ದೇಶದ ಸುಮಾರು ಮೂರನೇ ಎರಡರಷ್ಟು ಹದಿಹರೆಯದವರು ವಿಟಮಿನ್ ಬಿ12 ಕೊರತೆಯಿಂದ ಬಳಲುತ್ತಿದ್ದಾರೆ ಎಂಬ ಕಳವಳಕಾರಿ ಅಂಶ ರಾಷ್ಟ್ರೀಯ ಸಮೀಕ್ಷೆಯಿಂದ ಹೊರಬಿದ್ದಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹಾಗೂ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್‌ಐಎನ್) ನಡೆಸಿದ ‘ಸಂಪದ’ (2023–25) ಸಮೀಕ್ಷೆಯ ಪ್ರಕಾರ, 10ರಿಂದ 19 ವರ್ಷದೊಳಗಿನ ಶೇ 66.1ರಷ್ಟು ಬಾಲಕರು ಹಾಗೂ ಶೇ 65.4ರಷ್ಟು ಬಾಲಕಿಯರಲ್ಲಿ ವಿಟಮಿನ್ ಬಿ12 ಪ್ರಮಾಣ ಅಗತ್ಯಕ್ಕಿಂತ ಕಡಿಮೆ ಇರುವುದು ದೃಢಪಟ್ಟಿದೆ.
ವಿಟಮಿನ್ ಬಿ12 ಕೊರತೆ ಕೇವಲ ಹದಿಹರೆಯದವರಿಗೆ ಮಾತ್ರ ಸೀಮಿತವಾಗಿಲ್ಲ; ಮಕ್ಕಳು, ಮಹಿಳೆಯರು ಹಾಗೂ ಪುರುಷರಲ್ಲಿಯೂ ವ್ಯಾಪಕವಾಗಿ ಕಂಡುಬಂದಿದೆ. 5ರಿಂದ 9 ವರ್ಷದೊಳಗಿನ ಶೇ 46.5ರಷ್ಟು ಮಕ್ಕಳು ಮತ್ತು 12ರಿಂದ 59 ತಿಂಗಳ ಶೇ 37.3ರಷ್ಟು ಮಕ್ಕಳಲ್ಲಿ ಈ ಕೊರತೆ ದಾಖಲಾಗಿದೆ. ಅಂತೆಯೇ ಶೇ 63.1ರಷ್ಟು ಗರ್ಭಿಣಿಯರು, ಶೇ 51.8ರಷ್ಟು ಹಾಲುಣಿಸುವ ತಾಯಂದಿರು, 15ರಿಂದ 49 ವರ್ಷದ ಶೇ 57.4ರಷ್ಟು ಮಹಿಳೆಯರು ಹಾಗೂ 20ರಿಂದ 59 ವರ್ಷದ ಶೇ 60.4ರಷ್ಟು ಪುರುಷರು ಬಿ12 ಕೊರತೆ ಎದುರಿಸುತ್ತಿದ್ದಾರೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆಯೂ ಈ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಹದಿಹರೆಯದ ಬಾಲಕರಲ್ಲಿ ನಗರ ಪ್ರದೇಶದಲ್ಲಿ ಶೇ 68.6 ಹಾಗೂ ಗ್ರಾಮೀಣ ಭಾಗದಲ್ಲಿ ಶೇ 65.3ರಷ್ಟು ಕೊರತೆ ಇದ್ದರೆ, ಬಾಲಕಿಯರಲ್ಲಿ ಗ್ರಾಮೀಣ ಭಾಗದಲ್ಲಿ ಶೇ 66.5 ಹಾಗೂ ನಗರಗಳಲ್ಲಿ ಶೇ 61.7ರಷ್ಟು ದಾಖಲಾಗಿದೆ. ವಯಸ್ಕ ಪುರುಷರು ಮತ್ತು ಗರ್ಭಿಣಿಯರಲ್ಲಿ ನಗರ ಭಾಗದಲ್ಲೇ ಕೊರತೆ ಹೆಚ್ಚಿದೆ. 60 ವರ್ಷ ಮೇಲ್ಪಟ್ಟವರಲ್ಲಿ ಶೇ 46.8ರಷ್ಟು ಪುರುಷರು ಹಾಗೂ ಶೇ 41.2ರಷ್ಟು ಮಹಿಳೆಯರಲ್ಲಿ ಈ ಸಮಸ್ಯೆ ಇದೆ.
ದೇಶದ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 183 ಜಿಲ್ಲೆಗಳಲ್ಲಿ 81 ಸಾವಿರಕ್ಕೂ ಹೆಚ್ಚು ಕುಟುಂಬಗಳ ಎರಡು ಲಕ್ಷಕ್ಕೂ ಅಧಿಕ ಮಂದಿಯನ್ನು ‘ಸಂಪದ’ ಸಮೀಕ್ಷೆಗೆ ಒಳಪಡಿಸಲಾಗಿತ್ತು. 1.7 ಲಕ್ಷಕ್ಕೂ ಹೆಚ್ಚು ರಕ್ತದ ಮಾದರಿಗಳಲ್ಲಿ ಹಿಮೋಗ್ಲೋಬಿನ್ ಪರೀಕ್ಷೆ ನಡೆಸಲಾಗಿದ್ದು, ಬಿ12 ಸೇರಿದಂತೆ ಸೂಕ್ಷ್ಮಪೋಷಕಾಂಶಗಳ ಪರೀಕ್ಷೆಯನ್ನು ಆಯ್ದ ಉಪಮಾದರಿಯಲ್ಲಿ ಕೈಗೊಳ್ಳಲಾಗಿದೆ. ರಕ್ತದ ಸೀರಂನಲ್ಲಿ ಬಿ12 ಪ್ರಮಾಣ 203 pg/mLಗಿಂತ ಕಡಿಮೆ ಇದ್ದರೆ ಅದನ್ನು ಕೊರತೆ ಎಂದು ಪರಿಗಣಿಸಲಾಗಿದೆ.
ರಕ್ತಹೀನತೆ ಇರುವವರಲ್ಲಿ ಮಾತ್ರವಲ್ಲದೆ, ರಕ್ತಹೀನತೆ ಇಲ್ಲದವರಲ್ಲಿಯೂ ವಿಟಮಿನ್ ಬಿ12 ಕೊರತೆ ಸಮಾನ ಪ್ರಮಾಣದಲ್ಲಿ ಕಂಡುಬಂದಿರುವುದು ಸಮೀಕ್ಷೆಯ ಪ್ರಮುಖ ಅಂಶವಾಗಿದೆ. ರಕ್ತಹೀನತೆ ಇಲ್ಲದ ಶೇ 65.4ರಷ್ಟು ಹದಿಹರೆಯದ ಬಾಲಕರು ಹಾಗೂ ಶೇ 59.1ರಷ್ಟು ವಯಸ್ಕ ಪುರುಷರಲ್ಲಿಯೂ ಬಿ12 ಮಟ್ಟ ಕಡಿಮೆ ಇದೆ. ಹೀಗಾಗಿ ರಕ್ತಹೀನತೆಯನ್ನು ಕೇವಲ ಕಬ್ಬಿಣಾಂಶದ ಕೊರತೆಗೆ ಸೀಮಿತಗೊಳಿಸಿ ನೋಡಲಾಗದು; ಸೋಂಕುಗಳು ಮತ್ತು ಇತರ ಸೂಕ್ಷ್ಮಪೋಷಕಾಂಶಗಳ ಕೊರತೆಯನ್ನೂ ಗಮನಿಸಬೇಕು ಎಂದು ವರದಿ ಹೇಳಿದೆ.
ಮೆದುಳಿನ ಬೆಳವಣಿಗೆ, ನರಮಂಡಲದ ಆರೋಗ್ಯ ಹಾಗೂ ಕೆಂಪು ರಕ್ತಕಣಗಳ ಉತ್ಪಾದನೆಗೆ ವಿಟಮಿನ್ ಬಿ12 ಅತ್ಯಗತ್ಯ. ಇದು ಸ್ವಾಭಾವಿಕವಾಗಿ ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ, ಮೀನು ಮತ್ತು ಮಾಂಸಾಹಾರದಲ್ಲಿ ಹೆಚ್ಚಾಗಿ ಲಭ್ಯವಿರುತ್ತದೆ. ಪ್ರಾಣಿಜನ್ಯ ಆಹಾರ ಸೇವನೆ ಕಡಿಮೆ ಇರುವುದು ಅಥವಾ ದೇಹಕ್ಕೆ ಪೋಷಕಾಂಶ ಸರಿಯಾಗಿ ಹೀರಿಕೊಳ್ಳದಿರುವುದು ಕೊರತೆಗೆ ಕಾರಣವಾಗುತ್ತದೆ. ಇದರಿಂದ ಆಯಾಸ, ನಿಶ್ಯಕ್ತಿ, ಕೈಕಾಲುಗಳಲ್ಲಿ ಮರಗಟ್ಟುವಿಕೆ, ನಡಿಗೆಯ ಸಮತೋಲನ ತಪ್ಪುವುದು ಹಾಗೂ ನೆನಪಿನ ಶಕ್ತಿ ಕುಂದುವಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ದೀರ್ಘಕಾಲದ ಬಿ12 ಕೊರತೆಯು ನರಗಳಿಗೆ ಹಾನಿ ಉಂಟುಮಾಡುವ ಅಪಾಯವಿರುವುದರಿಂದ, ರಕ್ತಪರೀಕ್ಷೆ ಮೂಲಕ ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವುದು ಮುಖ್ಯ. ‘ಸಂಪದ’ ಸಮೀಕ್ಷೆಯ ಫಲಿತಾಂಶಗಳು ‘ರಕ್ತಹೀನತೆ ಮುಕ್ತ ಭಾರತ’ ಯೋಜನೆಯನ್ನು ಬಲಪಡಿಸಲು ನೆರವಾಗಲಿವೆ ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ. ರಾಜೀವ್ ಬಹ್ಲ್ ಹೇಳಿದ್ದಾರೆ. ವಯೋವರ್ಗ ಆಧಾರಿತ ರಕ್ತಹೀನತೆ ನಿಯಂತ್ರಣ ಕ್ರಮಗಳನ್ನು ರೂಪಿಸಲು ಈ ದತ್ತಾಂಶ ಪೂರಕವಾಗಲಿದೆ ಎಂದು ಎನ್‌ಐಎನ್ ನಿರ್ದೇಶಕಿ ಡಾ. ಭಾರತಿ ಕುಲಕರ್ಣಿ ತಿಳಿಸಿದ್ದಾರೆ.



