ಸರ್ಕಾರದ ಕಡೆಯಿಂದ ವರದಿಯಾದ ಕೋವಿಡ್ ಲಸಿಕೆ ಅಡ್ಡ ಪರಿಣಾಮಗಳನ್ನು ದಾಖಲಿಸಿಕೊಂಡು ಸಾರ್ವಜನಿಕವಾಗಿ ಲಭ್ಯಗೊಳಿಸುವ ಕೆಲಸ (AEFI) ನಡೆದಿತ್ತಾದರೂ, ಅದು ಕೊನೆಯದಾಗಿ 2023 ಮೇ ತಿಂಗಳ ಬಳಿಕ ಪ್ರಕರಣಗಳನ್ನು ದಾಖಲಿಸಿಕೊಂಡಂತಿಲ್ಲ; ಈ ದಾಖಲೀಕರಣವೂ ತಿಪ್ಪೆ ಸಾರಿಸಿದಂತೆ ನಡೆದಿದೆ ಹೊರತು ಅಂಕಿ-ಅಂಶಗಳ ಕ್ರೋಢೀಕರಣ ನಡೆದಿಲ್ಲ.
ದೇಶದಾದ್ಯಂತ ಸಂಭವಿಸುತ್ತಿರುವ ಎಳೆಯರ ʼಕುಸಿದು ಬಿದ್ದುʼ ಸಾವಿನ ಅಸಂಖ್ಯ ಪ್ರಕರಣಗಳು; ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಮತ್ತು ಮಿದುಳಿನ ಆಘಾತದ ಪ್ರಕರಣಗಳು; ಹೃದಯದ ಸ್ನಾಯುಗಳ ಉರಿಯೂತ, ನರವ್ಯೂಹದ ಸಮಸ್ಯೆಗಳು (ಉದಾ: ಗಿಲಾನ್ ಬಾರೆ ಸಿಂಡ್ರೋಮ್, ಟ್ರಾನ್ಸ್ವರ್ಸ್ ಮಯಲೈಟಿಸ್) – ಇವೆಲ್ಲ ಯಾವುದೇ ಸಕ್ಷಮ ಆರೋಗ್ಯ ವ್ಯವಸ್ಥೆಯನ್ನು ಬಡಿದೆಬ್ಬಿಸಬೇಕಿತ್ತು ಮತ್ತು ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಹಾಗೆ ಎಚ್ಚೆತ್ತುಕೊಳ್ಳಲು ವ್ಯವಸ್ಥೆಯ ನಿರಾಕರಣೆಯೇ ನಮ್ಮಲ್ಲಿ “ಎಲ್ಲೋ ಏನೋ ಸರಿ ಇಲ್ಲ” ಎಂಬುದನ್ನು ಖಚಿತಪಡಿಸುತ್ತಿದೆ.
ಕೋವಿಡ್ ಭಾರತವನ್ನು ಪ್ರವೇಶಿಸಿ, 2020ರ ಮಾರ್ಚ್ 12ಕ್ಕೆ ಮೊದಲ ಸಾವು ಸಂಭವಿಸಿದ ಕೇವಲ 10 ದಿನಗಳ ಒಳಗೆ, ಇಡಿಯ ದೇಶಕ್ಕೆ ಕರ್ಫ್ಯೂ ಹೇರಿದ ಹಿನ್ನೆಲೆ ಇರುವ ಸರ್ಕಾರವೊಂದು, ಈಗ ಪ್ರತೀ ಜಿಲ್ಲೆಯಲ್ಲಿ ವಾರಕ್ಕೆ ನಾಲ್ಕೈದು ಕುಸಿದುಬಿದ್ದು–ಹೃದಯಾಘಾತದ ಸಾವುಗಳು ಸಂಭವಿಸುತ್ತಿರುವಾಗ ಮೌನಧಾರಣೆ ಮಾಡಿ ಕುಳಿತಿರುವುದು ಸಂಶಯ ತಾರದಿರುವುದೇ?
ಯಾಕೆ ಈ ಸಾವು ಸಂಭವಿಸಿದೆ ಎಂದು ಜನ ಪ್ರಶ್ನಿಸುತ್ತಿರುವಾಗ “ಇಲ್ಲ, ಕೋವಿಡ್ ಲಸಿಕೆಯಿಂದ ಈ ಸಾವು ಸಂಭವಿಸುತ್ತಿಲ್ಲ. ಕೋವಿಡ್ ಲಸಿಕೆ ಲಕ್ಷಾಂತರ ಜನರ ಜೀವ ಉಳಿಸಿ ಮಹದುಪಕಾರ ಮಾಡಿದೆ” ಎಂದು ಸರ್ಕಾರ ಸಾರಿ ಹೇಳುತ್ತಿರುವುದನ್ನು ಕಂಡರೆ, “ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ” ಎಂಬ ಗಾದೆ ನೆನಪಾಗುತ್ತದೆ. ಇವೆಲ್ಲ ಕೋವಿಡ್ ಲಸಿಕೆಯ ಸಾವುಗಳು ಎಂದು ಯಾರೂ ಸರ್ಕಾರವನ್ನು ದೂಷಿಸಿಲ್ಲ. ಉತ್ಪಾದಕ ಪ್ರಾಯವರ್ಗದಲ್ಲಿ ಇಂತಹ ಅನ್ಯಾಯದ ಸಾವುಗಳಿಗೆ ಕಾರಣ ಏನು? ಎಂಬುದನ್ನು ಪತ್ತೆ ಮಾಡಿ ಮತ್ತು ಈ ರೀತಿಯ ಅಪಾಯವರ್ಗದಲ್ಲಿ ಬರುವವರನ್ನು ರಕ್ಷಿಸಲು ವೈದ್ಯಕೀಯ ವಿಜ್ಞಾನಿಗಳಿಗೆ ನಿರ್ದೇಶನ ನೀಡಿ ಎಂಬುದು ಸಾರ್ವಜನಿಕರ ಅಹವಾಲು.
ಯಾವುದೇ ಜವಾಬ್ದಾರಿಯುತ ಸರ್ಕಾರ, ಈ ಅಹವಾಲಿಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಬೇಕಿತ್ತು. ಅನಗತ್ಯ ಜೀವಹಾನಿ ತಡೆಯಬೇಕಿತ್ತು. ಸರ್ಕಾರ ಈ ಅಕಾರಣ ಸಾವುಗಳ ಮೂಲ ಹುಡುಕಲು ಉದ್ದೇಶಪೂರ್ವಕವಾಗಿಯೇ ಹಿಂಜರಿಯುತ್ತಿರುವುದು, ಸರ್ಕಾರದ ಬಗ್ಗೆ ಸಂಶಯ ಮೂಡಿಸುತ್ತಿದೆ. ಸರ್ಕಾರದ ಈ ಹಿಂಜರಿಕೆಗೆ, ಅದರ ಕೋವಿಡ್ ಕಪಾಟಿನಲ್ಲಿರುವ ಅಸ್ತಿಪಂಜರಗಳು ಹೊರಬೀಳಬಹುದೆಂಬ ಭಯ ಇರುವುದು ಕಾರಣವೆ?
ಲಸಿಕೆ ಹಿನ್ನೆಲೆ
ಕೋವಿಡ್ಗೆ ಇಂಗ್ಲೆಂಡಿನ ಆಕ್ಸ್ಫರ್ಡ್ ವಿವಿಯಲ್ಲಿ ಜೆನ್ನರ್ ಇನ್ಸ್ಟಿಟ್ಯೂಟ್ ಸಿದ್ಧಪಡಿಸಿದ ಲಸಿಕೆಯನ್ನು ಯುರೋಪಿನ ಆಸ್ಟ್ರಜೆನೆಕಾ ಕಂಪನಿ ಲೈಸನ್ಸ್ ಪಡೆದು, ಕೋವಿಶೀಲ್ಡ್ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಜೂನ್04, 2020ರಂದು CEPI, Gavi ಮತ್ತು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನಡುವೆ ಒಪ್ಪಂದ ನಡೆದು, ಭಾರತದಲ್ಲಿ ಕೋವಿಶೀಲ್ಡ್ ಉತ್ಪಾದನೆಗೆ ನಿರ್ಧಾರವಾಯಿತು. ಆ ಲಸಿಕೆಯ ಸಂಶೋಧನಾ ಪ್ರಯೋಗಗಳು ಭಾರತದಲ್ಲಿ ಆರಂಭಗೊಂಡವು. ಇದನ್ನು ಆರಂಭದ ಹಂತದಲ್ಲಿ ಭಾರತದ್ದೇ ಲಸಿಕೆ ಎಂದು ಸರ್ಕಾರದ ಕಡೆಯಿಂದ ಭರ್ಜರಿ ಪ್ರಚಾರ ನಡೆದಿತ್ತು.
ಯಾವುದೇ ವ್ಯಾಕ್ಸೀನ್ ಸಂಶೋಧನೆಗೊಂಡು ಸುರಕ್ಷಿತವೆಂದು ಭರವಸೆಯೊಂದಿಗೆ ಮಾರುಕಟ್ಟೆಗೆ ಬರಲು ಸುಮಾರು 10-15 ವರ್ಷಗಳು ಬೇಕಾಗುತ್ತವೆ. ಆದರೆ ಕೋವಿಡ್ ಲಸಿಕೆ ಸಂಶೋಧನಾ ಚಟುವಟಿಕೆಗಳು ಜಾಗತಿಕವಾಗಿ ಆರಂಭಗೊಂಡದ್ದೇ 2020 ಜನವರಿ 26ರ ಹೊತ್ತಿಗೆ. ಭಾರತದಲ್ಲಿ ಮೂರನೇ ಹಂತದ ಸಂಶೋಧನೆಗಳು ಆರಂಭಗೊಂಡದ್ದು 2020 ಆಗಸ್ಟ್ ತಿಂಗಳಿನಲ್ಲಿ. ಸೀರಂ ಇನ್ಸ್ಟಿಟ್ಯೂಟ್ ಭಾರತದಲ್ಲಿ ಈ ಲಸಿಕೆ ಸಂಶೋಧನಾ ಬಳಕೆಗೆ ಅನುಮತಿ ಕೋರಿದ್ದು 2020 ಡಿಸೆಂಬರ್ 07ರಂದು. ಆದರೆ ಕೇವಲ ಒಂದೇ ವರ್ಷದಲ್ಲಿ, ಅಂದರೆ ಜನವರಿ 16, 2021ರಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೋವಿಡ್ ಲಸಿಕೆ ನೀಡಿಕೆ ಅಭಿಯಾನ “ಲಸಿಕೋತ್ಸವ” ಆರಂಭಿಸಿಬಿಟ್ಟಿದ್ದರು! 2022 ರ ಜನವರಿ ಕೊನೆಯ ಹೊತ್ತಿಗೆ ಈ ಲಸಿಕೆಗೆ ಪೂರ್ಣಪ್ರಮಾಣದ ಮಾರುಕಟ್ಟೆ ಅನುಮತಿ ಕೂಡ ಸಿಕ್ಕಿತ್ತು.
ಲಸಿಕೆ ನೀಡಿಕೆಯ ಆರಂಭಿಕ ಹಂತದಲ್ಲಿ, ಎರಡು ಡೋಸ್ ಲಸಿಕೆಗಳನ್ನು ಪರೋಕ್ಷವಾಗಿ ಕಡ್ಡಾಯ ಮಾಡುತ್ತಾ ಬಂದ ಸರ್ಕಾರ ಮತ್ತು ವ್ಯವಸ್ಥೆ, ಅಧಿಕೄತವಾಗಿ ದಾಖಲೆಪತ್ರಗಳಲ್ಲಿ ಮಾತ್ರ ಲಸಿಕೆ ಕಡ್ಡಾಯವಲ್ಲ, ಆದರೆ ಎಲ್ಲರೂ ಹಾಕಿಸಿಕೊಳ್ಳಬೇಕೆಂದು ಶಿಫಾರಸು ಮಾಡುತ್ತೇವೆ ಎಂಬ ನಿಲುವು ತಳೆದಿತ್ತು. 2021ರ ಎಪ್ರಿಲ್ ಹೊತ್ತಿಗಾಗಲೇ ವೈರಲ್ ವೆಕ್ಟರ್ ವಾಹಕ ತಂತ್ರಜ್ಞಾನ ಬಳಸಿದ ಲಸಿಕೆಗಳಲ್ಲಿ ರಕ್ತ ಹೆಪ್ಪುಗಟ್ಟುವ ಅಡ್ಡಪರಿಣಾಮ ಗಮನಾರ್ಹ ಪ್ರಮಾಣದಲ್ಲಿದೆ ಎಂಬ ಕಾರಣವೊಡ್ಡಿ ಯುರೋಪಿನಲ್ಲಿ ಹಲವೆಡೆ ಆಸ್ಟ್ರಜೆನೆಕಾ ಮತ್ತು ಜಾನ್ಸನ್ ಅಂಡ್ ಜಾನ್ಸನ್ ಉತ್ಪಾದಿಸಿದ, ವೆಕ್ಟರ್ ತಂತ್ರಜ್ಞಾನದ ಲಸಿಕೆಗಳನ್ನು ಸ್ವಲ್ಪಕಾಲ ಸ್ಥಗಿತಗೊಳಿಸಿದ್ದ ವರದಿಗಳೂ ಇದ್ದವು.
ಲಸಿಕೆ ಕುರಿತು ಸಂಶಯಗಳು
ಭಾರತದಲ್ಲಿ 2023 ಮಾರ್ಚ್ ಹೊತ್ತಿಗೆ 220ಕೋಟಿಗೂ ಮಿಕ್ಕಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಲಸಿಕೆಗಳನ್ನು ನೀಡುವ ಆರಂಭಿಕ ಅವಧಿಯಲ್ಲಿ ಒಂದು ಜಾಗತಿಕ ತುರ್ತು ಸ್ಥಿತಿ ಇತ್ತು. ಜಗತ್ತಿನೆಲ್ಲೆಡೆ ಕೋವಿಡ್ ಲಸಿಕೆಗಳನ್ನು ನೀಡಲಾಗುತ್ತಿದ್ದುದರಿಂದ, ಭಾರತದಲ್ಲಿ ಸರ್ಕಾರದ ಲಸಿಕೆ ನೀಡುವ ಆಂದೋಲನದ ನಿರ್ಧಾರ ತಪ್ಪು ಎನ್ನಲಾಗುವುದಿಲ್ಲ. ಆದರೆ, ಹಾಗೆ ಲಸಿಕೆ ನೀಡಿದ ಬಳಿಕ, ಆ ಲಸಿಕೆಯ ಸಂಭಾವ್ಯ ಪರಿಣಾಮಗಳ ಕುರಿತು ಅಗತ್ಯ ನಿಗಾ ಇರಿಸಿಕೊಳ್ಳುವಲ್ಲಿ ಭಾರತ ಸರ್ಕಾರ ಸೋತಿದೆ.
ಜನರು ಹಠಾತ್ ಸಾವಿನ ಪ್ರಕರಣಗಳ ಬಗ್ಗೆ ಸರ್ಕಾರದ, ICMRನ ಗಮನ ಸೆಳೆಯುತ್ತಲೇ ಬಂದಾಗಲೂ ಸರ್ಕಾರ ಮೌನವಾಗಿತ್ತು. ಹಠಾತ್ ಸಾವಿನ ಪ್ರಕರಣಗಳ ಕುರಿತು ಸರ್ಕಾರವನ್ನು ಸಂಸತ್ತಿನಲ್ಲಿ ಪ್ರಶ್ನಿಸಿದಾಗಲೂ, ಸರ್ಕಾರವು ಹಠಾತ್ ಹೃದಯಸಂಬಂಧಿ ಸಾವುಗಳು (SCD) ವರದಿಯಾಗುತ್ತಿವೆಯಾದರೂ, ಆ ಸಾವಿಗೆ ಕಾರಣಗಳನ್ನು ಖಚಿತಪಡಿಸಲು ಅಗತ್ಯ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಉತ್ತರಿಸಿತ್ತು (ಲೋಕಸಭಾ ಚುಕ್ಕೆರಹಿತ ಪ್ರಶ್ನೆ 1070, ದಿನಾಂಕ: 08-12-2023)
ಕಡೆಗೆ, 2023 ಮೇ– ಆಗಸ್ಟ್ ನಡುವಿನ ಅವಧಿಯಲ್ಲಿ ICMR ಕಡೆಯಿಂದ ಲಸಿಕೆ ಪರಿಣಾಮಗಳ ಸಂಶೋಧನೆ ಅವರ ಮೂಗಿನ ನೇರಕ್ಕೇ ನಡೆದು, ಕೋವಿಡ್ ಲಸಿಕೆಗಳಿಗೂ ಹಠಾತ್ ಸಾವುಗಳಿಗೂ ಸಂಬಂಧ ಇಲ್ಲ. ಲಸಿಕೆ ನೀಡಿದ್ದರಿಂದಾಗಿ ಹಠಾತ್ ಸಾವಿನ ಪ್ರಮಾಣ ತಗ್ಗಿದೆ ಎಂಬ ನಿಲುವು ಸರ್ಕಾರದ ಪರವಾಗಿ ಬಂದಿತ್ತು. ಈ ವಾದಕ್ಕೆ ಇಂಬು ನೀಡುವಂತೆ ಮಾಧ್ಯಮಗಳು ಮತ್ತು ಕೆಲವು ವೈದ್ಯಲೋಕದ ಗುಣಾಢ್ಯರು ಹಠಾತ್ ಸಾವುಗಳಿಗೆ “ಜೀವನ ಶೈಲಿ” ಕಾರಣ ಎಂಬ ಹಳೇ ರಾಗವನ್ನೇ ಹೊಸಧ್ವನಿಯಲ್ಲಿ ಹಾಡತೊಡಗಿದ್ದರು. ಹಾಗಾಗಿ ಸಂಭವಿಸುತ್ತಿರುವ ಅಕಾರಣ ಸಾವುಗಳನ್ನು ತಡೆಗಟ್ಟಲು ಯಾವುದೇ ಪ್ರಾಮಾಣಿಕ ಪ್ರಯತ್ನ ನಡೆಯಲಿಲ್ಲ.
ಸರ್ಕಾರದ ಕಡೆಯಿಂದ ವರದಿಯಾದ ಕೋವಿಡ್ ಲಸಿಕೆ ಅಡ್ಡ ಪರಿಣಾಮಗಳನ್ನು ದಾಖಲಿಸಿಕೊಂಡು ಸಾರ್ವಜನಿಕವಾಗಿ ಲಭ್ಯಗೊಳಿಸುವ ಕೆಲಸವೊಂದು (AEFI) ನಡೆದಿತ್ತಾದರೂ, ಅದು ಕೊನೆಯದಾಗಿ 2023 ಮೇ ತಿಂಗಳ ಬಳಿಕ ಪ್ರಕರಣಗಳನ್ನು ದಾಖಲಿಸಿಕೊಂಡಂತಿಲ್ಲ; ಈ ದಾಖಲೀಕರಣವೂ ತಿಪ್ಪೆ ಸಾರಿಸಿದಂತೆ ನಡೆದಿದೆ ಹೂರತು ಅಂಕಿಅಂಶಗಳ ಕ್ರೋಢೀಕರಣ ನಡೆದಿಲ್ಲ. ಅಲ್ಲಿನ ಸಾವಿನ ವರದಿಗಳನ್ನು ಬಿಡಿಬಿಡಿಯಾಗಿ ಗಮನಿಸಿದರೆ ಇದೂ ಉದ್ದೇಶಪೂರ್ವಕವಾಗಿರಬಹುದೆಂಬ ಶಂಕೆ ಮೂಡದಿರುವುದಿಲ್ಲ.
https://main.mohfw.gov.in/Organisation/Departments-of-Health-and-Family-Welfare/immunization/aefi-reports?fbclid=IwZXh0bgNhZW0CMTAAAR22cTcj8gxkumWz7zHSVx-zzZwrZ2UVr79floyRa9xLWWNNj_H7Hs4zSdU_aem_AeYz6lGzW_vPxl98580Z6PFJdi4vTmZVm7BLYlMLp5cP19C35xW03H48C1vdMQveqAz1MktNlp7EY8n732U9XaV7
ಅಮೆರಿಕದಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳಂತೆ, ಕೋವಿಡ್ ಲಸಿಕೆಗಳಿಗೆ 2022ರ ಮೇ ಹೊತ್ತಿಗೆ 28,532 ಸಾವುಗಳು ಸಂಭವಿಸಿರುವುದು ಕಾಣಿಸಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಕೋವಿಡ್ ಮತ್ತದರ ಲಸಿಕೆಯ ದೀರ್ಘಕಾಲಿಕ ಪರಿಣಾಮಗಳ ಮೇಲೆ ಅಧ್ಯಯನಗಳು ಭರದಿಂದ ನಡೆದಿವೆ. ಪ್ರತೀವಾರ ಅಲ್ಲಿ ಅಡ್ಡಪರಿಣಾಮಗಳ ಪ್ರಮಾಣವನ್ನು ಪ್ರಕಟಿಸಲಾಗುತ್ತಿದೆಯಂತೆ. ಆದರೆ ಭಾರತದಲ್ಲಿ, ಇಂತಹ ಅಧ್ಯಯನಗಳು ಗಂಭೀರವಾಗಿ ನಡೆದಿರುವುದರ ಕುರಿತು ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಿಲ್ಲ.
ಆಗಬೇಕಾದ್ದೇನು?
ಕೋವಿಡ್ ಜಗನ್ಮಾರಿ ಈಗ ಹಿಂದೆ ಸರಿದಿದೆ. ಅದಕ್ಕೆಂದು ಸಿದ್ಧವಾಗಿದ್ದ ಲಸಿಕೆಗಳೂ ಮಾರುಕಟ್ಟೆಯಲ್ಲಿ ಹಿಂದೆ ಸರಿದಿವೆ. ಸರ್ಕಾರಕ್ಕೆ ದೇಶದ ಜನರ ಜೀವದ ಮೇಲೆ ನಿಜಕ್ಕೂ ಕಾಳಜಿ ಇದ್ದರೆ, ಅದು ಇನ್ನಷ್ಟು ಜೀವಹಾನಿ ಆಗದಂತೆ ತುರ್ತಾಗಿ ತಡೆಯಬೇಕು. ಅದಕ್ಕಾಗಿ ದೇಶದ ಆರೋಗ್ಯ ವಿಜ್ಞಾನಿಗಳಿಗೆ ಮುಕ್ತ ಅವಕಾಶಗಳನ್ನು ಒದಗಿಸಬೇಕು.
ದೇಶದಲ್ಲಿ ಸಂಭವಿಸುವ ಎಲ್ಲ ಹಠಾತ್ ಸಾವಿನ ಪ್ರಕರಣಗಳಿಗೆ ಸಂಬಂಧಿಸಿ ಒಂದು ಮಾರ್ಗದರ್ಶಿ ಸೂತ್ರ ಹೊರಡಿಸಬೇಕು ಮತ್ತು ಅದರಡಿ ಅಂತಹ ಎಲ್ಲ ಸಾವುಗಳ ವಿವರವಾದ ಅಟಾಪ್ಸಿ (ಮರಣೋತ್ತರ ತಪಾಸಣೆ) ನಡೆಸಬೇಕು.
ಹಠಾತ್ ಸಾವುಗಳಿಗೆ, ಹೃದಯಾಘಾತಗಳಿಗೆ, ನರ ಸಂಬಂಧಿ ಮತ್ತು ಇತರ ಈಗಾಗಲೇ ಗೊತ್ತಾಗಿರುವ ಅಡ್ಡಪರಿಣಾಮಗಳಿಗೆ ತುತ್ತಾಗುವ ಜನಸಮುದಾಯಗಳ ಪ್ರಾಯ, ಲಿಂಗ, ರಕ್ತದ ಗುಂಪು, ದೇಹವ್ಯವಸ್ಥೆಗೂ ಈ ಸಮಸ್ಯೆಗಳಿಗೂ ಏನಾದರೂ ಸಂಬಂಧ ಇದೆಯೇ ಎಂದು ಪರಿಶೀಲಿಸಬೇಕು ಮತ್ತು ಅಂತಹ ಯಾವುದಾದರೂ ಸಂಬಂಧ ಪತ್ತೆ ಆದರೆ, ಅಂತಹ ಜನಸಮುದಾಯಗಳನ್ನು ಅಪಾಯ ವರ್ಗದಲ್ಲಿ ಗುರುತಿಸಬೇಕು.
ಅಪಾಯ ವರ್ಗದಲ್ಲಿ ಬರುವ ಜನಸಮುದಾಯಗಳ ಜೀವ ರಕ್ಷಣೆಗೆ ಏನು ಮಾಡಬಹುದೆಂಬ ಬಗ್ಗೆ ಭರದಿಂದ ಸಂಶೋಧನೆಗಳು ನಡೆಯಬೇಕು.
ಇದನ್ನು ಓದಿದ್ದೀರಾ? ಕೋವಿಶೀಲ್ಡ್ ಅಡ್ಡ ಪರಿಣಾಮ: ನಟ ಪುನೀತ್ ರಾಜ್ಕುಮಾರ್ ಸಾವಿಗೆ ಲಸಿಕೆ ಕಾರಣವೇ?
ಹೀಗೆ ಹಠಾತ್ ಆಗಿ ಉತ್ಪಾದಕ ಪ್ರಾಯವರ್ಗದಲ್ಲಿ ಸಾವು ಸಂಭವಿಸಿದ್ದು, ಅಂತಹ ಕುಟುಂಬಗಳಲ್ಲಿ ಆರ್ಥಿಕ–ಸಾಮಾಜಿಕ ಸಂಕಷ್ಟದ ಸನ್ನಿವೇಶ ಇದ್ದರೆ, ಅದನ್ನು ಗುರುತಿಸಿ, ಅವರಿಗೆ ಸೂಕ್ತ ಜೀವನೋಪಾಯ ಕಲ್ಪಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು.
ಈಗಾಗಲೇ ಆಗಿರುವ ಇಂತಹ ಸಾವುಗಳನ್ನು ಗುರುತಿಸಿ, ಅಂಕಿಸಂಖ್ಯೆಗಳನ್ನಾದರೂ ನೇರ್ಪುಗೊಳಿಸಿಕೊಳ್ಳುವ ಕೆಲಸ ನಡೆಯಬೇಕು. ಯಾವುದೇ ಉತ್ತರದಾಯಿ ಸರ್ಕಾರ ಇಷ್ಟು ಜವಾಬ್ದಾರಿ ಹೊರಲು ಸಿದ್ಧವಾಗಿರುತ್ತದೆ.

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).