ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ 'ಬುಲ್ಡೋಜರ್ ನ್ಯಾಯ'ವನ್ನು 2017ರಲ್ಲಿ ಆರಂಭಿಸಿತ್ತು. ಭೂಗತ ಪಾತಕಿಗಳು, ಹಿಂಸಾಚಾರ ಪ್ರಕರಣಗಳಲ್ಲಿ ಪಾಲ್ಗೊಳ್ಳುವವರನ್ನು ಹದ್ದುಬಸ್ತಿನಲ್ಲಿಡಲು ಅವರ ಆಸ್ತಿಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸುವ ಪ್ರವೃತ್ತಿ ಆರಂಭಿಸಿತು. ಆದರೆ ಅದು ಬಳಕೆಯಾಗಿದ್ದು ಅತಿ ಹೆಚ್ಚಾಗಿ ಮುಸ್ಲಿಂ ಸಮುದಾಯವನ್ನು ಬಗ್ಗುಬಡಿಯಲು...
ಘಟನೆ ಒಂದು, ಏಪ್ರಿಲ್ 1, 2025: ಉತ್ತರ ಪ್ರದೇಶದ ಪ್ರಯಾಗರಾಜ್ ನಿವಾಸಿಗಳಾದ ವಕೀಲ ಜುಲ್ಫೀಕರ್ ಹೈದರ್, ಪ್ರಾಧ್ಯಾಪಕ ಅಲಿ ಅಹ್ಮದ್ ಹಾಗೂ ಇತರರ ಮನೆಗಳನ್ನು ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರ ಧ್ವಂಸಗೊಳಿರುವುದಕ್ಕೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿತ್ತು. ‘ಈ ಕ್ರಮ ನಮ್ಮ ಆತ್ಮಸಾಕ್ಷಿಯನ್ನೇ ಕಲಕಿದೆ. ಮನೆಗಳನ್ನು ಧ್ವಂಸಗೊಳಿಸಿರುವುದು ಅಮಾನವೀಯ ಹಾಗೂ ಕಾನೂನುಬಾಹಿರವಾಗಿದೆ. ಸರ್ವಾಧಿಕಾರದ ರೀತಿಯಲ್ಲಿ ಮನೆಗಳ ಧ್ವಂಸ ಕಾರ್ಯಾಚರಣೆ ನಡೆದಿದೆ. ದೇಶದಲ್ಲಿ ಕಾನೂನು ಇದೆ. ಅದರ ಪ್ರಕಾರವೇ ಕ್ರಮ ಜರುಗಿಸಬೇಕು. ಜನರು ಕಟ್ಟಿಕೊಂಡಿರುವ ಮನೆಗಳನ್ನು ಬುಲ್ಡೋಜರ್ ನ್ಯಾಯದ ಮೂಲಕ ಧ್ವಂಸ ಮಾಡಬಾರದು’ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತ್ತು.
ಘಟನೆ ಎರಡು, ನವೆಂಬರ್ 13, 2024: ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರ ಒಡೆತನದ ಆಸ್ತಿಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ವಿವಿಧ ರಾಜ್ಯ ಸರ್ಕಾರಗಳು ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದವು. ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ‘ಬುಲ್ಡೋಜರ್ ಕ್ರಮ’ವನ್ನು ನಿಷೇಧಿಸಿ ಮಹತ್ವದ ತೀರ್ಪು ನೀಡಿತ್ತು. ಆರೋಪಿಗಳಾಗಲಿ, ತಪ್ಪಿತಸ್ಥರಾಗಿರಲಿ ಯಾರದ್ದೇ ಮನೆಗಳು, ಆಸ್ತಿಗಳನ್ನು ನೆಲಸಮ ಮಾಡಬಾರದು. ಬುಲ್ಡೋಜರ್ ಕಾರ್ಯಾಚರಣೆ ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂ ಹೇಳಿತ್ತು.
ಘಟನೆ ಮೂರು, ಏಪ್ರಿಲ್ 20, 2022: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿ ರ್‍ಯಾಲಿ ವೇಳೆ ಕೋಮು ಹಿಂಸಾಚಾರ ನಡೆದಿತ್ತು. ಬಿಜೆಪಿ ನೇತೃತ್ವದ ಉತ್ತರ ದೆಹಲಿ ಮಹಾನಗರ ಪಾಲಿಕೆ ಆಡಳಿತವು ಮಸೀದಿಯೊಂದರ ಗೋಡೆ ಮತ್ತು ಗೇಟು ಸೇರಿದಂತೆ ಹಲವು ಕಟ್ಟಡಗಳನ್ನು ತೆರವುಗೊಳಿಸಿತ್ತು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು.
ಮೇಲಿನ ಮೂರು ಪ್ರಕರಣಗಳನ್ನು ಗಮನಿಸಿದರೆ ದೇಶದ ಸಂವಿಧಾನ ಹಾಗೂ ಕಾನೂನನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕೇವಲ ಮುಸ್ಲಿಂ ಸಮುದಾಯದವರನ್ನು ಗುರಿ ಮಾಡಿಕೊಂಡು ತಪ್ಪೆಸಗಿದ್ದಾರೆ ಎಂಬ ಆರೋಪದಲ್ಲಿ ಅವರಿಗೆ ಸೇರಿದ ಕಟ್ಟಡಗಳನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ನೆಲಸಮಗೊಳಿಸಿದ್ದವು. ಈ ಅನ್ಯಾಯವನ್ನು ಉಗ್ರವಾಗಿ ಖಂಡಿಸಿದ್ದ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಪ್ರಕರಣಗಳು ಪ್ರಮುಖ ಉದಾಹರಣೆಗಳಾದರೂ ದೇಶಾದ್ಯಂತ ಇಂತಹ ಹಲವು ಪ್ರಕರಣಗಳು ದಾಖಲಾಗಿವೆ. ಕೆಲವರು ನ್ಯಾಯಾಲಯದ ಕಟಕಟೆ ಏರಿದರೆ, ದುರ್ಬಲರು, ಸೂರು ಕಳೆದುಕೊಂಡವರು ಕೋರ್ಟಿನ ಮೆಟ್ಟಿಲು ಹತ್ತಲೂ ಆಗದೆ ಬೀದಿ ಪಾಲಾಗಿದ್ದಾರೆ.
‘ಬುಲ್ಡೋಜರ್ ನ್ಯಾಯ’ ಎಂದು ಕರೆಯಲಾಗುತ್ತಿರುವ ಈ ಕಾರ್ಯಾಚರಣೆಯನ್ನು ಉತ್ತರ ಪ್ರದೇಶದ ಸರ್ಕಾರ 2017ರಲ್ಲಿ ಆರಂಭಿಸಿತ್ತು. ಯೋಗಿ ಆದಿತ್ಯನಾಥ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭೂಗತ ಪಾತಕಿಗಳು, ಹಿಂಸಾಚಾರ ಪ್ರಕರಣಗಳು ಸೇರಿದಂತೆ ವಿವಿಧ ಪ್ರಕರಣಗಳ ಆರೋಪಿಗಳ ಆಸ್ತಿಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸುವ ಪ್ರವೃತ್ತಿ ಆರಂಭವಾಯಿತು. ಆದರೆ ಇದನ್ನು ಮುಸ್ಲಿಂ ಸಮುದಾಯದವರ ಮೇಲೆಯೆ ಬಹುತೇಕ ಬಳಸಿಕೊಳ್ಳಲಾಯಿತು. ನಂತರದಲ್ಲಿ ಬುಲ್ಡೋಜರ್ ಕಾರ್ಯಾಚರಣೆಯನ್ನು ಕೇಸರಿ ಪಕ್ಷದ ಇತರ ರಾಜ್ಯಗಳ ಸರ್ಕಾರಗಳು ಒಂದು ಅಸ್ತ್ರವನ್ನಾಗಿ ಮಾಡಿಕೊಂಡವು. ಸರ್ಕಾರೇತರ ಸಂಸ್ಥೆಗಳು ನೀಡಿರುವ ವರದಿಗಳ ಅನ್ವಯ ಬಿಜೆಪಿ ಆಡಳಿತದ ರಾಜ್ಯಗಳು ಕಳೆದ 8 ವರ್ಷಗಳಿಂದ ಬಹುತೇಕ ಮುಸ್ಲಿಮರಿಗೆ ಸೇರಿದ ನೂರಾರು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ನೆಲಸಮ ಕಾರ್ಯಾಚರಣೆಗಳಿಗೆ ಮುನ್ನ ಮುಸ್ಲಿಂ ಸಮುದಾಯದಿಂದ ಸರ್ಕಾರದ ವಿರುದ್ಧ ಪ್ರತಿಭಟನೆಗಳು, ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದವು. ಇದರ ವಿರುದ್ಧ ಸೇಡಿನ ಕ್ರಮವಾಗಿ ಅಮಾಯಕರ ಮನೆಗಳನ್ನು ಕಟ್ಟಡಗಳನ್ನು ಧ್ವಂಸಗೊಳಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪತ್ರಿಕೋದ್ಯಮದ ಪಾವಿತ್ರ್ಯವನ್ನು ಪಾತಾಳಕ್ಕಿಳಿಸಿದ ‘ಪತ್ರಕರ್ತರು’!
ಸಾಮಾನ್ಯವಾಗಿ ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದರೆ ಕೆಡವಲಾಗುತ್ತದೆ. ಅಭಿವೃದ್ಧಿ ಕಾಮಗಾರಿಗಳಿಗೆ ಕೂಡ ಕಟ್ಟಡಗಳನ್ನು ಕೆಡವಬೇಕಾಗುತ್ತದೆ. ಆದರೆ ಧ್ವಂಸಗೊಳಿಸುವ ಕಾರ್ಯಾಚರಣೆಗೆ ಪೂರ್ವಭಾವಿಯಾಗಿ ಕಾನೂನು ಪ್ರಕ್ರಿಯೆಗಳಿರುತ್ತವೆ. ಕಾರಣವಿಲ್ಲದೆ ಏಕಾಏಕಿ ನಾಶಗೊಳಿಸುವಂತಿಲ್ಲ. ಆದರೆ ಕೇಸರಿ ಪಕ್ಷ ವಿವಿಧ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮುಸ್ಲಿಂ ಸಮುದಾಯದ ಜನರು ಸರಕಾರದ ನೀತಿಯ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಅವರನ್ನು ಅಪರಾಧಿಯನ್ನಾಗಿಸಿ ಅವರಿಗೆ ಸಂಬಂಧಿಸಿದ ಕಟ್ಟಡಗಳನ್ನು ಕೆಡಹುವ ಅನ್ಯಾಯದ ಕಾನೂನು ಜಾರಿಗೊಂಡಿದೆ. ಇಲ್ಲಿ ಸರ್ಕಾರವೇ ಆರೋಪಿಯ ಅಪರಾಧವನ್ನು ನಿರ್ಧರಿಸಿ ಶಿಕ್ಷೆಯನ್ನು ನೀಡುತ್ತಿದೆ. ವಿಪರ್ಯಾಸವೆಂದರೆ, ಒಬ್ಬ ಮಾಡಿದ ತಪ್ಪಿಗೆ ಆತನ ಅಮಾಯಕ ಕುಟುಂಬವೇ ಶಿಕ್ಷೆಯನ್ನು ಅನುಭವಿಸಬೇಕಿದೆ.

ಅಲ್ಪಸಂಖ್ಯಾತರಿಗೆ ಆಳುವ ಸರ್ಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸುವ ಯಾವ ಅಧಿಕಾರವಿಲ್ಲ ಎನ್ನುವ ಸೂಚನೆಯನ್ನು ಬಲವಂತವಾಗಿ ನೀಡಲಾಗುತ್ತಿದೆ. ಒಂದು ಕುಟುಂಬದಲ್ಲಿ ಒಬ್ಬ ಅಪರಾಧ ನಡೆಸಿದರೆ ಆತನ ನಿವಾಸದ ಮೇಲೆ ಬುಲ್ಡೋಜರ್ ಮೂಲಕ ನಾಶ ಮಾಡಬಹುದು ಎಂದರೆ, ಹತ್ತಾರು ನೂರಾರು ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿರುವ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳ ಆಸ್ತಿಪಾಸ್ತಿಗಳನ್ನು ಸರ್ಕಾರ ಏಕೆ ನಾಶ ಮಾಡುತ್ತಿಲ್ಲ. ಅಧಿಕಾರಸ್ಥರು ಅವರ ಮೇಲೆ ಏಕೆ ಪ್ರಯೋಗಿಸುತ್ತಿಲ್ಲ? ಧರ್ಮದ ಅಮಲನ್ನು ಮೆತ್ತಿಕೊಂಡಿರುವ ಆಳುವವರು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಒಂದು ಸಮುದಾಯದವರ ಆಸ್ತಿಗಳ ಮೇಲೆ ಮಾತ್ರ ಬುಲ್ಡೋಜರ್‌ಗಳನ್ನು ಹರಿಸಿ ಅವರ ಬದುಕನ್ನು ನಾಶಮಾಡುತ್ತಿದ್ದಾರೆ.
ಬುಲ್ಡೋಜರ್ ನ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದರೆ ತಾನು ಅನಧಿಕೃತ ಹಾಗೂ ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ಮಾತ್ರ ಕೆಡವುತ್ತಿದ್ದೇನೆ ಎಂದು ಕೇಂದ್ರ ಸರ್ಕಾರ ಸಮಜಾಯಿಷಿ ನೀಡಿತ್ತು. ಇದು ನಿಜವೇ ಆಗಿದ್ದರೆ ಈ ಬಗ್ಗೆ ಒಂದು ಮಾರ್ಗಸೂಚಿ ರೂಪಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಇದ್ಯಾವುದನ್ನು ಕಾರ್ಯಗತಗೊಳಿಸುವುದಕ್ಕೆ ಬಿಜೆಪಿ ಸರ್ಕಾರಗಳಿಗೆ ಸುತಾರಾಂ ಇಷ್ಟವಿಲ್ಲ. ಸರ್ಕಾರಗಳು ನೆಲಸಮ ಕಾರ್ಯ ಕೈಗೊಳ್ಳುವ ಮುನ್ನ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡುತ್ತಿರಲಿಲ್ಲ. ಕನಿಷ್ಠ ಮಾಹಿತಿಯನ್ನೂ ನೀಡದೇ ಏಕಾಏಕಿ ಧ್ವಂಸ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕೆಲವು ಕಡೆಗಳಲ್ಲಂತೂ ರಾತ್ರಿ ವೇಳೆ, ಮನೆ ಖಾಲಿ ಮಾಡಲು ಕೂಡ ಕಾಲಾವಕಾಶ ನೀಡದೆ ಕಟ್ಟಡಗಳ ಮೇಲೆ ಜೆಸಿಬಿಗಳನ್ನು ನುಗ್ಗಿಸಿ ಕುಟುಂಬದವರನ್ನು ಬೀದಿಗೆ ತಳ್ಳಲಾಗಿದೆ. ಇಂತಹ ಘೋರ ಕೃತ್ಯಗಳು ಕಾನೂನಿನ ಉಲ್ಲಂಘನೆಗಳ ಜೊತೆ ಮಾನವ ಹಕ್ಕುಗಳ ಉಲ್ಲಂಘನೆಯೂ ಆಗುತ್ತದೆ. 2022ರ ಜೂನ್‌ನಲ್ಲಿ ದೇಶದ ಪ್ರಮುಖ ಕಾನೂನು ತಜ್ಞರು ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದು, ‘ಬುಲ್ಡೋಜರ್ ನ್ಯಾಯ’ ಎನ್ನುವುದು ಸಂವಿಧಾನದ ವ್ಯಂಗ್ಯವಾಗಿದ್ದು, ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಜರುಗಿಸಿ ಮುಸ್ಲಿಮರ ವಿರುದ್ಧದ ದಮನಕಾರಿ ಪ್ರವೃತ್ತಿಯನ್ನು ಕೊನೆಗೊಳಿಸಬೇಕು ಎಂದು ಒತ್ತಾಯಿಸಿದ್ದರು.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಿಂದ ಬಹಳಷ್ಟು ಬಾರಿ ಛೀಮಾರಿ ಹಾಗೂ ಎಚ್ಚರಿಕೆ ನೀಡಿದರೂ ಬುಲ್ಡೋಜರ್ ನ್ಯಾಯದ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಹಲವು ಸಂದರ್ಭಗಳಲ್ಲಿ ಸಮರ್ಥಿಸಿಕೊಂಡಿದ್ದಾರೆ. ಯೋಗಿ ಆದಿತ್ಯನಾಥ ಅವರ ಚುನಾವಣಾ ಪ್ರಚಾರ ಸಭೆಗಳಲ್ಲಿ ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿತ್ತು ಮತ್ತು ಚುನಾವಣೆಯಲ್ಲಿ ಗೆದ್ದ ನಂತರ ವಿಧಾನಸಭೆಯ ಕಟ್ಟಡದ ಮುಂದೆ ಬುಲ್ಡೋಜರ್‌ಗಳನ್ನು ಪರೇಡ್ ಮಾಡಿರುವ ಬಗ್ಗೆ ಆರೋಪಗಳಿವೆ.
ಕಾನೂನು ಉಲ್ಲಂಘಿಸುವವರಿಗೆ ಖಂಡಿತಾ ಶಿಕ್ಷೆಯಾಗಬೇಕು. ಪ್ರಕರಣಗಳ ವಿಚಾರಣೆ ನಡೆಸಿ ತಪ್ಪಿತಸ್ಥರು ಯಾರೆಂದು ತೀರ್ಮಾನ ಮಾಡಿ ಶಿಕ್ಷೆ ವಿಧಿಸಬೇಕಾಗಿರುವುದು ನ್ಯಾಯಾಲಯವೇ ಹೊರತು ಸರ್ಕಾರವಲ್ಲ. ಆದರೆ ಬಿಜೆಪಿ ಸರ್ಕಾರ ತನ್ನ ವಿರುದ್ಧ ಇರುವವರನ್ನು, ಮುಸ್ಲಿಂ ಸಮುದಾಯದ ವಿರುದ್ಧ ಹಗೆ ತೀರಿಸಿಕೊಳ್ಳಲು ಬುಲ್ಡೋಜರ್ ಕಾರ್ಯಾಚರಣೆ ಮಾಡುತ್ತಿರುವುದು ಸಂವಿಧಾನ ವಿರೋದಿ ಹಾಗೂ ಸರ್ವಾಧಿಕಾರ ಧೋರಣೆಯಲ್ಲದೆ ಮತ್ತೇನಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಡೆದಾಳುವ ರಾಜಕೀಯಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಧರ್ಮ, ಜಾತಿಗಳ ಆಧಾರದಲ್ಲಿ ಶಿಕ್ಷಣವನ್ನು ಕೇಸರೀಕರಣಗೊಳಿಸಲಾಗಿದೆ. ಆಹಾರವನ್ನೂ ಜಾತಿ, ಧರ್ಮದ ಆಧಾರದಲ್ಲಿ ಬೇರ್ಪಡಿಸಲಾಗುತ್ತಿದೆ. ಈ ರೀತಿ ನಾಶಗೊಳಿಸುವ ರಾಜಕಾರಣ ದೇಶವನ್ನು ಮತ್ತಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ ವಿನಾ, ಸಮಾನತೆ ಹಾಗೂ ಅಭಿವೃದ್ಧಿಯಾಗುವುದಿಲ್ಲ.
