ಸಂತೆಯಲ್ಲಿ ಕಳೆದು ಹೋದ ‘ಕನ್ನಡ ಸಾಹಿತ್ಯ ಸಮ್ಮೇಳನ’

Date:

Advertisements

ಸ್ವಾಗತ ದ್ವಾರದ ಹೊರಗೂ ಒಳಗೂ ಇಕ್ಕೆಲಗಳಲ್ಲೂ ಕಬ್ಬಿನ ಹಾಲು, ಜ್ಯೂಸ್, ಚುರುಮುರಿ, ಬಟ್ಟೆ, ಪಾತ್ರೆ, ಆಟಿಕೆ‌, ಆಭರಣ ವ್ಯಾಪಾರಿಗಳು ತುಂಬಿದ್ದರು. ಮಕ್ಕಳು ಮಹಿಳೆಯರು ಭರ್ಜರಿ ವ್ಯಾಪಾರದಲ್ಲಿ ಮಗ್ನರಾಗಿದ್ದರು. ಸಾಹಿತ್ಯ ಸಮ್ಮೇಳನ ಸಭಾಂಗಣದ ಹೊರಗೆ ಹೀಗೆ ಸಂತೆ ವ್ಯಾಪಾರ ನಡೆಸಲು ಬಿಟ್ಟ ಕಾರಣ ಸಾಹಿತ್ಯಾಸಕ್ತರು ಓಡಾಡುವುದಕ್ಕೆ ತ್ರಾಸಪಡಬೇಕಾಯ್ತು.

ಮೂರು ದಿನಗಳ ಕಸಾಪ ವಾರ್ಷಿಕ ಜಾತ್ರೆ ಮುಗಿದಿದೆ. ಸರ್ಕಾರದ 30 ಕೋಟಿ ರೂ. ಹಣ ಮೂರು ದಿನದಲ್ಲಿ ಕನ್ನಡ ಭಾಷೆ, ಸಾಹಿತ್ಯದ ಚರ್ಚೆಗಳು ನಡೆದರೂ ಅವುಗಳಿಗೆ ಕಿವಿಯಾದವರ ಸಂಖ್ಯೆ ಬಹಳ ಕಡಿಮೆ ಇತ್ತು. ಸಮ್ಮೇಳನದ ಉದ್ದೇಶ ಕಸಾಪ ಮರೆತು ಬಹಳ ವರ್ಷಗಳಾಗಿವೆ. ಕಸಾಪ ಅಧ್ಯಕ್ಷ ಮಹೇಶ್‌ ಜೋಶಿಯವರ ಬೇಜವಾಬ್ದಾರಿತನಕ್ಕೆ ಈ ಸಮ್ಮೇಳನ ಸಾಕ್ಷಿಯಾಗಿತ್ತು. ಇಡೀ ಸಮ್ಮೇಳನದ ಕೊರತೆಗೆ ಜೋಶಿ ಒಬ್ಬರೇ ಕಾರಣರಲ್ಲ, ಜಿಲ್ಲಾಡಳಿತವೂ ಅಷ್ಟೇ ಕಾರಣ. ಗೋಷ್ಠಿ, ಚರ್ಚೆಗಳ ವಿಷಯ- ವ್ಯಕ್ತಿಗಳ ಆಯ್ಕೆ ಕಸಾಪ ಸಮಿತಿಯ ಹೊಣೆಯಾಗಿದ್ದರೂ ಆಯೋಜನೆಯ ವೈಫಲ್ಯದ ಹೊಣೆಯನ್ನು ಜಿಲ್ಲಾಡಳಿತವೇ ಹೊರಬೇಕು. ಟಿ ವಿ ಮಾಧ್ಯಮಗಳು ಸ್ತ್ರೀ ನಿಂದಕ ಸಿ ಟಿ ರವಿ ಅವರ ಹಿಂದೆ ಬಿದ್ದ ಕಾರಣ ಈ ಬಾರಿಯ ಸಮ್ಮೇಳನದ ಅವ್ಯವಸ್ಥೆಗಳು ಆಯೋಜಕರ ಗಮನಕ್ಕೂ ಬರಲಿಲ್ಲ.

ರಾಜ್ಯ ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಒಂದೆರಡು ಗಂಟೆಯ ಪ್ರಯಾಣದಲ್ಲಿ ತಲುಪಬಹುದಾದ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಸುತ್ತಮುತ್ತಲಿನ ಜನಕ್ಕೆ ಬರೇ ಜಾತ್ರೆಯಷ್ಟೇ ಆಗಿ ಮುಗಿದಿದೆ. ಹಿಂದಿನ ಸಮ್ಮೇಳನಗಳಲ್ಲಿ ಕಂಡು ಬರುತ್ತಿದ್ದ ಎಲ್ಲಾ ವಯಸ್ಸಿನ ಸಾಹಿತಿಗಳ ಉತ್ಸಾಹದ ಭಾಗವಹಿಸುವಿಕೆ ಮಂಡ್ಯದಲ್ಲಿ ಕಂಡುಬರಲಿಲ್ಲ. ಇತ್ತೀಚಿನವರೆಗೂ ಅಖಿಲಭಾರತ ಸಾಹಿತ್ಯ ಸಮ್ಮೇಳನ ಯಾವುದೇ ಊರಿನಲ್ಲಿ ನಡೆದರೂ ಅಲ್ಲಿ ಉತ್ತರ ಕರ್ನಾಟಕದ ಕೆಲ ಮಂದಿ ಕಾಣಲು ಸಿಗುತ್ತಿದ್ದರು. ಬಿಳಿ ಕಚ್ಚೆ, ಜುಬ್ಬಾ ಹಾಕಿ ತಲೆಗೊಂಡು ಬಿಳಿ ಮುಂಡಾಸು ಸುತ್ತಿದ ಮುದುಕರು ಪ್ರತೀ ಸಮ್ಮೇಳನ ನಡೆಯುವಾಗಲೂ ಹಾಜರು. ಯಾಕೆಂದರೆ ಸಮ್ಮೇಳನದಲ್ಲಿ ಮೂರು ದಿನವೂ ಮೂರು ಹೊತ್ತಿನ ಊಟ ಸಿಗುತ್ತದೆ. ಊರು ನೋಡಿದಂತಾಗುತ್ತದೆ. ಮಲಗೋಕೆ ಪೆಂಡಾಲ್‌ ಇದೆ, ಹಲವು ಹಿರಿಯ ಸಾಹಿತಿಗಳನ್ನು ನೋಡಿದಂತಾಗುತ್ತದೆ. ಹೀಗೆ ರೈಲು, ಬಸ್ಸು ಹತ್ತಿ ಅಕ್ಷರ ಜಾತ್ರೆಗೆ ಬರುತ್ತಿದ್ದವರೆಲ್ಲ ಈಗೆಲ್ಲಿ ಎಂಬ ಪ್ರಶ್ನೆ ಮಂಡ್ಯದಲ್ಲಿ ಕಾಡಿತ್ತು.

Advertisements

ಹಿರಿಯ ಸಾಹಿತಿಗಳನ್ನು ಕಾಣಲೆಂದೇ ಬರುತ್ತಿದ್ದ ಯುವ ಸಮೂಹವೂ ಕಾಣಲಿಲ್ಲ. ಅದು ನಿಜಕ್ಕೂ ಊರಿನ ದೇವಸ್ಥಾನದ ಬಳಿ ನಡೆಯುವ ಜಾತ್ರೆಯಂತೆ, ದಸರಾ ವಸ್ತುಪ್ರದರ್ಶನ ಮೈದಾನದಂತೆ ಕಂಡುಬಂತು. ಸಾಹಿತ್ಯಾಸಕ್ತರಿಗೂ ಭಾಷಣ ಕೇಳುವುದಕ್ಕೆ ಪೂರಕ ವಾತಾವರಣ ಇರಲಿಲ್ಲ. ಅನೇಕರು ಪುಸ್ತಕ ಕೊಳ್ಳಲೆಂದೇ ಬಂದಿದ್ದರು. ಸರ್ಕಾರಿ ಶಾಲೆಯ ಮಕ್ಕಳನ್ನು ಬಸ್‌ಗಳಲ್ಲಿ ತುಂಬಿ ಬೆಳಿಗ್ಗೆ ಕರೆತಂದು ಸಂಜೆ ಕರೆದೊಯ್ಯುತ್ತಿದ್ದರು.

WhatsApp Image 2024 12 23 at 1.20.55 PM

ಸಮ್ಮೇಳನ ನಡೆಯುತ್ತಿದ್ದ ಬೃಹತ್‌ ಮೈದಾನದಲ್ಲಿ ಸ್ವಾಗತ ದ್ವಾರದ ಹೊರಗೂ ಒಳಗೂ ಇಕ್ಕೆಲಗಳಲ್ಲೂ ಕಬ್ಬಿನ ಹಾಲು ಗಾಡಿ, ಚುರುಮುರಿ, ಬಟ್ಟೆ, ಪಾತ್ರೆ, ಆಟಿಕೆ, ಕಂಬಳಿ, ಟವಲ್‌, ಕನ್ನಡ ಶಾಲು, ಬ್ಯಾಗು, ಬಳೆ, ಆಭರಣ, ಕಡ್ಲೆಕಾಯಿ, ಐಸ್‌ಕ್ರೀಂ, ಸೌತೇಕಾಯಿ, ಕಡ್ಲೆಪುರಿ ಮಾರಾಟ ಮಾಡುವ ನೂರಾರು ವ್ಯಾಪಾರಿಗಳು ತುಂಬಿದ್ದರು. ಮಹಿಳೆಯರು ಭರ್ಜರಿ ವ್ಯಾಪಾರದಲ್ಲಿ ಮಗ್ನರಾಗಿದ್ದರು. ಸಾಹಿತ್ಯ ಸಮ್ಮೇಳನದ ಪೆಂಡಾಲಿನ ಬಳಿಯೇ ಹೀಗೆ ಸಂತೆ ವ್ಯಾಪಾರ ನಡೆಸಲು ಬಿಟ್ಟು ಸಾಹಿತ್ಯಾಸಕ್ತರೂ ತ್ರಾಸವಿಲ್ಲದೇ ಓಡಾಡುವುದಕ್ಕೆ ತೊಂದರೆಯಾಗಿತ್ತು. ಮೊದಲ ದಿನದ ಪರಿಸ್ಥಿತಿ ನೋಡಿಯೂ ವ್ಯಾಪಾರಿಗಳನ್ನು ಪೆಂಡಾಲಿನ ಸಮೀಪದಿಂದ ಆಚೆ ಕಳಿಸುವ ಕೆಲಸ ವ್ಯವಸ್ಥಾಪಕರು ಮಾಡಿಲ್ಲ. ಇದು ಅವರಿಗೆ ತಾವು ಯಾವ ಸಮ್ಮೇಳನ ನಡೆಸುತ್ತಿದ್ದೇವೆ ಎಂಬ ಬಗ್ಗೆ ಗೌರವ ಇಲ್ಲದಿರುವುದನ್ನು ತೋರಿಸುತ್ತದೆ.

ಮಂಡ್ಯ ಮುಖ್ಯ ಪಟ್ಟಣದಿಂದ ದೂರದಲ್ಲಿ ಕಬ್ಬಿನ ಗದ್ದೆಯನ್ನು ಹದಗೊಳಿಸಿ ಬೃಹತ್‌ ಪಾರ್ಕಿಂಗ್‌ ವ್ಯವಸ್ಥೆ, ಊಟದ ಪೆಂಡಾಲ್‌, ಎರಡು ಸಮಾನಾಂತರ ವೇದಿಕೆ, ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಒಂದೊಂದು ದಿಕ್ಕಿನಲ್ಲಿದ್ದವು. ಪ್ರವೇಶ ದ್ವಾರದ ಬಲಕ್ಕೆ ಮುಖ್ಯ ವೇದಿಕೆ, ವೇದಿಕೆಯ ಎಡ ಭಾಗದಲ್ಲಿ ವಾಣಿಜ್ಯ ಮತ್ತು ಪುಸ್ತಕ ಮಳಿಗೆಗಳಿದ್ದವು. ಅದರಾಚೆಗೆ ದೂರದಲ್ಲಿ ಎರಡು ಸಮಾನಾಂತರ ವೇದಿಕೆಗಳು ಇದ್ದವು. ಅದು ಎಲ್ಲಿದೆ ಎಂದು ಹುಡುಕಬೇಕಿತ್ತು. ಗೋಷ್ಠಿಯ ಕುತೂಹಲಿಗಳು ಮಾತ್ರ ಹುಡುಕಿ ಹೋಗುತ್ತಿದ್ದರು. ಎರಡು ಬ್ಲಾಕ್‌ಗಳಲ್ಲಿ ಸುತ್ತಾಡಿ ಸುಸ್ತಾಗಿ ಮೂರನೇ ಬ್ಲಾಕ್‌ಗೆ ಬರುವವರ ಸಂಖ್ಯೆಯೂ ಕ್ಷೀಣವಾಗಿತ್ತು. ಅದರಾಚೆಗೆ ಸಮಾನಾಂತರ ವೇದಿಕೆಗೆ ಇರುವುದು ಬಹುತೇಕರಿಗೆ ಗೊತ್ತೇ ಇರಲಿಲ್ಲ. ಹೀಗೆ ಹತ್ತಾರು ಕೋಟಿ ಹಣ ಖರ್ಚು ಮಾಡಿ ಸಾಹಿತ್ಯ ಸಮ್ಮೇಳನ ನಡೆಸುವುದು ಸಂತೆ ವ್ಯಾಪಾರ ನಡೆಸಲು ಅಲ್ಲ. ಈ ಅರಿವು ಸಂಘಟಕರಿಗೆ ಇರಬೇಕಿತ್ತು.

WhatsApp Image 2024 12 23 at 4.37.10 PM3
ಪ್ರಧಾನ ವೇದಿಕೆಯ ಮುಂಭಾಗ ಸೆಲ್ಫಿ ಪಾಯಿಂಟ್‌ ಆಗಿತ್ತು, ಸದಾ ಜನರಿಂದ ಕಿಕ್ಕಿರಿದಿತ್ತು

ಮುಖ್ಯದ್ವಾರದ ಎಡಕ್ಕೆ ದೂರದಲ್ಲಿ ಊಟದ ಕೌಂಟರ್‌ಗಳಿದ್ದವು. ಅಲ್ಲಿ ಊಟ ಮಾಡಿ ವೇದಿಕೆಯ ಬಳಿ ಬರುವಾಗ ಉಂಡ ಅನ್ನ ಕರಗಿರುತ್ತಿತ್ತು ಎಂದು ಜನರಾಡಿಕೊಂಡರು. ನಿಜಕ್ಕೂ ಹಾಗೇ ಆಗಿತ್ತು. ಇನ್ನು ಶೌಚಾಲಯದ ಮಹತ್ವದ ಬಗ್ಗೆ ವ್ಯವಸ್ಥಾಪಕರು ತಲೆ ಕೆಡಿಸಿಕೊಂಡಂತಿರಲಿಲ್ಲ. ವೇದಿಕೆ ಅಲಂಕಾರ, ಅತಿಥಿ ಸತ್ಕಾರ, ಸ್ಮರಣಿಕೆಗಳಿಗೆ ಕೋಟಿಗಟ್ಟಲೆ ಹಣ ಸುರಿಯುವ ಕಸಾಪ ಮತ್ತು ಜಿಲ್ಲಾಡಳಿತಕ್ಕೆ ಜನಸಾಮಾನ್ಯರ ಆರೋಗ್ಯ, ಅವರ ಮೂಲಭೂತ ಅವಶ್ಯಕತೆಯ ಬಗ್ಗೆ ಕಿಂಚಿತ್ತು ಕಾಳಜಿ ಇದ್ದಂತಿಲ್ಲ. ಪುಸ್ತಕ ಮಳಿಗೆಗಳ ಹಿಂಭಾಗದಲ್ಲಿ ಕಬ್ಬಿನ ಹೊಲಗಳಿಗೆ ಜನ ಶೌಚಕ್ಕೆ ಹೋಗಿ ಬರುತ್ತಿದ್ದರು. ಶೌಚಾಲಯಕ್ಕೆ ದಾರಿ ಎಂದು ಅಲ್ಲಿ ಬೋರ್ಡ್‌ ನೇತು ಹಾಕಲಾಗಿತ್ತು. ಕಬ್ಬಿನ ಗದ್ದೆಯನ್ನೇ ಜಿಲ್ಲಾಡಳಿತ ಶೌಚಾಲಯ ಎಂದು ಸಾರಿ ಹೇಳಿತ್ತು. ಮಹಿಳೆಯರಿಗೆಂದು ಕಮೋಡ್‌ ಮಾತ್ರ ಇದ್ದ ನೀರಿನ ನಲ್ಲಿಗಳಿಲ್ಲದ ಕಬ್ಬಿಣದ ಟಾಯ್ಲೆಟ್‌ ಸಾಲಾಗಿ ನಿಲ್ಲಿಸಲಾಗಿತ್ತು. ನೀರಿನ ಬಕೆಟ್‌ ಹಿಡಿದು ಹೋಗಬೇಕಿತ್ತು. ಅಲ್ಲಿಗೆ ಪುರುಷರೂ ಹೋಗುತ್ತಿದ್ದರು. ಸಾಹಿತ್ಯಾಸಕ್ತರು ಟಾಯ್ಲೆಟ್‌ಗೆ ಹೋಗಿ ಬರುವಾಗ ಗೋಷ್ಠಿಯೇ ಮುಗಿದಿರುತ್ತಿತ್ತು. ಒಂದೊಂದು ಜಾಗವೂ ಅಷ್ಟೊಂದು ದೂರದಲ್ಲಿತ್ತು.

WhatsApp Image 2024 12 23 at 4.37.10 PM

ಮುಖ್ಯವಾಗಿ ಜನಕ್ಕೆ ಸಾಹಿತ್ಯ ಸಮ್ಮೇಳನದಲ್ಲಿ ಏನು ನಡೆಯುತ್ತದೆ ಎಂಬ ಅರಿವು ಇದ್ದಂತೆ ಕಾಣಲಿಲ್ಲ. ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆಯವರೆಗೂ ಜನ ನಿರಂತರವಾಗಿ ಪೆಂಡಾಲ್‌ನ ಹೊರಗೆ ಖರೀದಿ ಮಾಡುತ್ತ, ಮಳಿಗೆಗಳಲ್ಲಿ ಅಡ್ಡಾಡುತ್ತಿದ್ದರು. ಬಹುಶಃ ಅವರು ಸಭಾಂಗಣದ ಒಳಗೆ ಬರಲು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಗಬೇಕಿತ್ತು.

ಶನಿವಾರ ಸಂಜೆ ಐದೂವರೆಗೆ ಜೋರಾಗಿ ಮಳೆ ಸುರಿದು, ಆವರಣವೆಲ್ಲ ಕೆಸರು ಗದ್ದೆಯಂತಾಗಿತ್ತು. ಒಳಗೆ ಬರಲು ಹೊರಗೆ ಹೋಗಲು ಒಂದೇ ದ್ವಾರ ಇದ್ದು, ಮಳೆ ನಿಂತ ನಂತರ ಜನ ಹೊರ ಹೋಗಲು ಶುರು ಮಾಡಿದ್ದರು. ಅದರ ಎರಡಷ್ಟು ಜನ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಬರುತ್ತಿದ್ದರು. ಜನಪ್ರವಾಹವೇ ಎರಡೂ ಕಡೆಗೂ ಹರಿಯುತ್ತಿತ್ತು. ಕೆಸರಿನಲ್ಲಿ ಹಲವರ ಚಪ್ಪಲಿ, ಶೂಗಳು ಹೂತು ಹೋಗಿದ್ದವು. ಮುಖ್ಯರಸ್ತೆಯಲ್ಲೂ ಒಂದು ಕಿಲೋಮೀಟರ್‌ವರೆಗೆ ವಾಹನಗಳು ನಿಂತೇ ಇದ್ದವು. ಪುಟ್ಟಪುಟ್ಟ ಮಕ್ಕಳನ್ನು ಹೊತ್ತು ಮಹಿಳೆಯರು ಸಮ್ಮೇಳನದತ್ತ ಬರುತ್ತಿದ್ದರು.

WhatsApp Image 2024 12 23 at 4.37.11 PM
ಮಳೆ ನಿಂತ ನಂತರ

ಗೋಷ್ಠಿಗಳು ನಡೆಯುವಾಗ ಮುಖ್ಯ ವೇದಿಕೆಯ ಮುಂಭಾಗದ ಕುರ್ಚಿಗಳು ಬಹುತೇಕ ಖಾಲಿ ಇದ್ದವು. ವಯಸ್ಸಾದವರಷ್ಟೇ ಬಂದು ಕೂರುತ್ತಿದ್ದರು. ಕೆಲವರು ಸುತ್ತಾಡಿ ಆಯಾಸ ನಿವಾರಿಸಿಕೊಳ್ಳಲು ಬಂದು ಕೂರುತ್ತಿದ್ದರು. ರಾಜಕಾರಣಿಗಳು ಬರುವಾಗ ಒಂದಷ್ಟು ಮಂದಿ ಸಭಾಂಗಣದ ಒಳಗೆ ಸೇರುತ್ತಿದ್ದರು.

ವೇದಿಕೆಯ ಶಿಸ್ತು ಮರೆತ ಕಸಾಪ ಸಮಿತಿ
ವೇದಿಕೆಯ ಶಿಸ್ತು, ಗೌರವ ಎರಡನ್ನೂ ಸ್ವತಃ ಕಸಾಪದ ಸಮಿತಿಯವರು ಮರೆತಿದ್ದರು. ವೇದಿಕೆಯಲ್ಲಿ ಅತಿಥಿಗಳು ಭಾಷಣ, ಪ್ರಬಂಧ ಮಂಡನೆ ಮಾಡುತ್ತಿದ್ದಾಗ ಸಮಿತಿಯ ಸದಸ್ಯರು ಅತಿಥಿಗಳ ಹಿಂದೆ ಹಾಕಿದ್ದ ಕುರ್ಚಿಗಳಲ್ಲಿ ಕೂತು ಹರಟುತ್ತಿದ್ದರು. ಕೆಲವರು ಓಡಾಡುತ್ತಿದ್ದರು. ಕೆಲವರು ಇಡೀ ದಿನ ವೇದಿಕೆಯ ಕುರ್ಚಿಗಳಲ್ಲಿ ಕೂತಿದ್ದರು. ಅತಿಥಿಗಳಷ್ಟೇ ವೇದಿಕೆಯಲ್ಲಿ ಇರಬೇಕು ಎಂಬುದನ್ನು ಎಲ್ಲರೂ ಮರೆತಿದ್ದರು. ವ್ಯವಸ್ಥಾಪನಾ ಸಮಿತಿಯವರು ವೇದಿಕೆಯ ಹಿಂಭಾಗದಲ್ಲಿ ಅಥವಾ ಎರಡೂ ಬದಿಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡು ತಮ್ಮ ಜವಾಬ್ದಾರಿ ನಿಭಾಯಿಸುವುದು ವೇದಿಕೆಯ ಶಿಸ್ತು. ಆದರೆ, ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅಶಿಸ್ತು ಎದ್ದು ಕಾಣುತ್ತಿತ್ತು. ಗೋಷ್ಠಿಯಲ್ಲಿ ಐದಾರು ಜನರಿದ್ದರೆ ಕಸಾಪ ಸಮಿತಿಯ ಅಷ್ಟೂ ಜನ ವೇದಿಕೆಯಲ್ಲಿ ಓಡಾಡುತ್ತಿದ್ದರು. ದೊಡ್ಡ ಪರದೆಯ ಮೇಲೆ ಈ ಅಶಿಸ್ತು ಎದ್ದು ಕಾಣುತ್ತಿತ್ತು.

ಮುಖ್ಯ ಸಭಾಂಗಣ
ಅತಿಥಿಗಳ ಹಿಂದೆ ಕಸಾಪ ಪದಾಧಿಕಾರಿಗಳು

ಶನಿವಾರ ಸಂಜೆ ನಾಲ್ಕರಿಂದ ಸಮ್ಮೇಳನಾಧ್ಯಕ್ಷ ಗೊರುಚ ಅವರೊಂದಿಗೆ ಸಂವಾದ ನಡೆಯುತ್ತಿದ್ದರೆ, ನಂತರ ನಡೆಯುವ ಸನ್ಮಾನ ಕಾರ್ಯಕ್ರಮಕ್ಕೆ ಕುರ್ಚಿ ಹಾಕುವ ಕೆಲಸ ಶುರು ಮಾಡಿದ್ದರು. ಸನ್ಮಾನಿತರು ಆಗಲೇ ಒಬ್ಬೊಬ್ಬರಾಗಿ ಬಂದು ಕೂರುತ್ತಿದ್ದರು. ಇದರಿಂದಾಗಿ ಅಧ್ಯಕ್ಷರ ಜೊತೆ ನಡೆಯುವ ಸಂವಾದಕ್ಕೆ ಅಡಚಣೆಯಾಗುತ್ತಿತ್ತು. ನಂತರ ಸಂವಾದ ಕಾರ್ಯಕ್ರಮವನ್ನು ಕಸಾಪ ಅಧ್ಯಕ್ಷರೇ ಮೊಟಕುಗೊಳಿಸುವಂತೆ ಗೊರೂಚ ಅವರಿಗೆ ಕಿವಿಯಲ್ಲಿ ಉಸುರಿದರು. ಕಡೆಗೆ ನಾಲ್ವರು ಸಂವಾದಕರಿಂದ ಪ್ರಶ್ನೆಗಳ ಚೀಟಿಯನ್ನು ಪಡೆದು ಅದಕ್ಕೆ ಉತ್ತರ ನೀಡದೇ ಗೋಷ್ಠಿಯನ್ನು ಮುಗಿಸಲಾಯಿತು. ನಂತರ ನಡೆದ ಸನ್ಮಾನ ಕಾರ್ಯಕ್ರಮವನ್ನು ಎರಡು ಗಂಟೆಗಳ ಕಾಲ ನಡೆಸಿದ್ದರು. ಇದು ಕಸಾಪದ ಆದ್ಯತೆಯನ್ನು ತೋರಿಸಿತ್ತು.

ಇದನ್ನೂ ಓದಿ ಮಂಡ್ಯ ಸಾಹಿತ್ಯ ಸಮ್ಮೇಳನ | ಸಿ ಟಿ ರವಿ ಪ್ರಬಂಧ ಮಂಡನೆಗೆ ಪ್ರಗತಿಪರರ ವಿರೋಧ

ಬೇರೆ ಜಿಲ್ಲೆಗಳಿಂದ ಬಸ್ಸು, ರೈಲುಗಳಲ್ಲಿ ಬಂದವರು ಸಮ್ಮೇಳನ ಸ್ಥಳಕ್ಕೆ ಬರುವುದು ಒಂದು ಸಾಹಸವಾಗಿತ್ತು. ಮತ್ತೆ ಬೆಂಗಳೂರು ಕಡೆಗೋ, ಮೈಸೂರು ಕಡೆಗೋ ಹೋಗಲು ಬಸ್ಸು ಹಿಡಿಯೋದು ಗಂಟೆಗಳ ಪ್ರಯಾಸವಾಗಿತ್ತು. ಬೆಂಗಳೂರಿಗೆ ಹೋಗುವವರು ಸ್ಯಾಂಜೋ ಆಸ್ಪತ್ರೆ ಮುಂಭಾಗದಿಂದ ಸರ್ವಿಸ್‌ ಆಟೋದಲ್ಲಿ ಐವತ್ತು ರೂಪಾಯಿ, ಪ್ರತ್ಯೇಕ ಆಟೋವಾದರೆ ಮುನ್ನೂರು ರೂಪಾಯಿ ತೆತ್ತು ಮದ್ದೂರಿಗೆ ಪ್ರಯಾಣಿಸಿ ಬೆಂಗಳೂರು ಬಸ್ಸು ಹಿಡಿಯುವಂತಾಗಿತ್ತು. ಇಂತಹ ಲಕ್ಷಾಂತರ ಜನ ಸೇರುವ ಕಾರ್ಯಕ್ರಮವನ್ನು ನಡೆಸುವ ಸ್ಥಳ ಬಹಳ ಮುಖ್ಯವಾಗುತ್ತದೆ. ದೂರದೂರಿಂದ ಬರುವವರಿಗೆ ಅನುಕೂಲವಾಗುವಂತಿರಬೇಕು. ಜಿಲ್ಲಾಡಳಿತದ ಘೋಷಣೆಯ ಪ್ರಕಾರ ಬಸ್‌ ರೈಲು ನಿಲ್ದಾಣದಿಂದ ಸಂಪರ್ಕ ಬಸ್‌ಗಳು ಇದ್ದವು. ವಾಸ್ತವದಲ್ಲಿ ಇರಲಿಲ್ಲ. ಇದ್ದರೂ ಅವು ಸಾಲುತ್ತಿರಲಿಲ್ಲ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಷ್ಟು ಚೆನ್ನಾಗಿ ನಡೆಯಿತು ಅಥವಾ ನಡೆಯಲಿಲ್ಲ ಎಂಬುದು ಮುಖ್ಯವಲ್ಲ. ಅದರ ಫಲಶೃತಿ ಏನು ಎಂಬುದು ಮುಖ್ಯ. ಆ ನಿಟ್ಟಿನಲ್ಲಿ ಮುಂದಿನ ಸಮ್ಮೇಳನಗಳನ್ನಾದರೂ ಅರ್ಥಪೂರ್ಣವಾಗಿ ನಡೆಸುವತ್ತ ಕಸಾಪ ಗಂಭೀರವಾಗಿ ಯೋಚಿಸಬೇಕಿದೆ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

1 COMMENT

  1. ನೀವು ಬರೆದಿರುವ ಒಂದೊಂದು ಮಾತು ಸತ್ಯ. ಮೊದಲ ಬಾರಿಗೆ ಬಂದ ನಮ್ಮಂತ ಸಾಹೀತ್ಯಸಕ್ತರಿಗೆ.. ಭ್ರಮನಿರಸನ ಆಗಿದ್ದಂತು ಸುಳ್ಳಲ್ಲ. ನನ್ನ ಕಾರ್ ತೆಗೆಯಲು ಬರ್ರೊಬರಿ ನಾಲ್ಕು ತಾಸು ಹಿಡಿಯಿತು. ಊಟಕ್ಕೆ ಕ್ಯೂ ನಿಂತವರಿಗೆ ಬಿಕ್ಷುಕರಿಗೆ ನೀಡುವಂತೆ ನೀಡುತ್ತಿದ್ದರು. ಆ ಜನ ಜಾತ್ರೆಯಲ್ಲಿ ಕಳೆದು ಹೋಗಿ ಬೇಗ ಮನೆಗೆ ಸೇರಿಕೊಂಡರೆ ಸಾಕೆನಿಸಿತ್ತು. ಊಟಕ್ಕೆ ಪಯ೯ಯ ವ್ಯವಸ್ಥೆ ಮಾಡಬೇಕಿತ್ತು. ಪಯ್೯ಯ ವೇದಿಕೆಗಳು ಖಾಲಿ ಇದ್ದುದ್ದರಿಂದ ನಮ್ಮದಿಯಾಗಿ ಭಾಷಣ, ಕಾವ್ಯ ಗಳನ್ನು ಆಲಿಸ ಬಹುದಿತ್ತು. ಮತ್ತೆೊಮ್ಮೆ ಇಂಥ ಜಾತ್ರೆಗೆ ಬರಲು ಗಂಡೆದೆ ಬೇಕು..!!

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

Download Eedina App Android / iOS

X