ʼನಾವೇ ಮೂಲ ಅಹಿಂದರುʼ ಎಂಬ ಸತ್ಯದ ಅರಿವು ಲಿಂಗಾಯತರಿಗೆ ಆಗಬೇಕಿದೆ

Date:

ಬಸವಣ್ಣನವರ ವಿಶ್ವವ್ಯಾಪಿ ಚಿಂತನೆಯಲ್ಲಿ ಎಲ್ಲ ಧರ್ಮಗಳೂ ಸೇರಿರುವುದರಿಂದ ಅವರು ಎಲ್ಲರ ಮನದಾಳದಲ್ಲಿ ಇಳಿಯುವಂಥ ವಾತಾವರಣವನ್ನು ಲಿಂಗಾಯತರು ಸೃಷ್ಟಿಸಬೇಕು. ಬಸವಣ್ಣ ಯಾವ ಕಾಲಕ್ಕೂ ಯಾರದೇ ರಾಜಕೀಯ ಐಕಾನ್‌ ಆಗದೇ, ದುಡಿಯುವ ಜನರ ಐಕಾನ್‌ ಆಗೇ ಉಳಿಯಬೇಕು.

 

“ಸಾಮಾಜಿಕ ನ್ಯಾಯದ ಮೊದಲ ಹರಿಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ನಮ್ಮ ಸರ್ಕಾರದ ಈ ತೀರ್ಮಾನ ನನಗೆ ಅತೀವ ಹೆಮ್ಮೆ ಮತ್ತು ತೃಪ್ತಿಯನ್ನು ಉಂಟುಮಾಡಿದೆ. ಇದು ಕೇವಲ ಘೋಷಣೆ ಅಲ್ಲ. ಬಸವ ತತ್ತ್ವದ ಮೇಲಿರುವ ನಮ್ಮ ನಂಬಿಕೆ ಮತ್ತು ಬದ್ಧತೆ.

ಕಾಯಕ ಮತ್ತು ದಾಸೋಹ ನನ್ನ ಇಷ್ಟದ ಬಸವಣ್ಣನವರ ತತ್ತ್ವದ ಮೂಲವಾಗಿವೆ. ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ವಿತರಣೆ. ಸಂಪತ್ತಿನ ಉತ್ಪಾದನೆಯ ಶಕ್ತಿ ಎಲ್ಲರದ್ದಾಗಬೇಕು. ಅದರೆ ವಿತರಣೆ ಸಮಾನವಾಗಿ ನಡೆಯಬೇಕು ಎಂಬುದು ಬಸವಣ್ಣನವರ ಆಶಯವಾಗಿತ್ತು. ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಇಷ್ಟೊಂದು ಸರಳವಾಗಿ ವಿಶ್ಲೇಷಿಸುವುದು ಸಾಧ್ಯವಿಲ್ಲ. ಅಣ್ಣನ ಅನ್ನದಾಸೋಹದ ಸಂದೇಶಕ್ಕೆ ಅನುಗುಣವಾಗಿ ಮುಖ್ಯಮಂತ್ರಿಯಾದ ಮರುಗಳಿಗೆಯಲ್ಲೇ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಆ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪ ಕೈಗೊಂಡೆ. ವಿದ್ಯಾರ್ಥಿಗಳಿಗೆ ಬಿಸಿಯೂಟ, ಕ್ಷೀರಭಾಗ್ಯದ ಮೂಲಕ ಹಾಲು, ಇಂದಿರಾ ಕ್ಯಾಂಟೀನ್‌, ಗರ್ಭಿಣಿ ಮತ್ತು ಬಾಣಂತಿಯರಿಗಾಗಿ ಮಾತೃಪೂರ್ಣ ಯೋಜನೆಗಳು ಬಸವಣ್ಣನವರ ಅನ್ನದಾಸೋಹದ ಚಿಂತನೆಯಿಂದಲೇ ಪ್ರೇರಿತವಾದುವುಗಳಾಗಿವೆ” ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತುಗಳು ಬಸವ ಸಂಸ್ಕೃತಿಗೆ ಬರೆದ ಮುನ್ನುಡಿಯಂತಿವೆ.

ಬಸವಣ್ಣನವರ ಬಗ್ಗೆ ಈ ನಿಟ್ಟಿನಲ್ಲಿ ತಿಳಿದುಕೊಂಡ ಯಾವೊಬ್ಬ ಸ್ವಾಮಿಯಾಗಲಿ, ಲಿಂಗಾಯತ ವಿದ್ವಾಂಸನಾಗಲಿ ಅಥವಾ ರಾಜಕಾರಣಿಯಾಗಲಿ ನನ್ನ ಜೀವನದಲ್ಲಿ ಕಂಡಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ಬಸವಣ್ಣ ನನ್ನ ವೈಚಾರಿಕ ಗುರು” ಎಂದು ಮುಖ್ಯಮಂತ್ರಿಗಳು ಹೇಳಿದ್ದನ್ನು ಎಷ್ಟು ಮಂದಿ ಸ್ವಾಮಿಗಳು, ರಾಜಕಾರಣಿಗಳು, ಲಿಂಗಾಯತರು ಮತ್ತು ಬಸವಾಭಿಮಾನಿಗಳು ಅರ್ಥ ಮಾಡಿಕೊಂಡರೋ ಗೊತ್ತಿಲ್ಲ. ಬಹುಪಾಲು ಲಿಂಗಾಯತರಿಗೆ ಮತ್ತು ಅವರ ಸ್ವಾಮಿಗಳಿಗೆ ಮುಖ್ಯಮಂತ್ರಿಗಳು ಹೇಳಿದ ಈ ಒಂದು ವಿಚಾರ ಬಿಟ್ಟು ಉಳಿದೆಲ್ಲವೂ ಗೊತ್ತಿದ್ದರೂ ಪ್ರಯೋಜನವಿಲ್ಲ.
ದುಡಿಯುವ ಜನರನ್ನು ಒಂದುಗೂಡಿಸಿ; ಅವರ ಮನಸ್ಸಿನಲ್ಲಿ ರಾಜಕೀಯ ಪ್ರಜ್ಞೆಯನ್ನು ಮೂಡಿಸಿದ ವಿಶ್ವದ ಮೊದಲ ಮಹಾನುಭಾವರೆಂದರೆ ಬಸವಣ್ಣನವರು.

ಬಸವಣ್ಣನವರ ಮುಂದೆ ಮನುವಾದಿ ವ್ಯವಸ್ಥೆ ಇತ್ತು. ಅದು ವರ್ಣವ್ಯವಸ್ಥೆ ಮೂಲಕ ಮಾನವ ಸಂಬಂಧಗಳನ್ನು ಛಿದ್ರಛಿದ್ರ ಮಾಡಿತ್ತು. ಪ್ರತಿಶತ 90ರಷ್ಟು ಇರುವ ಶೂದ್ರರು ಮತ್ತು ಪಂಚಮರಿಗೆ ಯಾವುದೇ ರೀತಿಯ ಧಾರ್ಮಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಸೌಲಭ್ಯಗಳನ್ನು ಕಲ್ಪಿಸಿರಲಿಲ್ಲ. ವೈದಿಕರ ಮನುಸ್ಮೃತಿಯು ನಿಜವಾದ ಅರ್ಥದಲ್ಲಿ ಧಾರ್ಮಿಕ ಗ್ರಂಥವಾಗಿರದೆ ಸವರ್ಣೀಯರನ್ನು ಸುಖವಾಗಿ ಇರಿಸುವ ಸಮಾಜೋ ಆರ್ಥಿಕ ಮತ್ತು ರಾಜಕೀಯ ಗ್ರಂಥವಾಗಿದೆ. ಸವರ್ಣೀಯರು ಮನುಸ್ಮೃತಿಯ ಬಲೆ ಬೀಸಿ ಮೂಲನಿವಾಸಿಗಳನ್ನು ಗುಲಾಮರನ್ನಾಗಿ ಮಾಡಿ ಸಹಸ್ರಾರು ವರ್ಷಗಳಿಂದ ದುಡಿಸಿಕೊಳ್ಳುತ್ತ ಮುಂದುವರಿದಿದ್ದಾರೆ.

ಅವರ ದೇವರುಗಳು, ಅವರ ಸಂಪ್ರದಾಯಗಳು ಮತ್ತು ಅವರನ್ನು ಓಲೈಸುವ ನಡವಳಿಕೆಗಳು ಮೂಲನಿವಾಸಿಗಳ ಪಾಲಾಗಿವೆ. ಇಷ್ಟೆಲ್ಲವನ್ನು ಮೂಲನಿವಾಸಿಗಳು ಅವರೊಡನೆ ಒಂದಾಗಿ ಆಚರಿಸದೆ ಹೊರಗಿನಿಂದಲೇ ಮಾಡಬೇಕು. ಅಲ್ಲದೆ ಸದಾ ಜಾಗೃತರಾಗಿ ಹೊರಗೆ ಉಳಿಯುವ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲೇ ಬೇಕು. ಎಲ್ಲ ರೀತಿಯ ಶೋಷಣೆಯ ಈ ದುಷ್ಟ ವ್ಯವಸ್ಥೆಯ ವಿರುದ್ಧ ಮೊದಲಿಗೆ ಲೋಕಾಯತರು ಬಂಡೆದ್ದರು. ಮನುವಾದಿಗಳು ಅವರನ್ನು ಕೊಂದರು ಮತ್ತು ಅವರ ಸಾಹಿತ್ಯವನ್ನು ಸುಟ್ಟು ಹಾಕಿದರು. ನಂತರ ಬಂದ ಜೈನರ ಮೇಲೆ ಬಹುಬೇಗ ವಿಜಯಸಾಧಿಸಿ ಸುಮ್ಮನಾಗಿಸಿದರು. ತದನಂತರ ಬಂದ ಬೌದ್ಧರನ್ನು ಮತ್ತು ಅವರ ಸಾಹಿತ್ಯವನ್ನು ಸುಟ್ಟರು. ಬೌದ್ಧಧರ್ಮ ಜನಿಸಿದ 18 ಶತಮಾನಗಳ ನಂತರ ಬಂದ ಶರಣರ ಸಮಾನತೆಯ ಚಳವಳಿಯನ್ನು ಹತ್ತಿಕ್ಕಿದರು. ಶರಣರ ಕೊಲೆ ಸುಲಿಗೆಗಳಾದವು. ಅವರ ವಚನಕಟ್ಟುಗಳನ್ನು ಸುಟ್ಟುಹಾಕಲಾಯಿತು. ಹೀಗೆ ಲೋಕಾಯತರು, ಜೈನರು, ಬೌದ್ಧರು ಮತ್ತು ಲಿಂಗಾಯತರನ್ನು ಹತ್ತಿಕ್ಕಲಾಯಿತು.

ಮನುವಾದಿಗಳ ಸುಲಿಗೆ ರಾಜಕಾರಣವನ್ನು ಅರ್ಥೈಸಿಕೊಂಡಿದ್ದ ಬಸವಣ್ಣನವರು ಅದಕ್ಕೆ ಪರ್ಯಾಯವಾದ ದುಡಿಯುವ ಜನರ ರಾಜನೀತಿಯನ್ನು ರೂಪಿಸಿದರು. ಒಬ್ಬನೇ ನಿರಾಕಾರ ದೇವರು, ಒಂದೇ ವಿಶ್ವ, ಒಂದೇ ಮಾನವಕುಲ, ಲಿಂಗಭೇದ, ವರ್ಣಭೇದ, ಜಾತಿಭೇದ, ವರ್ಗಭೇದ ಮುಂತಾದ ಭೇದಗಳು ಶೋಷಕರಿಂದ ನಿರ್ಮಿತವಾದ ಕೃತ್ರಿಮ ಭೇದಗಳು ಎಂಬ ಅರಿವನ್ನು ಕಾಯಕಜೀವಿಗಳಲ್ಲಿ ಮೂಡಿಸುವಲ್ಲಿ ಬಸವಣ್ಣನವರು ಸಫಲರಾದರು. ಮೂರ್ತಿ, ಮಂದಿರ, ಮಠ, ದಾನ, ಕರ್ಮಗಳಿಗೆ ಪರ್ಯಾಯವಾಗಿ ಇಷ್ಟಲಿಂಗ, ಅರಿವಿನ ಮನೆ, ಮಹಾಮನೆ, ದಾಸೋಹ, ಕಾಯಕ ವ್ಯವಸ್ಥೆಯ ಮೂಲಕ “ಶರಣಸಂಕುಲ” ಎಂಬ ಪರ್ಯಾಯ ಸಮಾಜದ ನಿರ್ಮಾಣ ಮಾಡಿದರು. ಪುಣ್ಯ, ಪಾಪ, ಸ್ವರ್ಗ, ನರಕ, ಪುನರ್ಜನ್ಮ, ಮೋಕ್ಷ, ಕರ್ಮಸಿದ್ಧಾಂತ, ಮುಂತಾದವುಗಳನ್ನು ಅಲ್ಲಗಳೆದರು. ಬಸವಣ್ಣನವರ ಲಿಂಗಾಯತ ಧರ್ಮದಲ್ಲಿ ಅರಿವೇ ಗುರು ಮತ್ತು ಶಾಶ್ವತನಾದ ನಿರಾಕಾರ ದೇವರೇ ಸ್ವಾಮಿ. ಇಲ್ಲಿ ಇರುವವರು ಶರಣತತ್ತ್ವ ಪ್ರಸಾರ ಮಾಡುವ ಜಂಗಮರು ಮಾತ್ರ.12ನೇ ಶತಮಾನದ ಜಂಗಮರು ಕಾವಿಬಟ್ಟೆ ಧರಿಸುತ್ತಿರಲಿಲ್ಲ. ಕಾವಿಬಟ್ಟೆ ಧರಿಸಿ ಕಾಯಕ ಮಾಡದೆ ಬದುಕುವವರನ್ನು ಶರಣರು “ಜೀವಗಳ್ಳರು” ಎಂದು ಕರೆದಿದ್ದಾರೆ.

ಬಸವಣ್ಣನವರು ಶಿರಃಪ್ರಧಾನರಾಗಿದ್ದರು ಎಂದು ಮಡಿವಾಳ ಮಾಚಿದೇವರು ತಮ್ಮ ವಚನವೊಂದರಲ್ಲಿ ತಿಳಿಸಿದ್ದಾರೆ. ಅಂದರೆ ಅಷ್ಟಪ್ರಧಾನರಲ್ಲೇ ಅವರು ಪ್ರಮುಖರು. ಬಸವಣ್ಣನವರು ರಾಜಕೀಯ ತತ್ತ್ವಜ್ಞಾನಿಯಾಗಿದ್ದರು ಎಂದು ಯಾವೊಬ್ಬ ಸ್ವಾಮಿಯಾಗಲಿ ಅಥವಾ ಲಿಂಗಾಯತ ವಿದ್ವಾಂಸನಾಗಲಿ ಹೇಳಿದ್ದನ್ನು ನಾನು ಕೇಳಿಲ್ಲ.

ಪ್ರಧಾನಿ ಬಸವಣ್ಣನವರು ರಾಜಕಾರಣವನ್ನು ಪವಿತ್ರಗೊಳಿಸಿದವರು. ಮಿಗುತಾಯ ಮೌಲ್ಯ (ಸರ್‌ಪ್ಲಸ್‌ ವ್ಯಾಲ್ಯೂ) ಸಮಾಜದ ಸ್ವತ್ತಾಗಿ ಸರ್ವರಿಗೂ ಸಮಪಾಲು ಸಿಕ್ಕಾಗ ಮಾತ್ರ ರಾಜಕಾರಣ ಪವಿತ್ರವಾಗುವುದು. ಬಸವಣ್ಣನವರು ಅದಕ್ಕೆ “ಶಿವನಿಧಿ” ಎಂದು ಕರೆದರು. ಕಾಯಕ ಪ್ರಸಾದ ದಾಸೋಹಗಳು ಬಸವಣ್ಣನವರ ಅನನ್ಯ ಪರಿಕಲ್ಪನೆಗಳಿಂದ ಕೂಡಿದ್ದವು. ಬಸವಣ್ಣನವರ ಅರ್ಥಶಾಸ್ತ್ರದಲ್ಲಿ ಅವು ಯೋಗ್ಯ ಉತ್ಪಾದನೆ, ಸದ್ಬಳಕೆ ಮತ್ತು ನ್ಯಾಯಬದ್ಧ ಸಾಮಾಜಿಕ ವಿತರಣೆ ಎಂಬ ಅರ್ಥವನ್ನು ಸ್ಫುರಿಸುತ್ತವೆ. ಯೋಗ್ಯ ಉತ್ಪಾದನೆ ಮಾತ್ರ ಕಾಯಕ ಎನಿಸಿಕೊಳ್ಳುತ್ತದೆ.

ಅದಕ್ಕೆ ಎರಡು ಆಯಾಮಗಳಿಗೆ ಮೊದಲನೆಯದು ಪ್ರಸಾದ, ಎರಡನೆಯದು ದಾಸೋಹ. ಕಾಯಕ ಮಾಡಿ ಬಂದದ್ದನ್ನು ದೇವರ ಪ್ರಸಾದವೆಂದು ಸ್ವೀಕರಿಸುವ ಮೂಲಕ ನಿರಹಂಕಾರಿ ಆಗುವುದು ಮತ್ತು ದಾಸೋಹದ ಮೂಲಕ ಸಾಮಾಜಿಕನಾಗುವುದು. ಆದ್ದರಿಂದ ನಿರಾಕಾರ ದೇವರು, ಕಾಯಕ, ಪ್ರಸಾದ ಮತ್ತು ದಾಸೋಹಗಳು ಲಿಂಗಾಯತ ಧರ್ಮದ ಮುಖ್ಯ ಆಧಾರಸ್ತಂಭಗಳಾಗಿವೆ.

ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಕರೆಯುವುದಾದರೆ ಇಂಥ ಪ್ರಜ್ಞೆಯೊಂದಿಗೆ ಸಮಾಜದ ಪುನರ್‌ ನಿರ್ಮಾಣ ಮಾಡಬೇಕು. ಬಸವಣ್ಣನವರು ಕರ್ನಾಟಕದ ಎಲ್ಲ ಜನಸಮುದಾಯಗಳ ಐಕಾನ್‌ ಆಗಬೇಕು. ಬಸವಣ್ಣನವರ ವಿಶ್ವವ್ಯಾಪಿ ಚಿಂತನೆಯಲ್ಲಿ ಎಲ್ಲ ಧರ್ಮಗಳೂ ಸೇರಿರುವುದರಿಂದ ಅವರು ಎಲ್ಲರ ಮನದಾಳದಲ್ಲಿ ಇಳಿಯುವಂಥ ವಾತಾವರಣವನ್ನು ಲಿಂಗಾಯತರು ಸೃಷ್ಟಿಸಬೇಕು. ಬಸವಣ್ಣ ಯಾವ ಕಾಲಕ್ಕೂ ಯಾರದೇ ರಾಜಕೀಯ ಐಕಾನ್‌ ಆಗದೆ ದುಡಿಯುವ ಜನರ ಐಕಾನ್‌ ಆಗೇ ಉಳಿಯಬೇಕು.

ಬಸವಣ್ಣನವರು ಮನುವಾದಿ ರಾಜಕೀಯಕ್ಕೆ ಸವಾಲಾಗಿ ದುಡಿಯುವ ಜನರ ರಾಜನೀತಿಯ ಸೃಷ್ಟಿಸಿದರು ಎಂಬುದನ್ನು ಲಿಂಗಾಯತರು ಮರೆಯಬಾರದು. “ಕುಲವನರಸುವರೆ ಶರಣರಲ್ಲಿ ಜಾತಿ ಸಂಕರವಾದ ಬಳಿಕ” ಎಂದು ಬಸವಣ್ಣನವರು ಪ್ರಶ್ನಿಸಿದ್ದಾರೆ. ತಮ್ಮ ಹೃದಯದಲ್ಲಿ ಅಹಿಂದರ ರಕ್ತ ಹರಿಯುತ್ತಿದೆ ಎಂಬ ಸತ್ಯವನ್ನು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು. ಬಸವಣ್ಣನವರೇ ದೇಶದ ಮೊದಲ ಅಹಿಂದ ನಾಯಕರು. ಆ ಕಾಲದ ದಲಿತ, ಹಿಂದುಳಿದ, ಆದಿವಾಸಿ, ಅಲೆಮಾರಿ, ಅಲ್ಪಸಂಖ್ಯಾತ ಕಾಯಕಜೀವಿಗಳು ಬಸವಣ್ಣನವರ ಮಾರ್ಗದರ್ಶನದಲ್ಲಿ ಮತ್ತು ಸರ್ವ ಸಮುದಾಯಗಳಿಂದ ಕೂಡಿದ 770 ಅಮರ ಗಣಂಗಳ ನಾಯಕತ್ವದಲ್ಲಿ ಸ್ಥಾಪಿಸಿದ ಧರ್ಮವೇ ಲಿಂಗಾಯತ ಧರ್ಮ. ಲಿಂಗಾಯತ ಎಂದರೆ ದೇವಾನಾಂಪ್ರಿಯ. ಲಿಂಗಾಯತ ಧರ್ಮದಲ್ಲಿ ಸಮಾಜವೇ ದೇವರು. “ಇನ್ನು ಜಂಗಮವೇ (ಸಮಾಜವೇ) ಲಿಂಗವೆಂದು ನಂಬಿದೆ” ಎಂದು ಬಸವಣ್ಣನವರು ಹೇಳಿದ್ದಾರೆ. ಸಮಾಜಕ್ಕೆ ಪ್ರಿಯರಾಗುವವರು ಮಾತ್ರ ದೇವರಿಗೆ ಪ್ರಿಯರಾಗುತ್ತಾರೆ.

ದಕ್ಷಿಣಭಾರತದಲ್ಲಿ ಕೋಮುವಾದಿಗಳು ಅಧಿಕಾರ ಹಿಡಿಯಲು ಯಾರು ಕಾರಣರು ಎಂಬುದನ್ನು ಅರಿಯಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಕೋಮುವಾದಿಗಳು ಲಿಂಗಾಯತರ ಬೆನ್ನು ಹತ್ತಿದ್ದೇಕೆ ಎಂಬುದನ್ನು ತಿಳಿದುಕೊಳ್ಳಬೇಕು. ಬಹುಪಾಲು ಲಿಂಗಾಯತರು ಕೋಮುವಾದಿಗಳ ಜೊತೆ ಏಕೆ ಇದ್ದಾರೆ ಎಂಬುದರ ವಿಮರ್ಶೆ ಆಗಬೇಕು.

“ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕೆಂದು ನಾಡಿನ ಲಿಂಗಾಯತ ಮಠಗಳ ಸ್ವಾಮಿಗಳು ನನ್ನ ಬಳಿ ಬಂದು ಮನವಿ ಮಾಡಿದ್ದರು. ಇದು ವೈಯಕ್ತಿಕವಾಗಿ ನನ್ನ ಅಪೇಕ್ಷೆಯೂ ಆಗಿತ್ತು. ಸ್ವಾಮಿಗಳ ಬೇಡಿಕೆ ಈಡೇರಿಸಿದ ತೃಪ್ತಿ ನಮ್ಮ ಸರ್ಕಾರಕ್ಕೆ ಇದೆ. ಈ ಎಲ್ಲ ಸ್ವಾಮೀಜಿಗಳ ಆಶೀರ್ವಾದ ನಮ್ಮ ಸರ್ಕಾರದ ಮೇಲೆ ಇರಲಿ ಎಂದು ಇದೇ ಸಂದರ್ಭದಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಅರಿಕೆ ಮಾಡಿಕೊಳ್ಳಲು ಕಾರಣವೇನು ಎಂಬುದನ್ನು ಲಿಂಗಾಯತ ಸ್ವಾಮಿಗಳು ಅರ್ಥ ಮಾಡಿಕೊಳ್ಳಬೇಕು. ನಾವೇ ಮೂಲ ಅಹಿಂದರು ಎಂಬ ಸತ್ಯದ ಅರಿವು ಲಿಂಗಾಯತರಿಗೆ ಆಗಬೇಕು.

ಮಾನವನ ಅರಿವು, ನಂಬಿಕೆ, ಚಿಂತನ ವಿಧಾನ, ನಡವಳಿಕೆ ಮತ್ತು ಕಾಣ್ಕೆಗಳಲ್ಲಿ ಹಾಸುಹೊಕ್ಕಾಗಿರುವ ಸ್ಪಂದನವೆ ಸಂಸ್ಕೃತಿ. ಪರಂಪರೆ, ಭಾಷೆ, ವಿಚಾರಗಳು, ನಂಬಿಕೆಗಳು, ಪದ್ಧತಿಗಳು, ಕಲೆ, ಸಾಹಿತ್ಯ,ಧರ್ಮ, ಪ್ರದೇಶ, ಒಟ್ಟಾರೆ ಇಡೀ ಮಾನವಕುಲದ ವ್ಯವಹಾರಗಳು ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತಿರುತ್ತವೆ. ಮನುಷ್ಯನ ಎಲ್ಲ ನಡವಳಿಕೆಗಳನ್ನು ಔಚಿತ್ಯಪ್ರಜ್ಞೆಯೊಂದಿಗೆ ನಿಯಂತ್ರಿಸುತ್ತ ಪರಿಪೂರ್ಣ ಮನುಷ್ಯನನ್ನಾಗಿ ಮಾಡುವ ದೆಶೆಯಲ್ಲಿ ಮುನ್ನಡೆಸುವ ವಿವೇಕದ ಜೀವಾಳವೇ ಬಸವ ಸಂಸ್ಕೃತಿ.

ಬಸವ ಸಂಸ್ಕೃತಿಯು ವೈವಿಧ್ಯದಲ್ಲಿ ಏಕತೆಯನ್ನು ಗುರುತಿಸುತ್ತದೆ. ದಯವೇ ಧರ್ಮದ ಮೂಲ ಎಂದು ಮಿಡಿಯುತ್ತದೆ. ಈ ಜಗತ್ತು ಮಾನವ ಕೇಂದ್ರಿತವಲ್ಲ ಜೀವಕೇಂದ್ರಿತ ಎಂದು ಸಾರುತ್ತದೆ. ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಮನಸ್ಸುಗಳನ್ನು ಸೃಷ್ಟಿಸುವ ಕ್ರಿಯೆಯಲ್ಲಿ ಸದಾ ತಲ್ಲೀನವಾಗಿರುತ್ತದೆ. ಗಿಡ ಮರ ಬಳ್ಳಿಗಳು, ಸಕಲ ಪ್ರಾಣಿಗಳು ಮತ್ತು ಮನುಷ್ಯರಿಂದ ಕೂಡಿದ ಜೀವಜಾಲ ಸಮತೋಲನಕ್ಕೆ ಧಕ್ಕೆ ಬರದಂತೆ ಬದುಕುವ ಕಲೆಯನ್ನು ಕಲಿಸುತ್ತದೆ.

ಸಹಜ ಧರ್ಮವಾದ ಸಂಸ್ಕೃತಿಯು ಸಾಮಾಜಿಕ ಬದುಕಿನ ತಳಹದಿಯಾಗಿದೆ. ವೈವಿಧ್ಯಗಳಿಂದ ಕೂಡಿದ ಪ್ರಜಾಪ್ರಭುತ್ವದ ತಿರುಳಾಗಿದೆ ಇದು. ಇಂಥ ಮಾನವೀಯ ಸಂಸ್ಕೃತಿಯ ಮೇಲೆ ಜಡಸಂಸ್ಕೃತಿ, ವಿಕೃತಸಂಸ್ಕೃತಿ, ಮತಾಂಧತೆ, ಮೂಲಭೂತವಾದ, ಕೋಮುವಾದ, ಜಾತಿವಾದ, ಧಾರ್ಮಿಕ ದುರಹಂಕಾರ, ಜನಾಂಗದ್ವೇಷ, ಘರ್ಷಣೆ, ಕೊಲೆ, ಸುಲಿಗೆ, ಬಲಾತ್ಕಾರ, ಜನಾಂಗ ಹತ್ಯೆ, ಯುದ್ಧ ಮುಂತಾದ ಅನಿಷ್ಟಗಳು ಹಲ್ಲೆ ಮಾಡುತ್ತಲೇ ಇರುತ್ತವೆ. ವ್ಯಕ್ತಿ, ಸಮಾಜ ಮತ್ತು ಇಡೀ ವಿಶ್ವದ ಉಳಿವಿಗಾಗಿ ಬಸವ ಸಂಸ್ಕೃತಿಯನ್ನು ಸಂರಕ್ಷಿಸುತ್ತ ಮುನ್ನಡೆಯಬೇಕಿದೆ.

ಇದನ್ನು ಓದಿ ಶಕ್ತಿ ಕೇಂದ್ರ ವಿಧಾನಸೌಧ ಮುಂದೆ ‘ಜನಸ್ಪಂದನಾ’ ಕಾರ್ಯಕ್ರಮ ಆರಂಭ, ಹರಿದುಬರುತ್ತಿರುವ ಜನ

ರಕ್ತಪಾದವಿಲ್ಲದ ಮತ್ತು ನಿಸ್ವಾರ್ಥ ಪ್ರೇಮದಿಂದ ಕೂಡಿದ ಜಗತ್ತನ್ನು ಸೃಷ್ಟಿಸುವುದೇ ಬಸವಾದಿ ಶರಣರು, ಸಂತರು, ಸೂಫಿಸಂತರು, ದಾಸರು ಹಾಗೂ ಲಿಂಗ, ಭಾಷೆ, ಧರ್ಮ, ದೇಶ ಭೇದಗಳಿಲ್ಲದ ಮತ್ತು ಜಾತಿ, ವರ್ಣಗಳಿಲ್ಲದ ಸಮಾಜವನ್ನು ಬಯಸುವವರು ಇಂಥ ಸಂಸ್ಕೃತಿಯ ಪ್ರತಿಪಾದಕರಾಗಿರುತ್ತಾರೆ.

ಇಂಥ ಬಹುಮುಖಿ ಸಂಸ್ಕೃತಿಯ ತಿರುಳಿನೊಂದಿಗೆ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಇಲ್ಲದಿದ್ದರೆ ದೇಶವು ಧರ್ಮಾಂಧ ಫ್ಯಾಸಿಸ್ಟ್‌ ಶಕ್ತಿಗಳ ಹಿಡಿತಕ್ಕೆ ಸಿಲುಕಿ ನಲಗುವುದರಲ್ಲಿ ಸಂಶಯವಿಲ್ಲ. ಇಂಥ ದ್ವೇಷ ಹಬ್ಬಿಸುವ ಶಕ್ತಿಗಳಿಂದ ಭಾರತದ ಭಾವೈಕ್ಯಕ್ಕೆ ಮತ್ತು ಸಮಗ್ರತೆಗೆ ಧಕ್ಕೆ ಒದಗುವುದೆಂಬುದನ್ನು ಜನಸಮುದಾಯ ಅರಿತುಕೊಳ್ಳುವುದು ಅವಶ್ಯವಾಗಿದೆ. ಇದು ಬಸವ ಸಂಸ್ಕೃತಿಯಿಂದ ಸಾಧ್ಯ.

ರಂಜಾನ್‌ ದರ್ಗಾ
+ posts

ಸಾಹಿತಿ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದೂಸ್ಥಾನ್ ಕೋ ಲೀಡರೋ ಸೆ ಬಚಾವೋ: ಎಲ್ಲ ಕಾಲಕ್ಕೂ ಸಲ್ಲುವ ಮಂಟೋ ಚಿಂತನೆ 

"ಧರ್ಮ, ಧರ್ಮ"ವೆಂದು ಸದಾ ಅರಚುವ ನಾಯಕರು ಯಾವ ಧಾರ್ಮಿಕ ಬೋಧನೆಯನ್ನು ನಿಷ್ಠೆಯಿಂದ...

ಕೃಷಿ ಸಚಿವರ ಸೂಚನೆಯನ್ನು ಗೌರವಿಸದ ಕುಲಪತಿ: ಕೃಷಿ ವಿವಿಗಳಿಗೇ ‘ಕಿಸಾನ್ ಸತ್ಯಾಗ್ರಹ’ ಬೇಡವಾಯಿತೇ?

ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದ ಹೋರಾಟದ 'ಕಿಸಾನ್ ಸತ್ಯಾಗ್ರಹ'ವನ್ನು ನೋಡುವ, ಆ ಮೂಲಕ...

ಸತ್ಯಶೋಧನೆ | ಮಂಗಳೂರಿನ ಸೇಂಟ್‌ ಜೆರೋಸಾ ಶಾಲೆ ಹಿಂದೂ ವಿರೋಧಿಯೇ?

ಇಲ್ಲಿ ಶಿಕ್ಷಕಿಯ ಮೇಲಿನ ಆರೋಪ ಮತ್ತು ತನಿಖೆ ಇಷ್ಟೇ ವ್ಯಾಪ್ತಿಯಲ್ಲಿರಬೇಕಾದ ವಿಚಾರ,...

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಸ್ವಾಯತ್ತತೆ ಉಳಿಸಿಕೊಳ್ಳಲೋ, ಸ್ವಪ್ರತಿಷ್ಠೆ ಪ್ರದರ್ಶಿಸಲೋ?

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ತನ್ನ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕು. ಹಾಗೇ ಅದು ನಿಷ್ಪಕ್ಷಪಾತವಾಗಿ...