ಧರ್ಮಸ್ಥಳದ ಸೌಜನ್ಯಳ ಅತ್ಯಾಚಾರ/ಕೊಲೆ ಪ್ರಕರಣದಲ್ಲಿ ಅಮಾಯಕ ಸಂತೋಷ್ ರಾವ್‌ನನ್ನು ಶಂಕಿತ ಆರೋಪಿಗಳೇ ಪೊಲೀಸರಿಗೆ ಹಿಡಿದುಕೊಟ್ಟಿದ್ದರು. ಪೊಲೀಸರು ಆತನ ಮೇಲೆ ತಪ್ಪೊಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದಲ್ಲದೇ ಇಡೀ ಕುಟುಂಬವನ್ನು ಈ ಪ್ರಕರಣದಲ್ಲಿ ಫಿಟ್ ಮಾಡುವ ಬೆದರಿಕೆ ಒಡ್ಡಿದ್ದರು ಎಂದು ಸಂತೋಷ್ ಸಹೋದರ ಸಂಜಯ್ ರಾವ್ ಹೇಳಿದ್ದಾರೆ
“ಸೌಜನ್ಯಳನ್ನು ಅತ್ಯಾಚಾರ ಕೊಲೆ ಮಾಡಿದ್ದು ನೀನೇ ಎಂದು ಒಪ್ಪಿಕೊಳ್ಳದಿದ್ದರೆ, ನಿನ್ನ ಅಪ್ಪ ಮತ್ತು ಮೂವರು ಸಹೋದರರನ್ನೂ ಈ ಪ್ರಕರಣದಲ್ಲಿ ಫಿಟ್ ಮಾಡುವುದಾಗಿ ಆಗಿನ ಎಸ್ ಪಿ ಅವಿನಾಶ್ ಗೋಯಲ್ ನನ್ನ ತಮ್ಮ ಸಂತೋಷ್‌ಗೆ ಬೆದರಿಕೆ ಒಡ್ಡಿದ್ದರು” ಎಂದು ಸೌಜನ್ಯ ಪ್ರಕರಣದಲ್ಲಿ ಸಿಬಿಐ ಕೋರ್ಟಿನಿಂದ ಆರೋಪಮುಕ್ತರಾದ ಕಾರ್ಕಳದ ಸಂತೋಷ್ ರಾವ್ ಸಹೋದರ ಸಂಜಯ್ ರಾವ್ ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಕಾರ್ಕಳದ ಬೈಲೂರಿನಲ್ಲಿರುವ ಸಂತೋಷ್ ಮನೆಗೆ ಈ ದಿನ.ಕಾಮ್ ತಂಡ ಭೇಟಿ ನೀಡಿದಾಗ ಅವರು ತಮ್ಮ ಕುಟುಂಬ ಅನುಭವಿಸಿದ ನೋವುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಹತ್ತು ವರ್ಷಗಳ ಕಾಲ ತಮ್ಮನ ಪರವಾಗಿ ಕಾನೂನು ಹೋರಾಟ ನಡೆಸಿರುವವರು ಸಂಜಯ್.
“ಆ ದಿನ ಸಂಜೆ ಕಾರ್ಕಳ ಪೊಲೀಸ್ ಠಾಣೆಯ ಎಸ್‌ಐ ಮನೆಗೆ ಬಂದರು. ನಾನು, ಅಪ್ಪ ಮತ್ತು ಚಿಕ್ಕಪ್ಪ ಮಾತ್ರ ಮನೆಯಲ್ಲಿದ್ದೆವು. ವಿಷಯ ತಿಳಿಸಿದ ಅವರು ಪೊಲೀಸ್ ಜೀಪಿನಲ್ಲಿ ಅಪ್ಪ- ಚಿಕ್ಕಪ್ಪನನ್ನು ಸ್ಟೇಷನ್‌ಗೆ ಕರೆದುಕೊಂಡು ಹೋದರು. ಅಲ್ಲಿಗೆ ಹೋಗಿ ನೋಡಿದಾಗ ಪೊಲೀಸರು ಸಂತೋಷನಿಗೆ ಹೊಡೆದು ತಪ್ಪೊಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದ್ದರಂತೆ. ʼಅವನಿಗೆ ಹೊಡಿಬೇಡಿ, ಅವ ಅಂತವನಲ್ಲʼ ಎಂದು ಹೇಳಿದರೂ ಅಪ್ಪನ ಎದುರಲ್ಲೇ, ʼಬಾಯಿ ಬಿಡು ಬೋ.. ಮಗನೇ…ʼ ಎಂದು ಥಳಿಸುತ್ತಿದ್ದರಂತೆ. ಅದನ್ನು ನೋಡಲಾಗದೇ ಅಪ್ಪ, ಚಿಕ್ಕಪ್ಪ ಮನೆಗೆ ವಾಪಸ್ ಬಂದರು. ರಾತ್ರಿ ಮತ್ತೆ ಪೊಲೀಸರಿಂದ ಫೋನ್ ಬಂತು, ʼಅವ ಸಿಕ್ಕಾಪಟ್ಟೆ ಗಲಾಟೆ ಮಾಡುತ್ತಿದ್ದಾನೆ. ಕಂಟ್ರೋಲ್ ಮಾಡಲಾಗುತ್ತಿಲ್ಲ ಬನ್ನಿʼ ಎಂದರು. ಅಪ್ಪ, ಚಿಕ್ಕಪ್ಪ ಮತ್ತೆ ಹೋಗಿ ಅವನನ್ನು ಸಮಾಧಾನ ಮಾಡಿದರು. ರಾತ್ರಿ ಬಂಟ್ವಾಳದ ಸ್ಟೇಷನ್‌ನಲ್ಲಿ ಇಟ್ಟಿದ್ದರಂತೆ. ಅಪ್ಪನವರು ರಾತ್ರಿ ಅಲ್ಲೇ ಉಳಿದರು.
ಮರುದಿನ ಬೆಳಿಗ್ಗೆ ಮತ್ತೆ ಕಾರ್ಕಳಕ್ಕೆ ಕರೆತಂದರು. ಅಲ್ಲಿಗೆ ಹೋದಾಗ ಅಲ್ಲಿ ಎಸ್ ಪಿ ಅವಿನಾಶ್ ಗೋಯಲ್ ಸಂತೋಷನನ್ನು ಗೋಡೆಗೆ ಒತ್ತಿ ಹಿಡಿದು ಹೊಡೆಯುತ್ತಿದ್ದರಂತೆ. ಒಪ್ಪಿಕೊಳ್ಳದಿದ್ದರೆ ನಿನ್ನ ಅಪ್ಪ, ಮೂವರು ಅಣ್ಣಂದಿರನ್ನೂ ಈ ಕೇಸಿನಲ್ಲಿ ಫಿಟ್ ಮಾಡಿ ಒಳಗೆ ಹಾಕುತ್ತೇವೆ ಎಂದು ಹೆದರಿಸುತ್ತಿದ್ದರಂತೆ. ಆಗ ಸಂತೋಷ ತಪ್ಪೊಪ್ಪಿಕೊಳ್ಳುವ ನಿರ್ಧಾರ ಮಾಡಿದ್ದ. ನೀವು ಏನು ಹೇಳುತ್ತೀರೋ ಅದಕ್ಕೆ ಒಪ್ಪಿ ಸಹಿ ಹಾಕುತ್ತೇನೆ ಎಂದನಂತೆ. ಮಾಡದ ತಪ್ಪು ಒಪ್ಪಿಕೊಳ್ಳಬೇಡ ಎಂದು ಅಪ್ಪ ಹೇಳಿದಾಗ, ನಾನು ಸತ್ತರೂ ಪರವಾಗಿಲ್ಲ, ಅಪ್ಪ ನೀವು ಬದುಕಬೇಕು. ಇನ್ನೂ ಮೂವರು ಮಕ್ಕಳಿದ್ದಾರಲ್ವಾ… ಎಂದು ಹೇಳಿ ಮಾಡದ ಅಪರಾಧವನ್ನು ಒಪ್ಪಿಕೊಂಡುಬಿಟ್ಟಿದ್ದ.
ಇಡೀ ಘಟನೆ ಧಾರಾವಾಹಿಯ ಸ್ಕ್ರಿಪ್ಟ್ ರೀತಿಯಲ್ಲಿ ನಡೆಯಿತು. ಎಲ್ಲ ಸೆಟ್ಟಿಂಗ್ ಮಾಡಿದ್ರು. ಧರ್ಮಸ್ಥಳಕ್ಕೆ ಬರುವಾಗ ರಾತ್ರಿಯಾಗಿತ್ತು. ರೂಮು ಸಿಗಲಿಲ್ಲ ಅಂತ ಬಾಹುಬಲಿ ಬೆಟ್ಟದ ಮೆಟ್ಟಿಲ ಮೇಲೆ ಕೂತಿದ್ದವನನ್ನು ರವಿ ಪೂಜಾರಿ ಎನ್ನುವವನು ಹಿಡಿದು ಇವನೇ ಸೌಜನ್ಯ ಕೊಲೆಗಾರ ಅಂತ ಪೊಲೀಸರಿಗೆ ಒಪ್ಪಿಸಿದ. ನಂತರ ಅವರ ಸ್ಕ್ರಿಪ್ಟ್‌ಗೆ ಎಲ್ಲೂ ವ್ಯತ್ಯಾಸವಾಗದಂತೆ ಪೊಲೀಸರು ನೋಡಿಕೊಂಡರು” ಎಂದು ಅವರು ವಿವರಿಸಿದರು.
ನಮಗೆ ದೇವರಾಗಿ ಬಂದವರು ಮಹೇಶಣ್ಣ
“ಯಾರೆಲ್ಲ ನನ್ನ ತಮ್ಮ ಸಂತೋಷನ ಮೇಲೆ ಆರೋಪ ಹೊರಿಸಿ ನಮ್ಮ ಮನೆಯ ಸಂತೋಷ -ನೆಮ್ಮದಿಯನ್ನು ಕಿತ್ತುಕೊಂಡರೋ ಅವರು ಮಣ್ಣುಮುಕ್ಕುವುದು ಗ್ಯಾರಂಟಿ. ಅವರನ್ನು ಆ ಇಬ್ಬರು (ಮಂಜುನಾಥ, ಅಣ್ಣಪ್ಪ) ನೋಡಿಕೊಳ್ಳಲಿ. ಅವರು ಕಣ್ಣುಮುಚ್ಚಿ ಕೂತಿದ್ದಾರಾ ಗೊತ್ತಿಲ್ಲ. ನಾವೂ ನಂಬಿರುವುದು ಅವರನ್ನೇ. ಬೆಳಗ್ಗೆದ್ದು ಮೊದಲು ಕೈ ಮುಗಿಯೋದು ಅಣ್ಣಪ್ಪನಿಗೆ. ಅವನು ನೋಡಿಕೊಳ್ಳುತ್ತಾನೆ.
ನಮಗೆ ಸಮಾಜದಲ್ಲಿ ಮರ್ಯಾದೆ ಇಲ್ಲದಂತಾಗಿದೆ. ಇದುವರೆಗೆ ನಮ್ಮ ಮನೆಗೆ ಶಾಸಕರಾಗಲಿ, ಸಂಸದರಾಗಲಿ ಕಾಲಿಟ್ಟಿಲ್ಲ. ನಮ್ಮ ಸಂಬಂಧಿಗಳಾಗಲಿ, ಸಮಾಜದವರಾಗಲಿ ನಮ್ಮನ್ನು ವಿಚಾರಿಸಿದವರೇ ಇಲ್ಲ. ಇವತ್ತು ತಮ್ಮ ನಿರಪರಾಧಿ ಎಂದು ಹೊರಗೆ ಬಂದಿದ್ದಾನೆ. ಆದರೂ ಮಾತನಾಡಿಸುವವರಿಲ್ಲ. ಈ ಹನ್ನೊಂದು ವರ್ಷಗಳಲ್ಲಿ ನಾವು ಮಾನಸಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅನುಭವಿಸಿದ ನೋವು ಹೇಳುವಂತದ್ದಲ್ಲ. ನಮ್ಮ ಪಾಲಿಗೆ ದೇವರಾಗಿ ಬಂದವರು ಮಹೇಶ್ ಶೆಟ್ಟಿ. ಅವರಿಲ್ಲದಿದ್ದರೆ ಏನೂ ಆಗುತ್ತಿರಲಿಲ್ಲ. ನಮಗೆ ದಾರಿ ತೋರಿಸಿದವರು, ಹೇಗಿದ್ದೀರಿ, ಏನು ಮಾಡುತ್ತಿದ್ದೀರಿ ಎಂದು ಕೇಳಿದವರು ಅವರೊಬ್ಬರೇ.
“ಅಮ್ಮ ಸತ್ತ ಮೇಲೆ ಈ ಮನೆಗೆ ಹೆಣ್ಣು ದಿಕ್ಕಿಲ್ಲ. ನನ್ನ ಮೂವರು ತಮ್ಮಂದಿರಿಗೆ ಮದುವೆಯಾಗಿಲ್ಲ. ಸಂತೋಷ ಹೀಗಾದ ಬಿಡಿ. ಆದರೆ, ಸಂದೀಪ ಮತ್ತು ಸಂದೇಶ ಇಬ್ಬರಿಗೆ ಇನ್ನೂ ಮದುವೆಯಾಗಿಲ್ಲ. ವಯಸ್ಸು ನಲ್ವತ್ತಾಯ್ತು, ಹೆಣ್ಣಿನ ಮನೆಯವರು ಬಂದು ಹೋದ ನಂತರ ಅವರಿವರು ಚಾಡಿ ಹೇಳಿ ತಪ್ಪಿಸುತ್ತಿದ್ದಾರೆ. ಮದುವೆ ಸಂಬಂಧ ತಪ್ಪಲು ಇದೇ ಕಾರಣ. ಬೇರೆ ಯಾವುದೇ ಕಾರಣ ಇಲ್ಲ. ನನ್ನ ಪತ್ನಿ ಕೂಡಾ ಇಲ್ಲಿಗೆ ಬರಲು ಒಪ್ಪುತ್ತಿಲ್ಲ. ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರ ಭವಿಷ್ಯದ ಬಗ್ಗೆ ಅವಳಿಗೆ ಚಿಂತೆ. ಅಪ್ಪನ ಪರಿಸ್ಥಿತಿ ಹೇಗಿದೆ ಎಂದು ನೀವೇ ನೋಡಿದ್ದೀರಿ. ನಮ್ಮ ಕುಟುಂಬದ ಈ ಸ್ಥಿತಿಗೆ ಕಾರಣರಾದ ಎಲ್ಲರ ಮೇಲೂ ಮಾನನಷ್ಟದ ಕೇಸು ದಾಖಲಿಸದೇ ಬಿಡುವುದಿಲ್ಲ” ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನು ಓದಿ ಸೌಜನ್ಯ ಪ್ರಕರಣ | ʼಗೋಲ್ಡನ್ ಅವರ್ʼ ನಲ್ಲಿ ಸಂಪೂರ್ಣ ಸಾಕ್ಷ್ಯ ನಾಶ ಮಾಡಲಾಗಿದೆ; ಸಿಬಿಐ ವರದಿ
ಸೌಜನ್ಯ ಪ್ರಕರಣ | ಅಲ್ಲಿ ಎಲ್ಲೆಲ್ಲೂ ಸೌಜನ್ಯಳೇ ಕಾಣಸಿಗುತ್ತಾಳೆ…
ಸೌಜನ್ಯ ಪ್ರಕರಣ Exclusive | ಯಾರದ್ದೋ ಷಡ್ಯಂತ್ರಕ್ಕೆ ನಮ್ಮ ಕುಟುಂಬ ಛಿದ್ರಗೊಂಡಿದೆ- ಸುಧಾಕರ ರಾವ್

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.