ಕಳೆದ 480 ದಿನಗಳ ಬಿಡದಿ ಟೌನ್ ಶಿಪ್ ವಿರುದ್ಧ ಹೋರಾಟದಲ್ಲಿ ಜಮೀನು ಕಳೆದುಕೊಂಡು ಹತ್ತಾರು ಕೇಸು ದಾಖಲಿಸಿಕೊಂಡ ರೈತರ ಮೇಲಿನ ಮುಂದುವರೆದ ದೌರ್ಜನ್ಯ ಖಂಡಿಸಿ ಗುಬ್ಬಿ ತಾಲ್ಲೂಕು ರೈತ ಹೋರಾಟ ಸಮಿತಿ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.
ಗುಬ್ಬಿ ಪಟ್ಟಣದ ಬಸ್ ನಿಲ್ದಾಣ ಬಳಿ ರೈತಪರ ಹೋರಾಟಕ್ಕೆ ಜಮಾಯಿಸಿದ ನೂರಾರು ರೈತರು ಪಕ್ಷಾತೀತ ಧರಣಿ ನಡೆಸಿ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸಿ ಬಿಡದಿ ರೈತರನ್ನು ಒಕ್ಕಲೆಬ್ಬಿಸಿ 5 ಸಾವಿರ ಎಕರೆ ವಶಕ್ಕೆ ಮುಂದಾಗಿದೆ. ಬಲವಂತದ ನೋಟಿಸ್ ಜಾರಿ, ವಿರೋಧಿಸಿದರೆ ಪೊಲೀಸ್ ಕೇಸು ದಾಖಲು ಮಾಡುತ್ತಾ ನಿರಂತರ ದೌರ್ಜನ್ಯ ನಡೆಸಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ರಾಜ್ಯ ರೈತ ವಿರೋಧಿ ನೀತಿ ಅನುಸರಿಸುವ ರಾಜ್ಯ ಸರ್ಕಾರ ತುಘಲಕ್ ದರ್ಬಾರ್ ನಡೆಸಿದೆ. ಬೆಂಗಳೂರಿಗೆ ಹತ್ತಿರದ ಬಿಡದಿ ಜಮೀನು ಸಮೃದ್ಧ ಬೆಳೆ ಕೊಡುತ್ತಿದೆ. ಭೂಮಿ ಕೊಡಲು ಒಪ್ಪದ ರೈತರನ್ನು ಒಕ್ಕಲೆಬ್ಬಿಸಲು ಅಧಿಕಾರಿಗಳು ಪೊಲೀಸರನ್ನು ಬಳಸುವ ಮುಖ್ಯಮಂತ್ರಿಗಳು ರೈತರ ಬಗ್ಗೆ ತೀವ್ರ ಅಸಡ್ಡೆ ತೋರುತ್ತಿದ್ದಾರೆ. ಕನಸಿನ ಕೂಸು ಎಂದು ಹೇಳಿಕೊಂಡು ಸಾವಿರಾರು ರೈತರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಬಲವಂತದಿಂದ ಊರು ಬಿಡಿಸುವ ಪ್ರಕ್ರಿಯೆ ಸರ್ಕಾರಕ್ಕೆ ಶೋಭೆ ತರಲ್ಲ. ರೈತರ ಪರ ಈಗ ಸಾಂಕೇತಿಕ ಹೋರಾಟ ನಡೆಸಿದ್ದೇವೆ. ಟೌನ್ ಶಿಪ್ ನಿರ್ಮಾಣ ಕೈಬಿಟ್ಟು ರೈತರ ಮೇಲಿನ ಕೇಸು ವಾಪಸ್ ಪಡೆಯಬೇಕು. ಹಾಗೆಯೇ ಬೆಳೆ ಹಾನಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡ ಬಿ.ಎಸ್.ಪಂಚಾಕ್ಷರಿ ಮಾತನಾಡಿ ಬಿಡದಿ ಬಳಿಯ 14800 ಎಕರೆ ಜಮೀನು ಬೆಂಗಳೂರಿಗೆ ತರಕಾರಿ ನೀಡುತ್ತಿತ್ತು. ಸಾವಿರಾರು ಎಕರೆಯಲ್ಲಿ ರೇಷ್ಮೆ ಬೆಳೆಯುತ್ತಿದ್ದರು. ಜೊತೆಗೆ ಹೈನುಗಾರಿಕೆ ಮೂಲಕ ಲಕ್ಷಾಂತರ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದರು. ಇಂತಹ ಸಣ್ಣ ರೈತರನ್ನು ಒಕ್ಕಲೆಬ್ಬಿಸುವ ಸರ್ಕಾರದ ನಡೆ ಖಂಡನೀಯ. ಪ್ರಶ್ನೆ ಮಾಡಿದ ರೈತರ ಮೇಲೆ ಕೇಸು ದಾಖಲು, ಬಲವಂತದ ನೋಟಿಸ್ ಜಾರಿ ಇವೆಲ್ಲಾ ಒಳ್ಳೆಯ ಲಕ್ಷಣ ಅಲ್ಲ. ರೈತರನ್ನು ಎದುರು ಹಾಕಿಕೊಂಡ ಯಾವ ಸರ್ಕಾರ ಉಳಿದಿಲ್ಲ. ಸಿಎಂ ಶಿವಕುಮಾರ್ ಅವರು ರೈತರ ಶಾಪಕ್ಕೆ ಗುರಿಯಾದರೆ ರಾಜಕೀಯ ಭವಿಷ್ಯ ಕಳೆದುಕೊಳ್ಳುತ್ತೀರಿ ಎಂದು ಕಿಡಿಕಾರಿದರು.
ರೈತ ಹೋರಾಟ ಸಮಿತಿಯ ಸಿ.ಆರ್.ಶಂಕರ್ ಕುಮಾರ್ ಮಾತನಾಡಿ ಬಿಡದಿ ರೈತರ ಹೋರಾಟಕ್ಕೆ ರಾಜ್ಯದಲ್ಲಿ ಬೆಂಬಲ ಸಿಕ್ಕಿದೆ. ತದ ನಂತರದಲ್ಲಿ ಹೇಮಾವತಿ ಹೋರಾಟ ನಮ್ಮ ಜಿಲ್ಲೆಯಲ್ಲಿ ಮತ್ತಷ್ಟು ತೀವ್ರತೆ ಪಡೆಯಲಿದೆ. ಇಲ್ಲಿಯೂ ಹೆಣ್ಣು ಮಕ್ಕಳು ಬೀದಿಗೆ ಬಂದು ಪೊರಕೆ, ಒನಕೆ ಸೇವೆ ಮಾಡಲಿದ್ದಾರೆ. ರೈತರ ಕೆಂಗಣ್ಣಿಗೆ ಗುರಿಯಾದ ಯಾವ ಸರ್ಕಾರ ಉಳಿದಿಲ್ಲ. ಸಾವಿರಾರು ರೈತ ಕುಟುಂಬ ಒಕ್ಕಲೆಬ್ಬಿಸುವ ಟೌನ್ ಶಿಪ್ ಯೋಜನೆ ಕೈಬಿಟ್ಟು ರೈತರ ಮೇಲಿನ ಎಲ್ಲಾ ಪ್ರಕರಣ ರದ್ದು ಮಾಡಿ ರಾಜ್ಯದಲ್ಲಿ ಆಗಬೇಕಿರುವ ಅಭಿವೃದ್ದಿ ಕೆಲಸಗಳನ್ನು ಮೊದಲು ಮಾಡಿ. ಮಳೆ ಇಲ್ಲದೆ ನೀರಿಗೆ ಅಭಾವ ಉಂಟಾಗಿದೆ. ಅದನ್ನು ಮೊದಲು ಬಗೆಹರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಎಚ್.ಟಿ.ಭೈರಪ್ಪ ಮಾತನಾಡಿ ರಾಜ್ಯದೆಲ್ಲೆಡೆ ರೈತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಬಿಡದಿ ರೈತರ ಪಾಡು ಎಲ್ಲಾ ರೈತರನ್ನು ಎಚ್ಚರಿಸಿದೆ. ಈಗಾಗಲೇ ಎಲ್ಲೆಡೆ ಪ್ರತಿಭಟನೆ ಆರಂಭವಾಗಿದೆ. ಸರ್ಕಾರ ರೈತಪರ ನಿಲ್ಲಬೇಕು. ಆದರೆ ಆಡಳಿತ ನಡೆಸುವ ಅಧಿಕಾರಿಗಳು ನಮ್ಮ ರೈತ ಹೋರಾಟವನ್ನು ನಿರ್ಲಕ್ಷಿಸಿದ್ದಾರೆ. ಹೀಗೆ ಮುಂದುವರೆದರೆ ಬೀದಿಗಿಳಿದು ಉಗ್ರ ಹೋರಾಟ ನಡೆಯಲಿದೆ ಎಂದರು
ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಉಪತಹಸೀಲ್ದಾರ್ ಚಂದ್ರಕಾಂತ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮೈತ್ರಿ ಪಕ್ಷಗಳ ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಜಿ.ಡಿ.ಸುರೇಶಗೌಡ, ಪಿ.ಬಿ.ಚಂದ್ರಶೇಖರಬಾಬು, ಜಿ.ಆರ್.ಶಿವಕುಮಾರ್, ಜಿ.ಸಿ.ಕೃಷ್ಣಮೂರ್ತಿ, ಸಿದ್ದರಾಮಯ್ಯ, ಯತೀಶ್, ಬಿ.ಲೋಕೇಶ್, ಹೇಮಂತ್, ಜಿ.ಎಂ.ಶಿವಾನಂದ್, ರೈತ ಸಂಘದ ಮಂಜುನಾಥ್, ಜಗದೀಶ್, ಗುರುಚನ್ನಬಸವಯ್ಯ, ವರ್ತಕರ ಸಂಘದ ದಯಾನಂದ್, ವೀರಶೈವ ಮಹಾಸಭಾ ಅಧ್ಯಕ್ಷ ಮಂಜುನಾಥ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಪ್ಪಾಜಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ರೈತರು ಭಾಗವಹಿಸಿದ್ದರು.




