ಹಗರಣಗಳ ಸುಳಿಯಲ್ಲಿ ಕೇಂದ್ರ ಸಚಿವ ಎಚ್‌ಡಿಕೆ; ರಾಜಕೀಯದಲ್ಲಿ ಭ್ರಷ್ಟಾಚಾರದ ಕಾರ್ಮೋಡ

Date:

Advertisements
ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಕಳೆದೊಂದು ವರ್ಷದಿಂದ ಕೇಂದ್ರ ಕೈಗಾರಿಕಾ ಸಚಿವರಾಗಿದ್ದಾರೆ. ಈ ಅವಧಿಯಲ್ಲಿ ಅವರು ತಾವು ಮಾಡುತ್ತಿರುವ ಕೆಲಸಗಳಿಗಿಂತ ಹೆಚ್ಚಾಗಿ ಹಗರಣ ಆರೋಪ ಮತ್ತು ತನಿಖೆಯಿಂದಲೇ ಸುದ್ದಿಯಾಗುತ್ತಿದ್ದಾರೆ. ಬರೋಬ್ಬರಿ ನಾಲ್ಕು ಹಗರಣಗಳಲ್ಲಿ ಕುಮಾರಸ್ವಾಮಿ ಅವರು ಆರೋಪಿಯಾಗಿದ್ದಾರೆ.

ಒಂದು, ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಹಗರಣದಲ್ಲಿ ಕುಮಾರಸ್ವಾಮಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಎರಡು, ಎಸ್‌ಎಸ್‌ವಿಎಂ ಗಣಿಗಾರಿಕೆ ಹಗರಣದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ; ಪ್ರಾಷಿಕ್ಯೂಷನ್‌ಗೆ ರಾಜ್ಯಪಾಲರು ಅನುಮೋದನೆ ನೀಡುವ ಸಾಧ್ಯತೆ ಇದೆ. ಮೂರು, ಗಂಗೇನಹಳ್ಳಿ ಡಿನೋಟಿಫಿಕೇಷನ್ ಹಗರಣದ ತನಿಖೆಯನ್ನು ಲೋಕಾಯುಕ್ತ ಚುರುಕುಗೊಳಿಸಿದೆ. ನಾಲ್ಕು, ಸರ್ಕಾರಿ ಭೂಮಿ ಒತ್ತುವರಿ ಹಗರಣದಲ್ಲಿ ತನಿಖೆ-ಸರ್ವೇಗಳು ನಡೆಯುತ್ತಿದ್ದು, ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ವಿಶೇಷ ಎಂದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ 2 ವರ್ಷಗಳಲ್ಲೇ ಮೂರು ಹಗರಣಗಳನ್ನು ನಡೆಸಿ, ಆರೋಪಿಯಾಗಿದ್ದಾರೆ.

ಮುಖ್ಯವಾಗಿ, ಬೆಂಗಳೂರಿನ ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಅತ್ಯುನ್ನತ ನ್ಯಾಯಾಲಯದಲ್ಲಿ ಹಿನ್ನಡೆ ಅನುಭವಿಸಿರುವ ಎಚ್.ಡಿ ಕುಮಾರಸ್ವಾಮಿ ಅವರ ನೆತ್ತಿಯ ಮೇಲೆ ತನಿಖೆಗೆ ತೂಗುಗತ್ತಿ ತೂಗುತ್ತಿದೆ.

ಹಗರಣ 1: ಹಲಗವಡೇರಹಳ್ಳಿ ಡಿನೋಫಿಕೇಷನ್

Advertisements

ಕುಮಾರಸ್ವಾಮಿ ಅವರು 2006 ಮತ್ತು 2008ರ ನಡುವೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಆಗ, ಬೆಂಗಳೂರಿನ ಹಲಗೆವಡೇರಹಳ್ಳಿಯಲ್ಲಿನ ಸರ್ವೇ ನಂ. 128, 137ರಲ್ಲಿನ 2.24 ಎಕರೆ ಭೂಮಿ ಬಿಡಿಎ ಸ್ವಾಧೀನದಲ್ಲಿತ್ತು. ಆ ಜಮೀನನ್ನು 2007ರಲ್ಲಿ ಕುಮಾರಸ್ವಾಮಿ ಕಾನೂನುಬಾಹಿರವಾಗಿ ಡಿನೋಟಿಫಿಕೇಷನ್ ಮಾಡಿದ್ದರು. ಖಾಸಗಿ ಬಿಲ್ಡರ್‌ಗಳಿಗೆ ದೊರೆಯುವಂತೆ ಮಾಡಿದ್ದರು.

ಈ ಹಗರಣದ ಕುರಿತು 2012ರಲ್ಲಿ ಮಹದೇವಸ್ವಾಮಿ ಎಂಬವರು ದಾಖಲೆಗಳ ಸಮೇತ ಲೋಕಾಯುಕ್ತದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಎ1 ಆರೋಪಿ ಕುಮಾರಸ್ವಾಮಿ ಆಗಿದ್ದರೆ, ಪದ್ಮಾ, ಶ್ರೀದೇವಿ, ಚೇತನ್‌ಕುಮಾರ್‌, ಕೆ.ಬಿ ಶಾ೦ತಮ್ಮ, ಎಸ್‌.ರೇಖಾಚ೦ದ್ರು, ಯೋಗಮೂರ್ತಿ, ಬಿ.ನರಸಿ೦ಹಲುನಾಯ್ಡು, ಆರ್‌. ಬಾಲಕೃಷ್ಣ, ಟಿ. ಮುರುಳಿಧರ್‌, ಜಿ. ಮಲ್ಲಿಕಾರ್ಜುನ, ಇ.ಎ ಯೋಗೇ೦ದ್ರನಾಥ, ಪಿ.ಜಗದೀಶ, ಡಿ.ಎಸ್‌ ದೀಪಕ್‌, ಎ೦.ಸುಬ್ರಮಣಿ, ಬಾಲಾಜಿ ಇನ್ಫಾ, ಶುಭೋದಯ ಬಿಲ್ದರ್ಸ್‌, ಸನ್‌ರೈಸ್‌ ಬಿಲ್ದರ್ಸ್‌ ಮತ್ತು ಆರತಿ ಡೆವಲಪರ್ಸ್‌ನ ಪ್ರಮುಖರನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ತನಿಖೆಯೂ ನಡೆಯುತ್ತಿತ್ತು.

ಆದಾಗ್ಯೂ, 2018ರಲ್ಲಿ ಮತ್ತೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದರು. ಆಗ, 2019ರಲ್ಲಿ ಪ್ರಕರಣವನ್ನು ರದ್ದುಗೊಳಿಸಲು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದರು. ಅದನ್ನು ಪ್ರಶ್ನಿಸಿದ ದೂರುದಾರ ಮಹಾದೇವಸ್ವಾಮಿ ಹಲವಾರು ದಾಖಲೆಗಳನ್ನು ಹೈಕೋರ್ಟ್‌ ಮುಂದಿಟ್ಟಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್‌, ಲೋಕಾಯುಕ್ತಕ್ಕೆ ಚಾಟಿ ಬೀಸಿತ್ತು. ಬಿ ರಿಪೋರ್ಟ್‌ಅನ್ನು ತಿರಸ್ಕರಿಸಿ, ಪ್ರಕರಣ ಕೂಲಂಕಷ ತನಿಖೆಗೆ ಸೂಚಿಸಿತು. ವಿಚಾರಣೆಯನ್ನು ಮುಂದುವರೆಸಿತು.

ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಕುಮಾರಸ್ವಾಮಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಕೂಡ ಕುಮಾರಸ್ವಾಮಿ ಅವರ ಅರ್ಜಿಯನ್ನು ವಜಾಗೊಳಿಸಿದೆ. ಹೈಕೋರ್ಟ್‌ ಆದೇಶದಂತೆ ತನಿಖೆಯನ್ನು ಮುಂದುವರೆಸಲು ಸೂಚಿಸಿದೆ.

ಹಗರಣ 2:  ‘ಸಾಯಿ ವೆಂಕಟೇಶ್ವರ ಮಿನರಲ್ಸ್’ ಬೋಗಸ್ ಕಂಪನಿಗೆ ಗಣಿಗಾರಿಕೆ ಗುತ್ತಿಗೆ

ಹಲಗೆವಡೇರಹಳ್ಳಿ ಹಗರಣದಲ್ಲಿ ಕುಮಾರಸ್ವಾಮಿ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿರುವ ನಡುವೆಯೇ, ಮತ್ತೊಂದು ಹಗರಣದ ತನಿಖೆಯೂ ಚುರುಕುಗೊಳ್ಳುತ್ತಿದೆ. ಬೋಗಸ್‌ ಕಂಪನಿಗೆ ಗಣಿಗಾರಿಕೆ ನಡೆಸಲು 550 ಎಕರೆ ಭೂಮಿ ಗುತ್ತಿಗೆ ನೀಡಿದ್ದ ಹಗರಣದಲ್ಲಿ ಕುಮಾರಸ್ವಾಮಿ ಪ್ರಾಷಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ರಾಜ್ಯಪಾಲರಿಗೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದೆ.

ಈ ಹಗರಣವಂತೂ ಭಾರೀ ಕುತೂಹಲಕಾರಿ ಪ್ರಕರಣ. ಯಾಕೆಂದರೆ, ಈ ಹಗರಣದ ತನಿಖೆಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರು ಬರೋಬ್ಬರಿ 10 ತಿಂಗಳು ಬಚ್ಚಿಟ್ಟಿದ್ದರು. ಅಲ್ಲದೆ, ಈ ಹಗರಣವು ಕುಮಾರಸ್ವಾಮಿ ಮತ್ತು ಎಡಿಜಿಪಿ ಚಂದ್ರಶೇಖರ್ ನಡುವೆ ಬಹಿರಂಗ ತಿಕ್ಕಾಟವನ್ನೂ ಸೃಷ್ಟಿಸಿತ್ತು.

ಗೊತ್ತೇ ಇರುವಂತೆ 2007ರಲ್ಲಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ಸಮಯದಲ್ಲಿ, 2007 ರ ಅಕ್ಟೋಬರ್ 5ರಂದು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ (ಎಸ್ಎಸ್‌ವಿಎಂ) ಹೆಸರಿನ ಕಂಪನಿಗೆ ಸಂಡೂರು ತಾಲೂಕಿನಲ್ಲಿ ಗಣಿಗಾರಿಕೆ ನಡೆಸಲು ಬರೋಬ್ಬರಿ 550 ಎಕರೆ ಅರಣ್ಯ ಭೂಮಿಯನ್ನು ಗುತ್ತಿಗೆಗೆ ಮಂಜೂರು ಮಾಡಿದ್ದರು. ಈ ಮಂಜೂರಾತಿಯಲ್ಲಿ ನಿಮಯಗಳನ್ನು ಉಲ್ಲಂಘಿಸಲಾಗಿದೆ ಎಂಬುದು ವಾಸ್ತವದ ಆರೋಪ.

ಕಂಪನಿಗೆ ಭೂಮಿ ಮಂಜೂರು ಮಾಡಿದ್ದ ಕುಮಾರಸ್ವಾಮಿ ಅವರು, ”ನಾನು ದಾಖಲೆಗಳನ್ನು ಪರಿಶೀಲಿಸಿದ್ದೇನೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜೋಗ್, ತಿಮ್ಮಪ್ಪಗುಡಿಯಲ್ಲಿ 550 ಎಕರೆ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಎಸ್ಎಸ್ವಿಎಂ ಕಂಪನಿಗೆ ಗುತ್ತಿಗೆ ಮಂಜೂರು ಮಾಡಲಾಗಿದೆ” ತಮ್ಮ ಸಹಿಯೊಂದಿಗೆ ಆದೇಶ ಹೊರಡಿಸಿದ್ದರು.

image 44

ಆದರೆ, ಎಸ್ಎಸ್‌ವಿಎಂ ಒಂದು ಬೋಗಸ್‌ ಕಂಪನಿ ಎಂಬುದು ಕೆಲವೇ ದಿನಗಳಲ್ಲಿ ಬೆಳಕಿಗೆ ಬಂದಿತು. ಗಮನಾರ್ಹವಾಗಿ, ಈ ಕಂಪನಿಯ ಮಾಲೀಕನೆಂದು ಹೇಳಿಕೊಂಡಿದ್ದ ಸೋಮನಾಥ್ ವಿ ಸಕರೆ ಎಂಬಾತ 2004ರ ಏಪ್ರಿಲ್ 17ರಂದು ಗಣಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ತಮ್ಮದು ಸಂಡೂರು ಮೂಲದ ಗಣಿಗಾರಿಕೆ ಮತ್ತು ಉಕ್ಕು ಉತ್ಪಾದನೆ ಕಂಪನಿಯಾಗಿದೆ. ನಮ್ಮ ಕಂಪನಿಗೆ ಸಂಡೂರು ತಾಲೂಕಿನಲ್ಲಿ ಗಣಿಗಾರಿಕೆ ನಡೆಸಲು 550 ಎಕರೆ ಭೂಮಿ ಮಂಜೂರು ಮಾಡಬೇಕೆಂದು ಅರ್ಜಿಯಲ್ಲಿ ಕೋರಿದ್ದರು. ಆದರೆ, ಅವರ ಅರ್ಜಿಯನ್ನು ಅಂದಿನ ಸರ್ಕಾರ ಪರಿಗಣಿಸಿರಲಿಲ್ಲ.

ಆದರೆ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ, ಅರ್ಜಿ ಮತ್ತೆ ಮುನ್ನೆಲೆ ಬಂದಿತು. ವಿನೋದ್ ಗೋಯಲ್ ಎಂಬ ಮತ್ತೊಬ್ಬ ವ್ಯಕ್ತಿ ತಾನೇ ಎಸ್ಎಸ್‌ವಿಎಂ ಕಂಪನಿಯ ಮಾಲೀಕ ಎಂದು ಹೇಳಿಕೊಂಡು ಗಣಿ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸೋಮನಾಥ್ ಸಕರೆಯ ಅರ್ಜಿಯನ್ನು ಬದಲಾಯಿಸಿ ಗಣಿಗಾರಿಕೆ ಮಂಜೂರಾತಿಗಾಗಿ ಮತ್ತೊಂದು ಅರ್ಜಿ ಸಲ್ಲಿಸಿದರು.

ಆ ಸಮಯದಲ್ಲಿ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡುವ ವಿಚಾರವಾಗಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ನಡುವೆ ತಿಕ್ಕಾಟ ನಡೆಯುತ್ತಿತ್ತು. ಆದಾಗ್ಯೂ, ಆ ಅರ್ಜಿಯನ್ನು ಪರಿಗಣಿಸಿದ ಕುಮಾರಸ್ವಾಮಿ ಅವರು 2007ರ ಅಕ್ಟೋಬರ್ 5ರಂದು ಆ ಬೋಗಸ್ ಕಂಪನಿಗೆ ಮಂಜೂರಾತಿ ಆದೇಶ ಮಾಡಿದರು. ಅದಾದ, ಮೂರೇ ದಿನದಲ್ಲಿ ಅಂದರೆ, 2007ರ ಅಕ್ಟೋಬರ್ 8ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ ಕೇವಲ ಮೂರು ದಿನಗಳ ಮುಂಚೆ ಕಂಪನಿಗೆ ಭೂಮಂಜೂರಾತಿ ಆದೇಶ ನೀಡಿದ್ದೇ ಹಗರಣದ ಪ್ರಮುಖ ಅಂಶ. ಅದೇನೇ ಇರಲಿ, ಎಸ್‌ಎಸ್‌ವಿಎಂ ಎಂಬ ಹೆಸರಿನ ಒಂದು ಕಂಪನಿಯೇ ಅಸ್ತಿತ್ವದಲ್ಲಿರಲಿಲ್ಲ ಎಂಬುದು ಕಟುವಾಸ್ತವ.

ಈ ವರದಿ ಓದಿದ್ದೀರಾ?: ಮಾಜಿ ಸಿಎಂ ಕುಮಾರಸ್ವಾಮಿ ಅನುಮೋದಿಸಿದ್ದ ಬೋಗಸ್ ಕಂಪನಿಯ ಇತಿಹಾಸ

ಗಣಿಗಾರಿಕೆ ಹಗರಣದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಲೋಕಾಯುಕ್ತ ತನಿಖಾಧಿಕಾರಿ ಡಾ. ಯು.ವಿ.ಸಿಂಗ್ ನೇತೃತ್ವದ ತಂಡವು ಎಸ್‌ಎಸ್‌ವಿಎಂ ಎಂಬ ಕಂಪನಿಯೇ ಇಲ್ಲವೆಂದು ಕಂಡುಹಿಡಿದಿತ್ತು. ತನ್ನ ವರದಿಯಲ್ಲಿ, ”ಈ ಬೋಗಸ್ ಕಂಪನಿಯ ಮಾಲೀಕ ತಾನು ಗಣಿಗಾರಿಕೆ ಮತ್ತು ಉಕ್ಕು ಕೈಗಾರಿಕೆಯಲ್ಲಿರುವ ಉದ್ಯಮಿ ಅಲ್ಲವೆಂದೂ, ಮಹಾರಾಷ್ಟ್ರದಲ್ಲಿ PWD ಗುತ್ತಿಗೆದಾರನೆಂದೂ ತಪ್ಪೊಪ್ಪಿಕೊಂಡಿದ್ದಾರೆ. ಅಸಲಿಗೆ ಎಸ್‌ಎಸ್‌ವಿಎಂ ನೋಂದಾಯಿತ ಕಂಪನಿಯೇ ಅಲ್ಲ; ನೋಂದಾವಣೆಯೇ ಇಲ್ಲದ ಒಂದು ಪಾಲುದಾರಿಕಾ ಸಂಸ್ಥೆ. ಈ ಸಂಸ್ಥೆಗೆ ಒಂದು ಬ್ಯಾಂಕ್ ಅಕೌಂಟ್ ಕೂಡ ಇಲ್ಲ. ಇದರ ಮತ್ತೊಬ್ಬ ಪಾಲುದಾರ ರಾಜಕುಮಾರ್ ಅಗರವಾಲ್. ಅರ್ಜಿಯಲ್ಲಿ ನಮೂದಿಸಿದ್ದ ಕಂಪನಿ ವಿಳಾಸವೂ ಕೂಡ ಬೋಗಸ್ ಆಗಿದೆ. ಆದಾಗ್ಯೂ, ಎಸ್ಎಸ್‌ವಿಎಂ ಎಂಬ ಬೋಗಸ್ ಕಂಪನಿಗೆ ಗಣಿಗಾರಿಕೆ ನಿಯಮ ನಿಯಮ 59 (2)ಅನ್ನು ಉಲ್ಲಂಘಿಸಿ 550 ಎಕರೆ ಭೂಮಿಯನ್ನು ಗುತ್ತಿಗೆಗೆ ನೀಡಲಾಗಿದೆ” ಎಂದು ವಿವರಿಸಿತ್ತು. ಮಾತ್ರವಲ್ಲದೆ, ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿತ್ತು.

ನಂತರದಲ್ಲಿ, ಎಡಿಜಿಪಿ ಚಂದ್ರಶೇಖರ್ ನೇತೃತ್ವದಲ್ಲಿ ಲೋಕಾಯುಕ್ತ ಎಸ್‌ಐಟಿ ರಚನೆ ಮಾಡಿ, ಸರ್ಕಾರ ತನಿಖೆಗೆ ಆದೇಶಿಸಿತ್ತು. ಕುಮಾರಸ್ವಾಮಿ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದ ಎಸ್‌ಐಟಿ, ಕುಮಾರಸ್ವಾಮಿ ಅವರನ್ನು 2015ರಲ್ಲಿ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಅದಾದ ಬಳಿಕ, ನಿರಂತರವಾಗಿ ಸಮಗ್ರ ತನಿಖೆ ನಡೆಸಿದ ಎಸ್‌ಐಟಿ, ಕುಮಾರಸ್ವಾಮಿ ತಪ್ಪಿತಸ್ಥರು ಎಂಬ ತೀರ್ಮಾನಕ್ಕೆ ಬಂದಿತು. ಚಾರ್ಜ್‌ಶೀಟ್‌ಅನ್ನೂ ಸಲ್ಲಿಸಿತು. 2023ರ ನವೆಂಬರ್‌ 21ರಂದು ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿತು. ಆದರೆ, ಆ ಪತ್ರವನ್ನು ಬಚ್ಚಿಟ್ಟಿದ್ದ ರಾಜ್ಯಪಾಲ ಗೆಹ್ಲೋಟ್‌ ಅವರು 10 ತಿಂಗಳ ಕಾಲ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆನಂತರ, 2024ರ ಆಗಸ್ಟ್‌ನಲ್ಲಿ ಪತ್ರ ಮತ್ತು ಅದರಲ್ಲಿರುವ ದಾಖಲೆಗಳು ಕನ್ನಡದಲ್ಲಿವೆ. ಅದನ್ನು ಇಂಗ್ಲಿಷ್‌ಗೆ ಅನುವಾದ ಮಾಡಿಸಿ, ಮತ್ತೊಮ್ಮೆ ಶಿಫಾರಸು ಕಳಿಸುವಂತೆ ರಾಜ್ಯಪಾಲರು ಕೇಳಿದ್ದರು.

ಈ ವರದಿ ಓದಿದ್ದೀರಾ?: ಎಚ್‌ಡಿಕೆ ಅಧಿಕಾರ ದುರುಪಯೋಗ; ಎಡಿಜಿಪಿ ಚಂದ್ರಶೇಖರ್ ದಾಖಲಿಸಿದ ದೂರಿನಲ್ಲಿವೆ ಗಂಭೀರ ಆರೋಪಗಳು!

ಇದೀಗ, ಲೋಕಾಯುಕ್ತ ಪೊಲೀಸರು ಅರ್ಜಿ ಮತ್ತು ಅಗತ್ಯ ದಾಖಲೆಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿಸಿದ್ದಾರೆ. ಹೊಸ ಶಿಫಾರಸು ಅರ್ಜಿಯನ್ನು ರಾಜ್ಯಪಾಲರಿಗೆ ಕಳಿಸಿದ್ದಾರೆ. ಇಂಗ್ಲಿಷ್ ಪ್ರತಿಗಳನ್ನು ಓದಿಯಾದರೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವರೇ ಅಥವಾ ಮತ್ತೊಂದು ಕಾರಣ ನೀಡಿ, ತಡೆಯೊಡ್ಡುವರೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿದೆ.

ಇದೆಲ್ಲದರ ನಡುವೆ, ಕುಮಾರಸ್ವಾಮಿ ವಿರುದ್ಧದ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಎಡಿಜಿಪಿ ಚಂದ್ರಶೇಖರ್ ಮತ್ತು ಕುಮಾರಸ್ವಾಮಿ ನಡುವೆ ಬಹಿರಂಗ ವಾಕ್ಸಮರವೇ ನಡೆದಿವೆ. ತನಿಖಾಧಿಕಾರಿ ವಿರುದ್ಧ ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಗಳನ್ನು ಮಾಡಿ, ನಾನಾ ರೀತಿಯ ಆರೋಪ ಮಾಡಿದ್ದಾರೆ. ತುಚ್ಛವಾಗಿ ನಿಂದಿಸಿದ್ದಾರೆ. ತಮ್ಮನ್ನು ನಿಂದಿಸಿರುವ ಕುಮಾರಸ್ವಾಮಿ ವಿರುದ್ಧ ಚಂದ್ರಶೇಖರ್ ಅವರು ಬೆಂಗಳೂರಿನ ಸಂಜಯ್ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದಾರೆ. ಈ ಹಗರಣವನ್ನು ಈದಿನ.ಕಾಮ್‌ ಬಯಲಿಗೆಳೆದು ಎಳೆ-ಎಳೆಯಾಗಿ ವಿವರಿಸಿದೆ.

ಹಗರಣ 3: ಗಂಗೇನಹಳ್ಳಿ ಡಿನೋಟಿಫಿಕೇಷನ್ – ಇಬ್ಬರು ಮಾಜಿ ಸಿಎಂಗಳ ಕರಾಮತ್ತು

ಈ ಹಗರಣವೂ ಕುಮಾರಸ್ವಾಮಿ ಅವರು 2007ರಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೇ ನಡೆದದ್ದು ಎಂಬುದು ಗಮನಾರ್ಹ. ಈ ಹಗರಣವನ್ನೂ ಈದಿನ.ಕಾಮ್‌ ಬೆಳಕಿಗೆ ತಂದಿದ್ದು, ಸರಣಿ ಲೇಖನಗಳ ಮೂಲಕ ಹಗರಣದ ಬಗ್ಗೆ ವಿಸ್ತೃತವಾಗಿ ವಿವರಿಸಿದೆ. ಬೆಂಗಳೂರಿನ ಗಂಗಾನಗರದ ಸರ್ವೇ ನಂ. 7/1B, 7/1C ಮತ್ತು 7/1Dನಲ್ಲಿದ್ದ 1.11 ಎಕರೆ ಭೂಮಿಯನ್ನು ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರೂ ಜಂಟಿಯಾಗಿ ಬೇನಾಮಿ ಅರ್ಜಿಯ ಮೇಲೆ ಡಿನೋಟಿಫೈ ಮಾಡಿ, ಕುಮಾರಸ್ವಾಮಿ ಅವರ ಸಂಬಂಧಿ ಹೆಸರಿಗೆ ನೋಂದಣಿ ಮಾಡಿಕೊಟ್ಟಿದ್ದ ಹಗರಣ ಇದು.

ಗಂಗಾನಗರ (ಗಂಗೇನಹಳ್ಳಿ)ದಲ್ಲಿ ಡಿನೋಟಿಫೈ ಮಾಡಲಾಗಿದ್ದ 1.11 ಎಕರೆ ಭೂಮಿಯು ಮೂಲತಃ ತಿಮ್ಮಾರೆಡ್ಡಿ, ನಾಗಪ್ಪ ಅಲಿಯಾಸ್‌ ನಾಗಪ್ಪ ರೆಡ್ಡಿ ಮತ್ತು ಮುನಿಸ್ವಾಮಪ್ಪ ಎನ್ನುವವರಿಗೆ ಸೇರಿದ್ದು. ಈ ಭೂಮಿಯನ್ನು ಬಡಾವಣೆ ನಿರ್ಮಾಣಕ್ಕಾಗಿ 1976ರಲ್ಲಿ ಬಿಡಿಎ ತನ್ನ ಸುಪರ್ದಿಗೆ ತೆಗೆದುಕೊಂಡು, ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 1988ರ ಏಪ್ರಿಲ್ 21ರಂದು ಭೂಸ್ವಾಧೀನ ಕಾಯ್ದೆಯ ಸೆಕ್ಷನ್‌ 16 (2) ಅಡಿಯಲ್ಲಿ ಅಂತಿಮ ಗೆಜೆಟ್‌ ನೋಟಿಫಿಕೇಷನ್‌ಅನ್ನೂ ಹೊರಡಿಸಲಾಗಿತ್ತು.

ಬಿಡಿಎ ಸ್ವಾಧೀನಪಡಿಸಿಕೊಂಡು ಬರೋಬ್ಬರಿ 31 ವರ್ಷಗಳ ಬಳಿಕ, ಆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಬೇಕೆಂದು 2007ರಲ್ಲಿ ರಾಜಶೇಖರಯ್ಯ ಎಂಬ ಬೇನಾಮಿ ಹೆಸರಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅರ್ಜಿಯನ್ನು ಪಡೆದರು. 2007ರ ಆಗಸ್ಟ್‌ 22ರಂದು ಡಿನೋಟಿಫಿಕೇಷನ್‌‌ ‘ಫೈಲ್‌ ನಂ. ಯುಡಿಡಿ 424 ಬೆಂಭೂಸ್ವಾ 2007’ ಸೃಷ್ಟಿ ಮಾಡಿ, ಅದೇ ದಿನ ತ್ವರಿತವಾಗಿ ದಾಖಲೆಗಳನ್ನು ಸಿದ್ಧಪಡಿಸಿಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗಂಗೇನಹಳ್ಳಿ

ಅದಾದ ಎರಡೇ ವಾರದಲ್ಲಿ (2007 ಸೆಪ್ಟೆಂಬರ್ 10) ಅದೇ ಭೂಮಿಗೆ ತಿಮ್ಮಾರೆಡ್ಡಿ, ನಾಗಪ್ಪ, ಮುನಿಸ್ವಾಮಪ್ಪ ಅವರ 21 ಮಂದಿ ವಾರಸುದಾರರಿಂದ ವಿಮಲ ಎನ್ನುವವರು ಜಿಪಿಎ ಪಡೆದುಕೊಂಡಿದ್ದರು. ಈ ವಿಮಲ ಬೇರೆ ಯಾರೂ ಅಲ್ಲ, ಕುಮಾರಸ್ವಾಮಿ ಪತ್ನಿ ಅನಿತಾ ಅವರ ತಾಯಿ. ಮತ್ತೊಂದು ವಿಚಾರ ಎಂದರೆ, ಡಿನೋಟಿಫಿಕೇಷನ್‌ಗಾಗಿ ಅರ್ಜಿ ಸಲ್ಲಿಸಿದ್ದ ರಾಜಶೇಖರಯ್ಯ ಎಂಬ ವ್ಯಕ್ತಿಗೂ ಆ ಜಮೀನಿಗೂ ಸಂಬಂಧವೇ ಇರಲಿಲ್ಲ ಎಂಬುದು ಇದೇ ವಿಮಲ ಅವರು ಪಡೆದ ಜಿಪಿಎಯಿಂದಲೇ ಬಹಿರಂಗವಾಗಿದೆ. ಅವರು ಜಿಪಿಎ ಪಡೆದಾಗ ಸಹಿ ಹಾಕಿದ್ದ 21 ಮಂದಿ ವಾರಸುದಾರರಲ್ಲಿ ರಾಜಶೇಖರಯ್ಯ ಎಂಬವರ ಹೆಸರು/ಸಹಿ ಯಾವುದೂ ಇರಲಿಲ್ಲ.

ಇನ್ನು, ಕುಮಾರಸ್ವಾಮಿ ಅವರು ಡಿನೋಟಿಫಿಕೇಷನ್‌ಗಾಗಿ ತರಾತುರಿ ನಡೆಸಿದ್ದರು. ಆದರೆ, ಅಧಿಕಾರಿಗಳು ಅವರ ಮಾತು ಕೇಳದೆ, ಕಡತವನ್ನು ಕಾನೂನುಬದ್ಧ ಪರಿಶೀಲನೆ ಮಾಡಿ, ಸಹಿ ಹಾಕುತ್ತಿದ್ದರು. ಹೀಗಾಗಿಯೇ, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಜ್ಯೋತಿ ರಾಮಲಿಂಗಂ ಅವರು ಕುಮಾರಸ್ವಾಮಿ ಅವರ ಒತ್ತಡಕ್ಕೆ ಸೊಪ್ಪು ಹಾಕದೆ, ”…This is not a fit case for consideration” (ಡಿನೋಟಿಫಿಕೇಷನ್‌ಗೆ ಪರಿಗಣಿಸಲು ಈ ಪ್ರಕರಣ ಅರ್ಹವಾಗಿಲ್ಲ) ಎಂದು ಸ್ಪಷ್ಟವಾಗಿ ಬರೆದಿದ್ದರು. ಕೇವಲ ಜ್ಯೋತಿ ರಾಮಲಿಂಗಂ ಮಾತ್ರವಲ್ಲದೆ, ವಿವಿಧ ಹಂತಗಳಲ್ಲಿ ಹಲವು ಅಧಿಕಾರಿಗಳು ಕೂಡ ಹೀಗೆಯೇ ಬರೆದಿದ್ದರು.

ಇದೆಲ್ಲದರ ನಡುವೆ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ 2008ರಲ್ಲಿ ಚುನಾವಣೆ ನಡೆದು, ಬಿಜೆಪಿ ಗೆದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಆಗ ಮತ್ತೆ ಪ್ರಕರಣ ಮುನ್ನಲೆಗೆ ಬಂದಿತು. 2010ರಲ್ಲಿ ಆ ಭೂಮಿಯನ್ನು ಡಿನೋಟಿಫೈ ಮಾಡಿ ಯಡಿಯೂರಪ್ಪ ಆದೇಶ ಹೊರಡಿಸಿದರು. ಜೊತೆಗೆ, ಅದನ್ನು ಕುಮಾರಸ್ವಾಮಿ ಅವರ ಬಾಮೈದ ಟಿ.ಎಸ್‌ ಚನ್ನಪ್ಪ ಹೆಸರಿಗೆ ನೋಂದಣಿಯನ್ನೂ ಮಾಡಿಸಿದರು.

ಗಂಗಾ

ಗಂಗೇನಹಳ್ಳಿ ಭೂಮಿಯ ಡಿನೋಟಿಫಿಕೇಷನ್‌ನಲ್ಲಿ ಹಗರಣ ನಡೆದಿದೆ ಎಂಬುದನ್ನು ಗಮನಿಸಿದ ಜಯಕುಮಾರ್‌ ಹಿರೇಮಠ್‌ ಎಂಬವರು 2015 ರ ಏಪ್ರಿಲ್‌ 30ರಂದು ಲೋಕಾಯುಕ್ತಕ್ಕೆ ದೂರು ನೀಡಿದರು. ಆರೋಪಿಗಳಲ್ಲಿ ಎ1 ಬಿ.ಎಸ್‌ ಯಡಿಯೂರಪ್ಪ, ಎ2 –  ಎಚ್‌.ಡಿ ಕುಮಾರಸ್ವಾಮಿ, ಎ3 – ಶ್ರೀಮತಿ ವಿಮಲಾ, ಎ4 – ಟಿ.ಎಸ್‌ ಚನ್ನಪ್ಪ, ಎ5 ರಾಜಶೇಖರಯ್ಯ ಆರೋಪಿಗಳೆಂದು ಹೆಸರಿಸಲಾಗಿದೆ.

ಆದರೆ, ಹಗರಣದ ತನಿಖೆ ಮಾತ್ರ ಆರಂಭವಾಗಲೇ ಇಲ್ಲ. ಆದಾಗ್ಯೂ, 2017ರಲ್ಲಿ ತಮ್ಮ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಯಡಿಯೂಡಿರಪ್ಪ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನಿರಂತರ, ವಾದ-ಪ್ರತಿವಾದಗಳನ್ನು ಆಲಿಸಿದ್ದ ಹೈಕೋರ್ಟ್, 2021ರ ಜನವರಿ 5ರ ತನ್ನ ಆದೇಶದಲ್ಲಿ, ”ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವೇ ಇಲ್ಲ. ದಾಖಲೆಗಳನ್ನು ಗಮನಿಸಿದರೆ, ಅಕ್ರಮ ನಡೆದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ” ಎಂದು ಹೇಳಿತು.

ಈ ವರದಿ ಓದಿದ್ದೀರಾ?: ಈದಿನ.ಕಾಮ್ ತನಿಖಾ ವರದಿ | ಸರ್ಕಾರಿ ಸ್ವತ್ತು ಗುಳುಂ ಹಗರಣ; ಒಂದೇ ಎಫ್‌ಐಆರ್‌ನಲ್ಲಿ ಇಬ್ಬರು ‘ಸಿಎಂ’ಗಳು

ಮಾತ್ರವಲ್ಲದೆ, ದೂರುದಾರ ಜಯಕುಮಾರ್‌ ಹಿರೇಮಠ್‌ ಅವರು ತಮ್ಮ ದೂರನ್ನು ಹಿಂಪಡೆಯುವುದಾಗಿ ಹೇಳಿದ್ದಕ್ಕೆ ಸಿಟ್ಟಾಗಿದ್ದ ಹೈಕೋರ್ಟ್‌, ”ಕ್ರಿಮಿನಲ್ ಪ್ರಕರಣಗಳಲ್ಲಿ ದೂರುದಾರರು ಕೇವಲ ಮಾಹಿತಿದಾರರು ಮಾತ್ರ. ಅವರಿಗೆ ದೂರನ್ನು ಹಿಂಪಡೆಯುವ ಹಕ್ಕು ಇರುವುದಿಲ್ಲ. ಪ್ರಕರಣವನ್ನು ತನಿಖೆ ನಡೆಸಬೇಕು” ಎಂದು ಆದೇಶಿಸಿತ್ತು.

ಅಕ್ರಮಗಳಿಗೆ ಸಂಬಂಧಿಸಿದಂತೆ ಹಲವು ದಾಖಲೆಗಳು, ಹೈಕೋರ್ಟ್‌ ಆದೇಶ ಇದ್ದರೂ ಸರಿಯಾದ ತನಿಖೆ ಈವರೆಗೆ ನಡೆದೇ ಇಲ್ಲ. ಅಕ್ರಮ ನಡೆದು 14 ವರ್ಷಗಳಾಗಿವೆ. ದೂರು ದಾಖಲಾಗಿ 10 ವರ್ಷಗಳು ಕಳೆದಿವೆ. ಪ್ರಕರಣವನ್ನು ತನಿಖೆ ನಡೆಸಲೇಬೇಕೆಂದು ಹೈಕೋರ್ಟ್‌ ಆದೇಶಿಸಿ 4 ವರ್ಷಗಳು ಉರುಳಿವೆ. ಆದರೂ, ತನಿಖೆ ಮಾತ್ರ ತಟಸ್ಥವಾಗಿ ನಿಂತಿತ್ತು.

ಈಗ, ದಾಖಲೆಗಳ ಸಮೇತ ಹಗರಣವನ್ನು ಈದಿನ.ಕಾಮ್ ಬಯಲುಗೊಳಿಸಿದ ಬಳಿಕ, ಲೋಕಾಯುಕ್ತ ಎಚ್ಚೆತ್ತುಕೊಂಡಿದೆ. ಕುಮಾರಸ್ವಾಮಿ ಮತ್ತು ಯಡಿಯೂರಪ್ಪಗೆ ನೋಟಿಸ್‌ ಕೊಟ್ಟು, ಲೋಕಾಯುಕ್ತ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿದೆ. 2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಪ್ರಧಾನಿ ಕಾರ್ಯದರ್ಶಿಯಾಗಿದ್ದ ರಾಕೇಶ್ ಸಿಂಗ್ ಅವರ ಹೇಳಿಕೆಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ದಾಖಲಿಸಿಕೊಂಡಿದೆ.

ಆದರೂ, ಹಗರಣದ ಬಗ್ಗೆ ಪ್ರತಿಕ್ರಿಯಿಸಿರುವ ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿ, ‘ಅದು ಸತ್ತುಹೋಗಿರುವ ಪ್ರಕರಣ’ ಎಂದಿದ್ದಾರೆ. ಸದ್ಯ, ತನಿಖೆ ನಡೆಯುತ್ತಿದೆ.

ಹಗರಣ 4: ಕೇತಗಾನಹಳ್ಳಿ ಸರ್ಕಾರಿ ಭೂಮಿ ಒತ್ತುವರಿ

ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ತೋಟದ ಮನೆ ಕಟ್ಟಿಕೊಂಡಿದ್ದಾರೆ. ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ಮತ್ತು ಅವರ ಸಂಬಂಧಿಗಳ ಅಧೀನದಲ್ಲಿರುವ ಒಟ್ಟು 110.32 ಎಕರೆ ಭೂಮಿಯಲ್ಲಿ ಸುಮಾರು ಅರ್ಧದಷ್ಟು ಭೂಮಿ ಸರ್ಕಾರದ್ದು, ಅದನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ಪ್ರಕರಣ.

ಕೇತಗಾನಹಳ್ಳಿ ಬಳಿಯ ಸರ್ವೆ ನಂ.7, 8, 9, 10, 16, 17 ಮತ್ತು 79ರಲ್ಲಿ ಇರುವ ಗೋಮಾಳವನ್ನು 1983-84ರಿಂದ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಸುಮಾರು ವರ್ಷಗಳ ಹಿಂದೆಯೇ ಮಂಡ್ಯದ ಮಾಜಿ ಸಂಸದ ಜಿ ಮಾದೇಗೌಡರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ತನಿಖೆ ನಡೆಸಲು 2014ರ ಆಗಸ್ಟ್‌ 4ರಂದೇ ಲೋಕಾಯುಕ್ತರು ಆದೇಶಿಸಿದ್ದರು.

ತನಿಖೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ವಿಸ್ತೃತ ತನಿಖಾ ವರದಿಯನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿದ್ದಾರೆ. ಆದರೆ, ಸರ್ಕಾರ ಮಾತ್ರ ಅನುಪಾಲನಾ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿಲ್ಲ.

ಇದೀಗ, ಆ ಜಮೀನಿನ ಸರ್ವೆ ನಡೆಸಲು ಮತ್ತು ತನಿಖೆ ಮಾಡಲು ಐಎಎಸ್‌ ಅಧಿಕಾರಿಗಳ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಲಾಗಿದೆ. ಎಸ್‌ಐಟಿ ತಂಡವು ಕೇತಗಾನಹಳ್ಳಿಯಲ್ಲಿರುವ ಕುಮಾರಸ್ವಾಮಿ ಅವರ ತೋಟಕ್ಕೆ ತೆರಳಿ ಪರೀಶಿಲನೆಯನ್ನೂ ನಡೆಸಿದೆ.

ಈ ನಡುವೆ, ಅದು ನನ್ನ ಸ್ವಂತ ಜಮೀನು. 1983-84ರಲ್ಲಿ ನಾನು ಸಿನಿಮಾ ಹಂಚಿಕೆದಾರನಾಗಿದ್ದಾಗ (ಆಗ ಕುಮಾರಸ್ವಾಮಿಗೆ 25 ವರ್ಷ) ಕೇತಗಾನಹಳ್ಳಿಯಲ್ಲಿ 45 ಎಕರೆ ಜಮೀನು ಖರೀದಿಸಿದ್ದೆ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ನನ್ನನ್ನು ಯಾರೂ ಮುಟ್ಟೋಕೆ ಸಾಧ್ಯವೇ ಇಲ್ಲ ಎಂದೂ ಹೇಳಿಕೊಂಡಿದ್ದಾರೆ. ತಾವು ಕೇಂದ್ರ ಸಚಿವ, ತಮ್ಮ ಬೆನ್ನಿಗೆ ಮೋದಿ-ಶಾ ಇದ್ದಾರೆ ಎಂಬ ಅಹಮ್ಮಿಕೆಯಿಂದಲೇ ಇಂತಹ ಮಾತನಾಡುತ್ತಿದ್ದಾರೆ ಎಂದು ಹಲವರು ಹೇಳುತ್ತಾರೆ.

ಅದೇನೆ ಇರಲಿ, 1983ರಲ್ಲಿ, ರಾಜ್ಯದಲ್ಲಿ ಜನತಾ ಪಕ್ಷದ ಸರ್ಕಾರ ಅಧಿಕಾರದಲ್ಲಿತ್ತು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದರು. ಅವರ ಸರ್ಕಾರದಲ್ಲಿ ಎಚ್.ಡಿ ದೇವೇಗೌಡರು ಸಚಿವರಾಗಿದ್ದರು. ಆ ಸಮಯದಲ್ಲೇ 45 ಎಕರೆ ಭೂಮಿಯನ್ನು ಕುಮಾರಸ್ವಾಮಿ ಖರೀದಿಸಿದ್ದಾಗಿಯೂ ಹೇಳಿಕೊಂಡಿದ್ದಾರೆ.

ಆದರೆ, ಅಲ್ಲಿ ಕುಮಾರಸ್ವಾಮಿ ಮತ್ತು ಅವರ ಸಂಬಂಧಿಕರ ಅಧೀನದಲ್ಲಿರುವ ಭೂಮಿ 45 ಎಕರೆ ಅಲ್ಲ. ಒಟ್ಟು 110.32 ಎಕರೆ. ಅದರಲ್ಲಿ, ಸುಮಾರು 54 ಎಕರೆಯಷ್ಟು ಸರ್ಕಾರಿ ಭೂಮಿ ಇದೆ. ಅದನ್ನು ದೇವೇಗೌಡರ ಕುಟುಂಬ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ ಎಂದು ಹೇಳಲಾಗಿದೆ.

ಈ ವರದಿ ಓದಿದ್ದೀರಾ?: 25ರಲ್ಲೇ 45 ಎಕರೆ ಜಮೀನು ಖರೀದಿಸಿದ್ದರಂತೆ ಕುಮಾರಸ್ವಾಮಿ, ನಿಜವೇ ಗೌಡ್ರೇ?

ಲೋಕಾಯುಕ್ತರು ತನಿಖೆಗೆ ಆದೇಶಿಸಿದ್ದರೂ, ತನಿಖೆ ನಡೆಸಿ, ವರದಿ ಸಲ್ಲಿಸಿದ್ದರೂ, ಹೈಕೋರ್ಟ್‌ಗೆ ಅನುಪಾಲನಾ ವರದಿ ಸಲ್ಲಿಸದ ಸರ್ಕಾರದ ಧೋರಣೆಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ಎಸ್‌.ಆರ್‌ ಹಿರೇಮಠ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಎರಡು ವಾರದಲ್ಲಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

”ದಾಖಲೆಗಳ ಪ್ರಕಾರ 71 ಎಕರೆ 30 ಗುಂಟೆ ಒತ್ತುವರಿಯಾಗಿದೆ. ಇದರಲ್ಲಿ ಎಚ್‌.ಡಿ ಕುಮಾರಸ್ವಾಮಿ ಅವರೇ ಹೆಚ್ಚು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೆ, ಅವರ ಚಿಕ್ಕಮ್ಮ ಸಾವಿತ್ರಮ್ಮ, ಮದ್ದೂರಿನ ಮಾಜಿ ಶಾಸಕ ಡಿ.ಸಿ ತಮ್ಮಣ್ಣ, ಸಂಸದ ಡಾ. ಸಿ.ಎನ್‌ ಮಂಜುನಾಥ್‌, ಅನಿತಾ ಕುಮಾರಸ್ವಾಮಿ ಸೇರಿದಂತೆ ಹಲವು ಒತ್ತುವರಿಯಲ್ಲಿ ಭಾಗಿಯಾಗಿದ್ದಾರೆ” ಎಂದು ಹಿರೇಮಠ್ ಆರೋಪಿಸಿದ್ದಾರೆ.

ಇವು ಕುಮಾರಸ್ವಾಮಿ ಅವರ ವಿರುದ್ಧದ ಪ್ರಮುಖ ಹಗರಣ-ಒತ್ತುವರಿ ಆರೋಪಗಳು. ತಾನು ‘ಕ್ಲೀನ್ ಹ್ಯಾಂಡ್’ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು 2006 ಮತ್ತು 2008ರ ನಡುವಿನ ಅಲ್ಪಾವಧಿಯ ಮುಖ್ಯಮಂತ್ರಿಯಾಗಿದ್ದಾಗಲೇ ಬರೋಬ್ಬರಿ ಮೂರು ಹಗರಣಗಳನ್ನು ನಡೆಸಿದ್ದಾರೆ. ಈಗ, ಮೋದಿ-ಶಾ ಜೊತೆ ಕೈಜೋಡಿಸಿ ಕೇಂದ್ರ ಸಚಿವರಾಗಿದ್ದಾರೆ. ಮೋದಿ-ಶಾ ಕೃಪಾಕಟಾಕ್ಷದಿಂದ ಈ ಮೂರು ಹಗರಣಗಳಲ್ಲಿಯೂ ಹೊರ ಬರುವ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ, ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಹಗರಣದಲ್ಲಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಗಂಗೇನಹಳ್ಳಿ ಡಿನೋಟಿಫಿಕೇಷನ್ ಹಗರಣದ ತನಿಖೆಯನ್ನು ಲೋಕಾಯುಕ್ತ ಚುರುಕುಗೊಳಿಸಿದೆ. ಎಸ್‌ಎಸ್‌ವಿಎಂ ಗಣಿಗಾರಿಕೆ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಎಸ್‌ಐಟಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ಕೇತಗಾನಹಳ್ಳಿ ಒತ್ತುವರಿ ಪ್ರಕರಣದಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುತ್ತಿದ್ದಾರೆ. ಕುಮಾರಸ್ವಾಮಿಯವರ ರಾಜಕೀಯ ಬದುಕಿಗೆ ಭ್ರಷ್ಟಾಚಾರದ ಕಾರ್ಮೋಡ ಕವಿದುಕೊಂಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X