಠ. ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಭೌಗೋಳಿಕ ಮಿತಿಗಳ ಕಾರಣದಿಂದ ನವಿಮುಂಬೈ ವಿಮಾನ ನಿಲ್ದಾಣ ರೂಪುಗೊಳ್ಳುತ್ತಿದೆ. ಅದು ಕೇವಲ ಮತ್ತೊಂದು ವಿಮಾನ ನಿಲ್ದಾಣವಲ್ಲ; ಹೊಸ ನಗರ, ಕೈಗಾರಿಕೆ, ಬಂದರು ಮತ್ತು ಸಾರಿಗೆ ಜಾಲದೊಂದಿಗೆ ಬೆಸೆಯುವ ಆರ್ಥಿಕ ಕೇಂದ್ರ.

ಈ ಎರಡೂ ಉದಾಹರಣೆಗಳು ಹೇಳುವ ಪಾಠ: ಹೊಸ ವಿಮಾನ ನಿಲ್ದಾಣವು ಹಳೆಯ ವಿಮಾನ ನಿಲ್ದಾಣದ ಪರ್ಯಾಯ ಮಾತ್ರವಾಗಬಾರದು. ಅದು ಹೊಸ ಆರ್ಥಿಕ ಭೂಗೋಳವನ್ನು ನಿರ್ಮಿಸುವ ಸಾಧನವಾಗಬೇಕು. ಬೆಂಗಳೂರು ಕೂಡ ಇದೇ ಪ್ರಶ್ನೆಯ ಮುಂದೆ ನಿಂತಿದೆ.

ಪ್ರಸ್ತುತ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಪ್ರಶ್ನೆ “ಇಂದು ಸಾಮರ್ಥ್ಯ ಮುಗಿದಿದೆಯೇ?” ಎಂಬುದಲ್ಲ.

ನಿಜ ಪ್ರಶ್ನೆ: “ಮುಂದಿನ 20–30 ವರ್ಷಗಳ ಬೆಳವಣಿಗೆಗಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕೇ?”.

ಏಕೆಂದರೆ ವಿಮಾನ ನಿಲ್ದಾಣದಂತಹ ಮೂಲಸೌಕರ್ಯ ಯೋಜನೆಗಳಿಗೆ ಭೂಮಿ ಗುರುತಿಸುವಿಕೆ, ಭೂಸ್ವಾಧೀನ, ಪರಿಸರ ಅನುಮತಿ, ರಸ್ತೆ ಮತ್ತು ರೈಲು ಸಂಪರ್ಕ, ಮಾಸ್ಟರ್ ಪ್ಲಾನ್ ಮತ್ತು ಕೈಗಾರಿಕಾ ಸಮನ್ವಯಕ್ಕೆ ವರ್ಷಗಳ ಸಮಯ ಬೇಕಾಗುತ್ತದೆ.

ತುಮಕೂರು–ಸಿರಾ ಪ್ರದೇಶವನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಈ ಪ್ರದೇಶದ ಬಲ ಕೇವಲ ಸ್ಥಳದಲ್ಲಿಲ್ಲ; ಈಗಾಗಲೇ ರೂಪುಗೊಳ್ಳುತ್ತಿರುವ ಆರ್ಥಿಕ ಸಂಪರ್ಕಗಳಲ್ಲಿ ಇದೆ.

ಬೆಂಗಳೂರು–ಮುಂಬೈ ರಾಷ್ಟ್ರೀಯ ಹೆದ್ದಾರಿ (NH-48), ತುಮಕೂರು–ಸಿರಾ–ಚಿತ್ರದುರ್ಗ ಭಾಗದ ರೈಲು ಸಂಪರ್ಕ, ವಸಂತನರಸಾಪುರ ಕೈಗಾರಿಕಾ ಪ್ರದೇಶ, STRR (Settelite Town Ring Road) ಸುತ್ತ ಬೆಳೆಯಬಹುದಾದ ಉಪನಗರಗಳು, ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಲಿಸಿದರೆ ಕಡಿಮೆ ಜಮೀನು ವೆಚ್ಚ ಮತ್ತು ಸರ್ಕಾರಿ ಜಮೀನು ಲಭ್ಯತೆಯ ಸಾಧ್ಯತೆಗಳು ಈ ಪ್ರದೇಶಕ್ಕೆ ವಿಶೇಷ ಅವಕಾಶ ನೀಡುತ್ತವೆ.

ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬೆಳವಣಿಗೆ ಇಲ್ಲಿ ಪ್ರಮುಖ ಅಂಶ. ಉತ್ಪಾದನಾ ಕೈಗಾರಿಕೆಗಳು, ರಫ್ತು ಆಧಾರಿತ ಚಟುವಟಿಕೆಗಳು, ಏರೋಸ್ಪೇಸ್ ಸಂಬಂಧಿತ ಉದ್ಯಮಗಳು ಮತ್ತು ಲಾಜಿಸ್ಟಿಕ್ಸ್ ವಲಯ ಬೆಳೆಯುತ್ತಿದ್ದರೆ, ಭವಿಷ್ಯದಲ್ಲಿ ಪ್ರಯಾಣಿಕ ಮತ್ತು ಸರಕು ಸಾಗಣೆ ಬೇಡಿಕೆ ಸೃಷ್ಟಿಯಾಗಬಹುದು.

ಆದರೆ, ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೈಗಾರಿಕಾ ಪ್ರದೇಶ ಇರುವುದಷ್ಟೇ ಸಾಕಾಗುವುದಿಲ್ಲ. ಎಷ್ಟು ಪ್ರಯಾಣಿಕರು?, ಎಷ್ಟು ಕಾರ್ಗೋ?, ಎಷ್ಟು ವಿಮಾನ ಸಂಚಾರ?, ಎಷ್ಟು ಆದಾಯ?

ಈ ಪ್ರಶ್ನೆಗಳಿಗೆ ಉತ್ತರಿಸುವ ಆರ್ಥಿಕ ಅಧ್ಯಯನವೇ ಅಂತಿಮ ನಿರ್ಧಾರದ ಆಧಾರವಾಗಬೇಕು. ಕರ್ನಾಟಕದ ಇತರ ವಿಮಾನ ನಿಲ್ದಾಣಗಳ ಅನುಭವವೂ ಇಲ್ಲಿ ಮುಖ್ಯ.

ಮೈಸೂರು, ಶಿವಮೊಗ್ಗ, ಬೆಳಗಾವಿ ಮತ್ತು ಕಲಬುರಗಿ ವಿಮಾನ ನಿಲ್ದಾಣಗಳನ್ನು ಕೇವಲ ಯಶಸ್ಸು ಅಥವಾ ವಿಫಲತೆ ಎಂಬ ಎರಡು ಪದಗಳಲ್ಲಿ ಅಳೆಯುವುದು ಸರಿಯಲ್ಲ. ಅವು ನಮಗೆ ಪಾಠ ನೀಡುವ ಪ್ರಯೋಗಗಳು.

ಹೀಗಾಗಿ ವಿಮಾನ ನಿಲ್ದಾಣ ನಿರ್ಮಾಣ ಮತ್ತು ವಿಮಾನ ನಿಲ್ದಾಣ ಯಶಸ್ಸು ಎರಡು ಬೇರೆ ವಿಷಯಗಳು.

ಶಿವಮೊಗ್ಗದ ಅನುಭವವು ವಿಶೇಷವಾಗಿ ಪ್ರಯಾಣಿಕರ ಸಂಪರ್ಕದ ಮಹತ್ವವನ್ನು ತೋರಿಸುತ್ತದೆ. ಉತ್ತಮ ಮೂಲಸೌಕರ್ಯ ಇದ್ದರೂ, ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಸುಲಭವಾಗಿ ತಲುಪುವ ವ್ಯವಸ್ಥೆ ಇಲ್ಲದಿದ್ದರೆ ಬಳಕೆ ಸೀಮಿತವಾಗಬಹುದು.

ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಆಯ್ಕೆ ಮಾಡುವಾಗ ಕೇವಲ ಟಿಕೆಟ್ ದರ ನೋಡುವುದಿಲ್ಲ. ತನ್ನ ಮನೆಯಿಂದ ವಿಮಾನ ನಿಲ್ದಾಣಕ್ಕೆ ತಲುಪುವ ಅನುಭವವನ್ನೂ ಪರಿಗಣಿಸುತ್ತಾರೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ಮೈಸೂರಿಗೆ ಇರುವ ನೇರ ಶಟಲ್ ಸೇವೆ ಇದಕ್ಕೆ ಉತ್ತಮ ಉದಾಹರಣೆ. ಒಂದು ವಾಹನದಲ್ಲಿ ನೇರವಾಗಿ ತಲುಪುವ ಅನುಕೂಲ ಪ್ರಯಾಣಿಕರನ್ನು ಆಕರ್ಷಿಸುತ್ತದೆ.

ಅದೇ ರೀತಿ ತುಮಕೂರು–ಸಿರಾ ವಿಮಾನ ನಿಲ್ದಾಣ ಬಂದರೆ, ತುಮಕೂರು, ಸಿರಾ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಭಾಗಗಳಿಗೆ ನೇರ ಶಟಲ್ ಸೇವೆ, ರೈಲು ಸಂಪರ್ಕ ಮತ್ತು ಸಾರ್ವಜನಿಕ ಸಾರಿಗೆ ಸಮನ್ವಯ ಯೋಜನೆಯ ಭಾಗವಾಗಬೇಕು.

ವಿಮಾನ ನಿಲ್ದಾಣದ ಯಶಸ್ಸು ರನ್‌ವೇಯಿಂದ ಆರಂಭವಾಗುವುದಿಲ್ಲ. ಅದು ಪ್ರಯಾಣಿಕನ ಮನೆಯ ಬಾಗಿಲಿನಿಂದ ಆರಂಭವಾಗುತ್ತದೆ.

ಈ ವಿಷಯದ ಮತ್ತೊಂದು ಪ್ರಮುಖ ಅಂಶ ನಗರ ಯೋಜನೆ. ವಿಮಾನ ನಿಲ್ದಾಣ, ರೈಲು ಕಾರಿಡಾರ್, ಕೈಗಾರಿಕಾ ಪ್ರದೇಶ ಮತ್ತು ಹಸಿರು ವಲಯಗಳಂತಹ ಯೋಜನೆಗಳು ಸ್ಥಳೀಯ ಮಾಸ್ಟರ್ ಪ್ಲಾನ್‌ಗಳ ಭಾಗವಾಗಬೇಕು.

ಅರಣ್ಯ ಮತ್ತು ಹಸಿರು ಪ್ರದೇಶಗಳನ್ನು ಕೇವಲ ಅಭಿವೃದ್ಧಿಗೆ ಅಡ್ಡಿ ಎಂದು ನೋಡುವ ಬದಲು, ವೈಜ್ಞಾನಿಕ ಭೂಬಳಕೆ ದೃಷ್ಟಿಯಿಂದ Social Forestry, Green Buffer ಮತ್ತು ಪರಿಸರ ಸಂರಕ್ಷಣಾ ವಲಯಗಳಾಗಿ ಯೋಜನೆಯ ಭಾಗವಾಗಿಸಬೇಕು.

ನಗರ ಯೋಜಕರ ಪಾತ್ರ ಇಲ್ಲಿ ಅತ್ಯಂತ ಮುಖ್ಯ. ಸ್ಥಳ ಆಯ್ಕೆ ಕೇವಲ ರಾಜಕೀಯ ನಿರ್ಧಾರವಾಗಬಾರದು. ರಾಜಕೀಯ ಇಚ್ಛಾಶಕ್ತಿ ಯೋಜನೆಗೆ ವೇಗ ನೀಡಬಹುದು; ಆದರೆ ದೀರ್ಘಾವಧಿಯ ಯಶಸ್ಸನ್ನು ನಿರ್ಧರಿಸುವುದು ವೈಜ್ಞಾನಿಕ ವಿಶ್ಲೇಷಣೆ.

ವಿಮಾನ ನಿಲ್ದಾಣದ ಸ್ಥಳ ಆಯ್ಕೆಯ ರೇಸ್‌ನಲ್ಲಿ ಇಂದು ಬೆಂಗಳೂರು ಅಥವಾ ತುಮಕೂರು ಒಂದು ಹಂತದಲ್ಲಿ ಮುನ್ನಡೆ ಸಾಧಿಸಬಹುದು. ಆದರೆ ಅಭಿವೃದ್ಧಿ ಒಂದು ಸುತ್ತಿನ ರೇಸ್ ಅಲ್ಲ. ಇಂದಿನ ಅಗತ್ಯ, ನಾಳೆಯ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯದ ನಗರ ವಿಸ್ತರಣೆ ಒಂದೇ ಆಗಿರುವುದಿಲ್ಲ.

ಒಂದು ಹಂತದಲ್ಲಿ ಒಂದು ಪ್ರದೇಶಕ್ಕೆ ಆದ್ಯತೆ ಸಿಗಬಹುದು. ಮತ್ತೊಂದು ಹಂತದಲ್ಲಿ ಪರಿಸ್ಥಿತಿಗಳು ಬದಲಾಗಬಹುದು. ಹೊಸ ಕೈಗಾರಿಕೆಗಳು, ಹೊಸ ನಗರಗಳು ಮತ್ತು ಹೊಸ ಸಾರಿಗೆ ಮಾರ್ಗಗಳು ಹೊಸ ಅವಕಾಶಗಳನ್ನು ಸೃಷ್ಟಿಸಬಹುದು.

ಆದ್ದರಿಂದ ಒಂದು ಅವಕಾಶ ಸಿಗಲಿಲ್ಲ ಎಂದರೆ ಅದು ಅಂತಿಮ ಸೋಲೇನೂ ಅಲ್ಲ. ಭವಿಷ್ಯದ ಅವಕಾಶಗಳಿಗೆ ಸಿದ್ಧವಾಗಿರುವ ಪ್ರದೇಶವೇ ಕೊನೆಯಲ್ಲಿ ಮುನ್ನಡೆ ಸಾಧಿಸುತ್ತದೆ.

ಇದನ್ನೂ ಓದಿ ಯುವಜನರ ಹೋರಾಟ ಹತ್ತಿಕ್ಕಲು ಸುಳ್ಳುಗಳ ಸರಮಾಲೆ ಹೆಣೆದ ಬಿಜೆಪಿ!

“Show must go on” ಎಂಬ ಕಲಾವಿದರ ಮಾತಿನಂತೆ ಅಭಿವೃದ್ಧಿಯ ಪಯಣವೂ ನಿಲ್ಲಬಾರದು. ತುಮಕೂರು–ಸಿರಾ ಪ್ರದೇಶಕ್ಕೆ ಅಗತ್ಯವಿರುವುದು ಕೇವಲ ಒಂದು ಘೋಷಣೆ ಅಲ್ಲ. ನಿರಂತರ ಸಿದ್ಧತೆ. ಭೂಬಳಕೆ ಯೋಜನೆ, ಕೈಗಾರಿಕಾ ಬೆಳವಣಿಗೆ, ಸಾರಿಗೆ ಸಂಪರ್ಕ, ಲಾಜಿಸ್ಟಿಕ್ಸ್ ಸಾಮರ್ಥ್ಯ ಮತ್ತು ನಗರ ವಿಸ್ತರಣೆಯ ಮೂಲಕ ಈ ಪ್ರದೇಶವನ್ನು ಭವಿಷ್ಯದ ಅಗತ್ಯಗಳಿಗೆ ಸಿದ್ಧಪಡಿಸಬೇಕು.ಇಂದು ಆಯ್ಕೆ ಬೇರೆಡೆ ಆಗಬಹುದು. ಆದರೆ ನಾಳೆಯ ಅಗತ್ಯ ತುಮಕೂರು–ಸಿರಾವಾಗಬಹುದು. ಆದ್ದರಿಂದ ಸಿದ್ಧತೆ ನಿಲ್ಲಬಾರದು.

ಕೊನೆಗೂ ವಿಮಾನ ನಿಲ್ದಾಣದ ಯಶಸ್ಸನ್ನು ಅದರ ರನ್‌ವೇ ಉದ್ದ ನಿರ್ಧರಿಸುವುದಿಲ್ಲ. ಅದನ್ನು ಬಳಸುವ ಪ್ರಯಾಣಿಕರು, ಸಾಗುವ ಸರಕು, ಅದರ ಸುತ್ತ ಬೆಳೆಯುವ ಆರ್ಥಿಕ ಪರಿಸರ ಮತ್ತು ಸಂಪರ್ಕ ವ್ಯವಸ್ಥೆಯೇ ನಿರ್ಧರಿಸುತ್ತದೆ. ಕರ್ನಾಟಕಕ್ಕೆ ಬೇಕಾಗಿರುವುದು ಮತ್ತೊಂದು ವಿಮಾನ ನಿಲ್ದಾಣ ಮಾತ್ರವಲ್ಲ. ಭವಿಷ್ಯವನ್ನು ಅರ್ಥಮಾಡಿಕೊಂಡು, ಭವಿಷ್ಯಕ್ಕಾಗಿ ಸಿದ್ಧವಾಗಿರುವ ವಿಮಾನ ನಿಲ್ದಾಣ.

ಆರ್. ಮುರಳೀಧರ ನಾಯಕ್
ಆರ್. ಮುರಳೀಧರ ನಾಯಕ್
+ posts

ಮಾಜಿ ನಗರ ಮತ್ತು ಗ್ರಾಮ ಯೋಜನಾಧಿಕಾರಿ
ನಗರ ಮತ್ತು ಗ್ರಾಮ ಯೋಜನಾ ಸಂಸ್ಥೆ (TCPO), ಭಾರತ ಸರ್ಕಾರ, ನವದೆಹಲಿ

ಪೋಸ್ಟ್ ಹಂಚಿಕೊಳ್ಳಿ:

ಆರ್. ಮುರಳೀಧರ ನಾಯಕ್
ಆರ್. ಮುರಳೀಧರ ನಾಯಕ್
ಮಾಜಿ ನಗರ ಮತ್ತು ಗ್ರಾಮ ಯೋಜನಾಧಿಕಾರಿ ನಗರ ಮತ್ತು ಗ್ರಾಮ ಯೋಜನಾ ಸಂಸ್ಥೆ (TCPO), ಭಾರತ ಸರ್ಕಾರ, ನವದೆಹಲಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾವೈಕ್ಯತೆಯ ಹೆಜ್ಜೆನಾದ: ಕದ್ರಿ ದೇಗುಲದ ಯಕ್ಷಗಾನದಲ್ಲಿ ‘ಮಹಿಷಾಸುರ ಮರ್ದಿನಿ’ಯಾಗಿ ಮಿಂಚಿದ ಆರ್ಷಿಯಾ ಖಾನ್

ಕಲೆಗೆ ಯಾವುದೇ ಧರ್ಮ, ಜಾತಿಗಳ ಭೇದವಿಲ್ಲ ಎಂಬುದನ್ನು ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ...

ಪದವೀಧರರು, ಶಿಕ್ಷಕರೇ ಗಮನಿಸಿ.. ಅ.23ರಂದು ಪ್ರಾಶಸ್ತ್ಯ ಮತ ಚಲಾಯಿಸುವಾಗ ಈ ತಪ್ಪು ಮಾಡಬೇಡಿ!

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2026ರ...

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ ಸರ್ಕಾರಗಳು!

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ...