ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಅಕ್ರಮ ಎಸಗಿದ್ದಾರೆ. ಅವರನ್ನು ಪ್ರಾಸಿಕ್ಯೂಷನ್ನಿಗೆ ಒಳಪಡಿಸಲು ಲೋಕಾಯುಕ್ತ ಅನುಮತಿ ಕೋರಿರುವ ಕೇಸಿನಲ್ಲಿ ಲಾಭ ಪಡೆದಿದ್ದ ಕಂಪೆನಿಯೇ ಬೋಗಸ್ ಆಗಿತ್ತು ಎಂಬುದು ಕುತೂಹಲಕರ. ಮೂಲತಃ ಆ ಕಂಪೆನಿಗೆ ಗಣಿಗಾರಿಕೆಯ ಜೊತೆಗೆ ಸಂಬಂಧವೇ ಇರಲಿಲ್ಲ ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ ನಂತರ ಅಕ್ರಮದ ಮತ್ತೊಂದು ಆಯಾಮ ಬೆಳಕಿಗೆ ಬಂದಿರುತ್ತದೆ.
ಎಚ್.ಡಿ ಕುಮಾರಸ್ವಾಮಿಯವರು ಅಕ್ರಮವಾಗಿ ಸಹಾಯ ಮಾಡಿದ್ದಾರೆ ಎಂಬ ಆರೋಪ ಬಂದಿರುವುದು ‘ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಲಿಮಿಟೆಡ್’ ಎಂಬ ಕಂಪೆನಿ. ಅದರ ಮಾಲಿಕ ಎಂದು ಹೇಳಿಕೊಂಡು ಸೋಮನಾಥ್ ವಿ ಸಕರೆ ಎಂಬ ವ್ಯಕ್ತಿ 2004ರ ಏಪ್ರಿಲ್ 17ರಂದು ಗಣಿ ಇಲಾಖೆಗೆ ಅರ್ಜಿ ಸಲ್ಲಿಸುತ್ತಾರೆ. ತಮ್ಮ ಕಂಪನಿ ಗಣಿಗಾರಿಕೆ ಮತ್ತು ಉಕ್ಕು ಉತ್ಪಾದನೆಯಲ್ಲಿ ತೊಡಗಿರುವುದಾಗಿಯೂ ಅವರಿಗೆ ಸಂಡೂರು ತಾಲೂಕಿನ ಸದರಿ ಪ್ರದೇಶದಲ್ಲಿ 550 ಎಕರೆ ಭೂಮಿಯನ್ನು ಗಣಿಗಾರಿಕೆಗಾಗಿ ಮಂಜೂರು ಮಾಡಬೇಕೆಂದು ಅರ್ಜಿ ಸಲ್ಲಿಸಿರುತ್ತಾರೆ.
ಆದರೆ ತಥಾತಥಿತ ಕಂಪನಿಯ ಕಟುವಾಸ್ತವ ಏನೆಂದರೆ ಇಂಥಹ ಒಂದು ಕಂಪನಿಯೇ ಅಸ್ತಿತ್ವದಲ್ಲಿರಲಿಲ್ಲ. ಗಣಿಗಾರಿಕೆ ಹಗರಣದ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ತನ್ನ ವರದಿಯಲ್ಲಿ ಈ ಅಂಶಗಳನ್ನು ವಿವರವಾಗಿ ಉಲ್ಲೇಖಿಸಿದೆ. ತನಿಖಾಧಿಕಾರಿ ಡಾ. ಯು.ವಿ.ಸಿಂಗ್ ಎದುರು ಈ ಬೋಗಸ್ ಕಂಪನಿಯ ಮಾಲಿಕ ತಾನು ಗಣಿಗಾರಿಕೆ ಮತ್ತು ಉಕ್ಕು ಕೈಗಾರಿಕೆಯಲ್ಲಿರುವ ಉದ್ಯಮಿ ಅಲ್ಲವೆಂದೂ ಮಹಾರಾಷ್ಟ್ರದಲ್ಲಿ PWD ಗುತ್ತಿಗೆದಾರನೆಂದೂ ತಪ್ಪೊಪ್ಪಿಕೊಂಡಿದ್ದ. ಆ ಪ್ರಕಾರ ಇದು ಅಸಲಿಗೆ ನೋಂದಾಯಿತ ಕಂಪನಿಯೇ ಅಲ್ಲ; ಬದಲಿಗೆ ನೋಂದಾವಣೆಯೇ ಇಲ್ಲದ ಒಂದು ಪಾಲುದಾರಿಕಾ ಸಂಸ್ಥೆ. ಇದರ ಮತ್ತೊಬ್ಬ ಪಾಲುದಾರ ರಾಜಕುಮಾರ್ ಅಗರವಾಲ್. ಈ ಸಂಸ್ಥೆಗೆ ಒಂದು ಬ್ಯಾಂಕ್ ಅಕೌಂಟ್ ಕೂಡ ಇರಲಿಲ್ಲ ಎಂದರೆ ತಾವು ನಂಬಲೇಬೇಕು. ಅರ್ಜಿಯಲ್ಲಿ ನಮೂದಿಸಿದ್ದ ಕಂಪನಿ ವಿಳಾಸ ಕೂಡ ಬೋಗಸ್ ಆಗಿತ್ತು.
ಇಂತಹ ಬೋಗಸ್ ʼಗಣಿ ಉದ್ಯಮಿʼಗೆ 2007 ರ ಅಕ್ಟೋಬರ್ 5 ನೇ ತಾರೀಕು ಅಂದಿನ ಮುಖ್ಯಮಂತ್ರಿ ಮಾನ್ಯ ಕುಮಾರಸ್ವಾಮಿ ಅವರು ಸದರಿ ಅರ್ಜಿಯನ್ನು ಅನುಮೋದಿಸಿ ಗಣಿಗಾರಿಕೆ ಗುತ್ತಿಗೆ ಮಂಜೂರು ಮಾಡಿ ಕೊಟ್ಟಿದ್ದಾರೆ. ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿರುವಂತೆ ಅಂದಿನ ಮುಖ್ಯಮಂತ್ರಿಗಳು ಈ ಕೆಳಕಂಡಂತೆ ಆದೇಶಿಸಿದ್ದರು.
“ನಾನು ದಾಖಲೆಗಳನ್ನು ಪರಿಶೀಲಿಸಿದ್ದೇನೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜೋಗ್, ತಿಮ್ಮಪ್ಪಗುಡಿಯಲ್ಲಿ 550 ಎಕರೆ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಎಸ್ಎಸ್ವಿಎಂ ಕಂಪನಿಗೆ ಗುತ್ತಿಗೆ ಮಂಜೂರು ಮಾಡಲಾಗಿದೆ.”
– ಸಹಿ ಎಚ್.ಡಿ ಕುಮಾರಸ್ವಾಮಿ, ಮುಖ್ಯಮಂತ್ರಿಗಳು.
ಇಡೀ ಕಂಪನಿಯೇ ಬೋಗಸ್ ಆಗಿದ್ದು, ಅವರು ಸಲ್ಲಿಸಿದ್ದ ದಾಖಲೆಗಳೆಲ್ಲವೂ ಬೋಗಸ್ ಆಗಿರುವಾಗ ಕುಮಾರಸ್ವಾಮಿಯವರು ಯಾವ ದಾಖಲೆಗಳನ್ನು ಪರಿಶೀಲಿಸಿ ಈ ಗುತ್ತಿಗೆ ಮುಂಜೂರು ಮಾಡಿದರು ಎಂಬುದು ಪ್ರಮುಖ ಪ್ರಶ್ನೆ. ಇಲ್ಲಿ ಗಮನಿಸಲೇಬೇಕಾದ ಮತ್ತೊಂದು ಅಂಶ ಇದೆ. ಆಗ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿಕೊಂಡಿದ್ದರು. ಅವರಿಬ್ಬರ ನಡುವಿನ ಒಪ್ಪಂದದ ಪ್ರಕಾರ ಯಡ್ಯೂರಪ್ಪನವರಿಗೆ ಅಧಿಕಾರ ಬಿಟ್ಟುಕೊಡದೆ ಮಾತಿಗೆ ತಪ್ಪುತ್ತಿದ್ದಾರೆ ಎಂಬ ವಿವಾದ ತಾರಕಕ್ಕೇರಿದ್ದ ಸಂದರ್ಭ ಅದು. ಅಂತಹ ಸನ್ನಿವೇಶದಲ್ಲಿ ಅಂದರೆ 5/10/2007 ರಂದು ಬೋಗಸ್ ಕಂಪನಿಗೆ ಮಂಜೂರಾತಿ ಆದೇಶ ಮಾಡಿ, ನಂತರದ ಮೂರೇ ದಿನದಲ್ಲಿ 8/10/2007 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹಾಗಿದ್ದರೆ ಅಷ್ಟೊಂದು ತರಾತುರಿಯಲ್ಲಿ ಮಂಜೂರಾತಿ ಕೊಟ್ಟಿದ್ದರ ಹಿಂದೆ ಏನೆಲ್ಲ ನಡೆದಿರಬಹುದು ಎಂಬುದು ಓದುಗರ ಊಹೆಗೆ ಬಿಟ್ಟದ್ದು.
ಈ ಬೋಗಸ್ ಕಂಪನಿಯ ಇತಿಹಾಸದಲ್ಲಿ ಮತ್ತೊಂದು ಬೋಗಸ್ ತಿರುವಿದೆ. ವಿನೋದ್ ಗೋಯಲ್ ಎಂಬ ಮತ್ತೊಬ್ಬ ವ್ಯಕ್ತಿ ತಾನೇ ಎಸ್ಎಸ್ವಿಎಂ ಕಂಪನಿಯ ಮಾಲೀಕ ಎಂದು ಹೇಳಿಕೊಂಡು ಗಣಿ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸೋಮನಾಥ್ ಸಕರೆಯ ಅರ್ಜಿಯನ್ನು ಬದಲಾಯಿಸಿ ಗಣಿಗಾರಿಕೆಯ ಮಂಜೂರಾತಿಯನ್ನು ತನ್ನ ಹೆಸರಿಗೆ ಪಡೆದುಕೊಂಡಿದ್ದ. ಈ ಎಲ್ಲ ಅಕ್ರಮಗಳ ಬಗ್ಗೆ ತನಿಖೆ ನಡೆಸಿದ ಯು.ವಿ ಸಿಂಗ್ ಅವರು ಈ ಅಕ್ರಮದಲ್ಲಿ ಭಾಗಿಯಾದ ಈ ಎಲ್ಲರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಶಿಫಾರಸು ಮಾಡಿದ್ದರು.
ಜಸ್ಟೀಸ್ ಸಂತೋಷ್ ಹೆಗಡೆ ನೇತೃತ್ವದ ಲೋಕಾಯುಕ್ತ ತನಿಖಾ ವರದಿಯ ಪುಟ 238/464 ರಲ್ಲಿ ಉಲ್ಲೇಖವಾದಂತೆ ಈ ರೀತಿ ಶಿಫಾರಸ್ಸು ಮಾಡಲಾಗಿತ್ತು.
“17. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಕುಮಾರಸ್ವಾಮಿಯವರು ಈಗ ಯಾವುದೇ ಅಧಿಕೃತ ಹುದ್ದೆಯಲ್ಲಿ ಇಲ್ಲದೆ ಇರುವುದರಿಂದ ಯಾವುದೇ ಕ್ರಮಗಳನ್ನು ಶಿಫಾರಸ್ಸು ಮಾಡಲಾಗಿಲ್ಲ. ಹಾಗಿದ್ದರೂ, ಈ ಅಧ್ಯಾಯದಲ್ಲಿ ಹೇಳಲಾಗಿರುವ ಅವರ ಅಕ್ರಮ ನಡತೆಯ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲು ಮುಕ್ತ ಅವಕಾಶ ಇರುತ್ತದೆ.”
ನಂತರದ ದಿನಗಳಲ್ಲಿ ಎಸ್ಐ.ಟಿ ತನಿಖೆ ನಡೆದು ಕುಮಾರಸ್ವಾಮಿಯವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ದಾಖಲೆಗಳನ್ನು ಸಂಗ್ರಹಿಸಿ, ಅದರ ಬಗ್ಗೆ ಮನವರಿಕೆ ಆದ ಮೇಲೆ ಚಾರ್ಜ್ ಶೀಟ್ ಹಾಕಿದ್ದಾರೆ ಮತ್ತು ಕುಮಾರಸ್ವಾಮಿಯವರ ಮೇಲೆ ಕೋರ್ಟ್ ವಿಚಾರಣೆಗೆ ಅನುಮತಿ ಕೋರಿ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.
ಹಾಲಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಖಾಸಗಿ ವ್ಯಕ್ತಿಯೊಬ್ಬ ಕೊಟ್ಟಿರುವ ಆಧಾರರಹಿತ ದೂರಿನ ಆಧಾರದಲ್ಲಿ ನೋಟೀಸ್ ಜಾರಿ ಮಾಡಿರುವ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಕುಮಾರಸ್ವಾಮಿಯವರ ಬಗ್ಗೆ ಇಷ್ಟೆಲ್ಲಾ ತನಿಖೆ ನಡೆದು, ಸಾಕಷ್ಟು ದಾಖಲೆಗಳಿದ್ದಾಗ್ಯೂ ಕಳೆದ ಹತ್ತು ತಿಂಗಳಿನಿಂದ ಅಂಡಿನ ಕೆಳಗೆ ಹಾಕಿ ಕೂತುಬಿಟ್ಟಿದ್ದಾರೆ. ಹಾಗಿದ್ದರೆ ಕರ್ನಾಟಕದ ರಾಜಕಾರಣದಲ್ಲಿ ಏನು ನಡೆಯುತ್ತಿದೆ?