ಕಳೆದ ಕೆಲ ದಿನಗಳಿಂದ ಮುಂದುವರೆದ ಮುಂಗಾರಿನ ಅಬ್ಬರಕ್ಕೆ ರಾಜ್ಯದ ರೈತರು ತತ್ತರಿಸಿದ್ದಾರೆ. ಬೆಳೆದ ಭತ್ತ, ಜೋಳ, ರಾಗಿ, ಹತ್ತಿ, ಬಾಳೆ, ದಾಳಿಂಬೆ, ತಂಬಾಕು ಸೇರಿದಂತೆ ಹಲವು ಪ್ರಮುಖ ಬೆಳೆಗಳು ನೀರು ಪಾಲಾಗಿವೆ. ಕಳೆದ ವರ್ಷದಿಂದಲೇ ಸಂಕಷ್ಟದಲ್ಲಿರುವ ಕೃಷಿ ವಲಯ ಈಗ ಮತ್ತೊಮ್ಮೆ ಕಂಗೆಟ್ಟಿದ್ದು, ಸರ್ಕಾರ ನೀಡುವ ಪರಿಹಾರದ ನಿರೀಕ್ಷೆಯಲ್ಲಿ ನಿಂತಿದೆ.
ಕಳೆದ ವಾರ, ಸುರಿದ ಧಾರಾಕಾರ ಮಳೆಯಿಂದಾಗಿ ಮನೆಯಂಗಳಗಳು ಕೆರೆಯಂತಾಗಿವೆ. ಕೃಷಿ ಜಮೀನುಗಳು ಜಲಾವೃತಗೊಂಡಿವೆ. ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದೆ. ಶೇಂಗಾ, ಬೆಂಡೆಕಾಯಿ, ಬದನೆಕಾಯಿ, ಕಬ್ಬು ಸೇರಿದಂತೆ ಹಲವು ಬೆಳೆಗಳು ನೀರುಪಾಲಾಗಿವೆ. ಬಳ್ಳಾರಿ ಭಾಗದ ಜಮೀನುಗಳಲ್ಲಿ 2 ರಿಂದ 3 ಅಡಿ ನೀರು ನಿಂತಿದ್ದು, ಪ್ರಮುಖ ಬೆಳೆ ಶೇಂಗಾ ಬಹುತೇಕ ಕೊಳೆತು ಹೋಗಿದೆ. ಲಕ್ಷಾಂತರ ರೂ. ಖರ್ಚು ಮಾಡಿದರೂ ಬೆಳೆದ ಬೆಳೆ ಕೈಗೆ ಹತ್ತದೆ ಅತ್ತ ಹಣವೂ ಇಲ್ಲ ಇತ್ತ ಬೆಳೆಯೂ ಇಲ್ಲ ಎನ್ನುವಂತಾಗಿದೆ ಅನ್ನದಾತರ ಪರಿಸ್ಥಿತಿ.
ಇನ್ನು ಚಿಕ್ಕಬಳ್ಳಾಪುರದಲ್ಲೂ ಮಳೆ ತನ್ನ ಅವಾಂತರ ಮುಂದುವರೆಸಿದೆ. ಸಾಲ ಮಾಡಿ ಒಂದುವರೆ ಎಕರೆಯಲ್ಲಿ ದಾಳಿಂಬೆ ಬೆಳೆದು, ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ಕಡಶೀಗೇನಹಳ್ಳಿ ಗ್ರಾಮದ ರೈತ ಕ್ಯಾತಪ್ಪ ಆತಂಕ ಎದುರಿಸುತ್ತಿದ್ದಾರೆ. ಮೇ ತಿಂಗಳ ಕಡೆಯ ವಾರದಲ್ಲಿ ಸುರಿದ ಗಾಳಿ ಮಳೆಗೆ ದಾಳಿಂಬೆ ಗಿಡಗಳಲ್ಲಿದ್ದ ಹೂಗಳೆಲ್ಲವೂ ನೆಲಕ್ಕೆ ಉದುರಿ ಮಣ್ಣು ಪಾಲಾಗಿವೆ.

ಸಂಕಷ್ಟದಲ್ಲಿರುವ ರೈತ ಕ್ಯಾತಪ್ಪ ಈದಿನ ಡಾಟ್ ಕಾಮ್ ಜತೆ ಮಾತನಾಡಿ, “ಕಳೆದ ಕೆಲ ವರ್ಷಗಳ ಹಿಂದೆ 3 ಎಕರೆ ಪ್ರದೇಶದಲ್ಲಿ ಉತ್ತಮ ಇಳುವರಿ ಮತ್ತು ಲಾಭದ ನಿರೀಕ್ಷೆಯಿಂದ ದ್ರಾಕ್ಷಿ ಬೆಳೆದಿದ್ದೆ. ಇಳುವರಿಯೇನೋ ಬಂತು. ಆದರೆ, ಕಟಾವಿನ ನಂತರ ಬೆಲೆ ಕುಸಿತಗೊಂಡು ಬಂಡವಾಳಕ್ಕಿಂತಲೂ ಕಡಿಮೆ ಸಂಪಾದನೆ ಆಗಿತ್ತು. ಹಾಗಾಗಿ ಕಳೆದ ವರ್ಷದಿಂದ ದಾಳಿಂಬೆ ಬೆಳೆಯುತ್ತಿದ್ದೇನೆ. 3 ಎಕರೆ ಭೂಮಿಯಲ್ಲಿ 1.5 ಎಕರೆ ಚಿಕ್ಕ ಸಸಿಗಳು. ಉಳಿದ 1.5 ಎಕರೆಯಲ್ಲಿ ಸಸಿಗಳು ದೊಡ್ಡದಾಗಿವೆ. ಕಳೆದ ವರ್ಷ 12 ಟನ್ ಇಳುವರಿ ಬಂದಿತ್ತು. ಈ ಬಾರಿಯೂ 12 ರಿಂದ 13 ಟನ್ ಇಳುವರಿ ಬರಲಿದೆ. ಒಳ್ಳೆಯ ರೇಟ್ ಸಿಕ್ರೆ ಲಕ್ಷಾಂತರ ರೂಪಾಯಿ ಆದಾಯವೂ ಬರಲಿದೆ ಎಂಬ ನಿರೀಕ್ಷೆಯಿತ್ತು. ಆದರೆ ಎಲ್ಲಾ ಹುಸಿಯಾಗಿದೆ. ಅಕಾಲಿಕವಾಗಿ ಬಂದ ಗಾಳಿ ಸಹಿತ ಭಾರೀ ಮಳೆಯಿಂದ 1.5 ಎಕರೆ ದಾಳಿಂಬೆ ಗಿಡಗಳಲ್ಲಿದ್ದ ಹೂಗಳೆಲ್ಲವೂ ಮಣ್ಣು ಪಾಲಾಗಿ ಈಗ ಕೇವಲ 3-4 ಟನ್ ಇಳುವರಿ ಬಂದರೆ ಅದೇ ಹೆಚ್ಚು” ಎಂದು ರೈತ ನೋವು ವ್ಯಕ್ತಪಡಿಸಿದ್ದಾರೆ.

“ಈ ಬಾರಿ ಬೆಳೆ ವಿಮೆ ಮಾಡಿಸಿದ್ದೇನೆ. ಆದರೆ, ಅದರಿಂದ ಬರಿದಾದ ಕೈ ತುಂಬುವ ನಿರೀಕ್ಷೆಯಿಲ್ಲ. ಹಾಕಿದ 3 ಲಕ್ಷ ಬಂಡವಾಳವೆಲ್ಲವೂ ಸಾಲವೇ. ಈಗ ಸಾಲ ತೀರಿಸುವುದು ಹೇಗೆಂದು ಗೊತ್ತಾಗುತ್ತಿಲ್ಲ. ನಷ್ಟವಾಗಲೀ ಲಾಭವಾಗಲೀ ರೈತನಂತೂ ಕೃಷಿ ಬಿಡಲಾರ. ಆದರೆ, ಸಾಲ ಮಾಡಿ ಭೂಮಿಯನ್ನೇ ನಂಬಿ ಏನಾದರೂ ಬೆಳೆ ತೆಗೆಯಬೇಕೆಂದುಕೊಂಡರೆ, ಪ್ರತಿ ವರ್ಷ ಹೀಗೇ ಆದರೆ ರೈತರ ಗತಿಯೇನು. ಬ್ಯಾಂಕ್‌ಗಳಲ್ಲಿ ಸಾಲ ಕೇಳಲು ಆಗಲ್ಲ. ಅಷ್ಟೂ ಇಷ್ಟೂ ಸಾಲ ಕೊಡುತ್ತಾರಾದರೂ ಅದಕ್ಕೆ ಹತ್ತಾರು ದಾಖಲೆ ಕೇಳುತ್ತಾರೆ, ಇಲ್ಲದವರು ಎಲ್ಲಿಂದ ತರೋದು. ಲಕ್ಷಾಂತರ ರೂ ನಷ್ಟವಾದಾಗ ಸರ್ಕಾರ ಮುಂದೆ ಬಂದು ಪರಿಹಾರ ನೀಡಬೇಕು. ಇಲಾಖೆಗಳು ನೆರವಿಗೆ ಧಾವಿಸಬೇಕು” ಎಂದು ಮನವಿ ಮಾಡಿದರು.
ಹಸಿರು ಸೇನೆ ಮುಖಂಡ ಹಾಗೂ ರೈತ ಸಂಘದ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯದರ್ಶಿ ನೆಲಮಾಕಲಹಳ್ಳಿ ಗೋಪಾಲ್ ಮಾತನಾಡಿ, “ವ್ಯವಸಾಯದ ಮೂಲಾಧಾರವೇ ಮಳೆ. ಆದರೆ, ಹೀಗೆ ಮಳೆಯಿಂದಲೇ ನಷ್ಟವುಂಟಾದರೆ ಸಂಕಟವಾಗುತ್ತೆ. ಮಳೆ ಬೇಕು; ಆದರೆ, ಉತ್ತುವುದರಿಂದ ಹಿಡಿದು ಕಟಾವು ಮಾಡಿ ಗೋದಾಮು ಮಾಡುವವರೆಗೂ ಕಾಲಕ್ಕೆ ಸರಿಯಾಗಿ ಬಂದರೆ ರೈತನೂ ಹಸನ್ಮುಖಿ. ಈಗ ಹೇಗಾಗಿದೆ ಎಂದರೆ.. ಮಳೆ ಯಾವಾಗ ಬರಬಹುದೆಂದು ನಿರೀಕ್ಷಿಸುವುದೇ ಕಷ್ಟ. ಹೀಗೆ ಅಕಾಲಿಕವಾಗಿ ಸುರಿದು ಬೆಳೆಯನ್ನೂ ರೈತನನ್ನೂ ಅತಂತ್ರಗೊಳಿಸಿಬಿಡುತ್ತದೆ. ಇದರಿಂದ ಬಹುತೇಕ ರೈತರು ನಷ್ಟ ಅನುಭವಿಸುವಂತಾಗಿದೆ” ಎಂದರು.

“ದಾಳಿಂಬೆ, ದ್ರಾಕ್ಷಿಯಂತಹ ಬೆಳೆಗಳಿಗೆ ಬಂದರೆ, ಸಂಜೆ ವೇಳೆ ಮಳೆ ಬಂದು ಹೂಗಳಲ್ಲಿ ನೀರು ಶೇಖರಣೆಯಾಗುತ್ತದೆ. ಅದು ರಾತ್ರಿಯಿಡೀ ನಿಂತು ಬಹುತೇಕ ಹೂವು ಕೊಳತು ಬಿದ್ದು ಹೋಗುತ್ತವೆ. ಈಗಿನ ಮಳೆಯಂತೂ ಸರಿಯಾಗಿ ಹೂ ಮಾಗಿ ಕಾಯಿ ಕಟ್ಟುವ ವೇಳೆಗೆ ಬಂದು ಎಲ್ಲಾ ಕೊಚ್ಚಿಬಿಡುತ್ತದೆ. ಉತ್ತಮ ನೀರಾವರಿ ಸೌಲಭ್ಯ ಇರುವವರು ಎರಡ್ಮೂರು ಮುಂಚಿತವಾಗಿ ಕೃಷಿ ಚಟುವಟಿಕೆ ಆರಂಭಿಸಿ ಮಳೆಯಿಂದ ಬಚಾವಾಗುತ್ತಾರೆ. ಆದರೆ, ನಮ್ಮಲ್ಲಿ ಬಹುತೇಕರು ನೀರಾವರಿ ಸೌಲಭ್ಯ ಇಲ್ಲದವರು. ಮಳೆಗಾಲ ನೋಡಿಕೊಂಡೇ ಬಿತ್ತನೆ ಕಾರ್ಯ ಆರಂಭಿಸಬೇಕು. ಈ ಬಾರಿ ಅಕಾಲಿಕವಾಗಿ ಮುಂಗಾರು ಆರಂಭವಾಗಿದೆ. ಶೇ.75ಕ್ಕಿಂತ ಹೆಚ್ಚು ರೈತರು ಮುಂಗಾರಿನ ಬಾಧೆಗೆ ತುತ್ತಾಗಿದ್ದಾರೆ” ಎಂದು ತಿಳಿಸಿದರು.
“ಈ ವರ್ಷ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಅಂದಾಜು 15,000 ಹೆಕ್ಟೇರ್‌ನಲ್ಲಿ ಸೇವಂತಿಗೆ ಬೆಳೆಯಲಾಗಿದೆ. ಸುಮಾರು 10,000 ಹೆಕ್ಟೇರ್‌ನಲ್ಲಿ ದ್ರಾಕ್ಷಿ ಹಾಗೂ 8 ರಿಂದ 9 ಸಾವಿರ ಹೆಕ್ಟೇರ್‌ನಲ್ಲಿ ದಾಳಿಂಬೆ ಬೆಳೆಯಲಾಗಿದೆ. ಹೀಗೆ ಅಕಾಲಿಕವಾಗಿ ಸುರಿಯುವ ಮಳೆಯಿಂದಲೇ ಕೀಟ ಬಾಧೆ, ಔಷಧಿ ಸಿಂಪಡಣೆ ಸರಿಯಾಗಿ ಆಗದಿರುವುದು, ಕಳೆ ಬಾಧೆಯಂತರ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ” ಎಂದು ಹೇಳಿದರು.
“ರೈತ ತನ್ನ ಫಸಲನ್ನು ನೇರವಾಗಿ ಮಾರಾಟ ಮಾಡುವಂತೆ ಮಾರುಕಟ್ಟೆ ರೂಪಿಸಬೇಕು. ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ)ಯಡಿ ರೈತನ ಬಂಡವಾಳದ ಅರ್ಧಕ್ಕಿಂತ ಹೆಚ್ಚು ಹಣ ಕೊಟ್ಟು ಸರ್ಕಾರವೇ ಬೆಳೆ ಖರೀದಿಸಬೇಕು. ಯಾವ ಹಂತದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದರಿಂದ ಹಿಡಿದು, ಬಿತ್ತನೆ, ಔಷಧ ಸಿಂಪಡಣೆ, ಕಟಾವಣೆ, ಗೋದಾಮು ಎಲ್ಲಾ ಹಂತಗಳ ಕುರಿತು ಸರ್ಕಾರಿ ಪ್ರಾಯೋಜಿತ ತರಬೇತಿ ಕಾರ್ಯಾಗಾರಗಳು ನಡೆಯುತ್ತವೆ. ಈ ಶಿಬಿರಗಳಲ್ಲಿ ರೈತರು ತೊಡಗಿಸಿಕೊಂಡು ಕೃಷಿ ಕುರಿತು ವೈಜ್ಞಾನಿಕ ಜ್ಞಾನ ಪಡೆದುಕೊಳ್ಳಬೇಕು” ಎಂದರು.
ಈ ಬಾರಿ ಮುಂಗಾರು ತೀವ್ರತೆ ಜೋರಾಗಿ ರಾಜ್ಯದ ಅನೇಕ ಭಾಗಗಳಲ್ಲಿ ಕೃಷಿ ಆಧಾರಿತ ಬದುಕು ಅತಂತ್ರವಾಗಿದೆ. ಲಕ್ಷಾಂತರ ರೂಪಾಯಿಗಳ ಬೆಳೆ ನಾಶವಾಗಿ, ಸಾಲದ ಬಿಕ್ಕಟ್ಟಿನಲ್ಲಿ ಸಿಲುಕಿರುವ ರೈತ ಕ್ಯಾತಪ್ಪ ಸೇರಿದಂತೆ ಹಲವಾರು ಮಂದಿ ಅನ್ನದಾತರು ಸರ್ಕಾರದಿಂದ ತುರ್ತು ಪರಿಹಾರಕ್ಕೆ ನಿರೀಕ್ಷೆಯ ಕಣ್ಣಿಟ್ಟಿದ್ದಾರೆ. ರೈತರ ಈ ಆರ್ಥಿಕ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲಾವಾರು ಪರಿಶೀಲನೆ, ಬೆಳೆ ವಿಮೆ ಪರಿಹಾರ ವಿತರಣೆ ಹಾಗೂ ಕನಿಷ್ಠ ಬೆಂಬಲ ಬೆಲೆ ಖರೀದಿ ತಕ್ಷಣ ಜಾರಿಗೆ ಬರಬೇಕು ಎಂಬುದು ರೈತಸಂಘಗಳ ಆಗ್ರಹವಾಗಿದೆ.