‘ಬುದ್ಧ ನಡೆ’ಯ ಬೆಳಗು: ನಟರಾಜ ಬೂದಾಳು ಕೃತಿಗಳ ಅಂತರಾಳ

Date:

Advertisements

”ಬೂದಾಳರು ತಾವು ಪಯಣಿಸುತ್ತಾ, ಅದರೊಟ್ಟಿಗೆ ಓದುಗರನ್ನೂ ಶ್ರಮಣಧಾರೆಯ ವಿಸ್ಮಯದೊಳಗೆ ಕರೆದೊಯ್ಯುವ ಸೋಜಿಗವನ್ನು ಉಂಟು ಮಾಡುತ್ತಾರೆ…”

ಊರದ ಚೇಳಿನ ಏರದ ಬೇನೆಯಲ್ಲಿ
ಮೂರು ಲೋಕವೆಲ್ಲಾ ನರಳಿತ್ತು
ಹುಟ್ಟದ ಗಿಡುವಿನ ಬಿಟ್ಟೆಲೆಯ ತಂದು ಮುಟ್ಟದೆ
ಪೂಸಲು ಮಾಬುದು ಗುಹೇಶ್ವರ- ಅಲ್ಲಮ

ಕಾಲ್ಪನಿಕತೆಯಲ್ಲಿ ನರಳುತ್ತಿರುವ ಲೋಕವನ್ನು ಅನುಭಾವಿ ಅಲ್ಲಮ ಎಚ್ಚರಿಸಿದ್ದು ಹೀಗೆ. “ಚೇಳು ಕಚ್ಚದಿದ್ದರೂ, ವಿಷ ಏರದಿದ್ದರೂ, ಗಾಯ ಆಗದಿದ್ದರೂ ಚೇಳು ಕಡಿದಿದೆ ಎಂದು ನರಳುತ್ತಿರುವ ಈ ಜಗತ್ತಿಗೆ ಯಾವ ಮದ್ದು ಉಂಟು? ಹುಟ್ಟದೆ ಇರುವ ಗಿಡದಲ್ಲಿ ಬಿಟ್ಟಿರುವ ಎಲೆಯನ್ನು, ಮುಟ್ಟದೆ ತಂದು ಹಚ್ಚಿದರೆ ಚೇಳಿನ ಬಾಧೆ ವಾಸಿಯಾಗುತ್ತದೆ” ಎಂದ ಅಲ್ಲಮನ ನುಡಿಯು ಬುದ್ಧನ ಅಕಾಲ್ಪನಿಕತೆ ತಾತ್ವಿಕ ದೃಷ್ಟಿಕೋನಕ್ಕೆ ಸರಿ ಹೊಂದುತ್ತದೆ. ಭಾರತೀಯ ಕಾವ್ಯ ಮೀಮಾಂಸಾದಿಯೆಲ್ಲವೂ ಜಗತ್ತನ್ನು ಎರಡು ಧ್ರುವಗಳನ್ನಾಗಿಸಿ ನೋಡುತ್ತಿದ್ದಾಗ ಬುದ್ಧ ‘ಮಿಥ್ಯದೃಷ್ಟಿ’ಗಳು ಯಾವುದೆಂದು ಬಿಚ್ಚಿಟ್ಟನು. ಈ ಲೋಕವನ್ನು ಇದಿರು- ತಾನು ಎಂದು ಭಾವಿಸುವ ಮನಸ್ಸು ಸದಾ ಚಂಚಲತೆಯಲ್ಲಿ, ತೊಳಲಾಟದಲ್ಲಿ ಸಿಲುಕಿದೆ. ಏನೋ ಆಗಿದೆ ಎಂದು ಕಲ್ಪಿಸಿಕೊಂಡು ನರಳುತ್ತಿದೆ. ಈ ಜಗತ್ತಿಗೆ ಕೊನೆ ಮೊದಲೆಂಬುದಿಲ್ಲ. ಪ್ರತಿ ಕ್ಷಣವೂ ಬದಲಾಗುತ್ತಿರುವ ಲೋಕ ಪ್ರವಾಹವೆಂದೂ, ಅಲ್ಲಿ ತಾಕ್ಷಣಿಕತೆಯಲ್ಲಿ ಬದುಕಿದರೆ ಮಾತ್ರ ಅಂದರೆ ಪೂರ್ಣ ಪ್ರಜ್ಞೆಯಲ್ಲಿ ಬದುಕಿದರೆ ಮಾತ್ರ ದುಃಖ ನಿವಾರಣೆಯಾಗುತ್ತದೆ ಎಂಬುದನ್ನು ಬುದ್ಧ ಹೇಳಿದ್ದನ್ನೇ ಅಲ್ಲಮನೂ ಹೇಳಿದ, ಸರಹನೂ ಹೇಳಿದ, ಸರಹನ ಶಿಷ್ಯನಾದ ನಾಗಾರ್ಜುನ ಮತ್ತು ಆತನ ಶಿಷ್ಯನಾದ ಆರ್ಯದೇವನೂ ಹೇಳಿದ.

Advertisements

ಬೌದ್ಧಿಕ ಕಸರತ್ತಿನಿಂದ ಕೂಡಿದ, ತರ್ಕಲೋಕದಲ್ಲಿ ಮುಳುಗಿದ್ದ ಮತ್ತು ಮನುಷ್ಯನನ್ನು ಗುಲಾಮಗಿರಿಗೆ ತಳ್ಳಿದ್ದ ವೈದಿಕ ಚಿಂತನಾ ಕ್ರಮದಲ್ಲಿನ ಮಿಥ್ಯಾ ದೃಷ್ಟಿಗಳನ್ನು ಪೂರ್ಣಪ್ರಮಾಣದಲ್ಲಿ ನಿಕಷಕ್ಕೆ ಒಡ್ಡಿದ್ದು ಈ ದೇಶದ ಶ್ರಮಣ ಪರಂಪರೆ. ಶ್ರಮವೇ ಪ್ರಧಾನವಾದ, ತರ್ಕಕ್ಕಿಂತ ಮೌನವೇ ಬಿಡುಗಡೆ ಎಂದು ದಾರಿ ತೋರಿದ ಬೌದ್ಧ, ಜೈನ, ಸಿದ್ಧ, ಆರೂಢ, ಅವಧೂತ, ವಚನ, ಸೂಫಿ, ಮಂಟೇಸ್ವಾಮಿ, ಮಲೆಯ ಮಹದೇಶ್ವರ ಮೊದಲಾದವುಗಳ ತಾತ್ವಿಕತೆಯಲ್ಲಿ ಒಂದು ರೀತಿಯ ಸಾಮ್ಯತೆ ಅಥವಾ ಒಂದು ಮತ್ತೊಂದರ ಮುಂದುವರಿಕೆಯೋ, ರೂಪಾಂತರವೋ ಎಂಬ ಅರಿವು ಪ್ರವಹಿಸಿದೆ. ಇಂತಹ ಚಿಂತನಾ ಕ್ರಮವನ್ನು ಕನ್ನಡದ ಓದುಗ ವರ್ಗಕ್ಕೆ ದಾಟಿಸುವ ಕಾಯಕವನ್ನು ನಿರಂತರ ಮಾಡುತ್ತಲೇ ಬಂದಿದ್ದಾರೆ ಎಸ್.ನಟರಾಜ ಬೂದಾಳು.

ಬೂದಾಳು ಅವರು ಬರೆದಿರುವ ‘ಬುದ್ಧ ನಡೆ’ ಸರಣಿ ಕೃತಿಗಳಾದ ‘ಬೌದ್ಧ ಮಧ್ಯಮ ಮಾರ್ಗ’, ‘ಪ್ರಜ್ಞಾಪಾರಮಿತ ಹೃದಯಸೂತ್ರ’ ‘ಲಾವ್‌ ತ್ಸು- ದಾವ್‌ ದ ಜಿಂಗ್‌ ಸೂತ್ರಗಳು’, ‘ಈ ಕ್ಷಣದ ಶಕ್ತಿ- ಮನಮಗ್ನತೆ’, ‘ನಾಗಾರ್ಜುನನ ರಾಜಪರಿಕಥಾ ರತ್ನಾವಳಿಯ ಸಂಗ್ರಹಾನುವಾದ- ಬೌದ್ಧಧರ್ಮದ ರಾಜನೀತಿ’, ‘ಪ್ರತೀತ್ಯ ಸಮುತ್ಪಾದ’, ‘ಬುದ್ಧ- ಬೌದ್ಧ ತಾತ್ವಿಕತೆಯ ಸರಳವಾಚಿಕೆ’, ‘ಬುದ್ಧವಚನ- ಆರ್ಯದೇವನ ನಾನ್ನೂರು ವಚನಗಳು’ ಪ್ರಮುಖವಾದಗಳು. ಇದರೊಟ್ಟಿಗೆ ’ನಾಗಾರ್ಜುನನ ಮೂಲಮಾಧ್ಯಮಕಾ ಕಾರಿಕ’, ‘ಸರಹಪಾದ’, ‘ಪ್ರತ್ಯೇಕಬುದ್ಧ ಅಲ್ಲಮಪ್ರಭು’ – ಕೃತಿಗಳು ಬುದ್ಧ ನಡೆಯ ಭಾಗವೇ ಆಗಿವೆ.

ಬುದ್ಧನಡೆ
’ಬುದ್ಧನಡೆ’ ಸರಣಿಯ ಕೃತಿಗಳು

ಶ್ರಮಣ ಪರಂಪರೆಯ ತಾತ್ವಿಕತೆಯನ್ನು ಪರಿಚಯಿಸುವ, ಆ ಮೂಲಕ ಕನ್ನಡ ನೆಲದಲ್ಲಿ ಹುದುಗಿ ಹೋಗಿರುವ ಅಥವಾ ನಮ್ಮೊಳಗೆ ಮುಚ್ಚಿಹೋಗಿರುವ ಬೌದ್ಧಪ್ರಜ್ಞೆಯನ್ನು, ಅಲ್ಲಮಾದಿ ವಚನಕಾರರ ನಿರಸನ ಜಗತ್ತನ್ನು ಪ್ರವೇಶಿಸಲು ಅಥವಾ ಪರಿಚಯಿಸಿಕೊಳ್ಳಲು ಈ ಕೃತಿಗಳು ಕೀಲಿ ಕೈ ಆಗಿವೆ. ಈ ತಾತ್ವಿಕತೆಯ ಒಡನಾಟದಲ್ಲಿ ಪ್ರಾಮಾಣಿಕತೆ, ತಮ್ಮನ್ನು ಕಂಡುಕೊಳ್ಳುವ ನಿರಂತರ ಪ್ರಯೋಗಶೀಲತೆ ಇಲ್ಲವಾಗಿದ್ದರೆ ಬೂದಾಳರ ಕೃತಿಗಳು ಒಣ ಪಾಂಡಿತ್ಯದ ರಾಶಿಗೆ ಸೇರಿಬಿಡುತ್ತಿದ್ದವು. ಆದರೆ ಬೂದಾಳರು ತಾವು ಪಯಣಿಸುತ್ತಾ, ಅದರೊಟ್ಟಿಗೆ ಓದುಗರನ್ನೂ ಶ್ರಮಣಧಾರೆಯ ವಿಸ್ಮಯದೊಳಗೆ ಕರೆದೊಯ್ಯುವ ಸೋಜಿಗವನ್ನು ಉಂಟು ಮಾಡುತ್ತಾರೆ. ಬೌದ್ಧ ತಾತ್ವಿಕತೆಯ ಕೃತಿಗಳನ್ನು ಓದಿದವರು ಅದನ್ನು ಸ್ಪಷ್ಟವಾಗಿ ಗುರುತಿಸಬಲ್ಲರು. “‘ಭಾಷೆ ಎಂಬುದು ಪ್ರಾಣ ಘಾತುಕ” ಎಂದ ಅಲ್ಲಮ ಜ್ಞಾನವನ್ನು ನನ್ನಂಥವರ ಭಾಷಾ ಕೇಂದ್ರಿತ ಚಿಂತನೆಗಳು ಎಷ್ಟು ಮುಟ್ಟಬಲ್ಲವೋ” ಎಂಬ ಅಂಜಿಕೆಯೊಂದಿಗಿಯೇ, ಗುರು ಪರಂಪರೆಯಲ್ಲಿ ಅಲ್ಲಲ್ಲಿ ಕ್ಷಮೆಯನ್ನೂ ಕೋರುತ್ತಾ ಬೂದಾಳು ಅವರು ವಿಶ್ಲೇಷಣೆಗೆ ತೊಡಗುತ್ತಾರೆ. ವಿಸ್ಮೃತಿಗೆ ಸರಿದಿರುವ ಅರಿವನ್ನು ನಿಧಾನಕ್ಕೆ ಅನಾವರಣ ಮಾಡುತ್ತಾ, ‘ನಿನಗೆ ನೀನೆ ಬೆಳಕು’ ಎಂಬ ಬೌದ್ಧನ ಪ್ರಜ್ಞಾ ಜಗತ್ತನ್ನು ಪರಿಚಯಿಸುತ್ತಾರೆ. “ಬುದ್ಧನೆಂದರೆ ಎಚ್ಚೆತ್ತವನು. ಪ್ರತಿಯೊಬ್ಬರಲ್ಲೂ ಬುದ್ಧನಿದ್ದಾನೆ. ಗುರು ಪರಂಪರೆ ಇಲ್ಲದೆಯೂ ಲೋಕಸತ್ಯಗಳನ್ನು ಅರಿತ ಅಲ್ಲಮನಂತಹ ಪ್ರತ್ಯೇಕ ಬುದ್ಧರಿದ್ದಾರೆ” ಎಂಬುದೇ ಇವರ ಕೃತಿಗಳ ಒಟ್ಟು ತಾತ್ವಿಕತೆ.

ನಾಗಾರ್ಜುನನ ತರ್ಕ ಜಗತ್ತು

ನಾಗಾರ್ಜುನನ ‘ಮೂಲಮಾಧ್ಯಮಕಕಾರಿಕ’ ಕೃತಿಯು ಇಲ್ಲಿ ಪ್ರಸ್ತಾಪಿಸಿರುವ ಇತರ ಕೃತಿಗಳಿಗಿಂತ ಕೊಂಚ ಒರಟಾಗಿಯೂ, ಸಾಮಾನ್ಯ ಓದುಗ ವರ್ಗಕ್ಕೆ ಒಮ್ಮೆಲೇ ದಕ್ಕದೆಯೂ ಹೋಗಬಹುದು. ನಾಗಾರ್ಜುನ ರಚಿಸಿರುವ ಕಾರಿಕೆಗಳನ್ನು ಅರ್ಥ ಮಾಡಿಕೊಳ್ಳಲು ‘Snail reading’ (ಬಸವನ ಹುಳುವಿನಂತೆ ನಿಧಾನಕ್ಕೆ ನಡೆಯುವ) ಅಗತ್ಯವಿದೆ. ಇಲ್ಲಿ Rabbit reading (ಮೊಲದಂತೆ ಕುಪ್ಪಳಿಸುವ) ಓದಿನಿಂದ ಧಕ್ಕದೇ ಹೋಗಬಹುದು. ಎರಡನೇ ಬುದ್ಧ ಎಂದೇ ಖ್ಯಾತನಾಗಿರುವ, ‘ಮಹಾಯಾನ’ ಮಾರ್ಗದ ಮಹಾಪ್ರವರ್ತಕನೂ ಆದ ನಾಗಾರ್ಜುನ ಯಾಕೆ ತರ್ಕದ ಬೆನ್ನೇರಿದ? ಇದಕ್ಕೆ ಆ ಕಾಲದ ಸತ್ಯಗಳನ್ನು ತಿಳಿಯಬೇಕು. ಬುದ್ಧನ ನಂತರದಲ್ಲಿ ಬೌದ್ಧ ತಾತ್ವಿಕತೆಯನ್ನು ಹೀಯಾಳಿಸುವ ಪ್ರವೃತ್ತಿ ಹೆಚ್ಚಾಗಿತ್ತು. ವೈದಿಕ ಪರಂಪರೆಯ ತಾರ್ಕಿಕತೆ ಗೊಂದಲಗಳನ್ನು ಸೃಷ್ಟಿಸಿತ್ತು, ವೈಜ್ಞಾನಿಕತೆ ಮತ್ತು ಮೌನದ ಬಗ್ಗೆ ಮಾತನಾಡುವ ಬೌದ್ಧತ್ವವನ್ನು ತರ್ಕ, ಒಣವೇದಾಂತದಿಂದ ತುಚ್ಛೀಕರಿಸುವ ಪ್ರಯತ್ನಗಳಾಗುತ್ತಿದ್ದವು. ಗೌತಮ ಬುದ್ಧನ ನಂತರ ಸುಮಾರು 500 ವರ್ಷಗಳ ನಂತರ ಬಂದ ನಾಗಾರ್ಜುನ ಇದನ್ನು ಗಮನಿಸಿದ. ‘ತರ್ಕಕ್ಕೆ ತರ್ಕ’ ಎಂಬ ಹಾದಿಯನ್ನು ಹಿಡಿದ. ವೈದಿಕರಿಗೆ ಸವಾಲನ್ನು ಎಸೆದ. ಹೀಗಾಗಿ ನಾಗಾರ್ಜುನನ ಮಾಧ್ಯಮಕಾಕಾರಿಕ ಕೃತಿಯು ತರ್ಕವನ್ನು ಮೈದೆಳೆದಿದ್ದರೂ ಅಲ್ಲಿ ಹರಿಯುವುದು ಲೋಕದ ಕುರಿತ ನಿಜವಾದ ಅರಿವಷ್ಟೇ.

Mulamaduamika karika

ಈ ಜಗತ್ತಿಗೆ ಆದಿ, ಅಂತ್ಯವೆಂಬುದಿಲ್ಲ. ಇದಿರೂ ಬದಿರೆಂಬುದಿಲ್ಲ. ಎಲ್ಲವೂ ಒಂದನ್ನೊಂದು ಒಳಗೊಳ್ಳುತ್ತಾ, ಪರಿಣಾಮ ತತ್ವದ ಮೂಲಕ ಚಲನೆಯಷ್ಟೇ ಇದೆ. ಇಲ್ಲಿ ಬೀಜ ಮೊದಲೋ, ಸಸಿ ಮೊದಲೋ ಎಂಬುದು ಹಿಮ್ಮುಖ ಚಲನೆಯಾಗುತ್ತದೆ. ಜಗತ್ತು ಹಾಗೆ ಇಲ್ಲ ಎಂಬ ಬುದ್ಧನ ‘ಪ್ರತೀತ್ಯ ಸಮುತ್ಪಾದ’ ಲೋಕಜ್ಞಾನವನ್ನು ತರ್ಕದ ಎರಕಕ್ಕೆ ಒಯ್ದು ವೈದಿಕ ಜಗತ್ತನ್ನು ಬೆಚ್ಚಿಸಿದ. ನಾಗಾರ್ಜುನನ ಮೂಲ, ಕರ್ನಾಟಕ ಎಂಬುದು ಈ ನಾಡಿಗೆ ಹೆಮ್ಮೆಯ ಸಂಗತಿ. ಬುದ್ಧನ ‘ಪ್ರತೀತ್ಯ ಸಮುತ್ಪಾದ’ ತತ್ವವನ್ನು ಸರಳವಾಗಿ, ವಿವಿಧ ತೆರನಾಗಿ ವಿವರಿಸುವ ಪ್ರಯತ್ನವನ್ನು ಬೂದಾಳು ತಮ್ಮ ಬುದ್ಧ ನಡೆ ಸರಣಿಯಲ್ಲಿ ಮಾಡಿದ್ದಾರೆ. ಜೊತೆಗೆ ‘ಪ್ರತೀತ್ಯ ಸಮುತ್ಪಾದ’ ಎಂಬ ಪುಟ್ಟ ಕೃತಿಯನ್ನೂ ತಂದು ‘ಮಹದುಪಕಾರ’ವನ್ನು ಬೂದಾಳು ಮಾಡಿದ್ದಾರೆ. ಇಲ್ಲಿನ ಎಂಟು ಕೃತಿಗಳಲ್ಲೂ ಈ ತತ್ವ ಚರ್ಚೆಯಾಗುತ್ತಲೇ ಹೋಗುತ್ತದೆ.

“ಲೋಕದಲ್ಲಿ ಜರುಗುತ್ತಿರುವ ಎಲ್ಲಾ ಚಟುವಟಿಕೆಗಳೂ ಕಾರಣ, ಸನ್ನಿವೇಶ ಮತ್ತು ಪರಿಣಾಮಗಳ ಪರಸ್ಪರ ಸಂಬಂಧದಲ್ಲಿ ಮಾತ್ರ ಉಂಟಾಗುತ್ತಿದೆ. ಕಾರಣ ಕಾರಣವಾಗುವುದು ಸನ್ನಿವೇಶ ಮತ್ತು ಪರಿಣಾಮಗಳುಂಟಾದರೆ ಮಾತ್ರ. ಹಾಗೆಯೇ ಉಳಿದವುಗಳಿಗೆ ಅಸ್ತಿತ್ವ ಉಂಟಾಗುವುದು ಪರಸ್ಪರ ಸಂಬಂಧದಲ್ಲಿಯೇ ವಿನಾ ಯಾವುದಕ್ಕೂ ಸ್ವತಂತ್ರವಾದ ಶಾಶ್ವತವಾದ ಅಸ್ತಿತ್ವವೆಂಬುದಿಲ್ಲ. ಇದನ್ನೇ ಪ್ರತೀತ್ಯ ಸಮುತ್ಪಾದ” ಎಂದು ಬುದ್ಧ ಕರೆದ. ಅದನ್ನು ಎಂಟು ಅಂಶಗಳ ಮೂಲಕ ವಿವರಿಸಿದ.

ಬುದ್ಧನ ‘ಪ್ರತೀತ್ಯ ಸಮುತ್ಪಾದ’ ಮತ್ತು ಎಡಪಂಥ

ಬುದ್ಧನ ‘ಪ್ರತೀತ್ಯ’ ಸಮುತ್ಪಾದವು ಎಂಟು ಅಂಶಗಳ ಕುರಿತು ಬೆಳಕು ಚೆಲ್ಲುತ್ತದೆ. ಇಂದಿನ ವೈಜ್ಞಾನಿಕ ಜಗತ್ತು ಈ ಅಂಶಗಳನ್ನೇ ಒತ್ತಿ ಹೇಳುತ್ತಿದೆ.

ಅನಿರೋಧ: ಈ ಲೋಕದ ಯಾವುದಕ್ಕೂ ಶಾಶ್ವತ ಅಂತ್ಯವೆಂಬುದಿಲ್ಲ. ಯಾವುದೂ ಶಾಶ್ವತವಾಗಿ ಸತ್ತು ಹೋಗುವುದಿಲ್ಲ. ಎಲ್ಲಕ್ಕೂ ರೂಪಾಂತರವಿದೆಯೇ ಹೊರತು ಕೊನೆಯೆಂಬುದಿಲ್ಲ.
ಅನುತ್ಪಾದ: ಯಾವುದೂ ಹೊಸದಾಗಿ ಉಂಟಾಗುವುದಿಲ್ಲ. ತನ್ನಷ್ಟಕ್ಕೆ ತಾನೇ ಯಾವುದೂ ಸೃಷ್ಟಿಸಲ್ಪಡುವುದಿಲ್ಲ. ಬೇರೊಂದರಿಂದಲೂ ಸೃಷ್ಟಿಸಲ್ಪಡುವುದಿಲ್ಲ. ಕಾರಣ ಇಲ್ಲದೆ ಯಾವುದೂ ಉಂಟಾಗುವುದಿಲ್ಲ.
ಅನುಚ್ಛೇದ: ಯಾವುದನ್ನೂ ನಾಶಗೊಳಿಸಲು ಸಾಧ್ಯವಿಲ್ಲ.
ಅಶಾಶ್ವತ: ಯಾವುದೂ ಒಂದು ಕ್ಷಣವೂ ಸ್ಥಗಿತ ಸ್ಥಿತಿಯಲ್ಲಿ ಇರುವುದಿಲ್ಲ. ನಿರಂತರವಾಗಿ ಬದಲಾಗುತ್ತಲೇ ಇರುತ್ತವೆ.
ಅನೇಕಾರ್ಥ: ಯಾವುದನ್ನೂ ಕಡಿಮೆಗೊಳಿಸಿ ಒಂದನ್ನಾಗಿಸಲು ಸಾಧ್ಯವಿಲ್ಲ.
ಅನಾನಾರ್ಥ: ಯಾವುದನ್ನೂ ಭಿನ್ನಗೊಳಿಸಿ ಅನೇಕವನ್ನಾಗಿಸಲು ಸಾಧ್ಯವಿಲ್ಲ.
ಅನಾಗಮ: ಹೊಸದೊಂದರ ಆಗಮನ ಸಾಧ್ಯವಿಲ್ಲ.
ಅನಿರ್ಗಮ: ಈ ಲೋಕದಿಂದ ಯಾವುದೂ ನಿರ್ಗಮಿಸದು.

ಲೋಕಪ್ರವಾಹವು ‘ನಿರಂತರ ಉಂಟಾಗುತ್ತ’ಲೇ ಇರುವ ಪ್ರಕ್ರಿಯೆ. ಅದುವೇ ‘ಪ್ರತೀತ್ಯ ಸಮುತ್ಪಾದ’. ಯಾವುದೂ ಸ್ಥಗಿತ ಸ್ಥಿತಿಯಲ್ಲಿ ಇಲ್ಲ. ಸರಿಯಾದ ಅರಿವು ಇದುವೇ. ಪ್ರತೀತ್ಯ ಸಮುತ್ಪಾದವನ್ನು ಅರಿತವನು ನಿರ್ವಾಣಕ್ಕೆ ಸಂದುತ್ತಾನೆ. ಬುದ್ಧ ತಾತ್ವಿಕತೆ ಯಾವುದನ್ನು ನಿರ್ವಾಣ, ಝೆನ್‌, ತಾವೋ ಎಂದಿತೋ ಅದನ್ನೇ ವಚನಾದಿ ಶರಣರು, ಶೂನ್ಯ, ಬಯಲು ಎಂದರು.

ಶ್ರಮಣ ಪರಂಪರೆಯು ವಿವಿಧ ತೆರನಾಗಿ ಹರಿಯುತ್ತಾ ಬಂದಿದೆ. ರೂಪಾಂತರಗೊಂಡಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹಲವು ಮಾರ್ಗಗಳಲ್ಲಿ ನುಡಿದಿದೆ. ಇಂದಿನ ರಾಜಕೀಯ ಪರಿಭಾಷೆಗಳಿಗೆ ಕೊಂಚ ಅದನ್ನು ಹಿಗ್ಗಿಸಿ ನೋಡೋಣ. ಇಂದು ಯಾವ ಹೆಸರಲ್ಲಿ ಬೌದ್ಧತತ್ವ ರಾಜಕೀಯವಾಗಿ ಪ್ರವಹಿಸುತ್ತಿದೆ ಎಂಬುದನ್ನು ಮುಂದೆ ಚರ್ಚಿಸಲಾಗಿದೆ.

6 3

ನಮ್ಮ ರಾಜಕೀಯ ವ್ಯಾಖ್ಯಾನಗಳು ಅತ್ಯಂತ ಕ್ಲೀಷೆಯಿಂದ ಕೂಡಿವೆ. ಅದರಲ್ಲಿ ‘ಎಡ- ಮಧ್ಯ- ಬಲ’ ಎಂಬ ಕ್ಲೀಷೆಯೂ ಒಂದು. ಜನಪರವಾದದ್ದನ್ನು ‘ಎಡ’ವೆಂದೂ, ಪ್ರತಿಗಾಮಿಯಾದದ್ದನ್ನು ‘ಬಲ’ ಎಂದೂ, ಎರಡರಲ್ಲೂ ಇರುವ ಒಳಿತನ್ನು ಮುಕ್ತವಾಗಿ ಸ್ವೀಕರಿಸುವುದು ‘ಮಧ್ಯಮ’ವೆಂದೂ ಅಪವ್ಯಾಖ್ಯಾನ ಮಾಡಲಾಗಿದೆ. ‘ಮಧ್ಯಮ ಪಂಥೀಯ’ರನ್ನು ‘ಬಲ’ಕ್ಕೆ ವಾಲಿದವರು ಎಂಬಂತೆ ಚಿತ್ರಿಸುವುದೂ ಉಂಟು. ಅದು ಸಹಜವೂ ಆಗಿದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, “ಬುದ್ಧನ ನಡೆಯೂ ಮಧ್ಯಮವಾಗಿತ್ತು, ಹೀಗಾಗಿ ಮಧ್ಯಮವೆಂಬುದು ಮುಖ್ಯ” ಎಂಬಲ್ಲಿಯವರೆಗೂ ಕ್ಲೀಷ್ಮಾತ್ಮಕ ವಿಶ್ಲೇಷಣೆಗಳು ಹೋಗುತ್ತವೆ. ಆದರೆ ನಿಜದರ್ಥದಲ್ಲಿ ಬುದ್ಧನಿಗೂ ಈ ರಾಜಕೀಯ ಮೀಮಾಂಸಕರು ಮಾಡುವ ‘ಮಧ್ಯಮ’ ಎಂಬ ತರ್ಕಕ್ಕೂ ಯಾವುದೇ ಸಂಬಂಧವಿಲ್ಲ. ಯಾವುದನ್ನು ಜನಪರ ಎಂದು ಭಾವಿಸುತ್ತೇವೆಯೋ, ಯಾವುದು ವೈಜ್ಞಾನಿಕವಾದದ್ದೋ, ಯಾವುದು ಪ್ರಜಾಸತ್ತಾತ್ಮಕವಾದದ್ದೋ ಅದು ಬುದ್ಧನ ಮಾರ್ಗವಾಗಿರುತ್ತದೆ. ಹೀಗಾಗಿ ‘ಎಡ’ ಎಂಬ ಹೆಸರಿಟ್ಟುಕೊಂಡು ವೈಚಾರಿಕ, ವೈಜ್ಞಾನಿಕ ತತ್ವಚಿಂತನೆಯನ್ನು ನಡೆಸಲಾಗುತ್ತದೆಯೋ ಅದುವೇ ನಿಜವಾದ ‘ಮಧ್ಯಮಮಾರ್ಗ’. ರಾಜಕೀಯ ಪರಿಭಾಷೆಯಲ್ಲಿ ‘ಮಧ್ಯಮ’ವೆಂಬುದು ನಿಜವಾದ ‘ಎಡಪಂಥ’. ಬುದ್ಧನ ತತ್ವ ಚಿಂತನೆ, ಬೆಳಗಿನ ಹಾದಿ, ಇಂದಿನ ‘ಎಡ’ ಪರಿಕಲ್ಪನೆಗೆ ಹೋಲುತ್ತದೆಯೇ ಹೊರತು, ‘ಬಲ’ಕ್ಕೆ ಸಂಧುವುದಿಲ್ಲ.

ಬುದ್ಧನ ‘ಪ್ರತೀತ್ಯ ಸಮುತ್ಪಾದ’ವು- ದ್ವೈತ, ಅದ್ವೈತಗಳನ್ನು ತಿರಸ್ಕರಿಸುತ್ತದೆ. ವಚನಾದಿ ಶರಣರು ಯಾವುದನ್ನು ಜಂಗಮ ಎಂದರೋ, ಬಯಲು ಎಂದರೋ ಅದುವೇ ‘ಪ್ರತೀತ್ಯ ಸಮುತ್ಪಾದ’. ಚಲನಾ ಮೀಮಾಂಸೆಯನ್ನು ಪ್ರತಿಪಾದಿಸಿದ್ದು ‘ಪ್ರತೀತ್ಯ ಸಮುತ್ಪಾದ’. ಈ ಜಗತ್ತು ಈಗಾಗಲೇ ಆಗಿ ಹೋಗಿರುವ ಸಂಗತಿಯಲ್ಲ. ಅದಕ್ಕೆ ಕೊನೆ ಮೊದಲೆಂಬುದು ಇಲ್ಲ. ಅದು ಆಗುತ್ತಲೇ ಇರುವ ನಿರಂತರ ಪ್ರಕ್ರಿಯೆ. ಜಂಗಮ ಸ್ವರೂಪಿಯಾದದ್ದು. ಅದು ‘ಸ್ಥಾವರ’ ರೂಪಿಯಲ್ಲ. ದ್ವೈತ, ಅದ್ವೈತಕ್ಕೆ ಅಂಟಿ ಕೂತ ಬಲ ಪಂಥೀಯತೆ ಅಥವಾ ವೈದಿಕ ಪರಂಪರೆ ಸ್ಥಾವರ ರೂಪಿಯಾಗಿ ಕಾಣುತ್ತದೆ. ಸಮಾಜದೊಳಗೆ ಜಾತೀಯತೆ, ಮತೀಯತೆ, ಅಸ್ಪೃಶ್ಯತೆಯನ್ನು ಸೃಷ್ಟಿಸಿ ಯಥಾಸ್ಥಿತಿಯನ್ನು ಬಯಸುತ್ತಾ ಮನುಷ್ಯನನ್ನು ಸಂಕಷ್ಟಕ್ಕೆ ತಳ್ಳಿದೆ. ಈ ತಾರತಮ್ಯವನ್ನು ತಿರಸ್ಕರಿಸಿ, ಕರುಣಾ ಮೈತ್ರಿಯನ್ನು ಪ್ರತಿಪಾದಿಸಿದ ‘ಪ್ರತೀತ್ಯ ಸಮುತ್ಪಾದ’ ನಿಜದ ವೈಜ್ಞಾನಿಕ ಚಿಂತನೆ. ಲೋಕಪ್ರವಾಹವು ನಿರಂತರವಾಗಿದ್ದು, ಪ್ರತ್ಯಯಗಳ ಪರಿಣಾಮ ತತ್ವದಿಂದ ಕೂಡಿದ್ದು. ಜಡ ಜಗತ್ತು ಮಾತ್ರ ಆತ್ಮ, ಆಕಾರಗಳ ಬೆನ್ನು ಹತ್ತಿ ನರಳುತ್ತದೆ. ಮೌಢ್ಯಕ್ಕೆ ಬಲಿಯಾದವರು ಲೋಕ ಪ್ರವಾಹವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ದುಃಖದೊಳಗೆ ಮುಳುಗುತ್ತಾರೆ ಎಂಬುದನ್ನು ಬುದ್ಧ ತಿಳಿಸಿಕೊಟ್ಟನು. ನಾಗಾರ್ಜುನನ ‘ರಾಜಪರಿಕಥಾ ರತ್ನಾವಳಿ’ಯನ್ನು ಇದರ ಮುಂದುವರಿಕೆಯಾಗಿಯೂ ನೋಡಬಹುದು. ಇದು ಕೇವಲ ರಾಜನಿಗೆ ಮಾರ್ಗಸೂಚಿಯ ಕೃತಿಯಲ್ಲ, ರಾಜ ಕೈಗೊಳ್ಳಬೇಕಾದ ಕರುಣಾ ಮೈತ್ರಿಯ ಮಾರ್ಗಕ್ಕೆ ಬೇಕಾದ ‘ಪ್ರತೀತ್ಯ ಸಮುತ್ಪಾದ’ದ ಅರಿವನ್ನೂ ನಾಗಾರ್ಜುನ ಕೃತಿಯೊಳಗೆ ತರುತ್ತಾನೆ. ಈ ಪುಟ್ಟ ಪುಸ್ತಕಕ್ಕೆ ಮುನ್ನಡಿ ಬರೆದಿರುವ ಪ್ರೊ.ರವಿವರ್ಮ ಕುಮಾರ್‌, ’ನಾಗಾರ್ಜುನನ ಕಾರಿಕೆಗಳು ಮತ್ತು ಭಾರತದ ಸಂವಿಧಾನದ ವಿಧಿಗಳಲ್ಲಿನ ಸಾಮ್ಯತೆ’ಯನ್ನು ಗುರುತಿಸಿದ್ದಾರೆ.

ಈ ಲೋಕಸತ್ಯವನ್ನು ಅರಿತರೆ ಮಾತ್ರ ಹರಿಯುತ್ತಿರುವ ಲೋಕವನ್ನು ಸರಿಯಾಗಿ ಅರಿತು, ಅದರೊಂದಿಗೆ ಪ್ರತಿಕ್ಷಣವೂ ಬದುಕಿದಾಗ ಮಾತ್ರ ಪ್ರಜ್ಞಾಮೈತ್ರಿ ನಮ್ಮದಾಗುತ್ತದೆ ಎಂಬುದನ್ನು ಬುದ್ಧಗುರು ಬೋಧಿಸಿದ. ಇದಕ್ಕೆ ತರ್ಕದ ರೂಪವನ್ನು ಕೊಟ್ಟು ಮಂಡಿಸಿದ್ದು ‘ನಾಗಾರ್ಜುನ’. ಈ ಪ್ರಜ್ಞೆಯನ್ನು ಎಚ್ಚರಿಸುವ ಕೆಲಸವನ್ನು ಆರ್ಯದೇವನೂ ಮುಂದುವರಿಸಿದ್ದಾನೆ (ನೋಡಿರಿ: ಆರ್ಯದೇವನ ನಾನ್ನೂರು ವಚನಗಳು).

ಸರಹಪಾದನ ಸಹಜಯಾನ

ಸಹಜಯಾನದ ಬೌದ್ಧ ಸಿದ್ಧ, ನಾಗಾರ್ಜುನನ ಗುರು ‘ಸರಹಪಾದ’. ಸಹಜವಾಗಿ ಬದುಕುವ ತತ್ವವನ್ನು ಆತ ತಿಳಿಸಿಕೊಟ್ಟನು. ‘ಬುದ್ಧನ ಮಾರ್ಗ ಯಾವುದೆಂದು?’ ಹುಡುಕುತ್ತಾ ಹೊರಟ ಸರಹನಿಗೆ ಶಬರ ಕೇರಿಯಲ್ಲಿ ಕಿರಿ ವಯಸ್ಸಿನ ಮೇದಾರ ಕನ್ಯೆಯೊಬ್ಬಳು ಎದಿರಾಗುತ್ತಾಳೆ. ಆಕೆಯಿಂದ ಬುದ್ಧತತ್ವವನ್ನು ಕಂಡುಕೊಂಡನು. ಬಿಲ್ಲು ತಯಾರಿಸುತ್ತಿರುವ ಅವಳ ಮನಮಗ್ನತೆಯನ್ನು ನೋಡಿ ಬೆರಗಾಗಿ ನಿಂತನು. ಸರಹನನ್ನು ಆಕೆ ಗಮನಿಸಲೇ ಇಲ್ಲ. ಬಿಲ್ಲನ್ನು ಸಿದ್ಧ ಮಾಡಿ, ಸರಹನತ್ತ ತಿರುಗಿಸಿದಾಗಲೇ ಆತ ಎದುರಿಗಿರುವುದು ತಿಳಿದದ್ದು. (ಈ ಸನ್ನಿವೇಶವನ್ನು ಬೌದ್ಧತತ್ವದ ‘ಪ್ರತೀತ್ಯ ಸಮುತ್ಪಾದ’ದ ವಿವರಣೆಯ ಭಾಗವಾಗಿಯೇ ಬೌದ್ಧತಾತ್ವಿಕರು ನೋಡುತ್ತಾರೆ. ವಿವರಣೆಗೆ- ‘ಸರಹಪಾದ’, ‘ಪ್ರತ್ಯೇಕಬುದ್ಧ ಅಲ್ಲಮಪ್ರಭು’ ಕೃತಿಗಳನ್ನು ನೋಡಬಹುದು.)

ಶಬರ ಕನ್ಯೆ ಕೇಳುತ್ತಾಳೆ: ‘ಏನು ಬೇಕು?’.
ಸರಹ: ‘ಬುದ್ಧನ ಮಾರ್ಗ ಯಾವುದೆಂದು ತಿಳಿಯಬೇಕು.’
ಶಬರ ಕನ್ಯೆ: ‘ಆಡುವ ಮಾತು, ಓದುವ ಪುಸ್ತಕ ಬಿಟ್ಟು, ಮಾಡುವ ಕೆಲಸ, ಉಂಟಾಗುವ ಪರಿಣಾಮವನ್ನು ಗಮನಿಸು.’

sahahapada

ಸರಹನಿಗೆ ಜ್ಞಾನೋದಯವಾಯಿತು. ಆಕೆಯನ್ನು ಗುರುವಾಗಿಸಿಕೊಂಡ, ಸಂಗಾತಿಯಾಗಿ ಜೊತೆ ನಡೆದ. ಸರಹನ ಕುರಿತು ಒಂದು ರೂಪಕ ಚಾಲ್ತಿಯಲ್ಲಿದೆ. ಶಬರಕನ್ಯೆ ಮತ್ತು ಸರಹ ಕಾಡಿಗೆ ಹೋಗುತ್ತಾರೆ. ಕಾಡು ಮೂಲಂಗಿಯ ಆಯ್ದು ತಂದು ಹೆಂಡತಿ, ಸಾರು ಮಾಡಲು ಕೂರುತ್ತಾಳೆ. ಸಾರಿನ ಗಮನ ಆತನ ಮನ ಸೆಳೆಯುತ್ತದೆ. “ನಾನು ತಪ್ಪಸ್ಸು ಮಾಡಿ ಬರುತ್ತೇನೆ. ಅಷ್ಟರಲ್ಲಿ ಮೂಲಂಗಿ ಸಾರು ಮಾಡಿರು” ಎಂದು ಹೇಳುತ್ತಾನೆ. ಧ್ಯಾನಕ್ಕೆ ಕುಳಿತವನು ಹನ್ನೆರಡು ವರ್ಷವಾದರೂ ಎದ್ದೇಳಲಿಲ್ಲ. ಒಂದು ಬೇಸಿಗೆಯ ದಿನ ಎಚ್ಚರಗೊಂಡ ಸರಹ, “ಸಂಗಾತಿ ಮೂಲಂಗಿ ಸಾರು ತೆಗೆದುಕೊಂಡು ಬಾ” ಎನ್ನುತ್ತಾನೆ. ಅದಕ್ಕೆ ಆತನ ಹೆಂಡತಿ, “ನೀನು ಕಡಿಮೆ ಕಾಲ ತಪಸ್ಸು ಕುಳಿತ್ತಿರಲಿಲ್ಲ. ಈಗ ಮೂಲಂಗಿ ಸಾರು ಎಲ್ಲಿಂದ ತರಲಿ? ಅಷ್ಟಕ್ಕೂ ಇಷ್ಟು ವರ್ಷ ತಪಸ್ಸು ಮಾಡಿದರೂ ಮೂಲಂಗಿ ಮನೋವೇದನೆಯನ್ನು ನೀನು ನೀಗಿಕೊಳ್ಳಲು ಸಾಧ್ಯವಾಗಿಲ್ಲವಲ್ಲ, ನಿನ್ನದೆಂಥ ತಪಸ್ಸು” ಎಂದು ಛೇಡಿಸುತ್ತಾನೆ. ಸರಹ ಜರ್‍ರನೆ ಇಳಿದು ಹೋಗುತ್ತಾನೆ. ಮನೋಲಯ ಬೆಳಗಿನತ್ತ ಹೊರಡುತ್ತಾನೆ. ಲೌಕಿಕ ಜಗತ್ತಿನಲ್ಲಿಯೇ, ಸಂಸಾರದ ಸುಖದಲ್ಲಿಯೇ ‘ಬಯಲು’ ಜ್ಞಾನವನ್ನು ಹೊಮ್ಮಿಸಿದ ಸಿದ್ಧ ಸರಹಪಾದ. ಆತನ ನುಡಿಗಳನ್ನು ಕನ್ನಡಕ್ಕೆ ತಂದ ಕಾರಣ, ‘ಸರಹಪಾದ’ ಕೃತಿಗೆ ಕೇಂದ್ರ ಸಾಹಿತ್ಯ ಅನುವಾದ ಪ್ರಶಸ್ತಿಯೂ ಬೂದಾಳರಿಗೆ ದೊರಕಿತು.

ಮನಮಗ್ನತೆ

ಬುದ್ಧನಡೆಯ ಸರಣಿಯ ಬೂದಾಳು ಅವರ ಕೃತಿಗಳನ್ನು ಅಧ್ಯಯನದ ದೃಷ್ಟಿಯಿಂದ ‘ಓದು ಪಠ್ಯ’, ‘ಕ್ರಿಯಾ ಪಠ್ಯ’ ಎಂದು ವಿಂಗಡನೆ ಮಾಡಿಕೊಳ್ಳಬಹುದು. ಎಲ್ಲಾ ‘ಓದು ಪಠ್ಯ’ಗಳು ಕೇವಲ ಓದುಗರ ಆಸಕ್ತಿಯನ್ನು ಕೆರಳಿಸುವುದಷ್ಟೇ ಅಲ್ಲದೆ ಅವು ಬದುಕಿನಲ್ಲಿ ಅನ್ವಯಿಸಿಕೊಳ್ಳಬೇಕಾದ ‘ಕ್ರಿಯಾ ಪಠ್ಯ’ಗಳು ಹೌದು. ಆದರೆ ‘ಮನಮಗ್ನತೆ’ ಕೃತಿಯನ್ನು ಸಂಪೂರ್ಣವಾಗಿ ‘ಕ್ರಿಯಾ ಪಠ್ಯ’ವಾಗಿಯೇ ರೂಪಿಸಲಾಗಿದೆ.

4 6

ಮನಸ್ಸಿನಲ್ಲಿ ಸಂಚಯಗೊಂಡ ಎಲ್ಲ ನೆನಪುಗಳು, ನೋವುಗಳು, ಅನುಭವಗಳು ನಮ್ಮ ನಡಿಗೆಗೆ ತೊಡಕಾಗಿರುತ್ತವೆ. ಹಿಮ್ಮುಖ ಚಲನೆಗೆ ಕಾರಣವಾಗಿರುತ್ತವೆ. ಮನಸ್ಸನ್ನು ಅರ್ಥ ಮಾಡಿಕೊಂಡರೆ ಮಾತ್ರ ದುಃಖದ ಬಿಡುಗಡೆ ಸಾಧ್ಯ. ಅದನ್ನು ಹೇಗೆ ಪರಿಹರಿಸಿಕೊಳ್ಳುವುದು? ಎಂಬ ಪ್ರಶ್ನೆಗೆ ಉತ್ತರವನ್ನು ನೀಡುವ ಪ್ರಯತ್ನವನ್ನು ‘ಮನಮಗ್ನತೆ’ ಮಾಡಿದೆ. “ಮನೋಕೋಶದ ಮೋಡವನ್ನು ಸರಿಸಿ ನಮ್ಮ ಅಂತಃಪ್ರಜ್ಞೆಯ ಮೂಲಕ ಸರಿಯಾದ ತೀರ್ಮಾನ ತೆಗೆದುಕೊಳ್ಳುವುದನ್ನು ಸಮ್ಯಕ್ ಸತಿ ಅಥವಾ ಸರಿಯಾದ ಗ್ರಹಿಕೆ” ಎಂದು ಕರೆಯಲಾಗುತ್ತದೆ. ಇರುವುದನ್ನು ಇರುವಂತೆ ಮನಸ್ಸು ಸ್ವೀಕರಿಸುವುದಿಲ್ಲ, ಪ್ರಜ್ಞೆ ಮಾತ್ರ ಸ್ವೀಕರಿಸಬಲ್ಲದು. “ಸ್ವೀಕಾರವೇ ನೆಮ್ಮದಿ‌, ನಿರಾಕರಣವೇ ದುಃಖ. ಸ್ವೀಕಾರವೇ ಪ್ರಜ್ಞೆ, ನಿರಾಕರಣವೇ ಮನಸ್ಸು, ಸ್ವೀಕಾರವೇ ಚಲನೆ, ನಿರಾಕರಣವೇ ಸ್ಥಾವರ, ಸ್ವೀಕಾರವೇ ಮೌನ, ನಿರಾಕರಣವೇ ಗದ್ದಲ” ಎಂಬ ಬೌದ್ಧತ್ವವನ್ನು ಈ ಕೃತಿ ವಿವರಿಸುತ್ತಾ ಹೋಗುತ್ತದೆ.  ಮನಸ್ಸು ಹೇಗೆಲ್ಲಾ ಚಿಂತಿಸುತ್ತಿದೆ, ಎಲ್ಲೆಲ್ಲಾ ಓಡುತ್ತಿದೆ ಎಂಬುದನ್ನು ಸುಮ್ಮನೆ ಕೂತು ‘ಗಮನಿಸು’, ಆ ಗಮನಿಸುವಿಕೆ ಹೆಚ್ಚಾದಷ್ಟು ಪ್ರಜ್ಞೆಯನ್ನು ಸುತ್ತಿಕೊಂಡಿರುವ ವಿಸ್ಮೃತಿ ಸಡಿಲವಾಗುತ್ತದೆ. ನಮ್ಮ ಪ್ರತಿಕ್ರಿಯೆಗಳು ಮನೋಕೇಂದ್ರಿತವಾಗದೆ, ಪ್ರಜ್ಞಾಕೇಂದ್ರಿತವಾದಾಗ ಯಾವುದೇ ಸಂಕಟ ನಮಗಾಗದು. ಈ ಮನಮಗ್ನತೆಯ ಅರಿವೇ ಬುದ್ಧನಡೆ. ಈ ನಿಟ್ಟಿನಲ್ಲಿ ‘ಕ್ರಿಯಾಪಠ್ಯ’ವಾಗಿ ಈ ಕೃತಿ ಗಮನ ಸೆಳೆಯುತ್ತದೆ.

‘ಬೌದ್ಧತಾತ್ವಿಕತೆಯ ಸರಳವಾಚಿಕೆ’

ಬುದ್ಧನ ಜೀವನದ ಸುತ್ತ ಕಟ್ಟಿರುವ ಅತಿರಂಜಕ ಕತೆಗಳು, ಆತನ ವಿಚಾರಗಳಾದ ದುಃಖ, ರೂಪಾಂತರಗಳಿಗೆ ಆರೋಪಿಸಲಾಗಿರುವ ಮಿಥ್ಯಾದೃಷ್ಟಿ (ಉದಾಹರಣೆ: ಜನ್ಮಾಂತರ), ವೈದಿಕ ಪರಂಪರೆ ಬೌದ್ಧನ ವಿಚಾರಗಳ ಮೇಲೆ ಮಾಡಿದ ಪ್ರಹಾರ ಇತ್ಯಾದಿ ಸಂಗತಿಗಳನ್ನು ‘ಬೌದ್ಧತಾತ್ವಿಕತೆಯ ಸರಳ ವಾಚಿಕೆ’ ವ್ಯವಹರಿಸಿದೆ.

7 4

‘ಪ್ರಜ್ಞಾಪಾರಮಿತ’

“ಮಿತ ಎಂದರೆ ಬಂಧನವೆಂದೂ ಪಾರಮಿತ ಎಂದರೆ ಬಂಧನವ ಬಿಡಿಸಿ ದಾಟಿಸಬಲ್ಲದ್ದು ಎಂದೂ ಪ್ರಜ್ಞಾ ಪಾರಮಿತ ಎಂದರೆ ಬಂಧನವ ಬಿಡಿಸಿ ದಾಟಿಸಬಲ್ಲ ಅರಿವು” ಎಂದು ವಿವರಿಸುತ್ತಾರೆ ಬೂದಾಳು. ಲೋಕವನ್ನು ಸರಿಯಾಗಿ ಅರಿತುಕೊಳ್ಳಲು ಪ್ರಜ್ಞಾಪಾರಮಿತದ ಅನುಸಂಧಾನ ಅಗತ್ಯ.

2 7

ಬೂದಾಳು ಕೃತಿಗಳ ಒಟ್ಟು ಪರಿಸರ

ಬುದ್ಧನಡೆಯ ಯಾವುದೇ ಕೃತಿಯನ್ನು ತೆಗೆದುಕೊಂಡು ಓದಿದರೂ ಒಂದು ಮತ್ತೊಂದರ ಮುಂದುವರಿಕೆಯೋ, ಪುನರಾವರ್ತನೆಯೋ ಎಂಬಂತೆ ಭಾಸವಾಗುತ್ತವೆ. ಇದು ಬೌದ್ಧತಾತ್ವಿಕತೆಯಲ್ಲಿಯೇ ಇರುವ ಗುಣ. ಅಲ್ಲಿ ಯಾವುದನ್ನೂ ಬಿಡಿಸಿ ನೋಡಲು ಸಾಧ್ಯವಿಲ್ಲ. ಯಾವುದಕ್ಕೂ ಸ್ವತಂತ್ರ ಅಸ್ತಿತ್ವವಿಲ್ಲ ಎಂಬುದೇ ಬುದ್ಧನ ನುಡಿಯಾಗಿರುವಾಗ ಪ್ರಜ್ಞಾಪಾರಮಿತ, ಪ್ರತೀತ್ಯ ಸಮುತ್ಪಾದ, ದುಃಖ, ನಿರ್ವಾಣ- ಇವೆಲ್ಲವಕ್ಕೂ ಅಂತರ್‌ ಸಂಬಂಧ ಏರ್ಪಟ್ಟಿದೆ. ಹೀಗಾಗಿ ಎಲ್ಲಾ ಕೃತಿಗಳಲ್ಲೂ ಪುನರಾವರ್ತನೆ ಕಂಡು ಬರುತ್ತದೆ. ಜಡ್ಡು ಗಟ್ಟಿರುವ ಮನಸ್ಸನ್ನು ಬೇಧಿಸಿ ಅದರಾಚೆಯ ಪ್ರಜ್ಞೆಯನ್ನು ಚಾಲ್ತಿಗೆ ತರುವ ಈ ಪಯಣದಲ್ಲಿ ಮತ್ತೆ ಮತ್ತೆ ಮರೆವು/ಮರಹು (ಅಂದರೆ ಈ ಲೋಕವೂ ಅದು ಇರುವಂತೆ ಅರಿತುಕೊಂಡು ಬಾಳಲಾಗದ ಅಸಾಮರ್ಥ್ಯ) ಆವರಿಸಿಕೊಳ್ಳುತ್ತದೆ. ಹೀಗಾಗಿಯೇ ಬೌದ್ಧ ಸಾಹಿತ್ಯವೂ ಈ ಪುನರಾವರ್ತನೆಯ ಹಾದಿ ಹಿಡಿಯಿತು. ಬೂದಾಳು ಅವರ ಕೃತಿಗಳೂ ಈ ಅಪವಾದಕ್ಕೆ ಹೊರತಲ್ಲ.

ಇದನ್ನೂ ಓದಿರಿ: ಕ್ರೌರ್ಯ ಮತ್ತು ಕಾರುಣ್ಯ: ದುಃಖಮಯ ಕಾವ್ಯದೆದುರು ಬೌದ್ಧಮೀಮಾಂಸೆಯ ಬೆಳಗು

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X