ಸಿದ್ದರಾಮಯ್ಯ ಕೇಸಿಗೂ ನಿರ್ಮಲಾ ಸೀತಾರಾಮನ್ ಕೇಸಿಗೂ ಅಜಗಜಾಂತರ !

Date:

Advertisements

ನಿರ್ಮಲಾ ಸೀತಾರಾಮನ್ ಮೇಲಿನ ಎಫ್ಐಆರ್ ಈ ದೇಶದ ಆರ್ಥಿಕತೆ, ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿಗೆ ಸಂಬಂಧಿಸಿದ್ದು. ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಭಯೋತ್ಪಾದನೆಗೆ ಸಮನಾದ ಅಥವಾ ಅದಕ್ಕಿಂತಲೂ ಮಿಗಿಲಾದ ಪ್ರಕರಣವಿದು. ಈ ಪ್ರಕರಣದಲ್ಲಿ ನೂರಾರು ಉದ್ಯಮಿಗಳು ಸಂತ್ರಸ್ತರಾಗಿದ್ದರೂ ಅದರ ಪರಿಣಾಮವಾಗಿ ಇಡೀ ದೇಶವೇ ಸಂತ್ರಸ್ತರ ಪಟ್ಟಿಯಲ್ಲಿದೆ. ಸಿದ್ದರಾಮಯ್ಯ ಪ್ರಕರಣ ಕೇವಲ ಒಂದು ನಗರದ ಪ್ರಾಧಿಕಾರದ ಸೈಟಿಗೆ ಸಂಬಂಧಿಸಿದ್ದು,ಇಲ್ಲಿ ಸಂತ್ರಸ್ತರೇ ಇಲ್ಲ!

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕೇಸಿನ ಮಧ್ಯೆ ಅಜಗಜಾಂತರವಿದೆ. ಕೇವಲ ಎಫ್ಐಆರ್ ನಲ್ಲಿ ಮಾತ್ರವಲ್ಲ, ನ್ಯಾಯ ಪ್ರಕ್ರಿಯೆಯಲ್ಲೂ ಊಹಿಸಲೂ ಸಾಧ್ಯವಾಗದಷ್ಟು ವ್ಯತ್ಯಾಸಗಳಿವೆ.

ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಶನ್ ಅನುಮತಿಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಹೈಕೋರ್ಟ್ ನಲ್ಲಿ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಶನ್ ಅನುಮತಿಯ ಕಾನೂನು/ಸಂವಿಧಾನ ಅವಕಾಶಗಳ ಬಗ್ಗೆ ಮಾತ್ರ ಚರ್ಚೆ ವಾದ ನಡೆದು ತೀರ್ಪು ಬರಬೇಕಿತ್ತು. ಯಾಕೆಂದರೆ ಸಿದ್ದರಾಮಯ್ಯ ಹೈಕೋರ್ಟ್ ನಲ್ಲಿ ಅರ್ಜಿ ಹಾಕಿರುವುದು ರಾಜ್ಯಪಾಲರು ನೀಡಿರುವ ಅನುಮತಿಯನ್ನು ರದ್ದು ಕೋರಿ ಮಾತ್ರ. ಹೈಕೋರ್ಟ್ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದ ಬಳಿಕ ಒಂದೇ ದಿನದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ ನೀಡುತ್ತದೆ. ಮೂಡ ಪ್ರಕರಣದಲ್ಲಿ ಸಿದ್ದರಾಮಯ್ಯ ಪಾತ್ರದ ಬಗೆಗಿನ ದಾಖಲೆ, ಸಾಕ್ಷ್ಯಗಳ ಬಗ್ಗೆ ಯಾವ ಕ್ಲಾರಿಫಿಕೇಶನ್ ಅನ್ನೂ ಕೇಳದೇ ಎಫ್ಐಆರ್ ದಾಖಲಿಸಲು ಒಂದೇ ದಿನದಲ್ಲಿ ವಿಚಾರಣಾ ನ್ಯಾಯಾಲಯ ಸೂಚಿಸುತ್ತದೆ. ಆದರೆ ನಿರ್ಮಲಾ ಸೀತಾರಾಮನ್ ಪ್ರಕರಣದಲ್ಲಿ ಹಾಗಾಗಲಿಲ್ಲ.

Advertisements

ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯರಂತೆ ನ್ಯಾಚುರಲ್ ಜಸ್ಟೀಸ್‌ನಿಂದ ವಂಚಿತರಾದವರಲ್ಲ! ನಿರ್ಮಲಾ ಸೀತಾರಾಮನ್ ವಿರುದ್ದ ಸಾಮಾಜಿಕ ಹೋರಾಟಗಾರ ಆದರ್ಶ್ ಐಯ್ಯರ್ ಅವರು ಹಿರಿಯ ವಕೀಲ ಎಸ್ ಬಾಲನ್ ಅವರ ಮೂಲಕ 2024 ಎಪ್ರಿಲ್ 15 ರಂದು ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸುತ್ತಾರೆ. ಹಿರಿಯ ವಕೀಲರಾದ ಎಸ್ ಬಾಲನ್ ಅವರು ಫೀಸು ಪಡೆಯದೇ ಈ ಕೇಸ್ ಅನ್ನು ಆದರ್ಶ್ ಐಯ್ಯರ್ ಪರವಾಗಿ ನಡೆಸುತ್ತಾರೆ. 23.04.2024 ರಂದು ಎಸ್ ಬಾಲನ್ ಅವರು ಸುಧೀರ್ಘವಾದ ವಾದ ಮಾಡುತ್ತಾರೆ.

Anil Agarwal

ಮೆಸರ್ಸ್ ಸ್ಟರ್ಲೈಟ್ ಮತ್ತು ವೇದಾಂತ ಕಂಪೆನಿಗಳ ಮುಖ್ಯಸ್ಥ ಅನಿಲ್‌ ಅಗರ್ವಾಲ್ ಅವರ ಮೇಲೆ ಹಲವು ಬಾರಿ ಇಡಿ ದಾಳಿ ಮಾಡಿತ್ತು. ಇಡಿಯಿಂದ ಪಾರಾಗಲು ಅನಿಲ್ ಅಗರ್ವಾಲ್ ಅವರು 2019ರ ಏಪ್ರಿಲ್‌ನಿಂದ 2022ರ ಆಗಸ್ಟ್ ನಡುವೆ ಮತ್ತು 2023ರ ನವೆಂಬರ್‌ನಲ್ಲಿ ಒಟ್ಟು 230.15 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದ್ದಾರೆ. ಮೆಸರ್ಸ್ ಅರಬಿಂದೊ ಫಾರ್ಮಾದ ಮೇಲೆ ಇದೇ ರೀತಿ ಇಡಿ ದಾಳಿ ನಡೆಸಿತ್ತು. ದಾಳಿಯ ಬಳಿಕ ಅರಬಿಂದೊ ಫಾರ್ಮಾ ಸಮೂಹ ಸಂಸ್ಥೆಗಳು 2023ರ ಜನವರಿ 5 ಮತ್ತು ನವೆಂಬರ್ 8, 2022ರ ಜುಲೈ 2, 2022ರ ನವೆಂಬರ್ 15ರಂದು ಒಟ್ಟು 49.5 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದೆ. ಇವೆಲ್ಲದರ ಫಲಾನುಭವಿ ಬಿಜೆಪಿ ಪಕ್ಷ ! ಈ ಲಾಭವನ್ನು ಇಡಿ ಮೂಲಕ ಮಾಡಿಸಿರುವುದು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಎಂದು ಬಾಲನ್ ಅವರು ಇ ಡಿ ಅಧಿಕಾರಿಗಳ ದಾಳಿ ನಡೆಸಿರುವ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಹೀಗೆ ದಾಳಿಗೆ ತುತ್ತಾದ ಸಂಸ್ಥೆಗಳು ಚುನಾವಣಾ ಬಾಂಡ್‌ನಿಂದ ಹಣ ಸಂಗ್ರಹಿಸಿರುವ ವಿವರವನ್ನು ದಾಖಲೆಗಳ ಸಮೇತ ವಾದ ಮಂಡಿಸಿದ್ದರು.

23.04.2024 ರಂದು ಎಸ್ ಬಾಲನ್ ಅವರ ವಾದ ಮುಗಿದ ಬಳಿಕ 07.05.2024 ರಂದು ತೀರ್ಪು ಪ್ರಕಟಿಸುವುದಾಗಿ ನ್ಯಾಯಾಧೀಶರು ಡೈಲಿ ಆರ್ಡರ್ ಬರೆಯುತ್ತಾರೆ. ಆದರೆ 07.05.2024 ರಂದು ನ್ಯಾಯಾಧೀಶರು ರಜೆಯ ಮೇಲೆ ತೆರಳುತ್ತಾರೆ. ಹಾಗಾಗಿ 13.05.2024 ರಂದು ತೀರ್ಪು ಪ್ರಕಟಿಸುವುದಾಗಿ ಡೈಲಿ ಆರ್ಡರ್‌ನಲ್ಲಿ ಉಲ್ಲೇಖ ಮಾಡುತ್ತಾರೆ. ಆದರೆ 13.05.2024 ರಂದು ನ್ಯಾಯಾಧೀಶರು ತೀರ್ಪು ಪ್ರಕಟಿಸುವುದಿಲ್ಲ, ಬದಲಾಗಿ ಕೆಲವೊಂದು ಸ್ಪಷ್ಟೀಕರಣ ನೀಡಬೇಕು ಎಂದು ಎಸ್ ಬಾಲನ್ ಅವರಿಗೆ ಸೂಚಿಸಿ 27.05.2024 ಕ್ಕೆ ಕೇಸನ್ನು ಮುಂದೂಡುತ್ತಾರೆ.

ನಿರ್ಮಲಾ ಸೀತಾರಾಮನ್ ಮತ್ತು ಇತರ ಆರೋಪಿಗಳು ರಾಜ್ಯಸಭಾ ಸದಸ್ಯರು, ಲೋಕಸಭಾ ಸದಸ್ಯರು, ಶಾಸಕರು, ಅಧಿಕಾರಿಗಳಾಗಿರುವುದರಿಂದ ‘ಪೂರ್ವಾನುಮತಿ’ ಬೇಕಾಗಿಲ್ಲವೇ ಎಂದು ನ್ಯಾಯಾಧೀಶರು ಪ್ರಶ್ನಿಸಿ ನಿಗದಿಯಾಗಿದ್ದ ತೀರ್ಪು ದಿನಾಂಕವನ್ನು ಮುಂದೂಡಿದ್ದರು. ಈ ಬಗೆಗೆ 28.05.2024 ರಂದು ನ್ಯಾಯಾಲಯಕ್ಕೆ ಹಾಜರಾದ ಎಸ್ ಬಾಲನ್ ‘ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಹಲವು ತೀರ್ಪುಗಳಲ್ಲಿ ಮ್ಯಾಜಿಸ್ಟ್ರೇಟ್ ಸಕ್ಷಮ ಪ್ರಾಧಿಕಾರದಿಂದ ಸಿಆರ್‌ಪಿಸಿ ಸೆಕ್ಷನ್ 197 ಅನ್ವಯ ಪೂರ್ವಾನುಮತಿ ಪಡೆಯದಿದ್ದರೂ ಸಿಆರ್‌ಪಿಸಿ ಸೆಕ್ಷನ್ 156(3)ರ ಅಡಿ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಆದೇಶಿಸಬಹುದು’ ಎಂಬ ಬಗೆಗೆ ದಾಖಲೆ ಸಮೇತ ವಾದ ಮಂಡಿಸಿ ನ್ಯಾಯಾಧೀಶರು ಎತ್ತಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ.

S Balan

ನ್ಯಾಯಾಧೀಶರ ಅನುಮಾನಗಳೆಲ್ಲವೂ ಪರಿಹಾರಗೊಂಡ ಬಳಿಕ 04.06.2024 ರಂದು ತೀರ್ಪು ಪ್ರಕಟಿಸುವುದಾಗಿ ನ್ಯಾಯಾಧೀಶರು ಲಿಖಿತವಾಗಿ ಘೋಷಿಸುತ್ತಾರೆ. ಆದರೆ 04.06.2024 ರಂದೂ ನಿರ್ಮಲಾ ಸೀತಾರಾಮನ್ ಕೇಸಿನ ತೀರ್ಪು ಪ್ರಕಟವಾಗುವುದಿಲ್ಲ. ಬದಲಾಗಿ ಎಸ್ ಬಾಲನ್ ಅವರು ‘ನಿರ್ಮಲಾ ಸೀತಾರಾಮನ್ ಅವರ ಮೇಲೆ 156(3), 384, 120B IPC ಹೇಗೆ ಅನ್ವಯವಾಗುತ್ತದೆ’ ಎಂಬುದನ್ನು ವಿವರಿಸುವಂತೆ ಸೂಚಿಸಿ ಕೇಸನ್ನು 12-06-2024ಕ್ಕೆ ಮುಂದೂಡಲಾಗುತ್ತದೆ. ಹಲವು ದಾಖಲೆಗಳು, ಸುಪ್ರಿಂ ಕೋರ್ಟ್ ತೀರ್ಪುಗಳೊಂದಿಗೆ ವಾದ ಮಾಡಬೇಕಿರುವುದರಿಂದ ಎಸ್ ಬಾಲನ್ ಸಮಯಾವಕಾಶ ಕೋರುತ್ತಾರೆ. ಹಾಗಾಗಿ 20.06.2024 ಕ್ಕೆ ಕೇಸು ಮುಂದೂಡಲ್ಪಡುತ್ತದೆ. ಆದರೆ ಬಾಲನ್ ಅವರು ಸಂಪೂರ್ಣ ಸಿದ್ದತೆಯೊಂದಿಗೆ ನ್ಯಾಯಾಲಯಕ್ಕೆ ಸ್ಪಷ್ಟೀಕರಣ ನೀಡಿ ವಾದಿಸಲು ಬಂದರೆ 20.06.2024 ರಂದು ನ್ಯಾಯಾಧೀಶರು ರಜೆ ತೆಗೆದುಕೊಡಿದ್ದರು. ಆ ಬಳಿಕ ಎರಡು ಬಾರಿ ಎಸ್ ಬಾಲನ್ ಅವರ ಸಮಾವಕಾಶ ಕೋರುತ್ತಾರೆ. 24.07.2024 ರಂದು ಎಸ್ ಬಾಲನ್ ಅವರು ಇನ್ನೊಮ್ಮೆ ಎಲ್ಲಾ ರೀತಿಯ ಸ್ಪಷ್ಟೀಕರಣಗೊಂದಿಗೆ ವಾದ ಮಂಡಿಸುತ್ತಾರೆ. ವಾದ ಆಲಿಸಿದ ನ್ಯಾಯಾಧೀಶರು 17.08.2024 ರಂದು ತೀರ್ಪು ಪ್ರಕಟಿಸುವುದಾಗಿ ಡೈಲಿ ಆರ್ಡರ್ ಬರೆಯುತ್ತಾರೆ. ಆದರೆ ಅಂದು ದೂರುದಾರರ ಉಪಸ್ಥಿತಿ ಇಲ್ಲದೇ ಇರುವುದರಿಂದ ಪ್ರಕರಣದ ತೀರ್ಪು ಪ್ರಕಟಿಸಲು ದಿನಾಂಕ 23.08.2024 ಕ್ಕೆ ಮುಂದೂಡಲ್ಪಡುತ್ತದೆ. ಆದರೆ 23.08.2024 ರಂದೂ ತೀರ್ಪು ಪ್ರಕಟಿಸದೇ “for clarification’’ ಎಂದು ಕೇಸನ್ನು 29.08.2024 ಕ್ಕೆ ಮುಂದೂಡುತ್ತಾರೆ.

ಅದಾಗಲೇ ನ್ಯಾಯಾಧೀಶರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದ ಎಸ್ ಬಾಲನ್ ಅಂದು ಗೈರು ಹಾಜರಾಗುತ್ತಾರೆ. ದೂರುದಾರರೂ ಗೈರು ಹಾಜರಾಗುತ್ತಾರೆ. ಆದರೆ ನ್ಯಾಯಾಧೀಶರು ಅಂದು ಆದೇಶ ಪ್ರಕಟ ಮಾಡಲ್ಲ. ಬದಲಾಗಿ ಇನ್ನಷ್ಟೂ ಸ್ಪಷ್ಟೀಕರಣ ನೀಡಬೇಕು ಎಂದು 09.09.2024 ಕ್ಕೆ ದಿನಾಂಕ ನಿಗದಿಗೊಳಿಸಿ ಅಂದೇ ಆದೇಶ ಪ್ರಟಿಸುವುದಾಗಿ ಡೈಲಿ ಆರ್ಡರ್ ನಲ್ಲಿ ಬರೆಯುತ್ತಾರೆ. 09.09.2024 ರಂದೂ ದೂರುದಾರ ಆದರ್ಶ್ ಐಯ್ಯರ್ ಮತ್ತು ವಕೀಲ ಎಸ್ ಬಾಲನ್ ಅವರು ಗೈರಾಗುತ್ತಾರೆ. ಹಾಗಾಗಿ ‘ಯಾವುದೇ ಮುಂದುವರೆದ ವಾದ ಇರುವುದಿಲ್ಲ ಎಂದು ಪರಿಗಣಿಸಿ 19.09.2024 ರಂದು ಆದೇಶ ಪ್ರಟಿಸುವುದಾಗಿ’ ನ್ಯಾಯಾಧೀಶರು ಡೈಲಿ ಆರ್ಡರ್ ಬರೆಯುತ್ತಾರೆ. ಆದರೆ ಅದಾಗಲೇ ಆರು ತಿಂಗಳು ಕೋರ್ಟ್ ಅಲೆದಾಡಿ, ವಾದ ಮಂಡಿಸಿದ್ದ ವಕೀಲ ಎಸ್ ಬಾಲನ್ ಮತ್ತು ದೂರುದಾರ ಐಯ್ಯರ್‌ ನ್ಯಾಯಾಲಯಕ್ಕೆ ಅಂದೂ ಗೈರು ಹಾಜರಾಗಿದ್ದರು. ಅಂತಿಮವಾಗಿ 27.09.2024 ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್ ಮಾಡಲು ನ್ಯಾಯಾಲಯ ಆದೇಶ ಹೊರಡಿಸಿತು.

ನಿರ್ಮಲಾ ಸೀತಾರಾಮನ್ ವಿರುದ್ಧದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಆರು ತಿಂಗಳಲ್ಲಿ ಆರು ಬಾರಿ ‘ಆದೇಶ’ ವನ್ನು ಮುಂದೂಡಿತ್ತು.! ಮೂರು ಬಾರಿ ಕ್ಲಾರಿಫಿಕೇಶನ್ ಕೇಳಲಾಗಿತ್ತು !

ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿ ಎಫ್ಐಆರ್ ಗೆ ಸೂಚನೆ ನೀಡುವಾಗ ಸಿಆರ್ಪಿಸಿ ಪ್ರಕಾರ ಆರೋಪಿಗಳ ವಕೀಲರು ಉಪಸ್ಥಿತಿ ಇರುವಂತಿಲ್ಲ. ಕೇವಲ ದೂರುದಾರರ ವಕೀಲರು ಮಾತ್ರ ವಾದ ಮಾಡಬೇಕು. ಹಾಗಾಗಿ ನ್ಯಾಯಾಧೀಶರು ಇನ್ನಷ್ಟೂ ಸ್ಪಷ್ಟೀಕರಣಗಳನ್ನು ಬಯಸುವುದು ನ್ಯಾಯ ಪ್ರಕ್ರಿಯೆಯ ದೃಷ್ಟಿಯಿಂದ ಒಳ್ಳೆಯದು. ಆದರೆ ಆ ಭಾಗ್ಯ ನಿರ್ಮಲಾ ಸೀತಾರಾಮನ್ ಗೆ ಮಾತ್ರ ಆರು ತಿಂಗಳು ಒದಗಿಸಲಾಗಿತ್ತು. ಸಿದ್ದರಾಮಯ್ಯ ಪ್ರಕರಣದಲ್ಲಿ ‘ಎಫ್ಐಆರ್ ದಾಖಲಿಸಲು ಬೇಕಾಗುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರದ ಮೆಟೀರಿಯಲ್ ತೋರಿಸಿ’ ಎಂದು ವಿಚಾರಣಾ ನ್ಯಾಯಾಧೀಶರು ಪ್ರಶ್ನಿಸಿಲ್ಲ !

ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿಯುವುದು ಮತ್ತು ಎಫ್ಐಆರ್ ಗೆ ಮೆರಿಟ್ ಇದೆಯೇ ಎಂದು ವಿಚಾರಣಾ ನ್ಯಾಯಾಲಯ ನಿರ್ಧರಿಸುವುದು ಎರಡೂ ಪ್ರತ್ಯೇಕ ವಿಚಾರಗಳು. ಆದರೆ, ಹೈಕೋರ್ಟ್ ಆದೇಶದ ಬಳಿಕ ಸ್ನೇಹಮಯಿ ಕೃಷ್ಣ ಅವರು ಸಿದ್ದರಾಮಯ್ಯರವರ ವಿರುದ್ಧದ ಪಿಸಿಆರ್ 28/2024 ಅನ್ನು 25.09.2024 ರಂದು ಫೈಲಿಂಗ್ ಮಾಡುತ್ತಾರೆ. ಅದೇ ದಿನ ವಿಚಾರಣೆ ನಡೆದು, ಅದೇ ದಿನ ಅಂದರೆ 25 ಸೆಪ್ಟೆಂಬರ್ 2024 ರಂದು ಎಫ್ಐಆರ್ ಗೆ ಸೂಚಿಸಿ ಪಿಸಿಆರ್ ಆದೇಶ ಮಾಡುತ್ತಾರೆ.

ನಿರ್ಮಲಾ ಸೀತಾರಾಮನ್ ಮೇಲಿನ ಎಫ್ಐಆರ್ ಈ ದೇಶದ ಆರ್ಥಿಕತೆ, ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿಗೆ ಸಂಬಂಧಿಸಿದ್ದು!. ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಭಯೋತ್ಪಾದನೆಗೆ ಸಮನಾದ ಅಥವಾ ಅದಕ್ಕಿಂತಲೂ ಮಿಗಿಲಾದ ಪ್ರಕರಣವಿದು. ನಿರ್ಮಲಾ ಸೀತಾರಾಮನ್ ಪ್ರಕರಣದಲ್ಲಿ ನೂರಾರು ಉದ್ಯಮಿಗಳು ಸಂತ್ರಸ್ತರಾಗಿದ್ದರೂ ಅದರ ಪರಿಣಾಮವಾಗಿ ಇಡೀ ದೇಶವೇ ಸಂತ್ರಸ್ತರ ಪಟ್ಟಿಯಲ್ಲಿದೆ. ಸಿದ್ದರಾಮಯ್ಯ ಪ್ರಕರಣ ಕೇವಲ ಒಂದು ನಗರದ ಪ್ರಾದಿಕಾರದ ಸೈಟಿಗೆ ಸಂಬಂಧಿಸಿದ್ದು! ಇಲ್ಲಿ ಸಂತ್ರಸ್ತರೇ ಇಲ್ಲ!

ಸಿದ್ದರಾಮಯ್ಯ

ವಿಪರ್ಯಾಸವೆಂದರೆ, ಸಿದ್ದರಾಮಯ್ಯ ಅವರ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ಮತ್ತು ಸ್ನೇಹಮಯಿ ಕೃಷ್ಣ ಅರ್ಜಿಯು ವಿಚಾರಣಾ ನ್ಯಾಯಾಲಯದಲ್ಲಿ ನಡೆಯುವಾಗ ಪ್ರತಿಪಕ್ಷಗಳು ರಾಜ್ಯಾದ್ಯಂತ ಪ್ರತಿಭಟನೆ, ಹೇಳಿಕೆಗಳನ್ನು ನೀಡಿ ಹವಾ ಸೃಷ್ಟಿಸಿದ್ದರು. ಇದು ನಾವು ಎಷ್ಟು ನಿರಾಕರಿಸಿದರೂ ನ್ಯಾಯಾಂಗದ ತೀರ್ಪಿನ ಮೇಲೆ ಸಹಜವಾಗಿ ಪರಿಣಾಮ ಬೀರುತ್ತದೆ. ಹೈಕೊರ್ಟ್ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದ ಬಳಿಕ ಬಿಜೆಪಿ ಪಕ್ಷವು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ಇದಾದ ಬಳಿಕ ಹೆಚ್ಚಿನ ವಾದಗಳಿಲ್ಲದೇ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸ್ನೇಹಮಯಿ ಕೃಷ್ಣ ಅವರ ಪಿಸಿಆರ್ ಅರ್ಜಿಯನ್ನು ಪುರಸ್ಕರಿಸಿ ಒಂದೇ ದಿನದಲ್ಲಿ ಆದೇಶ ನೀಡಿದೆ. ಹೈಕೋರ್ಟ್ ಆದೇಶವನ್ನು ಬದಿಗಿರಿಸಿ, ಪಿಸಿಆರ್ ನಲ್ಲಿ ಎಫ್ಐಆರ್ ಗೆ ಬೇಕಾದ ದಾಖಲೆಗಳು ಇದೆಯೇ ಎಂದು ಪರಿಶೀಲಿಸಿ ಆದೇಶ ಕೊಡುವ ಅವಕಾಶ ವಿಚಾರಣಾ ನ್ಯಾಯಾಲಯಕ್ಕೆ ಇತ್ತು. ಆ ಕಾರಣಕ್ಕಾಗಿ ಸಿದ್ದರಾಮಯ್ಯ ಒಂದು ರೀತಿ ‘ಗುಂಪು ತೀರ್ಪು’ ಸಂತ್ರಸ್ತರಂತೆ ಕಾಣುತ್ತಾರೆ. ಇದನ್ನು ನ್ಯಾಯಾಂಗದ ಭಾಷೆಯಲ್ಲಿ ಫೇರ್ ಟ್ರಯಲ್ ಅಲ್ಲ ಎನ್ನುತ್ತಾರೆ.

ಇದನ್ನೂ ಓದಿ ಸಚಿವೆ ನಿರ್ಮಲಾ ಪ್ರಕರಣ ಸಿಐಡಿಗೆ ವಹಿಸಲು ಚಿಂತನೆ

ನಿರ್ಮಲಾ ಸೀತಾರಾಮನ್ ಈ ರೀತಿಯ ಸಂತ್ರಸ್ತರಲ್ಲ. ಆರು ತಿಂಗಳು ವಿಚಾರಣೆ ನಡೆದರೂ ಒಂದೇ ಒಂದು ಮಾಧ್ಯಮದಲ್ಲಿ ‘ಮೀಡಿಯಾ ಟ್ರಯಲ್’ ನಡೆಯಲ್ಲ. ದೇಶವನ್ನು ಲೂಟಿ ಮಾಡಿದ ಆರ್ಥಿಕ ಸಚಿವರು ರಾಜೀನಾಮೆ ನೀಡಬೇಕು ಎಂದು ದೇಶ ಬಿಡಿ, ರಾಜ್ಯದಲ್ಲೂ ಒಂದೇ ಒಂದು ಪ್ರತಿಭಟನೆ ನಡೆಯಲ್ಲ. ಯಾವ ಪ್ರಭಾವಕ್ಕೂ ಒಳಗಾಗದ ‘ಫೇರ್ ಟ್ರಯಲ್’ ಮೂಲಕವೇ ನಿರ್ಮಲಾ ಸೀತಾರಾಮನ್ ಮತ್ತು ಸಹಚರರು ಆರೋಪಿಗಳಾಗಿದ್ದಾರೆ. ಹಾಗಾಗಿ ನ್ಯಾಯ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯರಿಗಿಂತ ನಿರ್ಮಲಾ ಸೀತಾರಾಮನ್ ಪ್ರಕರಣ ಹೆಚ್ಚು ಗಂಭೀರವಾದುದು. ಎರಡೂ ಪ್ರಕರಣ ದಾಖಲಿಸುವಲ್ಲಿ ನಡೆದ ‘ಸಹಜ ನ್ಯಾಯ ಪ್ರಕ್ರಿಯೆ’ಯನ್ನು ಗಮನಿಸಿದರೆ ಸಿದ್ದರಾಮಯ್ಯ ಅನುಕಂಪಕ್ಕೆ ಅರ್ಹರಾಗಿದ್ದರೆ ನಿರ್ಮಲಾ ಸೀತಾರಾಮನ್ ದೇಶದ ಹಿತದೃಷ್ಟಿಯಿಂದ ರಾಜೀನಾಮೆಗೆ ಅರ್ಹರು !

ಸೂರಿಂಜೆ 1
ನವೀನ್‌ ಸೂರಿಂಜೆ
+ posts

ಪತ್ರಕರ್ತ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X