ಹಬ್ಬಗಳನ್ನು ಸಮಾಜದ ಜೋಡಣೆಗೆ ಉಪಯೋಗ ಮಾಡುವ ಹೊಸ ವಿಧಾನ ʼಸರ್ವ ಧರ್ಮ ಕ್ರಿಸ್‌ಮಸ್ʼ ಆಚರಣೆ. ಒಂದು ಸಮಾಜದ ಆಚರಣೆ ಇನ್ನೊಂದು ಮತದವರು ಮಾಡಿದಾಗ ಅದರ ನೈಸರ್ಗಿಕ ಲಾಭವನ್ನು ಪಡೆಯಲು ಸಾಧ್ಯ.
ಕ್ರಿಸ್‌ಮಸ್ ಹಬ್ಬವೂ ಹೀಗಾಗಲಿ.
ಲೋಕದಲ್ಲಿ ಇಂದಿಗೂ ಕ್ರಿಸ್‌ಮಸ್ ಹಬ್ಬವನ್ನು ಅತೀ ಹೆಚ್ಚು ಜನರು ಆಚರಿಸುತ್ತಾರೆ. ಅತೀ ಹೆಚ್ಚು ವಹಿವಾಟು ಕೂಡ ಇದೇ ಸೀಸನ್‌ನಲ್ಲಿ ಆಗುತ್ತದೆ. ವರ್ಷದ ಕೊನೆಯ ದಿನಗಳಲ್ಲಿ ಆದ್ದರಿಂದ ಜನರು ಮೆರ್ರಿ ಮೇಕಿಂಗ್ ಅಂದರೆ, ಸಂಭ್ರಮಾಚರಣೆಯ ಹುಮ್ಮಸ್ಸು ಹೊಂದಿರುತ್ತಾರೆ.
ಆದರೆ ಈಗಲೂ ಲಕ್ಷಾಂತರ ಜನರು ಯೇಸುವಿನ ಜನನದ ಊರು ನಜ್ರೆತ್, ಜೆರುಜಲೆಮ್ ಮತ್ತಿತರ ಜಾಗಗಳಿಗೆ ಹೋಗಿ ದೇವಪುತ್ರರ ಜನನದ ಪ್ರದೇಶದ ದರ್ಶನ ಮಾಡಿ ಬರುತ್ತಾರೆ. ಕಾನೆಶ್ಮಾರಿ ಅಂದರೆ ಜನರಿಗೆ ತಮ್ಮ ಹುಟ್ಟಿದ ಊರಿಗೆ ಹೋಗಿ ಜನನವನ್ನು ಮರು ನೊಂದಾವಣೆ ಅಥವ ರಿವೆಲಿಡೇಶನ್ ಮಾಡಿಸುವುದು.
ಯೇಸುವಿನ ಜನ್ಮವಾದಾಗ ರೋಮನ್ ಆಡಳಿತ ಜೆರುಜಲೆಮ್, ನಜ್ರೆತ್ ಮುಂತಾದ ಪ್ರದೇಶದಲ್ಲಿ ಇತ್ತು. ರೋಮನ್ ಸಾಮ್ರಾಜ್ಯದ ಪ್ರದೇಶದ ಜನರ ಕಾನೇಶ್ಮಾರಿ ಜಾಹಿರು ಮಾಡಲಾಗಿ ಯೆಹೂದಿಯಾದ ಜೋಸೆಫ್ ತನ್ನ ಮಡದಿ ಮೇರಿ ಜೊತೆ ಗೆಲಿಲಿಯೋ ನಜ್ರೆತ್‌ಗೆ ಹೋದರು. ಒಮ್ಮೆಗೆ ಅಷ್ಟು ಜನ ಬಂದಾಗ ಛತ್ರ, ಖಾನವಳಿ, ಮನೆಗಳು, ಬಾಡಿಗೆ ಮನೆ ತುಂಬಿ ಜೋಸೆಫ್‌ಗೆ ಎಲ್ಲಿಯೂ ಸ್ಥಳ ಸಿಗದೆ ಕುರಿಗಳ ಹಟ್ಟಿಯಲ್ಲಿ ತಂಗಿದ್ದಾಗ ಯೇಸುವನ್ನು ಹೆರಬೇಕಾಯಿತು.

ಪವಾಡ ಅಲ್ಲ
ಇದೆಲ್ಲಾ ಪವಾಡ ಅಲ್ಲ. ಆದರೆ ಬೈಬಲ್ ಪ್ರಕಾರ ಆದ ಘಟನೆಗೆ ಇಂದೂ ಗೋದಲಿ ತೋರಿಸುವ ಮೂಲಕ ಗಾವುಳರ, ಕುರಿಗಳ ಉಪಕಾರ ಸ್ಮರಣೆಯನ್ನು ನೋಡಿ ಇಂತಹ ಘಟನೆ ನಡೆದಿದೆ ಎಂದು ದೃಢವಾಗುತ್ತದೆ. ಮುಂದೆ ಪೂರ್ವದಲ್ಲಿ ಜ್ಯೋತಿಷಿಗಳು ಪಶ್ಚಿಮದ ನಜ್ರೆತ್ ಊರಿಗೆ ಕೇವಲ ನಕ್ಷತ್ರಗಳ ಲೆಕ್ಕಾಚಾರ ನೋಡಿ ಪೂರ್ವ ಪ್ರದೇಶದಿಂದ ಪಶ್ಚಿಮದ ನಜ್ರೆತ್ ತಲುಪಿದರು. ಈ ಬಗ್ಗೆ ಬೈಬಲ್ ಉಲ್ಲೇಖ ಮಾಡಿದ ಘಟನೆ ಜ್ಯೋತಿಷ್ಯ ಶಾಸ್ತ್ರದ ಯೇಸುವಿನ ಜನನದ ಕೊಂಡಿಯನ್ನು ತೋರಿಸುತ್ತದೆ. ಆದರೆ ಚರ್ಚ್ ಯೇಸುವಿನ ಜನ್ಮದ ಹಬ್ಬದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದು ಇತ್ತೀಚಿನ ಕುಟುಂಬಗಳ ಶಿಥಿಲವಾದ ವ್ಯವಸ್ಥೆ ಸರಿಮಾಡಲು.
ಯುರೋಪಿಯನ್ ದೇಶಗಳಲ್ಲಿ ಗರ್ಭಿಣಿಯರು ಸರಕಾರದ ವಿಶೇಷ ಕಾಳಜಿ ಮತ್ತು ರಕ್ಷಣೆಯ ಜವಾಬ್ದಾರಿಯಲ್ಲಿ ಇರುತ್ತಾರೆ. ಮಗು ಹದಿನೆಂಟು ವರ್ಷದವರೆಗೆ ಸರಕಾರದ ಸುಪರ್ದಿಗೆ ಬರುತ್ತದೆ. ಹದಿನೆಂಟರ ನಂತರ ಹೊಸ ಕುಟುಂಬದ ಆರಂಭ ಆಗುತ್ತದೆ. ಕುಟುಂಬ ಎನ್ನುವ ಪರಿಕಲ್ಪನೆ ಇರುವುದಿಲ್ಲ. ಇದರ ಬಗ್ಗೆ ಹೆಚ್ಚಿನ ಒತ್ತು ನೀಡಲು ಜೋಸೆಫ್, ಮೇರಿ, ಜೀಸಸ್ ಪವಿತ್ರ ಕುಟುಂಬದ ಕಲ್ಪನೆಯನ್ನು ಈ ಹಬ್ಬದ ಮುಖಾಂತರ ಯುರೋಪಿನ ದೇಶಗಳಲ್ಲಿ, ಅಮೆರಿಕ ಮತ್ತು ಇತರ ಕಡೆ ಪ್ರಚಾರ ಮಾಡಲಾಯಿತು.
ಮೂರು ವರುಷ ಸಾರ್ವಜನಿಕ ಜೀವನದ ಯೇಸು ಮೂವತ್ತು ವರ್ಷಗಳ ಕಾಲ ತಂದೆ ತಾಯಿ ಜೊತೆಯಲ್ಲಿ ವಿಧೇಯರಾಗಿ ಇದ್ದರು. ಕುಟುಂಬದ ಸದಸ್ಯರು ಹೀಗಿರಬೇಕು ಎಂಬ ಪಾಠವಿದು.

ಕ್ರಿಸ್ಮಸ್ ಟ್ರೀ ಯುರೋಪಿಯನ್ ದೇಶಗಳಲ್ಲಿ ಫಾಲಿಂಗ್ ಸೀಜನ್ ಮೀರಿ ಹಸಿರಾಗಿ ಎಲೆ ಉದುರಿಸದೇ ಉಳಿಯುವ ಮರ. ಅದನ್ನು ದಟ್ಟ ಹಿಮದ ಸಮಯದಲ್ಲಿ ಶೃಂಗಾರ ಮಾಡಿ ಲೈಟ್, ನಕ್ಷತ್ರ ಮತ್ತು ವಿವಿಧ ಉಡುಗೊರೆ ನೇತು ಹಾಕಿ ಮನೆಯ ಹೊರಗೆ ಇಟ್ಟರೆ ಬಡವರು, ಮತ್ತು ಅಗತ್ಯವಿರುವ ಯಾರಾದರೂ ತಿಂಡಿ ಮತ್ತು ಉಡುಗೊರೆ ಪಡೆಯಬಹುದು.
ಸಾಂತಕ್ಲೊಸ್ : ಈ ಅಜ್ಜ ತನ್ನ ಸಕಲವನ್ನು ಬಡಬಗ್ಗರಿಗೆ ದಾನವಾಗಿ ನೀಡಿದರು. ಅದೂ ಪಾದ್ರಿಯಾಗಿ ಗುಟ್ಟಾಗಿ ನೀಡುವ ಮೂಲಕ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಪ್ರಚಲಿತ ಆಗಿದ್ದರು. ಅವರ ಗುಪ್ತ ದಾನದ ಗುಣಗಾನ ಮಾಡಿ ಇಂಗ್ಲಿಷ್ ಕವಿಗಳು ಗೀತೆಗಳನ್ನು ಬರೆದರು. ಆ ಗೀತೆಗಳು ಎಷ್ಟು ಜನಪ್ರಿಯ ಆದವು ಅಂದರೆ ಕ್ರಿಸ್ಮಸ್ ಅಂದರೆ ಸಾಂತಕ್ಲೊಸ್ ಎಂದಾಯಿತು.
ಕ್ರಿಸ್‌ಮಸ್ ಗೀತೆಗಳು ಬಹಳ ಪ್ರಚಲಿತ. ಕೇರಲ್ಸ್ ಅನ್ನತ್ತಾರೆ. ಯೇಸು ಜನನದ ಗೀತೆಗಳು ಲೋಕದ ಎಲ್ಲಾ ಭಾಷೆಯಲ್ಲಿ ಲಿಪ್ಯಂತರ, ಭಾಷಾಂತರ, ಭಾವಾಂತರ ಆಗಿವೆ. ಈಗ ಕೇರಲ್ಸ್, ಸಾಂತಕ್ಲೊಸ್, ಉಡುಗೊರೆ, ದಾನ ಸಂಗ್ರಹ, ಕೊಡುಗೆ ಕೊಡುವುದು, ಇಡೀ ಕುಟುಂಬದ ಸದಸ್ಯರು ಸೇರಿ ಸಿಹಿ ತಯಾರಿಸುವುದು, ನೆರೆಹೊರೆಯ ಎಲ್ಲಾ ಜನರಿಗೆ ಕ್ರಿಸ್‌ಮಸ್ ಮೊದಲಿನ ದಿನ ಸಿಹಿ ಹಂಚುವುದು ಹೀಗೆ ಕುಟುಂಬದ ಹಬ್ಬದ ಆಚರಣೆಯನ್ನು ಮಾಡಿತ್ತಾರೆ. ಮೊದಲೆಲ್ಲಾ ಕ್ರಿಸ್ಮಸ್ ಕಾರ್ಡು ಶುಭಾಶಯ ಪತ್ರಗಳು ವಿನಿಮಯ ಮಾಡುವುದಿತ್ತು. ಇದಕ್ಕೆಲ್ಲ ಈಗ ವಾಟ್ಸಪ್ ಬಳಸಲಾಗುತ್ತದೆ.

ಹಬ್ಬದ ಆಚರಣೆ: ನಡುರಾತ್ರೆಯ ಪೂಜೆ ಕ್ರಿಸ್‌ಮಸ್ ವಿಶೇಷ. ಹನ್ನೊಂದು ಗಂಟೆಗೆ ಕೇರಲ್ಸ್ ಗೀತೆಗಳು ಹಾಡಿ ಹನ್ನೆರಡು ಗಂಟೆಗೆ ಪವಿತ್ರ ಬಲಿಪೂಜೆ. ನಂತರ ಮನೆಗೆ ಬಂದು ಅಂದೇ ಹಬ್ಬದ ಊಟ ಇಡ್ಲಿ ಮತ್ತು ಬಾಡೂಟ ಮಾಡುವುದು ಇದೆ.
ಹಬ್ಬಗಳನ್ನು ಸಮಾಜದ ಜೋಡಣೆಗೆ ಉಪಯೋಗ ಮಾಡುವ ಹೊಸ ವಿಧಾನ ಸರ್ವ ಧರ್ಮ ಕ್ರಿಸ್‌ಮಸ್ ಆಚರಣೆ. ಒಂದು ಸಮಾಜದ ಆಚರಣೆ ಇನ್ನೊಂದು ಮತದವರು ಮಾಡಿದಾಗ ಅದರ ನೈಸರ್ಗಿಕ ಲಾಭವನ್ನು ಪಡೆಯಲು ಸಾಧ್ಯ. ಕ್ರಿಸ್‌ಮಸ್ ಹಬ್ಬವೂ ಹೀಗಾಗಲಿ.

ರೇಮಂಡ್ ಡಿಕುನ್ಹಾ ತಾಕೊಡೆ
ಪತ್ರಕರ್ತ, ಮಂಗಳೂರು