ಕೋವಿಶೀಲ್ಡ್ ಲಸಿಕೆಯಿಂದಾಗಿ ರಕ್ತ ಹೆಪ್ಪುಗಟ್ಟುತ್ತದೆ ಮತ್ತು ಪ್ಲೇಟ್ಲೆಟ್ಸ್(ರಕ್ತಕಣ) ಪ್ರಮಾಣ ದೇಹದಲ್ಲಿ ಕಡಿಮೆಯಾಗುತ್ತದೆ ಎಂದು ತಿಳಿದು ಬಂದ ಬಳಿಕ ನಟ ಪುನೀತ್ ರಾಜ್‌ಕುಮಾರ್ ಅವರ ಸಾವಿಗೂ ಈ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಕ್ಕೂ ಸಂಬಂಧವಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲೂ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.
ಕೋವಿಶೀಲ್ಡ್ ಮತ್ತು ವ್ಯಾಕ್ಸ್‌ಜೆವ್ರಿಯಾ ಎಂಬ ಬ್ರ್ಯಾಂಡ್ ಹೆಸರುಗಳ ಅಡಿಯಲ್ಲಿ ಜಾಗತಿಕವಾಗಿ ಮಾರಾಟವಾದ ಕೊರೋನಾ ಲಸಿಕೆ ಕೆಲವು ಅಪರೂಪದ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಈ ಲಸಿಕೆಯಿಂದಾಗಿ ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಅಥವಾ ಟಿಟಿಎಸ್ ಎಂಬ ರೋಗ ಉಂಟಾಗಬಹುದು ಎಂದು ಕೊನೆಗೂ ಈ ಲಸಿಕೆ ತಯಾರಿಸಿದ ಸಂಸ್ಥೆ ಅಸ್ಟ್ರಾಜೆನೆಕಾ ಯುಕೆ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದೆ.
ಈಗ ಇದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿತ್ತಿದ್ದು, ನಮ್ಮ ದೇಶದಲ್ಲಿ ಲೋಕಸಭಾ ಚುನಾವಣೆಯ ಹೊತ್ತಲ್ಲೇ ಈ ಸುದ್ದಿ ರಾಜಕೀಯ ಚರ್ಚೆಗೂ ವೇದಿಕೆಯೊದಗಿಸಿದೆ.
ಇದನ್ನು ಓದಿದ್ದೀರಾ? ಕೋವಿಶೀಲ್ಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದೆಂದು ಒಪ್ಪಿಕೊಂಡ ಅಸ್ಟ್ರಾಜೆನೆಕಾ
ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನಕ್ಕೂ ಈ ಕೋವಿಡ್ ಲಸಿಕೆಗೂ ಸಂಬಂಧ ಇದೆಯಾ ಅನ್ನೋ ಪ್ರಶ್ನೆ ಮತ್ತೆ ಎದ್ದಿದೆ. 2021, ಅಕ್ಟೋಬರ್ 29ರಂದು ನಟ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಈ ಸಂದರ್ಭದಲ್ಲೇ ಲಸಿಕೆ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಲಾಗಿತ್ತು.
ಅಪ್ಪು ಕೋವಿಡ್ ಲಸಿಕೆಯಿಂದಾಗಿಯೇ ಸಾವನ್ನಪ್ಪಿದ್ರಾ? ಇದು ಲಸಿಕೆಯ ಅಡ್ಡ ಪರಿಣಾಮ ಆಗಿರಬಹುದಾ? ಎಂದು ಹಲವಾರು ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ಆ ಎಲ್ಲ ಅನುಮಾನಗಳಿಗೆ ಉತ್ತರ ಎಂಬಂತೆ ಅಸ್ಟ್ರಾಜೆನೆಕಾ ಯುಕೆ ನ್ಯಾಯಾಲಯದಲ್ಲಿ ತಲೆ ಬಾಗಿದೆ.
Got my first dose of vaccination today. If you are 45 years & above ensure you get vaccinated. #vaccinated #LargestVaccineDrive pic.twitter.com/QsX9NnkjGS
— Puneeth Rajkumar (@PuneethRajkumar) April 7, 2021
ಪುನೀತ್, ಇತರೆ ಸೆಲೆಬ್ರೆಟಿಗಳ ಸಾವಿಗೂ ಲಸಿಕೆ ಕಾರಣವೇ?
2021ರ ಏಪ್ರಿಲ್ 7ರಂದು ಪುನೀತ್ ರಾಜ್‌ಕುಮಾರ್ ಅವರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದರು. ಇದರ ಚಿತ್ರವನ್ನು ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದ ಅವರು, “ನನಗೆ ಮೊದಲ ಕೋವಿಡ್ ಲಸಿಕೆಯನ್ನು ಪಡೆದುಕೊಂಡೆ. ನೀವು 45 ವರ್ಷಕ್ಕಿಂತ ಮೇಲಿನವರಾಗಿದ್ದರೆ ನೀವೂ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಿ” ಎಂದು ಹೇಳಿದ್ದರು.
ಈ ಟ್ವೀಟ್‌ಗೆ ಕೂಡಲೇ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು “ಸರ್, ಕೋವಿಶೀಲ್ಡ್ ಲಸಿಕೆಯನ್ನು ಪಡೆದುಕೊಳ್ಳಬೇಡಿ. ಇದು 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಒಳ್ಳೆಯದಲ್ಲ” ಎಂದು ಅಭಿಪ್ರಾಯಿಸಿದ್ದರು.
ಈಗ ಪುನೀತ್ ರಾಜ್ ಕುಮಾರ್ ಅವರ ಈ ಟ್ವೀಟ್ ಮತ್ತು ಅದಕ್ಕೆ ಬಂದ ಕಾಮೆಂಟ್ ವೈರಲ್ ಆಗುತ್ತಿದೆ. ಕೋವಿಡ್ ಲಸಿಕೆ ಪಡೆಯದಿದ್ದರೆ ನಮ್ಮ ಪವರ್ ಸ್ಟಾರ್ ಇಂದಿಗೂ ಬದುಕುಳಿಯುತ್ತಿದ್ದರು ಎಂದು ಪುನೀತ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಮಾಯ; ಕೋವಿಶೀಲ್ಡ್ ಎಫೆಕ್ಟ್ ಎಂದ ನೆಟ್ಟಿಗರು
ಪುನೀತ್ ರಾಜ್ ಕುಮಾರ್ ಅವರು 2021ರ ಏಪ್ರಿಲ್‌ನಲ್ಲಿ ಲಸಿಕೆ ಪಡೆದಿದ್ದು ಅದೇ ವರ್ಷದ ಅಕ್ಟೋಬರ್ 29ರಂದು ಸಾವನ್ನಪ್ಪಿದ್ದಾರೆ. ಬೆಳಗ್ಗೆ ವ್ಯಾಯಾಮ ಮಾಡಿದ ಬಳಿಕ ಅಪ್ಪುಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ನಿವಾಸದ ಬಳಿಯಿದ್ದ ತಮ್ಮ ಕುಟುಂಬದ ವೈದ್ಯ ರಮಣ್ ರಾವ್ ಅವರ ಕ್ಲಿನಿಕ್‌ಗೆ ಹೋಗಿದ್ದರು.
ಇಸಿಜಿ ಬಳಿಕ ಹಾರ್ಟ್ ಸ್ಟ್ರೇನ್ ಆಗಿರುವುದು ತಿಳಿದು ಬಂದಿದೆ. ಆದ್ದರಿಂದ ವೈದ್ಯರು ಪುನೀತ್ ರಾಜ್‌ಕುಮಾರ್ ಅವರನ್ನು ವಿಕ್ರಂ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಅದಾಗಲೇ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿದ್ದರು.
ಈಗ ಕೋವಿಶೀಲ್ಡ್ ಲಸಿಕೆಗೂ ಅಪ್ಪು ನಿಧನಕ್ಕೂ ಸಂಬಂಧವಿದೆ. ಈ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ಹೆಚ್ಚಿನ ಪ್ರಯೋಗ ನಡೆಯಬೇಕು ಎಂಬ ಬೇಡಿಕೆಯಿದೆ. ಇನ್ನು ಪುನೀತ್ ರಾಜ್ ಕುಮಾರ್ ಮಾತ್ರವಲ್ಲ ಕೋವಿಡ್ ಲಸಿಕೆ ಪಡೆದ ಅದೆಷ್ಟೋ ಯುವ ನಟರು ಸಾವನ್ನಪ್ಪಿದ್ದಾರೆ.
ಕೋವಿಡ್ ಲಸಿಕೆಗೂ ಎಲೆಕ್ಟೋರಲ್ ಟ್ರಸ್ಟ್ ದೇಣಿಗೆಗೂ ಲಿಂಕ್?
ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದ ಲಸಿಕೆಯನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದೆ. ಇದನ್ನು ಭಾರತ ಮತ್ತು ಇತರೆ ದೇಶಗಳಲ್ಲಿ ಜನರಿಗೆ ನೀಡಲಾಗಿದೆ. ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) 2021ರ ಜನವರಿ 3 ರಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಟಿ) ‘ಕೋವಿಶೀಲ್ಡ್’ ಮತ್ತು ಭಾರತ್ ಬಯೋಟೆಕ್‌ನ ‘ಕೋವಾಕ್ಸಿನ್’ ಲಸಿಕೆಗಳ ತುರ್ತು ಬಳಕೆಗೆ ಅವಕಾಶವನ್ನು ನೀಡಿದೆ.
ಇದನ್ನು ಓದಿದ್ದೀರಾ? ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದ್ದರೂ ಮೋದಿ ಸರ್ಕಾರ ಲಸಿಕೆಗೆ ಒಪ್ಪಿಗೆ ನೀಡಿದ್ದೇಕೆ?: ಮೋಹನ್ ದಾಸರಿ ಪ್ರಶ್ನೆ
ಇದೇ ವರ್ಷದಲ್ಲಿ ಅಂದರೆ 2021-22ರ ಅವಧಿಯಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಎಲೆಕ್ಟೋರಲ್ ಟ್ರಸ್ಟ್ ಮೂಲಕ 45 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದು, ನಾಲ್ಕನೇ ಅಧಿಕ ದೊಡ್ಡ ದೇಣಿಗೆ ನೀಡಿದ ಸಂಸ್ಥೆ ಎನಿಸಿಕೊಂಡಿದೆ. ಹಾಗೆಯೇ 2022-23ರಲ್ಲಿ 50.25 ಕೋಟಿ ರೂಪಾಯಿಯನ್ನು ದೇಣಿಗೆಯನ್ನು ನೀಡಿದೆ. ದೇಣಿಗೆ ಪಡೆದು ಕೋವಿಡ್ ಲಸಿಕೆಗೆ ಅನುಮೋದನೆ ನೀಡಿದೆ ಎಂಬ ಆರೋಪವೂ ಇದೆ. ಅಷ್ಟಕ್ಕೂ ದೇಣಿಗೆಗಾಗಿ ಕೇಂದ್ರ ಮೋದಿ ಸರ್ಕಾರ ಜನರ ಜೀವದ ಜೊತೆ ಆಟವಾಡಿರುವುದ ಎಷ್ಟು ಸರಿ? ಎಂಬಂತಹ ಪ್ರಶ್ನೆಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಜನರು ಎತ್ತುತ್ತಿದ್ದಾರೆ.
ಕೋವಿಶೀಲ್ಡ್ ಎಫೆಕ್ಟ್: ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಚಿತ್ರ ಮಾಯ!
ಕೋವಿಶೀಲ್ಡ್ ಅಡ್ಡ ಪರಿಣಾಮದ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಜನರು ತಮ್ಮ ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಪ್ರಮಾಣಪತ್ರದಲ್ಲಿ ದೊಡ್ಡದಾಗಿ ಕಾಣಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಈಗ ಮಾಯವಾಗಿರುವುದನ್ನು ಕಂಡು ಆಶ್ಚರ್ಯಗೊಂಡಿದ್ದಾರೆ.
ಆರಂಭದಲ್ಲಿ ಕೋವಿಡ್ ಲಸಿಕೆಯನ್ನು ಮೋದಿ ಸರ್ಕಾರವು ಹಣಕ್ಕಾಗಿ ಮಾರಾಟ ಮಾಡಲು ಮುಂದಾಗಿತ್ತು. ಆದರೆ ವಿಪಕ್ಷಗಳ ನಿರಂತರ ಒತ್ತಡದ ಬಳಿಕ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡಲು ಮೋದಿ ಸರ್ಕಾರ ಮುಂದಾಗಿದೆ. ಅಲ್ಲಿಯೂ ಮೋದಿ ತಮ್ಮ ಪ್ರಚಾರದ ಚಟ ಬಿಟ್ಟಿರಲಿಲ್ಲ. ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋವನ್ನು ದೊಡ್ಡದಾಗಿ ಹಾಕಲಾಗಿದೆ. ಆದರೆ ಈಗ ಕೋವಿಶೀಲ್ಡ್ ಲಸಿಕೆಯ ಅಡ್ಡಪರಿಣಾಮದ ಬಗ್ಗೆ ವರದಿ ಆಗುತ್ತಿದ್ದಂತೆ ಮೋದಿ ಚಿತ್ರವನ್ನು ಪ್ರಮಾಣಪತ್ರದಿಂದ ತೆಗೆದುಹಾಕಲಾಗಿದೆ. ಇದು ‘ಊಟಕ್ಕೆ ಮರಿಬೇಡಿ, ಕಷ್ಟಕ್ಕೆ ಕರಿಬೇಡಿ’ ಅನ್ನುವ ಹಾಗೆ ಆಗಿದೆ.
ಇದನ್ನು ಓದಿದ್ದೀರಾ? ಕೋವಿಶೀಲ್ಡ್‌ನಿಂದ ಗಂಭೀರ ಅಡ್ಡ ಪರಿಣಾಮ: ಪರಿಣಿತ ಸಂಸ್ಥೆಗಳು ಹೇಳುವುದೇನು?
ಇನ್ನು ಲೋಕಸಭೆ ಚುನಾವಣೆಯ ನೀತಿ ಸಂಹಿತೆಯ ಕಾರಣದಿಂದಾಗಿ ಮೋದಿ ಚಿತ್ರವನ್ನು ತೆಗೆಯಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ. ಆದರೆ ಪೆಟ್ರೋಲ್ ಬಂಕ್‌ನಲ್ಲಿ ಪ್ರಧಾನಿಯ ದೊಡ್ಡ ಹೋರ್ಡಿಂಗ್, ಭಾರತ್ ಅಕ್ಕಿಯ ಚೀಲದಲ್ಲಿ ಪ್ರಧಾನಿ ಫೋಟೋ ಹಾಕುವುದು ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲವೇ ಎಂಬ ಪ್ರಶ್ನೆ ಬರುತ್ತದೆ.
ಕೋವಿಶೀಲ್ಡ್ ಅಲ್ಲ, ಕೋವಾಕ್ಸಿನ್ ಪಡೆದಿದ್ದ ಮೋದಿ!
ಪ್ರಸ್ತುತ ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ಇದನ್ನು ತಯಾರಿಸಿದ ಸಂಸ್ಥೆಯೇ ಖುದ್ದು ಒಪ್ಪಿಕೊಂಡಿದೆ. ಆದರೆ ಇವೆಲ್ಲವೂ ಪ್ರಧಾನಿ ಮೋದಿ ಅವರಿಗೆ ಮೊದಲೇ ತಿಳಿದಿತ್ತೇ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಅದಕ್ಕೆಲ್ಲ ಕಾರಣ ಪ್ರಧಾನಿ ಮೋದಿ ಎರಡೂ ಡೋಸ್ ಕೋವಾಕ್ಸಿನ್ ಪಡೆದಿರುವುದು. ಹೌದು, ಪ್ರಧಾನಿ ಕೋವಾಕ್ಸಿನ್ ಡೋಸ್ ಅನ್ನು ಪಡೆದಿದ್ದಾರೆ. ಇದರಿಂದಾಗಿ ಪ್ರಧಾನಿ ಕೋವಾಕ್ಸಿನ್ ಪಡೆದು ತನ್ನ ಸುರಕ್ಷತೆ ನೋಡಿಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ
ಕೋವಿಶೀಲ್ಡ್ ಲಸಿಕೆಯ ಸುರಕ್ಷತೆಯ ಬಗ್ಗೆ ಅನುಮಾನ ಹೆಚ್ಚಾಗುತ್ತಿರುವ ನಡುವೆಯೇ ಜನರಲ್ಲಿ ಆತಂಕವೂ ಹೆಚ್ಚಾಗುತ್ತಿದೆ. ಇದೀಗ ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿದೆ. ಕೋವಿಶೀಲ್ಡ್ ಅಪಾಯದ ಬಗ್ಗೆ ಅಧ್ಯಯನ ಮಾಡಲು ಪರಿಣಿತ ವೈದ್ಯಕೀಯ ಸಮಿತಿಯನ್ನು ರಚಿಸುವಂತೆ ಕೋರಿ ವಕೀಲ ವಿಶಾಲ್ ತಿವಾರಿ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.
“ಸುಮಾರು 175 ಕೋಟಿಗೂ ಹೆಚ್ಚು ಜನರು ಕೋವಿಶೋಲ್ಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಕೋವಿಡ್ ಬಳಿಕ ಹೃದಯಾಘಾತ, ಕುಸಿದು ಸಾವನ್ನಪ್ಪುವ ಪ್ರಕರಣಗಳು ಅಧಿಕವಾಗಿದೆ. ಪ್ರಮುಖವಾಗಿ ಯುವಕರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ಈಗ ಕೋವಿಶೀಲ್ಡ್ ಅಡ್ಡ ಪರಿಣಾಮದ ಬಗ್ಗೆ ಯುಕೆ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಹೀಗಿರುವಾಗ ಈ ಲಸಿಕೆ ಪಡೆದ ಜನರು ಅಪಾಯದ ಬಗ್ಗೆ ಚಿಂತೆ ಮಾಡುವಂತಾಗಿದೆ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಪತ್ರಕರ್ತೆ, ನಾಲ್ಕು ವರ್ಷಗಳ ಅನುಭವ. ರಾಜಕೀಯ, ಬ್ಯುಜಿನೆಸ್ ಸುದ್ದಿಯಲ್ಲಿ ಆಸಕ್ತಿ, ಹಿಡಿತ.